ಪ್ರಧಾನ ಮಂತ್ರಿಯವರ ಕಛೇರಿ

8ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರಿನ ಅರಮನೆ ಮೈದಾನದಲ್ಲಿ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ, ಮೈಸೂರಿನಲ್ಲಿ ಪ್ರಧಾನಮಂತ್ರಿ ಅವರ ಯೋಗ ಕಾರ್ಯಕ್ರಮ, ದೇಶಾದ್ಯಂತ 75 ಅಪ್ರತಿಮ (ಐಕಾನಿಕ್) ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆಯಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸಿದ್ದರು.


ಕೋಟ್ಯಂತರ ಜನರ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ವಿವಿಧ ಸರ್ಕಾರೇತರ ಸಂಸ್ಥೆಗಳು ಸಾಮೂಹಿಕ ಯೋಗ ಪ್ರದರ್ಶನಗಳನ್ನು ಆಯೋಜಿಸಿವೆ.

ಮೈಸೂರಿನಲ್ಲಿ ಪ್ರಧಾನಮಂತ್ರಿ ಅವರ ಯೋಗ ಕಾರ್ಯಕ್ರಮವು 'ಒಂದು ಸೂರ್ಯ, ಒಂದು ಭೂಮಿ' ಪರಿಕಲ್ಪನೆಯನ್ನು ಒತ್ತಿಹೇಳುವ 'ಗಾರ್ಡಿಯನ್ ಯೋಗ ರಿಂಗ್' ಎಂಬ ನವೀನ ಕಾರ್ಯಕ್ರಮದ ಭಾಗವಾಗಿದೆ.

"ಯೋಗವು ಕೇವಲ ಒಬ್ಬ ವ್ಯಕ್ತಿಗಾಗಿ ಅಲ್ಲ ಇಡೀ ಮಾನವಕುಲಕ್ಕಾಗಿ"

"ಯೋಗವು ನಮ್ಮ ಸಮಾಜಕ್ಕೆ, ರಾಷ್ಟ್ರಗಳಿಗೆ, ಜಗತ್ತಿಗೆ ಶಾಂತಿಯನ್ನು ತರುತ್ತದೆ ಮತ್ತು ಯೋಗವು ನಮ್ಮ ಬ್ರಹ್ಮಾಂಡಕ್ಕೆ ಶಾಂತಿಯನ್ನು ತರುತ್ತದೆ"

"ಯೋಗ ದಿನವನ್ನು ವ್ಯಾಪಕವಾಗಿ ಸ್ವೀಕರಿಸುವುದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ನೀಡಿದ ಭಾರತದ ಅಮೃತ್ ಚೈತನ್ಯವನ್ನು ಒಪ್ಪಿಕೊಂಡಿದೆ"

"ಭಾರತದ ಐತಿಹಾಸಿಕ ತಾಣಗಳಲ್ಲಿ ಸಾಮೂಹಿಕ ಯೋಗದ ಅನುಭವವು ಭಾರತದ ಗತಕಾಲ, ಭಾರತದ ವೈವಿಧ್ಯತೆ ಮತ್ತು ಭಾರತದ ವಿಸ್ತರಣೆಯನ್ನು ಒಟ್ಟುಗೂಡಿಸಿದಂತೆ ''

"ಯೋಗದ ಅಭ್ಯಾಸಗಳು ಆರೋಗ್ಯ, ಸಮತೋಲನ ಮತ್ತು ಸಹಕಾರಕ್ಕೆ ಅದ್ಭುತ ಸ್ಫೂರ್ತಿಯನ್ನು ನೀಡುತ್ತಿವೆ"

"ಯೋಗಕ್ಕೆ ಸಂಬಂಧಿಸಿದ ಅನಂತ ಸಾಧ್ಯತೆಗಳನ್ನು ಅರಿತುಕೊಳ್ಳುವ ಸಮಯ ಇಂದು"

"ನಾವು ಯೋಗವನ್ನು ಬದುಕಲು ಪ್ರಾರಂಭಿಸಿದಾಗ, ಯೋಗ ದಿನವು ನಮ್ಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ಆಚರಿಸುವ ಮಾಧ್ಯಮವಾಗುತ್ತದೆ".

Posted On: 21 JUN 2022 8:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನದ (ಐಡಿವೈ) ಅಂಗವಾಗಿ ಮೈಸೂರಿನ ಮೈಸೂರು ಅರಮನೆ ಮೈದಾನದಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡರು. ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮೈಸೂರಿನಂತಹ ಭಾರತದ ಆಧ್ಯಾತ್ಮಿಕ ಕೇಂದ್ರಗಳು ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಯೋಗ ಶಕ್ತಿಯು ಇಂದು ಜಾಗತಿಕ ಆರೋಗ್ಯಕ್ಕೆ ದಿಕ್ಸೂಚಿಯಾಗಿದೆ ಎಂದರು. ಇಂದು ಯೋಗವು ಜಾಗತಿಕ ಸಹಕಾರಕ್ಕೆ ಆಧಾರವಾಗುತ್ತಿದೆ ಮತ್ತು ಮನುಕುಲಕ್ಕೆ ಆರೋಗ್ಯಕರ ಜೀವನದ ನಂಬಿಕೆಯನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು. ಯೋಗವು ಮನೆಗಳಿಂದ ಹೊರಬಂದಿದೆ ಮತ್ತು ಪ್ರಪಂಚದಾದ್ಯಂತ ಹರಡಿದೆ ಮತ್ತು ಇದು ಆಧ್ಯಾತ್ಮಿಕ ಸಾಕ್ಷಾತ್ಕಾರದ ಚಿತ್ರವಾಗಿದೆ ಮತ್ತು ವಿಶೇಷವಾಗಿ ಅಭೂತಪೂರ್ವ ಸಾಂಕ್ರಾಮಿಕ ರೋಗದ ಕೊನೆಯ ಎರಡು ವರ್ಷಗಳಲ್ಲಿ ನೈಸರ್ಗಿಕ ಮತ್ತು ಸಹಭಾಗಿತ್ವದ ಮಾನವ ಪ್ರಜ್ಞೆಯ ಚಿತ್ರಣವಾಗಿದೆ ಎಂದು ಅವರು ಹೇಳಿದರು. "ಯೋಗವು ಈಗ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿದೆ. ಯೋಗವು ಯಾವುದೇ ವ್ಯಕ್ತಿಗೆ ಮಾತ್ರವಲ್ಲ, ಇಡೀ ಮನುಕುಲಕ್ಕೆ. ಆದ್ದರಿಂದ, ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್(ಘೋಷವಾಕ್ಯ) - ಮಾನವೀಯತೆಗಾಗಿ ಯೋಗ" ಎಂದು ಅವರು ಹೇಳಿದರು. ಈ ವಿಷಯವನ್ನು ಜಾಗತಿಕವಾಗಿ ತೆಗೆದುಕೊಂಡಿದ್ದಕ್ಕಾಗಿ ಅವರು ವಿಶ್ವಸಂಸ್ಥೆ ಮತ್ತು ಎಲ್ಲಾ ದೇಶಗಳಿಗೆ ಧನ್ಯವಾದ ಅರ್ಪಿಸಿದರು.

ಭಾರತೀಯ ಋಷಿಮುನಿಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು , "ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಯೋಗದಿಂದ ಶಾಂತಿ ಕೇವಲ ವ್ಯಕ್ತಿಗಳಿಗೆ ಮಾತ್ರ ಅಲ್ಲ. ಯೋಗವು ನಮ್ಮ ಸಮಾಜಕ್ಕೆ ಶಾಂತಿಯನ್ನು ತರುತ್ತದೆ. ಯೋಗವು ನಮ್ಮ ರಾಷ್ಟ್ರಗಳಿಗೆ ಮತ್ತು ಜಗತ್ತಿಗೆ ಶಾಂತಿಯನ್ನು ತರುತ್ತದೆ. ಮತ್ತು, ಯೋಗವು ನಮ್ಮ ಬ್ರಹ್ಮಾಂಡಕ್ಕೆ ಶಾಂತಿಯನ್ನು ನೀಡುತ್ತದೆ," ಎಂದರು, ಮಾತು  ಮುಂದುವರಿಸಿದ ಅವರು, "ಈ ಇಡೀ ಬ್ರಹ್ಮಾಂಡವು ನಮ್ಮ ಸ್ವಂತ ದೇಹ ಮತ್ತು ಆತ್ಮದಿಂದ ಪ್ರಾರಂಭವಾಗುತ್ತದೆ. ಬ್ರಹ್ಮಾಂಡವು ನಮ್ಮಿಂದ ಪ್ರಾರಂಭವಾಗುತ್ತದೆ. ಮತ್ತು, ಯೋಗವು ನಮ್ಮೊಳಗಿನ ಎಲ್ಲದರ ಬಗ್ಗೆ ನಮಗೆ ಪ್ರಜ್ಞೆ ಮೂಡಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ." ಎಂದು ಹೇಳಿದರು.

ದೇಶವು ತನ್ನ 75 ನೇ ಸ್ವಾತಂತ್ರ್ಯ ವರ್ಷವಾದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಭಾರತವು ಯೋಗ ದಿನವನ್ನು ಆಚರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಯೋಗ ದಿನವನ್ನು ವ್ಯಾಪಕವಾಗಿ ಅಂಗೀಕರಿಸಿರುವುದು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ನೀಡಿದ ಭಾರತದ ಅಮೃತ್ ಚೈತನ್ಯವನ್ನು ಒಪ್ಪಿಕೊಂಡಿದೆ ಎಂದು ಪ್ರಧಾನಿ ಹೇಳಿದರು. ಅದಕ್ಕಾಗಿಯೇ ದೇಶದ 75 ಅಪ್ರತಿಮ (ಐಕಾನಿಕ್) ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ, ಇದು ಭಾರತದ ಭವ್ಯ ಇತಿಹಾಸಕ್ಕೆ ಸಾಕ್ಷಿಯಾಗಿದೆ ಮತ್ತು ಸಾಂಸ್ಕೃತಿಕ ಶಕ್ತಿಯ ಕೇಂದ್ರವಾಗಿದೆ. "ಭಾರತದ ಐತಿಹಾಸಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗದ ಅನುಭವವು ಭಾರತದ ಗತಕಾಲ, ಭಾರತದ ವೈವಿಧ್ಯತೆ ಮತ್ತು ಭಾರತದ ವಿಸ್ತರಣೆಯನ್ನು ಒಟ್ಟಿಗೆ ಜೋಡಿಸಿದಂತೆ" ಎಂದು ಅವರು ವಿವರಿಸಿದರು. ರಾಷ್ಟ್ರೀಯ ಗಡಿಗಳನ್ನು ಮೀರಿದ ಯೋಗದ ಏಕೀಕರಣ ಶಕ್ತಿಯನ್ನು ವಿವರಿಸಲು 79 ದೇಶಗಳು ಮತ್ತು ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ನಡುವೆ ಸಹಯೋಗದ ವ್ಯಾಯಾಮವಾಗಿರುವ 'ಗಾರ್ಡಿಯನ್ ಯೋಗ ರಿಂಗ್' ಎಂಬ ವಿನೂತನ ಕಾರ್ಯಕ್ರಮದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಸೂರ್ಯನು ಪ್ರಪಂಚದಾದ್ಯಂತ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುತ್ತಿರುವಂತೆ, ಭಾಗವಹಿಸುವ ದೇಶಗಳಲ್ಲಿನ ಸಾಮೂಹಿಕ ಯೋಗ ಪ್ರದರ್ಶನಗಳು, ಭೂಮಿಯ ಮೇಲಿನ ಯಾವುದೇ ಒಂದು ಬಿಂದುವಿನಿಂದ ನೋಡಿದರೆ, ಒಂದರ ನಂತರ ಒಂದರಂತೆ, ಹೆಚ್ಚುಕಡಿಮೆ ಜೊತೆಜೊತೆಯಾಗಿ ನಡೆಯುತ್ತಿರುವಂತೆ ತೋರುತ್ತದೆ, ಈ ಮೂಲಕ 'ಒಂದು ಸೂರ್ಯ, ಒಂದು ಭೂಮಿ' ಎಂಬ ಪರಿಕಲ್ಪನೆಯನ್ನು ಒತ್ತಿಹೇಳುತ್ತದೆ. "ಯೋಗದ ಈ ಅಭ್ಯಾಸಗಳು ಆರೋಗ್ಯ, ಸಮತೋಲನ ಮತ್ತು ಸಹಕಾರಕ್ಕೆ ಅದ್ಭುತ ಸ್ಫೂರ್ತಿಯನ್ನು ನೀಡುತ್ತಿವೆ" ಎಂದು ಅವರು ಹೇಳಿದರು.

ಯೋಗವು ನಮಗೆ ಕೇವಲ ಜೀವನದ ಒಂದು ಭಾಗವಲ್ಲ, ಇಂದು ಅದು ಒಂದು ಜೀವನ ವಿಧಾನವಾಗಿ ಮಾರ್ಪಟ್ಟಿದೆ ಎಂದು ಶ್ರೀ ನರೇಂದ್ರ ಮೋದಿ ಗಮನ ಸೆಳೆದರು. ಯೋಗವು ಒಂದು   ಸಮಯ ಮತ್ತು ಸ್ಥಳಕ್ಕೆ ಸೀಮಿತವಾಗಬೇಕಾಗಿಲ್ಲ ಎಂದು ಅವರು ಹೇಳಿದರು. "ನಾವು ಎಷ್ಟೇ ಒತ್ತಡದಲ್ಲಿದ್ದರೂ, ಕೆಲವು ನಿಮಿಷಗಳ ಧ್ಯಾನವು ನಮ್ಮನ್ನು ವಿಶ್ರಾಂತಿಗೊಳಿಸುತ್ತದೆ ಮತ್ತು ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಾವು ಯೋಗವನ್ನು ಹೆಚ್ಚುವರಿ ಕೆಲಸವಾಗಿ ತೆಗೆದುಕೊಳ್ಳಬೇಕಾಗಿಲ್ಲ. ನಾವು ಯೋಗವನ್ನು ಸಹ ತಿಳಿದುಕೊಳ್ಳಬೇಕು ಮತ್ತು ನಾವು ಯೋಗವನ್ನು ಸಹ ಬದುಕಬೇಕು. ನಾವು ಸಹ ಯೋಗವನ್ನು ಸಾಧಿಸಬೇಕು, ನಾವು ಯೋಗವನ್ನು ಅಳವಡಿಸಿಕೊಳ್ಳಬೇಕು. ನಾವು ಯೋಗವನ್ನು ಬದುಕಲು ಪ್ರಾರಂಭಿಸಿದಾಗ, ಯೋಗ ದಿನವು ಯೋಗವನ್ನು ಮಾಡಲು ಅಲ್ಲ, ಆದರೆ ನಮ್ಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ಆಚರಿಸಲು ನಮಗೆ ಮಾಧ್ಯಮವಾಗುತ್ತದೆ ಎಂದರು.

ಇಂದು ಯೋಗಕ್ಕೆ ಸಂಬಂಧಿಸಿದ ಅನಂತ ಸಾಧ್ಯತೆಗಳನ್ನು ಅರಿತುಕೊಳ್ಳುವ ಸಮಯವಾಗಿದೆ ಎಂದು ಪ್ರಧಾನಿ ಹೇಳಿದರು. ಇಂದು ನಮ್ಮ ಯುವಕರು ಯೋಗ ಕ್ಷೇತ್ರದಲ್ಲಿ ಹೊಸ ಆಲೋಚನೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆಯುಷ್ ಸಚಿವಾಲಯದ ಸ್ಟಾರ್ಟ್ ಅಪ್ ಯೋಗ ಚಾಲೆಂಜ್ ಬಗ್ಗೆಯೂ ಅವರು ಮಾಹಿತಿ ನೀಡಿದರು. 2021ನೇ ಸಾಲಿನ 'ಪ್ರಧಾನ ಮಂತ್ರಿ ಪ್ರಶಸ್ತಿ'ಯ ವಿಜೇತರನ್ನು ಪ್ರಧಾನಮಂತ್ರಿ ಅವರು ಯೋಗದ ಉತ್ತೇಜನ ಮತ್ತು ಅಭಿವೃದ್ಧಿಗೆ ನೀಡಿದ ಅಸಾಧಾರಣ ಕೊಡುಗೆಗಾಗಿ ಅಭಿನಂದಿಸಿದರು.

ಆಜಾದಿ ಕಾ ಅಮೃತ ಮಹೋತ್ಸವವನ್ನು 8ನೇ ಐಡಿವೈ ಆಚರಣೆಯೊಂದಿಗೆ ಸಂಯೋಜಿಸಿ, 75 ಕೇಂದ್ರ ಸಚಿವರ ನೇತೃತ್ವದಲ್ಲಿ ದೇಶಾದ್ಯಂತ 75 ಅಪ್ರತಿಮ ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ, ಜೊತೆಗೆ ಮೈಸೂರಿನಲ್ಲಿ ಪ್ರಧಾನ ಮಂತ್ರಿಯವರ ಯೋಗ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗುತ್ತಿದೆ. ವಿವಿಧ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಕಾರ್ಪೊರೇಟ್ ಮತ್ತು ಇತರ ನಾಗರಿಕ ಸಮಾಜ ಸಂಸ್ಥೆಗಳು ಯೋಗ ಪ್ರದರ್ಶನಗಳನ್ನು ನಡೆಸುತ್ತಿವೆ ಮತ್ತು ದೇಶಾದ್ಯಂತ ಕೋಟ್ಯಂತರ ಜನರು ಭಾಗವಹಿಸಲಿದ್ದಾರೆ.

ಮೈಸೂರಿನಲ್ಲಿ ಪ್ರಧಾನಮಂತ್ರಿ ಅವರ ಯೋಗ ಕಾರ್ಯಕ್ರಮವು 'ಗಾರ್ಡಿಯನ್ ಯೋಗ ರಿಂಗ್' ಎಂಬ ವಿನೂತನ ಕಾರ್ಯಕ್ರಮದ ಭಾಗವಾಗಿದೆ, ಇದು ರಾಷ್ಟ್ರೀಯ ಗಡಿಗಳನ್ನು ಮೀರಿದ ಯೋಗದ ಏಕೀಕರಣ ಶಕ್ತಿಯನ್ನು ವಿವರಿಸಲು 79 ದೇಶಗಳು ಮತ್ತು ವಿಶ್ವಸಂಸ್ಥೆಯ ಸಂಸ್ಥೆಗಳು ಮತ್ತು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ನಡುವಿನ ಸಹಯೋಗದ ವ್ಯಾಯಾಮವಾಗಿದೆ.

2015 ರಿಂದ, ಅಂತಾರಾಷ್ಟ್ರೀಯ ಯೋಗ ದಿನವನ್ನು (ಐಡಿವೈ) ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ವರ್ಷದ ಯೋಗ ದಿನದ ಥೀಮ್ "ಮಾನವೀಯತೆಗಾಗಿ ಯೋಗ". ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ದುಃಖವನ್ನು ನಿವಾರಿಸುವಲ್ಲಿ ಯೋಗವು ಮಾನವೀಯತೆಗೆ ಹೇಗೆ ಸಹಾಯ ಮಾಡಿತು ಎಂಬುದನ್ನು ಈ ವಿಷಯವು ಚಿತ್ರಿಸುತ್ತದೆ.

 

******



(Release ID: 1835768) Visitor Counter : 243