ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕಾಮನ್ ವೆಲ್ತ್ ಮತ್ತು ಏಶ್ಯನ್ ಗೇಮ್ಸ್ ಗಾಗಿ ಕ್ರೀಡಾಳುಗಳ ತರಬೇತಿಗೆ ಕ್ರೀಡಾ ಸಚಿವಾಲಯದಿಂದ 190 ಕೋ.ರೂ. ವ್ಯಯ; ಭಾರತೀಯ ತಂಡಗಳ ಸುಸೂತ್ರ ಆಯ್ಕೆಗಾಗಿ ಎನ್.ಎಸ್.ಎಫ್.ಗಳ ಮಾನ್ಯತೆ ನವೀಕರಣ.
ಪ್ರಕಟಣಾ ದಿನಾಂಕ:
04 APR 2022 4:12PM by PIB Bengaluru
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು 33 ಕ್ರೀಡಾ ಶಿಸ್ತುಗಳಲ್ಲಿ ತರಬೇತಿ ಮತ್ತು ಸ್ಪರ್ಧೆಗಳಿಗೆ ಸಂಬಂಧಿಸಿದ ವಾರ್ಷಿಕ ವೇಳಾಪಟ್ಟಿಯನ್ನು (ಎ.ಸಿ.ಟಿ.ಸಿ.ಎಸ್.)ಗಳನ್ನು ಅಂತಿಮಗೊಳಿಸಿದೆ ಮತ್ತು ವಿವಿಧ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್.ಎಸ್.ಎಫ್.ಎಸ್.ಗಳಿಗೆ) ನೆರವು ಎಂದು 2022-23ನೇ ಹಣಕಾಸು ವರ್ಷಕ್ಕೆ ಒಟ್ಟು 259 ಕೋ.ರೂ.ಗಳ ಮೊತ್ತವನ್ನು ನಿಗದಿ ಮಾಡಿದೆ. ಇದರಲ್ಲಿ 190 ಕೋ.ರೂ.ಗಳಷ್ಟನ್ನು ಕ್ರೀಡಾಳುಗಳ ತರಬೇತಿ, ವಿದೇಶದಲ್ಲಿ ತರಬೇತಿ ಅವಕಾಶ, ಸಲಕರಣೆಗಳು ಮತ್ತು 2022 ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2022ರ ಏಶ್ಯನ್ ಕ್ರೀಡಾಕೂಟದ ಪೂರಕ ಸಿಬ್ಬಂದಿಗಳಿಗಾಗಿ ವ್ಯಯವಾಗಲಿದೆ. 33 ಎನ್.ಎಸ್.ಎಫ್.ಗಳ ಜೊತೆ 2022-23ರ ಸಾಲಿನಲ್ಲಿ ಅವುಗಳ ಯೋಜಿತ ಸ್ಪರ್ಧೆ ಮತ್ತು ತರಬೇತಿ ವೇಳಾಪಟ್ಟಿಯ ಕುರಿತಂತೆ ವಿವರವಾದ ಸಮಾಲೋಚನೆಯ ಬಳಿಕ ಈ ಬಜೆಟ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬರಲಿರುವ 2022 ರ ಆಗಸ್ಟ್ ನಲ್ಲಿ ಯು.ಕೆ.ಯ ಬರ್ಮಿಂಗ್ ಹ್ಯಾಂನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾ ಕೂಟ (ಸಿ.ಡಬ್ಲ್ಯು.ಜಿ.) ಮತ್ತು 2022 ರ ಸೆಪ್ಟೆಂಬರ್ ತಿಂಗಳಲ್ಲಿ ಚೀನಾದ ಗ್ವಾಂಗ್ ಝೂನಲ್ಲಿ ನಡೆಯಲಿರುವ ಏಶ್ಯನ್ ಕ್ರೀಡಾ ಕೂಟದಲ್ಲಿ ಕ್ರೀಡಾಳುಗಳ ತರಬೇತಿ ಮತ್ತು ಸ್ಪರ್ಧಾತ್ಮಕ ಆವಶ್ಯಕತೆಗಳ ಪ್ರಸ್ತಾಪಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎನ್.ಎಸ್.ಎಫ್.ಗಳ ಜೊತೆ ಸಕ್ರಿಯ ಸಮಾಲೋಚನೆಯ ಮೂಲಕ ಸಚಿವಾಲಯವು ಪ್ರತೀ ಪ್ರಸ್ತಾವನೆಯನ್ನು ಪರಿಶೀಲಿಸಿ ಮಂಜೂರಾತಿ ನೀಡಿದೆ ಮತ್ತು ಈ ಎರಡು ಪ್ರತಿಷ್ಟಿತ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಳುಗಳಿಗೆ ಬೆಂಬಲ ಇದರಿಂದ ಇನ್ನಷ್ಟು ಹೆಚ್ಚಿದಂತಾಗಿದೆ.
ಸಚಿವಾಲಯವು 33 ಒಕ್ಕೂಟಗಳ ಎ.ಸಿ.ಟಿ.ಸಿ.ಯನ್ನು ಈಗಾಗಲೇ ಅನುಮೋದಿಸಿದೆ. ಇನ್ನೂ ಮೂರು ಎನ್.ಎಸ್.ಎಫ್.ಗಳ ಜೊತೆ ಎ.ಸಿ.ಟಿ.ಸಿ. ಸಮಾಲೋಚನೆ ಸಭೆ ಸದ್ಯದಲ್ಲಿ ನಡೆಯಲಿದ್ದು, ಅವುಗಳಿಗೆ ಕೂಡಾ ಬಜೆಟನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು.
2022-23ರ ಸಾಲಿಗೆ ಎನ್.ಎಸ್.ಎಫ್.ಗಳು ಸಲ್ಲಿಸಿದ ತರಬೇತಿ ಮತ್ತು ಸ್ಪರ್ಧೆಗಳ ಯೋಜನೆ ಹಾಗು ಪ್ರಸ್ತಾವನೆಗಳನ್ನು ಸರಕಾರ ಗಮನಿಸಿದೆ ಎಂದು ಹೇಳಿರುವ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಬರಲಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2022, ಏಶ್ಯನ್ ಕ್ರೀಡಾ ಕೂಟ 2022 ಮತ್ತು ಪಾರಾ ಏಶ್ಯನ್ ಕ್ರೀಡಾಕೂಟ 2022 ಗಳಿಗೆ ಸಂಬಂಧಿಸಿ ನಿರ್ದಿಷ್ಟವಾಗಿ ಸಲ್ಲಿಸಿದ ಪ್ರಸ್ತಾವನೆಗಳನ್ನು ಪರಿಗಣಿಸಲಾಗಿದೆ ಮತ್ತು ಎ.ಸಿ.ಟಿ.ಸಿ.ಗಳಿಗೆ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ. ಕ್ರೀಡಾಳುಗಳ ತಯಾರಿಗೆ ಹಣಕಾಸು ಅಡ್ಡಿಯಾಗದು ಮತ್ತು ಸಚಿವಾಲಯವು ಆಟಗಾರರಿಗೆ ಹಾಗು ಎನ್.ಎಸ್.ಎಫ್.ಗಳಿಗೆ ಅವಶ್ಯ ನೆರವು ಮತ್ತು ಬೆಂಬಲ ನೀಡುತ್ತದೆ ಎಂದೂ ಅವರು ಹೇಳಿದ್ದಾರೆ. ಆಟಗಾರರು ಮತ್ತು ತಂಡಗಳು ಅವರ ತರಬೇತಿಯತ್ತ ಪೂರ್ಣ ಗಮನ ಕೊಡಬೇಕು ಎಂದು ಸಲಹೆ ಮಾಡಿರುವ ಅವರು, ಇದರಲ್ಲಿ ಅತ್ಯುತ್ತಮ ಸಾಧನೆ ತೋರಿಸಬೇಕು ಮತ್ತು ಬರಲಿರುವ ಕ್ರೀಡಾ ಕೂಟಗಳಲ್ಲಿ ಗರಿಷ್ಟ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತರಬೇಕು ಎಂದೂ ಹೇಳಿದ್ದಾರೆ.
ಎ.ಸಿ.ಟಿ.ಸಿ. ಅಡಿಯಲ್ಲಿ 2022-23 ಸಾಲಿಗೆ ಎನ್.ಎಸ್.ಎಫ್.ಗಳಿಗೆ ಹಣಕಾಸು ನೆರವನ್ನು 2022 ರ ಮಾರ್ಚ್ 1 ರಂದು ಜಾರಿಗೆ ತರಲಾದ ಪರಿಷ್ಕೃತ ಮಾನದಂಡಗಳ ಅನ್ವಯ ನಿಗದಿ ಮಾಡಲಾಗಿದೆ. ಕ್ರೀಡಾ ಕ್ಷೇತ್ರದ ಬದಲಾದ ಆವಶ್ಯಕತೆಗಳನ್ನು ಈಡೇರಿಸಲು ಯೋಜನೆ ಅಡಿಯಲ್ಲಿ ವಿವಿಧ ಘಟಕಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಮಾಡಲಾಗಿದೆ.
ಉನ್ನತ ಆದ್ಯತೆ, ಆದ್ಯತೆ ಮತ್ತು ಭಾರತೀಯ ಸಾಂಪ್ರದಾಯಿಕ ಕ್ರೀಡೆಗಳಿಗೆ ಸಂಬಂಧಿಸಿ ಪರಿಷ್ಕೃತ ಮಾನದಂಡಗಳ ಪ್ರಕಾರ ರಾಷ್ಟ್ರೀಯ ಚಾಂಪಿಯನ್ ಶಿಪ್ ನೆರವಿನ ಮೊತ್ತವನ್ನು 51 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಮತ್ತು ಈ ಮೊದಲು “ಇತರ” ಎಂದು ಗುರುತಿಸಲ್ಪಡುತ್ತಿದ್ದ ಸಾಮಾನ್ಯ ವರ್ಗದ ಕ್ರೀಡೆಗಳಿಗೆ ಮೊತ್ತವನ್ನು 22 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಏರಿಸಲಾಗಿದೆ. (ಈ ಮೊದಲು ಎಲ್ಲಾ ವರ್ಗದ ಕ್ರೀಡಾ ಶಿಸ್ತುಗಳಿಗೆ ಇದು ಏಕರೂಪದಲ್ಲಿತ್ತು.). ರಾಷ್ಟ್ರೀಯ ಚಾಂಪಿಯನ್ ಗಳಿಗೆ ಕ್ರೀಡಾಳು ಒಬ್ಬರಿಗೆ ಸಾಮಾನ್ಯ ಕ್ರೀಡಾ ತರಬೇತಿ ಕಿಟ್ ಭತ್ಯೆ (ಟ್ರ್ಯಾಕ್ ಸ್ಯೂಟ್ ಗಳು, ಟಿ-ಶರ್ಟ್ ಗಳು, ಶಾರ್ಟ್ಸ್, ವಾರ್ಮ್ ಅಪ್ ಶೂ ಇತ್ಯಾದಿಗಳು) ಯನ್ನು ವರ್ಷಕ್ಕೆ ದುಪ್ಪಟ್ಟು ಮಾಡಿ 20,000 ರೂ. ಎಂದು ನಿಗದಿ ಮಾಡಲಾಗಿದೆ. ದೇಶದಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಎನ್.ಎಸ್.ಎಫ್.ಗಳಿಗೆ ಉತ್ತೇಜನ ನೀಡುವುದಕ್ಕಾಗಿ ಇಂತಹ ಕ್ರೀಡಾ ಕೂಟಗಳ ಆತಿಥ್ಯಕ್ಕಾಗಿ ನೀಡುವ ಮೊತ್ತವನ್ನು ಈ ಮೊದಲಿದ್ದ 30 ಲಕ್ಷ ರೂ.ಗಳಿಂದ 1 ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ. ಉನ್ನತ ಗುಣಮಟ್ಟದ ಪೂರಕ ಸಿಬ್ಬಂದಿಗಳನ್ನು ಆಕರ್ಷಿಸಲು ಸಂಭಾವನೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಕ್ರೀಡಾ ವೈದ್ಯರ ಮತ್ತು ವೈದ್ಯರ ಸಂಭಾವನೆಯನ್ನು ಈ ಮೊದಲಿದ್ದ ಮಾಸಿಕ ಮೊತ್ತ 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಮುಖ್ಯ ಫಿಸಿಯೋಥೆರಪಿ ತಜ್ಞರು ಮತ್ತು ಫಿಸಿಯೋಥೆರಪಿ ತಜ್ಞರ ಸಂಭಾವನೆಯನ್ನು ಈ ಮೊದಲಿದ್ದ ಮಾಸಿಕ 80,000 ರೂ.ಗಳಿಂದ ಅನುಕ್ರಮವಾಗಿ ಮಾಸಿಕ 2 ಲಕ್ಷ ರೂ. ಮತ್ತು 1.5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಬರಲಿರುವ ಬೃಹತ್ ಕ್ರೀಡಾ ಕೂಟಗಳಲ್ಲಿ ಸಿದ್ಧತೆಯ ಹಂತದಲ್ಲಿ ಕ್ರೀಡಾಳುಗಳನ್ನು ತಯಾರು ಮಾಡುವಲ್ಲಿ ಎನ್.ಎಸ್.ಎಫ್.ಗಳ ಪ್ರಯತ್ನಗಳಿಗೆ ಯಾವುದೇ ಅಡ್ಡಿ ಆತಂಕಗಳು ಒದಗದಂತೆ ಖಾತ್ರಿಪಡಿಸಲು ಕ್ರೀಡಾ ಸಚಿವಾಲಯವು 38 ಎನ್.ಎಸ್.ಎಫ್.ಗಳ ಮಾನ್ಯತೆಯನ್ನು 2011 ರ ಕ್ರೀಡಾ ಸಂಹಿತೆಯ ಪ್ರಸ್ತಾವನೆಗಳ ಅನ್ವಯ ಅವುಗಳ ರಚನೆ/ಒಡಂಬಡಿಕೆಯನ್ನು ಪರಿಶೀಲಿಸಿ 2022 ರ ಅವಧಿಗೆ ಮರು ನವೀಕರಣ ಮಾಡಿದೆ. ಇನ್ನುಳಿದ ಎನ್.ಎಸ್.ಎಫ್.ಗಳ ಮಾನ್ಯತೆ ನವೀಕರಣ ಪರಿಶೀಲನೆಯಲ್ಲಿದೆ.
***
(ಪ್ರಕಟಣೆ ಐ.ಡಿ.: 1813358)
ವಿಸಿಟರ್ ಕೌಂಟರ್ : 206