ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

ಪ್ರಕಟಣಾ ದಿನಾಂಕ: 31 MAR 2022 1:32PM by PIB Bengaluru

ಗೌರವಾನ್ವಿತ ಸಭಾಪತಿಯವರೇ,

ನೀವು ಮಾತನಾಡುವವರಿಗೆ ಸಮಯ ನಿಗದಿಪಡಿಸಿದ್ದೀರಿ. ಆ ಕಾಲಮಿತಿಯಲ್ಲಿಯೇ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತೇನೆ.
ನಾವೊಂದು ಬೀಳ್ಕೊಡುಗೆ ಸಮಾರಂಭದಲ್ಲಿದ್ದೇವೆ. ನಮ್ಮ ಕೆಲವು ಸಹೋದ್ಯೋಗಿಗಳು ಇಲ್ಲಿಂದ ನಿರ್ಗಮಿಸುತ್ತಿದ್ದಾರೆ. ಆದರೆ ಇದನ್ನು ಬಂಗಾಳಿಯಲ್ಲಿ 'ಆಮಿ ಆಶ್ಚಿ' ಅಥವಾ ಗುಜರಾತಿಯಲ್ಲಿ 'ಆಯುಜೋ' ಅಥವಾ 'ಮತ್ತೆ ಬನ್ನಿ' ಎಂದು ಕರೆಯಲಾಗುತ್ತದೆ. ಇದು ‘ಬೈ-ಬೈ’ಆದರೂ ‘ಮತ್ತೆ ಬನ್ನಿ’ಎನ್ನುತ್ತೇವೆ. ಆದ್ದರಿಂದ ಒಂದು ರೀತಿಯಲ್ಲಿ, ನೀವು ಮತ್ತೆ ಬರಬೇಕೆಂದು ನಾವು ಬಯಸುತ್ತೇವೆ. ಸಭಾಪತಿಯವರು ಹೇಳಿದಂತೆ, ಇವರು ಅಪಾರ ಅನುಭವ ಹೊಂದಿದ್ದಾರೆ. ಕೆಲವರು ಐದು ಬಾರಿ, ನಾಲ್ಕು ಬಾರಿ ಅಥವಾ ಮೂರು ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಂದರೆ, ಈ ಮಹಾನ್ ವ್ಯಕ್ತಿಗಳು ಅಪಾರ ಅನುಭವವನ್ನು ಹೊಂದಿದ್ದಾರೆ. ಕೆಲವೊಮ್ಮೆ ಅನುಭವವು ಜ್ಞಾನಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ.
ಶೈಕ್ಷಣಿಕ ಜ್ಞಾನವು ಕೆಲವೊಮ್ಮೆ ಅನೇಕ ಮಿತಿಗಳನ್ನು ಹೊಂದಿರುತ್ತದೆ; ಅದು ಸೆಮಿನಾರ್‌ಗಳಲ್ಲಿ ಉಪಯೋಗಕ್ಕೆ ಬರುತ್ತದೆ, ಆದರೆ ಅನುಭವದಿಂದ ಗಳಿಸಿದ್ದು ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನು ಒದಗಿಸಬಹುದು. ಅನುಭವವನ್ನು ಸ್ವಂತಿಕೆಯೊಂದಿಗೆ ಬೆರೆಸಿದರೆ ತಪ್ಪುಗಳು ಕಡಿಮೆಯಾಗುತ್ತವೆ. ಈ ಅರ್ಥದಲ್ಲಿ ಅನುಭವವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಅಂತಹ ಅನುಭವಿ ಸಹೋದ್ಯೋಗಿಗಳು ಸದನದಿಂದ ನಿರ್ಗಮಿಸಿದಾಗ, ಸದನಕ್ಕೆ ಮತ್ತು ರಾಷ್ಟ್ರಕ್ಕೆ ಅಪಾರ ನಷ್ಟವಾಗುತ್ತದೆ. ಭವಿಷ್ಯದ ಪೀಳಿಗೆಗಾಗಿ ತೆಗೆದುಕೊಳ್ಳಬೇಕಾದ ಕೆಲವು ನಿರ್ಧಾರಗಳಲ್ಲಿ ಶೂನ್ಯತೆ ಆವರಿಸಬಹುದು. ಆದ್ದರಿಂದ, ಅನುಭವಿಗಳು ನಿರ್ಗಮಿಸುವಾಗ ಅವರ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಲಾಗುತ್ತದೆ. ಆದರೆ ಅನುಭವಿ ಸದಸ್ಯರು ಇಲ್ಲದಿದ್ದಾಗ ಸದನದಲ್ಲಿ ಇರುವವರ ಜವಾಬ್ದಾರಿ ಕೊಂಚ ಹೆಚ್ಚುತ್ತದೆ. ಸದನದಿಂದ ನಿರ್ಗಮಿಸುತ್ತಿರುವ ಅನುಭವಿ ಸದಸ್ಯರ ಪರಂಪರೆಯನ್ನು ಈಗಿನ ಸದಸ್ಯರು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಅವರು ಪರಂಪರೆಯನ್ನು ಮುಂದುವರಿಸಿದಾಗ, ಸದನಕ್ಕೆ ಶಕ್ತಿಯ ಕೊರತೆಯಿದೆ ಎಂದು ಎಂದಿಗೂ ಅನ್ನಿಸುವುದಿಲ್ಲ. ಇಂದು ನಿರ್ಗಮಿಸುತ್ತಿರುವವರಿಂದ ಕಲಿತ ಪಾಠಗಳಲ್ಲಿ ಉತ್ತಮವಾದದ್ದನ್ನು ಆರಿಸಿಕೊಳ್ಳಲು ಮತ್ತು ಅದನ್ನು ಮುಂದುವರಿಸಲು ಈ ಪವಿತ್ರ ಸ್ಥಳವನ್ನು (ಸದನ) ಖಂಡಿತವಾಗಿ ಬಳಸಿಕೊಳ್ಳುವ ಸಂಕಲ್ಪವನ್ನು ಮಾಡೋಣ. ಇದರಿಂದ ದೇಶದ ಪ್ರಗತಿಗೆ ಹೆಚ್ಚು ಪ್ರಯೋಜನವಾಗುತ್ತದೆ.
ಈ ನಾಲ್ಕು ಗೋಡೆಗಳ ನಡುವೆ ನಾವು ಹೆಚ್ಚು ಕಾಲ ಕಳೆದಿದ್ದೇವೆ. ಭಾರತದ ಪ್ರತಿಯೊಂದು ಮೂಲೆಯ ಭಾವನೆಗಳು, ಪ್ರತಿಬಿಂಬಗಳು, ಅಭಿವ್ಯಕ್ತಿಗಳು, ನೋವು ಮತ್ತು ಭಾವೋತ್ಕರ್ಷಗಳು ಇಲ್ಲಿ ಪ್ರವಹಿಸುತ್ತಲೇ ಇರುತ್ತವೆ ಮತ್ತು ನಾವು ಸಹ ಆ ಹರಿವನ್ನು ಅನುಭವಿಸುತ್ತಲೇ ಇರುತ್ತೇವೆ. ಕೆಲವೊಮ್ಮೆ ನಾವು ಸದನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೇವೆ ಎಂದು ಭಾವಿಸಬಹುದು; ಇದು ನಿಜ ಕೂಡ. ಆದರೆ ಅದೇ ಸಮಯದಲ್ಲಿ ಈ ಸದನವೂ ನಮ್ಮ ಜೀವನಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ನಾವು ಸದನಕ್ಕೆ ಏನನ್ನಾದರೂ ಕೊಡುಗೆ ನೀಡಿ ಇಲ್ಲಿಂದ ನಿರ್ಗಮಿಸುತ್ತೇವೆ, ಆದರೆ ನಾವು ನಮ್ಮೊಂದಿಗೆ ಇನ್ನೂ ಹೆಚ್ಚಿನದನ್ನು ತೆಗೆದುಕೊಂಡು ಹೋಗುತ್ತೇವೆ. ಏಕೆಂದರೆ ನಾವು ಸದನದಲ್ಲಿ ಪ್ರತಿದಿನವೂ ಭಾರತದ ವೈವಿಧ್ಯಮಯ ಸಾಮಾಜಿಕ ವ್ಯವಸ್ಥೆಗಳಿಂದ ಹಲವಾರು ಏರಿಳಿತಗಳಿಂದ ಹೊರಬರುವ ಬಹಳಷ್ಟು ವಿಷಯಗಳ ಬಗ್ಗೆ ತಿಳಿಯುತ್ತೇವೆ.
ಇಂದು ಅದಕ್ಕಾಗಿಯೇ ನಾನು ಹೇಳುವುದೇನೆಂದರೆ, ನಾವು ಸದನದಿಂದ ನಿರ್ಗಮಿಸುತ್ತಿದ್ದರೂ, ರಾಷ್ಟ್ರದ ಹಿತದೃಷ್ಟಿಯಿಂದ ಈ ಅನುಭವವನ್ನು ಎಲ್ಲಾ ದಿಕ್ಕುಗಳಲ್ಲೂ ಪಸರಿಸಬೇಕು. ನಾಲ್ಕು ಗೋಡೆಗಳ ನಡುವೆ ಗಳಿಸಿದ ಎಲ್ಲವನ್ನೂ ನಾಲ್ಕು ದಿಕ್ಕುಗಳಿಗೂ ಕೊಂಡೊಯ್ಯುವುದು ನಮ್ಮ ಸಂಕಲ್ಪವಾಗಬೇಕು ಮತ್ತು ನಾವು ನಮ್ಮ ಅಧಿಕಾರಾವಧಿಯಲ್ಲಿ ಸದನಕ್ಕೆ ಕೊಡುಗೆ ನೀಡಿದ ಎಲ್ಲಾ ಪ್ರಮುಖ ವಿಷಯಗಳನ್ನು ದಾಖಲಿಸಲು ಪ್ರಯತ್ನಿಸಬೇಕು, ಅದು ದೇಶಕ್ಕೆ ದೃಷ್ಟಿ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ ಅವು ಮುಂಬರುವ ಪೀಳಿಗೆಗೆ ಉಲ್ಲೇಖನೀಯ ಪ್ರಯೋಜನವಾಗುತ್ತವೆ.
ನಾವು ಸದನದ ಯಾವುದೇ ಬದಿಯಲ್ಲಿ, ಆಡಳಿತ ಅಥವಾ ವಿರೋಧ ಪಕ್ಷಗಳಲ್ಲಿ ಕುಳಿತಿರಬಹುದು, ಆದರೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಏನಾದರೂ ಕೊಡುಗೆ ನೀಡಿರುತ್ತಾರೆ. ಅದು ದೇಶಕ್ಕೆ ನಿರ್ದೇಶನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುತ್ತದೆ.  ನಾವು ಇದನ್ನು ದಾಖಲಿಸಿದರೆ, ಭವಿಷ್ಯದ ಪೀಳಿಗೆಗೆ ಉಪಯುಕ್ತವಾಗುವ ಅಮೂಲ್ಯವಾದ ನಿಧಿಯನ್ನು ಹೊಂದುತ್ತೇವೆ ಎಂಬುದು ನನ್ನ ನಂಬಿಕೆ. ಅಂದರೆ, ಇದನ್ನು ಸಾಂಸ್ಥಿಕ ವ್ಯವಸ್ಥೆಯ ಹಿತಾಸಕ್ತಿಗಾಗಿ ಬಳಸಬಹುದು.
ಅದೇ ರೀತಿ ನಾವು ''ಆಜಾದಿ ಕಾ ಅಮೃತ್ ಮಹೋತ್ಸವ''ವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ನಮ್ಮ ದೇಶದ ಮಹಾನ್ ವ್ಯಕ್ತಿಗಳು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈಗ ಕೊಡುವುದು ಮತ್ತು ಕೊಡುಗೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ನೀವು ಸದನದಿದ ನಿರ್ಗಮಿಸುತ್ತಿರುವುದರಿಂದ ನಿಮಗೆ ಸ್ವಲ್ಪ ಹೆಚ್ಚು ಸಮಯ ಇರುತ್ತದೆ ಮತ್ತು ಸಭಾಪತಿಯವರು ಯಾವುದೇ ಸಮಯದ ಮಿತಿಯನ್ನು ನಿಗದಿಪಡಿಸುವುದಿಲ್ಲ. ಆದ್ದರಿಂದ, ಅದೇ ಉತ್ಸಾಹದಲ್ಲಿ 'ಆಜಾದಿ ಕಾ ಅಮೃತ ಮಹೋತ್ಸವ'ಕ್ಕೆ ಅನುಗುಣವಾಗಿ, ನೀವು ಅತ್ಯಂತ ಮುಕ್ತ ಮನಸ್ಸಿನಿಂದ ವೇದಿಕೆಗೆ ಹೋಗಿ ಅಲ್ಲಿಯೂ ನಿಮ್ಮ ಕೊಡುಗೆಯನ್ನು ನೀಡುವ ಮೂಲಕ ಮುಂಬರುವ ಪೀಳಿಗೆಗೆ ಸ್ಫೂರ್ತಿ ನೀಡಬಹುದೇ? ಇದರಿಂದ ರಾಷ್ಟ್ರವು ಸಾಕಷ್ಟು ಶಕ್ತಿ ಮತ್ತು ಪ್ರಯೋಜನವನ್ನು ಪಡೆಯುತ್ತದೆ ಎಂದು ನಾನು ನಂಬಿದ್ದೇನೆ.
ನಾನು ಎಲ್ಲ ಸಹೋದ್ಯೋಗಿಗಳ ಹೆಸರನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸುತ್ತಿಲ್ಲ. ನಾನೇ ಖುದ್ದಾಗಿ ವೈಯಕ್ತಿಕವಾಗಿ ಭೇಟಿಯಾಗಬೇಕು ಎಂದು ಸಭಾಪತಿಯವರು ಹೇಳಿದ್ದಾರೆ. ಆದ್ದರಿಂದ, ನಾನು ಖಂಡಿತವಾಗಿಯೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಮತ್ತು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ಪ್ರಯತ್ನಿಸುತ್ತೇನೆ. ನಿಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ನಾನು ಖಂಡಿತವಾಗಿ ಗಮನಿಸಿದ್ದೇನೆ!
ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭಕಾಮನೆಗಳು!
ಧನ್ಯವಾದಗಳು!

***


(ಪ್ರಕಟಣೆ ಐ.ಡಿ.: 1812134) ವಿಸಿಟರ್ ಕೌಂಟರ್ : 229
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Bengali , Punjabi , Gujarati , Odia , Tamil , Telugu , Malayalam