ಪ್ರಧಾನ ಮಂತ್ರಿಯವರ ಕಛೇರಿ
ಕೆನಡಾದ ಒಂಟಾರಿಯೊದ ಸನಾತನ ಸಾಂಸ್ಕೃತಿ ಕೇಂದ್ರವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
ಕೇಂದ್ರದಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಸ್ಥಾಪನೆ
“ಸರ್ದಾರ್ ಪಟೇಲ್ ಪ್ರತಿಮೆ ನಮ್ಮ ಸಾಂಸ್ಕೃತಿಕ ಮೌಲ್ಯಗಳ ಬಲವರ್ಧಿಸುವುದೇ ಅಲ್ಲದೆ ಎರಡೂ ದೇಶಗಳ ನಡುವಿನ ಸಂಬಂಧದ ಸಂಕೇತವಾಗಿದೆ’’
“ಭಾರತ ಕೇವಲ ರಾಷ್ಟ್ರವಲ್ಲ, ಅದು ಒಂದು ಕಲ್ಪನೆ ಮತ್ತು ಸಂಸ್ಕೃತಿಯಾಗಿದೆ”
“ಭಾರತವು ಇತರರ ಹಾನಿಯ ವೆಚ್ಚದ ಮೇಲೆ ಕೇವಲ ತನ್ನ ಏಳಿಗೆಯ ಕನಸು ಕಾಣುತ್ತಿಲ್ಲ’’
“ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕನಸು ಆಧುನಿಕ ಮತ್ತು ಪ್ರಗತಿಪರ ಭಾರತ ನಿರ್ಮಾಣವಲ್ಲ, ಜೊತೆಗೆ ಆಳವಾದ ಚಿಂತನೆ, ತತ್ವ ಮತ್ತು ಬೇರುಗಳೊಂದಿಗೆ ಸಂಪರ್ಕ ಹೊಂದಿರಬೇಕೆಂದು ಬಯಸಿದ್ದರು’’
“ಸರ್ದಾರ್ ಪಟೇಲ್ ಸಹಸ್ರಾರು ವರ್ಷಗಳ ಗತವೈಭವವ ಸ್ಮರಿಸಲು ಸೋಮನಾಥ ದೇವಾಲಯ ಪುಜರುಜ್ಜೀವಗೊಳಿಸಿದರು”
“ಆಜಾದಿ ಕಾ ಅಮೃತ ಮಹೋತ್ಸವ ಸಮಯದಲ್ಲಿ ಸರ್ದಾರ್ ಪಟೇಲ್ ಕನಸಿನ ನವಭಾರತ ಸೃಷ್ಟಿಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು”
“ಭಾರತದ ಅಮೃತ ಪ್ರತಿಜ್ಞೆ ಜಾಗತಿಕವಾಗಿ ಹರಡುತ್ತಿದೆ ಮತ್ತು ಜಗತ್ತನ್ನು ಬೆಸೆಯುತ್ತಿದೆ”
“ನಮ್ಮ ಪರಿಶ್ರಮ ಕೇವಲ ನಮಗಾಗಿ ಮಾತ್ರವಲ್ಲ, ಭಾರತದ ಪ್ರಗತಿ ಇಡೀ ಮನುಕುಲದ ಕಲ್ಯಾಣದ ಜತೆ ಸಂಯೋಜನೆಗೊಂಡಿದೆ”
Posted On:
01 MAY 2022 9:10PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೆನಡಾದ ಒಂಟಾರಿಯೊದ ಮಾರ್ಕ್ ಹಮ್ ನಲ್ಲಿನ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರ(ಎಸ್ಎಂಸಿಸಿ)ದಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಅನಾವರಣ ಸಂದರ್ಭವನ್ನುದ್ದೇಶಿಸಿ ವಿಡಿಯೊ ಸಂದೇಶದ ಮೂಲಕ ಭಾಷಣ ಮಾಡಿದರು.
