ಪ್ರಧಾನ ಮಂತ್ರಿಯವರ ಕಛೇರಿ

ಗಾಂಧಿನಗರದಲ್ಲಿ ವಿವಿಧ ಸಹಕಾರಿ ಸಂಘ ಸಂಸ್ಥೆಗಳ ಮುಖಂಡರ ವಿಚಾರ ಸಂಕಿರಣವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಿದರು.


ಕಲೋಲ್‌ ನ ಐ.ಎಪ್.ಎಫ್.ಸಿ.ಒ. ನಲ್ಲಿ ನಿರ್ಮಿಸಲಾದ ನ್ಯಾನೋ ಯೂರಿಯಾ (ದ್ರವ) ಸ್ಥಾವರವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಿದರು

"ಗ್ರಾಮದ ಸ್ವಾವಲಂಬನೆಗೆ ಸಹಕಾರವು ಉತ್ತಮ ಮಾಧ್ಯಮವಾಗಿದೆ, ಸಹಕಾರ ಕ್ಷೇತ್ರವು "ಆತ್ಮನಿರ್ಭರ ಭಾರತ್" ಯೋಜನೆಯ ಶಕ್ತಿಯನ್ನು ಹೊಂದಿದೆ"

"ಸಾಂಕ್ರಾಮಿಕ ಮತ್ತು ಯುದ್ಧದ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಾದ ಬೆಲೆ ಏರಿಕೆ ಮತ್ತು ಲಭ್ಯತೆಯ ಕೊರತೆಯು, ಭಾರತದ ರೈತರಿಗೆ ತೊಂದರೆ ನೀಡಲು ಕೇಂದ್ರ ಸರ್ಕಾರವು ಅವಕಾಶ ನೀಡಲಿಲ್ಲ"

ಕಳೆದ ವರ್ಷ ರೂ. 1,60,000 ಕೋಟಿ ರಸಗೊಬ್ಬರ ಸಬ್ಸಿಡಿ ನೀಡಿದ್ದು, ಈ ವರ್ಷ ಈ ಸಬ್ಸಿಡಿ ಮೊತ್ತವನ್ನು ರೂ. 2 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ.

"ದೇಶದ ರೈತರ ಹಿತಾಸಕ್ತಿಗಾಗಿ ಏನು ಅಗತ್ಯವೋ ಅದನ್ನು ಮಾಡಲಾಗಿದೆ ಮತ್ತು ನಾವು ದೇಶದ ರೈತರನ್ನು ಬಲಪಡಿಸುತ್ತಿದ್ದೇವೆ."

“ಭಾರತದ ಅನೇಕ ತೊಂದರೆಗಳಿಗೆ ಸ್ವಾವಲಂಬನೆಯಲ್ಲಿದೆ ಪರಿಹಾರ. ಸಹಕಾರವು ಸ್ವಾವಲಂಬನೆಯ ಶ್ರೇಷ್ಠ ಮಾದರಿಯಾಗಿದೆ"

"ಸಹಕಾರದ ಮನೋಭಾವವನ್ನು ಸರ್ಕಾರವು ತನ್ನ ಅಮೃತ್ ಕಾಲ್ ಯೋಜನೆಯೊಂದಿಗೆ ಜೋಡಿಸಿ ನಿರಂತರವಾಗಿ ಮುಂದುವರಿಸಲಿದೆ."

Posted On: 28 MAY 2022 6:00PM by PIB Bengaluru

ಗುಜರಾತ್ ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ 'ಸಹಕಾರ್ ಸೇ ಸಮೃದ್ಧಿ' ಕುರಿತು ವಿವಿಧ ಸಹಕಾರಿ ಸಂಸ್ಥೆಗಳ ಮುಖಂಡರ ವಿಚಾರ ಸಂಕಿರಣವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.   ಕಲೋಲ್‌ ನ ಇಫ್ಕೋದಲ್ಲಿ ನಿರ್ಮಿಸಲಾದ ನ್ಯಾನೋ ಯೂರಿಯಾ (ದ್ರವ) ಸ್ಥಾವರವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವರಾದ ಶ್ರೀ ಅಮಿತ್ ಶಾ, ಡಾ. ಮನ್ಸುಖ್ ಮಾಂಡವಿಯಾ, ಸಂಸದರು, ಶಾಸಕರು, ಗುಜರಾತ್ ಸರ್ಕಾರದ ಸಚಿವರು ಮತ್ತು ಸಹಕಾರಿ ಕ್ಷೇತ್ರದ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮಹಾತ್ಮ ಮಂದಿರದಲ್ಲಿ ನೆರೆದಿದ್ದ ಸಾವಿರಾರು ರೈತರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಬೃಹತ್ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. "ಗ್ರಾಮದ ಸ್ವಾವಲಂಬನೆಗೆ ಸಹಕಾರ ಉತ್ತಮ ಮಾಧ್ಯಮವಾಗಿದೆ, ಹಾಗೂ ಆತ್ಮನಿರ್ಭರ ಭಾರತ್‌ ನ ಶಕ್ತಿಯನ್ನು ಹೊಂದಿದೆ.  ಪೂಜ್ಯ ಬಾಪು ಮತ್ತು ಪಟೇಲ್ ಅವರು ಹಳ್ಳಿಗಳಿಗೆ ಸ್ವಾವಲಂಬನೆಯನ್ನು ತರಲು ನಮಗೆ ದಾರಿ ತೋರಿಸಿದ್ದಾರೆ. ಅವರು ಹಾಕಿಕೊಟ್ಟ ಅದೇ ಮಾರ್ಗದಲ್ಲಿ ನಾವು ಇಂದು ಒಂದು ಮಾದರಿ ಸಹಕಾರಿ ಗ್ರಾಮವನ್ನು ಅಭಿವೃದ್ಧಿಪಡಿಸುವ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ಗುಜರಾತ್‌ ನ ಆರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ, ಅಲ್ಲಿ ಎಲ್ಲಾ ಸಹಕಾರ ಸಂಬಂಧಿತ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲಾಗುವುದು" ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಇಫ್ಕೊ ಸಂಸ್ಥೆ ಕಲೋಲ್‌ ನಲ್ಲಿ ನಿರ್ಮಿಸಲಾದ ನ್ಯಾನೋ ಯೂರಿಯಾ (ದ್ರವ) ಸ್ಥಾವರದ ಉದ್ಘಾಟನೆಯ ಬಗ್ಗೆ ಪ್ರಧಾನಮಂತ್ರಿ ಅವರು ಹೃತ್ಪೂರ್ವಕ ಸಂತೋಷವನ್ನು ವ್ಯಕ್ತಪಡಿಸಿದರು. "ಪೂರ್ಣ ಪ್ರಮಾಣದ ಯೂರಿಯಾದ ಗಾತ್ರವು ಅರ್ಧ ಲೀಟರ್ ಬಾಟಲಿಗೆ ಬಂದಿದ್ದು, ಇದರಿಂದಾಗಿ ಸಾರಿಗೆ, ಸಾಗಾಟ ಮತ್ತು ಸಂಗ್ರಹಣೆಯಲ್ಲಿ ಭಾರಿ ಉಳಿತಾಯವಾಗಲಿದೆ.   ಸ್ಥಾವರವು ದಿನಕ್ಕೆ 500 ಎಂ.ಎಲ್‌.ನ ಸುಮಾರು 1.5 ಲಕ್ಷ ಬಾಟಲಿಗಳನ್ನು ಉತ್ಪಾದಿಸುತ್ತದೆ, ಮುಂಬರುವ ದಿನಗಳಲ್ಲಿ ದೇಶದಲ್ಲಿ ಇನ್ನೂ 8 ಸ್ಥಾವರಗಳನ್ನು ಸ್ಥಾಪಿಸಲಾಗುವುದು" ಎಂದು ಪ್ರಧಾನಮಂತ್ರಿ ಅವರು ಹೇಳಿದರು. ``ಇದು ಯೂರಿಯಾಕ್ಕೆ ಸಂಬಂಧಿಸಿದಂತೆ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು  ಹಣವನ್ನು ಉಳಿಸಿ ದೇಶವನ್ನು ಬಲಿಷ್ಠಗೊಳಿಸುತ್ತದೆ. ಈ ಆವಿಷ್ಕಾರವು ಯೂರಿಯಾಕ್ಕೆ ಸೀಮಿತವಾಗುವುದಿಲ್ಲ ಎಂದು ನನಗೆ ವಿಶ್ವಾಸವಿದೆ. ಭವಿಷ್ಯದಲ್ಲಿ ನಮ್ಮ ರೈತರಿಗೆ ಇತರ ನ್ಯಾನೊ ರಸಗೊಬ್ಬರಗಳು ಕೂಡಾ ಲಭ್ಯವಾಗಲಿವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

"ಭಾರತವು ವಿಶ್ವದಲ್ಲಿ ಯೂರಿಯಾದ ಎರಡನೇ ಅತಿದೊಡ್ಡ ಗ್ರಾಹಕ ದೇಶವಾಗಿದೆ. ಆದರೆ ಮೂರನೇ ಅತಿದೊಡ್ಡ ಉತ್ಪಾದಕ ಕೂಡಾ ಆಗಿದೆ.  2014ರಲ್ಲಿ ನಮ್ಮ ಸರ್ಕಾರ ರಚನೆಯಾದ ಬಳಿಕ  ಯೂರಿಯಾಕ್ಕೆ ಶೇ.100ರಷ್ಟು ಬೇವಿನ ಲೇಪನವನ್ನು ಸರ್ಕಾರ ಕಡ್ಡಾಯ ಮಾಡಿತ್ತು.  ಇದರಿಂದಾಗಿ ಇಂದು ದೇಶದ ರೈತರಿಗೆ ಸಾಕಷ್ಟು ಯೂರಿಯಾ ಸಿಗುತ್ತದೆ.  ಅದೇ ಸಮಯದಲ್ಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ತೆಲಂಗಾಣದಲ್ಲಿ ನಿಲುಗಡೆಯಾದ (ಮುಚ್ಚಿದ) 5 ರಸಗೊಬ್ಬರ ಕಾರ್ಖಾನೆಗಳನ್ನು ಪುನರಾರಂಭಿಸುವ ಕೆಲಸವನ್ನು  ಪ್ರಾರಂಭಿಸಲಾಯಿತು. ಉತ್ತರಪ್ರದೇಶ ಮತ್ತು ತೆಲಂಗಾಣ ಕಾರ್ಖಾನೆಗಳು ಈಗಾಗಲೇ ಉತ್ಪಾದನೆಯನ್ನು ಪ್ರಾರಂಭಿಸಿವೆ ಮತ್ತು ಇತರ ಮೂರು ಕಾರ್ಖಾನೆಗಳು ಕೂಡ ಶೀಘ್ರದಲ್ಲೇ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.

"ಯೂರಿಯಾ ಮತ್ತು ಫಾಸ್ಫೇಟ್ ಮತ್ತು ಪೊಟ್ಯಾಶ್ ಆಧಾರಿತ ರಸಗೊಬ್ಬರಗಳಿಗೆ ಸಂಬಂಧಿಸಿದಂತೆ ಆಮದು ಅವಲಂಬನೆಯನ್ನು ಕುರಿತು ವಿವರಿಸುತ್ತಾ, ಸಾಂಕ್ರಾಮಿಕ ಮತ್ತು ಯುದ್ಧದ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬೆಲೆ ಏರಿಕೆ ಮತ್ತು ಲಭ್ಯತೆಯ ಕೊರತೆಯ ಬಗ್ಗೆ ಪ್ರಧಾನಮಂತ್ರಿ ಅವರು ಸವಿವರವಾಗಿ ವಿಶ್ಲೇಷಿಸಿದರು.  "ಸಂವೇದನಾಶೀಲ ಕೇಂದ್ರ ಸರ್ಕಾರವು ಈ ಜಾಗತಿಕ ಸಮಸ್ಯೆಗಳನ್ನು ರೈತರ ತನಕ ತಲುಪಲು ಬಿಡಲಿಲ್ಲ ಮತ್ತು ಇಂತಹ ಕಠಿಣ ಪರಿಸ್ಥಿತಿಯ ಹೊರತಾಗಿಯೂ ಭಾರತದಲ್ಲಿ ರಸಗೊಬ್ಬರದ ಯಾವುದೇ ಬಿಕ್ಕಟ್ಟು ರೂಪುಗೊಳ್ಳಲು ಕೇಂದ್ರ ಸರ್ಕಾರ ಬಿಡಲಿಲ್ಲ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.  "ರೂ.3500 ಬೆಲೆಯ ಯೂರಿಯಾ ಚೀಲವನ್ನು ರೂ.300ಗೆ ರೈತರಿಗೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ಪ್ರತಿ ಚೀಲಕ್ಕೆ ರೂ.3200 ರೂ ಸಬ್ಸಿಡಿ ನೀಡುತ್ತದೆ.  ಅದೇ ರೀತಿ ಡಿ.ಎ.ಪಿ. ಚೀಲದ ಮೇಲೆ ಹಿಂದಿನ ಸರ್ಕಾರಗಳು ನೀಡುತ್ತಿದ್ದ ರೂ.500.ಗೆ ಬದಲಾಗಿ ಈಗ ರೂ.2500 ನೀಡುತ್ತಿದೆ. ಕಳೆದ ವರ್ಷ ರೂ.1 ಲಕ್ಷದ 60 ಸಾವಿರ ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದ್ದು, ಈ ವರ್ಷ ಸಬ್ಸಿಡಿ ಮೊತ್ತವು ರೂ.2 ಲಕ್ಷ ಕೋಟಿಗೂ ಅಧಿಕವಾಗಲಿದೆ" ಎಂದು ಪ್ರಧಾನಮಂತ್ರಿ ಅವರು ರೈತರಿಗೆ ಮಾಹಿತಿ ನೀಡಿದರು. ದೇಶದ ರೈತರ ಹಿತಾಸಕ್ತಿಗಾಗಿ ಏನು ಬೇಕಾದರೂ ಮಾಡುವುದಾಗಿ ಮತ್ತು ದೇಶದ ರೈತರನ್ನು ಬಲಪಡಿಸುವುದನ್ನು ಮುಂದುವರಿಸುವುದಾಗಿ ಪ್ರಧಾನಮಂತ್ರಿ ಅವರು ರೈತರಿಗೆ ಭರವಸೆ ನೀಡಿದರು.

"ಕಳೆದ 8 ವರ್ಷಗಳಲ್ಲಿ, ದೇಶವು ಎದುರಿಸುತ್ತಿರುವ ಸಮಸ್ಯೆಗಳಿಗೆ ತಕ್ಷಣದ ಮತ್ತು ದೀರ್ಘಕಾಲೀನ ಪರಿಹಾರಗಳೆರಡರಲ್ಲೂ, ಕೇಂದ್ರ ಸರ್ಕಾರ ಬಹಳಷ್ಟು ಸಕಾರಾತ್ಮಕ ಕೆಲಸಗಳನ್ನು ಮಾಡಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.  ಯಾವುದೇ ಸಾಂಕ್ರಾಮಿಕ ರೋಗ ಪಸರಿಸದಂತೆ ಎದುರಿಸಲು ಉತ್ತಮ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವುದು, ಖಾದ್ಯ ತೈಲ ಸಮಸ್ಯೆಗಳನ್ನು ನಿಭಾಯಿಸಲು ಮಿಷನ್ ಆಯಿಲ್ ಪಾಮ್, ತೈಲ ಸಮಸ್ಯೆಗಳನ್ನು ನಿಭಾಯಿಸಲು ಜೈವಿಕ ಇಂಧನ ಮತ್ತು ಹೈಡ್ರೋಜನ್ ಇಂಧನ, ನೈಸರ್ಗಿಕ ಕೃಷಿ ಮತ್ತು ನ್ಯಾನೊತಂತ್ರಜ್ಞಾನದ ಪುಶ್ ಮುಂತಾದ ಪರಿಹಾರಗಳ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.  ಅದೇ ರೀತಿ "ಸ್ವಾವಲಂಬನೆಯಲ್ಲಿ ಭಾರತದ ಹಲವು ಕಷ್ಟಗಳಿಗೆ ಪರಿಹಾರವಿದೆ, ಸಹಕಾರವು ಸ್ವಾವಲಂಬನೆಯ ಶ್ರೇಷ್ಠ ಮಾದರಿ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.

"ಪೂಜ್ಯ ಬಾಪು ಮತ್ತು ಸರ್ದಾರ್ ಸಾಹೇಬರ ನಾಯಕತ್ವ ನಮಗೆ ಸಿಕ್ಕಿದ್ದರಿಂದ ಗುಜರಾತ್ ಕೂಡ ಅದೃಷ್ಟಶಾಲಿಯಾಗಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. "ಪೂಜ್ಯ ಬಾಪು ತೋರಿದ ಮಾರ್ಗವನ್ನು ಸಹಕಾರದ ಮೂಲಕ ಸ್ವಯಂ ಸಹಾಯಕ್ಕೆ ತರುವ ಕೆಲಸವನ್ನು ಸರ್ದಾರ್ ಸಾಹೇಬರು ಮಾಡಿದರು.  ಹೈನುಗಾರಿಕೆ ಕ್ಷೇತ್ರದ ಸಹಕಾರಿ ಮಾದರಿಯ ಉದಾಹರಣೆಗಳು ನಮ್ಮ ಮುಂದಿದೆ.  ಇಂದು ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕರಾಗಿದ್ದು, ಅದರಲ್ಲಿ ಗುಜರಾತ್ ಪ್ರಮುಖ ಪಾಲನ್ನು ಹೊಂದಿದೆ.  ಕಳೆದ ಕೆಲವು ವರ್ಷಗಳಲ್ಲಿ ಹೈನುಗಾರಿಕೆ ಕ್ಷೇತ್ರವೂ ವೇಗವಾಗಿ ಬೆಳೆಯುತ್ತಿದೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ.  ಗುಜರಾತ್ ನಲ್ಲಿ, ಹಾಲು ಆಧಾರಿತ ಕೈಗಾರಿಕೆಗಳು ವ್ಯಾಪಕವಾಗಿ ಹರಡಿತು ಏಕೆಂದರೆ ಇದರಲ್ಲಿ ಸರ್ಕಾರದ ಕಡೆಯಿಂದ ನಿರ್ಬಂಧಗಳು ಕಡಿಮೆ, ಸಹಕಾರವಿದೆ.  ಇಲ್ಲಿ ಸರ್ಕಾರವು ಕೇವಲ ಪ್ರೇರಕವಾಗಿ ಅನುಕೂಲ ಕಲ್ಪಿಸುವ ಪಾತ್ರವನ್ನು ಮಾತ್ರ ವಹಿಸುತ್ತದೆ, ಉಳಿದವುಗಳನ್ನು ಸಹಕಾರಿ ಕ್ಷೇತ್ರ ಅಥವಾ ರೈತರು ಮಾಡುತ್ತಾರೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು

"ಅಮೃತ್ ಕಾಲ್ ಯೋಜನೆಯ ಜೊತೆಗೆ  ಸಹಕಾರದ ಮನೋಭಾವವನ್ನು ಜೋಡಿಸಲು ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಯಪ್ರವೃತ್ತವಾಗಿ, ಪ್ರಕ್ರಿಯೆಯು ತೀವ್ರ ಗತಿಯಿಂದ ಮುನ್ನಡೆಯುತ್ತಿದೆ" ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.  "ಈ ಉದ್ದೇಶದಿಂದ ಸಹಕಾರ ಕ್ಷೇತ್ರದ ಪ್ರಗತಿಗಾಗಿ ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಯಿತು.  ದೇಶದಲ್ಲಿ ಸಹಕಾರಿ ಆಧರಿತ ಆರ್ಥಿಕ ಮಾದರಿಯನ್ನು  ಪ್ರೋತ್ಸಾಹಿಸಲು ಪ್ರಯತ್ನಿಸಲಾಗುತ್ತಿದೆ. ಸಹಕಾರ ಕ್ಷೇತ್ರದ ಬಹು ದೊಡ್ಡ ಶಕ್ತಿ ಎಂದರೆ ನಂಬಿಕೆ, ಸಹಕಾರ ಮತ್ತು ಸಾಮೂಹಿಕ ಶಕ್ತಿಯೊಂದಿಗೆ ಸಂಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುವುದು.  ಇದು ಜೊತೆಗೂಡಿದರೆ, ಅಮೃತ ಕಾಲ್ ಸಂಕಲ್ಪದಲ್ಲಿ ಭಾರತದ ಯಶಸ್ಸು ಗ್ಯಾರಂಟಿ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.  "ಅಮೃತ ಕಾಲ್‌  ಸಂಕಲ್ಪದಲ್ಲಿ ಚಿಕ್ಕ ಯೋಜನೆ ಮತ್ತು ಕಡಿಮೆ ಅಂದಾಜು ವ್ಯವಸ್ಥೆಗಳನ್ನು ದೊಡ್ಡ ಶಕ್ತಿಯನ್ನಾಗಿ ಮಾಡಲು ಕೇಂದ್ರ ಸರ್ಕಾರವು ಕೆಲಸ ಮಾಡುತ್ತಿದೆ.  ಇಂದು ಸಣ್ಣ ರೈತರು ಎಲ್ಲ ರೀತಿಯಲ್ಲೂ ಸಬಲರಾಗುತ್ತಿದ್ದಾರೆ.  ಅದೇ ರೀತಿ, ಸಣ್ಣ-ಪ್ರಮಾಣದ ಕೈಗಾರಿಕೆಗಳು ಮತ್ತು ಎಂ.ಎಸ್.ಎಂ.ಇ.ಗಳನ್ನು ಕೂಡಾ ಭಾರತದ ಸ್ವಾವಲಂಬಿ ಪೂರೈಕೆ ಸರಪಳಿಯ ಪ್ರಬಲ ಭಾಗವನ್ನಾಗಿ ಮಾಡಲಾಗುತ್ತಿದೆ.  ನಮ್ಮ ಗುರಿಗಳನ್ನು ಸಾಧಿಸಲು ಸಹಕಾರ ಕ್ಷೇತ್ರವು ನಮಗೆ ಅಪಾರ ಸಹಾಯ ಮಾಡುತ್ತಿದೆ ಮತ್ತು ಭಾರತವು ಯಶಸ್ಸು ಮತ್ತು ಸಮೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತದೆ ಎಂಬ ಖಾತ್ರಿ ನನಗಿದೆ" ಎಂದು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಹೇಳಿದರು

***
 



(Release ID: 1829074) Visitor Counter : 155