ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿಗಳ ಜೊತೆ ಸಂವಾದದಲ್ಲಿ ಪ್ರಧಾನ ಮಂತ್ರಿ ಅವರ ಸಮಾರೋಪ ಪ್ರತಿಕ್ರಿಯೆಯ ಕನ್ನಡ ಅವತರಣಿಕೆ.
Posted On:
27 APR 2022 3:26PM by PIB Bengaluru
ನಮಸ್ಕಾರ! ಮೊದಲಿಗೆ ನಾನು ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ದುರಂತಕ್ಕೆ ನನ್ನ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತೇನೆ. ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪಗಳು. ಸಂತ್ರಸ್ಥ ಕುಟುಂಬಗಳಿಗೆ ಹಣಕಾಸು ಸಹಾಯವನ್ನು ಒದಗಿಸಲಾಗುತ್ತಿದೆ.
ಸ್ನೇಹಿತರೇ,
ಕಳೆದ ಎರಡು ವರ್ಷಗಳಲ್ಲಿ ಕೊರೊನಾಕ್ಕೆ ಸಂಬಂಧಿಸಿ ಇದು ನಮ್ಮ 24 ನೇ ಸಭೆ. ಕೊರೊನಾ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಹಕರಿಸಿದ ರೀತಿ ಕೊರೊನಾ ವಿರುದ್ಧ ದೇಶದ ಹೋರಾಟದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದೆ. ಎಲ್ಲಾ ಮುಖ್ಯಮಂತ್ರಿಗಳು, ರಾಜ್ಯ ಸರಕಾರಗಳು ಮತ್ತು ಅಧಿಕಾರಿಗಳ ಜೊತೆ ನಾನು ಎಲ್ಲಾ ಕೊರೊನಾ ವಾರಿಯರ್ ಗಳಿಗೆ ನನ್ನ ಮೆಚ್ಚುಗೆ, ಶ್ಲಾಘನೆಗಳನ್ನು ವ್ಯಕ್ತಪಡಿಸುತ್ತೇನೆ.
ಸ್ನೇಹಿತರೇ,
ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಆರೋಗ್ಯ ಕಾರ್ಯದರ್ಶಿ ಈಗಷ್ಟೇ ನಮಗೆ ವಿವರಿಸಿದ್ದಾರೆ. ಗೌರವಾನ್ವಿತ ಗೃಹ ಸಚಿವರು ಕೂಡಾ ನಮ್ಮೊಂದಿಗೆ ಹಲವು ಪ್ರಮುಖ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಮುಖ್ಯಮಂತ್ರಿಗಳು ಪ್ರತಿಯೊಬ್ಬರೆದುರೂ ಅನೇಕ ಪ್ರಮುಖಾಂಶಗಳನ್ನು ಮಂಡಿಸಿದ್ದಾರೆ. ಕೊವಿಡ್ ಸವಾಲು ಪೂರ್ಣವಾಗಿ ನಿವಾರಣೆಯಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಯುರೋಪಿಯನ್ ದೇಶಗಳಲ್ಲಿ ಒಮಿಕ್ರಾನ್ ಮತ್ತು ಅದರ ರೂಪಾಂತರಿಗಳು ಹೇಗೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡಬಲ್ಲವು ಎಂಬುದನ್ನು ನಾವು ಕಾಣುತಿದ್ದೇವೆ. ಕಳೆದ ಕೆಲವು ತಿಂಗಳುಗಳಲ್ಲಿ ರೂಪಾಂತರಿ ತಳಿಗಳು ಅನೇಕ ದೇಶಗಳಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿವೆ. ಭಾರತವು ಇತರ ಅನೇಕ ದೇಶಗಳಿಗಿಂತ ಹೆಚ್ಚು ಉತ್ತಮವಾಗಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಎರಡು ವಾರಗಳಲ್ಲಿ ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಿರುವುದರಿಂದ ನಾವು ಜಾಗೃತರಾಗಿರಬೇಕಾದ ಅಗತ್ಯವಿದೆ. ನಾವು ಕೆಲವು ತಿಂಗಳ ಹಿಂದೆ ಬಂದ ಈ ಹಿಂದಿನ ಅಲೆಯಿಂದ ಬಹಳಷ್ಟನ್ನು ಕಲಿತಿದ್ದೇವೆ. ಎಲ್ಲಾ ದೇಶವಾಸಿಗಳು ಆತಂಕಗೊಳ್ಳದೆ ಒಮಿಕ್ರಾನ್ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.
ಸ್ನೇಹಿತರೇ,
ಎರಡು ವರ್ಷಗಳ ಒಳಗೆ ಕೊರೊನಾಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳ ಬಗ್ಗೆಯೂ ದೇಶವು ಎಚ್ಚರಿಕೆ ವಹಿಸಿ ಅವಶ್ಯ ಸೌಲಭ್ಯಗಳನ್ನೆಲ್ಲ ಬಲಪಡಿಸಿದೆ. ಆರೋಗ್ಯ ಮೂಲಸೌಕರ್ಯದಿಂದ ಹಿಡಿದು ಆಮ್ಲಜನಕ ಪೂರೈಕೆವರೆಗೂ ಅದು ಕಾಳಜಿವಹಿಸಿದೆ. ಮೂರನೇ ಅಲೆಯಲ್ಲಿ ಯಾವುದೇ ರಾಜ್ಯದಲ್ಲಿಯೂ ಪರಿಸ್ಥಿತಿ ಕೈಮೀರಿ ಹೋದ ಬಗ್ಗೆ ವರದಿಗಳಿಲ್ಲ. ನಮ್ಮ ಕೋವಿಡ್ ಲಸಿಕಾ ಆಂದೋಲನ ಇದಕ್ಕೆ ದೊಡ್ಡ ಸಹಾಯವನ್ನು ಮಾಡಿದೆ. ಯಾವುದೇ ಭೌಗೋಳಿಕ ಪರಿಸ್ಥಿತಿಗಳಿದ್ದರೂ ಅವುಗಳನ್ನು ದಾಟಿಕೊಂಡು ದೇಶದ ಪ್ರತೀ ರಾಜ್ಯ, ಜಿಲ್ಲೆ ಮತ್ತು ವಲಯಗಳಿಗೆ ಲಸಿಕೆಗಳು ತಲುಪಿವೆ. ಇಂದು ದೇಶದ ವಯಸ್ಕ ಜನಸಂಖ್ಯೆಯಲ್ಲಿ 96% ಜನರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಸಂಗತಿಯಾಗಿದೆ. 15 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಶೇಖಡಾ 85ರಷ್ಟು ಮಂದಿ ಈಗಾಗಲೇ ಎರಡನೇ ಡೋಸ್ ಪಡೆದಿದ್ದಾರೆ.
ಸ್ನೇಹಿತರೇ,
ನಿಮಗೆಲ್ಲ ತಿಳಿದಿದೆ ಮತ್ತು ಜಗತ್ತಿನ ಬಹುತೇಕ ತಜ್ಞರು ಲಸಿಕೆಗಳು ಕೊರೊನಾಕ್ಕೆ ಅತ್ಯುತ್ತಮ ರಕ್ಷಣಾ ಕವಚಗಳೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಹಳ ದೀರ್ಘ ಕಾಲದ ಬಳಿಕ ನಮ್ಮ ದೇಶದಲ್ಲಿ ಶಾಲೆಗಳು ತೆರೆಯಲ್ಪಟ್ಟಿವೆ ಮತ್ತು ತರಗತಿಗಳು ಆರಂಭಗೊಂಡಿವೆ. ಕೊರೊನಾ ಪ್ರಕರಣಗಳ ಹೆಚ್ಚಳದಿಂದ ಪೋಷಕರು ಹೆಚ್ಚು ಚಿಂತಿತರಾಗಿದ್ದಾರೆ. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಸೋಂಕು ತಗಲಿರುವ ಬಗ್ಗೆ ವರದಿಗಳು ಬರುತ್ತಿವೆ. ಬಹುತೇಕ ಮಕ್ಕಳು ಲಸಿಕಾಕರಣದ ಮೂಲಕ ಲಸಿಕಾ ರಕ್ಷಣಾ ಕವಚವನ್ನು ಹೊಂದಿರುವುದು ಬಹಳ ಸಮಾಧಾನದ ಸಂಗತಿಯಾಗಿದೆ. ನಾವು ಮಾರ್ಚ್ ತಿಂಗಳಲ್ಲಿ 12 ರಿಂದ 14 ವರ್ಷ ವಯೋಮಾನದವರಿಗೆ ಲಸಿಕೆ ನೀಡುವುದನ್ನು ಆರಂಭಿಸಿದೆವು. ನಿನ್ನೆಯಷ್ಟೇ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಲಸಿಕೆಗಳನ್ನು ನೀಡಲು ಅನುಮತಿಯನ್ನು ಕೊಡಲಾಗಿದೆ. ಸಾಧ್ಯವಿರುವಷ್ಟು ಬೇಗ ಅರ್ಹ ಎಲ್ಲಾ ಮಕ್ಕಳನ್ನು ಲಸಿಕಾ ಕಾರ್ಯಕ್ರಮದ ವ್ಯಾಪ್ತಿಗೆ ಒಳಪಡಿಸುವುದು ನಮ್ಮ ಆದ್ಯತೆಯಾಗಿದೆ. ಈ ಹಿಂದಿನಂತೆ ಶಾಲೆಗಳಲ್ಲಿ ವಿಶೇಷ ಆಂದೋಲನಗಳನ್ನು ಆಯೋಜಿಸುವುದು ಅವಶ್ಯವಾಗಿದೆ. ಇದರ ಬಗ್ಗೆ ಶಿಕ್ಷಕರು ಮತ್ತು ಪೋಷಕರು ಅರಿವು ಹೊಂದಿರುವಂತೆ ಖಾತ್ರಿಪಡಿಸುವುದು ಅವಶ್ಯವಿದೆ. ಲಸಿಕೆಯ ಮೂಲಕ ರಕ್ಷಣೆಯನ್ನು ಬಲಪಡಿಸುವ ಮುಂಜಾಗರೂಕತಾ ಡೋಸ್ ದೇಶದಲ್ಲಿಯ ಎಲ್ಲಾ ವಯಸ್ಕರಿಗೆ ಲಭ್ಯವಿದೆ. ಶಿಕ್ಷಕರು, ಪೋಷಕರು, ಮತ್ತು ಇತರ ಅರ್ಹ ವ್ಯಕ್ತಿಗಳು ಮುಂಜಾಗರೂಕತಾ ಡೋಸ್ ಗಳನ್ನು ಪಡೆಯಬಹುದು. ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ.
