ಪ್ರಧಾನ ಮಂತ್ರಿಯವರ ಕಛೇರಿ

ಶಿಮ್ಲಾದಲ್ಲಿ ನಡೆದ 'ಗರೀಬ್ ಕಲ್ಯಾಣ್ ಸಮ್ಮೇಳನ'ವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ


" 130 ಕೋಟಿ ಭಾರತೀಯರ ಈ ಕುಟುಂಬವನ್ನು ನಾನು ಹೊಂದಿದ್ದೇನೆ, ನೀವು ನನ್ನ ಬದುಕಿನ ಸರ್ವಸ್ವ ಮತ್ತು ಈ ಜೀವ ಇರುವುದೇ ನಿಮಗಾಗಿ"

"ನಾನು ಎಲ್ಲರ ಕಲ್ಯಾಣಕ್ಕಾಗಿ, ಪ್ರತಿಯೊಬ್ಬ ಭಾರತೀಯನ ಗೌರವಕ್ಕಾಗಿ, ಪ್ರತಿಯೊಬ್ಬ ಭಾರತೀಯನ ಸುರಕ್ಷತೆಗಾಗಿ ಮತ್ತು ಪ್ರತಿಯೊಬ್ಬ ಭಾರತೀಯನ ಸಮೃದ್ಧಿಗಾಗಿ ಮತ್ತು ಪ್ರತಿಯೊಬ್ಬರ ಸಂತೋಷ ಮತ್ತು ಶಾಂತಿಯ ಜೀವನಕ್ಕಾಗಿ ನನ್ನಿಂದ ಏನೆಲ್ಲಾ ಸಾಧ್ಯವೋ ಅದನ್ನು ಮಾಡುತ್ತೇನೆ ಎಂಬ ಸಂಕಲ್ಪವನ್ನು ನಾನು ಪುನರುಚ್ಚರಿಸುತ್ತೇನೆ"

"ಸೇವೆ, ಉತ್ತಮ ಆಡಳಿತ ಮತ್ತು ಗರೀಬ್ ಕಲ್ಯಾಣ್ ಇವು ಜನರಿಗಾಗಿ ಸರ್ಕಾರ ಎಂಬುದರ ಅರ್ಥವನ್ನು ಬದಲಾಯಿಸಿವೆ"

"ಈ ಹಿಂದೆ ಶಾಶ್ವತವೆಂದು ಭಾವಿಸಲಾಗಿದ್ದ ಸಮಸ್ಯೆಗಳಿಗೂ ಶಾಶ್ವತ ಪರಿಹಾರವನ್ನು ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ"

"ನಮ್ಮ ಸರ್ಕಾರವು ಮೊದಲ ದಿನದಿಂದಲೇ ಬಡವರನ್ನು ಸಬಲೀಕರಣಗೊಳಿಸಲು ಪ್ರಾರಂಭಿಸಿದೆ"

"ನಾವು ನವ ಭಾರತವನ್ನು ನಿರ್ಮಿಸಲು ಶ್ರಮಿಸುತ್ತಿದ್ದೇವೆಯೇ ಹೊರತು ವೋಟ್ ಬ್ಯಾಂಕನ್ನಲ್ಲ"

"ಶೇ.100ರಷ್ಟು ಸಬಲೀಕರಣ ಎಂದರೆ ತಾರತಮ್ಯ ಮತ್ತು ತುಷ್ಟೀಕರಣವನ್ನು ಕೊನೆಗಾಣಿಸುವುದು. ಶೇ.100ರಷ್ಟು ಸಬಲೀಕರಣ ಎಂದರೆ ಪ್ರತಿಯೊಬ್ಬ ಬಡವರು ಸರ್ಕಾರದ ಯೋಜನೆಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯುವುದು"

"ನವ ಭಾರತದ ಸಾಮರ್ಥ್ಯಕ್ಕೆ ಯಾವುದೇ ಗುರಿ ಅಸಾಧ್ಯವಲ್ಲ"

Posted On: 31 MAY 2022 1:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ 'ಗರೀಬ್ ಕಲ್ಯಾಣ್ ಸಮಾವೇಶ'ವನ್ನುದ್ದೇಶಿಸಿ ಭಾಷಣ ಮಾಡಿದರು. ಪ್ರಧಾನ ಮಂತ್ರಿಯವರ ನೇತೃತ್ವದ ಸರ್ಕಾರವು ಎಂಟು ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಈ ವಿನೂತನ ಸಾರ್ವಜನಿಕ ಕಾರ್ಯಕ್ರಮವನ್ನು ದೇಶಾದ್ಯಂತದ ರಾಜ್ಯ ರಾಜಧಾನಿಗಳು, ಜಿಲ್ಲಾ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಸರ್ಕಾರವು ನಡೆಸುತ್ತಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆಯನ್ನು ಪಡೆಯಲು ದೇಶಾದ್ಯಂತದ ಚುನಾಯಿತ ಜನ ಪ್ರತಿನಿಧಿಗಳು ನೇರವಾಗಿ ಸಾರ್ವಜನಿಕರೊಂದಿಗೆ ಸಂವಹನ ನಡೆಸುವುದು ಈ ಸಮ್ಮೇಳನದ ಪರಿಕಲ್ಪನೆಯಾಗಿದೆ.


ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ 11ನೇ ಕಂತಿನ ಆರ್ಥಿಕ ಪ್ರಯೋಜನಗಳನ್ನು ಪ್ರಧಾನಮಂತ್ರಿಯವರು ಇಂದು ಬಿಡುಗಡೆ ಮಾಡಿದರು. ಇದು 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ ಸುಮಾರು 21,000 ಕೋಟಿ ರೂ.ಗಳ ಮೊತ್ತವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶಾದ್ಯಂತದ (ಪಿಎಂ-ಕಿಸಾನ್) ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈ ರಾಮ್ ಠಾಕೂರ್ ಮತ್ತು ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಶಿಮ್ಲಾದಲ್ಲಿ ಉಪಸ್ಥಿತರಿದ್ದರು.


ಲಡಾಖ್ ನ ಫಲಾನುಭವಿ ಶ್ರೀ ತಾಶಿ ತುಂಡಪ್ ಪ್ರಧಾನಮಂತ್ರಿಯವರೊದಿಗೆ ಸಂವಾದ ನಡೆಸುವಾಗ, ಲಡಾಖ್ ಗೆ ಪ್ರವಾಸಿಗರ ಆಗಮನ ಮತ್ತು ಸರ್ಕಾರದ ಯೋಜನೆಗಳೊಂದಿಗಿನ ತಮ್ಮ ಅನುಭವದ ಬಗ್ಗೆ ಮಾತನಾಡಿದರು. ಒಬ್ಬ ಸೇನಾಸಿಬ್ಬಂದಿಯಾಗಿ ಅವರ ಸೇವೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಪಿಎಂಎವೈ, ಶೌಚಾಲಯಗಳು, ಅನಿಲ ಸಂಪರ್ಕ ಮತ್ತು ಕೃಷಿ ಸಂಬಂಧಿತ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ತಮಗೆ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ ಎಂದು ಶ್ರೀ ತಾಶಿ ತುಂಡಪ್ ತಿಳಿಸಿದರು.


ಬಿಹಾರದ ಶ್ರೀಮತಿ ಲಲಿತಾ ದೇವಿ, ಪಿಎಂಎವೈ, ಉಜ್ವಲ, ಸ್ವಚ್ಛ ಭಾರತ್ ಮತ್ತು ಜಲ ಜೀವನ್ ಅಭಿಯಾನದ ಫಲಾನುಭವಿಯಾಗಿದ್ದಾರೆ. ಯೋಜನೆಗಳು ಹೇಗೆ ಅವರ ಸರಳ ಜೀವನ ಮತ್ತು ಘನತೆಯ ಜೀವನಕ್ಕೆ ಕಾರಣವಾಗಿವೆ ಎಂಬುದನ್ನು ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಒಂದು ಮನೆಯೊಂದಿಗೆ ಮಕ್ಕಳ ಶಿಕ್ಷಣ ಮತ್ತು ಮದುವೆಯಂತಹ ಅನೇಕ ಕಾರ್ಯಗಳು ನಡೆಯುತ್ತವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.


