ಪ್ರಧಾನ ಮಂತ್ರಿಯವರ ಕಛೇರಿ

ಆಂಧ್ರಪ್ರದೇಶದ ಭೀಮಾವರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜಯಂತಿ ಆಚರಣೆಯಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ

Posted On: 04 JUL 2022 2:33PM by PIB Bengaluru

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಆಂಧ್ರಪ್ರದೇಶದ ರಾಜ್ಯಪಾಲರಾದ ಶ್ರೀ ಬಿಸ್ವಭೂಷಣ್ ಹರಿಚಂದನ್ ಅವರೇ, ಮುಖ್ಯಮಂತ್ರಿ ಶ್ರೀ ಜಗನ್ ಮೋಹನ್ ರೆಡ್ಡಿ ಅವರೇ, ನನ್ನ ಸಂಪುಟ ಸಹೋದ್ಯೋಗಿಗಳೇ, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿರುವ ಇತರ ಎಲ್ಲಾ ಗಣ್ಯರೇ ಮತ್ತು ಆಂಧ್ರಪ್ರದೇಶದ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ!

ನಿಮ್ಮೆಲ್ಲರಿಗೂ ಶುಭಾಶಯಗಳು!

ಇಂದು, ಅತ್ಯಂತ ಶ್ರೀಮಂತ ಪರಂಪರೆಯನ್ನು ಹೊಂದಿರುವ ನಾಡಿಗೆ ಗೌರವ ಸಲ್ಲಿಸುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ! ಇಂದು, ಒಂದು ಕಡೆ, ದೇಶವು ಸ್ವಾತಂತ್ರ್ಯದ 75 ವರ್ಷಗಳ 'ಅಮೃತ ಮಹೋತ್ಸವ'ವನ್ನು ಆಚರಿಸುತ್ತಿದ್ದರೆ, ಮತ್ತೊಂದೆಡೆ ಇಂದು ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜಯಂತಿಯೂ ಹೌದು. ಇದೇ ಸಮಯದಲ್ಲಿ, ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ "ರಂಪಾ ದಂಗೆ"ಗೆ 100 ವರ್ಷಗಳು ಸಹ ಪೂರ್ಣಗೊಳ್ಳುತ್ತಿವೆ. ಈ ಐತಿಹಾಸಿಕ ಸಂದರ್ಭದಲ್ಲಿ, "ಮನ್ಯಂ ವೀರುಡು" ಅಲ್ಲೂರಿ ಸೀತಾರಾಮ ರಾಜು ಅವರ ಪಾದಗಳಿಗೆ ನಮಸ್ಕರಿಸುವ ಮೂಲಕ ನಾನು ಇಡೀ ದೇಶದ ಪರವಾಗಿ ಗೌರವಪೂರ್ವಕ ಶ್ರದ್ಧಾಂಜಲಿಸಲ್ಲಿಸುತ್ತೇನೆ. ಇಂದು ಅವರ ಕುಟುಂಬ ಸದಸ್ಯರು ಸಹ ನಮ್ಮನ್ನು ಆಶೀರ್ವದಿಸಲು ಬಂದಿದ್ದಾರೆ. ನಾವು ನಿಜವಾಗಿಯೂ ಅದೃಷ್ಟವಂತರು. ಮಹಾನ್ ಪರಂಪರೆಗೆ ಸೇರಿದ ಕುಟುಂಬದ ಆಶೀರ್ವಾದವನ್ನು ಪಡೆಯುವ ಸುಯೋಗವನ್ನು ನಾವೆಲ್ಲರೂ ಹೊಂದಿದ್ದೇವೆ. ಆಂಧ್ರದ ಈ ನೆಲದ ಮಹಾನ್ ಬುಡಕಟ್ಟು ಸಂಪ್ರದಾಯಕ್ಕೆ, ಈ ಸಂಪ್ರದಾಯಕ್ಕೆ ಸೇರಿದ ಎಲ್ಲಾ ಮಹಾನ್ ಕ್ರಾಂತಿಕಾರಿಗಳಿಗೆ ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ನಾನು ಗೌರವಪೂರ್ವಕವಾಗಿ ತಲೆಬಾಗುತ್ತೇನೆ.

ಸ್ನೇಹಿತರೇ,

ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜಯಂತಿ ಮತ್ತು ʻರಂಪ ದಂಗೆʼಯ 100ನೇ ವಾರ್ಷಿಕೋತ್ಸವವನ್ನು ವರ್ಷವಿಡೀ ಆಚರಿಸಲಾಗುವುದು. ಪಾಂಡ್ರಗಿಯಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ ಜನ್ಮಸ್ಥಳದ ಜೀರ್ಣೋದ್ಧಾರ, ಚಿಂತಪಲ್ಲೆ ಪೊಲೀಸ್ ಠಾಣೆಯ ನವೀಕರಣ ಮತ್ತು ಮೊಗಲುವಿನಲ್ಲಿ ಅಲ್ಲೂರಿ ಧ್ಯಾನ ಮಂದಿರ ನಿರ್ಮಾಣ ಇವೆಲ್ಲವೂ ನಮ್ಮ ʻಅಮೃತ ಮಹೋತ್ಸವʼ ಪರಿಕಲ್ಪನೆಯ ಭಾಗವಾಗಿವೆ. ಈ ಎಲ್ಲಾ ಪ್ರಯತ್ನಗಳಿಗಾಗಿ ಮತ್ತು ಈ ವಾರ್ಷಿಕ ಹಬ್ಬಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿ, ನಮ್ಮ ಭವ್ಯವಾದ ಇತಿಹಾಸವನ್ನು ಪ್ರತಿಯೊಬ್ಬ ವ್ಯಕ್ತಿಯ ಬಳಿಗೆ ಕೊಂಡೊಯ್ಯಲು ಶ್ರಮಿಸುತ್ತಿರುವ ಎಲ್ಲಾ ಸ್ನೇಹಿತರನ್ನು ನಾನು ಅಭಿನಂದಿಸುತ್ತೇನೆ. 'ಆಜಾದಿ ಕಾ ಅಮೃತ ಮಹೋತ್ಸವ'ದ ಸಮಯದಲ್ಲಿ, ದೇಶದ ಜನತೆಗೆ ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಹೋರಾಟದ ಸ್ಫೂರ್ತಿಯ ಬಗ್ಗೆ ತಿಳಿಯುವಂತೆ ಮಾಡುವ ಸಂಕಲ್ಪ ಪ್ರತಿಜ್ಞೆ ಮಾಡಿದ್ದೇವೆ. ಇಂದಿನ ಕಾರ್ಯಕ್ರಮವೂ ಇದರ ಭಾಗವಾಗಿದೆ.

ಸ್ನೇಹಿತರೇ,

ಸ್ವಾತಂತ್ರ್ಯ ಹೋರಾಟವು ಕೇವಲ ಕೆಲವೇ ವರ್ಷಗಳ, ಕೆಲವೇ ಪ್ರದೇಶಗಳ ಅಥವಾ ಕೆಲವೇ ಜನರ ಇತಿಹಾಸವಲ್ಲ. ಇದು ಭಾರತದ ಮೂಲೆಮೂಲೆಗಳ ತ್ಯಾಗ, ಛಲ ಮತ್ತು ಬಲಿದಾನದ ಇತಿಹಾಸವಾಗಿದೆ. ನಮ್ಮ ಸ್ವಾತಂತ್ರ್ಯ ಚಳವಳಿಯ ಇತಿಹಾಸವು ನಮ್ಮ ವೈವಿಧ್ಯತೆಯ ಶಕ್ತಿ, ಸಾಂಸ್ಕೃತಿಕ ಶಕ್ತಿ ಮತ್ತು ಒಂದು ರಾಷ್ಟ್ರವಾಗಿ ನಮ್ಮ ಒಗ್ಗಟ್ಟಿನ ಸಂಕೇತವಾಗಿದೆ. ಭಾರತದ ಸಾಂಸ್ಕೃತಿಕ ಮತ್ತು ಬುಡಕಟ್ಟಿನ ಅಸ್ಮಿತೆ, ಭಾರತದ ಶೌರ್ಯ, ಆದರ್ಶಗಳು ಮತ್ತು ಮೌಲ್ಯಗಳನ್ನು ಅಲ್ಲೂರಿ ಸೀತಾರಾಮ ರಾಜು ಅವರು ಸಾಕಾರಗೊಳಿಸಿದ್ದಾರೆ. ಸೀತಾರಾಮ ರಾಜು ಅವರು ಸಾವಿರಾರು ವರ್ಷಗಳಿಂದ ಈ ದೇಶವನ್ನು ಒಗ್ಗೂಡಿಸುತ್ತಿರುವ 'ಏಕ್ ಭಾರತ್, ಶ್ರೇಷ್ಠ ಭಾರತ್' ಸಿದ್ಧಾಂತದ ಸಂಕೇತವಾಗಿದ್ದಾರೆ. ಸೀತಾರಾಮ ರಾಜು ಅವರ ಹುಟ್ಟಿನಿಂದ ಹಿಡಿದು ಅವರ ತ್ಯಾಗದವರೆಗೆ, ಅವರ ಜೀವನದ ಪ್ರಯಾಣವು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಬುಡಕಟ್ಟು ಸಮಾಜದ ಹಕ್ಕುಗಳಿಗಾಗಿ, ಸಂಕಷ್ಟದ ಸಮಯದಲ್ಲಿ ಅವರನ್ನು ಬೆಂಬಲಿಸಲು ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸೀತಾರಾಮ ರಾಜು ಅವರು ಕ್ರಾಂತಿಯ ಕೂಗನ್ನು ಎತ್ತಿದಾಗ, ಅವರು - "ಮನದೇ ರಾಜ್ಯಂ" ಅಂದರೆ "ನಮ್ಮದೇ ದೇಶ"ಎಂದು ಘೋಷಿಸಿದ್ದರು. ʻವಂದೇ ಮಾತರಂʼನ ಸ್ಫೂರ್ತಿಯೊಂದಿಗೆ ಒಟ್ಟಾಗಿದ್ದ ರಾಷ್ಟ್ರವಾಗಿ ನಾವು ನಡೆಸಿದ ಪ್ರಯತ್ನಗಳಿಗೆ ಇದೊಂದು ಉತ್ತಮ ಉದಾಹರಣೆಯಾಗಿದೆ.

ಭಾರತದ ಆಧ್ಯಾತ್ಮಿಕತೆಯು ಸೀತಾರಾಮ ರಾಜು ಅವರಲ್ಲಿ ಸತ್ಯ, ಸಹಾನುಭೂತಿ, ಬುಡಕಟ್ಟು ಸಮಾಜದ ಬಗ್ಗೆ ಸಮಚಿತ್ತತೆ, ವಾತ್ಸಲ್ಯ, ತ್ಯಾಗ ಮತ್ತು ಧೈರ್ಯದ ಪ್ರಜ್ಞೆಯನ್ನು ತುಂಬಿತು. ಸೀತಾರಾಮ ರಾಜು ಅವರು ವಿದೇಶಿ ಆಡಳಿತದ ದೌರ್ಜನ್ಯದ ವಿರುದ್ಧ ಸಮರ ಸಾರಿದಾಗ, ಅವರಿಗೆ ಕೇವಲ 24-25 ವರ್ಷ ವಯಸ್ಸಾಗಿತ್ತು. ತಮ್ಮ 27ನೇ ವಯಸ್ಸಿನಲ್ಲಿ, ಅವರು ತಮ್ಮ ಮಾತೃಭೂಮಿ ಭಾರತಕ್ಕಾಗಿ ಹುತಾತ್ಮರಾದರು. ʻರಂಪಾ ದಂಗೆʼಯಲ್ಲಿ ಭಾಗವಹಿಸಿದ್ದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಯುವಕರು ಸುಮಾರು ಒಂದೇ ವಯಸ್ಸಿನವರಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಈ ಯುವ ನಾಯಕರು ಇಂದಿನ ಕಾಲದಲ್ಲಿ ನಮ್ಮ ದೇಶಕ್ಕೆ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದ್ದಾರೆ. ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ದೇಶಕ್ಕಾಗಿ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದರು.

ಇಂದು, ʻನವ ಭಾರತʼದ ಕನಸುಗಳನ್ನು ಈಡೇರಿಸಲು ಇಂದಿನ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ಇಂದು ದೇಶದಲ್ಲಿ ಹೊಸ ಅವಕಾಶಗಳಿವೆ ಮತ್ತು ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ. ಹೊಸ ಆಲೋಚನೆ ಇದೆ ಮತ್ತು ಹೊಸ ಸಾಧ್ಯತೆಗಳು ಹುಟ್ಟುತ್ತಿವೆ. ಈ ಸಾಧ್ಯತೆಗಳನ್ನು ಪೂರೈಸಲು, ನಮ್ಮ ಹೆಚ್ಚಿನ ಸಂಖ್ಯೆಯ ಯುವಕರು ಈ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ದೇಶವನ್ನು ಮುನ್ನಡೆಸುತ್ತಿದ್ದಾರೆ. ಆಂಧ್ರಪ್ರದೇಶವು ವೀರರು ಮತ್ತು ದೇಶಭಕ್ತರ ನಾಡು. ಪಿಂಗಳಿ ವೆಂಕಯ್ಯ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು ದೇಶದ ಧ್ವಜವನ್ನು ವಿನ್ಯಾಸಗೊಳಿಸಿದ್ದರು. ಇದು ಕಾನೆಗಂಟಿ ಹನುಮಂತು, ಕಂದುಕೂರಿ ವೀರೇಶಲಿಂಗ ಪಂತುಲು ಮತ್ತು ಪೊಟ್ಟಿ ಶ್ರೀರಾಮುಲು ಅವರಂತಹ ವೀರರ ನಾಡು. ಇಲ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿಯಂತಹ ಹೋರಾಟಗಾರರು ಬ್ರಿಟಿಷರ ದೌರ್ಜನ್ಯದ ವಿರುದ್ಧ ದನಿ ಎತ್ತಿದರು. ಇಂದು, 'ಅಮೃತ ಕಾಲ'ದಲ್ಲಿ ಈ ಹೋರಾಟಗಾರರ ಕನಸುಗಳನ್ನು ನನಸು ಮಾಡುವುದು ಎಲ್ಲಾ ದೇಶವಾಸಿಗಳ, 130 ಕೋಟಿ ಭಾರತೀಯರ ಜವಾಬ್ದಾರಿಯಾಗಿದೆ. ನಮ್ಮ ʻನವ ಭಾರತʼವು ಅವರ ಕನಸಿನ ಭಾರತವಾಗಬೇಕು. ಬಡವರು, ರೈತರು, ಕಾರ್ಮಿಕರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರು ಸಮಾನ ಅವಕಾಶಗಳನ್ನು ಹೊಂದಿರುವ ಭಾರತವಾಗಬೇಕು. ಕಳೆದ ಎಂಟು ವರ್ಷಗಳಲ್ಲಿ, ದೇಶವು ಈ ಸಂಕಲ್ಪವನ್ನು ಈಡೇರಿಸಲು ನೀತಿಗಳನ್ನು ರೂಪಿಸಿದೆ ಮತ್ತು ಈ ನಿಟ್ಟಿನಲ್ಲಿ ಸಂಪೂರ್ಣ ಶ್ರದ್ಧೆಯಿಂದ ಕೆಲಸ ಮಾಡಿದೆ. ವಿಶೇಷವೆಂದರೆ, ಶ್ರೀ ಅಲ್ಲೂರಿ ಮತ್ತು ಇತರ ಹೋರಾಟಗಾರರ ಆದರ್ಶಗಳನ್ನು ಅನುಸರಿಸಿ, ದೇಶವು ಬುಡಕಟ್ಟು ಸಹೋದರು ಸಹೋದರಿಯರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮಾಜದ ಅನನ್ಯ ಕೊಡುಗೆಯನ್ನು ಪ್ರತಿ ಮನೆಗೂ ತಲುಪಿಸಲು `ಅಮೃತ ಮಹೋತ್ಸವ’ದ ಈ ಸಂದರ್ಭದಲ್ಲಿ ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ದೇಶದ ಬುಡಕಟ್ಟು ಸಮಾಜದ ಹೆಮ್ಮೆ ಮತ್ತು ಪರಂಪರೆಯನ್ನು ಪ್ರದರ್ಶಿಸಲು ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ. "ಅಲ್ಲೂರಿ ಸೀತಾರಾಮ ರಾಜು ಸ್ಮಾರಕ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ"ವನ್ನು ಆಂಧ್ರಪ್ರದೇಶದ ಲಂಬಸಿಂಗಿಯಲ್ಲಿ ನಿರ್ಮಿಸಲಾಗುತ್ತಿದೆ. ಕಳೆದ ವರ್ಷದಿಂದ, ದೇಶವು ನವೆಂಬರ್ 15ರಂದು ಭಗಬಾನ್‌ ಬಿರ್ಸಾ ಮುಂಡಾ ಜಯಂತಿಯನ್ನು "ರಾಷ್ಟ್ರೀಯ ಬುಡಕಟ್ಟು ಹೆಮ್ಮೆಯ ದಿನ" ಎಂದು ಆಚರಿಸಲು ಪ್ರಾರಂಭಿಸಿದೆ. ವಿದೇಶಿ ಆಡಳಿತವು ನಮ್ಮ ಬುಡಕಟ್ಟು ಜನರ ಮೇಲೆ ಅತ್ಯಂತ ಘೋರವಾದ ದೌರ್ಜನ್ಯಗಳನ್ನು ಎಸಗಿತು ಮತ್ತು ಅವರ ಸಂಸ್ಕೃತಿಯನ್ನು ನಾಶಮಾಡುವ ಪ್ರಯತ್ನಗಳನ್ನು ಸಹ ಮಾಡಿತು. ಇಂದು ಸರಕಾರ ಮಾಡುತ್ತಿರುವ ಪ್ರಯತ್ನಗಳು ಆಗಿನ ತ್ಯಾಗದ ಕಾಲಘಟ್ಟಕ್ಕೆ ಕನ್ನಡಿ ಹಿಡಿಯುತ್ತವೆ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ಸೀತಾರಾಮ ರಾಜು ಅವರ ಆದರ್ಶಗಳನ್ನು ಅನುಸರಿಸಿ, ಇಂದು ದೇಶವು ಬುಡಕಟ್ಟು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ನಮ್ಮ ಅರಣ್ಯ ಸಂಪತ್ತನ್ನೇ ಬುಡಕಟ್ಟು ಸಮಾಜದ ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳ ಮೂಲವನ್ನಾಗಿ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಇಂದು ಬುಡಕಟ್ಟು ಕಲಾ ಕೌಶಲ್ಯಗಳು ʻಸ್ಕಿಲ್ ಇಂಡಿಯಾ ಮಿಷನ್ʼ ಮೂಲಕ ಹೊಸ ಅಸ್ಮಿತೆಯನ್ನು ಪಡೆಯುತ್ತಿವೆ. "ವೋಕಲ್ ಫಾರ್ ಲೋಕಲ್" ಅಭಿಯಾನವು ಬುಡಕಟ್ಟು ಕಲಾಕೃತಿಗಳನ್ನು ಆದಾಯದ ಮೂಲವನ್ನಾಗಿ ಮಾಡುತ್ತಿದೆ. ಬುಡಕಟ್ಟು ಜನರು ಬಿದಿರಿನಂತಹ ಅರಣ್ಯ ಉತ್ಪನ್ನಗಳನ್ನು ಕಡಿಯದಂತೆ ನಿರ್ಬಂಧಿಸುವ ದಶಕಗಳಷ್ಟು ಹಳೆಯ ಕಾನೂನುಗಳನ್ನು ಬದಲಾಯಿಸಲಾಗಿದೆ ಮತ್ತು ನಾವು ಅವರಿಗೆ ಅರಣ್ಯ ಉತ್ಪನ್ನಗಳ ಮೇಲೆ ಹಕ್ಕುಗಳನ್ನು ನೀಡಿದ್ದೇವೆ. ಇಂದು, ಅರಣ್ಯ ಉತ್ಪನ್ನಗಳನ್ನು ಉತ್ತೇಜಿಸಲು ಸರಕಾರವು ಹಲವಾರು ಹೊಸ ಪ್ರಯತ್ನಗಳನ್ನು ಮಾಡುತ್ತಿದೆ. ಎಂಟು ವರ್ಷಗಳ ಹಿಂದಿನವರೆಗೆ, ಕೇವಲ 12 ಅರಣ್ಯ ಉತ್ಪನ್ನಗಳನ್ನು ಮಾತ್ರ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಮೂಲಕ ಖರೀದಿಸಲಾಗುತ್ತಿತ್ತು. ಆದರೆ ಇಂದು ಸುಮಾರು 90 ಉತ್ಪನ್ನಗಳನ್ನು ಅರಣ್ಯ ಉತ್ಪನ್ನಗಳಾಗಿ ʻಎಂಎಸ್‌ಪಿʼ ಖರೀದಿ ಪಟ್ಟಿಯಲ್ಲಿ ಸೇರಿಸಲಾಗಿದೆ. ʻವನ್ ಧನ್ʼ ಯೋಜನೆಯ ಮೂಲಕ ಅರಣ್ಯ ಸಂಪತ್ತನ್ನು ಆಧುನಿಕ ಅವಕಾಶಗಳೊಂದಿಗೆ ನಂಟುಮಾಡುವ ಕೆಲಸವನ್ನೂ ದೇಶವು ಪ್ರಾರಂಭಿಸಿದೆ. ಇದಲ್ಲದೆ, 3000ಕ್ಕೂ ಹೆಚ್ಚು ʻವನ್ ಧನ್ ವಿಕಾಸ್ ಕೇಂದ್ರʼಗಳು ಮತ್ತು 50,000ಕ್ಕೂ ಹೆಚ್ಚು ʻವನ್ ಧನ್ʼ ಸ್ವಸಹಾಯ ಗುಂಪುಗಳು ಸಹ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ʻಬುಡಕಟ್ಟು ಸಂಶೋಧನಾ ಸಂಸ್ಥೆʼಯನ್ನು ಸಹ ಸ್ಥಾಪಿಸಲಾಗಿದೆ. ದೇಶದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಗಾಗಿ ನಡೆಸಲಾಗುತ್ತಿರುವ ಅಭಿಯಾನದಿಂದ ಬುಡಕಟ್ಟು ಪ್ರದೇಶಗಳು ಭಾರಿ ಪ್ರಯೋಜನವನ್ನು ಪಡೆಯುತ್ತಿವೆ. ಬುಡಕಟ್ಟು ಯುವಕರ ಶಿಕ್ಷಣಕ್ಕಾಗಿ 750 ʻಏಕಲವ್ಯ ಮಾದರಿ ಶಾಲೆʼಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿರುವುದರಿಂದ ಬುಡಕಟ್ಟು ಮಕ್ಕಳಿಗೆ ಶಿಕ್ಷಣ ಅಥವಾ ಅಧ್ಯಯನದಲ್ಲಿ ಸಹಾಯಕವಾಗುತ್ತದೆ.

ಅಲ್ಲೂರಿ ಸೀತಾರಾಮ ರಾಜು ಅವರು ಬ್ರಿಟಿಷರ ವಿರುದ್ಧದ ತಮ್ಮ ಹೋರಾಟದ ಸಮಯದಲ್ಲಿ ತಮ್ಮಲ್ಲಿದ್ದ "ಮನ್ಯಂ ವೀರ”ನನ್ನು(ಕಾಡಿನ ವೀರ) ಪ್ರದರ್ಶನ ಮಾಡಿದರು - "ನಿಮಗೆ ಸಾಧ್ಯವಾದರೆ ನನ್ನನ್ನು ತಡೆಯಿರಿ!” ಎಂದು ಕೆಚ್ಚೆದೆಯಿಂದ ಹೋರಾಡಿದರು. ಇಂದು ದೇಶ ಹಾಗೂ 130 ಕೋಟಿ ದೇಶವಾಸಿಗಳು ಸಹ ಅದೇ ಧೈರ್ಯ, ಶಕ್ತಿ ಮತ್ತು ಏಕತೆಯಿಂದ ಸವಾಲುಗಳನ್ನು ಎದುರಿಸುತ್ತಿದ್ದಾರೆ ಮತ್ತು "ನಿಮಗೆ ಸಾಧ್ಯವಾದರೆ ನಮ್ಮನ್ನು ತಡೆಯಿರಿ" ಎಂದು ಹೇಳುತ್ತಿದ್ದಾರೆ. ನಮ್ಮ ಯುವಕರು, ಬುಡಕಟ್ಟು ಜನರು, ಮಹಿಳೆಯರು, ದಲಿತರು, ಸಮಾಜದ ಅವಕಾಶ ವಂಚಿತರು ಮತ್ತು ಹಿಂದುಳಿದ ವರ್ಗಗಳು ದೇಶವನ್ನು ಮುನ್ನಡೆಸುತ್ತಿರುವಾಗ, ʻನವ ಭಾರತʼದ ರಚನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸೀತಾರಾಮ ರಾಜು ಅವರ ಸ್ಫೂರ್ತಿಯು ಒಂದು ರಾಷ್ಟ್ರವಾಗಿ ನಮ್ಮನ್ನು ಅಪರಿಮಿತ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ಖಾತರಿ ನನಗಿದೆ. ಈ ಉತ್ಸಾಹದೊಂದಿಗೆ ನಾನು ಮತ್ತೊಮ್ಮೆ ಆಂಧ್ರದ ನಾಡಿನ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಪಾದಗಳಿಗೆ ನಮಸ್ಕರಿಸುತ್ತೇನೆ. ಇಂದಿನ ಈ ಕಾರ್ಯಕ್ರಮ, ಈ ಹುರುಪು-ಉತ್ಸಾಹ ಮತ್ತು ಜನಸಾಗರವು ಸ್ವಾತಂತ್ರ್ಯ ಸಂಗ್ರಾಮದ ವೀರರನ್ನು ನಾವು ಎಂದಿಗೂ ಮರೆಯುವುದಿಲ್ಲ ಎಂದು ಸಾರುತ್ತಿವೆ. ಸ್ವಾತಂತ್ರ್ಯ ವೀರರಿಂದ ಸ್ಫೂರ್ತಿ ಪಡೆಯುವುದನ್ನು ನಾವು ಮುಂದುವರಿಯುತ್ತೇವೆ ಎಂದು ಜಗತ್ತಿಗೆ ಮತ್ತು ದೇಶವಾಸಿಗಳಿಗೆ ಸಾರುತ್ತಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಬಂದ ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ನಿಮ್ಮೆಲ್ಲರಿಗೂ ನನ್ನ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ಧನ್ಯವಾದಗಳು!

****

ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

 

********

 (Release ID: 1839344) Visitor Counter : 140