ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ''ಕಿಸಾನ್ ಭಾಗೀದಾರಿ ಪ್ರತ್ಮಿಕ್ತಾ ಹಮಾರಿ '' ಅಭಿಯಾನ ಆಯೋಜನೆ


ಭಾರತದಾದ್ಯಂತ ಸುಮಾರು 2000 ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರು ಅಭಿಯಾನದಲ್ಲಿ ಭಾಗಿ

Posted On: 29 APR 2022 11:36AM by PIB Bengaluru

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ 2022 ರ ಏಪ್ರಿಲ್ 25 ರಿಂದ 30 ರವರೆಗೆ "ಕಿಸಾನ್ ಭಾಗೀದಾರಿ ಪ್ರತ್ಮಿಕ್ತಾ ಹಮಾರಿ" ಅಭಿಯಾನವನ್ನು ಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಯ ಭಾಗವಾಗಿ ಆಯೋಜಿಸಿದೆ.
 ಅಭಿಯಾನದ ನಾಲ್ಕನೇ ದಿನ, ಮೀನುಗಾರಿಕೆ ಇಲಾಖೆ (ಡಿಒಎಫ್) ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಎಚ್ ಡಿ) ಸಹಯೋಗದೊಂದಿಗೆ 2022 ರ ಏಪ್ರಿಲ್ 28 ರಂದು ವರ್ಚುವಲ್ ಜಾಗೃತಿ ಅಧಿವೇಶನವನ್ನು ಆಯೋಜಿಸಿತು. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಮೀನುಗಾರರು, ಮೀನು ಕೃಷಿಕರು, ಪಶುಸಂಪತ್ತು ಮತ್ತು ಹೈನುಗಾರರು ಹಾಗೂ ಇತರ ಮಧ್ಯಸ್ಥಗಾರರಲ್ಲಿ ಜನಜಾಗೃತಿ ಮೂಡಿಸುವುದು ಮತ್ತು ಪ್ರಯೋಜನಗಳನ್ನು ಪಡೆಯಲು ಅವರನ್ನು ಉತ್ತೇಜಿಸುವುದು ಈ ಜಾಗೃತಿ ಅಧಿವೇಶನದ ಪ್ರಮುಖ ಉದ್ದೇಶವಾಗಿದೆ.

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ್ ರುಪಾಲಾ ಅವರು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಉದ್ಯೋಗ ಮತ್ತು ಜೀವನೋಪಾಯ ಸೃಷ್ಟಿಯಲ್ಲಿ ಮೀನುಗಾರಿಕೆ ಮತ್ತು ಜಾನುವಾರು ವಲಯದ ಮಹತ್ವವನ್ನು ಒತ್ತಿ ಹೇಳುತ್ತಾ, ವಿವಿಧ ಕಲ್ಯಾಣ ಕ್ರಮಗಳ ಬಗ್ಗೆ ತಮ್ಮ ಅಮೂಲ್ಯ ಒಳನೋಟಗಳನ್ನು ಹಂಚಿಕೊಂಡರು ಮತ್ತು ವಿವಿಧ ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಿದರು ಹಾಗೂ ಸಚಿವಾಲಯದ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವಂತೆ ಅವರನ್ನು ಉತ್ತೇಜಿಸಿದರು. ಗೌರವಾನ್ವಿತ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಯ ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ಸಂಜೀವ್ ಕುಮಾರ್ ಬಲ್ಯಾನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಡಿಎಎಚ್ ಡಿಯ ಜಂಟಿ ಕಾರ್ಯದರ್ಶಿ ಡಾ. ಒ.ಪಿ. ಚೌಧರಿ ಅವರು ಅತಿಥಿಗಳು ಮತ್ತು ಸ್ಪರ್ಧಿಗಳನ್ನು ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕೃಷಿ, ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ರೈತರು ಮತ್ತು ಸಂಘಟನೆಗಳಿಗಾಗಿ ಡಿಒಎಫ್ ನ ಪ್ರಮುಖ ಯೋಜನೆಯಾದ "ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ ವೈ)" , ಮೀನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್ಐಡಿಎಫ್) ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಜತೆಗೆ ಎನ್ಎಲ್ಎಂ / ಆರ್ ಜಿಎಂ / ಎಎಚ್ಐಡಿಎಫ್ ನ ವಿವಿಧ ಉದ್ಯಮಶೀಲತಾ ಯೋಜನೆಗಳ ಕುರಿತು ಈ ಅಧಿವೇಶನದಲ್ಲಿ ಬೆಳಕು ಚೆಲ್ಲಲಾಯಿತು. ಈ ಕಾರ್ಯಕ್ರಮವನ್ನು ಡಿಎಎಚ್ ಡಿಯ ಅಧಿಕೃತ ಫೇಸ್ ಬುಕ್ ಪುಟದಲ್ಲಿ ನೇರಪ್ರಸಾರ ಮಾಡಲಾಯಿತು. ಅನೇಕ ಜನರು ಆನ್ ಲೈನ್ ನಲ್ಲಿ ಪಾಲ್ಗೊಂಡಿದ್ದರು. ಭಾರತದಾದ್ಯಂತ ಸುಮಾರು 2000 ಸ್ಥಳಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರು ಅಧಿವೇಶನದಲ್ಲಿ ಭಾಗವಹಿಸಿದ್ದರು.


ಭಾರತ ಸರ್ಕಾರದ ಒಳನಾಡು ಮೀನುಗಾರಿಕೆಯ ಜಂಟಿ ಕಾರ್ಯದರ್ಶಿ ಶ್ರೀ ಸಾಗರ್ ಮೆಹ್ರಾ ಅವರು, ತಮ್ಮ ಸಮಾರೋಪ ಭಾಷಣದಲ್ಲಿ, ಪ್ರತಿಯೊಬ್ಬರಿಗೂ, ವಿಶೇಷವಾಗಿ ರೈತರ ಉತ್ಸಾಹ ಮತ್ತು ಸಕ್ರಿಯ ಭಾಗವಹಿಸುವಿಕೆಗಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮೀನು ಉದ್ಯಮಿಗಳ ಯಶೋಗಾಥೆಗಳ ವೀಡಿಯೊಗಳನ್ನು ಮೀನುಗಾರಿಕೆಯಲ್ಲಿ ಉದ್ಯಮಶೀಲತೆಯ ಅವಕಾಶಗಳನ್ನು ಉತ್ತೇಜಿಸಲು ಮತ್ತು ಹಾಜರಿದ್ದ ರೈತರನ್ನು ಪ್ರೇರೇಪಿಸಲು ತೋರಿಸಲಾಯಿತು.

***8



(Release ID: 1821286) Visitor Counter : 236