ಸ್ನೇಹಿತರೇ,
ಮೂರನೇ ಅಲೆಯಲ್ಲಿ ನಾವು ಪ್ರತೀ ದಿನ ಮೂರು ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ನೋಡಿದ್ದೇವೆ. ಈ ಪ್ರಕರಣಗಳನ್ನು ನಮ್ಮೆಲ್ಲಾ ರಾಜ್ಯಗಳು ಸಮರ್ಪಕವಾಗಿ ನಿಭಾಯಿಸಿ ಸಾಮಾಜಿಕ-ಆರ್ಥಿಕ ಚಟುವಟಿಕೆಗಳಿಗೆ ವೇಗವನ್ನು ಒದಗಿಸಿಕೊಟ್ಟಿವೆ. ಭವಿಷ್ಯದಲ್ಲಿಯೂ ಕೂಡಾ ಈ ಸಮತೋಲನ ನಮ್ಮ ತಂತ್ರದ ಭಾಗವಾಗಿ ಉಳಿಯಬೇಕಿದೆ. ನಮ್ಮ ವಿಜ್ಞಾನಿಗಳು ಮತ್ತು ತಜ್ಞರು ನಿರಂತರವಾಗಿ ದೇಶದ ಮತ್ತು ಜಾಗತಿಕ ಪರಿಸ್ಥಿತಿಯ ಮೇಲೆ ನಿಗಾ ಇಟ್ಟು ಅವಲೋಕನ ಮಾಡುತ್ತಿದ್ದಾರೆ. ನಾವು ಅವರ ಸಲಹೆಗಳಿಗೆ ಅನುಗುಣವಾಗಿ ಕ್ರಿಯಾಶೀಲವಾಗಿ ಮತ್ತು ಸಾಮೂಹಿಕ ಧೋರಣೆಯೊಂದಿಗೆ ಕೆಲಸ ಮಾಡಬೇಕಾಗಿದೆ. ಆರಂಭದಲ್ಲಿಯೇ ಸೋಂಕನ್ನು ತಡೆಗಟ್ಟುವುದು ನಮ್ಮ ಆದ್ಯತೆಯಾಗಿತ್ತು ಮತ್ತು ಅದು ಈಗಲೂ ಆದ್ಯತೆಯಾಗಿ ಉಳಿಯಬೇಕಾಗಿದೆ. ನೀವು ಪ್ರಸ್ತಾಪಿಸಿದಂತೆ ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆಯ ನಮ್ಮ ತಂತ್ರವನ್ನು ನಾವು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಜ್ವರದಿಂದ (ಇನ್ ಫ್ಲ್ಯುಯೆಂಜಾದಿಂದ) ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಸಂಬಂಧಿಸಿ ಶೇಕಡಾ ನೂರರಷ್ಟು ಆರ್ ಟಿ.-ಪಿ.ಸಿ.ಆರ್. ಪರೀಕ್ಷೆಗಳನ್ನು ನಡೆಸುವ ಆಗತ್ಯವಿದೆ. ಪಾಸಿಟಿವ್ ಫಲಿತಾಂಶ ದಾಖಲಿಸುವ ರೋಗಿಗಳ ಮಾದರಿಗಳನ್ನು ಜೀನೋಮ್ ಅನುಕ್ರಮಣಿಕೆಗೆ ಕಳುಹಿಸಬೇಕು. ಇದರಿಂದ ಸಕಾಲದಲ್ಲಿ ರೂಪಾಂತರಿ ತಳಿಗಳನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತದೆ.
ಸ್ನೇಹಿತರೇ,
ನಾವು ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಸಮುಚಿತ ವರ್ತನೆಯನ್ನು ಉತ್ತೇಜಿಸಬೇಕಾಗಿದೆ ಮತ್ತು ಅದರ ಜೊತೆಗೆ ಸಾರ್ವಜನಿಕರಲ್ಲಿ ಆತಂಕ, ಭಯ ಹರಡದಂತೆ ಖಾತ್ರಿಪಡಿಸಬೇಕಾಗಿದೆ.
