ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ರಜತ ಮಹೋತ್ಸವದಲ್ಲಿ ಪ್ರಧಾನಮಂತ್ರಿ ಭಾಷಣ

Posted On: 17 MAY 2022 1:40PM by PIB Bengaluru

ನಮಸ್ಕಾರ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಅಶ್ವಿನಿ ವೈಷ್ಣವ್ ಜಿ, ಶ್ರೀ ದೇವುಸಿಂಹ ಚೌಹಾಣ್ ಜಿ, ಡಾ. ಎಲ್ ಮುರುಗನ್ ಜಿ, ದೂರಸಂಪರ್ಕ ಮತ್ತು ಪ್ರಸಾರ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ನಾಯಕರೆ, ಮಹಿಳೆಯರೆ ಮತ್ತು ಮಹನೀಯರೇ!

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ – ಟ್ರಾಯ್ ರಜತ ಮಹೋತ್ಸವಕ್ಕೆ ಸಂಬಂಧಿಸಿದ ಎಲ್ಲ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಎಂತಹ ಅದ್ಭುತ ಕಾಕತಾಳೀಯ, ಇಂದು ನಿಮ್ಮ ಸಂಸ್ಥೆಯು 25 ವರ್ಷಗಳನ್ನು ಪೂರೈಸಿದೆ, ಅದೇ ಸಮಯದಲ್ಲಿ ದೇಶವು ಮುಂದಿನ 25 ವರ್ಷಗಳ ಅಭಿವೃದ್ಧಿ ಮಾರ್ಗಸೂಚಿಯಲ್ಲಿ ಕೆಲಸ ಮಾಡುತ್ತಿದೆ, 'ಆಜಾದಿ ಕಾ ಅಮೃತ್ ಕಾಲ' ಸಮಯದಲ್ಲಿ ಹೊಸ ಗುರಿಗಳನ್ನು ಹೊಂದಿಸುತ್ತಿದೆ. ಇತ್ತೀಚೆಗಷ್ಟೇ ನಮ್ಮ ದೇಶೀಯ 5ಜಿ ಪರೀಕ್ಷಾ ಪ್ರಯೋಗವನ್ನು ರಾಷ್ಟ್ರಕ್ಕೆ ಸಮರ್ಪಿಸಲು ನನಗೆ ಅವಕಾಶ ಸಿಕ್ಕಿತು. ದೂರಸಂಪರ್ಕ ವಲಯದಲ್ಲಿ ನಿರ್ಣಾಯಕ ಮತ್ತು ಆಧುನಿಕ ತಂತ್ರಜ್ಞಾನದ ಸ್ವಾವಲಂಬನೆಯತ್ತ ಇದು ಪ್ರಮುಖ ಹೆಜ್ಜೆಯಾಗಿದೆ. ಐಐಟಿಗಳು ಮತ್ತು ಈ ಯೋಜನೆಗೆ ಸಂಬಂಧಿಸಿದ ಪ್ರತಿಯೊಬ್ಬರನ್ನು ನಾನು ಅಭಿನಂದಿಸುತ್ತೇನೆ. ಅಲ್ಲದೆ, 5ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಈ ಪರೀಕ್ಷಾ ಸೌಲಭ್ಯವನ್ನು ಬಳಸಲು ನಾನು ದೇಶದ ಯುವ ಸ್ನೇಹಿತರು, ಸಂಶೋಧಕರು ಮತ್ತು ಕಂಪನಿಗಳನ್ನು ಆಹ್ವಾನಿಸುತ್ತೇನೆ. ವಿಶೇಷವಾಗಿ ನಮ್ಮ ನವೋದ್ಯಮಗಳಿಗೆ ತಮ್ಮ ಉತ್ಪನ್ನಗಳನ್ನು ಪರೀಕ್ಷಿಸಲು ಇದು ಉತ್ತಮ ಅವಕಾಶವಾಗಿದೆ. ಇದಲ್ಲದೆ, ದೇಶದ ಸ್ವಂತ 5ಜಿ ತಂತ್ರಜ್ಞಾನವನ್ನು 5ಜಿಐ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ದೇಶಕ್ಕೆ ಅತ್ಯಂತ ಹೆಮ್ಮೆಯ ವಿಚಾರ. 5ಜಿ ತಂತ್ರಜ್ಞಾನವನ್ನು ದೇಶದ ಪ್ರತಿ ಹಳ್ಳಿಗೂ ವಿಸ್ತರಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.

 

ಸ್ನೇಹಿತರೆ,

21ನೇ ಶತಮಾನದ ಭಾರತದ ದೂರಸಂಪರ್ಕ ರಂಗವು ದೇಶದ ಪ್ರಗತಿಯ ವೇಗವನ್ನು ನಿರ್ಧರಿಸುತ್ತದೆ. ಆದ್ದರಿಂದ ಸಂಪರ್ಕವನ್ನು ಪ್ರತಿ ಹಂತದಲ್ಲೂ ಆಧುನೀಕರಿಸಬೇಕಾಗಿದೆ. ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆಧುನಿಕ ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಿಕೊಳ್ಳುವುದರಿಂದ ಅದರ ಭದ್ರ ಬುನಾದಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. 5ಜಿ ತಂತ್ರಜ್ಞಾನವು ಸುಲಭವಾದ ಜೀವನ, ಸುಲಭ ವ್ಯಾಪಾರ ಮತ್ತು ವಹಿವಾಟು ಮತ್ತಿತರ ವಿಷಯಗಳಲ್ಲಿ, ದೇಶದ ಆಡಳಿತದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಹೊರಟಿದೆ. ಇದು ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಸರಕು ಸಾಗಣೆಯಂತಹ ಪ್ರತಿಯೊಂದು ವಲಯದಲ್ಲಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಅನುಕೂಲ ಕಲ್ಪಿಸುವ ಜತೆಗೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಮುಂಬರುವ ಒಂದೂವರೆ ದಶಕದಲ್ಲಿ, 5ಜಿ ತಂತ್ರಜ್ಞಾನವು  ಭಾರತದ ಆರ್ಥಿಕತೆಗೆ 450 ಶತಕೋಟಿ ಡಾಲರ್ ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ, ಇದು ಅಂತರ್ಜಾಲದ ವೇಗವನ್ನು ಹೆಚ್ಚಿಸುವುದಲ್ಲದೆ, ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯ ವೇಗವನ್ನು ಸಹ ಹೆಚ್ಚಿಸುತ್ತದೆ. ಆದ್ದರಿಂದ, 5ಜಿ ತಂತ್ರಜ್ಞಾನದ ​​ಕ್ಷಿಪ್ರ ಅನಾವರಣಕ್ಕಾಗಿ, ಸರ್ಕಾರ ಮತ್ತು ಉದ್ಯಮ ಎರಡರಿಂದಲೂ ಸಂಘಟಿತ ಪ್ರಯತ್ನಗಳನ್ನು ನಡೆಸುವ ಅಗತ್ಯವಿದೆ. ನಮ್ಮ ಕಾರ್ಯಪಡೆಯು ಈಗಾಗಲೇ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ. ಆದ್ದರಿಂದ ಈ ದಶಕದ ಅಂತ್ಯದ ವೇಳೆಗೆ ನಾವು 6ಜಿ ಸೇವೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೆ,

ದೂರಸಂಪರ್ಕ ವಲಯ ಮತ್ತು 5ಜಿ ತಂತ್ರಜ್ಞಾನದ ವಿಷಯದಲ್ಲಿ ನಮ್ಮ ನವೋದ್ಯಮಗಳು ಆದಷ್ಟು ಬೇಗ ಸಿದ್ಧವಾಗಿವೆ ಮತ್ತು ಜಾಗತಿಕ ಚಾಂಪಿಯನ್‌ಗಳಾಗಿ ಬದಲಾಗಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಬಹು ವಲಯಗಳಲ್ಲಿ ವಿಶ್ವದ ಅತಿದೊಡ್ಡ ವಿನ್ಯಾಸ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದ್ದೇವೆ. ದೂರಸಂಪರ್ಕ ಸಲಕರಣೆಗಳ ಮಾರುಕಟ್ಟೆಯಲ್ಲಿ ಭಾರತದ ವಿನ್ಯಾಸ, ನಮ್ಮ ಚಾಂಪಿಯನ್‌ಗಳ ತಾಕತ್ತಿನ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ನಾವು ಈಗ ಮೂಲಸೌಕರ್ಯ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಸರಾಗಗೊಳಿಸುವತ್ತ ವಿಶೇಷ ಗಮನ ಹರಿಸಿದ್ದೇವೆ. ಈ ಪ್ರಯತ್ನದಲ್ಲಿ ನೀವೆಲ್ಲರೂ ಪ್ರಮುಖ ಪಾತ್ರವನ್ನು ವಹಿಸಬೇಕು.

 

ಸ್ನೇಹಿತರೆ,

ಸ್ವಾವಲಂಬನೆ ಮತ್ತು ಆರೋಗ್ಯಕರ ಸ್ಪರ್ಧೆಯು ಆರ್ಥಿಕತೆ ಮತ್ತು ಸಮಾಜದಲ್ಲಿ ಗುಣಾತ್ಮಕ ಪರಿಣಾಮವನ್ನು ಹೇಗೆ ಸೃಷ್ಟಿಸುತ್ತದೆ ಎಂಬುದಕ್ಕೆ ನಮ್ಮ ದೂರಸಂಪರ್ಕ ಕ್ಷೇತ್ರವು ಉತ್ತಮ ಉದಾಹರಣೆಯಾಗಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ನಾವು 2ಜಿ ತಂತ್ರಜ್ಞಾನ ಯುಗವನ್ನು ನೋಡೋಣ. 2ಜಿ ಯುಗವು ಹತಾಶೆ, ನಿರಾಶೆ, ಭ್ರಷ್ಟಾಚಾರ ಮತ್ತು ನೀತಿ ಲೋಪಗಳಿಂದ ಕೂಡಿತ್ತು. ಆದರೆ ಆ ಯುಗದಿಂದ ಹೊರಬಂದ ನಂತರ, ಇಂದು ದೇಶವು 3ಜಿ ಯಿಂದ 4ಜಿ ಮತ್ತು ಈಗ 5ಜಿಯಿಂದ 6ಜಿಗೆ ವೇಗವಾಗಿ ಚಲಿಸಿದೆ. ಈ ಪರಿವರ್ತನೆಯು ಬಹಳ ಸುಗಮವಾಗಿ ನಡೆಯುತ್ತಿದೆ, ಸಾಕಷ್ಟು ಪಾರದರ್ಶಕತೆಯೊಂದಿಗೆ ಟ್ರಾಯ್ ಈ ದಿಕ್ಕಿನಲ್ಲಿ ಬಹಳ ನಿರ್ಣಾಯಕ ಪಾತ್ರ ವಹಿಸಿದೆ. ಪೂರ್ವಾನ್ವಯವಾಗುವಂತೆ ಇದ್ದ ತೆರಿಗೆ ಪದ್ಧತಿ ಅಥವಾ ಎಜಿಆರ್‌ನಂತಹ ಸವಾಲುಗಳು ಉದ್ಯಮದ ಮುಂದೆ ಬಂದಾಗ, ನಾವು ಅದೇ ವೇಗದಲ್ಲಿ ಪ್ರತಿಕ್ರಿಯಿಸಲು ಪ್ರಯತ್ನಿಸಿದ್ದೇವೆ, ಅಗತ್ಯವಿರುವ ಕಡೆ ತೆರಿಗೆ ಸುಧಾರಣೆಗಳನ್ನು ಮಾಡಿದ್ದೇವೆ. ಅಂತಹ ಪ್ರಯತ್ನಗಳು ಹೊಸ ನಂಬಿಕೆಯನ್ನು ನಿರ್ಮಿಸಿದವು. ಇದರ ಪರಿಣಾಮವಾಗಿ, 2014ಕ್ಕಿಂತ ಮೊದಲು ಒಂದು ದಶಕದಿಂದ ನಾವು ಸ್ವೀಕರಿಸಿದ್ದಕ್ಕೆ ಹೋಲಿಸಿದರೆ ಇತ್ತೀಚಿಗಿನ ಕೇವಲ 8 ವರ್ಷಗಳಲ್ಲಿ ದೂರಸಂಪರ್ಕ ವಲಯದಲ್ಲಿ ಒಂದೂವರೆ ಪಟ್ಟು ಹೆಚ್ಚಿನ ವಿದೇಶಿ ನೇರ ಹೂಡಿಕೆ(ಎಫ್ ಡಿಐ) ಒಳಹರಿವಾಗಿದೆ. ಭಾರತದ ನೈಜ ಸಾಮರ್ಥ್ಯದ ಬಗ್ಗೆ ಹೂಡಿಕೆದಾರರ ಸಕಾರಾತ್ಮಕ ಭಾವನೆಯನ್ನು ಬಲಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

 

ಸ್ನೇಹಿತರೆ,

ಇಷ್ಟು ವರ್ಷಗಳ ಕಾಲ ಸರ್ಕಾರ ಹೊಸ ಚಿಂತನೆ ಮತ್ತು ಧೋರಣೆಯೊಂದಿಗೆ ಕೆಲಸ ಮಾಡುತ್ತಿರುವ ರೀತಿ ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಈಗ ದೇಶವು 'ಸರ್ಕಾರದ ಪರಿಪೂರ್ಣ' ವಿಧಾನದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಮೊದಲಿನಂತೆ  ಬೇರೆ ಬೇರೆಯಾಗಿ ಕೆಲಸ ಮಾಡುವ' ಅಂದರೆ ಪ್ರತಿ ಇಲಾಖೆಯೂ ಪ್ರತ್ಯೇಕವಾಗಿ ದ್ವೀಪಗಳಂತೆ ಪರಸ್ಪರ ಸಮನ್ವಯವಿಲ್ಲದೆ ಕೆಲಸ ಮಾಡುವ ಮನಸ್ಥಿತಿಯಿಂದ ಹೊರಬರುತ್ತಿದೆ. ಇಂದು ನಾವು ಜಗತ್ತಿನಲ್ಲಿ ದೂರಸಂಪರ್ಕ-ಸಾಂದ್ರತೆ ಮತ್ತು ಅಂತರ್ಜಾಲ ಬಳಕೆದಾರರ ವಿಷಯದಲ್ಲಿ ವೇಗವಾಗಿ ಬೆಳೆಯುತ್ತಿದ್ದೇವೆ. ದೂರಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳು ಇದರಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಆದರೆ ಪ್ರಮುಖ ಪಾತ್ರವನ್ನು ಅಂತರ್ಜಾಲದ ಮೂಲಕ ನಿರ್ವಹಿಸಲಾಗುತ್ತಿದೆ. ನಾವು 2014 ರಲ್ಲಿ ಅಧಿಕಾರಕ್ಕೆ ಬಂದಾಗ, ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮತ್ತು ತಂತ್ರಜ್ಞಾನದ ವ್ಯಾಪಕ ಬಳಕೆಯನ್ನು ನಮ್ಮ ಆದ್ಯತೆಯಾಗಿ ಮಾಡಿದ್ದೇವೆ. ಇದಕ್ಕಾಗಿ ದೇಶದ ಕೋಟ್ಯಂತರ ಜನರು ಒಂದಾಗಿ ಸರ್ಕಾರದೊಂದಿಗೆ ಸಂಪರ್ಕ ಸಾಧಿಸುವುದು ಅತ್ಯಗತ್ಯವಾಗಿತ್ತು. ಇದಲ್ಲದೆ, ಸರ್ಕಾರದ ಎಲ್ಲಾ ಘಟಕಗಳು, ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಸರ್ಕಾರ ಹಾಗೂ ಸಂಸ್ಥೆಗಳು ಒಟ್ಟಿಗೆ ಚಲಿಸಬೇಕಾಗಿತ್ತು. ಕನಿಷ್ಟ ಸಂಭವನೀಯ ವೆಚ್ಚದಲ್ಲಿ ಸುಲಭವಾಗಿ ಸೇರಲು ಮತ್ತು ಭ್ರಷ್ಟಾಚಾರವಿಲ್ಲದೆ ಸರ್ಕಾರಿ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದನ್ನು ನಾವು ಖಚಿತಪಡಿಸಿದ್ದೇವೆ. ಅದಕ್ಕಾಗಿಯೇ ನಾವು ಜನ್ ಧನ್, ಆಧಾರ್, ಮೊಬೈಲ್ ಎಂಬ ತ್ರಿಮೂರ್ತಿಗಳನ್ನು ನೇರ ಆಡಳಿತದ ಮಾಧ್ಯಮವಾಗಿ ತರಲು ನಿರ್ಧರಿಸಿದ್ದೇವೆ. ಕಡು ಬಡ ಕುಟುಂಬಗಳ ಜನರಿಗೆ ಮೊಬೈಲ್ ಲಭ್ಯವಾಗುವಂತೆ ಮಾಡಲು, ನಾವು ದೇಶದಲ್ಲಿಯೇ ಮೊಬೈಲ್ ಫೋನ್‌ಗಳನ್ನು ತಯಾರಿಸಲು ಒತ್ತು ನೀಡಿದ್ದೇವೆ. ಪರಿಣಾಮವಾಗಿ, ಕೇವಲ 2ರಷ್ಟಿದ್ದ ಮೊಬೈಲ್ ಉತ್ಪಾದನಾ ಘಟಕಗಳು ಇದೀಗ 200ಕ್ಕಿಂತ ಹೆಚ್ಚಿವೆ. ಇಂದು ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ದೇಶವಾಗಿದೆ. ನಮ್ಮ ಅಗತ್ಯಗಳಿಗಾಗಿ ನಾವು ಫೋನ್‌ಗಳನ್ನು ಆಮದು ಮಾಡಿಕೊಳ್ಳುವ ಸಮಯವಿತ್ತು. ಆದರೆ ಇಂದು ನಾವು ಮೊಬೈಲ್ ಫೋನ್ ರಫ್ತಿನಲ್ಲಿ ಹೊಸ ದಾಖಲೆ ನಿರ್ಮಿಸಿದ್ದೇವೆ.

ಸ್ನೇಹಿತರೆ,

ಮೊಬೈಲ್ ಸಂಪರ್ಕ ವಿಸ್ತರಿಸಲು, ಕರೆಗಳು ಮತ್ತು ಡೇಟಾ ದುಬಾರಿ ಆಗದಿರುವುದು ಕಡ್ಡಾಯವಾಗಿತ್ತು. ಅದಕ್ಕಾಗಿಯೇ ನಾವು ದೂರಸಂಪರ್ಕ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಿದ್ದೇವೆ. ಪರಿಣಾಮವಾಗಿ, ಇಂದು ನಾವು ವಿಶ್ವದ ಅಗ್ಗದ ಡೇಟಾ ಪೂರೈಕೆದಾರರಲ್ಲಿ ಒಬ್ಬರಾಗಿದ್ದೇವೆ. ಇಂದು ಭಾರತವು ದೇಶದ ಪ್ರತಿಯೊಂದು ಹಳ್ಳಿಯನ್ನು ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕಿಸುವಲ್ಲಿ ನಿರತವಾಗಿದೆ. 2014ರ ಮೊದಲು ಭಾರತದಲ್ಲಿ 100 ಗ್ರಾಮ ಪಂಚಾಯಿತಿಗಳು ಸಹ ಆಪ್ಟಿಕಲ್ ಫೈಬರ್ ಜಾಲಕ್ಕೆ ಸಂಪರ್ಕ ಪಡೆದಿರಲಿಲ್ಲ ಎಂಬುದು ನಿಮಗೂ ತಿಳಿದಿದೆ. ಇಂದು ನಾವು ಸುಮಾರು 1.75 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ವಿಸ್ತರಿಸಿದ್ದೇವೆ. ಕೆಲವು ಸಮಯದ ಹಿಂದೆ, ದೇಶದ ಹಲವಾರು ನಕ್ಸಲ್ ಪೀಡಿತ ಬುಡಕಟ್ಟು ಜಿಲ್ಲೆಗಳಿಗೆ 4ಜಿ ತಂತ್ರಜ್ಞಾನ ಸಂಪರ್ಕ ಒದಗಿಸುವ ಪ್ರಮುಖ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಇದು 5ಜಿ ಮತ್ತು 6ಜಿ ತಂತ್ರಜ್ಞಾನಕ್ಕೆ ಮಾತ್ರವಲ್ಲದೆ, ಮೊಬೈಲ್ ಮತ್ತು ಅಂತರ್ಜಾಲ ವ್ಯಾಪ್ತಿಯನ್ನು ವಿಸ್ತರಿಸಲಿದೆ.

 

ಸ್ನೇಹಿತರೆ,

ಹೆಚ್ಚು ಹೆಚ್ಚು ಭಾರತೀಯರು ಫೋನ್‌ಗಳು ಮತ್ತು ಅಂತರ್ಜಾಲಕ್ಕೆ ಪ್ರವೇಶ  ಹೊಂದಿರುವುದರಿಂದ, ಭಾರತವು ಬಹುದೊಡ್ಡ ಸಾಮರ್ಥ್ಯವನ್ನು ಅನಾವರಣ ಮಾಡಿದೆ. ಇದು ದೇಶದಲ್ಲಿ ಪ್ರಬಲ ಡಿಜಿಟಲ್ ಮೂಲಸೌಕರ್ಯಕ್ಕೆ ಅಡಿಪಾಯ ಹಾಕಿದೆ. ಇದು ದೇಶದಲ್ಲಿ ಸೇವೆಗೆ ಭಾರಿ ಬೇಡಿಕೆ ಸೃಷ್ಟಿಸಿದೆ. ಉದಾಹರಣೆಗೆ, ದೇಶದ ಮೂಲೆ ಮೂಲೆಗಳಲ್ಲಿ 4 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂದು ಈ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೂರಾರು ಸರ್ಕಾರಿ ಸೇವೆಗಳು ಹಳ್ಳಿಗಳ ಜನರಿಗೆ ತಲುಪುತ್ತಿವೆ. ಈ ಸಾಮಾನ್ಯ ಸೇವಾ ಕೇಂದ್ರಗಳು ಲಕ್ಷಾಂತರ ಯುವಕರಿಗೆ ಉದ್ಯೋಗದ ಮಾಧ್ಯಮವಾಗಿಯೂ ಮಾರ್ಪಟ್ಟಿವೆ. ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ದಾಹೋದ್ ಜಿಲ್ಲೆ ಬುಡಕಟ್ಟು ಪ್ರದೇಶ ಅದು. ಅಲ್ಲಿ ನಾನು 'ದಿವ್ಯಾಂಗ' ದಂಪತಿಯನ್ನು ಭೇಟಿಯಾದೆ. ಅವರು ಸಾಮಾನ್ಯ ಸೇವಾ ಕೇಂದ್ರವನ್ನು ನಡೆಸುತ್ತಿದ್ದರು. ಆ ವ್ಯಕ್ತಿ ಹೇಳಿದರು, "ನಾನು ಅಂಗವಿಕಲನಾಗಿದ್ದು, ನಾನು ಈ ಸಣ್ಣ ಸಹಾಯ ಪಡೆದುಕೊಂಡು ಇದನ್ನು ಪ್ರಾರಂಭಿಸಿದೆ". ಬುಡಕಟ್ಟು ಪ್ರದೇಶದ ದೂರದ ಗ್ರಾಮದಲ್ಲಿರುವ ಸಾಮಾನ್ಯ ಸೇವಾ ಕೇಂದ್ರದಿಂದ ಇಂದು 28-30 ಸಾವಿರ ರೂ. ದುಡಿಯುವ ಮೂಲಕ ವಿಕಲಚೇತನ ದಂಪತಿ ಅಲ್ಲಿನ ಸಣ್ಣ ಹಳ್ಳಿಯೊಂದರಲ್ಲಿ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಬುಡಕಟ್ಟು ಪ್ರದೇಶದ ನಾಗರಿಕರೂ ಈ ಸೇವೆಗಳನ್ನು ಪಡೆಯುತ್ತಿದ್ದಾರೆ. ಈ ರೀತಿಯಾಗಿ ಡಿಜಿಟಲ್ ತಂತ್ರಜ್ಞಾನವು ರೂಪಾಂತರ, ಬದಲಾವಣೆ ತರುತ್ತಿದೆ.

 

ಸ್ನೇಹಿತರೆ,

ನಮ್ಮ ಸರ್ಕಾರವು ನಿರಂತರವಾಗಿ ತಂತ್ರಜ್ಞಾನವನ್ನು ನವೀಕರಿಸುತ್ತಿದೆ ಮತ್ತು ದೇಶದ ವಿತರಣಾ ವ್ಯವಸ್ಥೆಯನ್ನು ಸುಧಾರಿಸುತ್ತಿದೆ. ಇದು ಸೇವೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ದೇಶದ ನವೋದ್ಯಮ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡುತ್ತಿದೆ. ಭಾರತವನ್ನು ವಿಶ್ವದ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸಲು ಇದು ಪ್ರಮುಖ ಕಾರಣವಾಗಿದೆ. ಸ್ನೇಹಿತರೆ, ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಟ್ರಾಯ್ ನಂತಹ ನಮ್ಮ ಎಲ್ಲಾ ನಿಯಂತ್ರಕ ಸಂಸ್ಥೆಗಳಿಗೆ ಈ 'ಇಡೀ ಸರ್ಕಾರದ' ಕಾರ್ಯ ವಿಧಾನವು ಪ್ರಮುಖವಾಗಿದೆ. ಇಂದು ನಿಯಂತ್ರಣ ಸುಧಾರಣಾ ಕ್ರಮಗಳು ಕೇವಲ ಒಂದು ವಲಯಕ್ಕೆ ಸೀಮಿತವಾಗಿಲ್ಲ. ತಂತ್ರಜ್ಞಾನವು ವಿವಿಧ ಕ್ಷೇತ್ರಗಳನ್ನು ಪರಸ್ಪರ ಸಂಪರ್ಕಿಸುತ್ತಿದೆ. ಅದಕ್ಕಾಗಿಯೇ ಇಂದು ಪ್ರತಿಯೊಬ್ಬರೂ ನೈಸರ್ಗಿಕವಾಗಿ ಸಹಕಾರಿ ನಿಯಂತ್ರಣದ ಅಗತ್ಯವನ್ನು ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲಾ ನಿಯಂತ್ರಕ ಸಂಸ್ಥೆಗಳು ಒಗ್ಗೂಡುವುದು, ಸಾಮಾನ್ಯ ವೇದಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ತಮ ಸಮನ್ವಯದೊಂದಿಗೆ ಪರಿಹಾರಗಳನ್ನು ರೂಪಿಸುವುದು ಅವಶ್ಯಕ. ಈ ಸಮ್ಮೇಳನದಿಂದ ಒಂದು ಪ್ರಮುಖ ಪರಿಹಾರ ಹೊರಹೊಮ್ಮುತ್ತದೆ ಎಂಬುದು ನನಗೆ ಖಾತ್ರಿಯಿದೆ. ನೀವು ದೇಶದ ದೂರಸಂಪರ್ಕ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಬೇಕು, ವಿಶ್ವದ ಅತ್ಯಂತ ಲಾಭದಾಯಕ ಟೆಲಿಕಾಂ ಮಾರುಕಟ್ಟೆಯ ಬೆಳವಣಿಗೆ ಉತ್ತೇಜಿಸಬೇಕು. ಟ್ರಾಯ್ ರಜತ ಮಹೋತ್ಸವ ಸಮ್ಮೇಳನವು 'ಆಜಾದಿ ಕಾ ಅಮೃತ್ ಕಾಲ್' ಬೆಳವಣಿಗೆಗೆ ಪ್ರಚೋದನೆ ಮತ್ತು ಪ್ರೇರಣೆ ನೀಡುತ್ತದೆ, ಹೊಸ ಆತ್ಮವಿಶ್ವಾಸ ತುಂಬುತ್ತದೆ. ನಮ್ಮ ಕನಸುಗಳು ಮತ್ತು ಸಂಕಲ್ಪಗಳನ್ನು ಈಡೇರಿಸಲು ನಮಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಈ ನಿರೀಕ್ಷೆಯೊಂದಿಗೆ, ನಿಮ್ಮೆಲ್ಲರಿಗೂ ಅನಂತ ಧನ್ಯವಾದಗಳು! ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು, ತುಂಬು ಧನ್ಯವಾದಗಳು!

***



(Release ID: 1827920) Visitor Counter : 152