ಪ್ರಧಾನ ಮಂತ್ರಿಯವರ ಕಛೇರಿ

ಚೊಚ್ಚಲ "ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ"ದಲ್ಲಿ ಪಾಲ್ಗೊಂಡ ಪ್ರಧಾನಿ


"ಶಿಂಜೊ ಅಬೆ ಮುಂದಿನ ಹತ್ತಾರು ವರ್ಷಗಳ ಕಾಲ ಭಾರತೀಯರ ಹೃದಯದಲ್ಲಿ ಉಳಿಯುತ್ತಾರೆ"

ಅರುಣ್ ಜೇಟ್ಲಿ ಅವರ ವ್ಯಕ್ತಿತ್ವವು ವೈವಿಧ್ಯತೆಯಿಂದ ತುಂಬಿತ್ತು ಮತ್ತು ಎಲ್ಲರೊಂದಿಗೆ ಸ್ನೇಹಪರವಾಗಿರುವ ಸ್ವಭಾವ ಅವರದ್ದಾಗಿತ್ತು. ಅವರ ಅನುಪಸ್ಥಿತಿಯು ಪ್ರತಿಯೊಬ್ಬರಿಗೂ ಅನುಭಕ್ಕೆ ಬರುತ್ತಿದೆ"

ಸರಕಾರದ ಮುಖ್ಯಸ್ಥನಾಗಿ ನನ್ನ 20 ವರ್ಷಗಳ ಅನುಭವಗಳ ಸಾರಾಂಶವೆಂದರೆ - ಒಳಗೊಳ್ಳುವಿಕೆಯಿಲ್ಲದೆ, ನಿಜವಾದ ಬೆಳವಣಿಗೆಯಿಲ್ಲ ಮತ್ತು ಬೆಳವಣಿಗೆಯಿಲ್ಲದೆ ಒಳಗೊಳ್ಳುವಿಕೆಯ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ."

ಕಳೆದ 8 ವರ್ಷಗಳಲ್ಲಿ ಎಲ್ಲರನ್ನೂ ಒಳಗೊಳ್ಳುವಿಕೆಯ ವೇಗ ಮತ್ತು ಪ್ರಮಾಣವು ಅಭೂತಪೂರ್ವವಾಗಿದೆ.

"ಇಂದಿನ ಭಾರತವು 'ಬಲವಂತದಿಂದ ಸುಧಾರಣೆಗಳು' ಎಂಬ ಸಂಕಲ್ಪದ 'ದೃಢನಿರ್ಧಾರದಿಂದ ಸುಧಾರಣೆಗಳು' ಎಂಬ ಸಂಕಲ್ಪದೊಂದಿಗೆ ಮುಂದಿನ 25 ವರ್ಷಗಳ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ”

"ನಾವು ಸುಧಾರಣೆಗಳನ್ನು ಅನಿವಾರ್ಯ ಕರ್ಮ ಪರಿಗಣಿಸುವುದಿಲ್ಲ, ಆದರೆ ʻಗೆಲುವು-ಗೆಲುವುʼ ನಡೆಯ ಆಯ್ಕೆ ಎಂದು ಪರಿಗಣಿಸುತ್ತೇವೆ"

"ನಮ್ಮ ನೀತಿ ನಿರೂಪಣೆಯು ಜನರ ನಾಡಿಮಿಡಿತವನ್ನು ಆಧರಿಸಿದೆ"


"ಈ ನೀತಿಯು ಜನಪರ ಪ್ರಚೋದನೆಗಳ ಒತ್ತಡಕ್ಕೆ ಒಳಗಾಗಲು ನಾವು ಅವಕಾಶ ನೀಡೆವು"

"ಪ್ರಗತಿಯ ಪಾಲುದಾರನಾಗಿ ಸರಕಾರವು ಖಾಸಗಿ ವಲಯವನ್ನು ಉತ್ತೇಜಿಸುವ ಸಮಯ ಇದಾಗಿದೆ ಮತ್ತು ನಾವು ಈ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದೇವೆ"

Posted On: 08 JUL 2022 9:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಸಿಂಗಾಪುರ ಸರಕಾರದ ಹಿರಿಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರಿಂದ ಮೊದಲ 'ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ'ದಲ್ಲಿ (ಎಜೆಎಂಎಲ್) ಭಾಗವಹಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ನಿಧನರಾದ ಜಪಾನ್‌ನ ಮಾಜಿ ಪ್ರಧಾನಿ ಶ್ರೀ ಶಿಂಜೊ ಅಬೆ ಅವರೊಂದಿಗಿನ ತಮ್ಮ ನಿಕಟ ಸ್ನೇಹವನ್ನು ಸ್ಮರಿಸಿದರು. ಶ್ರೀ ಅಬೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಮಂತ್ರಿಯವರು, ಇಂದು ತಮ್ಮ ಪಾಲಿಗೆ ತುಂಬಲಾರದ ನಷ್ಟ ಮತ್ತು ಸಹಿಸಲಸಾಧ್ಯವಾದ ನೋವಿನ ದಿನವಾಗಿದೆ ಎಂದು ಹೇಳಿದರು. ಶ್ರೀ ಅಬೆ ಅವರನ್ನು ಭಾರತದ ವಿಶ್ವಾಸಾರ್ಹ ಸ್ನೇಹಿತ ಎಂದು ಕರೆದ ಪ್ರಧಾನಮಂತ್ರಿಯವರು, ಶ್ರೀ ಶಿಂಜೊ ಅಬೆ ಅವರ ಅಧಿಕಾರಾವಧಿಯಲ್ಲಿ ಭಾರತ-ಜಪಾನ್ ಸಂಬಂಧಗಳ ಬೆಳವಣಿಗೆಯನ್ನು ಒತ್ತಿ ಹೇಳಿದರು. ಜಪಾನ್ ನೆರವಿನೊಂದಿಗೆ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಮೂಲಕ ಅಬೆ ಅವರು ಮುಂದಿನ ವರ್ಷಗಳ ಕಾಲ ಭಾರತೀಯರ ಹೃದಯದಲ್ಲಿ ಉಳಿಯಲಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಮತ್ತೊಬ್ಬ ಮಿತ್ರ ಶ್ರೀ ಅರುಣ್ ಜೇಟ್ಲಿ ಅವರನ್ನು ಪ್ರೀತಿಯಿಂದ ಸ್ಮರಿಸಿದರು. ಅವರ ಸ್ಮರಣಾರ್ಥವೇ ಇಂದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. "ಕಳೆದುಹೋದ ದಿನಗಳನ್ನು ನಾವು ನೆನಪಿಸಿಕೊಂಡಾಗ, ಆ ದಿನಗಳ ಬಗ್ಗೆ ಅನೇಕ ವಿಷಯಗಳು, ಅವುಗಳಿಗೆ ಸಂಬಂಧಿಸಿದ ಅನೇಕ ಘಟನೆಗಳು ನನ್ನ ಸ್ಮೃತಿ ಪಟಲದ ಮೇಲೆ ಹಾದು ಹೋಗುತ್ತವೆ. ನಾವೆಲ್ಲರೂ ಜೇಟ್ಲಿ ಅವರ ವಾಕ್ಚಾತುರ್ಯದಿಂದ ವಿಸ್ಮಯಗೊಂಡಿದ್ದೆವು. ವೈವಿಧ್ಯತೆಯಿಂದ ಕೂಡಿದ ವ್ಯಕ್ತಿತ್ವ ಅವರದ್ದಾಗಿತ್ತು. ಎಲ್ಲರೊಂದಿಗೂ ಸ್ನೇಹಪರವಾದ ಸ್ವಭಾವ ಅವರದ್ದಾಗಿತ್ತು," ಎಂದರು. ಪ್ರಧಾನಮಂತ್ರಿ ಅವರು ಶ್ರೀ ಜೇಟ್ಲಿ ಅವರ ಇಂದಿಗೂ ಜನಪ್ರಿಯವಾದ ಒಂದು ಸಾಲಿನ ಘೋಷಣೆಗಳನ್ನು (ಒನ್ ಲೈನರ್) ಸ್ಮರಿಸಿದರು. ಶ್ರೀ ಜೇಟ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿಯವರು, ಪ್ರತಿಯೊಬ್ಬರಿಗೂ ಜೇಟ್ಲಿ ಅವರ ಅನುಪಸ್ಥಿತಿ ಅನುಭವಕ್ಕೆ ಬರುತ್ತಿದೆ ಎಂದು ಹೇಳಿದರು.

'ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ'ಕ್ಕಾಗಿ ಸಿಂಗಾಪುರ ಸರಕಾರದ ಹಿರಿಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಅವರ ಬುದ್ಧಿಮತ್ತೆ, ಸಂಶೋಧನೆಯ ಆಳ ಮತ್ತು ಅವರ ಸಂಶೋಧನೆಯಲ್ಲಿ ಸ್ಥಳೀಯತೆಯ ಸ್ಪರ್ಶವನ್ನು ಅವರು ಶ್ಲಾಘಿಸಿದರು. "ಒಳಗೊಳ್ಳುವಿಕೆಯ ಮೂಲಕ ಬೆಳವಣಿಗೆ, ಬೆಳವಣಿಗೆಯ ಮೂಲಕ ಒಳಗೊಳ್ಳುವಿಕೆ" ಎಂಬ ಇಂದಿನ ಉಪನ್ಯಾಸದ ವಿಷಯವು ಸರಕಾರದ ಅಭಿವೃದ್ಧಿ ನೀತಿಯ ಅಡಿಪಾಯವಾಗಿದೆ ಎಂದು ಪ್ರಧಾನಿ ಹೇಳಿದರು. " ಸರಳವಾಗಿ ಹೇಳುವುದಾದರೆ, ನನ್ನ ಪ್ರಕಾರ, ಈ ವಿಷಯವು ʻಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಆಗಿದೆ", ಎಂದು ಅವರು ಹೇಳಿದರು.

ಈ ವಿಷಯವು ಇಂದಿನ ನೀತಿ ನಿರೂಪಕರ ಸವಾಲುಗಳು ಮತ್ತು ಸಂದಿಗ್ಧತೆಗಳನ್ನು ಸೆರೆಹಿಡಿಯುತ್ತದೆ ಎಂದು ಪ್ರಧಾನಮಂತ್ರಿಯವರು ಮುಂದುವರಿಸಿದರು. ಪ್ರಧಾನ ಮಂತ್ರಿಯವರು "ಒಳಗೊಳ್ಳುವಿಕೆ ಇಲ್ಲದೆ ಸಮರ್ಪಕ ಬೆಳವಣಿಗೆ ಸಾಧ್ಯವೆ? ಬೆಳವಣಿಗೆಯಿಲ್ಲದೆ ಒಳಗೊಳ್ಳುವಿಕೆ ಬಗ್ಗೆ ಯೋಚಿಸಬಹುದೇ?" ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಇದಕ್ಕೆ ತಾವೇ ಉತ್ತರಿಸಿದ ಪ್ರಧಾನಿ, "ಸರಕಾರದ ಮುಖ್ಯಸ್ಥನಾಗಿ ನನ್ನ 20 ವರ್ಷಗಳ ಅನುಭವದ ಸಾರಾಂಶವೇನೆಂದರೆ- ಸೇರ್ಪಡೆಯಿಲ್ಲದೆ ನಿಜವಾದ ಬೆಳವಣಿಗೆ ಸಾಧ್ಯವಿಲ್ಲ ಮತ್ತು ಬೆಳವಣಿಗೆಯಿಲ್ಲದೆ ಒಳಗೊಳ್ಳುವಿಕೆಯ ಗುರಿಯನ್ನು ಸಹ ಸಾಧಿಸಲು ಸಾಧ್ಯವಿಲ್ಲ." ಅದಕ್ಕಾಗಿಯೇ ನಾವು ಒಳಗೊಳ್ಳುವಿಕೆಯ ಮೂಲಕ ಬೆಳವಣಿಗೆಯ ಮಾರ್ಗವನ್ನು ಅಳವಡಿಸಿಕೊಂಡಿದ್ದೇವೆ ಮತ್ತು ಪ್ರತಿಯೊಬ್ಬರ ಒಳಗೊಳ್ಳುವಿಕೆಗಾಗಿ ಪ್ರಯತ್ನಿಸಿದ್ದೇವೆ ಎಂದು ಹೇಳಿದರು.

ಕಳೆದ 8 ವರ್ಷಗಳಲ್ಲಿ ಸೇರ್ಪಡೆಯ ವೇಗ ಮತ್ತು ಪ್ರಮಾಣವು ವಿಶ್ವದಲ್ಲಿ ಅಭೂತಪೂರ್ವವಾಗಿದೆ ಎಂದು ಅವರು ಹೇಳಿದರು. 9 ಕೋಟಿಗೂ ಹೆಚ್ಚು ಮಹಿಳೆಯರಿಗೆ ಅನಿಲ ಸಂಪರ್ಕ, ಬಡವರಿಗೆ 10 ಕೋಟಿಗೂ ಹೆಚ್ಚು ಶೌಚಾಲಯಗಳು, 45 ಕೋಟಿಗೂ ಹೆಚ್ಚು ʻಜನ್ ಧನ್ʼ ಖಾತೆಗಳು, ಬಡವರಿಗೆ 3 ಕೋಟಿ ಸದೃಢ ಮನೆಗಳನ್ನು ಒದಗಿಸುವುದು ಮುಂತಾದ ಕ್ರಮಗಳನ್ನು ಪ್ರಧಾನಮಂತ್ರಿಯವರು ಪಟ್ಟಿ ಮಾಡಿದರು. ʻಆಯುಷ್ಮಾನ್ ಭಾರತ್‌ʼ ಯೋಜನೆಯಡಿಯಲ್ಲಿ 50 ಕೋಟಿ ಜನರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಖಾತರಿಪಡಿಸಲಾಗಿದೆ. ಕಳೆದ 4 ವರ್ಷಗಳಲ್ಲಿ 3.5 ಕೋಟಿಗೂ ಹೆಚ್ಚು ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಈ ಅಂಕಿ-ಅಂಶಗಳು ಸೇರ್ಪಡೆಯತ್ತ ಸರಕಾರ ಗಮನ ಹರಿಸುವುದನ್ನು ಸೂಚಿಸುತ್ತವೆ. ಆದರೆ, ಸೇರ್ಪಡೆಗೆ ಒತ್ತು ನೀಡಿದ್ದರಿಂದ ಬೇಡಿಕೆ ಹೆಚ್ಚಳವಾಗುವುದರ ಜೊತೆ ಜೊತೆಗೇ ಉತ್ತಮ ಬೆಳವಣಿಗೆ ಮತ್ತು ಅವಕಾಶಗಳಿಗೆ ಕಾರಣವಾಯಿತು. ಏಕೆಂದರೆ ಭಾರತದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯು ಪ್ರಸ್ತುತ ಗುಣಮಟ್ಟದ ಆರೋಗ್ಯ ರಕ್ಷಣೆಯ ವ್ಯಾಪ್ತಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಅವರು ವಿವರಿಸಿದರು. ʻಆಯುಷ್ಮಾನ್ ಭಾರತ್ʼ ಯೋಜನೆಯು ಭಾರತದಲ್ಲಿ ಆರೋಗ್ಯ ಕ್ಷೇತ್ರವನ್ನು ಕ್ರಾಂತಿಕಾರಿ ರೀತಿಯಲ್ಲಿ ಪರಿವರ್ತಿಸಿದೆ ಎಂದು ಹೇಳಿದ ಅವರು, ಆರೋಗ್ಯ ಮೂಲಸೌಕರ್ಯದಲ್ಲಿನ ಪ್ರಗತಿಯನ್ನು ವಿವರಿಸಿದರು. "2014 ಕ್ಕಿಂತ ಮೊದಲು, ನಮ್ಮ ದೇಶದಲ್ಲಿ 10 ವರ್ಷಗಳಲ್ಲಿ ಸರಾಸರಿ 50 ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಆದರೆ ಕಳೆದ 7-8 ವರ್ಷಗಳಲ್ಲಿ, ಭಾರತದಲ್ಲಿ 209 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ, ಇದು ಮೊದಲಿಗಿಂತ 4 ಪಟ್ಟು ಹೆಚ್ಚಾಗಿದೆ. ಇದಲ್ಲದೆ, "ಕಳೆದ 7-8 ವರ್ಷಗಳಲ್ಲಿ ಭಾರತದಲ್ಲಿ ಪದವಿಪೂರ್ವ ವೈದ್ಯಕೀಯ ಸೀಟುಗಳಲ್ಲಿ ಶೇಕಡಾ 75 ರಷ್ಟು ಹೆಚ್ಚಳವಾಗಿದೆ. ಈಗ ಭಾರತದಲ್ಲಿ ವಾರ್ಷಿಕ ಒಟ್ಟು ವೈದ್ಯಕೀಯ ಸೀಟುಗಳ ಸಂಖ್ಯೆ ಬಹುತೇಕ ದುಪ್ಪಟ್ಟಾಗಿದೆ. ಈ ಅಂಕಿಅಂಶಗಳ ಮೂಲಕ ನಾವು ಈ ವಲಯದ ಬೆಳವಣಿಗೆಯ ಮೇಲೆ ಒಳಗೊಳ್ಳುವಿಕೆ ಪರಿಣಾಮವನ್ನು ನೋಡಬಹುದು ಎಂದು ಪ್ರಧಾನಿ ಹೇಳಿದರು.

5 ಲಕ್ಷ ʻಸಾಮಾನ್ಯ ಸೇವಾ ಕೇಂದ್ರʼಗಳು, ʻಯುಪಿಐʼ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ʻಪಿಎಂ ಸ್ವನಿಧಿʼ ಯೋಜನೆಯ ಮೂಲಕ ಸೇರ್ಪಡೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಅಂತೆಯೇ, ಮಹತ್ವಾಕಾಂಕ್ಷೆಯ ಜಿಲ್ಲೆ ಮತ್ತು ʻಎನ್ಇಪಿʼ ಅಡಿ ಮಾತೃಭಾಷೆಯಲ್ಲಿ ಶಿಕ್ಷಣ, ವಿಮಾನ ಪ್ರಯಾಣವನ್ನು ಸುಲಭಗೊಳಿಸಲು ʻಉಡಾನ್ʼ ಯೋಜನೆ ಇವುಗಳು ಸೇರ್ಪಡೆ ಹೆಚ್ಚಳ ಮತ್ತು ಬೆಳವಣಿಗೆ ಎರಡಕ್ಕೂ ಕಾರಣವಾಗುತ್ತಿವೆ. ʻಹರ್ ಘರ್ ಜಲ್ʼ ಅಡಿಯಲ್ಲಿ 6 ಕೋಟಿ ಕೊಳಾಯಿ ನೀರಿನ ಸಂಪರ್ಕಗಳನ್ನು ಒದಗಿಸುವ ಮೂಲಕ ಬೃಹತ್ ಸೇರ್ಪಡೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ʻಪಿಎಂ ಸ್ವಾಮಿತ್ವʼ ಯೋಜನೆಯ ಮೂಲಕ ಅತ್ಯಂತ ದುರ್ಬಲ ವರ್ಗಗಳಿಗೂ ಆಸ್ತಿ ಹಕ್ಕುಗಳನ್ನು ಖಾತರಿಪಡಿಸಲಾಗುತ್ತಿದೆ. ಈಗಾಗಲೇ 80 ಲಕ್ಷ ʻಪ್ರಾಪರ್ಟಿ ಕಾರ್ಡ್ʼಗಳನ್ನು ವಿತರಿಸಲಾಗಿದ್ದು, ಇದರಿಂದ ಅವರು ಹಣಕಾಸು ಸೌಲಭ್ಯ ಪಡೆಯಲು ಸಾಧ್ಯವಾಗಿದೆ ಎಂದರು.

"ಇಂದಿನ ಭಾರತವು ಮುಂಬರುವ 25 ವರ್ಷಗಳಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ಆದರೆ, ʻಬಲವಂತದಿಂದ ಸುಧಾರಣೆʼಗಳಿಗಿಂತ ಹೆಚ್ಚಾಗಿ ʻದೃಢನಿಶ್ಚಯದಿಂದ ಸುಧಾರಣೆʼ ಸಂಕಲ್ಪದೊಂದಿಗೆ ಇಂತಹ ಸುಧಾರಣೆಗಳನ್ನು ರೂಪಿಸುತ್ತಿದೆ. ಈ ಮೊದಲು, ಹಿಂದಿನ ಸರಕಾರಗಳಿಗೆ ಬೇರೆ ಯಾವುದೇ ಆಯ್ಕೆಯಿಲ್ಲದಿದ್ದಾಗ ಮಾತ್ರ ಭಾರತದಲ್ಲಿ ಪ್ರಮುಖ ಸುಧಾರಣೆಗಳು ನಡೆದವು. ನಾವು ಸುಧಾರಣೆಗಳನ್ನು ಅನಿವಾರ್ಯ ಕರ್ಮ ಎಂದು ಪರಿಗಣಿಸುವುದಿಲ್ಲ, ಆದರೆ ಅದು ʻಗೆಲುವು-ಗೆಲುವುʼ ನಡೆಯ ಆಯ್ಕೆ ಎಂದು ಪರಿಗಣಿಸುತ್ತೇವೆ. ಇದರಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿ ಇದೆ ಎಂದು ಅವರು ಹೇಳಿದರು. ಸುಧಾರಣೆಗಳ ವಿಚಾರದಲ್ಲಿ ಸರಕಾರದ ಧೋರಣೆ ಬಗ್ಗೆ ಮಾತು ಮುಂದುವರಿಸಿದ ಪ್ರಧಾನಿ "ನಮ್ಮ ನೀತಿ ನಿರೂಪಣೆಯು ಜನರ ನಾಡಿಮಿಡಿತವನ್ನು ಆಧರಿಸಿದೆ. ನಾವು ಹೆಚ್ಚು ಹೆಚ್ಚು ಜನರ ಮಾತುಗಳನ್ನು ಕೇಳುತ್ತೇವೆ, ಅವರ ಅಗತ್ಯಗಳು ಮತ್ತು ಅವರ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ಆದ್ದರಿಂದಲೇ ನಾವು ಈ ನೀತಿಯನ್ನು ಜನಪ್ರಿಯ ಆಮಿಷಗಳ ಪ್ರಚೋದನೆಗೆ ಒಳಗಾಗಲು ಬಿಟ್ಟಿಲ್ಲ."

ಕನಿಷ್ಠ ಸರಕಾರ ಮತ್ತು ಗರಿಷ್ಠ ಆಡಳಿತದ ವಿಧಾನವು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ಇದಕ್ಕಾಗಿ ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಪಾಲುದಾರಿಕೆಯನ್ನು ಅವರು ಉದಾಹರಿಸಿದರು. "ನಮ್ಮ ದೇಶದ ಖಾಸಗಿ ಸಂಸ್ಥೆಗಳು ಬಹಳಷ್ಟು ಒಳ್ಳೆಯ ಕೆಲಸ ಮಾಡಿವೆ. ಆದರೆ ಅವರಿಗೆ ಪ್ರಗತಿಯ ಪಾಲುದಾರನ ರೂಪದಲ್ಲಿ ಸರಕಾರ ಹಿಂದೆ ನಿಂತು ಪೂರ್ಣ ಬೆಂಬಲ ನೀಡಿತು. ಇಂದು ಭಾರತವು ಇಡೀ ವಿಶ್ವದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯಾಧುನಿಕ ಬಾಹ್ಯಾಕಾಶ ಸೇವೆ ಪೂರೈಕೆದಾರನೆನಿಸಿದೆ. ನಮ್ಮ ಖಾಸಗಿ ವಲಯದ ಪರಿಸರ ವ್ಯವಸ್ಥೆಯೂ ಈ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಮಾಡುತ್ತಿದೆ. ಆದರೆ ಅವರ ಹಿಂದೆಯೂ 'ಪ್ರಗತಿಯಲ್ಲಿ ಪಾಲುದಾರ'ನಾಗಿ, ಸರಕಾರವು ಸಂಪೂರ್ಣ ಬೆಂಬಲದೊಂದಿಗೆ ನಿಂತಿದೆ" ಎಂದು ಅವರು ಹೇಳಿದರು. "ಖಾಸಗಿ ಅಥವಾ ಸರಕಾರಿ ಪ್ರಾಬಲ್ಯದ ಅತಿರೇಕದ ಮಾದರಿಗಳು ಈಗ ಹಳತಾಗಿವೆ. ಪ್ರಗತಿಯ ಪಾಲುದಾರನಾಗಿ ಸರಕಾರವು ಖಾಸಗಿ ವಲಯವನ್ನು ಉತ್ತೇಜಿಸುವ ಸಮಯ ಇದಾಗಿದೆ ಮತ್ತು ನಾವು ಈ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದೇವೆ "ಎಂದು ಅವರು ಹೇಳಿದರು.

ಭಾರತದಲ್ಲಿ ಪ್ರವಾಸೋದ್ಯಮದ ಬಗ್ಗೆ ಚಿಂತನೆಯೂ ವಿಸ್ತಾರಗೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು. 75 ವಿಶೇಷ ಸ್ಥಳಗಳಲ್ಲಿ ಇತ್ತೀಚೆಗೆ ನಡೆದ ಯೋಗ ದಿನಾಚರಣೆಗಳು ಪ್ರವಾಸೋದ್ಯಮದ ಅನೇಕ ಹೊಸ ಸ್ಥಳಗಳ ಬಗ್ಗೆ ಜನರಿಗೆ ಅರಿವು ಮೂಡಿಸಿವೆ ಎಂದು ಅವರು ಹೇಳಿದರು.

ʻಆಜಾದಿ ಕಾ ಅಮೃತ್ ಕಾಲʼವು ಅನೇಕ ಅವಕಾಶಗಳನ್ನು ದೇಶದ ಮುಂದಿಟ್ಟಿದೆ ಮತ್ತು ಅವುಗಳನ್ನು ಸಾಧಿಸುವ ನಮ್ಮ ಸಂಕಲ್ಪವು ಅಚಲವಾಗಿದೆ ಎಂದು ಪ್ರಧಾನಿ ಹೇಳಿದರು.

ಸಿಂಗಾಪುರ ಸರಕಾರದ ಹಿರಿಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರು ಮೊದಲ ʻಎಜೆಎಂಎಲ್ʼನಲ್ಲಿ "ಒಳಗೊಳ್ಳುವಿಕೆಯ ಮೂಲಕ ಬೆಳವಣಿಗೆ, ಬೆಳವಣಿಗೆಯ ಮೂಲಕ ಒಳಗೊಳ್ಳುವಿಕೆ" ಎಂಬ ವಿಷಯದ ಕುರಿತು ಪ್ರಧಾನ ಭಾಷಣ ಮಾಡಿದರು. ಉಪನ್ಯಾಸದ ನಂತರ ಶ್ರೀ ಮಥಿಯಾಸ್ ಕಾರ್ಮನ್ (ಒಇಸಿಡಿ ಪ್ರಧಾನ ಕಾರ್ಯದರ್ಶಿ) ಮತ್ತು ಶ್ರೀ ಅರವಿಂದ್ ಪನಗರಿಯಾ (ಪ್ರೊಫೆಸರ್, ಕೊಲಂಬಿಯಾ ವಿಶ್ವವಿದ್ಯಾಲಯ) ಅವರಿಂದ ತಜ್ಞರ ಮಟ್ಟದ ಸಮಾಲೋಚನೆ ನಡೆಯಿತು.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ಶ್ರೀ ಅರುಣ್ ಜೇಟ್ಲಿ ಅವರು ರಾಷ್ಟ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಮೊದಲ 'ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ'ವನ್ನು ಆಯೋಜಿಸಿತ್ತು.

ಜುಲೈ 8ರಿಂದ 10ರವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ʻಕೌಟಿಲ್ಯ ಆರ್ಥಿಕ ಸಮಾವೇಶʼ(ಕೆಇಸಿ)ದಲ್ಲಿ ಭಾಗವಹಿಸುತ್ತಿರುವ ಪ್ರತಿನಿಧಿಗಳೊಂದಿಗೆ ಸಹ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು.

 

 

*********



(Release ID: 1840479) Visitor Counter : 111