ಸ್ನೇಹಿತರೇ,
ಇಂದಿನ ಚರ್ಚೆಯಲ್ಲಿ ಆರೋಗ್ಯ ಮೂಲ ಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲು ಕೈಗೊಂಡ ಕೆಲಸಗಳ ಬಗ್ಗೆಯೂ ಚರ್ಚಿಸಲಾಗಿದೆ. ಮೂಲಸೌಕರ್ಯಗಳನ್ನು ಬಲಪಡಿಸುವ, ಮೇಲ್ದರ್ಜೆಗೇರಿಸುವ ಕೆಲಸ ತ್ವರಿತಗತಿಯಿಂದ ಸಾಗುವಂತೆ ಖಾತ್ರಿಪಡಿಸುವುದು ಅವಶ್ಯವಾಗಿದೆ. ಹಾಸಿಗೆಗಳು, ವೆಂಟಿಲೇಟರುಗಳು ಮತ್ತು ಪಿ.ಎಸ್.ಎ. ಆಮ್ಲಜನಕ ಸ್ಥಾವರಗಳಿಗೆ ಸಂಬಂಧಿಸಿ ನಾವು ಬಹಳ ಉತ್ತಮ ಸ್ಥಿತಿಯಲ್ಲಿದ್ದೇವೆ. ಈ ಸೌಲಭ್ಯಗಳು ಸದಾ ಕಾರ್ಯ ಸನ್ನದ್ಧ ಸ್ಥಿತಿಯಲ್ಲಿರಿಸಲು ನಾವು ಅವುಗಳ ಮೇಲೆ ಸತತ ನಿಗಾ ಇಡಬೇಕಾಗುತ್ತದೆ ಮತ್ತು ಭವಿಷ್ಯದಲ್ಲಿ ಯಾವುದೇ ಬಿಕ್ಕಟ್ಟು ಎದುರಾಗದಂತೆ ಮಾಡಲು ಜವಾಬ್ದಾರಿಯನ್ನು ನಿಗದಿ ಮಾಡಬೇಕಾಗುತ್ತದೆ. ಇದರಲ್ಲಿ ಯಾವುದಾದರೂ ಅಂತರ ಇದ್ದರೆ ಅದನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಿ ಅದನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡಬೇಕು ಎಂದು ನಾನು ಕೋರಿಕೊಳ್ಳುತ್ತೇನೆ. ನಾವು ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕಾಗಿದೆ. ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಮಾನವ ಶಕ್ತಿಯನ್ನು ವರ್ಧಿಸಬೇಕಾಗಿದೆ. ನಾವು ಉತ್ತಮ ಪದ್ಧತಿಗಳನ್ನು ನಿರಂತರವಾಗಿ ರೂಪಿಸಿಕೊಂಡು ಸಾಗುತ್ತೇವೆ, ಕೊರೊನಾ ವಿರುದ್ಧ ಹೋರಾಟವನ್ನು ದೃಢವಾಗಿ ಮುನ್ನಡೆಸುತ್ತೇವೆ ಮತ್ತು ಪರಸ್ಪರ ಸಹಕಾರ ಹಾಗು ಮಾತುಕತೆಯ ಮೂಲಕ ಪರಿಹಾರದ ಹಾದಿಗಳನ್ನು ಹುಡುಕುತ್ತೇವೆ ಎಂಬ ಬಗ್ಗೆ ನನಗೆ ದೃಢ ವಿಶ್ವಾಸವಿದೆ.
ಸ್ನೇಹಿತರೇ,
ಸಂವಿಧಾನದಲ್ಲಿ ವ್ಯಕ್ತವಾಗಿರುವಂತೆ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿ, ಉತ್ಸಾಹಗಳೊಂದಿಗೆ ಭಾರತವು ಕೊರೊನಾ ವಿರುದ್ಧ ಈ ದೀರ್ಘ ಹೋರಾಟವನ್ನು ನಡೆಸಿತು. ಜಾಗತಿಕ ಪರಿಸ್ಥಿತಿ ಮತ್ತು ದೇಶದ ಆಂತರಿಕ ಪರಿಸ್ಥಿತಿಗಳ ಮೇಲೆ ಬಾಹ್ಯ ಸಂಗತಿಗಳ ಪರಿಣಾಮಗಳಿಂದಾಗಿ ಕೇಂದ್ರ ಮತ್ತು ರಾಜ್ಯಗಳು ಒಗ್ಗೂಡಿ ಇದನ್ನು ಎದುರಿಸಿದವು ಮತ್ತು ಇದನ್ನು ಮುಂದೂ ಮಾಡಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜಂಟಿ ಪ್ರಯತ್ನಗಳ ಫಲವಾಗಿ ಇಂದು ದೇಶದಲ್ಲಿಯ ಆರೋಗ್ಯ ಮೂಲಸೌಕರ್ಯ ಗಮನೀಯವಾಗಿ ಸುಧಾರಣೆಯಾಗಿದೆ. ಆದರೆ ಸ್ನೇಹಿತರೇ, ಇಂದು