ಪ್ರಧಾನಮಂತ್ರಿ ಅವರು ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಗುಜರಾತ್ ದಿನದ ಶುಭಾಶಯಗಳನ್ನು ಕೋರಿದ್ದಾರೆ. ತಮ್ಮ ಕೆನಡಾ ಭೇಟಿಯ ವೇಳೆ ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರಕ್ಕೆ ಭೇಟಿ ನೀಡಿದಾಗ ಆದ ಸಕಾರಾತ್ಮಕ ಅನುಭವವನ್ನು ಅವರು ಉಲ್ಲೇಖಿಸಿದರು. 2015ರಲ್ಲಿ ತಮ್ಮ ಭೇಟಿ ವೇಳೆ ಭಾರತೀಯ ಮೂಲದ ಜನರು ತೋರಿದ ಪ್ರೀತಿ ಮತ್ತು ಮಮತೆಯನ್ನು ಅವರು ವಿಶೇಷವಾಗಿ ಸ್ಮರಿಸಿದ್ದಾರೆ. “ಸನಾತನ ಮಂದಿರದಲ್ಲಿನ ಸರ್ದಾರ್ ಪಟೇಲ್ ಪ್ರತಿಮೆ ಕೇವಲ ನಮ್ಮ ಸಾಂಸ್ಕೃತಿಕ ಸಂಬಂಧಗಳ ಮೌಲ್ಯಗಳನ್ನು ಬಲವರ್ಧನೆಗೊಳಿಸುವುದಲ್ಲದೆ, ಎರಡೂ ದೇಶಗಳ ನಡುವಿನ ಸಂಬಂಧಗಳ ಸಂಕೇತವಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು.
ಅನಿವಾಸಿ ಭಾರತೀಯರಲ್ಲಿನ ಆಳವಾಗಿ ಬೇರೂರಿರುವ ಮೌಲ್ಯಗಳ ಕುರಿತು ವಿಸ್ತೃತವಾಗಿ ಮಾತನಾಡಿದ ಪ್ರಧಾನಮಂತ್ರಿ ಅವರು, ಭಾರತೀಯರು ಜಗತ್ತಿನಲ್ಲಿ ಎಲ್ಲೇ ನೆಲೆಸಿದ್ದರೂ ಎಷ್ಟೇ ಪೀಳಿಗೆಗಳು ಕಳೆದರೂ ಅವರಲ್ಲಿನ ಭಾರತೀಯತೆ ಮತ್ತು ಭಾರತದ ಬಗೆಗಿನ ನಿಷ್ಟೆ ಎಂದಿಗೂ ಕಡಿಮೆಯಾಗದು. ಭಾರತೀಯರು ಸಂಪೂರ್ಣ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಅವರು ನೆಲೆಸಿರುವ ರಾಷ್ಟ್ರಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಅಲ್ಲಿನ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಕರ್ತವ್ಯ ಪ್ರಜ್ಞೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಇದಕ್ಕೆ ಕಾರಣ “ಭಾರತ ಕೇವಲ ಒಂದು ರಾಷ್ಟ್ರವಲ್ಲ, ಅದು ಕಲ್ಪನೆ ಮತ್ತು ಸಂಸ್ಕೃತಿ, ಭಾರತ “ವಸುಧೈವಕುಟುಂಬಕಂ”ನಂತಹ ಉತ್ಕೃಷ್ಟ ಚಿಂತನೆಗಳನ್ನು ಹೊಂದಿದೆ. ಭಾರತ ಇತರೆ ರಾಷ್ಟ್ರಗಳ ಹಾನಿಯ ವೆಚ್ಚದ ಮೇಲೆ ತನ್ನ ಏಳಿಗೆಯನ್ನು ಬಯಸುತ್ತಿಲ್ಲ” ಎಂದರು.
ಕೆನಡಾ ಅಥವಾ ಯಾವುದೇ ರಾಷ್ಟ್ರದ ಸನಾತನ ಮಂದಿರಗಳು ಇತರೆ ದೇಶಗಳ ಮೌಲ್ಯಗಳನ್ನು ಉನ್ನತೀಕರಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಕೆನಡಾದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳ ಹಂಚಿಕೆಯ ಆಚರಣೆಯಾಗಿದೆ ಎಂದರು. “ಭಾರತದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಈ ಆಚರಣೆ ಕೆನಡಾದ ಜನರಿಗೆ ಭಾರತವನ್ನು ಅತ್ಯಂತ ನಿಕಟವಾಗಿ ಅರ್ಥಮಾಡಿಕೊಳ್ಳಲು ದೊರೆತ ಅವಕಾಶವಾಗಿದೆ’’ ಎಂದು ಅವರು ಹೇಳಿದರು.
ಸರ್ದಾರ್ ಪಟೇಲ್ ಅವರ ಪ್ರತಿಮೆ ಮತ್ತು ಆಯ್ಕೆಯ ಸ್ಥಳ ನವಭಾರತವನ್ನು ಪ್ರತಿಬಿಂಬಿಸುತ್ತದೆ ಎಂದ ಅವರು, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಆಧುನಿಕ ಮತ್ತು ಪ್ರಗತಿಪರ ಭಾರತದ ಕನಸು ಕಂಡಿದ್ದರು ಮತ್ತು ಅದು ಅತ್ಯಂತ ಆಳವಾದ ಚಿಂತನೆ, ತತ್ವ ಮತ್ತು ಬೇರುಗಳೊಂದಿಗೆ ಸಂಯೋಜನೆಗೊಂಡಿರುವಂತಹದು. ಅದೇ ಕಾರಣಕ್ಕೆ ಪ್ರಧಾನಮಂತ್ರಿ ಅವರು, ಸ್ವತಂತ್ರ ಭಾರತದಲ್ಲಿ ಸಹಸ್ರಾರು ವರ್ಷಗಳ ಗತವೈಭವವನ್ನು ಸ್ಮರಿಸಲು ಸರ್ದಾರ್ ಪಟೇಲ್ ಸೋಮನಾಥ ದೇವಾಲಯವನ್ನು ಪುನರುಜ್ಜೀವಗೊಳಿಸಿದರು ಎಂದರು. “ಇಂದು ಆಜಾದಿ ಕಾ ಅಮೃತ ಮಹೋತ್ಸವದ ವೇಳೆ ನಾವು ಸರ್ದಾರ್ ಪಟೇಲ್ ಅವರ ಕನಸಿನ ನವಭಾರತ ನಿರ್ಮಾಣಕ್ಕೆ ಪಣತೊಡಲು ನಮ್ಮನ್ನು ನಾವು ಸಮರ್ಪಿಸಿಕೊಳ್ಳುತ್ತಿದ್ದೇವೆ. ಏಕತಾ ಮೂರ್ತಿ ಅದಕ್ಕೆ ಬಹುದೊಡ್ಡ ಪ್ರೇರಣೆಯಾಗಿದೆ’’ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಸನಾತನ ಮಂದಿರ ಸಾಂಸ್ಕೃತಿಕ ಕೇಂದ್ರದಲ್ಲಿ ಏಕತಾ ಮೂರ್ತಿಯ ಪ್ರತಿಬಿಂಬ ಕಾಣಿಸುತ್ತಿದೆ. ಅದರ ಅರ್ಥ ಭಾರತದ ಅಮೃತ ಪ್ರತಿಜ್ಞೆ ಕೇವಲ ಭಾರತದ ಗಡಿಗಳಿಗೆ ಸೀಮಿತವಾಗಿಲ್ಲ. ಆ ಪ್ರತಿಜ್ಞೆ ಜಾಗತಿಕವಾಗಿ ಹರಡಿ, ಇಡೀ ಜಗತ್ತಿನೊಂದಿಗೆ ಬೆರೆತಿದೆ ಎಂದು ಹೇಳಿದರು.
ಅಮೃತ ಪ್ರತಿಜ್ಞೆಗಳು ಜಾಗತಿಕ ಆಯಾಮ ಪಡೆದುಕೊಳ್ಳುತ್ತಿವೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು, ನಾವು ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡುವಾಗ ಜಗತ್ತಿನಲ್ಲಿ ಪ್ರಗತಿಯ ಹೊಸ ಸಾಧ್ಯತೆಗಳು ಆರಂಭವಾಗುವ ಕುರಿತು ಮಾತನಾಡುತ್ತೇವೆ. ಅಂತೆಯೇ ಯೋಗದ ಪ್ರಚಾರ, ಪ್ರತಿಯೊಬ್ಬರ ಭಾವನೆ, ಕಾಯಿಲೆರಹಿತ ಜೀವನ ನಡೆಸುವುದಾಗಿದೆ ಎಂದರು. ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ವೈಪರೀತ್ಯದಂತಹ ವಿಚಾರಗಳಲ್ಲಿ ಭಾರತ ಇಡೀ ಮನುಕುಲವನ್ನು ಪ್ರತಿನಿಧಿಸುತ್ತದೆ. “ನಮ್ಮ ಕಠಿಣ ಪರಿಶ್ರಮ ನಮಗಾಗಿ ಮಾತ್ರವಲ್ಲ, ಭಾರತದ ಪ್ರಗತಿ ಇಡೀ ಮನುಕುಲದ ಕಲ್ಯಾಣದೊಂದಿಗೆ ಸಂಯೋಜನೆಗೊಂಡಿದೆ” ಈ ಸಂದೇಶವನ್ನು ಎಲ್ಲೆಡೆ ಪಸರಿಸುವ ಮಹತ್ವದ ಪಾತ್ರವನ್ನು ಅನಿವಾಸಿ ಭಾರತೀಯರು ವಹಿಸಬೇಕಾಗಿದೆ ಎಂದು ಕರೆ ನೀಡುವ ಮೂಲಕ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಸಮಾಪ್ತಿಗೊಳಿಸಿದರು.
(Release ID: 1822092)
Visitor Counter : 199
Read this release in:
Tamil
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam