ಪ್ರಧಾನ ಮಂತ್ರಿಯವರ ಕಛೇರಿ
ಬನಸ್ಕಾಂತದ ದಿಯೋದರ್ ನ ಬನಾಸ್ ಡೈರಿ ಸಂಕುಲದಲ್ಲಿ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಮಂತ್ರಿ
ಬನಾಸ್ ಸಮುದಾಯ ರೇಡಿಯೋ ಕೇಂದ್ರ ಉದ್ಘಾಟನೆ
ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಬನಸಂಕ್ತ ಜಿಲ್ಲೆಯ ದಿಯೋದರ್ ನಲ್ಲಿ ಹೊಸ ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕ ನಿರ್ಮಾಣ
ಪಾಲನ್ ಪುರದ ಬನಾಸ್ ಡೈರಿ ಘಟಕದಲ್ಲಿ ಚೀಸ್ ಉತ್ಪನ್ನಗಳು ಮತ್ತು ಒಡೆದ ಹಾಲಿನ ಪುಡಿ ಉತ್ಪನ್ನಗಳ ಸೌಕರ್ಯ ವಿಸ್ತರಣೆ
ಗುಜರಾತ್ ನ ದಾಮದಲ್ಲಿ ಸಾವಯವ ಗೊಬ್ಬರ ಮತ್ತು ಜೈವಿಲ ಅನಿಲ ಉತ್ಪಾದನಾ ಘಟಕ
ಖಿಮಾನ, ರತನ್ ಪುರ-ಭಿಲ್ಡಿ, ರಾಧಾನ್ ಪುರ ಮತ್ತು ಥಾವರ್ ನಲ್ಲಿ 100 ಟನ್ ಸಾಮರ್ಥ್ಯದ ನಾಲ್ಕು ಗೋಬರ್ ಗ್ಯಾಸ್ ಘಟಕಗಳ ಸ್ಥಾಪನೆಗೆ ಶಂಕುಸ್ಥಾಪನೆ
“ಕಳೆದ ಕೆಲವು ವರ್ಷಗಳಿಂದೀಚೆಗೆ ಬನಾಸ್ ಡೈರಿ ಸ್ಥಳೀಯ ಸಮುದಾಯಗಳು ವಿಶೇಷವಾಗಿ ರೈತರು ಮತ್ತು ಮಹಿಳೆಯರ ಸಬಲೀಕರಣದ ತಾಣವಾಗಿದೆ’’
“ಬನಸ್ಕಾಂತ ಕೃಷಿಯಲ್ಲಿ ಮೂಡಿಸಿರುವ ಛಾಪು ಶ್ಲಾಘನೀಯ. ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು, ನೀರಿನ ಸಂರಕ್ಷಣೆ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದರು ಮತ್ತು ಅದರ ಫಲಿತಾಂಶ ಇಂದು ಎಲ್ಲರೂ ನೋಡಬಹುದಾಗಿದೆ’’
“ವಿದ್ಯಾ ಸಮೀಕ್ಷಾ ಕೇಂದ್ರವು ಗುಜರಾತ್ ನ 54000 ಶಾಲೆಗಳು, 4.5 ಲಕ್ಷ ಶಿಕ್ಷಕರು ಮತ್ತು 1.5 ಕೋಟಿ ವಿದ್ಯಾರ್ಥಿಗಳ ಶಕ್ತಿ ರೋಮಾಂಚಕ ತಾಣವಾಗಿದೆ’’
“ನಿಮ್ಮ ವಲಯಗಳಲ್ಲಿ ನಾನು ನಿಮ್ಮೊಂದಿಗೆ ಪಾಲುದಾರನಾಗಿರುತ್ತೇನೆ’’
Posted On:
19 APR 2022 1:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಹೊಸ ಡೈರಿ ಸಂಕೀರ್ಣವು ಸಂಪೂರ್ಣ ಗ್ರೀನ್‌ಫೀಲ್ಡ್ ಯೋಜನೆಯಾಗಿದೆ. ಇದು ದಿನಕ್ಕೆ ಸುಮಾರು 30 ಲಕ್ಷ ಲೀಟರ್ ಹಾಲು ಸಂಸ್ಕರಣೆ, ಸುಮಾರು 80 ಟನ್ ಬೆಣ್ಣೆ, ಒಂದು ಲಕ್ಷ ಲೀಟರ್ ಐಸ್ ಕ್ರೀಮ್, 20 ಟನ್ ಗಟ್ಟಿಗೊಳಿಸಿದ ಹಾಲು (ಖೋವಾ) ಮತ್ತು 6 ಟನ್ ಚಾಕೊಲೇಟ್ ಅನ್ನು ಉತ್ಪಾದಿಸುತ್ತದೆ. ಆಲೂಗೆಡ್ಡೆ ಸಂಸ್ಕರಣಾ ಘಟಕವು ಫ್ರೆಂಚ್ ಫ್ರೈಸ್, ಆಲೂಗಡ್ಡೆ ಚಿಪ್ಸ್, ಆಲೂ ಟಿಕ್ಕಿ, ಪ್ಯಾಟೀಸ್ ಮುಂತಾದ ವಿವಿಧ ರೀತಿಯ ಸಂಸ್ಕರಿಸಿದ ಆಲೂಗಡ್ಡೆ ಉತ್ಪನ್ನಗಳನ್ನು ತಯಾರಿಸಲಾಗುವುದು. ಇವುಗಳಲ್ಲಿ ಹಲವು ಇತರ ದೇಶಗಳಿಗೆ ರಫ್ತು ಮಾಡಲ್ಪಡುತ್ತವೆ. ಈ ಘಟಕಗಳು ಸ್ಥಳೀಯ ರೈತರನ್ನು ಸಬಲೀಕರಣಗೊಳಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುತ್ತವೆ. ಅಲ್ಲದೆ, ಪ್ರಧಾನಮಂತ್ರಿ ಅವರು ಬನಾಸ್ ಸಮುದಾಯ ರೇಡಿಯೋ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಪ್ರಮುಖ ವೈಜ್ಞಾನಿಕ ಮಾಹಿತಿಯನ್ನು ರೈತರಿಗೆ ಒದಗಿಸಲು ಈ ಸಮುದಾಯ ರೇಡಿಯೋ ಕೇಂದ್ರ ಸ್ಥಾಪಿಸಲಾಗಿದೆ.
ರೇಡಿಯೋ ಕೇಂದ್ರವು ಸುಮಾರು 1700 ಹಳ್ಳಿಗಳ 5 ಲಕ್ಷಕ್ಕೂ ಹೆಚ್ಚು ರೈತರೊಂದಿಗೆ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ. ಇದೇ ವೇಳೆ ಪ್ರಧಾನಿ ಅವರು ಪಾಲನ್‌ಪುರ್‌ನಲ್ಲಿರುವ ಬನಾಸ್ ಡೈರಿ ಘಟಕದ ಚೀಸ್ ಉತ್ಪನ್ನಗಳು ಮತ್ತು ಹಾಲಿನ ಪುಡಿ ಉತ್ಪಾದನೆಗೆ ವಿಸ್ತರಿತ ಸೌಲಭ್ಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅಲ್ಲದೆ, ಗುಜರಾತ್‌ನ ದಾಮಾದಲ್ಲಿ ಸ್ಥಾಪಿಸಲಾದ ಸಾವಯವ ಗೊಬ್ಬರ ಮತ್ತು ಜೈವಿಕ ಅನಿಲ ಘಟಕವನ್ನು ಅವರು ಲೋಕಾರ್ಪಣೆಗೊಳಿಸಿದರು. ಖಿಮಾನ, ರತನ್‌ಪುರ - ಭಿಲ್ಡಿ, ರಾಧನ್‌ಪುರ್ ಮತ್ತು ಥಾವರ್‌ನಲ್ಲಿ 100 ಟನ್ ಸಾಮರ್ಥ್ಯದ ನಾಲ್ಕು ಗೋಬರ್ ಗ್ಯಾಸ್ ಘಟಕಗಳ ಸ್ಥಾಪನೆಗೂ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿಯವರು ಬನಾಸ್ ಡೈರಿಯೊಂದಿಗಿನ ತಮ್ಮ ಒಡನಾಟದ ಬಗ್ಗೆ ಟ್ವೀಟ್ ಮಾಡಿದರು ಮತ್ತು 2013 ಮತ್ತು 2016 ರಲ್ಲಿ ತಮ್ಮ ಭೇಟಿಯ ಛಾಯಾಚಿತ್ರಗಳನ್ನು ಹಂಚಿಕೊಂಡರು. “ಕಳೆದ ಹಲವು ವರ್ಷಗಳಲ್ಲಿ ಬನಾಸ್ ಡೈರಿಯು ಸ್ಥಳೀಯ ಸಮುದಾಯಗಳನ್ನು ವಿಶೇಷವಾಗಿ ರೈತರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ತಾಣವಾಗಿದೆ. ಡೈರಿಯ ವಿವಿಧ ಉತ್ಪನ್ನಗಳಲ್ಲಿ ಕಂಡುಬರುವ ನವೀನ ಉತ್ಸಾಹದ ಬಗ್ಗೆ ನಾನು ವಿಶೇಷವಾಗಿ ಹೆಮ್ಮೆಪಡುತ್ತೇನೆ. ಜೇನುತುಪ್ಪದ ಮೇಲೆ ಅವರ ನಿರಂತರ ಗಮನವು ಶ್ಲಾಘನೀಯ’’ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಬನಸ್ಕಾಂತದ ಜನರ ಪ್ರಯತ್ನ ಮತ್ತು ಉತ್ಸಾಹವನ್ನು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. “ನಾನು ಬನಸ್ಕಾಂತದ ಜನರನ್ನು ಅವರ ಕಠಿಣ ಪರಿಶ್ರಮ ಮತ್ತು ಸ್ಥಿತಿಸ್ಥಾಪಕತ್ವದ ಮನೋಭಾವಕ್ಕಾಗಿ ಶ್ಲಾಘಿಸಲು ಬಯಸುತ್ತೇನೆ. ಕೃಷಿಯಲ್ಲಿ ಈ ಜಿಲ್ಲೆ ಛಾಪು ಮೂಡಿಸಿರುವ ರೀತಿ ಶ್ಲಾಘನೀಯ. ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರು, ನೀರಿನ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿದರು ಮತ್ತು ಅದರ ಫಲಿತಾಂಶಗಳು ಈಗ ಎಲ್ಲರಿಗೂ ಕಾಣುತ್ತಿವೆ’’ ಎಂದರು.
ಪ್ರಧಾನಿ ಅವರು ಇಂದು ಮಾತೆ ಅಂಬಾ ಜೀ ಅವರ ಪುಣ್ಯ ಭೂಮಿಗೆ ನಮನ ಸಲ್ಲಿಸುವ ಮೂಲಕ ಮಾತು ಆರಂಭಿಸಿದರು. ಅವರು ಬನಾಸ್ ಮಹಿಳೆಯರ ಆಶೀರ್ವಾದವನ್ನು ಉಲ್ಲೇಖಿಸಿದರು ಮತ್ತು ಅವರ ಅದಮ್ಯ ಮನೋಭಾವಕ್ಕೆ ತಮ್ಮ ಗೌರವವನ್ನು ಸಲ್ಲಿಸಿದರು. ಭಾರತದಲ್ಲಿ ಹಳ್ಳಿಯ ಆರ್ಥಿಕತೆ ಮತ್ತು ತಾಯಂದಿರು ಮತ್ತು ಸಹೋದರಿಯರ ಸಬಲೀಕರಣವನ್ನು ಹೇಗೆ ಬಲಪಡಿಸಬಹುದು ಮತ್ತು ಸ್ವಾವಲಂಬಿ ಭಾರತ ಅಭಿಯಾನಕ್ಕೆ ಸಹಕಾರಿ ಚಳವಳಿ ಹೇಗೆ ಶಕ್ತಿಯನ್ನು ನೀಡುತ್ತದೆ ಎಂಬುದನ್ನು ಇಲ್ಲಿ ನೇರವಾಗಿ ಅನುಭವಿಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಕಾಶಿಯ ಸಂಸದರಾಗಿ, ವಾರಣಾಸಿಯಲ್ಲೂ ಸಂಕೀರ್ಣವನ್ನು ಸ್ಥಾಪಿಸಿದ್ದಕ್ಕಾಗಿ ಬನಾಸ್ ಡೈರಿ ಮತ್ತು ಬನಸ್ಕಾಂತದ ಜನರಿಗೆ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದರು.