ನಾನು ಇನ್ನೊಂದು ಸಂಗತಿಯನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಇಂದಿನ ಜಾಗತಿಕ ಪರಿಸ್ಥಿತಿಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಆರ್ಥಿಕ ನಿರ್ಧಾರಗಳಲ್ಲಿ ಸಮನ್ವಯ ಭಾರತದ ಆರ್ಥಿಕತೆಯನ್ನು ಬಲಪಡಿಸುವುದಕ್ಕಾಗಿ ಹಿಂದೆಂದಿಗಿಂತಲೂ ಬಹಳ ಹೆಚ್ಚು ಅವಶ್ಯವಾಗಿದೆ. ಯುದ್ದದಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ದಿನದಿಂದ ದಿನಕ್ಕೆ ಸವಾಲುಗಳು ಹೆಚ್ಚುತ್ತಿರುವುದರ ಬಗ್ಗೆ ನಿಮಗೆ ತಿಳಿದಿದೆ. ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಿರುವ ಸಂಗತಿಯ ಬಗ್ಗೆಯೂ ನಿಮಗೆ ಅರಿವಿದೆ. ಈ ಜಾಗತಿಕ ಬಿಕ್ಕಟ್ಟು ಹಲವು ಸವಾಲುಗಳನ್ನು ಹಾಕುತ್ತಿದೆ. ಬಿಕ್ಕಟ್ಟಿನ ಸಮಯದಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಹೆಚ್ಚಿಸುವುದು ಅನಿವಾರ್ಯ ಆವಶ್ಯಕತೆಯಾಗಿದೆ. ಮತ್ತು ಕೇಂದ್ರ ಹಾಗು ರಾಜ್ಯಗಳ ನಡುವೆ ಹೊಂದಾಣಿಕೆಯ ಸಂಯೋಜನೆಯೂ ಅವಶ್ಯವಾಗಿದೆ. ನಾನೀಗ ನಿಮಗೆ ಸಣ್ಣ ಉದಾಹರಣೆಯನ್ನು ಕೊಡುತ್ತೇನೆ. ಪೆಟ್ರೋಲ್ ಮತ್ತು ಡೀಸಿಲ್ ದರಗಳಿಗೆ ಸಂಬಂಧಿಸಿದ ವಿಷಯ ನಮ್ಮೆಲ್ಲರ ಎದುರಿಗಿದೆ. ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸಿಲ್ ದರಗಳಿಂದ ದೇಶವಾಸಿಗಳ ಮೇಲಾಗುವ ಹೊರೆಯನ್ನು ತಗ್ಗಿಸಲು ಕೇಂದ್ರ ಸರಕಾರ ಅಬಕಾರಿ ತೆರಿಗೆಯನ್ನು ತಗ್ಗಿಸಿತು. ಕಳೆದ ನವೆಂಬರ್ ತಿಂಗಳಲ್ಲಿ ಅದನ್ನು ಇಳಿಕೆ ಮಾಡಲಾಯಿತು. ಕೇಂದ್ರ ಸರಕಾರವು ತೆರಿಗೆಗಳನ್ನು ಇಳಿಸುವಂತೆ ಮತ್ತು ಅದರ ಲಾಭವನ್ನು ನಾಗರಿಕರಿಗೆ ವರ್ಗಾಯಿಸುವಂತೆ ರಾಜ್ಯಗಳಿಗೆ ಮನವಿ ಮಾಡಿತು. ಅದಕ್ಕನುಗುಣವಾಗಿ ಕೆಲವು ರಾಜ್ಯಗಳು ತೆರಿಗೆಯನ್ನು ಇಳಿಕೆ ಮಾಡಿದವು, ಆದರೆ ಕೆಲವು ರಾಜ್ಯಗಳು ಜನರಿಗೆ ಯಾವುದೇ ಲಾಭವನ್ನು ವರ್ಗಾಯಿಸಲಿಲ್ಲ. ಇದರ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಈ ರಾಜ್ಯಗಳಲ್ಲಿ ಕೊಂಚ ಹೆಚ್ಚೇ ಇವೆ. ಇದು ಈ ರಾಜ್ಯಗಳ ಜನರಿಗೆ ಮಾಡಲಾಗಿರುವ ಅನ್ಯಾಯ ಮಾತ್ರವಲ್ಲ ನೆರೆಯ ರಾಜ್ಯಗಳಿಗೆ ಮಾಡುತ್ತಿರುವ ಹಾನಿ ಕೂಡಾ. ತೆರಿಗೆಗಳನ್ನು ಕಡಿತ ಮಾಡಿದ ರಾಜ್ಯಗಳು ಆದಾಯವನ್ನು ಕಳೆದುಕೊಳ್ಳುವುದು ಸಹಜ. ಉದಾಹರಣೆಗೆ ಕರ್ನಾಟಕ ತೆರಿಗೆಗಳನ್ನು ಇಳಿಸದಿದ್ದರೆ, ಅದು ಈ ಆರು ತಿಂಗಳಲ್ಲಿ 5,000 ಕೋ.ರೂ.ಗಳಿಗೂ ಅಧಿಕ ಆದಾಯವನ್ನು ಗಳಿಸುತ್ತಿತ್ತು. ಗುಜರಾತ್ ಕೂಡಾ ತೆರಿಗೆಯನ್ನು ಇಳಿಸದಿದ್ದರೆ ಅದು ಕೂಡಾ 3,500-4,000 ಕೋ.ರೂ. ಆದಾಯವನ್ನು ಗಳಿಸುತ್ತಿತ್ತು. ಕೆಲವು ರಾಜ್ಯಗಳು ತಮ್ಮ ನಾಗರಿಕರ ಕಲ್ಯಾಣಕ್ಕಾಗಿ ವ್ಯಾಟ್ ನ್ನು ಇಳಿಕೆ ಮಾಡುವ ಧನಾತ್ಮಕ ಕ್ರಮಗಳನ್ನು ಕೈಗೊಂಡವು. ತಮ್ಮ ನಾಗರಿಕರು ತೊಂದರೆ ಅನುಭವಿಸಬಾರದು ಎಂದವುಗಳು ಈ ಕ್ರಮಕ್ಕೆ ಮುಂದಾದವು. ಇನ್ನೊಂದೆಡೆ, ಗುಜರಾತ್ ಮತ್ತು ಕರ್ನಾಟಕಗಳ ನೆರೆಯ ರಾಜ್ಯಗಳು ಈ ಆರು ತಿಂಗಳುಗಳಲ್ಲಿ 3,500ರಿಂದ 5,500 ಕೋ.ರೂ.ಗಳ ಹೆಚ್ಚುವರಿ ಆದಾಯವನ್ನು ತೆರಿಗೆ ಇಳಿಕೆ ಮಾಡದಿರುವ ಮೂಲಕ ಗಳಿಸಿಕೊಂಡವು. ನಿಮಗೆ ತಿಳಿದಿರುವಂತೆ ನಾನು ಪ್ರತೀ ರಾಜ್ಯಕ್ಕೂ ವ್ಯಾಟ್ ಇಳಿಕೆ ಮಾಡುವಂತೆ ಕಳೆದ ನವೆಂಬರ್ ತಿಂಗಳಲ್ಲಿ ಮನವಿ ಮಾಡಿದ್ದೆ. ನಾನು ಯಾರನ್ನೂ ಟೀಕಿಸುತ್ತಿಲ್ಲ. ನಾನು ನಿಮ್ಮ ರಾಜ್ಯದ ನಾಗರಿಕರ ಕಲ್ಯಾಣ ಮತ್ತು ಕ್ಷೇಮವನ್ನು ಖಾತ್ರಿಪಡಿಸಿ ಎಂದಷ್ಟೇ ಕೋರಿಕೊಳ್ಳುತ್ತಿದ್ದೇನೆ. ಆರು ತಿಂಗಳ ಹಿಂದೆ ಕೆಲವು ರಾಜ್ಯಗಳು ನನ್ನ ಕೋರಿಕೆಗೆ ಮನ್ನಣೆ ನೀಡಿದವು, ಇನ್ನು ಕೆಲವು ನೀಡಲಿಲ್ಲ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಮತ್ತು ಜಾರ್ಖಂಡಗಳು ಕೆಲವು ಕಾರಣಗಳಿಂದಾಗಿ ಇದಕ್ಕೆ ಒಪ್ಪಲಿಲ್ಲ ಮತ್ತು ಇದರ ಪರಿಣಾಮವಾಗಿ ಅವರ ರಾಜ್ಯಗಳ ನಾಗರಿಕರ ಮೇಲೆ ಹೊರೆ ಹಾಗೆಯೇ ಮುಂದುವರಿಯಿತು. ಈ ಅವಧಿಯಲ್ಲಿ ಈ ರಾಜ್ಯಗಳು ಎಷ್ಟು ಆದಾಯವನ್ನು ಸಂಗ್ರಹಿಸಿದವು ಎಂಬ ವಿವರಕ್ಕೆ ನಾನು ಹೋಗುವುದಿಲ್ಲ. ಕಳೆದ ನವೆಂಬರ್ ತಿಂಗಳಲ್ಲಿ ದೇಶದ ಹಿತಾಸಕ್ತಿಗಾಗಿ ಇದನ್ನು ಮಾಡಬೇಕಾಗಿತ್ತು. ಈಗಾಗಲೇ ಅಲ್ಲಿ ಆರು ತಿಂಗಳ ಕಾಲ ವಿಳಂಬವಾಗಿದೆ. ಈಗ, ನಾನು ಆಯಾ ರಾಜ್ಯಗಳ ಜನತೆಗೆ ಪ್ರಯೋಜನಕಾರಿಯಾಗುವಂತೆ ವ್ಯಾಟ್ ಇಳಿಕೆ ಮಾಡುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ. ನಿಮಗೆಲ್ಲ ತಿಳಿದಿರುವಂತೆ ಭಾರತ ಸರಕಾರದ ಶೇ.42ರಷ್ಟು ಆದಾಯ ರಾಜ್ಯಗಳಿಗೆ ಹೋಗುತ್ತದೆ. ಚಾಲ್ತಿಯಲ್ಲಿರುವ ಜಾಗತಿಕ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಎಲ್ಲಾ ರಾಜ್ಯಗಳೂ ತಂಡವಾಗಿ ಒಗ್ಗೂಡಿ ಸಹಕಾರಿ ಒಕ್ಕೂಟ ಸ್ಫೂರ್ತಿಯಿಂದ ಕೆಲಸ ಮಾಡಬೇಕು ಎಂದು ನಾನು ಎಲ್ಲಾ ರಾಜ್ಯಗಳಿಗೂ ಮನವಿ ಮಾಡುತ್ತೇನೆ.
