ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯ ತಮ್ಮ ನಿವಾಸದಲ್ಲಿ ಸಿಖ್ ನಿಯೋಗಕ್ಕೆ ಆತಿಥ್ಯ ನೀಡಿದ ಪ್ರಧಾನಿ


“ಗುರುದ್ವಾರಕ್ಕೆ ತೆರಳುವುದು, ಸೇವೆಯಲ್ಲಿ ಸಮಯ ವ್ಯಯಿಸುವುದು, ಪ್ರಸಾದ ಸ್ವೀಕಾರ, ಸಿಖ್ ಕುಟುಂಬದ ಮನೆಗಳಲ್ಲಿ ವಾಸ್ತವ್ಯ ಮಾಡುವುದು ನಮ್ಮ ಜೀವನ ಭಾಗ’’ 

“ನಮ್ಮ ಗುರುಗಳು ನಮಗೆ ಧೈರ್ಯ ಮತ್ತು ಸೇವೆಯನ್ನು ಬೋಧಿಸಿದ್ದಾರೆ’’

"ನವ ಭಾರತ ಹೊಸ ಆಯಾಮಗಳತ್ತ ಹೊರಳುತ್ತಿದೆ ಮತ್ತು ಅದು ತನ್ನ ಹೆಜ್ಜೆಗುರುಗಳನ್ನು ಇಡೀ ವಿಶ್ವದಲ್ಲಿ ಮೂಡಿಸುತ್ತಿದೆ’’

“ನಾವು ಸದಾ ನಮ್ಮ ಅನಿವಾಸಿ ಭಾರತೀಯರನ್ನು ಭಾರತದ ‘ರಾಷ್ಟ್ರದೂತ’ರೆಂದು ಪರಿಗಣಿಸಿದ್ದೇವೆ. ವಿದೇಶದಲ್ಲಿ ನೀವೆಲ್ಲರೂ ಭಾರತ ಮಾತೆಯ ಧ್ವನಿ ಮತ್ತು ಉನ್ನತ ಗುರುತಾಗಿದ್ದೀರಿ’’ 

“ಗುರುಗಳ ಪಾದಗಳು ಈ ಭೂಮಿಯನ್ನು ಪ್ರವಿತ್ರಗೊಳಿಸಿವೆ ಮತ್ತು ಜನತೆಗೆ ಸ್ಫೂರ್ತಿ ನೀಡಿವೆ’’ 

“ಸಿಖ್ ಸಂಪ್ರದಾಯ ‘ಏಕ್ ಭಾರತ ಶ್ರೇಷ್ಠ ಭಾರತ’ದ ಜೀವಂತ ಪರಂಪರೆಯಾಗಿದೆ’’ 

“ಸಿಖ್ ಸಮುದಾಯವು ಧೈರ್ಯ, ಪರಾಕ್ರಮ ಮತ್ತು ದೇಶದ ಕಠಿಣ ಪರಿಶ್ರಮಕ್ಕೆ ಸಮನಾರ್ಥಕವಾಗಿದೆ’’

Posted On: 29 APR 2022 7:05PM by PIB Bengaluru

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಮಂತ್ರಿಯವರ ಅಧಿಕೃತ ನಿವಾಸ 7 ಲೋಕ ಕಲ್ಯಾಣ್ ಮಾರ್ಗದಲ್ಲಿ ಸಿಖ್ ನಿಯೋಗಕ್ಕೆ ಆತಿಥ್ಯ ನೀಡಿದರು. ನಿಯೋಗದಲ್ಲಿ ಸಮಾಜದ ನಾನಾ ವರ್ಗಗಳ ಜನರಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. 
ಈ ವೇಳೆ ಮಾತನಾಡಿದ ಪ್ರಧಾನಮಂತ್ರಿ, ಸಿಖ್ ಸಮುದಾಯದೊಂದಿಗಿನ ತಮ್ಮ ದೀರ್ಘ ಒಡನಾಟವನ್ನು ಸ್ಮರಿಸಿದರು. “ಗುರುದ್ವಾರಗಳಿಗೆ ಹೋಗುವುದು, ‘ಸೇವೆ’ಯಲ್ಲಿ ಸಮಯ ವಿನಿಯೋಗಿಸುವುದು, ಪ್ರಸಾದ ಪಡೆಯುವುದು, ಸಿಖ್ ಕುಟುಂಬಗಳ ಮನೆಗಳಲ್ಲಿ ತಂಗುವುದು ನನ್ನ ಜೀವನದ ಒಂದು ಭಾಗವಾಗಿದೆ. ಪ್ರಧಾನಿ ನಿವಾಸಕ್ಕೆ ಸಿಖ್ ಗುರುಗಳ ಪಾದಗಳು ಆಗಾಗ ಸ್ಪರ್ಶಿಸುತ್ತಿವೆ, ನಾನು ಅವರೊಂದಿಗಿನ ಒಡನಾಟದ ಅದೃಷ್ಟವನ್ನು ಪಡೆಯುತ್ತಲೇ ಇದ್ದೇನೆ”, ಎಂದು ಪ್ರಧಾನಮಂತ್ರಿ ಹೇಳಿದರು. ತಮ್ಮ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ವಿಶ್ವದಾದ್ಯಂತ ಸಿಖ್ ಪರಂಪರೆಯ ಸ್ಥಳಗಳಿಗೆ ಭೇಟಿ ನೀಡಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡರು. 
“ನಮ್ಮ ಗುರುಪರಂಪರೆ ನಮಗೆ ಧೈರ್ಯ ಮತ್ತು ಸೇವೆಯನ್ನು ಕಲಿಸಿದೆ. ಭಾರತದ ಜನರು ಯಾವುದೇ ಸಂಪನ್ಮೂಲಗಳಿಲ್ಲದೆ ಜಗತ್ತಿನ ನಾನಾ ಭಾಗಗಳಿಗೆ ಹೋಗಿ ತಮ್ಮ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಿದ್ದಾರೆ. ಇದು ಇಂದಿನ ನವಭಾರತದ ಚೈತನ್ಯವಾಗಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನವಭಾರತದತ್ತ ಎಲ್ಲರ ಚಿತ್ತ ನೆಟ್ಟಿರುವುದಕ್ಕೆ ತಮ್ಮ ಮೆಚ್ಚುಗೆ ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು ನವ ಭಾರತವು ಹೊಸ ಆಯಾಮಗಳಲ್ಲಿ ಎತ್ತರಕ್ಕೆ ಏರುತ್ತಿದೆ  ಮತ್ತು ಅದು ಇಡೀ ಪ್ರಪಂಚದ ಮೇಲೆ ತನ್ನ ಛಾಪು ಮೂಡಿಸುತ್ತಿದೆ ಎಂದು ಹೇಳಿದರು. ಕೊರೋನಾ ಸಾಂಕ್ರಾಮಿಕದ ಅವಧಿಯು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ. ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಆರಂಭದಲ್ಲಿ, ಹಳೆಯ ಮನಸ್ಥಿತಿಯ ಜನರು ಭಾರತದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದರು. ಆದರೆ ಈಗ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಜನರು ಭಾರತದ ಉದಾಹರಣೆಯನ್ನು ನೀಡುತ್ತಿದ್ದಾರೆ ಎಂದರು. ಭಾರತದ ಜನಸಂಖ್ಯೆಯ ಅಗಾಧತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿತ್ತು ಮತ್ತು ಭಾರತೀಯರಿಗೆ ಲಸಿಕೆ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇಂದು ಭಾರತ ಅತಿ ದೊಡ್ಡ ಲಸಿಕೆ ತಯಾರಕ ರಾಷ್ಟ್ರವಾಗಿ ಹೊರಹೊಮ್ಮಿದೆ. “ಶೇ.99ರಷ್ಟು ಲಸಿಕೆಯನ್ನು ನಮ್ಮದೇ ಮೇಡ್ ಇನ್ ಇಂಡಿಯಾ ಲಸಿಕೆಗಳ ಮೂಲಕ ಮಾಡಲಾಗಿದೆ ಎಂದು ಕೇಳಲು ನೀವು ಹೆಮ್ಮೆಪಡುತ್ತೀರಿ’’ ಎಂದು ಅವರು ಹೇಳಿದರು. 
ಭಾರತವು ಈ ಸಂಕಷ್ಟದ ಅವಧಿಯಲ್ಲಿ ವಿಶ್ವದ ಅತಿದೊಡ್ಡ ನವೋದ್ಯಮ ಪೂರಕ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ನಮ್ಮ ಯೂನಿಕಾರ್ನ್‌ಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತದ ಸ್ಥಾನಮಾನದ ಪ್ರಗತಿ ಮತ್ತು ವಿಶ್ವಾಸಾರ್ಹತೆಯು ನಮ್ಮ ಅನಿವಾಸಿಗಳಿಗೆ ಗರಿಷ್ಠ ತೃಪ್ತಿ ಮತ್ತು ಹೆಮ್ಮೆಯನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು. 
“ನಾನು ಸದಾ ನಮ್ಮ ಅನಿವಾಸಿ ಭಾರತೀಯರನ್ನು ಭಾರತದ ರಾಷ್ಟ್ರದೂತ ​ಎಂದು ಪರಿಗಣಿಸಿದ್ದೇನೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ, ನೀವೆಲ್ಲರೂ ವಿದೇಶದಲ್ಲಿ ಭಾರತ ಮಾತೆಯ ಬಲವಾದ ಧ್ವನಿ ಮತ್ತು ಉದಾತ್ತ ಗುರುತಾಗಿದ್ದೀರಿ. ಭಾರತದ ಬೆಳವಣಿಗೆಯ ದಾಪುಗಾಲುಗಳ ಬಗ್ಗೆ ಅನಿವಾಸಿ ಭಾರತೀಯರೂ ಕೂಡ ಹೆಮ್ಮೆಪಡುತ್ತಾರೆ ಎಂದು ಅವರು ಹೇಳಿದರು. “ನಾವು ಜಗತ್ತಿನಲ್ಲಿ ಎಲ್ಲೇ ಇದ್ದರೂ, ‘ಭಾರತ ಮೊದಲು’ ಎಂಬುದು ನಮ್ಮ ಮೊದಲ ನಂಬಿಕೆಯಾಗಿರಬೇಕು’’ ಎಂದು ಅವರು ಹೇಳಿದರು. 
ಗುರುಗಳ ಶ್ರೇಷ್ಠ ಕೊಡುಗೆ ಮತ್ತು ತ್ಯಾಗಕ್ಕೆ ತಲೆಬಾಗಿ ನಮಿಸುವೆನು ಎಂದ ಪ್ರಧಾನಿಯವರು,  ಗುರುನಾನಕ್ ದೇವ್ ಜಿ ಅವರು ಇಡೀ ರಾಷ್ಟ್ರದ ಪ್ರಜ್ಞೆಯನ್ನು ಜಾಗೃತಗೊಳಿಸಿ, ದೇಶವನ್ನು ಕತ್ತಲೆಯಿಂದ ಬೆಳಕಿನ ಹಾದಿಯಲ್ಲಿ ಹೇಗೆ ಕೊಂಡೊಯ್ದರು ಎಂಬುದನ್ನು ಸ್ಮರಿಸಿದರು. ಗುರುಗಳು ಭಾರತದ ಉದ್ದಗಲಕ್ಕೂ ಸಂಚರಿಸಿದರು, ಎಲ್ಲೆಲ್ಲೂ ಅವರ ಹೆಜ್ಜೆ ಗುರುತು ಮತ್ತು ಸ್ಫೂರ್ತಿಯನ್ನು ಕಾಣಬಹುದಾಗಿದೆ ಎಂದರು.  ಅವರು ಪೂಜ್ಯರು ಮತ್ತು ಎಲ್ಲೆಡೆ ಅವರಲ್ಲಿ ನಂಬಿಕೆ ಇದೆ. ಗುರುಗಳ ಪಾದಗಳು ಈ ಶ್ರೇಷ್ಠ ಭೂಮಿಯನ್ನು ಪವಿತ್ರಗೊಳಿಸಿದವು ಮತ್ತು ಅದರ ಜನರಿಗೆ ಸ್ಫೂರ್ತಿ ನೀಡಿತು ಎಂದು ಪ್ರಧಾನಿ ಹೇಳಿದರು. ಸಿಖ್ ಸಂಪ್ರದಾಯವು ‘ಏಕ್ ಭಾರತ ಶ್ರೇಷ್ಠ ಭಾರತ’ದ ಜೀವಂತ ಸಂಪ್ರದಾಯವಾಗಿದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮತ್ತು ಸ್ವಾತಂತ್ರ್ಯದ ನಂತರ ಸಿಖ್ ಸಮುದಾಯದ ಕೊಡುಗೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ‘ಸಿಖ್ ಸಮುದಾಯವು ದೇಶದ ಧೈರ್ಯ, ಪರಾಕ್ರಮ ಮತ್ತು ಕಠಿಣ ಪರಿಶ್ರಮಕ್ಕೆ ಸಮಾನಾರ್ಥಕ’ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಮತ್ತೊಮ್ಮೆ ಭಾರತದ ಸ್ವಾತಂತ್ರ್ಯ ಹೋರಾಟದ ದೂರದೃಷ್ಟಿಯನ್ನು ವಿವರಿಸಿದರು. ಈ ಹೋರಾಟ ನಿರ್ದಿಷ್ಟ ಅವಧಿಗೆ ಸೀಮಿತವಾಗದೆ ಸಾವಿರಾರು ವರ್ಷಗಳ ಅಂತಃಪ್ರಜ್ಞೆ, ಆದರ್ಶ, ಆಧ್ಯಾತ್ಮಿಕ ಮೌಲ್ಯಗಳು ಹಾಗೂ ‘ತಪಸ್ಸಿ’ನ ದ್ಯೋತಕವಾಗಿದೆ ಎಂದರು. 
ಗುರು ತೇಗ್ ಬಹಾದೂರ್ ಅವರ 400ನೇ ಪ್ರಕಾಶ್ ಪೂರಬ್, ಗುರು ನಾನಕ್ ದೇವ್‌ಜಿ ಅವರ 550 ನೇ ಪ್ರಕಾಶ್ ಪೂರಬ್ ಮತ್ತು ಗುರು ಗೋವಿಂದ್ ಸಿಂಗ್ ಜಿ ಅವರ 350 ನೇ ಪ್ರಕಾಶ್ ಪುರಬ್‌ನಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸೌಭಾಗ್ಯ ತಮಗೆ ದೊರೆತಿದೆ ಎಂದು ಪ್ರಧಾನಮಂತ್ರಿ ಸಂತೋಷ ವ್ಯಕ್ತಪಡಿಸಿದರು. ಕರ್ತಾರ್‌ಪುರ ಕಾರಿಡಾರ್ ನಿರ್ಮಾಣ, ಲಂಗರ್‌ ಗಳನ್ನು ತೆರಿಗೆ ಮುಕ್ತಗೊಳಿಸುವುದು, ಹರ್ಮಂದಿರ್ ಸಾಹಿಬ್‌ಗೆ ಎಫ್‌ಸಿಆರ್‌ಎ ಅನುಮತಿ ಮತ್ತು ಗುರುದ್ವಾರಗಳ ಸುತ್ತಮುತ್ತ ಮೂಲಭೂತ ಸೌಕರ್ಯ ಮತ್ತು ಸ್ವಚ್ಛತೆ ಸುಧಾರಣೆಯಂತಹ ಹಲವು ಕಾರ್ಯಕ್ರಮಗಳನ್ನು ಈ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆ ಎಂದು ಅವರು ಹೇಳಿದರು. 
ಗುರುಗಳ ಕರ್ತವ್ಯದ ಮಹತ್ವವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು ಮತ್ತು ಅಮೃತ ಕಾಲದಲ್ಲಿ ಕರ್ತವ್ಯ ಪ್ರಜ್ಞೆಗೆ ಅದೇ ಒತ್ತು ನೀಡುವುದರ ಬಗ್ಗೆ ಪ್ರತಿಪಾದಿಸಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ  ಪ್ರಯಾಸ್ ನಂತಹ ಮಂತ್ರವು ಈ ಚೈತನ್ಯಕ್ಕೆ ಸ್ಫೂರ್ತಿಯಾಗಿದೆ ಎಂದರು. ಈ ಕರ್ತವ್ಯ ಪ್ರಜ್ಞೆ ವರ್ತಮಾನಕ್ಕೆ ಮಾತ್ರವಲ್ಲ ನಮ್ಮ ಮುಂದಿನ ಪೀಳಿಗೆಗೂ ಮುಖ್ಯವಾಗಿದೆ ಎಂದರು. ಪರಿಸರ, ಪೋಷಣೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ರಕ್ಷಣೆಯ ಕಾರಣಗಳಿಗೆ ಸಿಖ್ ಸಮುದಾಯವು ಸದಾ ಸಕ್ರಿಯವಾಗಿದೆ ಎಂದು ಅವರು ಶ್ಲಾಘಿಸಿದರು. ಅಮೃತ್ ಸರೋವರಗಳಿಗಾಗಿ ಇತ್ತೀಚೆಗೆ ಪ್ರಾರಂಭಿಸಲಾದ ಅಭಿಯಾನದಲ್ಲಿ ಕೊಡುಗೆ ನೀಡಲು ಸಭೆಯನ್ನು ವಿನಂತಿಸುವ ಮೂಲಕ ಅವರು ಮಾತು ಮುಕ್ತಾಯಗೊಳಿಸಿದರು. 


****



(Release ID: 1821608) Visitor Counter : 145