ಬನಾಸ್ ಡೈರಿಯಲ್ಲಿನ ಚಟುವಟಿಕೆಯ ವಿಸ್ತರಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಬನಾಸ್ ಡೈರಿ ಕಾಂಪ್ಲೆಕ್ಸ್, ಚೀಸ್ ಮತ್ತು ಒಡೆದ ಹಾಲಿನ ಘಟಕ , ಡೈರಿ ವಲಯದ ವಿಸ್ತರಣೆಯಲ್ಲಿ ಪ್ರಮುಖವಾದವು. “ಬನಾಸ್ ಡೈರಿಯು ಸ್ಥಳೀಯ ರೈತರ ಆದಾಯ ವೃದ್ಧಿಗೆ ಇತರ ಸಂಪನ್ಮೂಲಗಳನ್ನೂ ಸಹ ಬಳಸಬಹುದು ಎಂದು ಸಾಬೀತುಪಡಿಸಿದೆ’’ ಎಂದರು. ಆಲೂಗೆಡ್ಡೆ, ಜೇನು ಮತ್ತಿತರ ಸಂಬಂಧಿತ ಉತ್ಪನ್ನಗಳು ರೈತರ ಭವಿಷ್ಯವನ್ನೇ ಬದಲಿಸುತ್ತಿವೆ ಎಂದರು. ಖ್ಯಾದ್ಯ ತೈಲ ಮತ್ತು ಕಡಲೆಕಾಯಿಗೆ ಡೈರಿಯ ವಿಸ್ತರಣೆಯನ್ನು ಗಮನಿಸಿದಾಗ ಇದು ವೋಕಲ್ ಫಾರ್ ಲೋಕಲ್ ಅಂದರೆ ಸ್ಥಳೀಯರ ಉತ್ಪನ್ನಗಳಿಗೆ ಧ್ವನಿಯಾಗುವ ಅಭಿಯಾನಕ್ಕೆ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಗೋಬರ್ಧನ್‌ನಲ್ಲಿನ ಹೈನುಗಾರಿಕೆ ಯೋಜನೆಗಳನ್ನು ಶ್ಲಾಘಿಸಿದ ಅವರು, ದೇಶದಾದ್ಯಂತ ಇಂತಹ ಸ್ಥಾವರಗಳನ್ನು ಸ್ಥಾಪಿಸುವ ಮೂಲಕ ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸುವ ಸರ್ಕಾರದ ಪ್ರಯತ್ನಗಳಿಗೆ ಡೈರಿ ಯೋಜನೆಗಳು ಸಹಾಯ ಮಾಡುತ್ತಿವೆ ಎಂದು ಶ್ಲಾಘಿಸಿದರು. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿ, ರೈತರಿಗೆ ಗೊಬ್ಬರ (ಸಗಣಿ)ಗೆ ಆದಾಯ ತಂದು, ವಿದ್ಯುತ್ ಉತ್ಪಾದಿಸಿ, ನೈಸರ್ಗಿಕ ಗೊಬ್ಬರದಿಂದ ಭೂಮಿಯನ್ನು ಸಂರಕ್ಷಿಸುವ ಮೂಲಕ ಈ ಗಿಡಗಳು ಪ್ರಯೋಜನ ಪಡೆಯಲಿವೆ ಎಂದರು. ಇಂತಹ ಪ್ರಯತ್ನಗಳು ನಮ್ಮ ಗ್ರಾಮಗಳನ್ನು ಮತ್ತು ನಮ್ಮ ಮಹಿಳೆಯರನ್ನು ಬಲವರ್ಧಿಸುತ್ತವೆ ಮತ್ತು ಭೂ ತಾಯಿಯನ್ನು ರಕ್ಷಿಸುತ್ತದೆ ಎಂದು ಹೇಳಿದರು.
