ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಸ್ಫೂರ್ತಿದಾಯಕ ಕಥೆಗಳನ್ನು ಪ್ರದರ್ಶಿಸುವ 'ಆಜಾದಿ ಕಿ ಅಮೃತ್ ಕಹಾನಿಯಾ' ಎಂಬ ಕಿರು ವೀಡಿಯೊ ಸರಣಿಗೆ ಚಾಲನೆ ನೀಡಿದರು
`ಆಜಾದಿ ಕಾ ಅಮೃತ ಮಹೋತ್ಸವ’ವನ್ನು ಆಚರಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯ (ಐ & ಬಿ) ಮತ್ತು ನೆಟ್ಫ್ಲಿಕ್ಸ್ ನಡುವಿನ ಸಹಭಾಗಿತ್ವವನ್ನು ಈ ಸರಣಿ ಬಲಪಡಿಸುತ್ತದೆ: ಶ್ರೀ ಅನುರಾಗ್ ಠಾಕೂರ್
ದೀರ್ಘಾವಧಿಯ ಸಹಭಾಗಿತ್ವದ ಭಾಗವಾಗಿ, ವಿವಿಧ ವಿಷಯಗಳ ಮೇಲೆ ಎರಡು ನಿಮಿಷಗಳ 25 ವೀಡಿಯೊಗಳನ್ನು ನೆಟ್‌ಫ್ಲಿಕ್ಸ್ ತಯಾರಿಸಲಿದೆ: ಶ್ರೀ ಅನುರಾಗ್ ಠಾಕೂರ್
ಮಹಿಳೆಯರಿಗೆ, ಸ್ವಾತಂತ್ರ್ಯವೆಂದರೆ ಅದು ರೂಢಮಾದರಿಗಳು, ನಿಷೇಧಗಳ ವಿರುದ್ಧ ಹೋರಾಡುವುದು ಸಹ ಸೇರಿದೆ: ಶ್ರೀ ಠಾಕೂರ್
ಪೋಸ್ಟ್ ಪ್ರೊಡಕ್ಷನ್, ವಿಎಫ್ಎಕ್ಸ್, ಅನಿಮೇಷನ್, ಸಂಗೀತ ಸಂಯೋಜನೆಗಾಗಿ ಭಾರತದಲ್ಲಿ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನೆಟ್‌ಫ್ಲಿಕ್ಸ್ ಮತ್ತು ಸಚಿವಾಲಯ ಸಹಭಾಗಿತ್ವ ಹೊಂದಲಿವೆ: ಶ್ರೀ ಠಾಕೂರ್
ಇಂಟರ್ನೆಟ್ ಮನರಂಜನೆಯ ಯುಗದಲ್ಲಿ ಭಾರತವು ಅತ್ಯಂತ ಉತ್ತಮ ಸ್ಥಾನದಲ್ಲಿದೆ; ಭಾರತಕ್ಕೆ ನೆಟ್‌ಫ್ಲಿಕ್ಸ್ ಬೆಂಬಲದ ಬದ್ಧತೆ ಬಲವಾಗಿದ್ದು, ಅದು ಬೆಳೆಯುತ್ತಿದೆ: ಶ್ರೀಮತಿ ಬೇಲಾ ಬಜಾರಿಯಾ
Posted On:
26 APR 2022 1:59PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮಾರ್ಚ್ 12ರಂದು ಉದ್ಘಾಟಿಸಿದ `ಆಜಾದಿ ಕಾ ಅಮೃತ್ ಮಹೋತ್ಸವ’ದ ಆಚರಣೆಯ ಭಾಗವಾಗಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಒ.ಟಿ.ಟಿ ವೇದಿಕೆ ನೆಟ್‌ಫ್ಲಿಕ್ಸ್ ಸಹಯೋಗದೊಂದಿಗೆ ರಚಿಸಲಾದ 'ಆಜಾದಿ ಕಿ ಅಮೃತ್ ಕಹಾನಿಯಾ' ಎಂಬ ಕಿರು ವೀಡಿಯೊ ಸರಣಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಸಚಿವರಾದ ಡಾ. ಎಲ್. ಮುರುಗನ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮತ್ತು ನೆಟ್‌ಫ್ಲಿಕ್ಸ್ ಗ್ಲೋಬಲ್ ಟಿವಿಯ ಮುಖ್ಯಸ್ಥೆ ಶ್ರೀಮತಿ ಬೇಲಾ ಬಜಾರಿಯಾ ಉಪಸ್ಥಿತರಿದ್ದರು.
ಮಹಿಳಾ ಸುಧಾರಕಿ; ಕೋಸಿ ನದಿಯ ಪುನರುಜ್ಜೀವಕ್ಕೆ ನೀಡಿದ ಕೊಡುಗೆಗಾಗಿ ಹೆಸರುವಾಸಿಯಾಗಿರುವ ಪದ್ಮಪ್ರಶಸ್ತಿ ವಿಜೇತ ಪರಿಸರವಾದಿ ಪಿಥೋರಗಢದ ಶ್ರೀಮತಿ ಬಸಂತಿ ದೇವಿ; 2017ರಲ್ಲಿ ಐದು ದಿನಗಳಲ್ಲಿ ಎರಡು ಬಾರಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪದ್ಮಶ್ರೀ ಪ್ರಶಸ್ತಿ ವಿಜೇತೆ ಶ್ರೀಮತಿ ಅಂಶು ಜಮ್ಸೆನ್ಪಾ ಮತ್ತು ಭಾರತದ ಮೊದಲ ಮಹಿಳಾ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರೀಮತಿ ಹರ್ಷಿನಿ ಕನ್ಹೇಕರ್ ಸಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಸಭಿಕರು ಮತ್ತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ವಾರ್ತಾ ಮತ್ತು ಪ್ರಸಾರ ಸಚಿವಾಲಯವು ವಿವಿಧ ಉಪಕ್ರಮಗಳೊಂದಿಗೆ ಅಮೃತ ಮಹೋತ್ಸವ ಆಚರಣೆಯ ಪ್ರಮುಖ ಭಾಗವಾಗಿದೆ,” ಎಂದು ಹೇಳಿದರು. ಸ್ವಾತಂತ್ರ್ಯದ ಕಲ್ಪನೆಯು ಭಾರತದಲ್ಲಿ ಮಹಿಳಾ ವಿಮೋಚನೆಯೊಂದಿಗೆ ಹೆಣೆದುಕೊಂಡಿದೆ ಮತ್ತು ಸಮಾಜದಲ್ಲಿನ ರೂಢ ಸಂಪ್ರದಾಯಗಳು ಮತ್ತು ನಿಷೇಧಗಳ ವಿರುದ್ಧ ಹೋರಾಡಬೇಕಾದ ಮಹಿಳೆಯರಿಗೆ ಆಜಾದಿ ಅಥವಾ ಸ್ವಾತಂತ್ರ್ಯ ಎಂಬ ಪದವು ವಿಶಾಲವಾದ ಅರ್ಥವನ್ನು ಹೊಂದಿದೆ ಎಂದು ಸಚಿವರು ಹೇಳಿದರು. ಮಹಿಳೆಯರ ವಿಮೋಚನೆಯು ಸಮಾಜದ ವಿಮೋಚನೆಯ ಸೂಚಕವಾಗಿದೆ ಎಂದು ಅವರು ಹೇಳಿದರು.
ಸಹಯೋಗದ ಬಗ್ಗೆ ಮಾತನಾಡಿದ ಶ್ರೀ ಠಾಕೂರ್ ಅವರು, "ಈ ಉಪಕ್ರಮವು ಭಾರತೀಯರ ಸ್ಫೂರ್ತಿದಾಯಕ ಯಶೋಗಾಥೆಗಳನ್ನು ಅನಾವರಣಗೊಳಿಸುವ ಗುರಿಯನ್ನು ಹೊಂದಿದೆ. ಈ ಕಥೆಗಳು ಹೆಚ್ಚಿನ ಜನರನ್ನು ತಮ್ಮ ಗುರಿಗಳನ್ನು ಸಾಧಿಸಲು ಹುರಿದುಂಬಿಸುತ್ತವೆ ಮತ್ತು ಅವರಲ್ಲಿ ಚೈತನ್ಯ ತುಂಬುತ್ತವೆ, " ಎಂದು ಹೇಳಿದರು.
ಇದು ದೀರ್ಘಕಾಲೀನ ಸಹಭಾಗಿತ್ವವಾಗಿದ್ದು, ಅಲ್ಲಿ ವಿಭಿನ್ನ ವಿಷಯಗಳು ಮತ್ತು ವೈವಿಧ್ಯಮಯ ಕಥೆಗಳನ್ನು ಪ್ರಸ್ತುತಿ ಪಡಿಸಲಾಗುವುದು ಎಂದು ಅವರು ಹೇಳಿದರು. ಮಹಿಳಾ ಸಬಲೀಕರಣ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಇತರ ಮಹತ್ವದ ದಿನಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನೆಟ್‌ಫ್ಲಿಕ್ಸ್ ಇಪ್ಪತ್ತೈದು ವೀಡಿಯೊಗಳನ್ನು ರೂಪಿಸಲಿದೆ. ನೆಟ್‌ಫ್ಲಿಕ್ಸ್ ಸಚಿವಾಲಯಕ್ಕಾಗಿ ಎರಡು ನಿಮಿಷಗಳ ಕಿರುಚಿತ್ರಗಳನ್ನು ತಯಾರಿಸಲಿದ್ದು, ಅವುಗಳನ್ನು ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುವುದು. ಜೊತೆಗೆ ದೂರದರ್ಶನ ಜಾಲದ ಮೂಲಕವೂ ಪ್ರಸಾರ ಮಾಡಲಾಗುವುದು," ಎಂದು ಶ್ರೀ ಠಾಕೂರ್ ವಿವರಿಸಿದರು.
ಈ ಸಹಭಾಗಿತ್ವದ ಬಹು ಆಯಾಮಗಳ ಬಗ್ಗೆ ಶ್ರೀ ಠಾಕೂರ್ ವಿವರಿಸಿದರು. ನೆಟ್‌ಫ್ಲಿಕ್ಸ್ ಮತ್ತು ಸಚಿವಾಲಯವು ಜಂಟಿಯಾಗಿ ʻಆಜಾದಿ ಕಾ ಅಮೃತ್ ಮಹೋತ್ಸವʼದ ಅಡಿಯಲ್ಲಿ ವಿವಿಧ ವಿಷಯಗಳ ಬಗ್ಗೆ ಸ್ಫೂರ್ತಿದಾಯಕ ವೀಡಿಯೊಗಳನ್ನು ನಿರ್ಮಿಸುವ ಸಲುವಾಗಿ ಭಾರತದಲ್ಲಿನ ಚಲನಚಿತ್ರ ತಯಾರಕರನ್ನು ಉತ್ತೇಜಿಸಲಿವೆ. ಇದಕ್ಕಾಗಿ ತರಬೇತಿ ಕಾರ್ಯಾಗಾರಗಳು ಹಾಗೂ ಮಾಸ್ಟರ್ ಕ್ಲಾಸ್‌ಗಳ ಆಯೋಜನೆಯನ್ನು ಮುಂದುವರಿಸಲಿವೆ ಎಂದು ಹೇಳಿದರು.
"ನೆಟ್‌ಫ್ಲಿಕ್ಸ್ ಮತ್ತು ಸಚಿವಾಲಯವು ಪೋಸ್ಟ್-ಪ್ರೊಡಕ್ಷನ್, ವಿಎಫ್ಎಕ್ಸ್, ಅನಿಮೇಷನ್, ಸಂಗೀತ ಸಂಯೋಜನೆ ಮುಂತಾದವುಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಹಭಾಗಿತ್ವ ಹೊಂದಲಿವೆ. ಇವುಗಳನ್ನು ಭೌತಿಕವಾಗಿ ಮತ್ತು ವರ್ಚ್ಯುಯಲ್ ಮೂಲಕ ಆಯೋಜಿಸಲಾಗುವುದು," ಎಂದು ಅವರು ಘೋಷಿಸಿದರು.
ವೇದಿಕೆಯಲ್ಲಿದ್ದ ಮೂವರು ಮಹಿಳೆಯರ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸಿದ ಸಚಿವರು, ಅವರ ಯಶೋಗಾಥೆಗಳು ದೇಶಾದ್ಯಂತ ಜನರಿಗೆ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು. ಈ ಸಹಯೋಗದ ನಂತರ ವಿಶ್ವದಾದ್ಯಂತ ಚಲನಚಿತ್ರ ತಯಾರಕರು ಕೇವಲ ಭಾರತೀಯ ಪ್ರೇಕ್ಷಕರಿಗಾಗಿ ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ತಯಾರಿಸಲು ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಅವುಗಳನ್ನು ಪ್ರದರ್ಶಿಸಲು ಭಾರತಕ್ಕೆ ಬರಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಸಚಿವಾಲಯ ಮತ್ತು ನೆಟ್ಫ್ಲಿಕ್ಸ್ ನಡುವಿನ ಸಹಭಾಗಿತ್ವವು ಕೇವಲ ಆರಂಭವಷ್ಟೇ. ಇದು ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ, ಆರಂಭಿಕ ಭಾಷಣದಲ್ಲಿ ಮಾತನಾಡಿದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು “ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ನೆಟ್‌ಫ್ಲಿಕ್ಸ್ ನಡುವಿನ ಒಗ್ಗೂಡುವಿಕೆಯ ಬಗ್ಗೆ ಒತ್ತಿ ಹೇಳಿದರು. ಎರಡೂ ಘಟಕಗಳು ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಿದ್ದು, ಇಂದು ಬಿಡುಗಡೆಯಾದ ಈ ಮೂರು ವೀಡಿಯೊಗಳು ಈ ಸಹಭಾಗಿತ್ವದ ಅಡಿಯಲ್ಲಿ ನಿರ್ಮಿಸಲಾದ ಮೊದಲ ಸೆಟ್‌ಗಳಾಗಿವೆ ಎಂದು ಹೇಳಿದರು. ವಿಸ್ತೃತ ಸಹಯೋಗದ ಭಾಗವಾಗಿ ನಮ್ಮ ಸ್ವಾತಂತ್ರ್ಯ ಸಂಗ್ರಾಮ ಮತ್ತು ವಿಶ್ವಕ್ಕೆ ಹೇಳಬೇಕಾದ ಕಥೆಗಳ ಬಗ್ಗೆ ದೀರ್ಘಕಾಲದ ಸರಣಿಯು ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೆಟ್‌ಫ್ಲಿಕ್ಸ್, “ಗ್ಲೋಬಲ್ ಟಿವಿಯ ಮುಖ್ಯಸ್ಥೆ ಶ್ರೀಮತಿ ಬೇಲಾ ಬಜಾರಿಯಾ , “ಭಾರತವು ವಿಶ್ವದ ಅತ್ಯಂತ ರೋಮಾಂಚಕ ಮನರಂಜನಾ ಉದ್ಯಮಗಳಲ್ಲಿ ಒಂದಾಗಿದೆ. ಇಂಟರ್ನೆಟ್ ಮನರಂಜನೆಯ ಇಂದಿನ ಯುಗದಲ್ಲಿ ಭಾರತವು ಅತ್ಯುತ್ತಮ ಸ್ಥಾನದಲ್ಲಿದೆ ಎಂದು ಹೇಳಿದರು. "ಭಾರತದ ಕಥೆಗಳನ್ನು ವಿಶ್ವಕ್ಕೆ ರಫ್ತು ಮಾಡಲಾಗುತ್ತಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ಅತ್ಯುತ್ತಮ ಭಾರತೀಯ ಕಥೆಗಳನ್ನು ಶೋಧಿಸಿ ಅವುಗಳನ್ನು ಪ್ರೀತಿಯಿಂದ ವೀಕ್ಷಿಸಲಾಗುತ್ತಿದೆ. ಇಂತಹ ಅಪೂರ್ವ ಸಮಯದ ಸಮಕಾಲೀನವಾಗಲು ನೆಟ್‌ಫ್ಲಿಕ್ಸ್ ಅತ್ಯಂತ ಉತ್ಸುಕವಾಗಿದೆ," ಎಂದು ಅವರು ಹೇಳಿದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದೊಂದಿಗಿನ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿದ ಬಜಾರಿಯಾ,
"ಕಳೆದ 75 ವರ್ಷಗಳಲ್ಲಿ ಭಾರತ ಕಂಡಂತಹ ವಿಕಾಸವನ್ನು ದೇಶದ ಕಲೆ, ಸಂಸ್ಕೃತಿ ಮತ್ತು ಸುಂದರ ಕಥಾ ನಿರೂಪಣೆಯ ಮೂಲಕ ಸಂಭ್ರಮಿಸುವ ನಿಟ್ಟಿನಲ್ಲಿ ಸಚಿವಾಲಯದೊಂದಿಗೆ ಪಾಲುದಾರರಾಗಲು ನೆಟ್‌ಫ್ಲಿಕ್ಸ್ ಹೆಮ್ಮೆ ಪಡುತ್ತದೆ" ಎಂದು ಹೇಳಿದರು. "ಈ ಸಹಯೋಗದ ಭಾಗವಾಗಿ, ಭಾರತದ ಮೂಲೆ ಮೂಲೆಗಳ ಜನರ ನೈಜ ಜೀವನ ಆಧರಿತ ಯಶೋಗಾಥೆಗಳ ಬಗ್ಗೆ ಕಿರು ವೀಡಿಯೊಗಳ ಸರಣಿಯನ್ನು ನೆಟ್‌ಫ್ಲಿಕ್ಸ್ ತಯಾರಿಸಿದೆ " ಎಂದು ಅವರು ಹೇಳಿದರು.
ಸರಣಿಯ ಮೊದಲ ಸೆಟ್ ವೀಡಿಯೊಗಳ ಬಗ್ಗೆ ಮಾತನಾಡಿದ ಬಜಾರಿಯಾ, ಇವೆಲ್ಲವೂ ಕನಸುಗಳನ್ನು ಬೆನ್ನಟ್ಟಿ, ಅದಕ್ಕೆ ಎದುರಾದ ಅಡೆತಡೆಗಳ ವಿರುದ್ಧ ಹೋರಾಡಿದ ಮಹಿಳೆಯರ ಯಶೋಗಾಥೆಗಳಾಗಿವೆ ಎಂದು ಹೇಳಿದರು. ಭಾರತದ ಬಗ್ಗೆ ನೆಟ್‌ಫ್ಲಿಕ್ಸ್‌ನ ಬದ್ಧತೆ ಅಚಲವಾಗಿದೆ ಮತ್ತು ಬೆಳೆಯುತ್ತಿದೆ. ಜೊತೆಗೆ ನೆಟ್‌ಫ್ಲಿಕ್ಸ್ ದೇಶದ ಅತ್ಯುತ್ತಮ ಕಥೆಗಳನ್ನು ಹುಡುಕಾಟವನ್ನು ಮುಂದುವರಿಸುತ್ತದೆ, ಅವುಗಳನ್ನು ವಿಶ್ವದಾದ್ಯಂತ ಹಂಚಿಕೊಳ್ಳುತ್ತದೆ ಎಂದು ಅವರು ಹೇಳಿದರು.
'ಆಜಾದಿ ಕಿ ಅಮೃತ್ ಕಹಾನಿಯಾ' ಒಂದು ಅಪ್ರತಿಮ ಉಪಕ್ರಮವಾಗಿದ್ದು, ಮಹಿಳಾ ಸಬಲೀಕರಣ, ಪರಿಸರ ಮತ್ತು ಸುಸ್ಥಿರತೆ ಮುಂತಾದ ವಿವಿಧ ವಿಷಯಗಳ ಬಗ್ಗೆ ಭಾರತೀಯರ ಸ್ಫೂರ್ತಿದಾಯಕ ಸುಂದರ ಕಥೆಗಳನ್ನು ಹೊರತರುತ್ತದೆ. ವೈವಿಧ್ಯಮಯ ಯಶೋಗಾಥೆಗಳು ದೇಶದ ಮೂಲೆಮೂಲೆಗಳ ಭಾರತೀಯರನ್ನು ಪ್ರೇರೇಪಿಸಲು ಮತ್ತು ಚೈತನ್ಯಪೂರ್ಣಗೊಳಿಸಲು ನೆರವಾಗಲಿವೆ.
ದೇಶಾದ್ಯಂತದ ಏಳು ಮಹಿಳಾ ಸುಧಾರಕರು ತಮ್ಮ ಕ್ರಾಂತಿಕಾರಿ ದಿಟ್ಟ ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳುವ ವೀಡಿಯೊಗಳ ಮೊದಲ ಸೆಟ್ ಅನ್ನು ತಯಾರಿಸಲು ಸಚಿವಾಲಯ ಮತ್ತು ನೆಟ್‌ಫ್ಲಿಕ್ಸ್ ಕೈಜೋಡಿಸಿವೆ. ಅವರ ಪಾಲಿಗೆ ʻಸ್ವಾತಂತ್ರ್ಯ(ಆಜಾದಿ) ಎಂದರೆ ಏನು ಎಂಬುದರ ಬಗ್ಗೆ ಅವರು ಮಾತನಾಡುವಾಗ ಅವರನ್ನು 'ಪ್ರಕೃತಿಯ ಶಕ್ತಿಗಳು' ಎಂದು ಬಿಂಬಿಸಲಾಗುತ್ತದೆ. ಭಾರತದ ವಿಶಿಷ್ಟ ವೈವಿಧ್ಯವನ್ನು ಪ್ರದರ್ಶಿಸುವ ಈ ಎರಡು ನಿಮಿಷಗಳ ಕಿರುಚಿತ್ರಗಳನ್ನು ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಪ್ರಸಿದ್ಧ ನಟಿ ಶ್ರೀಮತಿ ನೀನಾ ಗುಪ್ತಾ ನಿರೂಪಿಸಿದ್ದಾರೆ.
ಎಲ್ಲರಿಗೂ ಲಸಿಕೆ ನೀಡಲು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಾದ್ಯಂತ ಮೈಲಿಗಟ್ಟಲೆ ನಡೆದು ಬಂದ ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಪೂನಂ ನೌಟಿಯಾಲ್, ಭಾರತದಲ್ಲಿ ಕ್ಷಿಪಣಿ ಯೋಜನೆಯ ನೇತೃತ್ವ ವಹಿಸಿದ ಮೊದಲ ಮಹಿಳಾ ವಿಜ್ಞಾನಿ ಡಾ. ಟೆಸ್ಸಿ ಥಾಮಸ್, ಭಾರತದ ಮೊದಲ ಸ್ಪರ್ಧಾತ್ಮಕ ಮಹಿಳಾ ಸ್ಟ್ಯಾಂಡ್-ಅಪ್ ಪ್ಯಾಡಲ್‌ಬೋರ್ಡರ್ ಶ್ರೀಮತಿ ತನ್ವಿ ಜಗದೀಶ್ ಮತ್ತು ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರವನ್ನು ಏಕಾಂಗಿಯಾಗಿ ಲಘು-ಕ್ರೀಡಾ ವಿಮಾನದಲ್ಲಿ ದಾಟಿದ ವಿಶ್ವದ ಅತ್ಯಂತ ಕಿರಿಯ ಮತ್ತು ಮೊದಲ ಮಹಿಳಾ ಪೈಲಟ್ ಶ್ರೀಮತಿ ಆರೋಹಿ ಪಂಡಿತ್ ಅವರೂ ʻಸಪ್ತ ಬದಲಾವಣೆ ರೂವಾರಿಗಳʼಲ್ಲಿ ಸೇರಿದ್ದರೆ.
ಶ್ರೀಮತಿ ಬಸಂತಿ ದೇವಿ, ಶ್ರೀಮತಿ ಅಂಶು ಮತ್ತು ಶ್ರೀಮತಿ ಹರ್ಷಿನಿ ಅವರನ್ನು ಒಳಗೊಂಡ ಮೂರು ವೀಡಿಯೊಗಳು; ಮತ್ತು ಸರಣಿಯ ಇಣುಕು ನೋಟವನ್ನು ನೀಡುವ ಟ್ರೇಲರ್ ಅನ್ನು ಇಂದು ಬಿಡುಗಡೆ ಮಾಡಲಾಯಿತು. ಆದರ್ಶಪ್ರಾಯ ಮಹಿಳೆಯರನ್ನು ಎತ್ತಿ ತೋರಿಸುವ ಮತ್ತು ಗೌರವಿಸುವತ್ತ ಗಮನ ಕೇಂದ್ರೀಕರಿಸಿದ ಮೂವರು ಬದಲಾವಣೆಯ ಹರಿಕಾರರನ್ನು ಶ್ರೀ ಅನುರಾಗ್ ಠಾಕೂರ್ ಅವರು ಸನ್ಮಾನಿಸಿದರು, ಅವರು ದೇಶಾದ್ಯಂತ ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಆದರ್ಶದ ಮೂಲಕ ಮುನ್ನಡೆಸುವ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು.
ಕೋಸಿ ನದಿಯ ಸಂರಕ್ಷಕ ಬಸಂತಿ ದೇವಿಯ ಅವರ ಯಶೋಗಾಥೆ
ಮೌಂಟ್ ಎವರೆಸ್ಟ್ ಜಯಿಸಿದ ಅಂಶು ಜಾಮ್ಸೆನ್ಪಾ ಅವರ ಕಥೆ
ಜೀವನೋಪಾಯಕ್ಕಾಗಿ ಬೆಂಕಿಯ ವಿರುದ್ಧ ಹೋರಾಡುವ ಧೈರ್ಯಶಾಲಿ ಹರ್ಷಿಣಿ ಕನ್ಹೇಕರ್ ಅವರ ಕಥೆ
'ಆಜಾದಿ ಕಿ ಅಮೃತ್ ಕಹಾನಿಯಾ' ಸರಣಿಯ ಬಿಡುಗಡೆಯು ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸ್ಮರಣಾರ್ಥವಾಗಿ ಆಜಾದಿ ಕಾ ಅಮೃತ್ ಮಹೋತ್ಸವದ ನೆನಪಿಗಾಗಿ ಒಂದಾಗಿರುವ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ನೆಟ್ಫ್ಲಿಕ್ಸ್ ನಡುವಿನ ಸಹಭಾಗಿತ್ವಕ್ಕೆ ಮತ್ತೊಂದು ಅಧ್ಯಾಯವನ್ನು ಸೇರಿಸುತ್ತದೆ.
ನವೆಂಬರ್ 2021ರಲ್ಲಿ ಗೋವಾದಲ್ಲಿ ನಡೆದ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೆಟ್‌ಫ್ಲಿಕ್ಸ್ ಸಹಭಾಗಿಯಾಗಿತ್ತು. ಮುಂದಿನ ದಿನಗಳಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳು, ಮಾಸ್ಟರ್ ಕ್ಲಾಸ್ಗಳು, ಚಲನಚಿತ್ರ ಪ್ರದರ್ಶನಗಳು, ಕಿರುಚಿತ್ರ ಸ್ಪರ್ಧೆಗಳಂತಹ ಉಪಕ್ರಮಗಳ ಮೂಲಕ ಮತ್ತಷ್ಟು ಈ ಸಹಯೋಗವು ಬಲಗೊಳ್ಳಲಿದೆ.
ʻಆಜಾದಿ ಕಿ ಅಮೃತ್ ಕಹಾನಿಯಾʼ ವೀಡಿಯೊಗಳು ಸಚಿವಾಲಯ ಮತ್ತು ನೆಟ್‌ಫ್ಲಿಕ್ಸ್ ವಿವಿಧ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ ಲಭ್ಯವಿರುತ್ತವೆ ಮತ್ತು ದೂರದರ್ಶನ ಜಾಲದಲ್ಲೂ ಪ್ರಸಾರವಾಗುತ್ತವೆ. ಗುಜರಾತಿ, ಮರಾಠಿ, ಬೆಂಗಾಲಿ, ತಮಿಳು, ಇಂಗ್ಲಿಷ್ ಮತ್ತು ಮಲಯಾಳಂ ಮುಂತಾದ ಭಾಷೆಗಳಲ್ಲಿಯೂ ಶೀಘ್ರದಲ್ಲೇ ಅವುಗಳನ್ನು ಲಭ್ಯವಾಗುವಂತೆ ಮಾಡಲಾಗುವುದು. ಇದರಿಂದ ಕಥೆಗಳನ್ನು ದೇಶದ ಎಲ್ಲ ಭಾಗದ ಜನರಿಗೂ ಈ ಕಥೆಗಳನ್ನು ತಲುಪಿಸಲು ಸಾಧ್ಯವಾಗಲಿದೆ.
'ಆಜಾದಿ ಕಿ ಅಮೃತ್ ಕಹಾನಿಯಾ' ಚಿತ್ರದ ಉದ್ಘಾಟಕಾ ಕಾರ್ಯಕ್ರಮದ ವೀಡಿಯೊ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
****
(Release ID: 1820394)
Visitor Counter : 231
Read this release in:
Tamil
,
Odia
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Malayalam