ಅಲ್ಲಿ ಅನೇಕ ಸಂಗತಿಗಳಿವೆ, ಆದರೆ ನಾನವುಗಳ ವಿವರಣೆಗೆ ಹೋಗುವುದಿಲ್ಲ. ಉದಾಹರಣೆಗೆ ರಸಗೊಬ್ಬರಗಳು!. ರಸಗೊಬ್ಬರಗಳಿಗಾಗಿ ನಾವು ಜಗತ್ತಿನ ಅನೇಕ ದೇಶಗಳನ್ನು ಅವಲಂಬಿಸಿದ್ದೇವೆ. ಅಲ್ಲಿ ಬಹಳ ದೊಡ್ಡ ಬಿಕ್ಕಟ್ಟಿದೆ ಮತ್ತು ಸಬ್ಸಿಡಿಗಳು ಹಲವು ಪಟ್ಟು ಹೆಚ್ಚುತ್ತಿವೆ. ನಾವು ನಮ್ಮ ರೈತರ ಮೇಲೆ ಹೊರೆ ಹೊರಿಸಲು ಬಯಸುವುದಿಲ್ಲ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಿಮ್ಮ ರಾಜ್ಯಗಳ ಮತ್ತು ನೆರೆಯ ರಾಜ್ಯಗಳ ಜನರ ಹಿತ ಕಾಪಾಡುವಲ್ಲಿ ಗರಿಷ್ಠ ಆದ್ಯತೆ ಕೊಡಬೇಕೆಂದು ನಾನು ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುತ್ತೇನೆ. ನಾನು ನಿಮಗೆ ಇನ್ನೊಂದು ಉದಾಹರಣೆಯನ್ನು ಕೊಡುತ್ತೇನೆ. ಈಗ ನವೆಂಬರ್ ತಿಂಗಳಲ್ಲಿ ಮಾಡಬೇಕಾಗಿರುವುದನ್ನು ಮಾಡಲಾಗಿಲ್ಲ. ಅದರಿಂದ, ಕಳೆದ ಆರು ತಿಂಗಳಲ್ಲಿ ಏನಾಗಿದೆ?. ಇಂದು ತಮಿಳುನಾಡಿನ ಚೆನ್ನೈಯಲ್ಲಿ ಪೆಟ್ರೋಲ್ 111 ರೂಪಾಯಿ ಇದೆ. ಜೈಪುರದಲ್ಲಿ 118 ರೂಪಾಯಿ ಇದೆ. ಹೈದರಾಬಾದಿನಲ್ಲಿ 119 ರೂ. ಕೋಲ್ಕೊತ್ತಾದಲ್ಲಿ 115 ರೂ. ಮತ್ತು ಮುಂಬಯಿಯಲ್ಲಿ 120 ರೂ. ಇದೆ. ದಿಯು ಮತ್ತು ದಮನ್ ನಲ್ಲಿ 102 ರೂ ಇದೆ. ಅದು ದರದಲಿ ಇಳಿಕೆ ಮಾಡಿದೆ. ಮುಂಬಯಿಯಲ್ಲಿ 120 ರೂ. ಆದರೆ ಹತ್ತಿರದ ದಿಯು ದಮನ್ ನಲ್ಲಿ 102 ರೂ. ಕೋಲ್ಕೊತ್ತಾದಲ್ಲಿ 115 ರೂ. ಲಕ್ನೋದಲ್ಲಿ 105 ರೂ. ಹೈದರಾಬಾದಿನಲ್ಲಿ ಸುಮಾರು 120 ರೂ. ಜಮ್ಮುವಿನಲ್ಲಿ 106 ರೂ. ಜೈಪುರದಲ್ಲಿ 118 ರೂ. , ಗುವಾಹಟಿಯಲ್ಲಿ 105 ರೂ., ಗುರುಗ್ರಾಮದಲ್ಲಿ 105 ರೂ., ಮತ್ತು ಸಣ್ಣ ರಾಜ್ಯ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ 103 ರೂ.. ಕಳೆದ ಆರು ತಿಂಗಳಲ್ಲಿ ನೀವು ಗಳಿಸಿದ ಆದಾಯ ನಿಮ್ಮ ರಾಜ್ಯಗಳಿಗೆ ಪ್ರಯೋಜನಕ್ಕೆ ಬೀಳುತ್ತದೆ. ಆದರೆ ಇಂದು ನಾನು ನಿಮ್ಮಲ್ಲಿ ರಾಷ್ಟ್ರೀಯ ಹಿತಾಸಕ್ತಿಗಾಗಿ ಸಹಕಾರ ಮಾಡಿ ಎಂದು ವಿಶೇಷ ಮನವಿಯನ್ನು ಮಾಡುತ್ತಿದ್ದೇನೆ.
ಸ್ನೇಹಿತರೇ,
ಇಂದು ನಾನು ಇನ್ನೊಂದು ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ಮುಂದಿಡಲು ಬಯಸುತ್ತೇನೆ. ದೇಶದಲ್ಲಿ ಬಿಸಿಲಿನ ಬೇಗೆ ಬಹಳ ತ್ವರಿತವಾಗಿ ಹೆಚ್ಚುತ್ತಿದೆ. ಮತ್ತು ಉಷ್ಣಾಂಶ, ಸೆಕೆ ಬಹಳ ಹೆಚ್ಚುತ್ತಿದೆ. ಮತ್ತು ವಿವಿಧ ಸ್ಥಳಗಳಲ್ಲಿ ನಾವು ಅಗ್ನಿ ಅವಘಡಗಳು ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಅರಣ್ಯಗಳಲ್ಲಿ ಕಾಡ್ಗಿಚ್ಚು, ಕಳೆದ ಕೆಲವು ದಿನಗಳಿಂದ ಪ್ರಮುಖ ಕಟ್ಟಡಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಬೆಂಕಿ ಅನಾಹುತದ ಘಟನೆಗಳು ನಡೆದಿವೆ. ಕಳೆದ ವರ್ಷ ಹಲವು ಆಸ್ಪತ್ರೆಗಳಿಗೆ ಬೆಂಕಿ ತಗುಲಿದಾಗ ಆ ದಿನಗಳು ಎಷ್ಟೊಂದು ಯಾತನಾಮಯವಾಗಿದ್ದವು ಎಂಬುದು ನಮ್ಮೆಲ್ಲರ ನೆನಪಿನಲ್ಲಿದೆ. ಮತ್ತು ಅದು ಬಹಳ ನೋವಿನ ಪರಿಸ್ಥಿತಿ. ಅದು ಬಹಳ ಕಠಿಣ ಕಾಲ. ಇಂತಹ ಘಟನೆಗಳಲ್ಲಿ ಅನೇಕರು ತಮ್ಮ ಪ್ರಾಣ ಕಳೆದುಕೊಂಡರು.
ಆದುದರಿಂದ, ಸುರಕ್ಷಾ ಆಡಿಟ್ ಗಳನ್ನು ಕೈಗೊಳ್ಳುವಂತೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಅದರಲ್ಲೂ ಆಸ್ಪತ್ರೆಗಳಲ್ಲಿ ಆದ್ಯತೆಯಾಧಾರದ ಮೇಲೆ ಈ ಸುರಕ್ಷಾ ವ್ಯವಸ್ಥೆಗಳನ್ನು ಬಲಪಡಿಸುವಂತೆ ನಾನು ಎಲ್ಲಾ ರಾಜ್ಯಗಳನ್ನು ಕೋರಿಕೊಳ್ಳುತ್ತೇನೆ. ನಿಮ್ಮ ತಂಡಗಳನ್ನು ನಿಯೋಜಿಸಿ, ನಿಗಾವಹಿಸಿ. ಇದರಿಂದ ಇಂತಹ ಘಟನೆಗಳು ನಡೆಯುವುದನ್ನು ತಪ್ಪಿಸಬಹುದು ಅಥವಾ ಅವುಗಳನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಬಹುದು. ಮತ್ತು ನಮ್ಮ ಪ್ರತಿಕ್ರಿಯಾ ಸಮಯ ಕೂಡಾ ಕಡಿಮೆಯಾಗಿರುವಂತೆ ನೋಡಿಕೊಳ್ಳಬೇಕು. ಅಲ್ಲಿ ಯಾವುದೇ ಜೀವ ಹಾನಿ ಅಥವಾ ಆಸ್ತಿ ನಾಶ ಸಂಭವಿಸಬಾರದು ಮತ್ತು ದೇಶದ ಯಾವ ಭಾಗದಲ್ಲಿಯೂ ಇಂತಹ ಅವಘಢಗಳಾಗಬಾರದು. ನಮ್ಮ ಮುಗ್ಧ ನಾಗರಿಕರು ಅವರ ಪ್ರಾಣವನ್ನು ಕಳೆದುಕೊಳ್ಳಬಾರದು.
ಸ್ನೇಹಿತರೇ,
ಸಮಯಾವಕಾಶ ಮಾಡಿಕೊಂಡು ಪಾಲ್ಗೊಂಡಿರುವುದಕ್ಕಾಗಿ ನಾನು ನಿಮಗೆಲ್ಲ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮತ್ತು ನಾನು ಸದಾ ನಿಮಗೆ ಲಭ್ಯನಿರುತ್ತೇನೆ. ನೀವು ಯಾವುದಾದರೂ ಪ್ರಮುಖ ಸಲಹೆಗಳನ್ನು ನೀಡಿದರೆ ಅವುಗಳನ್ನು ಅಂಗೀಕರಿಸಲು ನಾನು ಇಷ್ಟಪಡುತ್ತೇನೆ. ನಾನು ಮತ್ತೊಮ್ಮೆ ನಿಮಗೆಲ್ಲ ಬಹಳ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
(Release ID: 1821528)
Visitor Counter : 176
Read this release in:
Malayalam
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu