ಹಣಕಾಸು ಸಚಿವಾಲಯ
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಪ್ರಾರಂಭವಾದಾಗಿನಿಂದ 34.42 ಕೋಟಿಗಿಂತ ಹೆಚ್ಚಿನ ಸಾಲ ಖಾತೆಗಳಿಗೆ 18.60 ಲಕ್ಷ ಕೋಟಿ ರೂ. ಸಾಲ ವಿತರಣೆ
ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ; ಪ್ರಧಾನ ಮಂತ್ರಿ ಅವರ ಪರಿಕಲ್ಪನೆಯಂತೆ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ನ ನೈಜ ಮನೋಭಾವ ಸಾಕಾರಗೊಳಿಸುತ್ತದೆ: ಕೇಂದ್ರ ಹಣಕಾಸು ಸಚಿವರು
“ಪಿಎಂಎಂವೈ ಯೋಜನೆಯು ಸಾಲದ ಅಗತ್ಯವಿರುವ ಆಕಾಂಕ್ಷಿತ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಅರ್ಹ ಫಲಾನುಭವಿಗಳಿಗೆ ಸಾಲದ ಒಳಹರಿವನ್ನು ಸಕ್ರಿಯಗೊಳಿಸುತ್ತಿದೆ: ಹಣಕಾಸು ಖಾತೆ ರಾಜ್ಯ ಸಚಿವರು
Posted On:
08 APR 2022 8:00AM by PIB Bengaluru
ಪ್ರಧಾನ ಮಂತ್ರಿ ಮುದ್ರಾ ಯೋಜನೆಯ (ಪಿಎಂಎಂವೈ) ಆಧಾರಸ್ತಂಭಗಳ ಮೂಲಕ ಅರ್ಹ ಉದ್ಯಮಶೀಲರಿಗೆ ಹಣಕಾಸು ಸೇರ್ಪಡೆಯನ್ನು ಒದಗಿಸುವ 7ನೇ ವಾರ್ಷಿಕೋತ್ಸವ ಆಚರಿಸುತ್ತಿರುವಾಗ, ನಾವು ಈ ಯೋಜನೆಯ ಪ್ರಮುಖ ಅಂಶಗಳು ಮತ್ತು ಅದರ ಸಾಧನೆಗಳನ್ನು ಅವಲೋಕಿಸೋಣ.
ಪಿಎಂಎಂವೈ ಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ಏಪ್ರಿಲ್ 8ರಂದು ವಿದ್ಯುಕ್ತವಾಗಿ ಆರಂಭಿಸಿದರು.೧೦ಲಕ್ಷ ರೂ.ವರೆಗಿನ ಸಾಲವನ್ನು ಒದಗಿಸಲು ಪ್ರಾರಂಭಿಸಿದರು. ಕಾರ್ಪೊರೇಟ್ ಯೇತರ ಮತ್ತು ಕೃಷಿಯೇತರ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ಈ ಯೋಜನೆಯಡಿ 10 ಲಕ್ಷ ರೂ. ವರೆಗೆ ಸಾಲ ವಿತರಿಸಲಾಗುತ್ತಿದೆ.
ಯೋಜನೆಯ 7ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಆದಾಯ ಸೃಜಿಸುವ ಉದ್ಯಮ ಚಟುವಟಿಕೆಗಳ ಸೃಷ್ಟಿಗಾಗಿ ಈ ಯೋಜನೆಯಡಿ. ಮೊತ್ತದ 34.42 ಕೋಟಿಗಿಂತ ಹೆಚ್ಚಿನ ಸಾಲ ಖಾತೆಗಳನ್ನು ತೆರೆದು, 18.60 ಲಕ್ಷ ಕೋಟಿ ರೂ ಸಾಲ ಒದಗಿಸಲಾಗಿದೆ ಎಂದು ಹೇಳಿದರು.
ಪಿಎಂಎಂವೈ ಯೋಜನೆ ಮೂಲಕ ವ್ಯಾಪಾರ ಪರಿಸರ ಮತ್ತು ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳ ಹೆಚ್ಚಳ ಕುರಿತು ಮಾತನಾಡಿದ ಹಣಕಾಸು ಸಚಿವರು, “ಈ ಯೋಜನೆಯು ವಿಶೇಷವಾಗಿ ಸಣ್ಣ ಉದ್ಯಮಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಮತ್ತು ತಳಮಟ್ಟದಲ್ಲಿ ವಿಪುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತಿದೆ. ಶೇ.68 ಕ್ಕಿಂತ ಹೆಚ್ಚಿನ ಸಾಲ ಖಾತೆಗಳನ್ನು ಮಹಿಳೆಯರಿಗೆ ಮಂಜೂರು ಮಾಡಲಾಗಿದೆ. ಯೋಜನೆಯ ಪ್ರಾರಂಭದಿಂದಲೂ ಯಾವುದೇ ಸಾಲ ಪಡೆಯದ ಹೊಸ ಉದ್ಯಮಿಗಳಿಗೆ ಶೇ.22 ಸಾಲ ನೀಡಲಾಗಿದೆ ಎಂದರು.
ಮುದ್ರಾ ಯೋಜನೆಯ ಎಲ್ಲಾ ಫಲಾನುಭವಿಗಳನ್ನು ಅಭಿನಂದಿಸಿದ ಅವರು, ಇತರೆ ನಿರೀಕ್ಷಿತ ಸಾಲಗಾರ ಉದ್ಯಮಶೀಲರು ಮುಂದೆ ಬಂದು ರಾಷ್ಟ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಒತ್ತಾಯಿಸಿದರು. ಇದುವರೆಗೆ ಮಂಜೂರಾಗಿರುವ ಒಟ್ಟು ಸಾಲಗಳಲ್ಲಿ ಎಸ್ ಸಿ, ಎಸ್ ಟಿ ಮತ್ತು ಒಬಿಸಿ ವರ್ಗಕ್ಕೆ ಶೇ.51ರಷ್ಟು ಸಾಲ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಸಾಮಾಜಿಕ ನ್ಯಾಯ ಒದಗಿಸುವ ಘನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗೌರವಾನ್ವಿತ ಪ್ರಧಾನ ಮಂತ್ರಿ ಅವರ ಸಬ್ಕಾ ಸಾಥ್, ಸಬ್ಕಾ ವಿಕಾಸ್ ನ ನೈಜ ಮನೋಭಾವವನ್ನು ಇದು ಸಾಕಾರಗೊಳಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಗವತ್ ಕಿಸನ್ ರಾವ್ ಕರಾಡ್ ಮಾತನಾಡಿ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಯಾವುದೇ ತೊಂದರೆ ಆಗದಂತೆ, ಅಡಚಣೆ ಮುಕ್ತ ರೀತಿಯಲ್ಲಿ ಸಾಂಸ್ಥಿಕ ಸಾಲ ಒದಗಿಸುವುದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಆರಂಭದ ಹಿಂದಿನ ಪ್ರೇರಕ ಶಕ್ತಿಯಾಗಿದೆ ಎಂದರು.
ಕಳೆದ 7 ವರ್ಷಗಳಿಂದ ಅಂದರೆ ಯೋಜನೆ ಪ್ರಾರಂಭದಿಂದಲೂ 34.42 ಕೋಟಿ ಖಾತೆದಾರರಿಗೆ ಹಣಕಾಸು ನೆರವು ನೀಡುವ ಮೂಲಕ, ಆಕಾಂಕ್ಷಿತ ಉದ್ಯಮಶೀಲರಿಗೆ ಸಾಲ ಸೌಲಭ್ಯ ಯಶಸ್ವಿಯಾಗಿ ತಲುಪುತ್ತಿದೆ ಎಂದು ಅವರು ತಿಳಿಸಿದರು.
ಸಾಲ ವಿತರಣೆ ಕುರಿತು ಮಾತನಾಡಿದ ಅವರು, ನೀತಿ ಆಯೋಗ ಗುರುತಿಸಿರುವಂತೆ ಪಿಎಂಎಂವೈ ಯೋಜನೆಯಡಿ ಸಾಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಆಕಾಂಕ್ಷಿತ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಫಲಾನುಭವಿಗಳ ಸಾಲ ಬೇಡಿಕೆಯನ್ನು ಪೂರೈಸಲು ಮತ್ತು ವಿಸ್ತರಿಸಲು ಸಾಧ್ಯವಾಗಿದೆ. ಈ ಯೋಜನೆಯು ಸಾಲದ ಒಳಹರಿವು ಸಕ್ರಿಯಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದರು.
ದೇಶದಲ್ಲಿ ಹಣಕಾಸು ಸೇರ್ಪಡೆ ಕಾರ್ಯಕ್ರಮದ ಅನುಷ್ಠಾನವು 3 ಆಧಾರ ಸ್ತಂಭಗಳ ಮೇಲೆ ನಿಂತಿದೆ. ಅವುಗಳೆಂದರೆ, ಬ್ಯಾಂಕಿಂಗ್ ಸೌಲಭ್ಯ ವಂಚಿತರಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು, ಹಣಕಾಸಿನ ಅಭದ್ರತೆ ಇರುವವರಿಗೆ ಭದ್ರತೆ ಒದಗಿಸುವುದು ಮತ್ತು ಸಾಲ ಸೌಲಭ್ಯ ಸಿಗದವರಿಗೆ ಸಾಲ ಒದಗಿಸುವುದಾಗಿದೆ. ಚಾಲ್ತಿಯಲ್ಲಿರುವ ಸುಧಾರಿತ ತಂತ್ರಜ್ಞಾನ ಸದುಪಯೋಗ ಪಡಿಸಿಕೊಳ್ಳುವ ಮೂಲಕ, ಬಹು ಪಾಲುದಾರರ ಸಹಯೋಗ ವಿಧಾನ ಅಳವಡಿಸಿಕೊಳ್ಳುವ ಮೂಲಕ ಈ ಕಾರ್ಯಕ್ರಮದ ಅಡಿ, 3 ಘನ ಉದ್ದೇಶಗಳನ್ನು ಸಾಧಿಸಲಾಗುತ್ತಿದೆ. ಅದೇ ಸಮಯದಲ್ಲಿ ಸೇವೆಯಿಂದ ವಂಚಿತರಾದವರಿಗೆ ಮತ್ತು ಹಿಂದುಳಿದವರಿಗೆ ಸೇವೆ ಸಲ್ಲಿಸಲಾಗುತ್ತಿದೆ.
ಹಣಕಾಸು ಸೇರ್ಪಡೆಯ 3 ಆಧಾರಸ್ತಂಭಗಳಲ್ಲಿ ಒಂದಾದ ಸಾಲ ಸೌಲಭ್ಯ ವಂಚಿತರಿಗೆ ಸಾಲ ಒದಗಿಸುವ ಪರಿಕಲ್ಪನೆಯು ಪಿಎಂಎಂವೈ ಯೋಜನೆಯ ಹಣಕಾಸು ಸೇರ್ಪಡೆ ಪರಿಸರ ವ್ಯವಸ್ಥೆಯಲ್ಲಿ ಪ್ರತಿಫಲಿಸುತ್ತಿದೆ. ಇದನ್ನು ಸಣ್ಣ ಮತ್ತು ಅತಿಸಣ್ಣ ಉದ್ಯಮಶೀಲರಿಗೆ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಕಾರ್ಯಗತಗೊಳಿಸಲಾಗುತ್ತಿದೆ. ಪಿಎಂಎಂವೈ ಯೋಜನೆಯ ವಿವಿಧ ಉಪಕ್ರಮಗಳ ಮೂಲಕ ಉದಯೋನ್ಮುಖ ಉದ್ಯಮಶೀಲರಿಂದ ಹಿಡಿದು ಶ್ರಮಿಕ ರೈತಾಪಿ ಜನರ ತನಕ ಎಲ್ಲಾ ಪಾಲುದಾರರ ಹಣಕಾಸಿನ ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿದೆ.
ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾದ ಮತ್ತು ಇಲ್ಲಿಯವರೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾದ ವರ್ಗಗಳಿಗೆ ಹಣಕಾಸು ನೆರವು ನೀಡುವ ಪ್ರಮುಖ ಉಪಕ್ರಮ ಇದಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಲಕ್ಷಾಂತರ ಉದ್ಯಮಶೀಲರ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ಸ್ವಯಂ-ಮೌಲ್ಯ ಮತ್ತು ಸ್ವಾತಂತ್ರ್ಯದ ಭಾವನೆಯೊಂದಿಗೆ ರೆಕ್ಕೆಪುಕ್ಕಗಳನ್ನು ನೀಡಿದೆ.
ಪಿಎಂಎಂವೈ ಯೋಜನೆಯ ಪ್ರಮುಖ ಅಂಶಗಳು ಮತ್ತು ಕಳೆದ 7 ವರ್ಷಗಳಲ್ಲಿ ಆಗಿರುವ ಸಾಧನೆಗಳನ್ನು ನಾವಿಲ್ಲಿ ಅವಲೋಕಿಸೋಣ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ(ಪಿಎಂಎಂವೈ)ಯ ಪ್ರಮುಖಾಂಶಗಳು:
- ಪಿಎಂಎಂವೈ ಅಡಿ 10 ಲಕ್ಷ ರೂ. ತನಕ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸಾಲ ನೀಡುವ ಸದಸ್ಯ ಸಂಸ್ಥೆಗಳು ಅಂದರೆ; ಬ್ಯಾಂಕ್‌ಗಳು, ಬ್ಯಾಂಕಿಂಗ್ ಯೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು), ಸಣ್ಣ ಹಣಕಾಸು ಸಂಸ್ಥೆಗಳು(ಎಂಎಫ್‌ಐಗಳು), ಇತರೆ ಹಣಕಾಸು ಮಧ್ಯವರ್ತಿ ಸಂಸ್ಥೆಗಳ ಮೂಲಕ 3 ವರ್ಗಗಳಲ್ಲಿ ಅಂದರೆ ಶಿಶು, ಕಿಶೋರ್ ಮತ್ತು ತರುಣ್ ಅಡಿ, ಉದ್ದಿಮೆಗಳ ಬೆಳವಣಿಗೆಯ ಹಂತ, ಅಭಿವೃದ್ಧಿ ಮತ್ತು ಹಣಕಾಸಿನ ಅಗತ್ಯಗಳನ್ನು ಆಧರಿಸಿ, ಸಾಲ ಒದಗಿಸಲಾಗುತ್ತಿದೆ.
- ಶಿಶು: ಈ ವರ್ಗದಲ್ಲಿ 50,000 ರೂ. ತನಕ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ.
- ಕಿಶೋರ್: 50,000 ರೂ.ನಿಂದ 5 ಲಕ್ಷ ರೂ. ತನಕ ಸಾಲ ಒದಗಿಸಲಾಗುತ್ತಿದೆ.
- ತರುಣ್: 5 ಲಕ್ಷ ರೂ.ನಿಂದ 10 ಲಕ್ಷ ರೂ. ತನಕ ಸಾಲ ನೀಡಲಾಗುತ್ತಿದೆ.
- ಹೊಸ ಪೀಳಿಗೆಯ ಆಕಾಂಕ್ಷಿತ ಯುವ ಸಮುದಾಯಕ್ಕೆ ಉದ್ಯಮಶೀಲತೆ ಉತ್ತೇಜಿಸುವ ಉದ್ದೇಶದೊಂದಿಗೆ, ಶಿಶು ವರ್ಗದ ಸಾಲಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ನಂತರ ಕಿಶೋರ್ ಮತ್ತು ತರುಣ್ ವರ್ಗಗಳಿಗೆ ಆದ್ಯತೆ ನೀಡಲಾಗುತ್ತಿದೆ.
- ಶಿಶು, ಕಿಶೋರ್ ಮತ್ತು ತರುಣ್ ವರ್ಗಗಳ ಅಡಿ, ಸಣ್ಣ ಮತ್ತು ಅತಿಸಣ್ಣ ಉದ್ದಿಮೆ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆಯ ಚೌಕಟ್ಟಿನೊಳಗೆ ಮತ್ತು ಒಟ್ಟಾರೆ ಉದ್ದೇಶಗಳೊಂದಿಗೆ, ಉತ್ಪನ್ನಗಳನ್ನು ವಿವಿಧ ವಲಯಗಳು, ವ್ಯಾಪಾರ ಚಟುವಟಿಕೆಗಳ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುವಂತೆ ಮುದ್ರಾ ಸಾಲವನ್ನು ಸಂಪೂರ್ಣ ವಿನ್ಯಾಸಗೊಳಿಸಲಾಗಿದೆ.
- ಕೋಳಿ ಸಾಕಣೆ, ಡೈರಿ, ಜೇನು ಸಾಕಣೆ ಇತ್ಯಾದಿ ಕೃಷಿ ಸಂಬಂಧಿಸಿದ ಚಟುವಟಿಕೆಗಳು ಒಳಗೊಂಡಂತೆ ಉತ್ಪಾದನೆ(ತಯಾರಿಕೆ), ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಆದಾಯ ಸೃಜಿಸುವ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಅವಧಿ ಸಾಲ ಮತ್ತು ದುಡಿಮೆ ಬಂಡವಾಳದ ಅಂಶಗಳನ್ನು ಪೂರೈಸಲು ಪಿಎಂಎಂವೈ ಯೋಜನೆ ಅಡಿ ಸಾಲಗಳನ್ನು ಒದಗಿಸಲಾಗುತ್ತಿದೆ.
- ಆರ್ ಬಿ ಐ ಮಾರ್ಗಸೂಚಿಗಳ ಪ್ರಕಾರ, ಸಾಲ ನೀಡುವ ಸಂಸ್ಥೆಗಳು ಬಡ್ಡಿ ದರ ನಿರ್ಧರಿಸುತ್ತವೆ. ದುಡಿಮೆ ಬಂಡವಾಳಕ್ಕಾಗಿ ಸಾಲ ಪಡೆದ ಉದ್ಯಮಶೀಲರಿಗೆ ಅವಧಿ ನಿರ್ಧರಿಸಿ, ಇಡೀ ಸಾಲ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತದೆ.
ಯೋಜನೆಯ ಸಾಧನೆಗಳು (25.03.2022ರ ವರೆಗೆ ಅನ್ವಯವಾಗುವಂತೆ)
- ಯೋಜನೆ ಪ್ರಾರಂಭವಾದಾಗಿನಿಂದ 25.03.2022ರ ವರೆಗೆ ಅನ್ವಯವಾಗುವಂತೆ, 34.42 ಕೋಟಿಗಿಂತ ಹೆಚ್ಚಿನ ಸಾಲ ಖಾತೆಗಳಿಗೆ 18.60 ಲಕ್ಷ ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಒಟ್ಟು ಸಾಲದಲ್ಲಿ ಸರಿಸುಮಾರು 22% ಸಾಲವನ್ನು ನವ ಉದ್ಯಮಶೀಲರಿಗೆ ಮಂಜೂರು ಮಾಡಲಾಗಿದೆ.
- ಪ್ರಸಕ್ತ ಆರ್ಥಿಕ ಸಾಲಿನಲ್ಲಿ 25.03.2022ರ ವರೆಗೆ ಅನ್ವಯವಾಗುವಂತೆ, ಪಿಎಂಎಂವೈ ಯೋಜನೆ ಅಡಿ 4.86 ಕೋಟಿ ಸಾಲ ಖಾತೆಗಳಿಗೆ 3.07 ಲಕ್ಷ ಕೋಟಿ ರೂ. ಸಾಲ ಮಂಜೂರಾತಿ ವಿಸ್ತರಿಸಲಾಗಿದೆ.
- ಒಟ್ಟು ಮಂಜೂರಾದ ಸಾಲಗಳ ಪೈಕಿ ಅಂದಾಜು 68% ಸಾಲಗಳನ್ನು ಮಹಿಳಾ ಉದ್ಯಮಿಗಳಿಗೆ ನೀಡಲಾಗಿದೆ.
- ಪ್ರತಿ ಉದ್ಯಮಶೀಲರಿಗೆ ಮಂಜುರಾಗಿರುವ ಸರಾಸರಿ ಸಾಲ ಮೊತ್ತ 54,000 ರೂ.
- ಶಿಶು ವರ್ಗಕ್ಕೆ ಮಂಜೂರಾಗಿರುವ ಸಾಲ ಪ್ರಮಾಣ 86%.
- ನವ ಉದ್ಯಮಶೀಲರಿಗೆ ನೀಡಿರುವ ಸಾಲ ಪ್ರಮಾಣ 22%.
- ಎಸ್ ಸಿ, ಎಸ್ ಟಿ ಉದ್ಯಮಶೀಲರಿಗೆ ನೀಡಿರುವ ಸಾಲ 23%.
- ಒಬಿಸಿ ವರ್ಗಕ್ಕೆ ನೀಡಿರುವ ಸಾಲ 28%(ಎಸ್ ಸಿ, ಎಸ್ ಟಿ ಮತ್ತು ಒಬಿಸಿ ವರ್ಗಕ್ಕೆ ವಿತರಣೆ ಆಗಿರುವ ಒಟ್ಟು ಸಾಲ ಪ್ರಮಾಣ 51%).
- ಅಲ್ಪಸಂಖ್ಯಾತ ವರ್ಗಗಳ ಉದ್ಯಮಶೀಲರಿಗೆ ನೀಡಿರುವ ಸಾಲ ಪ್ರಮಾಣ 11%.
ವಿಭಾಗ(ವರ್ಗ)ವಾರು ಸಾಲ ನೀಡಿಕೆ ಪಟ್ಟಿ:
ಗುಂಪು
|
ಸಾಲ ಪ್ರಮಾಣ (%)
|
ಮಂಜೂರಾದ ಸಾಲ ಮೊತ್ತ (%)
|
ಶಿಶು
|
86%
|
42%
|
ಕಿಶೋರ್
|
12%
|
34%
|
ತರುಣ್
|
2%
|
24%
|
ಒಟ್ಟು
|
100%
|
100%
|
ಕೋವಿಡ್-19 ಸಾಂಕ್ರಾಮಿಕ ಸೋಂಕು ಹಿನ್ನೆಲೆಯಲ್ಲಿ 2020-21 ಆರ್ಥಿಕ ವರ್ಷ ಹೊರತುಪಡಿಸಿ, ಯೋಜನೆಯ ಪ್ರಾರಂಭದಿಂದಲೂ ಗುರಿ ಸಾಧಿಸಲಾಗಿದೆ. ವರ್ಷವಾರು ಮಂಜೂರಾತಿ ಮೊತ್ತ ಹೀಗಿದೆ:
ವರ್ಷ
|
ಮಂಜೂರಾದ ಸಾಲ ಪ್ರಮಾಣ (ಕೋಟಿ ರೂ.ಗಳಲ್ಲಿ)
|
ಮಂಜೂರಾದ ಸಾಲ ಮೊತ್ತ
(ಲಕ್ಷ ಕೋಟಿ ರೂ.ಗಳಲ್ಲಿ)
|
2015-16
|
3.49
|
1.37
|
2016-17
|
3.97
|
1.80
|
2017-18
|
4.81
|
2.54
|
2018-19
|
5.98
|
3.22
|
2019-20
|
6.22
|
3.37
|
2020-21
|
5.07
|
3.22
|
2021-22 (25.03.2022ರ ವರೆಗೆ ಅನ್ವಯವಾಗುವಂತೆ)*
|
4.86
|
3.07
|
ಒಟ್ಟು
|
34.42
|
18.60
|
ತಾತ್ಕಾಲಿಕ ಪಟ್ಟಿ
ಇತರ ಸಂಬಂಧಿತ ಮಾಹಿತಿ
ಎಲ್ಲಾ ಅರ್ಹ ಸಾಲಗಾರರಿಗೆ 12 ತಿಂಗಳ ಅವಧಿಗೆ ಪಿಎಮ್‌ಎಮ್‌ವೈ-PMMY ಅಡಿಯಲ್ಲಿ ವಿಸ್ತರಿಸಲಾದ ಶಿಶು ಸಾಲಗಳ ತ್ವರಿತ ಮರುಪಾವತಿಯ ಮೇಲೆ 2% ಬಡ್ಡಿ ರಿಯಾಯಿತಿ
- ಹಿಂದೆಂದೂ ಕಾಣದ ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದ ಎದುರಾದ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರ ಹಣಕಾಸು ಸಚಿವರು 14.05.2020ರಂದು ಘೋಷಿಸಿದ ಆತ್ಮನಿರ್ಭರ್ ಭಾರತ ಆರ್ಥಿಕ ಪ್ಯಾಕೇಜ್ ಅಡಿ, ಈ ಯೋಜನೆಯನ್ನು ನಿರ್ದಿಷ್ಟ ಪ್ರತಿಕ್ರಿಯೆಯಾಗಿ ರೂಪಿಸಲಾಗಿದೆ. ಉದ್ಯಮಶೀಲರ ಸಾಲ ವೆಚ್ಚ ಮತ್ತು ಅವರ ಆರ್ಥಿಕ ಒತ್ತಡ ಕಡಿಮೆ ಮಾಡುವ ಗುರಿಯನ್ನು ಆರ್ಥಿಕ ಪ್ಯಾಕೇಜ್ ಹೊಂದಿದೆ.
- ಕೇಂದ್ರ ಸಚಿವ ಸಂಪುಟ 2020 ಜೂನ್ 24ರಂದು ಈ ಯೋಜನೆಗೆ ಅನುಮೋದನೆ ನೀಡಿತು.
- ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್(ಸಿಡ್ಬಿ)ಗೆ ಕೇಂದ್ರ ಸರ್ಕಾರ 775 ಕೋಟಿ ರೂ. ಬಿಡುಗಡೆ ಮಾಡಿತು.
- ಯೋಜನೆಯ ಅನುಷ್ಠಾನ: ಸಾಲ ನೀಡುವ ಎಲ್ಲಾ ವರ್ಗಗಳ ಸದಸ್ಯ ಸಂಸ್ಥೆಗಳು ಅಂದರೆ ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಬ್ಯಾಂಕಿಂಗ್ ಯೇತರ ಹಣಕಾಸು ಕಂಪನಿಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳು.
- ಕಾರ್ಯಕ್ಷಮತೆ: 25.03.2022ರ ವರೆಗೆ ಅನ್ವಯವಾಗುವಂತೆ, ಸಿಡ್ಬಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 775 ಕೋಟಿ ರೂ. ಪೈಕಿ, ಸಿಡ್ಬಿಯು 658.25 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಸಾಲ ನೀಡುವ ಎಲ್ಲಾ ವರ್ಗಗಳ ಸದಸ್ಯ ಸಂಸ್ಥೆಗಳಿಗೆ ಹಂಚಿಕೆ ಮಾಡಿದೆ. ಈ ಹಣಕಾಸು ಸಂಸ್ಥೆಗಳು ಉದ್ಯಮಶೀಲರ ಸಾಲ ಖಾತೆಗಳಿಗೆ ಮುದ್ರಾ ಯೋಜನೆಯ ಆರ್ಥಿಕ ಸಹಾಯ ರೂಪದಲ್ಲಿ ವಿತರಿಸಿವೆ.
****
(Release ID: 1814773)
Visitor Counter : 607
Read this release in:
Odia
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam