ಸಂಪುಟ

'ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ʼ ಸ್ಥಾಪನೆಯ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಚಿವ ಸಂಪುಟದ ಅನುಮೋದನೆ


2020-21ರಿಂದ 2022-23ನೇ ಸಾಲಿನ ಹಣಕಾಸು ವರ್ಷಕ್ಕಾಗಿ 820 ಕೋಟಿ ರೂ.ಗಳ ಹೆಚ್ಚುವರಿ ಅನುದಾನ; ರೂ. 2,255 ಕೋಟಿ ತಲುಪಿದ ಒಟ್ಟು ಅನುದಾನ

Posted On: 27 APR 2022 4:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, `ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್’ (ಐಪಿಪಿಬಿ) ಸ್ಥಾಪನೆಯ ಯೋಜನಾ ಅನುದಾನವನ್ನು 1,435 ಕೋಟಿ ರೂ.ಗಳಿಂದ 2255 ಕೋಟಿ ರೂ.ಗಳಿಗೆ ಪರಿಷ್ಕರಿಸಲು ಅನುಮೋದನೆ ನೀಡಿದೆ.  ನಿಯಂತ್ರಕ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಈಕ್ವಿಟಿ ಒಳಹರಿವಿನ ವಿಧಾನದ ಮೂಲಕ ಹೆಚ್ಚುವರಿ ಅನುದಾನ ಸಂಗ್ರಹಿಸಲಾಗುವುದು. ಅಲ್ಲದೆ, ನಿಯಂತ್ರಕ ಅಗತ್ಯತೆಗಳನ್ನು ಪೂರೈಸಲು ಹಾಗೂ ತಾಂತ್ರಿಕ ಉನ್ನತೀಕರಣಕ್ಕಾಗಿ 500 ಕೋಟಿ ರೂ.ಗಳ ಭವಿಷ್ಯದ ನಿಧಿ ಸಂಗ್ರಹಣೆಗೂ ಸಂಪುಟವು ತಾತ್ವಿಕ ಅನುಮೋದನೆ ನೀಡಿದೆ. 
 
ಸಾಮಾನ್ಯ ಜನರಿಗೆ ಅತ್ಯಂತ ಸುಲಭ ಲಭ್ಯವಾಗುವ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಬ್ಯಾಂಕ್‌ ವ್ಯವಸ್ಥೆ ನಿರ್ಮಿಸುವುದು; ಬ್ಯಾಂಕೇತರರಿಗೆ ಅಡೆತಡೆಗಳನ್ನು ನಿವಾರಿಸುವ ಮೂಲಕ ಹಣಕಾಸು ಸೇರ್ಪಡೆ ಕಾರ್ಯಸೂಚಿಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುವುದು; ಹಾಗೂ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ಅಡಿಯಲ್ಲಿನ ಜನರಿಗೆ ಅವಕಾಶ ವೆಚ್ಚವನ್ನು ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.  ಈ ಯೋಜನೆಯು ಭಾರತ ಸರಕಾರದ "ಕಡಿಮೆ ನಗದು" ಆರ್ಥಿಕತೆಯ ದೃಷ್ಟಿಕೋನಕ್ಕೆ ಪೂರಕವಾಗಿದೆ ಮತ್ತು ಇದೇ ವೇಳೆ, ಆರ್ಥಿಕ ಬೆಳವಣಿಗೆ ಹಾಗೂ ಹಣಕಾಸು ಸೇರ್ಪಡೆ ಎರಡನ್ನೂ ಉತ್ತೇಜಿಸುತ್ತದೆ. 
 
ʻಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ʼ ಸೆಪ್ಟೆಂಬರ್ 1, 2018ರಂದು 650 ಶಾಖೆಗಳು/ನಿಯಂತ್ರಣ ಕಚೇರಿಗಳೊಂದಿಗೆ ರಾಷ್ಟ್ರವ್ಯಾಪಿ ಪ್ರಾರಂಭಗೊಂಡಿತು.  ʻಐಪಿಪಿಬಿʼ, 1.36 ಲಕ್ಷ ಅಂಚೆ ಕಚೇರಿಗಳನ್ನು ಬ್ಯಾಂಕಿಂಗ್ ಸೇವೆ ನೀಡಲು ಸಕ್ರಿಯಗೊಳಿಸಿದೆ ಹಾಗೂ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಪೂರೈಸಲು ಸುಮಾರು 1.89 ಲಕ್ಷ ಪೋಸ್ಟ್‌ಮೆನ್ ಮತ್ತು ಗ್ರಾಮೀಣ ಅಂಚೆ ಸೇವಕರನ್ನು ಸ್ಮಾರ್ಟ್‌ಫೋನ್ ಹಾಗೂ ಬಯೋಮೆಟ್ರಿಕ್ ಸಾಧನದೊಂದಿಗೆ ಸಜ್ಜುಗೊಳಿಸಿದೆ. 
 
ʻಐಪಿಪಿಬಿʼ ಪ್ರಾರಂಭವಾದಾಗಿನಿಂದ 5.25 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆದಿದ್ದು, ಒಟ್ಟು 1,61,811 ಕೋಟಿ ರೂ. ಮೌಲ್ಯದ 82 ಕೋಟಿ ಹಣಕಾಸು ವಹಿವಾಟುಗಳನ್ನು ನಡೆಸಿದೆ. ಇದರಲ್ಲಿ 21,343 ಕೋಟಿ ರೂ.ಗಳ ಮೌಲ್ಯದ 765 ಲಕ್ಷ ʻಆಧಾರ್‌ ಸಕ್ರಿಯ ಪಾವತಿ ವ್ಯವಸ್ಥೆಯ (AePS) ವಹಿವಾಟುಗಳು ಸೇರಿವೆ.  5 ಕೋಟಿ ಖಾತೆಗಳ ಪೈಕಿ ಶೇ.77ರಷ್ಟು ಖಾತೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತೆರೆಯಲಾಗಿದೆ. ಈ ಪೈಕಿ ಶೇ.48ರಷ್ಟು ಮಹಿಳಾ ಗ್ರಾಹಕರಾಗಿದ್ದು, ಸುಮಾರು 1000 ಕೋಟಿ ರೂ.ಗಳ ಠೇವಣಿಯನ್ನು ಹೊಂದಿದ್ದಾರೆ.  ಸುಮಾರು 40 ಲಕ್ಷ ಮಹಿಳಾ ಗ್ರಾಹಕರು ತಮ್ಮ ಖಾತೆಗಳಿಗೆ 2500 ಕೋಟಿ ರೂ.ಗಳ ಮೌಲ್ಯದ ನೇರ ಲಾಭ ವರ್ಗಾವಣೆ (ಡಿಬಿಟಿ) ಪಡೆದಿದ್ದಾರೆ.  ಶಾಲಾ ವಿದ್ಯಾರ್ಥಿಗಳಿಗಾಗಿ 7.8 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. 
 
ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ `ಐಪಿಪಿಬಿ’ ಸುಮಾರು 95.71 ಲಕ್ಷ ಖಾತೆಗಳನ್ನು ತೆರೆದಿದ್ದು, 19,487 ಕೋಟಿ ರೂ.ಗಳ ಮೌಲ್ಯದ 602 ಲಕ್ಷ ಒಟ್ಟು ವಹಿವಾಟನ್ನು ನಡೆಸಿದೆ.  ಎಡಪಂಥೀಯ ಉಗ್ರವಾದ (ಎಲ್‌ಡಬ್ಲ್ಯುಇ) ಹೆಚ್ಚಾಗಿರುವ ಜಿಲ್ಲೆಗಳಲ್ಲಿ ʻಐಪಿಪಿಬಿʼಯಿಂದ 67.20 ಲಕ್ಷ ಖಾತೆಗಳನ್ನು ತೆರೆಯಲಾಗಿದ್ದು, ಒಟ್ಟು 13,460 ಕೋಟಿ ರೂ.ಗಳ ಮೌಲ್ಯದ 426 ಲಕ್ಷ ವಹಿವಾಟು ದಾಖಲಾಗಿದೆ.
 
ಈ ಪ್ರಸ್ತಾವನೆಯಡಿ ಒಳಗೊಂಡಿರುವ ಒಟ್ಟು ಆರ್ಥಿಕ ವೆಚ್ಚವು ರೂ.820 ಕೋಟಿಗಳಷ್ಟಿದೆ.  ಈ ನಿರ್ಧಾರವು ಅಂಚೆ ಇಲಾಖೆಯ ಜಾಲವನ್ನು ಬಳಸಿಕೊಳ್ಳುವ ಮೂಲಕ ಭಾರತದಾದ್ಯಂತ ಹಣಕಾಸು ಸೇರ್ಪಡೆಯನ್ನು ಮುಂದುವರಿಸುವ ತನ್ನ ಉದ್ದೇಶವನ್ನು ಮುಂದುವರಿಸಲು ʻಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ʼಗೆ ಸಹಾಯ ಮಾಡಲಿದೆ. 


***



(Release ID: 1820587) Visitor Counter : 279