ರಾಷ್ಟ್ರಪತಿಗಳ ಕಾರ್ಯಾಲಯ

ಶ್ರೀಮತಿ ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ಮಾಡಿದ ಭಾಷಣ

Posted On: 25 JUL 2022 12:48PM by PIB Bengaluru

ಜೋಹಾರ್!

ನಮಸ್ಕಾರ!

ನನ್ನನ್ನು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆ ಮಾಡಿದ ಎಲ್ಲಾ ಸಂಸತ್ ಮತ್ತು ವಿಧಾನಸಭೆಗಳ ಸದಸ್ಯರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ನೀವು ನನಗೆ ನೀಡಿದ ಮತವು ದೇಶದ ಕೋಟ್ಯಾಂತರ ನಾಗರಿಕರು ಹೊಂದಿರುವ ವಿಶ್ವಾಸದ ಅಭಿವ್ಯಕ್ತಿಯಾಗಿದೆ.

ಭಾರತದ ಎಲ್ಲ ನಾಗರಿಕರ ಆಶೋತ್ತರಗಳು, ಆಕಾಂಕ್ಷೆಗಳು ಮತ್ತು ಹಕ್ಕುಗಳ ಸಂಕೇತವಾದ ಈ ಪವಿತ್ರ ಸಂಸತ್ತಿನ ಎಲ್ಲಾ ಸಹವರ್ತಿಗಳನ್ನು ನಾನು ವಿನಮ್ರತೆಯಿಂದ ಸ್ವಾಗತಿಸುತ್ತೇನೆ.

ನಿಮ್ಮ ವಾತ್ಸಲ್ಯ, ವಿಶ್ವಾಸ ಮತ್ತು ಬೆಂಬಲವು ನನ್ನ ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ನನ್ನ ದೊಡ್ಡ ಶಕ್ತಿಯಾಗಿದೆ.

ನಾವು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವ ನಿರ್ಣಾಯಕ ಸಮಯದಲ್ಲಿ ದೇಶವು ನನ್ನನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದೆ.

ಇಂದಿನಿಂದ ಕೆಲವೇ ದಿನಗಳಲ್ಲಿ, ದೇಶವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುತ್ತದೆ.

ದೇಶವು ತನ್ನ 50ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದಾಗ ನನ್ನ ರಾಜಕೀಯ ಜೀವನವು ಪ್ರಾರಂಭವಾಯಿತು ಎಂಬುದು ಕಾಕತಾಳೀಯವಾಗಿದೆ.

ಮತ್ತು ಇಂದು, ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ನನಗೆ ಈ ಹೊಸ ಜವಾಬ್ದಾರಿಯನ್ನು ವಹಿಸಲಾಗಿದೆ.

ಭಾರತವು ಮುಂದಿನ 25 ವರ್ಷಗಳ ತನ್ನ ಆಶಯವನ್ನು ಸಾಕಾರಗೊಳಿಸುವಲ್ಲಿ ಪೂರ್ಣ ಹುರುಪಿನಿಂದ ತೊಡಗಿರುವ ಇಂತಹ ಐತಿಹಾಸಿಕ ಸಮಯದಲ್ಲಿ ಈ ಜವಾಬ್ದಾರಿಯನ್ನು ನೀಡಿರುವುದು ನನ್ನ ದೊಡ್ಡ ಸೌಭಾಗ್ಯವಾಗಿದೆ.

ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ರಾಷ್ಟ್ರಪತಿಯೂ ನಾನು ಹೌದು.

ಸ್ವತಂತ್ರ ಭಾರತದ ನಾಗರಿಕರು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ನಿರೀಕ್ಷೆಗಳನ್ನು ಪೂರೈಸುವಂತಾಗಲು ನಾವು ಈ ʻಅಮೃತ ಕಾಲʼದಲ್ಲಿ ವೇಗವಾಗಿ ಕೆಲಸ ಮಾಡಬೇಕಾಗಿದೆ.

ಈ 25 ವರ್ಷಗಳಲ್ಲಿ, ʻಅಮೃತ ಕಾಲʼದ ಗುರಿಗಳನ್ನು ಸಾಧಿಸುವ ಮಾರ್ಗವು ʻಸಬ್‌ಕಾ ಪ್ರಯಾಸ್ ಔರ್ ಸಬ್‌ ಕಾ ಕಾರ್ತವ್ಯʼ (ಪ್ರತಿಯೊಬ್ಬರ ಪ್ರಯತ್ನ ಮತ್ತು ಪ್ರತಿಯೊಬ್ಬರ ಕರ್ತವ್ಯ) ಎಂಬ ಎರಡು ಮಾರ್ಗಗಳಲ್ಲಿ ಮುಂದುವರಿಯುತ್ತದೆ.

ಕರ್ತವ್ಯದ ಮಾರ್ಗವನ್ನು ಅನುಸರಿಸಿ, ನಮ್ಮ ಸಾಮೂಹಿಕ ಪ್ರಯತ್ನಗಳ ಮೂಲಕ ಭಾರತದ ಉಜ್ವಲ ಭವಿಷ್ಯದ ಕಡೆಗೆ ಹೊಸ ಅಭಿವೃದ್ಧಿ ಪ್ರಯಾಣವನ್ನು ನಾವು ಕೈಗೊಳ್ಳಬೇಕಾಗಿದೆ.

ನಾವು ನಾಳೆ ಅಂದರೆ ಜುಲೈ 26ರಂದು ʻಕಾರ್ಗಿಲ್ ವಿಜಯ್ ದಿವಸ್ʼ ಆಚರಿಸಲಿದ್ದೇವೆ. ಈ ದಿನವು ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಂಯಮ ಎರಡರ ಸಂಕೇತವಾಗಿದೆ.

ಇಂದು, ನಾನು ದೇಶದ ಸಶಸ್ತ್ರ ಪಡೆಗಳಿಗೆ ಮತ್ತು ಎಲ್ಲಾ ನಾಗರಿಕರಿಗೆ ಮುಂಚಿತವಾಗಿ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.

ಮಹಿಳೆಯರೇ ಮತ್ತು ಮಹನೀಯರೇ

ನಾನು ದೇಶದ ಪೂರ್ವ ಭಾಗದಲ್ಲಿರುವ ಒಡಿಶಾದ ಒಂದು ಸಣ್ಣ ಬುಡಕಟ್ಟು ಹಳ್ಳಿಯಿಂದ ನನ್ನ ಜೀವನದ ಪ್ರಯಾಣವನ್ನು ಪ್ರಾರಂಭಿಸಿದೆ.

ನಾನು ಬಂದ ಹಿನ್ನೆಲೆಯಿಂದ ಹೇಳುವುದಾದರೆ, ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದು ಸಹ ನನಗೆ ಕನಸಿನಂತೆಯೇ ಇತ್ತು.

ಆದರೆ ಅನೇಕ ಅಡೆತಡೆಗಳ ಹೊರತಾಗಿಯೂ, ನನ್ನ ದೃಢನಿಶ್ಚಯವು ಬಲವಾಗಿ ಉಳಿಯಿತು ಮತ್ತು ನಾನು ನಮ್ಮ ಹಳ್ಳಿಯಲ್ಲಿ ಕಾಲೇಜಿಗೆ ಹೋದ ಮೊದಲ ಹೆಣ್ಣುಮಗಳಾಗಿ ಹೊರಹೊಮ್ಮಿದೆ.

ನಾನು ಬುಡಕಟ್ಟು ಸಮಾಜಕ್ಕೆ ಸೇರಿದವಳು. ʻವಾರ್ಡ್ ಕೌನ್ಸಿಲರ್ʼ ಆಗಿ ಸೇವೆ ಸಲ್ಲಿಸುವುದರಿಂದ ಹಿಡಿದು ಭಾರತದ ರಾಷ್ಟ್ರಪತಿಯಾಗುವವರೆಗೆ ಉನ್ನತ ದರ್ಜೆಗೇರುವ ಅವಕಾಶ ನನಗೆ ದೊರೆತಿದೆ. ಇದೇ ಪ್ರಜಾಪ್ರಭುತ್ವದ ತಾಯಿಯಾದ ಭಾರತದ ಹಿರಿಮೆ.

ದೂರದ ಬುಡಕಟ್ಟು ಪ್ರದೇಶದ ಬಡ ಮನೆಯಲ್ಲಿ ಜನಿಸಿದ ಹೆಣ್ಣು ಮಗಳು ಭಾರತದ ಅತ್ಯುನ್ನತ ಸಾಂವಿಧಾನಿಕ ಸ್ಥಾನವನ್ನು ತಲುಪಬಹುದು ಎಂಬುದು ನಮ್ಮ ಪ್ರಜಾಪ್ರಭುತ್ವದ ಶಕ್ತಿಗೆ ಸಂದ ಗೌರವವಾಗಿದೆ.

ನಾನು ರಾಷ್ಟ್ರಪತಿ ಹುದ್ದೆಯನ್ನು ಪಡೆದಿರುವುದು ನನ್ನ ವೈಯಕ್ತಿಕ ಸಾಧನೆಯಲ್ಲ, ಅದು ಭಾರತದ ಪ್ರತಿಯೊಬ್ಬ ಬಡವನ ಸಾಧನೆಯಾಗಿದೆ.

ಭಾರತದ ಬಡವರು ಕನಸುಗಳನ್ನು ಹೊಂದಬಹುದು ಮತ್ತು ಅವುಗಳನ್ನು ಈಡೇರಿಸಿಕೊಳ್ಳಲೂಬಹುದು ಎಂಬುದಕ್ಕೆ ನನ್ನ ಚುನಾವಣೆ ಸಾಕ್ಷಿಯಾಗಿದೆ.

ಶತಶತಮಾನಗಳಿಂದ ಅವಕಾಶ ವಂಚಿತರಾದವರು ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ನಿರಾಕರಿಸಲ್ಪಟ್ಟವರು, ಬಡವರು, ದೀನದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಜನರು ನನ್ನಲ್ಲಿ ತಮ್ಮ ಪ್ರತಿಬಿಂಬವನ್ನು ನೋಡುತ್ತಿದ್ದಾರೆ ಎಂಬುದು ನನಗೆ ಅತ್ಯಂತ ಸಂತೃಪ್ತಿಯ ವಿಷಯವಾಗಿದೆ.

ನನ್ನ ಈ ಚುನಾವಣೆಯಲ್ಲಿ ದೇಶದ ಬಡವರ ಆಶೀರ್ವಾದವಿದೆ. ಮತ್ತು ಇದು ದೇಶದ ಕೋಟ್ಯಾಂತರ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಕನಸುಗಳು ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ನನ್ನ ಈ ಚುನಾವಣೆಯು ಭಾರತದ ಇಂದಿನ ಯುವಕರ ಧೈರ್ಯವನ್ನು ಸಹ ತೋರಿಸುತ್ತದೆ, ಅವರು ಹೊಸ ಮಾರ್ಗಗಳಲ್ಲಿ ನಡೆಯಲು ಮತ್ತು ಹಳೆಯ ಹಾದಿಗಳಿಂದ ದೂರವಿರಲು ಸಿದ್ಧರಾಗಿದ್ದಾರೆ.

ಇಂದು ಅಂತಹ ಪ್ರಗತಿಪರ ಭಾರತವನ್ನು ಮುನ್ನಡೆಸಲು ನಾನು ಹೆಮ್ಮೆಪಡುತ್ತೇನೆ.

ಇಂದು, ನಾನು ಎಲ್ಲಾ ಸಹ ನಾಗರಿಕರಿಗೆ ವಿಶೇಷವಾಗಿ ಭಾರತದ ಯುವಕರು ಮತ್ತು ಭಾರತದ ಮಹಿಳೆಯರಿಗೆ ಭರವಸೆ ನೀಡಬಯಸುವುದೇನೆಂದರೆ, ಈ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವಾಗ ಅವರ ಹಿತಾಸಕ್ತಿಗಳು ನನಗೆ ಅತ್ಯಂತ ಪ್ರಧಾನವಾಗಿರುತ್ತವೆ.

ಮಹಿಳೆಯರೇ ಮತ್ತು ಮಹನೀಯರೇ,

ವಿಶ್ವದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ನಿರಂತರವಾಗಿ ಬಲಪಡಿಸಿದ ಭಾರತದ ರಾಷ್ಟ್ರಪತಿ ಸ್ಥಾನದ ಮಹಾನ್ ಪರಂಪರೆ ನನ್ನ ಮುಂದಿದೆ.

ದೇಶದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರಿಂದ ಹಿಡಿದು ಶ್ರೀ ರಾಮ್ ನಾಥ್ ಕೋವಿಂದ್ ಅವರವರೆಗೆ, ಘಟಾನುಘಟಿಗಳು ಈ ಹುದ್ದೆಯನ್ನು ಅಲಂಕರಿಸಿದ್ದಾರೆ.

ಈ ಹುದ್ದೆಯ ಜೊತೆಗೆ, ದೇಶವು ಈ ಮಹಾನ್ ಸಂಪ್ರದಾಯವನ್ನು ಪ್ರತಿನಿಧಿಸುವ ಜವಾಬ್ದಾರಿಯನ್ನು ಸಹ ನನಗೆ ವಹಿಸಿದೆ.

ಸಂವಿಧಾನದ ಬೆಳಕಿನಲ್ಲಿ, ನಾನು ನನ್ನ ಕರ್ತವ್ಯಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇನೆ.

ಭಾರತ ಮತ್ತು ಎಲ್ಲಾ ನಾಗರಿಕರ ಪ್ರಜಾಸತ್ತಾತ್ಮಕ-ಸಾಂಸ್ಕೃತಿಕ ಆದರ್ಶಗಳು ಸದಾ ನನ್ನ ಪಾಲಿಗೆ ನನ್ನ ಶಕ್ತಿಯ ಮೂಲವಾಗಿರುತ್ತವೆ.

ಮಹಿಳೆಯರೇ ಮತ್ತು ಮಹನೀಯರೇ,

ನಮ್ಮ ಸ್ವಾತಂತ್ರ್ಯ ಹೋರಾಟವು ಒಂದು ರಾಷ್ಟ್ರವಾಗಿ ಭಾರತದ ಹೊಸ ಪ್ರಯಾಣಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸಿತ್ತು.

ನಮ್ಮ ಸ್ವಾತಂತ್ರ್ಯ ಸಂಗ್ರಾಮವು, ಸ್ವತಂತ್ರ ಭಾರತಕ್ಕೆ ಅನೇಕ ಆದರ್ಶಗಳು ಮತ್ತು ಸಾಧ್ಯತೆಗಳನ್ನು ತೆರೆದಿಟ್ಟ ಹೋರಾಟಗಳು ಹಾಗೂ ತ್ಯಾಗಗಳ ನಿರಂತರ ಪ್ರವಾಹವಾಗಿತ್ತು.

ಪೂಜ್ಯ ಬಾಪು ಅವರು ಸ್ವರಾಜ್ಯ, ಸ್ವದೇಶಿ, ಸ್ವಚ್ಚತೆ ಮತ್ತು ಸತ್ಯಾಗ್ರಹದ ಮೂಲಕ ಭಾರತೀಯ ಸಾಂಸ್ಕೃತಿಕ ಆದರ್ಶಗಳನ್ನು ಸಾಕಾರಗೊಳಿಸುವ ಮಾರ್ಗವನ್ನು ನಮಗೆ ತೋರಿಸಿದ್ದರು.

ನೇತಾಜಿ ಸುಭಾಷ್ ಚಂದ್ರ ಬೋಸ್, ನೆಹರು ಜೀ, ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್, ಸುಖದೇವ್, ರಾಜಗುರು ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಅಸಂಖ್ಯಾತ ವ್ಯಕ್ತಿಗಳು ರಾಷ್ಟ್ರೀಯ ಹೆಮ್ಮೆಯನ್ನು ಅತ್ಯುನ್ನತವಾಗಿಡಲು ನಮಗೆ ಕಲಿಸಿದ್ದರು.

ರಾಣಿ ಲಕ್ಷ್ಮಿ ಬಾಯಿ, ರಾಣಿ ವೇಲು ನಾಚಿಯಾರ್, ರಾಣಿ ಗೈಡಿನ್ಲಿಯು ಮತ್ತು ರಾಣಿ ಚೆನ್ನಮ್ಮ ಅವರಂತಹ ಅನೇಕ ಧೈರ್ಯಶಾಲಿ ಮಹಿಳಾಮಣಿಗಳು ದೇಶವನ್ನು ರಕ್ಷಿಸುವಲ್ಲಿ ಮತ್ತು ನಿರ್ಮಿಸುವಲ್ಲಿ ಮಹಿಳಾ ಶಕ್ತಿಯ ಪಾತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.

ಸಂತಾಲ್ ಕ್ರಾಂತಿ, ಪೈಕಾ ಕ್ರಾಂತಿಯಿಂದ ಹಿಡಿದು ಕೋಲ್ ಕ್ರಾಂತಿ ಮತ್ತು ಭಿಲ್ ಕ್ರಾಂತಿಯವರೆಗೆ, ಈ ಎಲ್ಲಾ ಕ್ರಾಂತಿಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಜನರ ಕೊಡುಗೆಯನ್ನು ಬಲಪಡಿಸಿದವು.

ಸಾಮಾಜಿಕ ಉನ್ನತಿಗಾಗಿ ಮತ್ತು ದೇಶಭಕ್ತಿಗಾಗಿ 'ಧರ್ತಿ ಆಬಾ' ಭಗವಾನ್ ಬಿರ್ಸಾ ಮುಂಡಾ ಜೀ ಅವರ ತ್ಯಾಗದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ.

ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯಗಳ ಪಾತ್ರಕ್ಕಾಗಿ ದೇಶಾದ್ಯಂತ ಅನೇಕ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸುತ್ತಿರುವುದು ನನಗೆ ಸಂತೋಷ ತಂದಿದೆ.

ಮಹಿಳೆಯರೇ ಮತ್ತು ಮಹನೀಯರೇ,

ಸಂಸದೀಯ ಪ್ರಜಾಪ್ರಭುತ್ವವಾಗಿ 75 ವರ್ಷಗಳು ಸಾಗಿ ಬಂದಿರುವ ಭಾರತವು, ಭಾಗವಹಿಸುವಿಕೆ ಮತ್ತು ಒಮ್ಮತದ ಮೂಲಕ ಪ್ರಗತಿಯ ಸಂಕಲ್ಪವನ್ನು ಮುಂದಕ್ಕೆ ಕೊಂಡೊಯ್ದಿದೆ.

ವೈವಿಧ್ಯತೆಗಳಿಂದ ತುಂಬಿರುವ ನಮ್ಮ ದೇಶದಲ್ಲಿ, ನಾವು ಅನೇಕ ಭಾಷೆಗಳು, ಧರ್ಮಗಳು, ಪಂಥಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು ಮತ್ತು ಸಂಸ್ಕೃತಿಗಳನ್ನು ಅಳವಡಿಸಿಕೊಳ್ಳುವ ಮೂಲಕ 'ಏಕ ಭಾರತ-ಶ್ರೇಷ್ಠ ಭಾರತ'ವನ್ನು ನಿರ್ಮಿಸುವಲ್ಲಿ ನಿರತರಾಗಿದ್ದೇವೆ.

ನಮ್ಮ ಸ್ವಾತಂತ್ರ್ಯದ 75ನೇ ವರ್ಷದಿಂದ ಪ್ರಾರಂಭವಾಗುವ ಈ ʻಅಮೃತ ಕಾಲʼವು ಭಾರತಕ್ಕೆ ಹೊಸ ಸಂಕಲ್ಪಗಳ ಸಮಯವಾಗಿದೆ.

ಈ ಹೊಸ ಯುಗವನ್ನು ಹೊಸ ಆಲೋಚನೆಯೊಂದಿಗೆ ಸ್ವಾಗತಿಸಲು ನನ್ನ ದೇಶವು ಸ್ಫೂರ್ತಿಯುತ ಮತ್ತು ಸನ್ನದ್ಧವಾಗಿರುವುದನ್ನು ನಾನು ಇಂದು ನೋಡುತ್ತಿದ್ದೇನೆ.

ಇಂದು ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ತೆರೆಯುತ್ತಿದೆ.

ಕರೋನಾ ಸಾಂಕ್ರಾಮಿಕದಂತಹ ಜಾಗತಿಕ ಬಿಕ್ಕಟ್ಟನ್ನು ಎದುರಿಸುವಲ್ಲಿ ಭಾರತವು ತೋರಿಸಿದ ಸಾಮರ್ಥ್ಯವು ವಿಶ್ವದಾದ್ಯಂತ ಭಾರತದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ.

ನಾವು ಭಾರತೀಯರು ನಮ್ಮ ಪ್ರಯತ್ನಗಳ ಮೂಲಕ ಈ ಜಾಗತಿಕ ಸವಾಲನ್ನು ಎದುರಿಸಿದ್ದಲ್ಲದೆ, ವಿಶ್ವಕ್ಕೆ ಹೊಸ ಮಾನದಂಡಗಳನ್ನು ನಿಗದಿಪಡಿಸಿದ್ದೇವೆ.

ಕೆಲವು ದಿನಗಳ ಹಿಂದೆ, ಭಾರತವು 200 ಕೋಟಿ ಡೋಸ್ ಕೋವಿಡ್‌ ಲಸಿಕೆಯನ್ನು ನೀಡುವ ಮೂಲಕ ದಾಖಲೆ ನಿರ್ಮಿಸಿದೆ.

ಕೋವಿಡ್‌ ವಿರುದ್ಧದ ಈ ಇಡೀ ಸಮರದಲ್ಲಿ ಭಾರತದ ಜನರು ತೋರಿದ ತಾಳ್ಮೆ, ಧೈರ್ಯ ಮತ್ತು ಸಹಕಾರವು ಸಮಾಜವಾಗಿ ನಮ್ಮ ಬೆಳವಣಿಗೆಯ ಶಕ್ತಿ ಮತ್ತು ಸಂವೇದನಾಶೀಲತೆಯ ಸಂಕೇತವಾಗಿದೆ.

ಭಾರತವು ಈ ಕಠಿಣ ಪರಿಸ್ಥಿತಿಗಳಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ವಿಶ್ವಕ್ಕೆ ಸಹಾಯ ಮಾಡಿತು.

ಕರೋನಾ ಸಾಂಕ್ರಾಮಿಕವು ಸೃಷ್ಟಿಸಿದ ವಾತಾವರಣದಲ್ಲಿ, ಇಂದು ಜಗತ್ತು ಭಾರತದತ್ತ ಹೊಸ ವಿಶ್ವಾಸದಿಂದ ನೋಡುತ್ತಿದೆ.

ಜಾಗತಿಕ ಆರ್ಥಿಕ ಸ್ಥಿರತೆ, ಪೂರೈಕೆ ಸರಪಳಿಯ ಸುಗಮತೆ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಸಮುದಾಯವು ಭಾರತದಿಂದ ಹೆಚ್ಚಿನ ಭರವಸೆಗಳನ್ನು ನಿರೀಕ್ಷಿಸುತ್ತಿದೆ.

ಮುಂಬರುವ ತಿಂಗಳುಗಳಲ್ಲಿ, ಭಾರತವು ತನ್ನ ಅಧ್ಯಕ್ಷತೆಯಲ್ಲಿ ಜಿ -20 ದೇಶಗಳ ಶೃಂಗಸಭೆಯ ಆತಿಥ್ಯ ವಹಿಸಲಿದೆ.

ಈ ಗುಂಪಿನಲ್ಲಿರುವ ವಿಶ್ವದ ಇಪ್ಪತ್ತು ಬೃಹತ್‌ ದೇಶಗಳು ಭಾರತದ ಅಧ್ಯಕ್ಷತೆಯಲ್ಲಿ ಜಾಗತಿಕ ವಿಷಯಗಳ ಬಗ್ಗೆ ಚಿಂತನ-ಮಂಥನ ನಡೆಸಲಿವೆ.

ಭಾರತದಲ್ಲಿನ ಈ ಚಿಂತನ-ಮಂಥನದಿಂದ ಹೊರಹೊಮ್ಮುವ ತೀರ್ಮಾನಗಳು ಮತ್ತು ನೀತಿಗಳು ಮುಂಬರುವ ದಶಕಗಳ ದಿಕ್ಕನ್ನು ನಿರ್ಧರಿಸುತ್ತವೆ ಎಂದು ನನಗೆ ಖಾತ್ರಿಯಿದೆ.

ಮಹಿಳೆಯರೇ ಮತ್ತು ಮಹನೀಯರೇ,

ದಶಕಗಳ ಹಿಂದೆ, ನನಗೆ ರಾಯರಂಗಪುರದ ಶ್ರೀ ಅರಬಿಂದೋ ಇಂಟಿಗ್ರಲ್ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು.

ಕೆಲವು ದಿನಗಳ ನಂತರ, ನಾವು ಶ್ರೀ ಅರಬಿಂದೋ ಅವರ 150ನೇ ಜಯಂತಿಯನ್ನು ಆಚರಿಸಲಿದ್ದೇವೆ.

ಶಿಕ್ಷಣದ ಬಗ್ಗೆ ಶ್ರೀ ಅರವಿಂದರ ಚಿಂತನೆಗಳು ನನಗೆ ಸ್ಫೂರ್ತಿ ನೀಡುತ್ತಲೇ ಇವೆ.

ನಾನು ಶಿಕ್ಷಣ ಸಂಸ್ಥೆಗಳೊಂದಿಗೆ ಸಕ್ರಿಯ ಒಡನಾಟವನ್ನು ಹೊಂದಿದ್ದೇನೆ, ಸಾರ್ವಜನಿಕ ಪ್ರತಿನಿಧಿಯಾಗಿ ಮತ್ತು ನಂತರ ರಾಜ್ಯಪಾಲರಾಗಿ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದೇನೆ.

ದೇಶದ ಯುವಜನರ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ನಾನು ನಿಕಟವಾಗಿ ಗಮನಿಸಿದ್ದೇನೆ.

ದೇಶದ ಯುವಕರು ಪ್ರಗತಿ ಹೊಂದಿದಾಗ, ಅವರು ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳುವುದಲ್ಲದೆ, ದೇಶದ ಹಣೆಬರಹವನ್ನು ರೂಪಿಸುತ್ತಾರೆ ಎಂದು ನಮ್ಮ ಪೂಜ್ಯ ಅಟಲ್ ಜೀ ಅವರು ಹೇಳುತ್ತಿದ್ದರು,

ಇಂದು ನಾವು ಅದು ನಿಜವಾಗುವುದನ್ನು ನೋಡುತ್ತಿದ್ದೇವೆ.

'ವೋಕಲ್ ಫಾರ್ ಲೋಕಲ್'ನಿಂದ ಹಿಡಿದು 'ಡಿಜಿಟಲ್ ಇಂಡಿಯಾ'ದವರೆಗಿನ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದುವರಿಯುತ್ತಿರುವ ಇಂದಿನ ಭಾರತವು ವಿಶ್ವದೊಂದಿಗೆ ಹೆಜ್ಜೆಯಿಡುತ್ತಾ, 'ಕೈಗಾರಿಕಾ ಕ್ರಾಂತಿ 4.O’ಗೆ ಸಜ್ಜಾಗಿದೆ.

ಅಸಂಖ್ಯಾತ ಆವಿಷ್ಕಾರಗಳಲ್ಲಿ ಮತ್ತು ದೂರದ ಪ್ರದೇಶಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಭಾರತದ ಯುವಜನರು ದಾಖಲೆಯ ಸಂಖ್ಯೆಯ ನವೋದ್ಯಮಗಳನ್ನು ಸೃಷ್ಟಿಸುವ ಮೂಲಕ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ, ಮಹಿಳಾ ಸಬಲೀಕರಣಕ್ಕಾಗಿ ತೆಗೆದುಕೊಂಡ ನಿರ್ಧಾರಗಳು ಮತ್ತು ನೀತಿಗಳು ದೇಶಕ್ಕೆ ಹೊಸ ಶಕ್ತಿಯನ್ನು ನೀಡಿವೆ.

ನಮ್ಮ ಎಲ್ಲಾ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ಸಶಕ್ತರಾಗಬೇಕೆಂದು ನಾನು ಬಯಸುತ್ತೇನೆ, ಇದರಿಂದ ಅವರು ರಾಷ್ಟ್ರ ನಿರ್ಮಾಣದ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಕೊಡುಗೆಯನ್ನು ಹೆಚ್ಚಿಸುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ನಾನು ನಮ್ಮ ದೇಶದ ಯುವಕರಿಗೆ ಹೇಳಬಯಸುವುದೇನೆಂದರೆ, ನೀವು ನಿಮ್ಮ ಸ್ವಂತ ಭವಿಷ್ಯವನ್ನು ನಿರ್ಮಿಸುವುದಲ್ಲದೆ ಭವಿಷ್ಯದ ಭಾರತಕ್ಕೂ ಅಡಿಪಾಯವನ್ನು ಹಾಕುತ್ತಿದ್ದೀರಿ.

ದೇಶದ ರಾಷ್ಟ್ರಪತಿಯಾಗಿ, ನಾನು ಸದಾ ನಿಮಗೆ ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ.

ಮಹಿಳೆಯರೇ ಮತ್ತು ಮಹನೀಯರೇ,

ಬೆಳವಣಿಗೆ ಮತ್ತು ಪ್ರಗತಿ ಎಂದರೆ ನಿರಂತರವಾಗಿ ಮುನ್ನಡೆಯುವುದು. ಆದರೆ, ಗತಕಾಲದ ಬಗ್ಗೆ ಅರಿವು ಸಹ ಅಷ್ಟೇ ಮುಖ್ಯವಾಗಿದೆ.

ಇಂದು, ಜಗತ್ತು ಸುಸ್ಥಿರ ಭೂಮಿಯ ಬಗ್ಗೆ ಮಾತನಾಡುವಾಗ, ಭಾರತದ ಪ್ರಾಚೀನ ಸಂಪ್ರದಾಯಗಳು ಮತ್ತು ಸುಸ್ಥಿರ ಜೀವನಶೈಲಿಯ ಪಾತ್ರವು ಹೆಚ್ಚು ಮುಖ್ಯವಾಗುತ್ತದೆ.

ಸಾವಿರಾರು ವರ್ಷಗಳಿಂದ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಿದ ಬುಡಕಟ್ಟು ಸಂಪ್ರದಾಯದಲ್ಲಿ ನಾನು ಜನಿಸಿದೆ.

ನನ್ನ ಜೀವನದಲ್ಲಿ ಕಾಡುಗಳು ಮತ್ತು ಜಲಮೂಲಗಳ ಪ್ರಾಮುಖ್ಯತೆಯನ್ನು ನಾನು ಅರಿತುಕೊಂಡಿದ್ದೇನೆ.

ನಾವು ಪ್ರಕೃತಿಯಿಂದ ಅಗತ್ಯ ಸಂಪನ್ಮೂಲಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಪ್ರಕೃತಿಗೆ ಸಮಾನ ಗೌರವದಿಂದ ಸೇವೆ ಸಲ್ಲಿಸುತ್ತೇವೆ.

ಈ ಸಂವೇದನಾಶೀಲತೆ ಇಂದು ಜಾಗತಿಕ ಅನಿವಾರ್ಯವೆನಿಸಿದೆ.

ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಭಾರತವು ವಿಶ್ವಕ್ಕೆ ಮಾರ್ಗದರ್ಶನ ನೀಡುತ್ತಿರುವುದು ನನಗೆ ಸಂತೋಷ ತಂದಿದೆ.

ಮಹಿಳೆಯರೇ ಮತ್ತು ಮಹನೀಯರೇ,

ಇಲ್ಲಿಯವರೆಗೆ ನನ್ನ ಜೀವನದಲ್ಲಿ, ನಾನು ಸಾರ್ವಜನಿಕ ಸೇವೆಯ ಮೂಲಕ ಮಾತ್ರ ಜೀವನದ ಅರ್ಥವನ್ನು ಅರಿತುಕೊಂಡಿದ್ದೇನೆ.

ಶ್ರೀ ಜಗನ್ನಾಥ ಕ್ಷೇತ್ರದ ಪ್ರಸಿದ್ಧ ಕವಿ ಭೀಮ್ ಭೋಯಿ ಜೀ ಅವರ ಕವಿತೆಯ ಒಂದು ಸಾಲನ್ನು ಇಲ್ಲಿ ಉಲ್ಲೇಖಿತಸಲು ಬಯಸುತ್ತೇನೆ-

"ಮೋ ಜೀಬನ್ ಪಚ್ಚೆ ನರ್ಕೆ ಪಡಿ ತೌ, ಜಗತೋ ಉದ್ಧರ್ ಹೂಂ".

ಅಂದರೆ, ಲೋಕ ಕಲ್ಯಾಣಕ್ಕಾಗಿ ದುಡಿಯುವುದು ಸ್ವಂತ ಹಿತಾಸಕ್ತಿಗಳಿಗಾಗಿ ದುಡಿಯುವುದಕ್ಕಿಂತಲೂ ದೊಡ್ಡದು.

ಲೋಕ ಕಲ್ಯಾಣದ ಈ ಮನೋಭಾವದೊಂದಿಗೆ, ನೀವೆಲ್ಲರೂ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಅನುಗುಣವಾಗಿ ಬದುಕಲು ನಾನು ಸದಾ ಸಂಪೂರ್ಣ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡಲು ಸಿದ್ಧಳಿದ್ದೇನೆ.

ನಾವೆಲ್ಲರೂ ಒಗ್ಗೂಡಿ, ಭವ್ಯ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಮರ್ಪಿತ ಮನೋಭಾವದೊಂದಿಗೆ ಕರ್ತವ್ಯದ ಹಾದಿಯಲ್ಲಿ ಮುಂದುವರಿಯೋಣ.

ಧನ್ಯವಾದಗಳು,

ಜೈ ಹಿಂದ್!

 

*******



(Release ID: 1844686) Visitor Counter : 189