ಸಂಪುಟ

1.64 ಲಕ್ಷ ಕೋಟಿ ರೂ. ಮೊತ್ತದ ಬಿಎಸ್‌ಎನ್‌ಎಲ್‌ ಪುನಶ್ಚೇತನ ಆರ್ಥಿಕ ಪ್ಯಾಕೇಜ್‌ಗೆ ಕೇಂದ್ರ ಸಂಪುಟ ಅನುಮೋದನೆ

Posted On: 27 JUL 2022 5:16PM by PIB Bengaluru

ದೂರಸಂಪರ್ಕ ವಲಯ ಒಂದು ಕಾರ್ಯತಂತ್ರ ಕ್ಷೇತ್ರವಾಗಿದೆ. ದೂರಸಂಪರ್ಕ ಮಾರುಕಟ್ಟೆಯಲ್ಲಿ ಬಿಎಸ್ಎನ್ಎಲ್ ಉಪಸ್ಥಿತಿಯು ಮಾರುಕಟ್ಟೆ ಸಮತೋಲನ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ಸೇವೆಗಳ ವಿಸ್ತರಣೆ, ದೇಶೀಯ ತಂತ್ರಜ್ಞಾನದ ಅಭಿವೃದ್ಧಿ ಮತ್ತು ವಿಪತ್ತು ಪರಿಹಾರದಲ್ಲಿ ಬಿಎಸ್ಎನ್ಎಲ್ ನಿರ್ಣಾಯಕ ಪಾತ್ರ ವಹಿಸುತ್ತಿದೆ.

ಬಿಎಸ್ಎನ್ಎಲ್ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 1.64 ಲಕ್ಷ ಕೋಟಿ ರೂ. ಮೊತ್ತದ ಬಿಎಸ್ಎನ್ಎಲ್ ಪುನರುಜ್ಜೀವನದ ಆರ್ಥಿಕ ಪ್ಯಾಕೇಜ್ ಗೆ ಅನುಮೋದನೆ ನೀಡಿತು.

ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ ಪುನರುಜ್ಜೀವನ ಕ್ರಮಗಳೆಂದರೆ, ಬಿಎಸ್ಎನ್ಎಲ್ ಸೇವೆಗಳನ್ನು ನವೀಕರಿಸುವ ಸಲುವಾಗಿ ಹೊಸ ಬಂಡವಾಳ ತುಂಬಲು ಗಮನ ಹರಿಸಿದೆ, ಸ್ಪೆಕ್ಟ್ರಮ್ ಹಂಚಿಕೆ, ಅದರ ಬ್ಯಾಲೆನ್ಸ್ ಶೀಟ್ ಕಡಿಮೆಗೊಳಿಸುವುದು ಮತ್ತು ಭಾರತ್ ಬ್ರಾಡ್ ಬ್ಯಾಂಡ್ ನಿಗಮ ನಿಯಮಿತ(ಬಿಬಿಎನ್ಎಲ್)ವನ್ನು ಬಿಎಸ್ಎನ್ಎಲ್ ಜತೆ ವಿಲೀನಗೊಳಿಸುವ ಮೂಲಕ ಫೈಬರ್ ನೆಟ್ ವರ್ಕ್ ಹೆಚ್ಚಿಸುವುದಾಗಿದೆ.

ಎ. ಬಿಎಸ್ಎನ್ಎಲ್ ಸೇವೆಗಳ ಮೇಲ್ದರ್ಜೆ

1. ಸ್ಪೆಕ್ಟ್ರಮ್ ಗಳ ಆಡಳಿತಾತ್ಮಕ ಹಂಚಿಕೆ: ಅಸ್ತಿತ್ವದಲ್ಲಿರುವ ಸೇವೆಗಳನ್ನು ಸುಧಾರಿಸಲು ಮತ್ತು 4ಜಿ ತಂತ್ರಜ್ಞಾನ ಸೇವೆಗಳನ್ನು ಒದಗಿಸಲು ಬಿಎಸ್ಎನ್ಎಲ್ ಗೆ 900/1800 ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ ಆಡಳಿತಾತ್ಮಕವಾಗಿ 44,993 ಕೋಟಿ ರೂ. ವೆಚ್ಚದಲ್ಲಿ ಈಕ್ವಿಟಿ ವಿಮೆ ಮೂಲಕ ಸ್ಪೆಕ್ಟ್ರಮ್ ನೀಡಲಾಗುತ್ತದೆ. ಈ ಸ್ಪೆಕ್ಟ್ರಮ್ನೊಂದಿಗೆ ಬಿಎಸ್ಎನ್ಎಲ್ ಮಾರುಕಟ್ಟೆಯಲ್ಲಿ ಬಲಿಷ್ಠವಾಗಿ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಂತೆ ತನ್ನ ವಿಶಾಲವಾದ ಜಾಲ ಬಳಸಿಕೊಂಡು ಹೆಚ್ಚಿನ ವೇಗದ ಡೇಟಾ ಒದಗಿಸಲು ಸಾಧ್ಯವಾಗುತ್ತದೆ.

2. ಬಂಡವಾಳ ವೆಚ್ಚಕ್ಕಾಗಿ ಹಣಕಾಸಿನ ಬೆಂಬಲ: ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಉತ್ತೇಜಿಸಲು ಬಿಎಸ್ಎನ್ಎಲ್, ಆತ್ಮನಿರ್ಭರ್ 4ಜಿ ತಂತ್ರಜ್ಞಾನವನ್ನು ನಿಯೋಜಿಸುವ ಪ್ರಕ್ರಿಯೆಯಲ್ಲಿದೆ. ಮುಂದಿನ 4 ವರ್ಷಗಳ ಯೋಜಿತ ಬಂಡವಾಳ ವೆಚ್ಚ ಪೂರೈಸಲು ಸರ್ಕಾರವು, 22,471 ಕೋಟಿ ರೂ. ನಿಧಿ ಒದಗಿಸಲಿದೆ. ಇದು ಆತ್ಮನಿರ್ಭರ್ 4ಜಿ ತಂತ್ರಜ್ಞಾನದ ಅಭಿವೃದ್ಧಿ ಮತ್ತು ನಿಯೋಜನೆಗೆ ಗಮನಾರ್ಹ ಉತ್ತೇಜನ ನೀಡಲಿದೆ.

3. ಗ್ರಾಮೀಣ ವೈರ್ಲೈನ್ ಕಾರ್ಯಾಚರಣೆಗಳಿಗೆ ಕಾರ್ಯಸಾಧು ಅಂತರ ನಿಧಿ: ವಾಣಿಜ್ಯ ಕಾರ್ಯಸಾಧುವಲ್ಲದ ಹೊರತಾಗಿಯೂ, ಸರ್ಕಾರದ ಸಾಮಾಜಿಕ ಉದ್ದೇಶಗಳನ್ನು ಪೂರೈಸಲು ಬಿಎಸ್ಎನ್ಎಲ್, ಗ್ರಾಮೀಣ ಮತ್ತು ದೂರ ಪ್ರದೇಶಗಳಲ್ಲಿ ವೈರ್ಲೈನ್ ಸೇವೆಗಳನ್ನು ಒದಗಿಸುತ್ತಿದೆ. 2014-15ರಿಂದ 2019-20ರ ಅವಧಿಯಲ್ಲಿ ಮಾಡಿದ ವಾಣಿಜ್ಯಿಕವಾಗಿ ಕಾರ್ಯಸಾಧುವಲ್ಲದ ಗ್ರಾಮೀಣ ವೈರ್-ಲೈನ್ ಕಾರ್ಯಾಚರಣೆಗಳಿಗಾಗಿ ಸರ್ಕಾರವು ಬಿಎಸ್ಎನ್ಎಲ್ ಗೆ 13,789 ಕೋಟಿ ರೂ. ಕಾರ್ಯಸಾಧು ಅಂತರ ನಿಧಿ ನೀಡಲಿದೆ.

4. ಅಧಿಕೃತ ಬಂಡವಾಳ ಹೆಚ್ಚಳ: ಹೊಂದಾಣಿಕೆಯ ಒಟ್ಟು ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವಿನ್ಯೂ-AGR-ಟೆಲಿಕಾಂ ಆಪರೇಟರ್ ಗಳಿಗೆ ಬಿಎಸ್ಎನ್ಎಲ್ ವಿಧಿಸುವ ಪರವಾನಗಿ ಶುಲ್ಕ ಹೊಂದಾಣಿಕೆ ಮತ್ತಿತರ ವೆಚ್ಚಗಳಿಗೆ) ಬಾಕಿ, ಬಂಡವಾಳ ವೆಚ್ಚ ಒದಗಿಸುವಿಕೆ ಮತ್ತು ಸ್ಪೆಕ್ಟ್ರಮ್ ಹಂಚಿಕೆಗೆ ಪೂರಕವಾಗಿ ಬಿಎಸ್ಎನ್ಎಲ್ ಗೆ ಅಧಿಕೃತ ಬಂಡವಾಳ ಪ್ರಮಾಣವನ್ನು 40,000 ಕೋಟಿ ರೂ.ನಿಂದ 1,50,000 ಕೋಟಿ ರೂ.ಗೆ ಹೆಚ್ಚಿಸಲಾಗುತ್ತದೆ.

ಬಿ. ಒತ್ತಡ ನಿವಾರಿಸುವ ಬಿಎಸ್ಎನ್ಎಲ್ ಬ್ಯಾಲೆನ್ಸ್ ಶೀಟ್

5. ಸಾಲ ಸಂರಚನೆ: ದೀರ್ಘಾವಧಿಯ ಸಾಲ ಸಂಗ್ರಹಿಸಲು ಸರ್ಕಾರವು ಈ ಸಾರ್ವಜನಿಕ ವಲಯದ ಘಟಕ(ಪಿಎಸ್ ಯು)ಗಳಿಗೆ ಸಾರ್ವಭೌಮ ಖಾತ್ರಿ ನೀಡುತ್ತದೆ. ಇದರಿಂದ ಬಿಎಸ್ಎನ್ಎಲ್ 40,399 ಕೋಟಿ ರೂ. ಮೊತ್ತದ ದೀರ್ಘಾವಧಿ ಬಾಂಡ್ಗಳನ್ನು ಕ್ರೋಡೀಕರಿಸಲು ಸಾಧ್ಯವಾಗುತ್ತದೆ. ಈ ಆರ್ಥಿಕ ನೆರವು ಅಸ್ತಿತ್ವದಲ್ಲಿರುವ ಸಾಲ ಪುನಾರಚಿಸಲು ಮತ್ತು ಬ್ಯಾಲೆನ್ಸ್ ಶೀಟ್ಗಳ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

6. ಎಜಿಆರ್ ಬಾಕಿಗಳಿಗೆ ಹಣಕಾಸಿನ ಬೆಂಬಲ: ಬ್ಯಾಲೆನ್ಸ್ ಶೀಟ್ ಅನ್ನು ಇನ್ನಷ್ಟು ಸುಧಾರಿಸಲು, 33,404 ಕೋಟಿ ರೂ. ಬಿಎಸ್ಎನ್ಎಲ್ ನ ಎಜಿಆರ್ ಬಾಕಿಗಳನ್ನು ಈಕ್ವಿಟಿಯಾಗಿ ಪರಿವರ್ತಿಸುವ ಮೂಲಕ ಇತ್ಯರ್ಥಗೊಳಿಸಲಾಗುತ್ತದೆ. ಎಜಿಆರ್/ಜಿಎಸ್ಟಿ ತೆರಿಗೆ ಬಾಕಿಗಳನ್ನು ಇತ್ಯರ್ಥಗೊಳಿಸಲು ಸರ್ಕಾರವು ಬಿಎಸ್ಎನ್ಎಲ್ ಗೆ ಆರ್ಥಿಕ ನೆರವು ನೀಡುತ್ತದೆ.

7. ಪ್ರಾಶಸ್ತ್ಯ(ಆದ್ಯತಾ) ಷೇರುಗಳ ಮರುವಿತರಣೆ: 7,500 ಕೋಟಿ ರೂ. ಮೌಲ್ಯದ ಆದ್ಯತಾ ಷೇರುಗಳನ್ನು ಬಿಎಸ್ಎನ್ಎಲ್, ಸರ್ಕಾರಕ್ಕೆ ಹೊಸದಾಗಿ (ಮರುವಿತರಣೆ ಮಾಡಲಿದೆ) ನೀಡುತ್ತದೆ.

ಸಿ. ಬಿಎಸ್ಎನ್ಎಲ್ ಫೈಬರ್ ಜಾಲ ಹೆಚ್ಚಿಸುವುದು.

8. ಬಿಬಿಎನ್ಎಲ್ ಮತ್ತು ಬಿಎಸ್ಎನ್ಎಲ್ ವಿಲೀನ: ಭಾರತ್ನೆಟ್ ಅಡಿ ಸ್ಥಾಪಿಸಲಾದ ಮೂಲಸೌಕರ್ಯಗಳ ವ್ಯಾಪಕ ಬಳಕೆಯನ್ನು ಸುಲಭಗೊಳಿಸಲು, ಭಾರತ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಲಿಮಿಟೆಡ್ (ಬಿಬಿಎನ್ಎಲ್) ಅನ್ನು ಬಿಎಸ್ಎನ್ಎಲ್ ಜತೆ ವಿಲೀನಗೊಳಿಸಲಾಗುವುದು. ಭಾರತ್ನೆಟ್ ಅಡಿ ರಚಿಸಲಾದ ಮೂಲಸೌಕರ್ಯವು ರಾಷ್ಟ್ರೀಯ ಆಸ್ತಿಯಾಗಿ ಮುಂದುವರಿಯಲಿದೆ. ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರಿಗೆ ತಾರತಮ್ಯರಹಿತ ಆಧಾರದ ಮೇಲೆ ಮೂಲಸೌಕರ್ಯ ಲಭ್ಯತೆ ಒದಗಿಸಲಾಗುತ್ತದೆ.

ಈ ಎಲ್ಲಾ ಕ್ರಮಗಳೊಂದಿಗೆ, ಬಿಎಸ್ಎನ್ಎಲ್ ನ ಅಸ್ತಿತ್ವದಲ್ಲಿರುವ ಸೇವೆಗಳ ಗುಣಮಟ್ಟ ಸುಧಾರಿಸಲು, 4ಜಿ ತಂತ್ರಜ್ಞಾನ ಸೇವೆಗಳನ್ನು ಜಾರಿಗೊಳಿಸಲು ಮತ್ತು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ಪುನರುಜ್ಜೀವನ ಯೋಜನೆಯ ಅನುಷ್ಠಾನದೊಂದಿಗೆ, ಬಿಎಸ್ಎನ್ಎಲ್ 2026-27ರ ಆರ್ಥಿಕ ವರ್ಷದಲ್ಲಿ ಮರಳಿ ಲಾಭದ ಹಾದಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸಿದೆ. 

 

********

 

 

 

 

 

 



(Release ID: 1845633) Visitor Counter : 195