ಪ್ರಧಾನ ಮಂತ್ರಿಯವರ ಕಛೇರಿ

ಬೆಂಗಳೂರಿನಲ್ಲಿ ಬಾಷ್ ಸ್ಮಾರ್ಟ್ ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು


ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಮಾಡುವುದು ಮುಖ್ಯವಾಗಿದೆ"

"ಭಾರತದ ಬೆಳವಣಿಗೆ ಪರಿಸರಸ್ನೇಹಿಯಾಗುತ್ತಿದೆ "

“ಡಿಜಿಟಲ್ ಇಂಡಿಯಾದ ನಮ್ಮ ದೃಷ್ಟಿ ಸರ್ಕಾರದ ಪ್ರತಿಯೊಂದು ಅಂಶಗಳೊಂದಿಗೆ ತಂತ್ರಜ್ಞಾನವನ್ನು ಸಂಯೋಜಿಸುವುದನ್ನು ಒಳಗೊಂಡಿದೆ. ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ನಮ್ಮ ರಾಷ್ಟ್ರದಲ್ಲಿ ಹೂಡಿಕೆ ಮಾಡಲು ನಾನು ವಿಶ್ವಕ್ಕೆ ಮನವಿ ಮಾಡುತ್ತಿದ್ದೇನೆ.”

"ಇಂದು, ಬಾಷ್ ಜರ್ಮನ್ನಷ್ಟೇ ಭಾರತೀಯವಾಗಿದೆ. ಇದು ಜರ್ಮನ್ ಎಂಜಿನಿಯರಿಂಗ್ ಮತ್ತು ಭಾರತೀಯ ಶಕ್ತಿಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ".

Posted On: 30 JUN 2022 12:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಾಷ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ 100 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ವೀಡಿಯೊ ಸಂದೇಶದ ಮೂಲಕ ಭಾಷಣ ಮಾಡಿದರು.

ಆರಂಭದಲ್ಲಿ, ಪ್ರಧಾನಮಂತ್ರಿಯವರು ಬಾಷ್ ಇಂಡಿಯಾವನ್ನು ಭಾರತದಲ್ಲಿ 100 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದಿಸಿದರು ಮತ್ತು ಭಾರತದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಬೀಳುವ ಈ ಕಾರ್ಯಕ್ರಮದ ವಿಶೇಷ ಮಹತ್ವವನ್ನು ಗಮನಿಸಿದರು. ಈ ಸಂದರ್ಭದಲ್ಲಿ ಬಾಷ್ ಸ್ಮಾರ್ಟ್ ಕ್ಯಾಂಪಸ್‌ನ ಉದ್ಘಾಟನೆಯನ್ನು ಸಹ ಮಾಡಲಾಯಿತು. "ಈ ಕ್ಯಾಂಪಸ್ ಖಂಡಿತವಾಗಿಯೂ ಭಾರತಕ್ಕೆ ಮತ್ತು ವಿಶ್ವಕ್ಕೆ ಭವಿಷ್ಯದ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂದಾಳತ್ವವನ್ನು ವಹಿಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿಯವರು ಅಕ್ಟೋಬರ್ 2015 ರಲ್ಲಿ ಚಾನ್ಸೆಲರ್ ಮರ್ಕೆಲ್ ಅವರೊಂದಿಗೆ ಬೆಂಗಳೂರಿನ ಬಾಷ್ ಘಟಕಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು.

ಪ್ರಸ್ತುತ ಕಾಲವನ್ನು ತಂತ್ರಜ್ಞಾನದ ಯುಗ ಎಂದು ಕರೆದರು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಕಂಡ ತಂತ್ರಜ್ಞಾನದ ಪ್ರಯೋಜನಗಳನ್ನು ಒತ್ತಿಹೇಳುತ್ತಾ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಮಾಡುವುದು ಮುಖ್ಯವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ನಾವೀನ್ಯತೆ ಮತ್ತು ಪ್ರಮಾಣಕ್ಕಾಗಿ ಬಾಷ್ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು ಸುಸ್ಥಿರತೆಯ ಅಗತ್ಯವನ್ನು ಎತ್ತಿ ತೋರಿಸಿದರು. "ಕಳೆದ 8 ವರ್ಷಗಳಲ್ಲಿ ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯವು ಸುಮಾರು 20 ಪಟ್ಟು ಹೆಚ್ಚಾಗುವುದರೊಂದಿಗೆ ಭಾರತದ ಬೆಳವಣಿಗೆಯು ಪರಿಸರಸ್ನೇಹಿಯಾಗುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ಭಾರತ ಮತ್ತು ಹೊರದೇಶಗಳಲ್ಲಿ ಇಂಗಾಲದ ತಟಸ್ಥತೆಯನ್ನು ಸಾಧಿಸಿದ ಬಾಷ್‌ನ ಸಾಧನೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಇಂದು ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ಎರಡು ವರ್ಷಗಳಲ್ಲಿ ಹೂಡಿಕೆ ಹೆಚ್ಚಾಗಿದೆ. “ನಮ್ಮ ಯುವಕರಿಂದಾಗಿ, ನಮ್ಮ ನವೋದ್ಯಮ ಪರಿಸರ ವ್ಯವಸ್ಥೆಯು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಟೆಕ್ ಜಗತ್ತಿನಲ್ಲಿಯೇ ಹಲವು ಅವಕಾಶಗಳಿವೆ. ಭಾರತ ಸರ್ಕಾರವು ಪ್ರತಿ ಹಳ್ಳಿಗೆ ಹೈಸ್ಪೀಡ್ ಇಂಟರ್ನೆಟ್ ಒದಗಿಸಲು ಕೆಲಸ ಮಾಡುತ್ತಿದೆ. “ಡಿಜಿಟಲ್ ಇಂಡಿಯಾದ ನಮ್ಮ ದೃಷ್ಟಿ ಸರ್ಕಾರದ ಪ್ರತಿಯೊಂದು ಅಂಶಗಳೊಂದಿಗೆ ತಂತ್ರಜ್ಞಾನವನ್ನು ಸಂಯೋಜಿಸುವುದನ್ನು ಒಳಗೊಂಡಿದೆ. ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ನಮ್ಮ ರಾಷ್ಟ್ರದಲ್ಲಿ ಹೂಡಿಕೆ ಮಾಡಲು ನಾನು ನಾನು ವಿಶ್ವಕ್ಕೆ ಮನವಿ ಮಾಡುತ್ತಿದ್ದೇನೆ " ಎಂದು ಅವರು ಹೇಳಿದರು.

ಈ ಮಹತ್ವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಬಾಷ್ ಭಾರತದಲ್ಲಿ ಇನ್ನೂ ಹೆಚ್ಚಿನದನ್ನು ಮಾಡಲು ಯೋಚಿಸುವಂತೆ ಒತ್ತಾಯಿಸಿದರು. “ಮುಂಬರುವ 25 ವರ್ಷಗಳಲ್ಲಿ ನಿಮ್ಮ ತಂಡ ಏನು ಮಾಡಬಹುದೆಂಬ ಗುರಿಗಳನ್ನು ಹೊಂದಿಸಿ. 100 ವರ್ಷಗಳ ಹಿಂದೆ, ಬಾಷ್ ಜರ್ಮನ್ ಕಂಪನಿಯಾಗಿ ಭಾರತಕ್ಕೆ ಬಂದಿತು. ಆದರೆ ಇಂದು ಅದು ಜರ್ಮನ್ನಷ್ಟೇ ಭಾರತೀಯವಾಗಿದೆ. ಇದು ಜರ್ಮನ್ ಎಂಜಿನಿಯರಿಂಗ್ ಮತ್ತು ಭಾರತೀಯ ಶಕ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಪಾಲುದಾರಿಕೆಯು ಬಲವಾಗಿ ಬೆಳೆಯುತ್ತಲೇ ಇರುತ್ತದೆ” ಎಂದು ಹೇಳಿ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. 

 

**************



(Release ID: 1839366) Visitor Counter : 92