ಚುನಾವಣಾ ಆಯೋಗ
azadi ka amrit mahotsav

ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ, 2022 (16ನೇ ಉಪರಾಷ್ಟ್ರಪತಿ ಚುನಾವಣೆ)

Posted On: 29 JUN 2022 4:55PM by PIB Bengaluru

ಭಾರತದ ಉಪರಾಷ್ಟ್ರಪತಿಗಳಾದ ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿಯು 2022ರ  ಆಗಸ್ಟ್, 10 ರಂದು ಕೊನೆಗೊಳ್ಳುತ್ತಿದೆ. ಭಾರತದ ಸಂವಿಧಾನದ 68 ನೇ ವಿಧಿಯ ಪ್ರಕಾರ, ಅಧಿಕಾರದ ಅವಧಿಯು ಕೊನೆಗೊಳ್ಳುವುದರಿಂದ  ಉಂಟಾಗುವ ಖಾಲಿ ಸ್ಥಾನವನ್ನು ತುಂಬಲು ನಿರ್ಗಮನ ಉಪರಾಷ್ಟ್ರಪತಿಗಳ ಅವಧಿ ಪೂರ್ಣಗೊಳ್ಳುವ  ಮೊದಲು ಚುನಾವಣೆ ನಡೆಯುವ ಅಗತ್ಯವಿದೆ. ಚುನಾವಣಾ ಆಯೋಗ ಇಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತು. ಸಭೆಯಲ್ಲಿ  ಚುನಾವಣಾ ಆಯುಕ್ತರಾದ ಶ್ರೀ  ಅನುಪ್ ಚಂದ್ರ ಪಾಂಡೆ ಅವರು ಭಾಗವಹಿಸಿದ್ದು, ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
2. ಸಂವಿಧಾನದ 324 ನೇ ವಿಧಿಯು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ  ಚುನಾವಣೆಗಳ ಕಾಯಿದೆ, 1952 ಮತ್ತು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಚುನಾವಣಾ ನಿಯಮಗಳು, 1974, ಉಪ-ರಾಷ್ಟ್ರಪತಿಗಳ ಸ್ಥಾನಕ್ಕೆ ಚುನಾವಣೆ ನಡೆಸುವ, ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣವನ್ನು ಮಾಡುವ ಅಧಿಕಾರವನ್ನು  ಭಾರತದ ಚುನಾವಣಾ ಆಯೋಗಕ್ಕೆ ನೀಡುತ್ತದೆ. ಭಾರತದ ರಾಷ್ಟ್ರಪತಿ. ಭಾರತದ ಉಪರಾಷ್ಟ್ರಪತಿಯವರ ಸ್ಥಾನಕ್ಕೆ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿ  ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಂಡಿದೆ ಮತ್ತು  ಮತ್ತು ಆಯೋಗವು ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತೀಯ ಚುನಾವಣಾ ಆಯೋಗವು 16 ನೇ ಉಪರಾಷ್ಟ್ರಪತಿ ಚುನಾವಣೆಯ ಚುನಾವಣಾ ವೇಳಾಪಟ್ಟಿಯನ್ನು ಇಂದು ಸೂಕ್ತ ಅವಕಾಶ ಮತ್ತು ಗೌರವದೊಂದಿಗೆ ಪ್ರಕಟಿಸಿದೆ.   ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಕಾಯಿದೆ, 1952 ರ ಸೆಕ್ಷನ್ 4(3) ರ ಪ್ರಕಾರ, ನಿರ್ಗಮನ  ಉಪರಾಷ್ಟ್ರಪತಿಗಳ ಅಧಿಕಾರದ ಅವಧಿ ಮುಗಿಯುವುದಕ್ಕೆ  ಅರವತ್ತು ದಿನಗಳಿಗೆ ಮೊದಲು ಅಥವಾ ನಂತರ  ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಬೇಕಾಗುತ್ತದೆ.
3. ಭಾರತದ ಸಂವಿಧಾನದ 66 ನೇ ವಿಧಿಯ ಪ್ರಕಾರ, ಚಲಾಯಿಸಬಹುದಾದ  ಒಂದು ಮತದ ಮೂಲಕ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ಉಪರಾಷ್ಟ್ರಪತಿಗಳನ್ನು ಆಯ್ಕೆ ಮಾಡುತ್ತಾರೆ. 2022ರ ಚುನಾವಣೆಗೆ ಸಂಬಂಧಿಸಿ, 16ನೇ ಉಪರಾಷ್ಟ್ರಪತಿಗಳ ಚುನಾವಣೆಗೆ, ಚುನಾವಣಾ ಕಾಲೇಜು ಈ ಕೆಳಗಿನ ಸದಸ್ಯರನ್ನು  ಒಳಗೊಂಡಿದೆ:
i. ರಾಜ್ಯಸಭೆಯ 233 ಚುನಾಯಿತ ಸದಸ್ಯರು,
ii ರಾಜ್ಯಸಭೆಯ 12 ನಾಮನಿರ್ದೇಶಿತ ಸದಸ್ಯರು, ಮತ್ತು
iii ಲೋಕಸಭೆಯ 543 ಚುನಾಯಿತ ಸದಸ್ಯರು.
ಎಲೆಕ್ಟೋರಲ್ ಕಾಲೇಜ್ ಸಂಸತ್ತಿನ ಉಭಯ ಸದನಗಳ ಒಟ್ಟು 788 ಸದಸ್ಯರನ್ನು ಒಳಗೊಂಡಿದೆ. ಎಲ್ಲಾ ಮತದಾರರು  ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿರುವುದರಿಂದ, ಪ್ರತಿಯೊಬ್ಬ ಸಂಸದರ ಮತದ ಮೌಲ್ಯವು ಒಂದೇ ಆಗಿರುತ್ತದೆ ಅಂದರೆ 1 (ಒಂದು).
4. ಸಂವಿಧಾನದ ಅನುಚ್ಛೇದ 66 (1)ರನ್ವಯ ಚುನಾವಣೆಯನ್ನು ಚಲಾವಣೆ ಮಾಡಬಹುದಾದ ಒಂದು  ಮತದ ಮೂಲಕ ಅನುಪಾತ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ನಡೆಸಬೇಕು ಮತ್ತು ಅಂತಹ ಚುನಾವಣೆಯಲ್ಲಿ ಮತದಾನವನ್ನು ರಹಸ್ಯ ಮತದಾನದ ಮೂಲಕ ನಡೆಸಬೇಕು. ಈ ವ್ಯವಸ್ಥೆಯಲ್ಲಿ, ಮತದಾರರು ಅಭ್ಯರ್ಥಿಗಳ ಹೆಸರಿನ ಎದುರು ಆದ್ಯತಾಧಾರದಲ್ಲಿ ಮತ ಚಲಾಯಿಸಬೇಕು. ಆದ್ಯತೆಯನ್ನು ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪದಲ್ಲಿ, ರೋಮನ್ ರೂಪದಲ್ಲಿ ಅಥವಾ ಯಾವುದೇ ಮಾನ್ಯತೆ ಪಡೆದ ಭಾರತೀಯ ಭಾಷೆಗಳಲ್ಲಿ ಗುರುತಿಸಬಹುದು. ಆದ್ಯತೆಯನ್ನು ಅಂಕಿಗಳಲ್ಲಿ ಮಾತ್ರ ಗುರುತಿಸಬೇಕು ಮತ್ತು ಪದಗಳಲ್ಲಿ ಸೂಚಿಸಬಾರದು. ಅಭ್ಯರ್ಥಿಗಳ ಸಂಖ್ಯೆಯಷ್ಟು ಆದ್ಯತೆಗಳನ್ನು ಮತದಾರರು ಗುರುತಿಸಬಹುದು. ಬ್ಯಾಲೆಟ್ ಪೇಪರ್ (ಮತ ಪತ್ರ)  ಮಾನ್ಯವಾಗಿರಲು ಮೊದಲ ಆದ್ಯತೆಯ ಗುರುತು ಕಡ್ಡಾಯವಾಗಿದ್ದರೂ, ಇತರ ಆದ್ಯತೆಗಳು ಐಚ್ಛಿಕವಾಗಿರುತ್ತವೆ.
5. ಮತವನ್ನು ಗುರುತಿಸಲು, ಆಯೋಗವು ನಿರ್ದಿಷ್ಟ ಪೆನ್ನುಗಳನ್ನು ಪೂರೈಸುತ್ತದೆ. ಮತಗಟ್ಟೆಯಲ್ಲಿ ಮತಪತ್ರವನ್ನು ಮತದಾರರಿಗೆ ನೀಡಿದಾಗ ಅಲ್ಲಿ ನಿಯೋಜಿತ ಅಧಿಕಾರಿಯು  ಮತದಾರರಿಗೆ ಪೆನ್ನು ನೀಡುತ್ತಾರೆ. ಮತದಾರರು ಈ ನಿರ್ದಿಷ್ಟ ಪೆನ್‌ನಿಂದ ಮಾತ್ರ ಮತಪತ್ರದಲ್ಲಿ  ಗುರುತಿಸುವ ಮೂಲಕ ಮತ ಚಲಾಯಿಸಬೇಕೇ  ಹೊರತು ಬೇರೆ ಯಾವುದೇ ಪೆನ್‌ನಿಂದ ಅಲ್ಲ. ಬೇರೆ ಯಾವುದೇ ಪೆನ್ ಬಳಸಿ ಮತದಾನ  ಮಾಡಿದರೆ ಎಣಿಕೆಯ ಸಮಯದಲ್ಲಿ ಮತ ಅಮಾನ್ಯವಾಗುತ್ತದೆ.
6. ಚುನಾವಣಾ ಆಯೋಗವು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ, ಲೋಕಸಭೆ ಮತ್ತು ರಾಜ್ಯಸಭೆಯ ಮಹಾ ಪ್ರಧಾನ ಕಾರ್ಯದರ್ಶಿಯನ್ನು ಸರದಿಯ ಮೂಲಕ ಚುನಾವಣಾ ಅಧಿಕಾರಿಯಾಗಿ ನೇಮಿಸುತ್ತದೆ. ಅದರಂತೆ ಲೋಕಸಭೆಯ ಮಹಾ ಪ್ರಧಾನ ಕಾರ್ಯದರ್ಶಿಯನ್ನು ಭಾರತದ ಉಪರಾಷ್ಟ್ರಪತಿಗಳ ಸ್ಥಾನದ ಪ್ರಸ್ತುತ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿ ನೇಮಿಸಲಾಗುತ್ತದೆ. ಚುನಾವಣಾಧಿಕಾರಿಗೆ ಸಹಾಯ ಮಾಡಲು ಸಂಸತ್ ಭವನದಲ್ಲಿ (ಲೋಕಸಭೆ) ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲೂ ಆಯೋಗವು ನಿರ್ಧರಿಸಿದೆ.
7. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳು, 1974 ರ ನಿಯಮ 8 ರ ಪ್ರಕಾರ, ಸಂಸತ್ ಭವನದಲ್ಲಿ ಚುನಾವಣೆಗಾಗಿ ಮತದಾನವನ್ನು ಆಯೋಜಿಸಲಾಗುತ್ತದೆ. ಮತದಾನ ಅಗತ್ಯವಿದ್ದಲ್ಲಿ, ಅದನ್ನು ಹೊಸದಿಲ್ಲಿಯಲ್ಲಿ ಕೊಠಡಿ ಸಂಖ್ಯೆ 63, 1ನೇ ಮಹಡಿ, ಸಂಸತ್ ಭವನ, ಇಲ್ಲಿ ನಡೆಸಲಾಗುವುದು.
8. ಚುನಾವಣೆಯ ವೇಳಾಪಟ್ಟಿಯ ಪ್ರಕಾರ, ಹೊಸದಿಲ್ಲಿಯಲ್ಲಿರುವ ಚುನಾವಣಾಧಿಕಾರಿಯು  ಸಾರ್ವಜನಿಕ ಪ್ರಕಟಣೆಯ (ನೋಟೀಸು)  ಮೂಲಕ ಸೂಚಿಸುವ ಸ್ಥಳದಲ್ಲಿ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಬೇಕು (ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ನಿಯಮಗಳು, 1974ರನ್ವಯ ಫಾರ್ಮ್-1 ರಲ್ಲಿ ), ಮತ್ತು ಬೇರೆ ಯಾವುದೇ ಸ್ಥಳದಲ್ಲಿ ನಾಮಪತ್ರ ಸಲ್ಲಿಸುವಂತಿಲ್ಲ. ಕಾನೂನಿನ ಅಡಿಯಲ್ಲಿ, ನಾಮಪತ್ರವನ್ನು (ನಿಗದಿತ ನಮೂನೆ 3 ರಲ್ಲಿ) ಅಭ್ಯರ್ಥಿಯು ಸ್ವತಃ ಅಥವಾ ಅವರ ಯಾವುದೇ ಪ್ರಸ್ತಾಪಕರು ಅಥವಾ ಸೆಕೆಂಡರ್‌ಗಳಿಂದ 11.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಸಲ್ಲಿಸಬಹುದು. ಸಾರ್ವಜನಿಕ ರಜಾ ದಿನಗಳಲ್ಲಿ ನಾಮಪತ್ರ ಸಲ್ಲಿಸುವಂತಿಲ್ಲ. ಅಭ್ಯರ್ಥಿಯ ನಾಮ ಪತ್ರಕ್ಕೆ ಕನಿಷ್ಠ ಇಪ್ಪತ್ತು ಮತದಾರರು ಸೂಚಕರಾಗಿ (ಪ್ರಪೋಸರ್) ಮತ್ತು ಕನಿಷ್ಠ ಇತರ ಇಪ್ಪತ್ತು ಮತದಾರರು ಅದನ್ನು ಬೆಂಬಲಿಸುವವರಾಗಿ (ಸೆಕೆಂಡರ್ಸ್) ಸಹಿ ಹಾಕಿರಬೇಕು. ಒಬ್ಬ ಮತದಾರರು ಓರ್ವ  ಅಭ್ಯರ್ಥಿಯ ಒಂದು ನಾಮಪತ್ರಕ್ಕೆ ಓರ್ವ ಸೂಚಕರಾಗಿ (ಪ್ರಪೋಸರ್)  ಅಥವಾ ಸೆಕೆಂಡರ್ ಆಗಿ ಮಾತ್ರವೇ ಸಹಿ ಹಾಕಬಹುದು ಮತ್ತು 1952 ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಕಾಯಿದೆಯ ಸೆಕ್ಷನ್ 5B (5) ರ ಅನ್ವಯ ಈ ನಿಯಮವನ್ನು ಜಾರಿಗೆ ತರಲಾಗಿದೆ. ಒಬ್ಬ ಅಭ್ಯರ್ಥಿಯು ಗರಿಷ್ಠ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದು. ಚುನಾವಣೆಯ ಭದ್ರತಾ ಠೇವಣಿ ರೂ.15,000/- (ರೂಪಾಯಿಗಳು ಹದಿನೈದು ಸಾವಿರ ಮಾತ್ರ), ಇದನ್ನು ನಾಮಪತ್ರದ ಜೊತೆಗೆ ಸಲ್ಲಿಸಬೇಕು ಅಥವಾ ನಾಮಪತ್ರ ಸಲ್ಲಿಸುವ ಮೊದಲು, ಈ ಉದ್ದೇಶಕ್ಕಾಗಿ ಸಂಬಂಧಿಸಿದ ಖಾತೆಗಳ ಶೀರ್ಷಿಕೆ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಇಲ್ಲವೇ ಸರ್ಕಾರದ ಖಜಾನೆಯಲ್ಲಿ ಠೇವಣಿ ಇಡಬೇಕು. 
9. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ  ಚುನಾವಣಾ ನಿಯಮಗಳು, 1974 ರ ನಿಯಮ 40 ರ ಪ್ರಕಾರ, ಆಯೋಗವು ಉಪ-ರಾಷ್ಟ್ರಪತಿ ಸ್ಥಾನದ ಚುನಾವಣಾ ಉದ್ದೇಶಕ್ಕಾಗಿ 66 ನೇ ವಿಧಿಯಲ್ಲಿ ಉಲ್ಲೇಖಿಸಲಾದ ಚುನಾವಣಾ ಕಾಲೇಜಿನ ಸದಸ್ಯರ ಪಟ್ಟಿಯನ್ನು ಅವರ ಸರಿಯಾದ ವಿಳಾಸಗಳೊಂದಿಗೆ ಸಕಾಲಿಕಗೊಳಿಸಿರುತ್ತದೆ. 2022 ರ ಉಪರಾಷ್ಟ್ರಪತಿಗಳ ಚುನಾವಣೆಗಾಗಿ ಆಯೋಗವು ಸಕಾಲಿಕಗೊಳಿಸಿರುವ ಚುನಾವಣಾ ಕಾಲೇಜಿನ ಸದಸ್ಯರ ಪಟ್ಟಿಯು ಭಾರತದ ಚುನಾವಣಾ ಆಯೋಗದ ಆವರಣದಲ್ಲಿ ತೆರೆಯಲಾದ ಕೌಂಟರ್‌ನಲ್ಲಿ ಪ್ರತಿ ಪ್ರತಿಗೆ ರೂ. 50/-ದರದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಚುನಾವಣಾ ಕಾಲೇಜಿನ ಪ್ರತಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್ ಮಾಡಲಾಗುತ್ತಿದೆ. ಆದಾಗ್ಯೂ, ಕೌನ್ಸಿಲ್ ಆಫ್ ಸ್ಟೇಟ್ಸ್‌ನ 51 ಚುನಾಯಿತ ಸದಸ್ಯರು, ಕೌನ್ಸಿಲ್ ಆಫ್ ಸ್ಟೇಟ್ಸ್‌ನ 07 ನಾಮನಿರ್ದೇಶಿತ ಸದಸ್ಯರ (ಚುನಾವಣೆಯ ಸಮಯದಲ್ಲಿ  ಆ ಸ್ಥಾನಗಳು ಭರ್ತಿಯಾದರೆ) ಹೆಸರುಗಳನ್ನು ಅಧಿಸೂಚನೆಯ ದಿನಾಂಕದ ನಂತರ ಈ ಪಟ್ಟಿಯಲ್ಲಿ ಸೇರಿಸಿ ನವೀಕರಿಸಬೇಕಾಗುತ್ತದೆ. ಆದುದರಿಂದ, ಅಗತ್ಯವಿದ್ದಾಗ ಚುನಾವಣಾ ಕಾಲೇಜಿಗೆ ಸಂಬಂಧಿಸಿ ಪೂರಕ ಪಟ್ಟಿ(ಗಳನ್ನು) ಪ್ರಕಟಿಸಲಾಗುವುದು.
10. ಪ್ರತಿ ಸ್ಪರ್ಧಿ ಅಭ್ಯರ್ಥಿಯು ಮತದಾನದ ಸ್ಥಳದಲ್ಲಿ ಮತ್ತು ಎಣಿಕೆಗೆ ನಿಗದಿಪಡಿಸಿದ ಸ್ಥಳದಲ್ಲಿ (ಎಣಿಕೆ ಸಭಾಂಗಣ) ಹಾಜರಿರಲು ಪ್ರತಿನಿಧಿಗೆ ಅಧಿಕಾರ ನೀಡಬಹುದು. ಈ ಉದ್ದೇಶಕ್ಕಾಗಿ ಪ್ರತಿನಿಧಿಗಳ ಅಧಿಕಾರ ಪತ್ರವನ್ನು ಅಭ್ಯರ್ಥಿಯು ಲಿಖಿತವಾಗಿ ನೀಡಿರಬೇಕು.
11. ಉಪರಾಷ್ಟ್ರಪತಿಗಳ ಸ್ಥಾನಕ್ಕೆ  ಚುನಾವಣೆಯು ರಹಸ್ಯ ಮತದಾನದ ಮೂಲಕ ನಡೆಯಲಿದೆ ಎಂದು ಸಂವಿಧಾನವು ಸ್ಪಷ್ಟವಾಗಿ ತಿಳಿಸಿದೆ. ಆದುದರಿಂದ, ಮತದಾರರು ತಮ್ಮ ಮತದ ಗೋಪ್ಯತೆಯನ್ನು ಕಾಯ್ದುಕೊಳ್ಳಬೇಕೆಂದು ನಿರೀಕ್ಷಿಸಲಾಗಿದೆ. ಈ ಚುನಾವಣೆಯಲ್ಲಿ ಮುಕ್ತ ಮತದಾನದ ಪರಿಕಲ್ಪನೆ ಇಲ್ಲ ಮತ್ತು ರಾಷ್ಟ್ರಪತಿ ಹಾಗು ಉಪರಾಷ್ಟ್ರಪತಿ ಚುನಾವಣೆಯ ಯಾವುದೇ ಸಂದರ್ಭದಲ್ಲೂ ಮತಪತ್ರವನ್ನು ಯಾರಿಗೇ ಆದರೂ  ತೋರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 1974 ರ ನಿಯಮಗಳಲ್ಲಿ ನಿಗದಿಪಡಿಸಿದ ಮತದಾನದ ಕಾರ್ಯವಿಧಾನವು ಮತದಾನದ ಕೊಠಡಿಯಲ್ಲಿ/ಮತಗಟ್ಟೆಯಲ್ಲಿ ಮತವನ್ನು ಚಲಾಯಿಸಿದ ನಂತರ, ಮತದಾರರು ಬ್ಯಾಲೆಟ್ ಪೇಪರನ್ನು ಮಡಚಿ ಮತಪೆಟ್ಟಿಗೆಯೊಳಗೆ ಹಾಕಬೇಕಾಗುತ್ತದೆ. ಮತದಾನದ ಕಾರ್ಯವಿಧಾನದ ಯಾವುದೇ ಉಲ್ಲಂಘನೆಯು ಕಂಡು ಬಂದಲ್ಲಿ ಪ್ರಿಸೈಡಿಂಗ್ ಅಧಿಕಾರಿಯು (ಮತಗಟ್ಟೆ ಅಧ್ಯಕ್ಷೀಯ ಅಧಿಕಾರಿ)  ಮತಪತ್ರವನ್ನು ಅಸಿಂಧು/ರದ್ದುಗೊಳಿಸಬಹುದಾಗಿದೆ. ಪ್ಯಾರಾಗ್ರಾಫ್ 5 ರಲ್ಲಿ ಈಗಾಗಲೇ ಹೇಳಿದಂತೆ, ಮತದಾನದ ಸ್ಥಳದಲ್ಲಿ ಮತದಾರರಿಗೆ ಪ್ರಿಸೈಡಿಂಗ್ ಆಫೀಸರ್ (ಮತಗಟ್ಟೆ ಅಧ್ಯಕ್ಷೀಯ ಅಧಿಕಾರಿ) ಒದಗಿಸಿದ ನಿರ್ದಿಷ್ಟ ಪೆನ್ ಬಳಸಿ ಮಾತ್ರವೇ ಮತವನ್ನು ಚಲಾಯಿಸಬಹುದು.
12. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ಸಂಸದರಿಗೆ ಯಾವುದೇ ವಿಪ್ ನೀಡುವಂತಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಕಾಯಿದೆ, 1952 ರ ಸೆಕ್ಷನ್ 18 ರ ಪ್ರಕಾರ, ಐ.ಪಿ.ಸಿ. ಯ ಸೆಕ್ಷನ್ 171ಬಿ ಮತ್ತು 171ಸಿ ಯಲ್ಲಿ ವ್ಯಾಖ್ಯಾನಿಸಲಾದ 'ಲಂಚ' ಅಥವಾ 'ಅನಾವಶ್ಯಕ ಪ್ರಭಾವ'ದ ಬಳಕೆಯನ್ನು ಅಭ್ಯರ್ಥಿ ಅಥವಾ ಅವರ ಒಪ್ಪಿಗೆಯೊಂದಿಗೆ ಇತರ ಯಾವುದೇ ವ್ಯಕ್ತಿ ಮಾಡಿದರೂ ಅದು ಅಪರಾಧ ಎಂದು ಸ್ಪಷ್ಟಪಡಿಸಲಾಗಿದೆ. ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಅರ್ಜಿಯ ವಿಚಾರಣೆಯಲ್ಲಿ  ಇಂತಹ ಘಟನೆಗಳು ನಡೆದರೆ ಚುನಾವಣೆಯನ್ನು ಅನೂರ್ಜಿತ ಎಂದು ಘೋಷಿಸಬಹುದಾಗಿದೆ
13. ಸಹಾಯಕ ಚುನಾವಣಾಧಿಕಾರಿಗಳು ಮತದಾನ ನಡೆಸಲು ಮತ್ತು ಚುನಾವಣಾ ಆಯೋಗದಿಂದ ಸಂಸತ್ ಭವನಕ್ಕೆ ಮತದಾನದ ಮತಪೆಟ್ಟಿಗೆಗಳು ಮತ್ತು ಇತರ ಪ್ರಮುಖ ಚುನಾವಣಾ ಸಾಮಗ್ರಿಗಳ ರವಾನೆಗಾಗಿ ಹಾಗು ಅವುಗಳನ್ನು ಮರಳಿ ಆಯೋಗಕ್ಕೆ ತರುವಲ್ಲಿ ಚುನಾವಣಾಧಿಕಾರಿಗೆ ಸಹಾಯ ಮಾಡುತ್ತಾರೆ.
14. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಾತ್ರಿಪಡಿಸಿಕೊಳ್ಳಲು, ಆಯೋಗವು ಮತದಾನದ ಸ್ಥಳದಲ್ಲಿ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳನ್ನು ತನ್ನ ವೀಕ್ಷಕರನ್ನಾಗಿ ನೇಮಿಸುತ್ತದೆ.
15. ಕೋವಿಡ್-19ಕ್ಕೆ  ಸಂಬಂಧಿಸಿದ ಎಲ್ಲಾ ರಕ್ಷಣೋಪಾಯಗಳು ಮತ್ತು ಶಿಷ್ಟಾಚಾರಗಳನ್ನು ಚುನಾವಣಾ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಮತ್ತು ಮತದಾನ ಹಾಗು ಎಣಿಕೆಯ ದಿನದಂದು ಅನುಸರಿಸಬೇಕಾಗಿರುತ್ತದೆ.
16. ಚುನಾವಣೆಗಳನ್ನು ಪರಿಸರ ಸ್ನೇಹಿಯನ್ನಾಗಿ ನಡೆಸುವುದು ಆಯೋಗದ ಪ್ರಯತ್ನವಾಗಿದೆ. ಭಾರತದ ಉಪರಾಷ್ಟ್ರಪತಿ ಹುದ್ದೆಗೆ ನಡೆಯುವ ಚುನಾವಣೆಯು ಪರೋಕ್ಷ ಚುನಾವಣೆಯಾಗಿದ್ದು, ಬ್ಯಾನರ್, ಪೋಸ್ಟರ್ ಇತ್ಯಾದಿಗಳನ್ನು ಅಳವಡಿಸುವ ಮೂಲಕ  ಸಾಂಪ್ರದಾಯಿಕ ರೀತಿಯಲ್ಲಿ ನಡೆಸುವಂತಹ ರೀತಿಯ ಚುನಾವಣಾ ಪ್ರಚಾರವನ್ನು ಒಳಗೊಂಡಿಲ್ಲ. ಆದರೂ, ಈ ಚುನಾವಣೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಚುನಾವಣಾಧಿಕಾರಿಗೆ ಭಾರತ ಸರ್ಕಾರದ ಚಾಲ್ತಿಯಲ್ಲಿರುವ  ನಿಯಮಗಳ ಪ್ರಕಾರ ಪರಿಸರ ಸ್ನೇಹಿ ಮತ್ತು ಜೈವಿಕವಾಗಿ ಕರಗುವಂತಹ ವಸ್ತುಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದೆ ಮತ್ತು ನಿಷೇಧಿತ ಪ್ಲಾಸ್ಟಿಕ್/ವಸ್ತುಗಳ ಬಳಕೆಯನ್ನು ನಿರ್ಬಂಧಿಸಿ ನಿರ್ದೇಶನಗಳನ್ನು ನೀಡಿದೆ.
17. ಚುನಾವಣಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಹೊಸದಿಲ್ಲಿಯಲ್ಲಿ ಮತ ಎಣಿಕೆ ನಡೆಯಲಿದೆ. ಎಣಿಕೆ ಮುಗಿದ ನಂತರ, ಚುನಾವಣಾ ಫಲಿತಾಂಶ (ರಿಟರ್ನ್) ವನ್ನು   (1974 ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳಿಗೆ ಲಗತ್ತಿಸಲಾದ ನಮೂನೆ 7 ರಲ್ಲಿ) ಚುನಾವಣಾ ಅಧಿಕಾರಿಯು ಸಹಿ ಮಾಡಿ ನೀಡುತ್ತಾರೆ.
18. 1952 ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳ ಕಾಯಿದೆಯ ಸೆಕ್ಷನ್  (4) ರ ಉಪ-ಸೆಕ್ಷನ್ (1) ಅನುಸಾರವಾಗಿ, ಭಾರತದ ಚುನಾವಣಾ ಆಯೋಗವು ಉಪರಾಷ್ಟ್ರಪತಿಗಳ ಸ್ಥಾನಕ್ಕೆ  ಆಯ್ಕೆ  ಮಾಡಲು ಚುನಾವಣೆಯ ಕಾರ್ಯಪಟ್ಟಿಯನ್ನು    ಅನುಬಂಧ-I ರ ಪ್ರಕಾರ ನಿಗದಿ ಮಾಡಿದೆ.
19. ಭಾರತದ ಉಪರಾಷ್ಟ್ರಪತಿಗಳ ಸ್ಥಾನಕ್ಕೆ ಪ್ರಸ್ತುತ ಚುನಾವಣೆಗೆ ಸಂಬಂಧಿಸಿದ  ಎಲ್ಲಾ ಅಂಶಗಳನ್ನು ಒಳಗೊಂಡಿರುವ ಮಾಹಿತಿ ಕಿರುಪುಸ್ತಕ ಮತ್ತು ಹಿಂದಿನ ಹದಿನೈದು ಉಪರಾಷ್ಟ್ರಪತಿ ಚುನಾವಣೆಗಳು ಹಾಗು ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳ(ಎಫ್.ಎ.ಕ್ಯು.)  ಪಟ್ಟಿ  ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನ ಲಿಂಕ್‌: https://eci .gov.in/vice-presidential-election2022/index/ . ನಲ್ಲಿ ಲಭ್ಯ ಇವೆ. ಮೇಲ್ಕಾಣಿಸಿದ  ಮಾಹಿತಿ ಪುಸ್ತಕದ ಪ್ರತಿಯನ್ನು ಆಯೋಗದ ಮಾರಾಟ ಕೌಂಟರ್‌ನಲ್ಲಿ ಪುಸ್ತಕವೊಂದಕ್ಕೆ  25/- ರೂ ಪಾವತಿ ಮಾಡುವ ಮೂಲಕ ಪಡೆಯಬಹುದು.

RP

ANNEXURE-I

Election to the Office of the Vice-President of India, 2022 (16th Vice-Presidential Election)

    

(i)

Issue of Election Commission’s notification calling the election

5.07.2022

(Tuesday)

(ii)

Last date of making nominations

19.07.22

 (Tuesday)

(iii)

Date for the Scrutiny of nominations

20.07.2022

(Wednesday)

(iv)

Last date for the withdrawal of candidatures

22.07.2022

(Friday)

(v)

Date on which a poll shall, if necessary, be taken

06.08.2022

(Saturday)

(vi)

Hours of poll

10am to 05pm

(vii)

Date on which counting, if required, shall be taken

06.08.2022

(Saturday)

 

 

 


(Release ID: 1838169) Visitor Counter : 7317