ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಿಯವರಿಂದ ಸೆಮಿಕಾನ್ ಇಂಡಿಯಾ ಸಮ್ಮೇಳನ- 2022 ಉದ್ಘಾಟನೆ


"ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳಲ್ಲಿ ಭಾರತವನ್ನು ಪ್ರಮುಖ ಪಾಲುದಾರನನ್ನಾಗಿಸುವುದು ನಮ್ಮ ಸಾಮೂಹಿಕ ಗುರಿಯಾಗಿದೆ"

"ಆರೋಗ್ಯ ಮತ್ತು ಕಲ್ಯಾಣದಿಂದ ಸೇರ್ಪಡೆ ಮತ್ತು ಸಬಲೀಕರಣದವರೆಗೆ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಜೀವನವನ್ನು ಪರಿವರ್ತಿಸಲು ನಾವು ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ"

"ಭಾರತವು ಮುಂದಿನ ತಂತ್ರಜ್ಞಾನ ಕ್ರಾಂತಿಗೆ ದಾರಿ ಮಾಡಿಕೊಡುತ್ತಿದೆ"

"ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯೊಂದಿಗೆ ಭಾರತವು ದೃಢವಾದ ಆರ್ಥಿಕ ಬೆಳವಣಿಗೆಯತ್ತ ಸಾಗುತ್ತಿದೆ"

"ವ್ಯಾಪಾರವನ್ನು ಸುಲಭಗೊಳಿಸಲು ಭಾರತವು ವ್ಯಾಪಕವಾದ ಸುಧಾರಣೆಗಳನ್ನು ಕೈಗೊಂಡಿದೆ"

"ನಾವು ಅಸಾಧಾರಣವಾದ ಸೆಮಿಕಂಡಕ್ಟರ್ ವಿನ್ಯಾಸ ಪ್ರತಿಭಾ ಸಮೂಹವನ್ನು ಹೊಂದಿದ್ದೇವೆ, ಇದು ವಿಶ್ವದ ಸೆಮಿಕಂಡಕ್ಟರ್ ವಿನ್ಯಾಸ ಎಂಜಿನಿಯರ್‌ಗಳಲ್ಲಿ ಶೇ.20 ರಷ್ಟಿದೆ"

"ಭಾರತದ ಸ್ವಂತ ಸೆಮಿಕಂಡಕ್ಟರ್ ಬಳಕೆ 2026 ರ ವೇಳೆಗೆ 80 ಶತಕೋಟಿ ಡಾಲರ್‌ಗಳನ್ನು ಮತ್ತು 2030 ರ ವೇಳೆಗೆ 110 ಶತಕೋಟಿ ಡಾಲರ್‌ಗಳನ್ನು ದಾಟುವ ನಿರೀಕ್ಷೆಯಿದೆ"

" ಮನುಕುಲವು ಶತಮಾನ ಕಂಡರಿಯದ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ಭಾರತವು ನಮ್ಮ ಜನರ ಆರೋಗ್ಯ ಮಾತ್ರವಲ್ಲದೆ ನಮ್ಮ ಆರ್ಥಿಕತೆಯ ಆರೋಗ್ಯವನ್ನೂ ಸುಧಾರಿಸುತ್ತಿದೆ"

"ಉದ್ಯಮವು ಕಷ್ಟಪಟ್ಟು ಕೆಲಸ ಮಾಡುವಾಗ, ಸರ್ಕಾರವು ಮತ್ತಷ್ಟು ಪರಿಶ್ರಮ ಹಾಕಬೇಕು"

"ಭಾರತವು ತಂತ್ರಜ್ಞಾನ ಮತ್ತು ಅಪಾಯವನ್ನು ತೆಗೆದುಕೊಳ್ಳುವ ಹಸಿವನ್ನು ಹೊಂದಿದೆ"

“ನಾವು ಬೆಂಬಲ ನೀತಿಯ ಮೂಲಕ ಪ್ರತಿಕೂಲತೆಗಳನ್ನು ಸಾಧ್ಯವಾದಷ್ಟು ನಿಮ್ಮ ಪರವಾಗಿಸಿದ್ದೇವೆ. ಭಾರತ ಎಂದರೆ ವ್ಯಾಪಾರ ಎಂಬುದನ್ನು ನಾವು ತೋರಿಸಿದ್ದೇವೆ”

Posted On: 29 APR 2022 11:21AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಮಿಕಾನ್ ಇಂಡಿಯಾ ಸಮ್ಮೇಳನ- 2022 ಅನ್ನು ಉದ್ಘಾಟಿಸಿದರು ಮತ್ತು ಇಂದಿನ ಉದ್ಘಾಟನಾ ಅಧಿವೇಶನದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೇಂದ್ರ ಸಚಿವರು, ಸೆಮಿಕಂಡಕ್ಟರ್ ಉದ್ಯಮದ ಮುಖಂಡರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ರಾಯಭಾರ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದ ಪ್ರಧಾನಿಯವರು, ಭಾರತದಲ್ಲಿ ಸಮ್ಮೇಳನ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇಂದಿನ ಜಗತ್ತಿನಲ್ಲಿ ಸೆಮಿಕಂಡಕ್ಟರ್‌ಗಳ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದರು. "ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳಲ್ಲಿ ಭಾರತವನ್ನು ಪ್ರಮುಖ ಪಾಲುದಾರನನ್ನಾಗಿ ಮಾಡುವುದು ನಮ್ಮ ಸಾಮೂಹಿಕ ಗುರಿಯಾಗಿದೆ. ಉನ್ನತ ತಂತ್ರಜ್ಞಾನ, ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ವಿಶ್ವಾಸಾರ್ಹತೆಯ ತತ್ವವನ್ನು ಆಧರಿಸಿ ನಾವು ಈ ದಿಕ್ಕಿನಲ್ಲಿ ಕೆಲಸ ಮಾಡಲು ಬಯಸುತ್ತೇವೆ.” ಎಂದು ಅವರು ಹೇಳಿದರು.
ಸೆಮಿಕಂಡಕ್ಟರ್ ತಂತ್ರಜ್ಞಾನಗಳಿಗೆ ಭಾರತವು ಆಕರ್ಷಕ ಹೂಡಿಕೆಯ ತಾಣವಾಗಲು ಆರು ಕಾರಣಗಳನ್ನು ಪ್ರಧಾನಮಂತ್ರಿಯವರು ಪಟ್ಟಿ ಮಾಡಿದರು.
ಮೊದಲನೆಯದಾಗಿ, ಭಾರತವು 1.3 ಬಿಲಿಯನ್ ಭಾರತೀಯರನ್ನು ಸಂಪರ್ಕಿಸಲು ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ. ಆರ್ಥಿಕ ಸೇರ್ಪಡೆ, ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಭಾರತವು ಇತ್ತೀಚೆಗೆ ಇಟ್ಟಿರುವ ದಾಪುಗಾಲುಗಳನ್ನು ವಿವರಿಸಿದ ಪ್ರಧಾನಿಯವರು, "ಆರೋಗ್ಯ ಮತ್ತು ಕಲ್ಯಾಣದಿಂದ ಸೇರ್ಪಡೆ ಮತ್ತು ಸಬಲೀಕರಣದವರೆಗೆ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಜೀವನವನ್ನು ಪರಿವರ್ತಿಸಲು ನಾವು ಡಿಜಿಟಲ್ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ" ಎಂದು ಹೇಳಿದರು.
ಎರಡನೆಯದಾಗಿ, 5ಜಿ, ಐಒಟಿ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳಲ್ಲಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಬ್ರಾಡ್‌ಬ್ಯಾಂಡ್ ಹೂಡಿಕೆಯೊಂದಿಗೆ ಆರು ಲಕ್ಷ ಹಳ್ಳಿಗಳನ್ನು ಸಂಪರ್ಕಿಸುವಂತಹ ಕ್ರಮಗಳೊಂದಿಗೆ ಭಾರತವು ಮುಂದಿನ ತಂತ್ರಜ್ಞಾನ ಕ್ರಾಂತಿಗೆ ದಾರಿ ಮಾಡಿಕೊಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಮೂರನೆಯದಾಗಿ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯೊಂದಿಗೆ ಭಾರತವು ದೃಢವಾದ ಆರ್ಥಿಕ ಬೆಳವಣಿಗೆಯತ್ತ ಸಾಗುತ್ತಿದೆ. ಸೆಮಿಕಂಡಕ್ಟರ್‌ಗಳ ಭಾರತದ ಸ್ವಂತ ಬಳಕೆಯು 2026 ರ ವೇಳೆಗೆ 80 ಬಿಲಿಯನ್ ಡಾಲರ್‌ಗಳನ್ನು ಮತ್ತು 2030 ರ ವೇಳೆಗೆ 110 ಬಿಲಿಯನ್ ಡಾಲರ್‌ಗಳನ್ನು ದಾಟುವ ನಿರೀಕ್ಷೆಯಿದೆ ಎಂದು ಹೇಳಿದರು.
ನಾಲ್ಕನೆಯದಾಗಿ, ಭಾರತದಲ್ಲಿ ವ್ಯಾಪಾರವನ್ನು ಸುಲಭಗೊಳಿಸಲು ಸರ್ಕಾರವು ವ್ಯಾಪಕವಾದ ಸುಧಾರಣೆಗಳನ್ನು ಕೈಗೊಂಡಿದೆ. 25,000 ಕ್ಕೂ ಹೆಚ್ಚು ಅನುಸರಣೆಗಳ ರದ್ದು, ಪರವಾನಗಿಗಳ ಸ್ವಯಂ-ನವೀಕರಣ, ಡಿಜಿಟಲೀಕರಣದ ಮೂಲಕ ನಿಯಂತ್ರಕ ಚೌಕಟ್ಟಿನಲ್ಲಿ ಪಾರದರ್ಶಕತೆ ಮತ್ತು ವೇಗ ಹಾಗು ವಿಶ್ವದ ಅತ್ಯಂತ ಅನುಕೂಲಕರ ತೆರಿಗೆ ರಚನೆಗಳಂತಹ ಕ್ರಮಗಳ ಬಗ್ಗೆ ಪ್ರಧಾನಿಯವರು ಮಾಹಿತಿ ನೀಡಿದರು.
ಐದನೆಯದಾಗಿ, 21ನೇ ಶತಮಾನದ ಅಗತ್ಯಗಳಿಗಾಗಿ ಯುವ ಭಾರತೀಯರಿಗೆ ಕೌಶಲ್ಯ ಮತ್ತು ತರಬೇತಿ ನೀಡುವಲ್ಲಿ ಭಾರಿ ಹೂಡಿಕೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು. "ನಾವು ಅಸಾಧಾರಣವಾದ ಸೆಮಿಕಂಡಕ್ಟರ್ ವಿನ್ಯಾಸದ ಪ್ರತಿಭಾ ಸಮೂಹವನ್ನು  ಹೊಂದಿದ್ದೇವೆ, ಇದು ವಿಶ್ವದ ಸೆಮಿಕಂಡಕ್ಟರ್ ವಿನ್ಯಾಸ ಎಂಜಿನಿಯರ್‌ಗಳಲ್ಲಿ ಶೇ.20 ರಷ್ಟಿದೆ. ಬಹುತೇಕ ಎಲ್ಲಾ ಅಗ್ರ 25 ಸೆಮಿಕಂಡಕ್ಟರ್ ವಿನ್ಯಾಸ ಕಂಪನಿಗಳು ನಮ್ಮ ದೇಶದಲ್ಲಿ ತಮ್ಮ ವಿನ್ಯಾಸ ಅಥವಾ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿವೆ” ಎಂದು ಅವರು ಹೇಳಿದರು.
ಆರನೆಯದಾಗಿ, ಭಾರತದ ಉತ್ಪಾದನಾ ವಲಯದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಭಾರತ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಹೇಳಿದರು. "ಮನುಕುಲವು ಶತಮಾನ ಕಂಡರಿಯದ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ, ಭಾರತವು ನಮ್ಮ ಜನರ ಆರೋಗ್ಯ ಮಾತ್ರವಲ್ಲದೆ ನಮ್ಮ ಆರ್ಥಿಕತೆಯ ಆರೋಗ್ಯವನ್ನೂ ಸುಧಾರಿಸುತ್ತಿದೆ" ಎಂದು ಅವರು ಹೇಳಿದರು. 14 ಪ್ರಮುಖ ವಲಯಗಳಲ್ಲಿ 26 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಿನ ಪ್ರೋತ್ಸಾಹಕವನ್ನು ನೀಡುವ ''ಉತ್ಪಾದನೆ ಆಧಾರಿತ ಪ್ರೋತ್ಸಾಹಕ'' ಯೋಜನೆಗಳ ಕುರಿತು ಪ್ರಧಾನಿ ಮಾತನಾಡಿದರು. ಮುಂದಿನ 5 ವರ್ಷಗಳಲ್ಲಿ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ದಾಖಲೆಯ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ ಎಂದರು. ಇತ್ತೀಚೆಗೆ ಘೋಷಿಸಲಾದ ಸೆಮಿ-ಕಾನ್ ಇಂಡಿಯಾ ಕಾರ್ಯಕ್ರಮದ ಬಗ್ಗೆ ಶ್ರೀ ಮೋದಿ ಸಭೆಗೆ ತಿಳಿಸಿದರು. ಈ ಕಾರ್ಯಕ್ರಮವು ಸೆಮಿಕಂಡಕ್ಟರ್‌ಗಳು, ಪ್ರದರ್ಶನ ಪರಿಕರಗಳ ಉತ್ಪಾದನೆ ಮತ್ತು ವಿನ್ಯಾಸ ಪರಿಸರ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಹಣಕಾಸಿನ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಸರ್ಕಾರದ ಬೆಂಬಲದ ಅಗತ್ಯವನ್ನು ಒಪ್ಪಿಕೊಂಡ ಪ್ರಧಾನಿಯವರು, ವ್ಯಾಪಾರಕ್ಕೆ ಅನುಕೂಲಕರ ವಾತಾವರಣವನ್ನು ಒದಗಿಸಲು ಸರ್ಕಾರದ ಅತ್ಯುತ್ತಮ ಪ್ರಯತ್ನಗಳ ಬಗ್ಗೆ ಭರವಸೆ ನೀಡಿದರು. "ಉದ್ಯಮವು ಕಷ್ಟಪಟ್ಟು ಕೆಲಸ ಮಾಡುವಾಗ, ಸರ್ಕಾರವು ಮತ್ತಷ್ಟು ಪರಿಶ್ರಮ ಹಾಕಬೇಕು" ಎಂದು ಅವರು ಹೇಳಿದರು.
ಹೊಸ ವಿಶ್ವ ಕ್ರಮಾಂಕದ ಬಗ್ಗೆ ಗಮನ ಸೆಳೆದ ಪ್ರಧಾನಿಯವರು, ಹೊಸ ಅವಕಾಶಗಳನ್ನು ಬಳಸಿಕೊಳ್ಳುವಂತೆ ಕರೆಕೊಟ್ಟರು. “ನಾವು ಕಳೆದ ಕೆಲವು ವರ್ಷಗಳಿಂದ ಬೆಳವಣಿಗೆಯನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಲು ಶ್ರಮಿಸುತ್ತಿದ್ದೇವೆ. ಭಾರತವು ತಂತ್ರಜ್ಞಾನ ಮತ್ತು ಅಪಾಯವನ್ನು ತೆಗೆದುಕೊಳ್ಳುವ ಹಸಿವನ್ನು ಹೊಂದಿದೆ. ಬೆಂಬಲ ನೀತಿಯ ಮೂಲಕ ನಾವು ಪ್ರತಿಕೂಲಗಳನ್ನು‌ಕಡಿಮೆ ಮಾಡಿ ಸಾಧ್ಯವಾದಷ್ಟು ನಿಮ್ಮ ಪರವಾಗಿಸಿದ್ದೇವೆ. ಭಾರತ ಎಂದರೆ ವ್ಯಾಪಾರ ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ”ಎಂದು ಪ್ರಧಾನಿಮಂತ್ರಿಯವರು ಮಾತು ಮುಗಿಸಿದರು.

 

***


(Release ID: 1821276) Visitor Counter : 259