ಪಶ್ಚಿಮ ತ್ರಿಪುರಾದ ಶ್ರೀ ಪಂಕಜ್ ಶಾನಿ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಪಿಎಂ ಗರೀಬ್ ಕಲ್ಯಾಣ್ ಯೋಜನೆ ಮತ್ತು ಇತರ ಅನೇಕ ಯೋಜನೆಗಳ  ಫಲಾನುಭವಿಯಾಗಿದ್ದು, ಅವರು ಜೆಜೆಎಂ, ಒಎನ್ಒಆರ್.ಸಿ., ಪಿಎಂಎವೈ ಮತ್ತು ವಿದ್ಯುತ್ ಸಂಪರ್ಕದಂತಹ ಅನೇಕ ಯೋಜನೆಗಳ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಒಂದು ರಾಷ್ಟ್ರ ಒಂದು ಪಡಿತರ ಚೀಟಿಯಿಂದಾಗಿ ತಾವು ಬಿಹಾರದಿಂದ ವಲಸೆ ಹೋದರೂ ಯಾವುದೇ ಸಮಸ್ಯೆಗಳನ್ನು ಎದುರಾಗುತ್ತಿಲ್ಲ ಎಂದು ಅವರು ತಿಳಿಸಿದರು.


ಕರ್ನಾಟಕದ ಕಲ್ಬುರ್ಗಿಯವರಾದ ಶ್ರೀಮತಿ ಸಂತೋಷಿ ಅವರು ಆಯುಷ್ಮಾನ್ ಭಾರತ್ ನ ಫಲಾನುಭವಿಯಾಗಿದ್ದು, ಈ ಯೋಜನೆಯ ಬಗ್ಗೆ ತಮ್ಮ ಅನುಭವವನ್ನು ವಿವರಿಸಿದರು. ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರ ಹಾಗೂ ಉಚಿತ ತಪಾಸಣೆ ಮತ್ತು ಔಷಧಿಗಳು ತಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಿವೆ ಎಂದು ತಿಳಿಸಿದರು.  ಅವರ ಅತ್ಯುತ್ತಮ ಸಂವಹನ ಕೌಶಲ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ನೀವು ತುಂಬಾ ಜನಪ್ರಿಯರಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತಮಾಷೆ ಮಾಡಿದರು.
ಗುಜರಾತ್ ನ ಮೆಹ್ಸಾನಾದ, ಪ್ರಧಾನಮಂತ್ರಿ ಮುದ್ರಾ ಯೋಜನೆಯ ಫಲಾನುಭವಿ ಶ್ರೀ ಅರವಿಂದ್ ಪ್ರಧಾನಮಂತ್ರಿಯವರೊಂದಿಗೆ ಮಾತನಾಡಲು ಸಂತೋಷವ್ಯಕ್ತಪಡಿಸಿ, ತಮ್ಮ ಮಂಟಪ ಅಲಂಕಾರದ ವ್ಯವಹಾರ ವಿಸ್ತರಣೆ ಯಾಗಿದ್ದು, ತಾವು ಡಿಜಿಟಲ್ ಪಾವತಿಯನ್ನು ಉತ್ತೇಜಿಸುತ್ತಿರುವುದಾಗಿ ಮಾಹಿತಿ ನೀಡಿದರು. ಪ್ರಧಾನಮಂರಿಯವರು, ಸರ್ಕಾರದ ಯೋಜನೆಯ ಬಗ್ಗೆ ಅವರ ಉದ್ಯೋಗಿಗಳಿಗೆ ಶಿಕ್ಷಣ ನೀಡಿದ್ದಕ್ಕಾಗಿ ಮತ್ತು ಉದ್ಯೋಗ ಸೃಷ್ಟಿಕರ್ತರಾಗಿರುವುದಕ್ಕಾಗಿ ಅವರನ್ನು ಶ್ಲಾಘಿಸಿದರು. ಕ್ರೀಡಾ ಆಕಾಂಕ್ಷೆತೆಯಾದಅವರ ಮಗಳನ್ನು ಪ್ರಧಾನಮಂತ್ರಿಯವರು ಆಶೀರ್ವದಿಸಿದರು.


ಕಾರ್ಯಕ್ರಮದ ಸ್ಥಳದಲ್ಲಿ, ಹಿಮಾಚಲ ಪ್ರದೇಶದ ಸಿರ್ಮೌರ್ ನ ಪಿಎಂಎವೈ, ಪಿಎಂ ಕಿಸಾನ್ ಸಮ್ಮಾನ್ ನಿಧಿ, ಆಯುಷ್ಮಾನ್ ಯೋಜನೆ, ಸಿಎಂ ಗ್ರಹನಿ ಸುವಿಧಾ ಯೋಜನೆಯ ಫಲಾನುಭವಿ ಸಮಾ ದೇವಿ ಅವರೊಂದಿಗೆ ಪ್ರಧಾನಮಂತ್ರಿಯವರು ಅವರ ಸ್ಥಿತಿಗತಿ ಮತ್ತು ಕೃಷಿ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಮಹತ್ವದ ಸಂದರ್ಭದಲ್ಲಿ ಹಿಮಾಚಲದಲ್ಲಿ ಉಪಸ್ಥಿತರಿರುವುದಕ್ಕೆ ತಮ್ಮ ಸಂತಸ ವ್ಯಕ್ತಪಡಿಸಿದರು. ಪಿಎಂ ಕಿಸಾನ್ ಯೋಜನೆಯ ಮೂಲಕ 10 ಕೋಟಿಗೂ ಹೆಚ್ಚು ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಡೆಯುತ್ತಿರುವ ಬಗ್ಗೆ, ರೈತರನ್ನು ಅಭಿನಂದಿಸಿದರು ಮತ್ತು ಹಾರೈಸಿದರು. ಸರ್ಕಾರವು 8 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮಕ್ಕಳ ಯೋಜನೆಗಳಿಗೆ ಪಿಎಂ ಕೇರ್ಸ್ ಅಡಿಯಲ್ಲಿ ಪ್ರಯೋಜನಗಳನ್ನು ಬಿಡುಗಡೆ ಮಾಡಿರುವುದಕ್ಕೆ ಅವರು ಸಂತೃಪ್ತಿ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಆರ್ಥಿಕ ಪ್ರಯೋಜನಗಳನ್ನು ಶಿಮ್ಲಾದಿಂದ ರಾಷ್ಟ್ರವ್ಯಾಪಿ ಬಿಡುಗಡೆ ಮಾಡುತ್ತಿರುವುದಕ್ಕಾಗಿ ಅವರು ಹರ್ಷ ವ್ಯಕ್ತಪಡಿಸಿದರು. 130 ಕೋಟಿ ನಾಗರಿಕರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಅವರು ಜನರಿಗೆ ಧನ್ಯವಾದ ಅರ್ಪಿಸಿದರು.


ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ ಮೂಲಕ ನಿನ್ನೆ ಕೊರೊನಾ ಸಾಂಕ್ರಾಮಿಕ ರೋಗದಿಂದ ತಮ್ಮ ಪಾಲಕರಿಬ್ಬರನ್ನೂ ಕಳೆದುಕೊಂಡ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೂಲಕ 8 ವರ್ಷಗಳನ್ನು ಪೂರೈಸಿದ ಬಗ್ಗೆ ಪ್ರಧಾನಮಂತ್ರಿಯವರು ಸಂತೃಪ್ತಿ ವ್ಯಕ್ತಪಡಿಸಿದರು. ಹಿಮಾಚಲ ಪ್ರದೇಶ ತಮ್ಮ ಕರ್ಮಭೂಮಿಯಾಗಿದ್ದು, ಈ ಸಂದರ್ಭಕ್ಕಾಗಿ ಇಲ್ಲಿರಬೇಕೆಂಬ ರಾಜ್ಯದ ಸಲಹೆಯನ್ನು ತಾವು ಸಕಾಲಿಕವಾಗಿ ಸ್ವೀಕರಿಸಿದ್ದಾಗಿ ತಿಳಿಸಿದರು. ಸದಾ ತಮ್ಮನ್ನು ತಾವು 130 ಕೋಟಿ ನಾಗರಿಕರ ಕುಟುಂಬದ ಸದಸ್ಯನೆಂದೇ ನೋಡುತ್ತೇನೆಯೇ ಹೊರತು ಪ್ರಧಾನಮಂತ್ರಿಯಾಗಿ ಅಲ್ಲ ಎಂದು ಅವರು ತಿಳಿಸಿದರು. ಕಡತಕ್ಕೆ ಸಹಿ ಮಾಡಿದಾಗ ಮಾತ್ರ ತಾವು ಪ್ರಧಾನಮಂತ್ರಿಯ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ಹೇಳಿದರು. ಆ ಕ್ಷಣ ಮುಗಿದ ಕೂಡಲೇ "ತಾವು ಪ್ರಧಾನಮಂತ್ರಿಯಾಗಿಯೇ ಇರುವುದಿಲ್ಲ ಬದಲಾಗಿ ನಿಮ್ಮ ಕುಟುಂಬದ ಸದಸ್ಯನಾಗುತ್ತೇನೆ ಮತ್ತು 130 ಕೋಟಿ ದೇಶವಾಸಿಗಳ ಪ್ರಧಾನ ಸೇವಕನಾಗುತ್ತೇನೆ ಎಂದರು. ದೇಶಕ್ಕಾಗಿ ನಾನು ಏನನ್ನಾದರೂ ಮಾಡಲು ಸಾಧ್ಯವಾಗಿದ್ದರೆ, ಅದು 130 ಕೋಟಿ ದೇಶವಾಸಿಗಳ ಆಶೀರ್ವಾದ ಮತ್ತು ಶುಭ ಹಾರೈಕೆಗಳಿಂದ ಮಾತ್ರ ಎಂದರು. ಭಾವುಕರಾದ ಪ್ರಧಾನಮಂತ್ರಿಯವರು "130 ಕೋಟಿ ನಾಗರಿಕರಿರುವ ತಮ್ಮ ಕುಟುಂಬದ ಆಶೋತ್ತರಗಳು ಮತ್ತು ಆಕಾಂಕ್ಷೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ, ಈ ಕುಟುಂಬ ತಮ್ಮ ಬಳಿ ಇದೆ, ನೀವು ನನ್ನ ಜೀವನದ ಸರ್ವಸ್ವ ಮತ್ತು ಈ ಜೀವ ಇರುವುದೇ ನಿಮಗಾಗಿ" ಎಂದು ಹೇಳಿದರು.  ಸರ್ಕಾರವು ತನ್ನ ಎಂಟು ವರ್ಷಗಳನ್ನು ಪೂರೈಸುತ್ತಿರುವಾಗ, ಎಲ್ಲರ ಕಲ್ಯಾಣಕ್ಕಾಗಿ, ಪ್ರತಿಯೊಬ್ಬ ಭಾರತೀಯನ ಗೌರವಕ್ಕಾಗಿ, ಪ್ರತಿಯೊಬ್ಬ ಭಾರತೀಯನ ಭದ್ರತೆಗಾಗಿ ಮತ್ತು ಪ್ರತಿಯೊಬ್ಬ ಭಾರತೀಯನ ಏಳಿಗೆಗಾಗಿ ಅವರು ಸಂತೋಷ ಮತ್ತು ಶಾಂತಿಯಿಂದ  ಜೀವನ ನಡೆಸಲು ತಮ್ಮಿಂದ ಏನು ಸಾಧ್ಯವೋ ಅದೆಲ್ಲವನ್ನು ಮಾಡುತ್ತೇನೆ ಎಂಬ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು.


2014ಕ್ಕಿಂತ ಮೊದಲು, ಹಿಂದಿನ ಸರ್ಕಾರಗಳು ಭ್ರಷ್ಟಾಚಾರವನ್ನು ವ್ಯವಸ್ಥೆಯ ಅತ್ಯಗತ್ಯ ಭಾಗವೆಂದು ಪರಿಗಣಿಸಿದ್ದವು, ನಂತರ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬದಲು, ಸರ್ಕಾರವು ಅದಕ್ಕೆ ಶರಣಾಯಿತು, ಹೀಗಾಗಿ ಯೋಜನೆಗಳ ಹಣ ಅರ್ಹರರನ್ನು ತಲುಪುವ ಮೊದಲೇ ಲೂಟಿ ಆಗುತ್ತಿದ್ದುದನ್ನು ದೇಶ ನೋಡಿತು ಎಂದು ಪ್ರಧಾನಮಂತ್ರಿ ವಿಷಾದಿಸಿದರು. ಇಂದು ಜನ್ ಧನ್-ಆಧಾರ್ ಮತ್ತು ಮೊಬೈಲ್ (ಜೆಎಎಂ) ತ್ರಿವಳಿಗಳಿಂದಾಗಿ, ಹಣವು ಫಲಾನುಭವಿಗೆ ನೇರವಾಗಿ ಅವರ ಜನ್ ಧನ್ ಬ್ಯಾಂಕ್ ಖಾತೆಗಳಿಗೆ ತಲುಪುತ್ತಿದೆ ಎಂದು ಅವರು ಹೇಳಿದರು. ಈ ಮೊದಲು ಅಡುಗೆಮನೆಯಲ್ಲಿ ಹೊಗೆಯ ಕಷ್ಟ ಅನುಭವಿಸುವ ಅನಿವಾರ್ಯತೆ ಇತ್ತು, ಇಂದು ಉಜ್ವಲಾ ಯೋಜನೆಯಿಂದ ಎಲ್.ಪಿ.ಜಿ ಸಿಲಿಂಡರ್ ಗಳನ್ನು ಪಡೆಯುವ ಸೌಲಭ್ಯವಿದೆ. ಈ ಹಿಂದೆ ಬಯಲು ಶೌಚದ ಅವಮಾನವಿತ್ತು, ಈಗ ಬಡವರಿಗೆ ಶೌಚಾಲಯಗಳ ಘನತೆ ಇದೆ. ಮೊದಲು ಚಿಕಿತ್ಸೆಗಾಗಿ ಹಣವನ್ನು ಹೊಂದಿಸಲು ಅಸಹಾಯಕತೆ ಇತ್ತು, ಇಂದು ಪ್ರತಿಯೊಬ್ಬ ಬಡವರಿಗೂ ಆಯುಷ್ಮಾನ್ ಭಾರತದ ಬೆಂಬಲವಿದೆ. ಈ ಮೊದಲು ತ್ರಿವಳಿ ತಲಾಖ್ ಬಗ್ಗೆ ಭಯವಿತ್ತು, ಈಗ ಒಬ್ಬರ ಹಕ್ಕುಗಳಿಗಾಗಿ ಹೋರಾಡುವ ಧೈರ್ಯವಿದೆ ಎಂದರು.


ಕಲ್ಯಾಣ ಯೋಜನೆಗಳು, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ (ಸೇವೆ, ಉತ್ತಮ ಆಡಳಿತ ಮತ್ತು ಗರೀಬ್ ಕಲ್ಯಾಣ್) ಜನರಿಗಾಗಿ ಸರ್ಕಾರ ಎಂಬುದರ ಅರ್ಥವನ್ನು ಬದಲಾಯಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈಗ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತಿದೆ. ಪಿಎಂ ವಸತಿ ಯೋಜನೆ ಆಗಿರಲಿ, ವಿದ್ಯಾರ್ಥಿವೇತನವಾಗಿರಲಿ ಅಥವಾ ಪಿಂಚಣಿ ಯೋಜನೆಗಳೇ ಆಗಿರಲಿ ಅದೆಲ್ಲದರಲ್ಲೂ ತಂತ್ರಜ್ಞಾನದ ಸಹಾಯದಿಂದ, ಭ್ರಷ್ಟಾಚಾರದ ವ್ಯಾಪ್ತಿಯನ್ನು ತಗ್ಗಿಸಲಾಗಿದೆ. ಈ ಹಿಂದೆ ಶಾಶ್ವತವೆಂದು ಭಾವಿಸಲಾಗಿದ್ದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ನೇರ ಸವಲತ್ತು ವರ್ಗಾವಣೆಯು 9 ಕೋಟಿ ನಕಲಿ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಗಳಿಂದ ತೆಗೆದುಹಾಕುವ ಮೂಲಕ ಕಳ್ಳತನ ಮತ್ತು ಸೋರಿಕೆಯ ಅನ್ಯಾಯವನ್ನು ಕೊನೆಗೊಳಿಸುತ್ತಿದೆ ಎಂದು ಅವರು ಹೇಳಿದರು.


ಬಡವರ ದೈನಂದಿನ ಹೋರಾಟವು ತಗ್ಗಿದಾಗ, ಅವರು ಸಬಲರಾಗುತ್ತಾರೆ, ಆಗ ಅವರು, ತಮ್ಮ ಬಡತನವನ್ನು ತೊಡೆದುಹಾಕಲು ಹೊಸ ಚೈತನ್ಯದೊಂದಿಗೆ ತೊಡಗಿಸಿಕೊಳ್ಳುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಆಲೋಚನೆಯೊಂದಿಗೆ, ನಮ್ಮ ಸರ್ಕಾರವು ಮೊದಲ ದಿನದಿಂದಲೇ ಬಡವರನ್ನು ಸಶಕ್ತಗೊಳಿಸಲು ಪ್ರಾರಂಭಿಸಿತು. ಅವರ ಜೀವನದ ಪ್ರತಿಯೊಂದು ಚಿಂತೆಯನ್ನೂ ಕಡಿಮೆ ಮಾಡಲು ನಾವು ಪ್ರಯತ್ನಿಸಿದ್ದೇವೆ ಎಂದು ಅವರು ಹೇಳಿದರು. "ದೇಶದ ಬಹುತೇಕ ಪ್ರತಿಯೊಂದು ಕುಟುಂಬವು ಒಂದಲ್ಲ ಒಂದು ಯೋಜನೆಯಿಂದ ಪ್ರಯೋಜನ ಪಡೆಯುತ್ತಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ" ಎಂದು ಅವರು ಹೇಳಿದರು.


ಸಶಸ್ತ್ರ ಪಡೆಗಳಿಗೆ ಹಿಮಾಚಲದ ಪ್ರತಿಯೊಂದು ಕುಟುಂಬದ ಕೊಡುಗೆಯನ್ನೂ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನಾಲ್ಕು ದಶಕಗಳ ಕಾಯುವಿಕೆಯ ನಂತರ ಒಂದು ಶ್ರೇಣಿ ಒಂದು ಪಿಂಚಣಿಯನ್ನು ತಮ್ಮ ಸರ್ಕಾರ ಜಾರಿಗೆ ತಂದಿದ್ದು, ಮಾಜಿ ಸೈನಿಕರಿಗೆ ಬಾಕಿಯನ್ನು ಪಾವತಿಸಿತು ಎಂದು ಹೇಳಿದರು. ಹಿಮಾಚಲದ ಪ್ರತಿಯೊಂದು ಕುಟುಂಬವು ಸಾಕಷ್ಟು ಪ್ರಯೋಜನವನ್ನು ಪಡೆದುಕೊಂಡಿದೆ. ವೋಟ್ ಬ್ಯಾಂಕ್ ರಾಜಕೀಯವು ನಮ್ಮ ದೇಶದಲ್ಲಿ ದಶಕಗಳಿಂದ ನಡೆದಿದ್ದು, ದೇಶಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ನಾವು ನವ ಭಾರತವನ್ನು ನಿರ್ಮಿಸಲು ಶ್ರಮಿಸುತ್ತಿದ್ದೇವೆಯೇ ಹೊರತು ವೋಟ್ ಬ್ಯಾಂಕ್ ಗಾಗಿ ಅಲ್ಲ ಎಂದು  ಹೇಳಿದರು.


ಶೇ.100 ಲಾಭವನ್ನು ಶೇ.100ರಷ್ಟು ಫಲಾನುಭವಿಗಳಿಗೆ ತಲುಪಿಸಲು ನಾವು ಉಪಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಫಲಾನುಭವಿಗಳು ಸಂತೃಪ್ತತೆಯನ್ನು ಮುಟ್ಟುವಂತೆ ಮಾಡಲು ಸರ್ಕಾರ ಪ್ರತಿಜ್ಞೆ ಮಾಡಿದೆ ಎಂದು ಅವರು ಹೇಳಿದರು. ಶೇ.100ರಷ್ಟು ಸಬಲೀಕರಣ ಎಂದರೆ ತಾರತಮ್ಯವನ್ನು ಕೊನೆಗೊಳಿಸುವುದು, ಶಿಫಾರಸುಗಳನ್ನು ತೆಗೆದುಹಾಕುವುದು ಮತ್ತು ತುಷ್ಟೀಕರಣವನ್ನು ಕೊನೆಗಾಣಿಸುವುದು. ಶೇ.100ರಷ್ಟು ಸಬಲೀಕರಣ ಎಂದರೆ ಪ್ರತಿಯೊಬ್ಬ ಬಡವರು ಸರ್ಕಾರದ ಯೋಜನೆಗಳಿಂದ ಪೂರ್ಣ ಪ್ರಯೋಜನಗಳನ್ನು ಪಡೆಯುವುದು ಎಂದರು.
ಹೆಚ್ಚುತ್ತಿರುವ ದೇಶದ ಘನತೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಯವರು ಇಂದು, ಭಾರತವು ಬಲವಂತದಿಂದ ಸ್ನೇಹದ ಹಸ್ತವನ್ನು ಚಾಚುವುದಿಲ್ಲ ಬದಲಾಗಿ ಸಹಾಯಹಸ್ತ ಚಾಚುತ್ತದೆ ಎಂದು ಹೇಳಿದರು. ಕರೋನಾ ಅವಧಿಯಲ್ಲಿ ನಾವು 150 ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳು ಮತ್ತು ಲಸಿಕೆಗಳನ್ನು ಕಳುಹಿಸಿದ್ದೇವೆ ಎಂದು ಅವರು ಹೇಳಿದರು.
ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ, 21ನೇ ಶತಮಾನದ ಉಜ್ವಲ ಭಾರತಕ್ಕಾಗಿ ಶ್ರಮಿಸುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭಾರತದ ಅಸ್ಮಿತೆಯು ವಂಚನೆಯದಲ್ಲ, ಬದಲಾಗಿ ಆಧುನಿಕತೆಯಿಂದ ಕೂಡಿದೆ. ನಮ್ಮ ಸಾಮರ್ಥ್ಯದ ಮುಂದೆ ಯಾವುದೇ ಗುರಿ ಅಸಾಧ್ಯವಲ್ಲ. ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಇಂದು ದಾಖಲೆಯ ವಿದೇಶಿ ಹೂಡಿಕೆ ನಡೆಯುತ್ತಿದೆ, ಇಂದು ಭಾರತವು ರಫ್ತುಗಳಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಿದೆ. "ಎಲ್ಲರೂ ಮುಂದೆ ಬರಬೇಕು ಮತ್ತು ನಮ್ಮ ದೇಶದ ಪ್ರಗತಿಯ ಪಯಣದಲ್ಲಿ ನಮ್ಮ ಪಾತ್ರವನ್ನು ವಹಿಸಬೇಕು" ಎಂದು ಹೇಳುವ ಮೂಲಕ ತಮ್ಮ ಭಾಷಣ ಮುಕ್ತಾಯಗೊಳಿಸಿದರು

 

 


***

 



(Release ID: 1830083) Visitor Counter : 210