ಗುಜರಾತ್ ಇಟ್ಟಿರುವ ದಾಪುಗಾಲುಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ನಿನ್ನೆ ವಿದ್ಯಾ ಸಮೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಬಗ್ಗೆಯೂ ಪ್ರಸ್ತಾಪಿಸಿದರು. ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಕೇಂದ್ರವು ಹೊಸ ಎತ್ತರಕ್ಕೇರುತ್ತಿದೆ ಎಂದು ಹೇಳಿದರು. ಇಂದು ಈ ಕೇಂದ್ರವು ಗುಜರಾತ್‌ನ 54000 ಶಾಲೆಗಳು, 4.5 ಲಕ್ಷ ಶಿಕ್ಷಕರು ಮತ್ತು 1.5 ಕೋಟಿ ವಿದ್ಯಾರ್ಥಿಗಳ ಶಕ್ತಿಯ ಸಕ್ರೀಯ ಕೇಂದ್ರವಾಗಿದೆ. ಈ ಕೇಂದ್ರವು ಕೃತಕ ಬುದ್ದಿಮತ್ತೆ, ಮೆಷಿನ್ ಲರ್ನಿಂಗ್ ಮತ್ತು ಬಿಗ್ ಡೇಟಾ ಅನಾಲಿಟಿಕ್ಸ್ ಅನ್ನು ಹೊಂದಿದೆ. ಈ ಉಪಕ್ರಮದ ಮೂಲಕ ತೆಗೆದುಕೊಂಡ ಕ್ರಮಗಳಿಂದ ಶಾಲೆಗಳಲ್ಲಿ ಹಾಜರಾತಿಯು ಶೇಕಡ26 ರಷ್ಟು ಸುಧಾರಿಸಿದೆ. ಈ ರೀತಿಯ ಯೋಜನೆಗಳು ದೇಶದ ಶಿಕ್ಷಣ ಕ್ಷೇತ್ರದಲ್ಲಿ ದೂರಗಾಮಿ ಬದಲಾವಣೆಗಳನ್ನು ತರಬಲ್ಲವು ಎಂದ ಪ್ರಧಾನಮಂತ್ರಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪಾಲುದಾರರು, ಅಧಿಕಾರಿಗಳು ಮತ್ತು ಇತರ ರಾಜ್ಯಗಳು ಈ ರೀತಿಯ ಸೌಲಭ್ಯದ ಬಗ್ಗೆ ಅಧ್ಯಯನ ಮಾಡಬೇಕು ಮತ್ತು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಧಾನಿ ಗುಜರಾತಿ ಭಾಷೆಯಲ್ಲೂ ಮಾತನಾಡಿದರು. ಅವರು ಮತ್ತೊಮ್ಮೆ ಬನಾಸ್ ಡೈರಿ ಮಾಡಿದ ಪ್ರಗತಿಯ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದರು ಮತ್ತು ಬನಾಸ್ ಮಹಿಳೆಯರ ಉತ್ಸಾಹವನ್ನು ಶ್ಲಾಘಿಸಿದರು. ಜಾನುವಾರುಗಳನ್ನು ಮಕ್ಕಳಂತೆ ನೋಡಿಕೊಳ್ಳುವ ಬನಸ್ಕಾಂತದ ಮಹಿಳೆಯರಿಗೆ ನಮನ ಸಲ್ಲಿಸಿದರು. ಪ್ರಧಾನಿಯವರು ಬನಸ್ಕಾಂತದ ಜನರ ಮೇಲಿನ ತಮ್ಮ ಪ್ರೀತಿಯನ್ನು ಪುನರುಚ್ಚರಿಸಿದರು ಮತ್ತು ಅವರು ಎಲ್ಲಿಗೆ ಹೋದರೂ ಅವರೊಂದಿಗೆ ಸದಾ ಸಂಪರ್ಕದಲ್ಲಿರುತ್ತೇನೆ ಎಂದು ಹೇಳಿದರು. “ನಿಮ್ಮ ಕ್ಷೇತ್ರಗಳಲ್ಲಿ ಪಾಲುದಾರನಂತೆ ನಾನು ನಿಮ್ಮೊಂದಿಗೆ ಇರುತ್ತೇನೆ’’ ಎಂದು ಪ್ರಧಾನಮಂತ್ರಿ ಹೇಳಿದರು.
ಬನಾಸ್ ಡೈರಿ ದೇಶದಲ್ಲಿ ಹೊಸ ಆರ್ಥಿಕ ಶಕ್ತಿಯನ್ನು ಸೃಷ್ಟಿಸಿದೆ ಎಂದರು. ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಒಡಿಶಾ (ಸೋಮನಾಥ್‌ನಿಂದ ಜಗನ್ನಾಥ), ಆಂಧ್ರಪ್ರದೇಶ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಬನಾಸ್ ಡೈರಿ ಆಂದೋಲನವು ರೈತರಿಗೆ ಮತ್ತು ಜಾನುವಾರು ಸಾಕಣೆ ಸಮುದಾಯಗಳಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಇಂದು ಹೈನುಗಾರಿಕೆ ರೈತರ ಆದಾಯಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದರು. 8.5 ಲಕ್ಷ ಕೋಟಿ ರೂಪಾಯಿಗಳ ಹಾಲಿನ ಉತ್ಪಾದನೆಯೊಂದಿಗೆ, ಹೈನುಗಾರಿಕೆಯು ಸಾಂಪ್ರದಾಯಿಕ ಆಹಾರ ಧಾನ್ಯಗಳಿಗಿಂತ ರೈತರ ಆದಾಯ ವೃದ್ಧಿಗೆ ವಿಶೇಷವಾಗಿ ಸಣ್ಣ ಭೂ ಹಿಡುವಳಿದಾರರು ಮತ್ತು ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿರುವವರಿಗೆ ದೊಡ್ಡ ವಿಧಾನವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆಯನ್ನು ಉಲ್ಲೇಖಿಸಿದ ಪ್ರಧಾನಿ, ಹಿಂದಿನ ಪ್ರಧಾನಿ ವಿವರಿಸಿದ್ದಂತೆ ಈ ಹಿಂದೆ ಒಂದು ರೂಪಾಯಿಯಲ್ಲಿ 15 ಪೈಸೆ ಮಾತ್ರ ಫಲಾನುಭವಿಗೆ ತಲುಪುತ್ತಿತ್ತು, ಆದರೆ ಪರಿಸ್ಥಿತಿ ಮೊದಲಿಗಿಂತ ಭಿನ್ನವಾಗಿ ಈಗ ಫಲಾನುಭವಿಗಳಿಗೆ ಸಂಪೂರ್ಣ ಪ್ರಯೋಜನಗಳು ತಲುಪುತ್ತಿವೆ ಎಂದು ಹೇಳಿದರು.
ರೈತರು ನೈಸರ್ಗಿಕ ಕೃಷಿಯತ್ತ ತಮ್ಮ ಗಮನವನ್ನು ಹರಿಸುವಂತೆ ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು, ಬನಸ್ಕಾಂತದ ನೀರಿನ ಸಂರಕ್ಷಣೆ ಮತ್ತು ಹನಿ ನೀರಾವರಿ ಪದ್ದತಿಯನ್ನು ಸ್ಮರಿಸಿದರು. ನೀರನ್ನು 'ಪ್ರಸಾದ' ಮತ್ತು ‘ಚಿನ್ನ’ ಎಂದು ಪರಿಗಣಿಸುವ ನೀವು, 2023ರ ಸ್ವಾತಂತ್ರ್ಯ ದಿನದ ವೇಳೆಗೆ ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿ 75 ಭವ್ಯ ಸರೋವರಗಳನ್ನು ನಿರ್ಮಿಸಬೇಕು ಎಂದು ಕರೆ ನೀಡಿದರು.
******
(Release ID: 1818027)
Visitor Counter : 241
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam