ಪ್ರಧಾನ ಮಂತ್ರಿಯವರ ಕಛೇರಿ
ಪಾವಗಡ ಬೆಟ್ಟದಲ್ಲಿ ಮರುಅಭಿವೃದ್ಧಿ ಮಾಡಲಾದ ಶ್ರೀ ಕಾಳಿಕಾ ಮಾತಾ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.
Posted On:
18 JUN 2022 3:00PM by PIB Bengaluru
ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಜೀ, ಶ್ರೀ ಕಾಳಿಕಾ ಮಾತಾಜಿ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಸುರೇಂದ್ರಭಾಯಿ ಪಟೇಲ್ ಜೀ, ರಾಜ್ಯ ಸರ್ಕಾರದ ಸಚಿವ ಭಾಯಿ ಪೂರ್ಣೇಶ್ ಮೋದಿ ಜೀ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಪೂಜ್ಯ ಸಂತರೇ, ಎಲ್ಲಾ ನಿಷ್ಠಾವಂತರೇ, ಮಹಿಳೆಯರೇ ಮತ್ತು ಮಹನೀಯರೇ!
ಬಹಳ ವರ್ಷಗಳ ನಂತರ ಪಾವಗಡ ಮಾತೆ ಕಾಳಿಯ ಪಾದಗಳಲ್ಲಿ ಕೆಲವು ಕ್ಷಣಗಳನ್ನು ಕಳೆದು ಅವರ ಆಶೀರ್ವಾದ ಪಡೆಯುವ ಭಾಗ್ಯ ಇಂದು ನನಗೆ ಸಿಕ್ಕಿದೆ. ಇದು ನನ್ನ ಜೀವನದ ಅತ್ಯಂತ ಅಪೂರ್ವ ಆಶೀರ್ವಾದ ಲಭಿಸಿದ ಕ್ಷಣ. ಒಂದು ಕನಸು ದೃಢ ನಿರ್ಧಾರವಾಗಿ, ನಿರ್ಣಯವಾಗಿ ಮಾರ್ಪಟ್ಟಾಗ ಮತ್ತು ಆ ನಿರ್ಣಯ ಸಾಧಿತವಾದಾಗ, ಅದು ಎಷ್ಟು ಸಂತೋಷವನ್ನು ನೀಡುತ್ತದೆ ಎಂಬುದನ್ನು ನೀವು ಊಹಿಸಬಹುದು. ಇಂದಿನ ಕ್ಷಣಗಳು ನನ್ನ ಹೃದಯವನ್ನು ವಿಶೇಷ ಸಂತೋಷದಿಂದ ತುಂಬುವಂತೆ ಮಾಡಿವೆ. ಐದು ಶತಮಾನಗಳ ಕಾಲ ಮತ್ತು ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಮಾ ಕಾಳಿಯ ಶಿಖರದಲ್ಲಿ ಧ್ವಜವನ್ನು ಹಾರಿಸಲಾಗಿಲ್ಲ ಎಂದರೆ ಯಾರಾದರೂ ಅದರ ಬಗ್ಗೆ ಊಹಿಸಬಹುದು. ಇಂದು ಮಾ ಕಾಳಿಯ ಮೇಲೆ ಧ್ವಜವಿದೆ. ಈ ಕ್ಷಣವು ನಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ನಮ್ಮ ಶ್ರೇಷ್ಠ ಸಂಪ್ರದಾಯ ಮತ್ತು ಸಂಸ್ಕೃತಿಗೆ ಭಕ್ತಿಭಾವದಿಂದ ಬದ್ಧವಾಗಿ ಬದುಕಲು ಪ್ರೇರಣೆಯನ್ನು ನೀಡುತ್ತದೆ. ಗುಪ್ತ ನವರಾತ್ರಿ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುತ್ತಿದೆ. ಪಾವಗಡದಲ್ಲಿರುವ ಮಾ ಕಾಳಿಯ ಈ ಶಕ್ತಿಪೀಠ ಮಹಾಕಾಳಿ ದೇವಸ್ಥಾನವು ಗುಪ್ತ ನವರಾತ್ರಿಯ ಪೂರ್ವದಲ್ಲಿ ತನ್ನ ಭವ್ಯವಾದ ಮತ್ತು ದೈವಿಕ ರೂಪದಲ್ಲಿ ನಮ್ಮ ಮುಂದೆ ನಿಂತಿದೆ. ಇದು ‘ಶಕ್ತಿ’ ಮತ್ತು ‘ಸಾಧನೆ’ಯ ವಿಶೇಷತೆ. ಅಲ್ಲಿ ಗುಪ್ತ ನವರಾತ್ರಿ ಇದೆ ಆದರೆ ‘ಶಕ್ತಿ’ ನಶಿಸುವುದಿಲ್ಲ. ನಂಬಿಕೆ, ಆಚರಣೆ ಮತ್ತು ತಪಸ್ಸು ಫಲಪ್ರದವಾದಾಗ, ಶಕ್ತಿಯು ತನ್ನ ಪೂರ್ಣ ವೈಭವದಲ್ಲಿ ಪ್ರಕಟವಾಗುತ್ತದೆ. ಪಾವಗಡದ ಮಹಾಕಾಳಿಯ ಆಶೀರ್ವಾದದಿಂದ ಗುಜರಾತ್ ಮತ್ತು ಭಾರತದ ಶಕ್ತಿಯ ಏಕೀಭವವನ್ನು ನಾವು ನೋಡುತ್ತಿದ್ದೇವೆ. ಹಲವಾರು ಶತಮಾನಗಳ ನಂತರ, ಮಹಾಕಾಳಿಯ ಈ ದೇವಾಲಯವು ಅದರ ಬೃಹತ್ ರೂಪದಲ್ಲಿ ಕಂಗೊಳಿಸುತ್ತಿರುವುದು ನಮಗೆ ಹೆಮ್ಮೆಯನ್ನುಂಟು ಮಾಡುತ್ತಿದೆ. ಶತಮಾನಗಳ ನಂತರ ಪಾವಗಡ ದೇವಾಲಯದ ಶಿಖರದಲ್ಲಿ ಇಂದು ಮತ್ತೊಮ್ಮೆ ಧ್ವಜಾರೋಹಣ ಮಾಡಲಾಗಿದೆ. ಈ ಶಿಖರ ಧ್ವಜ ನಮ್ಮ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ಸಂಕೇತ ಮಾತ್ರವಲ್ಲ! ಅದು ಶತಮಾನಗಳು ಬದಲಾದರೂ, ಯುಗಗಳು ಬದಲಾದರೂ, ನಂಬಿಕೆಯ ಶಿಖರವು ಶಾಶ್ವತವಾಗಿ ಉಳಿಯುತ್ತದೆ ಎಂಬುದರ ಸಂಕೇತವಾಗಿದೆ.
ಸಹೋದರ ಸಹೋದರಿಯರೇ,
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ರೂಪುಗೊಳ್ಳುತ್ತಿರುವುದನ್ನು ನೀವು ನೋಡಿರಬಹುದು. ಅದು ಕಾಶಿಯಲ್ಲಿರುವ ವಿಶ್ವನಾಥ ಧಾಮವಾಗಲಿ ಅಥವಾ ಕೇದಾರ್ ಬಾಬಾರ ಧಾಮವಾಗಲಿ, ಅಲ್ಲಿ ಇಂದು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸಲಾಗುತ್ತಿದೆ. ಇಂದು ನವ ಭಾರತವು ತನ್ನ ಆಧುನಿಕ ಆಶಯಗಳೊಂದಿಗೆ ತನ್ನ ಪ್ರಾಚೀನ ಪರಂಪರೆ ಮತ್ತು ಗುರುತಿಸುವಿಕೆಯೊಂದಿಗೆ ಅದೇ ಉತ್ಸಾಹದಿಂದ ಮುನ್ನಡೆಯುತ್ತಿದೆ ಮತ್ತು ಪ್ರತಿಯೊಬ್ಬ ಭಾರತೀಯರೂ ಅದರ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಈ ಆಧ್ಯಾತ್ಮಿಕ ಸ್ಥಳಗಳು ನಮ್ಮ ನಂಬಿಕೆಯ ಜೊತೆಗೆ ಹೊಸ ಸಾಧ್ಯತೆಗಳ ಮಾಧ್ಯಮಗಳಾಗುತ್ತಿವೆ. ಪಾವಗಡದಲ್ಲಿರುವ ಮಾ ಕಾಳಿಕಾ ದೇವಾಲಯದ ಮರುನಿರ್ಮಾಣವು ನಮ್ಮ ಭವ್ಯ ಪ್ರಯಾಣದ ಒಂದು ಭಾಗವಾಗಿದೆ. ಈ ಸಂದರ್ಭದಲ್ಲಿ, ಮಹಾಕಾಳಿ ಮಾತೆಯ ಪಾದಗಳಿಗೆ ಶಿರಬಾಗಿ ನಮಸ್ಕರಿಸುತ್ತಾ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಂದಿನ ಸಂದರ್ಭವು ‘ಸಬ್ಕಾ ಸಾಥ್’, ‘ಸಬ್ಕಾ ವಿಶ್ವಾಸ’ ಮತ್ತು ‘ಸಬ್ಕಾ ಪ್ರಯಾಸ್’ಗಳ ಸಂಕೇತವಾಗಿದೆ.
ಸ್ನೇಹಿತರೇ,
ಶ್ರೀ ಮಾತೆ ಕಾಳಿಕಾ ಮಂದಿರದಲ್ಲಿ ಧ್ವಜಾರೋಹಣ ಮಾಡಿ ಪೂಜೆ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಕಾಳಿಯ ದರ್ಶನ ಪಡೆದಾಗ, ಇಂದು ಮಾತೆಯ ಪಾದದ ಬಳಿ ಇರುವಾಗ ನಾನು ಏನು ಕೇಳಬೇಕೆಂದು ಯೋಚಿಸುತ್ತಿದ್ದೆ. ಸ್ವಾಮಿ ವಿವೇಕಾನಂದರು ಮಾತೆ ಕಾಳಿಯ ಆಶೀರ್ವಾದ ಪಡೆದು ಜನಸೇವೆಯಲ್ಲಿ ಮಗ್ನರಾಗಿದ್ದರು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ತಾಯಿ, ನನಗೆ ಕೂಡಾ ಆಶೀರ್ವದಿಸಿ, ಇದರಿಂದ ನಾನು ದೇಶದ ಜನರಿಗೆ ಅವರ ‘ಸೇವಕ’ನಾಗಿ ಹೆಚ್ಚು ಶಕ್ತಿ, ತ್ಯಾಗ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬಹುದು. ನನ್ನಲ್ಲಿ ಏನೇ ಶಕ್ತಿ ಇದ್ದರೂ, ನನ್ನ ಜೀವನದಲ್ಲಿ ಏನೇ ಮೌಲ್ಯ, ಸದ್ಗುಣಗಳಿದ್ದರೂ, ನಾನು ಅವುಗಳನ್ನು ತಾಯಂದಿರು ಮತ್ತು ಸಹೋದರಿಯರ ಹಾಗು ದೇಶದ ಕಲ್ಯಾಣಕ್ಕಾಗಿ ಮುಡಿಪಾಗಿಡುವುದನ್ನು ಮುಂದುವರಿಸಬೇಕು.
ನಾನು ಇಂದು ಮಾ ಕಾಳಿಯ ಪಾದಗಳಲ್ಲಿ ಮತ್ತು ಗುಜರಾತ್‌ನ ಈ ವೈಭವಯುಕ್ತ ಭವ್ಯ ಭೂಮಿಯಿಂದ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಹ ನೆನಪಿಸಿಕೊಳ್ಳುತ್ತೇನೆ.
ಸ್ನೇಹಿತರೇ,
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಗುಜರಾತ್ ಎಷ್ಟು ಕೊಡುಗೆ ನೀಡಿದೆಯೋ, ದೇಶದ ಅಭಿವೃದ್ಧಿಗೂ ಅಷ್ಟೇ ಕೊಡುಗೆ ನೀಡಿದೆ. ಭಾರತದ ಹೆಮ್ಮೆ ಮತ್ತು ಭವ್ಯತೆಗೆ ಗುಜರಾತ್ ಸಮಾನಾರ್ಥಕವಾಗಿದೆ. ಗುಜರಾತ್ ಭಾರತದ ವ್ಯಾಪಾರದ ನಾಯಕತ್ವವನ್ನು ವಹಿಸಿತು ಮತ್ತು ಭಾರತದ ಆಧ್ಯಾತ್ಮವನ್ನು ಕಾಪಿಡುವುದಕ್ಕೂ ತನ್ನಿಂದಾಗುವ ಅತ್ಯುತ್ತಮ ಪ್ರಯತ್ನವನ್ನೂ ಮಾಡಿತು.
ಶತಮಾನಗಳ ಹೋರಾಟದ ನಂತರ ಭಾರತ ಸ್ವತಂತ್ರವಾದಾಗ, ನಾವು ಗುಲಾಮಗಿರಿ ಮತ್ತು ದೌರ್ಜನ್ಯದ ಗಾಯಗಳಿಂದ ಬಳಲುತ್ತಿದ್ದೆವು. ನಮ್ಮ ಅಸ್ತಿತ್ವವನ್ನು ಮರುಸ್ಥಾಪಿಸಬೇಕಾದ ಸವಾಲು ನಮ್ಮೆದುರು ಇತ್ತು. ಭಾರತದ ಈ ಸಾಂಸ್ಕೃತಿಕ ಸ್ವಾತಂತ್ರ್ಯವೂ ಗುಜರಾತ್‌ನಿಂದಲೇ ಸರ್ದಾರ್ ಸಾಹೇಬರ ನೇತೃತ್ವದಲ್ಲಿ ಆರಂಭವಾಯಿತು. ಸೋಮನಾಥ ದೇವಾಲಯದ ಮರುನಿರ್ಮಾಣವು ಒಂದು ರೀತಿಯಲ್ಲಿ ರಾಷ್ಟ್ರವನ್ನು ಮರುನಿರ್ಮಾಣ ಮಾಡುವ ನಿಟ್ಟಿನಲ್ಲಿ ಒಂದು ದೃಢಸಂಕಲ್ಪದಂತಿತ್ತು.
ಇಡೀ ದೇಶದಲ್ಲಿ ಗುಜರಾತ್‌ಗೆ ಗುರುತಿಸುವಿಕೆಯ ಮನ್ನಣೆ ನೀಡಿದ್ದ ಸೋಮನಾಥ ಸಂಪ್ರದಾಯವನ್ನು ಪಾವಗಡ ಮತ್ತು ಪಂಚಮಹಲ್ ಇಂದು ಮುಂದುವರೆಸಿಕೊಂಡು ಹೋಗುತ್ತಿವೆ. ಇಂದು ಅರಳಿಸಿರುವ ಧ್ವಜವು ಮಹಾಕಾಳಿ ದೇವಸ್ಥಾನದ ಧ್ವಜ ಮಾತ್ರವಲ್ಲ, ಗುಜರಾತ್ ಮತ್ತು ದೇಶದ ಸಾಂಸ್ಕೃತಿಕ ಹೆಮ್ಮೆಯ ಧ್ವಜವಾಗಿದೆ. ಪಂಚಮಹಲ್ ಮತ್ತು ಗುಜರಾತಿನ ಜನರು ಶತಮಾನಗಳಿಂದಲೂ ಈ ದೇವಾಲಯದ ವೈಭವಕ್ಕಾಗಿ ಶ್ರಮಿಸಿದರು. ಈ ಚಿನ್ನದ ಕಲಶದಿಂದ ಈ ದೇವಾಲಯಕ್ಕೆ ಸಂಬಂಧಿಸಿದ ಆ ಕನಸು ನನಸಾಗಿದೆ. ಇಂದು ಪಾವಗಡ ಮತ್ತು ಪಂಚಮಹಲ್ ನ ತಪಸ್ಸು ಸಾಕಾರಗೊಂಡಿದೆ.
ನನಗೆ ಈಗ ಈ ಪದ್ಧತಿಯ ಬಗ್ಗೆ ಹೆಚ್ಚು ತಿಳಿದಿಲ್ಲ, ಆದರೆ ಹಿಂದಿನ ಕಾಲದಲ್ಲಿ, ಪಂಚಮಹಲ್ ಮತ್ತು ಈ ಪ್ರದೇಶದ ನಿಷ್ಠಾವಂತ ಭಕ್ತರು ಮಾ ಕಾಳಿಯ ಪಾದಗಳ ಎದುರು ಮದುವೆಯ ಆಮಂತ್ರಣ ಪತ್ರವನ್ನು ಇಡುತ್ತಿದ್ದರು. ದೇವಾಲಯದ ಅರ್ಚಕರು ಸಂಜೆಯ ಪ್ರಾರ್ಥನೆಯ ನಂತರ ಮಾ ಕಾಳಿಗೆ ಆ ಆಮಂತ್ರಣ ಪತ್ರಗಳನ್ನು ಓದುತ್ತಿದ್ದರು. ಅವುಗಳನ್ನು ಭಕ್ತಿಯಿಂದ ಓದಲಾಗುತ್ತಿತ್ತು. ಈಗಲೂ ಈ ಪದ್ಧತಿ ಮುಂದುವರಿದಿದೆ ಎಂದು ಸುರೇಂದ್ರ ಕಾಕಾ ಹೇಳುತ್ತಾರೆ.
ಆಮಂತ್ರಣ ಪತ್ರಗಳನ್ನು ಕಳುಹಿಸಿದವರಿಗೆ ದೇವಾಲಯವು ನಂತರ ಮಾ ಕಾಳಿಯ ಆಶೀರ್ವಾದದೊಂದಿಗೆ ಉಡುಗೊರೆಯನ್ನು ಕಳುಹಿಸುತ್ತಿತ್ತು. ಎಂತಹ ದೊಡ್ಡ, ಶ್ರೇಷ್ಟ ಆಶೀರ್ವಾದ!. ಮತ್ತು ಈ ಸಂಪ್ರದಾಯವು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ತಾಯಿ ನಮಗೆ ದೊಡ್ಡ ಉಡುಗೊರೆ ನೀಡಿದ್ದಾರೆ. ಶಕ್ತಿಯ ಆರಾಧಕರಿಗೆ ತಾಯಿಯ ಪ್ರಾಂಗಣಗಳ ಜೀರ್ಣೋದ್ಧಾರ ಮತ್ತು ಧ್ವಜಾರೋಹಣಕ್ಕಿಂತ ದೊಡ್ಡ ಕೊಡುಗೆ ಯಾವುದಿದ್ದೀತು. ಮತ್ತು ತಾಯಿಯ ಆಶೀರ್ವಾದವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ.
ಶ್ರೀ ಕಾಳಿಕಾ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಉಪಕ್ರಮಗಳಲ್ಲಿ ಒಂದು ಪ್ರಮುಖ ಸಂಗತಿ ಇದೆ. ಮಹಾಕಾಳಿ ದೇವಾಲಯಕ್ಕೆ ಭವ್ಯವಾದ ಆಕಾರವನ್ನು ನೀಡುವಾಗ ಗರ್ಭಗುಡಿಯನ್ನು ಮೊದಲಿದ್ದಂತೆಯೇ ಇರಿಸಲಾಗಿದೆ. ಗುಜರಾತ್ ಸರ್ಕಾರ, ಪವಿತ್ರ ಯಾತ್ರಾ ಧಾಮ ವಿಕಾಸ್ ಮಂಡಳಿ ಮತ್ತು ಟ್ರಸ್ಟಿಗಳು ಈ ಸೇವಾ ಯಜ್ಞದಲ್ಲಿ ಒಟ್ಟಾಗಿ ಕೆಲಸ ಮಾಡಿದರು. ದುಧಿಯಾ ತಾಲಾಬ್ ಮತ್ತು ಛಾಸಿಯಾ ತಾಲಾಬ್ ಗಳನ್ನು ಸಂಪರ್ಕಿಸುವ 'ಪರಿಕ್ರಮ ಪಥ'ವನ್ನು ಇಡೀ ದೇವಾಲಯದ ಸಂಕೀರ್ಣವನ್ನು ಪ್ರದಕ್ಷಿಣೆ ಮಾಡಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗುವುದು ಎಂದು ಸುರೇಂದ್ರಭಾಯಿ ಅವರು ನನಗೆ ಹೇಳಿದ್ದಾರೆ. ಪ್ರವಾಸಿಗರಿಗಾಗಿ ಯಜ್ಞಶಾಲೆ, ಭೋಜನಶಾಲೆ, ಭಕ್ತಿ ನಿವಾಸದಂತಹ ಸೌಲಭ್ಯಗಳು ಮತ್ತು ಛಾಸಿಯಾ ಸರೋವರದಿಂದ ಮಾತಾಜಿ ದೇವಸ್ಥಾನಕ್ಕೆ ಲಿಫ್ಟ್ ಸಹ ನಿರ್ಮಿಸಲಾಗುವುದು. ಇದರೊಂದಿಗೆ ಮಂಚಿ ಬಳಿ ಅತಿಥಿ ಗೃಹ ಮತ್ತು ಬಹುಮಹಡಿ (ಮಲ್ಟಿಲೆವೆಲ್) ಪಾರ್ಕಿಂಗ್ ಕೂಡ ನಿರ್ಮಾಣವಾಗಲಿದೆ.
ಮೊದಲು ಇಲ್ಲಿಗೆ ಭಕ್ತರು ತಲುಪಲು ಹಲವು ಗಂಟೆಗಳು ಬೇಕಾಗುತ್ತಿತ್ತು. ಮೆಟ್ಟಿಲುಗಳನ್ನು ಹತ್ತುವಾಗ ಹಲವಾರು ಕಷ್ಟಗಳನ್ನು ಅನುಭವಿಸಬೇಕಾಗುತ್ತಿತ್ತು. ಈ ಹಿಂದೆ ದೇವಸ್ಥಾನಕ್ಕೆ ಭೇಟಿ ನೀಡಿದವರಿಗೆ ಮೆಟ್ಟಿಲುಗಳ ಸ್ಥಿತಿಗತಿ ಗೊತ್ತು. ಈಗ ಮೆಟ್ಟಿಲುಗಳನ್ನು ಚೆನ್ನಾಗಿ ಸಿದ್ಧಪಡಿಸಲಾಗಿದೆ. ಈಗ ದೇವಾಲಯದ ಕಡೆಗೆ ಮೆಟ್ಟಿಲುಗಳನ್ನು ಉತ್ತಮವಾದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಮೆಟ್ಟಿಲುಗಳ ಎತ್ತರವೂ ಹೆಚ್ಚಿಲ್ಲದಿರುವುದರಿಂದ ಅವುಗಳನ್ನು ಹತ್ತುವಾಗ ಜನರಿಗೆ ಯಾವುದೇ ತೊಂದರೆಯಾಗಲಾರದು. ಈ ಹಿಂದೆ ಎರಡು ಡಜನ್ ಜನರಿಗೂ ಕೂಡ ಒಟ್ಟಿಗೆ ದೇವಸ್ಥಾನದ ಆವರಣವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಇಂದು ನೂರಕ್ಕೂ ಹೆಚ್ಚು ಜನರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಬಹುದು. ಜನಸಂದಣಿಯ ಹೊರೆ ಕಡಿಮೆಯಾಗಿದೆ ಜೊತೆಗೆ ಭಕ್ತರಿಗೆ, ಆಸ್ತಿಕರಿಗೆ ಭದ್ರತೆಯೂ ಹೆಚ್ಚಿದೆ. ಕಾಲ್ತುಳಿತದ ಘಟನೆಗಳ ಬಗ್ಗೆ ನಾವು ಎಚ್ಚರದಿಂದಿರಬೇಕು. ದೇವಾಲಯದ ಸಂಕೀರ್ಣ ವಿಸ್ತರಣೆಯೊಂದಿಗೆ, ಪ್ರಯಾಣಿಕರ ಸಂಖ್ಯೆ ಬಹುಶಃ ಹೆಚ್ಚಾಗಬಹುದು. ಆ ಎಲ್ಲ ವ್ಯವಸ್ಥೆಗಳ ಬಗ್ಗೆ ಗಮನಹರಿಸುತ್ತಲೇ ಇರಬೇಕಾಗುತ್ತದೆ. ಮತ್ತು ದೇವಸ್ಥಾನಕ್ಕೆ ಹೋಗುವ ಮಾರ್ಗವು ಪ್ರಯಾಸದಾಯಕವಾಗಿರುವುದರಿಂದ ಅವಘಡಗಳನ್ನು ತಪ್ಪಿಸಲು ಎಲ್ಲಾ ಕಾಳಿ ಭಕ್ತರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ನಾನು ಪ್ರಾರ್ಥಿಸುತ್ತೇನೆ. ಈ ಹಿಂದೆ ನಡೆದ ಅನೇಕ ಅವಘಡಗಳು ಆತಂಕಕ್ಕೆ ಕಾರಣವಾಗಿದ್ದವು, ಆದರೆ ತಾಯಿಯ ಆಶೀರ್ವಾದದಿಂದ ಅಲ್ಲಿ ಸಹಜ ಸ್ಥಿತಿ ಮರಳಿದೆ. ಆದುದರಿಂದ ಪ್ರತಿಯೊಬ್ಬರೂ ಶಿಸ್ತನ್ನು ಪಾಲಿಸಬೇಕೆಂದು ನಾನು ಬಯಸುತ್ತೇನೆ ಏಕೆಂದರೆ ಇದು ಪ್ರಯಾಸಕರ ಪ್ರಯಾಣವಾಗಿದೆ ಮತ್ತು ಇದು ತುಂಬಾ ಎತ್ತರದಲ್ಲಿದೆ. ಇಲ್ಲಿ ಕಷ್ಟಗಳನ್ನು ನಿಭಾಯಿಸುತ್ತ ಸಾಗಬೇಕು. ಹಾಗಾಗಿ ಶಿಸ್ತನ್ನು ಕಾಯ್ದುಕೊಂಡರೆ ಪ್ರಯಾಣ ಸುಗಮವಾಗುವುದಲ್ಲದೆ ನಮಗೆ ತಾಯಿಯ ಆಶೀರ್ವಾದವೂ ಸಿಗುತ್ತದೆ. ಬೆಟ್ಟದ ಮೇಲಿರುವ ದುಧಿಯಾ ತಾಲಾಬ್ ನ್ನು ಕೂಡಾ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕೊಳದ ಸುತ್ತಲೂ ‘ಪರಿಕ್ರಮ’ (ವೃತ್ತಾಕಾರದ ಮಾರ್ಗ) ಮಾಡಲಾಗಿದೆ. ಇದರಿಂದ ಜನರಿಗೆ ಅನುಕೂಲವೂ ಆಗಿದೆ.
ಮಾತೆ ಮಹಾಕಾಳಿಯ ಆಶೀರ್ವಾದವನ್ನು ಮತ್ತೆ ಮತ್ತೆ ಪಡೆಯಲು ಅವಳ ಪಾದಗಳ ಬಳಿಗೆ ಬರಬೇಕೆಂಬಾಸೆ ಸಹಜ. ಆದರೆ, ಮೊದಲು ಪಾವಗಡಕ್ಕೆ ಪ್ರಯಾಣವು ತುಂಬಾ ಕಷ್ಟಕರವಾಗಿತ್ತು. ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ದೇವಾಲಯಕ್ಕೆ ಭೇಟಿ ನೀಡುವಂತಾದರೆ ಸಾಕು ಎಂದು ಭಾವಿಸುತ್ತಿದ್ದರು. ಈಗ ಸೌಲಭ್ಯಗಳ ಹೆಚ್ಚಳದಿಂದ ದೇವಸ್ಥಾನಕ್ಕೆ ಭೇಟಿ ನೀಡುವುದು ಸುಲಭವಾಗಿದೆ. ತಾಯಂದಿರು, ಸಹೋದರಿಯರು, ಹಿರಿಯರು, ಮಕ್ಕಳು, ಯುವಜನರು ಮತ್ತು ದಿವ್ಯಾಂಗರು ಈಗ ಸುಲಭವಾಗಿ ತಾಯಿಯ ಆಶೀರ್ವಾದವನ್ನು ಪಡೆಯಬಹುದು.
ನಾನೇ ಇಲ್ಲಿಗೆ ಬರಲು ರೋಪ್ ವೇ ಬಳಸಿದ್ದೆ. ರೋಪ್‌ವೇ ಈ ಪ್ರಯಾಣವನ್ನು ಸುಲಭಗೊಳಿಸಿದೆ, ಮಾತ್ರವಲ್ಲ ಪಾವಗಡದ ರಮಣೀಯ ಸೌಂದರ್ಯವನ್ನು ಆಸ್ವಾದಿಸುವುದಕ್ಕೂ ಇದರಿಂದ ಸಾಧ್ಯವಾಗಿದೆ. ಇಂದು ಗುಜರಾತಿನ ಅನೇಕ ಯಾತ್ರಾಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳನ್ನು ಇಂತಹ ರೋಪ್‌ವೇಗಳ ಮೂಲಕ ಜೋಡಿಸಲಾಗುತ್ತಿದೆ. ಪಾವಗಡ, ಸಪುಟಾರ, ಅಂಬಾಜಿ, ಗಿರ್ನಾರ್‌ಗಳಲ್ಲಿ ರೋಪ್‌ವೇ ಇರುವುದರಿಂದ ಜನರಿಗೆ ಸಾಕಷ್ಟು ಅನುಕೂಲಗಳು ಲಭ್ಯವಾಗುತ್ತಿವೆ.
ಪಾವಗಡ, ಮಾ ಅಂಬಾ, ಸೋಮನಾಥ ಮತ್ತು ದ್ವಾರಕೇಶ್ ಅವರ ಆಶೀರ್ವಾದದಿಂದ ಗುಜರಾತ್ ರಾಜ್ಯವು ಗರ್ವಿ (ವೈಭವಯುತ ಭವ್ಯ) ಗುಜರಾತ್ ಆಗಿದೆ. ಗುಜರಾತಿನ ಸಾಂಸ್ಕೃತಿಕ ವೈಭವವನ್ನು ವಿವರಿಸುವಾಗ ಮಹಾಕವಿ ನರ್ಮದ್ ಬರೆದಿದ್ದಾರೆ-
उत्तरमां अंबा मात, पूरवमां काली मात। छे दक्षिण दिशामां करता रक्षा, कुंतेश्वर महादेव। ने सोमनाथ ने द्वारकेश ए, पश्विम केरा देव छे सहायमां साक्षात, जय जय गरवी गुजरात।
ಉತ್ತರದಲ್ಲಿ ಮಾತಾ ಅಂಬಾ, ಪೂರ್ವದಲ್ಲಿ ಕಾಳಿ ಮಾ, ದಕ್ಷಿಣದಲ್ಲಿ ಕುಂಟೇಶ್ವರ ಮಹಾದೇವ ರಕ್ಷಣೆ ಮಾಡುತ್ತಿದ್ದಾರೆ, ಸೋಮನಾಥ ಮತ್ತು ದ್ವಾರಕೇಶ್ ಪಶ್ಚಿಮದ ದೇವರುಗಳು ಮತ್ತು ಸಹಾಯಕ್ಕಾಗಿ ಜೈ ಜೈ ಗರ್ವಿ ಗುಜರಾತ್ ...)
ಇಂದು ಗುಜರಾತಿನ ಈ ಅಸ್ಮಿತೆ ಆಗಸ ಮುಟ್ಟುತ್ತಿದೆ.
ಕವಿ ನರ್ಮದ್ ಅವರು ಗುಜರಾತ್‌ನ ಅಸ್ಮಿತೆ ಎಂದು ಹೆಸರಿಸಿದ ಸಾಂಸ್ಕೃತಿಕ ಕೇಂದ್ರಗಳು ಹೊಸ ಅಭಿವೃದ್ಧಿ ಪಯಣದಲ್ಲಿ ಮುನ್ನಡೆಯುತ್ತಿವೆ. ನಂಬಿಕೆಯ ಜೊತೆಗೆ ತೀರ್ಥಕ್ಷೇತ್ರಗಳು ಮತ್ತು ದೇವಾಲಯಗಳ ಅಭಿವೃದ್ಧಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಎಲ್ಲಾ ದೇಗುಲಗಳಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗ ಗುಜರಾತಿನ ಯಾತ್ರೆಗಳಲ್ಲಿ ದೈವಿಕತೆ, ಶಾಂತಿ, ಪರಿಹಾರ, ನೆಮ್ಮದಿ ಇದೆ. ಇದಕ್ಕಿಂತ ದೊಡ್ಡ ಸಂತೋಷ ಬೇರೇನಿದೆ?
ಮಾತೆಯ ದೇವಾಲಯಗಳು ಮತ್ತು ಶಕ್ತಿಯ ಶಕ್ತಿ ಬಗ್ಗೆ ನಾವು ಮಾತನಾಡುವುದಾದರೆ, ಗುಜರಾತ್‌ನಲ್ಲಿ ಮಾತಾ ಶಕ್ತಿಯನ್ನು ಪೂಜಿಸುವ ಭಕ್ತರಿಗೆ ಸಂಪೂರ್ಣ ಶಕ್ತಿ ಚಕ್ರದ ಆಶೀರ್ವಾದವಿದೆ. ಗುಜರಾತಿನ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿರುವ ‘ಶಕ್ತಿ ರಕ್ಷಾ ಚಕ್ರ’ ಇದೆ. ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ಇರುವ ಮಾತೆಯರು ನಿರಂತರವಾಗಿ ಗುಜರಾತ್ ನ್ನು ಆಶೀರ್ವದಿಸುತ್ತಿರುತ್ತಾರೆ ಮತ್ತು ರಕ್ಷಿಸುತ್ತಾರೆ. ಬನಸ್ಕಾಂತದಲ್ಲಿ ಅಂಬಾ ಜೀ, ಪಾವಗಡದಲ್ಲಿ ಮಾ ಕಾಳಿ, ಚೋಟಿಲಾದಲ್ಲಿ ಚಾಮುಂಡಾ ಮಾ, ಉಂಝಾದಲ್ಲಿ ಉಮಿಯಾ ಮಾ, ಕಚ್ ನಲ್ಲಿ ಅಸಾಪುರ ಮಾತೆ, ನವಸಾರಿ ಬಳಿ ಉನೈ ಮಾತಾ, ದೇಡಿಯಾಪದ ಬಳಿ ದೇವಮೊಗ್ರ ಮಾತಾ, ಭಾವನಗರ ಬಳಿಯ ಮಾತೆಲ್‌ನಲ್ಲಿ ಖೋಡಿಯಾರ್ ಮಾತೆ, ಮೆಹ್ಸಾನಾದಲ್ಲಿ ಬಹುಚರ ಮಾತಾ ಜೀ ಮತ್ತು ನಂತರ ಖೋಡಲ್ಧಾಮ್, ಯುನಿಯಾಧಾಮ್ ಮತ್ತು ಗಿರ್ನಾರ್ ಮೇಲೆ ಅಂಬಾ ಮಾ ಇದ್ದಾರೆ. ಪ್ರತಿಯೊಂದು ಮೂಲೆಯಲ್ಲೂ ಅನೇಕ ಮಾತಾ ದೇವಿಯರು ಇದ್ದಾರೆ. ನಾವು ನಿರಂತರವಾಗಿ ಆಶೀರ್ವದಿಸಲ್ಪಟ್ಟಿದ್ದೇವೆ ಮತ್ತು ನಮಗೆ ಶಕ್ತಿಯ ಆಶೀರ್ವಾದವಿದೆ ಎಂದು ನಾವು ಹೇಳಬಹುದು.
ಅಂಬಾಜಿ ಗಬ್ಬರ್ ಬೆಟ್ಟದ ತಪ್ಪಲಿನಲ್ಲಿ 3ಡಿ ವಿಡಿಯೋ ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನ ಆರಂಭವಾಗಿದೆ ಎಂದು ನಮ್ಮ ಭೂಪೇಂದ್ರಭಾಯಿ ಈಗಷ್ಟೇ ವಿವರಿಸುತ್ತಿದ್ದರು. ‘ಮಹಾ ಆರತಿ’ ಕೂಡ ಆರಂಭವಾಗಿದೆ. ಕೇಂದ್ರದ ಪ್ರಸಾದ ಯೋಜನೆಯಡಿ ಗಬ್ಬರ್ ದೇಗುಲವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಅಂಬಾಜಿ ದೇಗುಲ ಸಂಕೀರ್ಣದ ಅಭಿವೃದ್ಧಿಯ ಕಾಮಗಾರಿಯೂ ನಡೆಯುತ್ತಿದೆ. ಕೋಟೇಶ್ವರ ಮಹಾದೇವ ದೇವಸ್ಥಾನ, ರಿಂಚಾಡಿಯ ಮಹಾದೇವ ದೇವಸ್ಥಾನದಂತಹ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯನ್ನೂ ಮಾಡಲಾಗುತ್ತಿದೆ.
ಬಹಳ ಹಿಂದೇನಲ್ಲ, ಇತ್ತೀಚೆಗಷ್ಟೇ ಸೋಮನಾಥ ದೇಗುಲದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡುವ ಅವಕಾಶವೂ ನನಗೆ ದೊರಕಿತ್ತು. ದ್ವಾರಕಾದಲ್ಲಿ ಘಾಟ್‌ಗಳು, ದೇವಾಲಯಗಳ ಸೌಂದರ್ಯೀಕರಣ ಮತ್ತು ಪ್ರಯಾಣಿಕರ ಸೌಕರ್ಯಗಳ ಸುಧಾರಣೆ ಪೂರ್ಣಗೊಂಡಿದೆ. ಪಂಚಮಹಲ್‌ನ ಜನರು ಹೊರಗಿನಿಂದ ಬರುವ ಭಕ್ತರಿಗೆ ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಹೇಳಬೇಕೆಂದು ನಾನು ವಿನಂತಿಸುತ್ತೇನೆ. ಭಗವಾನ್ ಕೃಷ್ಣ ಮತ್ತು ಮಾ ರುಕ್ಮಿಣಿ ವಿವಾಹವಾದ ಮಾಧವಪುರದಲ್ಲಿ ರುಕ್ಮಿಣಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುವುದು. ಭೂಪೇಂದ್ರಭಾಯಿಯವರು ಹೇಳಿದಂತೆ ನಮ್ಮ ರಾಷ್ಟ್ರಪತಿಗಳು ಮಾಧವಪುರ ಘೇಡ್ ಮೇಳವನ್ನು ಉದ್ಘಾಟಿಸಲು ಇಲ್ಲಿಗೆ ಬಂದಿದ್ದರು.
ತೀರ್ಥಯಾತ್ರೆಗಳ, ತೀರ್ಥಕ್ಷೇತ್ರಗಳ ಅಭಿವೃದ್ಧಿ ಕೇವಲ ನಂಬಿಕೆಯ ವಿಷಯಕ್ಕೆ ಸೀಮಿತವಾಗಿಲ್ಲ, ಆದರೆ ನಮ್ಮ ಯಾತ್ರೆಗಳು ಸಮಾಜದ ಚಲನಶೀಲತೆ ಮತ್ತು ರಾಷ್ಟ್ರದ ಏಕತೆಯ ಅತ್ಯಂತ ಪ್ರಮುಖ ಜೀವಂತ ಸಂಕೇತಗಳಾಗಿವೆ. ಈ ತೀರ್ಥಯಾತ್ರೆಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡುವ ಭಕ್ತರು ತಮ್ಮೊಂದಿಗೆ ಅನೇಕ ಹೊಸ ಅವಕಾಶಗಳನ್ನು ತರುತ್ತಾರೆ. ಯಾವುದೇ ಪ್ರದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ, ಉದ್ಯೋಗವೂ ಹೆಚ್ಚಾಗುತ್ತದೆ ಮತ್ತು ಮೂಲಸೌಕರ್ಯವೂ ಸಹ ಅಭಿವೃದ್ಧಿಗೊಳ್ಳುತ್ತದೆ. ನಾವು ನಮ್ಮ ಯಾತ್ರಾರ್ಥಿಗಳಿಗೆ ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುವುದು ಮಾತ್ರವಲ್ಲ, ಕಲೆಗಳು, ಕೌಶಲ್ಯಗಳು ಮತ್ತು ಕರಕುಶಲಗಳಿಗೂ ಉತ್ತೇಜನ ದೊರೆಯುತ್ತದೆ. ಕೆವಾಡಿಯಾ ಏಕತಾ ನಗರದ ಏಕತಾ ಪ್ರತಿಮೆ ನಿರ್ಮಾಣವಾದ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ ಎಂಬುದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಇಂದು, ಇದು ವಿಶ್ವದ ಪ್ರಮುಖ ತಾಣವಾಗಿ ಹೆಸರುವಾಸಿಯಾಗಿದೆ. ವಿಶ್ವದ ನಕಾಶೆಯಲ್ಲಿಯೂ ಸ್ಥಾನ ಗಳಿಸಿದೆ. ಅದೇ ರೀತಿ, ಕಾಶಿ ವಿಶ್ವನಾಥ ಧಾಮ ಮತ್ತು ಚಾರ್ ಧಾಮ್ ಯಾತ್ರೆಯಲ್ಲಿ ಭಕ್ತರ ಸಂಖ್ಯೆಯೂ ಹೊಸ ದಾಖಲೆಗಳನ್ನು ಮಾಡುತ್ತಿದೆ. ಅಲ್ಲಿ ಸೌಲಭ್ಯಗಳನ್ನು ನವೀಕರಿಸಲಾಗಿದೆ. ಈ ಬಾರಿ ಕೇದಾರನಾಥಕ್ಕೆ ಯಾತ್ರಿಕರು ಬಹು ಸಂಖ್ಯೆಯಲ್ಲಿ ಆಗಮಿಸಿದ್ದು, ಅದು ಎಲ್ಲಾ ದಾಖಲೆಗಳನ್ನು ಮುರಿದಿದೆ.
ಪಾವಗಡದ ಅಭಿವೃದ್ಧಿಯೊಂದಿಗೆ, ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತದೆ ಮತ್ತು ಇದು ವಡೋದರಾ ಮತ್ತು ಪಂಚಮಹಲ್‌ನ ಅರಣ್ಯ ವಲಯದಲ್ಲಿರುವ ನಮ್ಮ ಬುಡಕಟ್ಟು ಸಹೋದರ ಸಹೋದರಿಯರಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸಲಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ವಿರಾಸತ್ ವನಕ್ಕೂ ಹೋಗುತ್ತಾರೆ. ವಿರಾಸತ್ ವನ್ ಪ್ರಕೃತಿ, ಪರಿಸರ, ಸಂಪ್ರದಾಯ ಮತ್ತು ಆಯುರ್ವೇದದಂತಹ ವಿಷಯಗಳಿಗೆ ಸಂಬಂಧಿಸಿ ಬಹಳ ದೊಡ್ಡ ಆಕರ್ಷಣೆಯ ಕೇಂದ್ರ ಮತ್ತು ಸ್ಫೂರ್ತಿಯ ಕೇಂದ್ರವಾಗಬಲ್ಲುದು. ಅದೇ ರೀತಿ ಪ್ರಾಚ್ಯವಸ್ತುಗಳ ಪಾರ್ಕ್ ಮತ್ತು ಪಾವಗಡ ಕೋಟೆಯ ಜನಾಕರ್ಷಣೆಯೂ ಹೆಚ್ಚಾಗಲಿದೆ. ಈ ಅಭಿವೃದ್ಧಿ ಕಾರ್ಯಗಳು ಪಂಚಮಹಲ್ ಪ್ರದೇಶವು ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಲು ಸಹಾಯ ಮಾಡುತ್ತವೆ.
ಪಾವಗಡದಲ್ಲಿ ಅಧ್ಯಾತ್ಮದ ಜತೆಗೆ ಇತಿಹಾಸ, ಪ್ರಕೃತಿ, ಕಲೆ, ಸಂಸ್ಕೃತಿಯೂ ಇದೆ. ಇಲ್ಲಿ ಒಂದು ಬದಿಯಲ್ಲಿ ಮಾ ಮಹಾಕಾಳಿಯ ಶಕ್ತಿಪೀಠವಿದ್ದು, ಇನ್ನೊಂದು ಬದಿಯಲ್ಲಿ ಪಾರಂಪರಿಕ ಜೈನ ದೇವಾಲಯವೂ ಇದೆ. ಅಂದರೆ ಪಾವಗಡವು ಒಂದು ರೀತಿಯಲ್ಲಿ ಭಾರತದ ಐತಿಹಾಸಿಕ ವೈವಿಧ್ಯತೆಯೊಂದಿಗೆ ಸರ್ವಧರ್ಮ ಸಮನ್ವಯದ ಕೇಂದ್ರವಾಗಿದೆ. ಚಂಪನೇರ್‌ನ ಪ್ರಾಚ್ಯವಸ್ತುಗಳ ನಿವೇಶನವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದೆ. ಇಲ್ಲಿ ಹೆಚ್ಚುತ್ತಿರುವ ಪ್ರವಾಸೋದ್ಯಮವು ಈ ಸ್ಥಳದ ಗುರುತಿಸುವಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಪಂಚಮಹಲ್‌ನಲ್ಲಿ ಪ್ರವಾಸೋದ್ಯಮದ ಸಾಧ್ಯತೆಗಳ ಜೊತೆಗೆ, ಇಲ್ಲಿಯ ಯುವಕರಿಗೆ ಹೆಚ್ಚಿನ ಸಂಖ್ಯೆಯ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ ನಮ್ಮ ಬುಡಕಟ್ಟು ಸಹೋದರ ಸಹೋದರಿಯರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ಬುಡಕಟ್ಟು ಸಮಾಜದ ಕಲೆ-ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕೌಶಲ್ಯಗಳು ಕೂಡ ಹೊಸ ಗುರುತಿಸುವಿಕೆಯನ್ನು ಗಳಿಸಲಿವೆ.
ಮತ್ತು ನಮ್ಮ ಪಂಚಮಹಲ್ ಪ್ರದೇಶವು ಬೈಜು ಬಾವ್ರಾ ಅವರಂತಹ ಶ್ರೇಷ್ಠ ಗಾಯಕರ ನಾಡು. ಆ ಪ್ರತಿಭೆ ಇಂದಿಗೂ ಇಲ್ಲಿಯ ಮಣ್ಣಿನಲ್ಲಿದೆ. ಎಲ್ಲೆಲ್ಲಿ ಪರಂಪರೆ, ಅರಣ್ಯ ಮತ್ತು ಸಂಸ್ಕೃತಿ ಬಲಗೊಳ್ಳುತ್ತದೋ ಅಲ್ಲಿ ಕಲೆ ಮತ್ತು ಪ್ರತಿಭೆ ಅರಳುತ್ತದೆ. ನಾವು ಈ ಪ್ರತಿಭೆಯನ್ನು ಬೆಳೆಸಬೇಕು ಮತ್ತು ಅದಕ್ಕೆ ಹೊಸ ಗುರುತನ್ನೂ ನೀಡಬೇಕು.
ಗುಜರಾತ್‌ಗೆ ಹೆಮ್ಮೆ ತಂದ ಜ್ಯೋತಿಗ್ರಾಮ ಯೋಜನೆಗೆ ಚಾಲನೆ ನೀಡಿದ ಸ್ಥಳ ಚಂಪನೇರ್. 2006ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ನಾನು ಮುಖ್ಯಮಂತ್ರಿಯಾದಾಗ ಕನಿಷ್ಟ ರಾತ್ರಿ ಭೋಜನದ ವೇಳೆಗಾದರೂ ವಿದ್ಯುತ್ ವ್ಯವಸ್ಥೆ ಮಾಡಿ ಎಂದು ನನಗೆ ಹೇಳುತ್ತಿದ್ದರು. ಜ್ಯೋತಿಗ್ರಾಮ ಯೋಜನೆಯ ಮೂಲಕ ನಾವು ಗುಜರಾತ್‌ನಲ್ಲಿ ಮೊದಲ ಬಾರಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಾತ್ರಿಪಡಿಸಿದ್ದೇವೆ. ನಮ್ಮ ಅಂದಿನ ರಾಷ್ಟ್ರಪತಿ ಶ್ರೀ ಎ.ಪಿ.ಜೆ. ಅಬ್ದುಲ್ ಕಲಾಂ ಜೀ ಅವರು ಆ ಯೋಜನೆಯ ಕಾರ್ಯಾರಂಭವನ್ನು ನೆರವೇರಿಸಿದ್ದರು. ಜ್ಯೋತಿಗ್ರಾಮ ಯೋಜನೆಯು ಗುಜರಾತ್ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಸೇರಿಸಿದೆ. ಈ ಯೋಜನೆಯಿಂದಾಗಿ ಗುಜರಾತಿನ ಜನರು ನಿರಂತರ ವಿದ್ಯುತ್ ಪಡೆಯಲಾರಂಭಿಸಿದರು.
ಪಾವಗಡ ಎಂದರೆ ಗಾಳಿಯ ಭದ್ರ ನೆಲೆ ಎಂದರ್ಥ. ಇಲ್ಲಿ ವಾಯುದೇವನ ವಿಶೇಷ ಅನುಗ್ರಹವಿದೆ. ಪಾವಗಡದಲ್ಲಿ ಬೀಸುತ್ತಿರುವ ನಮ್ಮ ಸಾಂಸ್ಕೃತಿಕ ಉನ್ನತಿ ಮತ್ತು ಅಭಿವೃದ್ಧಿಯ ಸುಗಂಧವು ಇಡೀ ಗುಜರಾತ್ ಮತ್ತು ದೇಶವನ್ನು ತಲುಪುತ್ತದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಈ ಭಾವದೊಂದಿಗೆ ನಾನು ಮತ್ತೊಮ್ಮೆ ಮಹಾಕಾಳಿ ಮಾತೆಯ ಪಾದಗಳಿಗೆ ನಮಸ್ಕರಿಸುತ್ತೇನೆ ಮತ್ತು ನಿಮಗೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ. ಗುಜರಾತ್ ಮತ್ತು ಇತರ ರಾಜ್ಯಗಳಿಂದ ಮಾತಾ ಕಾಳಿಯ ಅಸಂಖ್ಯಾತ ಭಕ್ತರು ಇಲ್ಲಿಗೆ ಬಹಳ ಪೂಜ್ಯ ಭಾವದೊಂದಿಗೆ ಬರುತ್ತಾರೆ. ಅವರ ಪೂರ್ವಜರ ಕನಸು ನನಸಾಗಿದ್ದಕ್ಕಾಗಿ ನಾನು ಎಲ್ಲಾ ಭಕ್ತರನ್ನು ಅಭಿನಂದಿಸುತ್ತೇನೆ. ಅವರ ಪೂರ್ವಜರು ಭರವಸೆಯೊಂದಿಗೆ ಇಲ್ಲಿಗೆ ಬರುತ್ತಿದ್ದರು ಆದರೆ ಹತಾಶೆಯಿಂದ ಹಿಂತಿರುಗಬೇಕಾಗುತ್ತಿತ್ತು. ಈಗ ಅವರ ಮಕ್ಕಳು ಹೆಮ್ಮೆಯಿಂದ ಹೇಳಬಹುದು - ನೀವು ಕಷ್ಟ ಅನುಭವಿಸಿರಬಹುದು ಈಗ ಕಾಲ ಬದಲಾಗಿದೆ ಎಂದು. ಈಗ ಮಾತಾ ಕಾಳಿ ಪೂರ್ಣ ವೈಭವದಿಂದ ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ಭೂಪೇಂದ್ರಭಾಯಿ, ಟ್ರಸ್ಟ್ ಮಂಡಳಿ ಮತ್ತು ಗುಜರಾತ್ ಸರ್ಕಾರದ ನೇತೃತ್ವದಲ್ಲಿ ನಡೆದಿರುವ ಈ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ನಿಮ್ಮೆಲ್ಲರಿಗೂ ಅಭಿನಂದನೆಗಳು.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
******
(Release ID: 1835312)
Visitor Counter : 195
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam