ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗಳು 3 ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು ಮತ್ತು ಜಲ ಶಕ್ತಿ ಅಭಿಯಾನ  ʼಮಳೆ ಹಿಡಿದಿಟ್ಟುಕೊಳ್ಳಿರಿ ಅಭಿಯಾನ 2022 ʼ ಕ್ಕೆ ಚಾಲನೆ ನೀಡಿದರು

Posted On: 29 MAR 2022 1:57PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಮೂರನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು ಮತ್ತು ಇಂದು (ಮಾರ್ಚ್ 29, 2022) ನವದೆಹಲಿಯಲ್ಲಿ ಜಲ ಶಕ್ತಿ ಅಭಿಯಾನ - ಮಳೆ ಹಿಡಿದಿಟ್ಟುಕೊಳ್ಳಿರಿ ಅಭಿಯಾನ 2022 ʼ  (ಕ್ಯಾಚ್ ದಿ ರೈನ್ ಅಭಿಯಾನ 2022) ಕ್ಕೆ ಚಾಲನೆ  ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಜಲ ನಿರ್ವಹಣಾ ಕ್ಷೇತ್ರದಲ್ಲಿ ಅನುಕರಣೀಯ ಕಾರ್ಯಗಳಿಗಾಗಿ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ನೀಡುವುದು ಮತ್ತು ನಮ್ಮ ದೈನಂದಿನ ಜೀವನದಲ್ಲಿ ಮತ್ತು ಭೂಮಿಯ ಮೇಲೆ ನೀರಿನ ಮಹತ್ವವನ್ನು ಸಾರುವ ಜಲ ಅಭಿಯಾನವನ್ನು ವಿಸ್ತರಿಸುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

'ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೈನ್ 2022'  ಕ್ಕೆ  ಚಾಲನೆ ನೀಡಲು ನನಗೆ ಅಪಾರ ಸಂತೋಷವನ್ನು ಕೊಡುತ್ತದೆ ಎಂದು ರಾಷ್ಟ್ರಪತಿಗಳು  ಹೇಳಿದರು. ಅಭಿಯಾನದ ಯಶಸ್ಸಿಗೆ ಪ್ರತಿಯೊಬ್ಬರೂ ಎಲ್ಲ ಹಂತಗಳಲ್ಲೂ ಕಾರ್ಯ ನಿರ್ವಹಿಸುವಂತೆ  ಅವರು ಒತ್ತಾಯಿಸಿದರು. ಜಲಸಂರಕ್ಷಣಾ ಕಾರ್ಯದಲ್ಲಿ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸ್ಥಳೀಯ ಜನತೆಯನ್ನು ಪ್ರೇರೇಪಿಸುವಲ್ಲಿ ಜಿಲ್ಲಾಧಿಕಾರಿಗಳು ಮತ್ತು ಗ್ರಾಮಗಳ ಸರಪಂಚರು  ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಹೇಳಿದರು. ಭಾರತದಲ್ಲಿ ಇತಿಹಾಸದಲ್ಲಿಯೇ ಅತಿ ದೊಡ್ಡ ಲಸಿಕೆ ಅಭಿಯಾನವನ್ನು ನಡೆಸುತ್ತಿರುವಂತೆಯೇ, ನಾವೆಲ್ಲರೂ ಈ ಅಭಿಯಾನವನ್ನು ಇತಿಹಾಸದಲ್ಲಿಯೇ ಅತಿದೊಡ್ಡ ಜಲಸಂರಕ್ಷಣಾ ಅಭಿಯಾನವನ್ನಾಗಿ ಮಾಡುತ್ತೇವೆ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ತೆಗೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.

ʼಜಲವೇ ಜೀವ’ ಎಂದು ಹೇಳುವುದು ಸೂಕ್ತ ಎಂದು ರಾಷ್ಟ್ರಪತಿಗಳು  ಹೇಳಿದರು.  ಪ್ರಕೃತಿಯು ಮಾನವಕುಲಕ್ಕೆ ಜಲಸಂಪನ್ಮೂಲಗಳನ್ನು ಅನುಗ್ರಹಿಸಿದೆ. ಇದು ನಮಗೆ ವಿಶಾಲವಾದ ನದಿಗಳನ್ನು ಒದಗಿಸಿದೆ, ಅದರ ದಡದಲ್ಲಿ ಮಹಾನ್ ನಾಗರಿಕತೆಗಳು ಪ್ರವರ್ಧಮಾನಕ್ಕೆ ಬಂದವು. ಭಾರತೀಯ ಸಂಸ್ಕೃತಿಯಲ್ಲಿ ನದಿಗಳಿಗೆ ವಿಶೇಷ ಮಹತ್ವವಿದೆ ಮತ್ತು ಅವುಗಳನ್ನು ತಾಯಿ ಎಂದು ಪೂಜಿಸಲಾಗುತ್ತದೆ. ನಾವು ನದಿಗಳ ಆರಾಧನೆಗಾಗಿ ಅದಕ್ಕೆಂದೆ ಮೀಸಲಾದ ಸ್ಥಳಗಳನ್ನು ಹೊಂದಿದ್ದೇವೆ - ಉತ್ತರಾಖಂಡದಲ್ಲಿ ಗಂಗಾ ಮತ್ತು ಯಮುನೆಗೆ, ಮಧ್ಯಪ್ರದೇಶದಲ್ಲಿ ನರ್ಮದೆಗೆ ಮತ್ತು ಬಂಗಾಳದಲ್ಲಿ ಗಂಗಾ-ಸಾಗರಕ್ಕೆ. ಇಂತಹ ಧಾರ್ಮಿಕ ಆಚರಣೆಗಳು ನಮ್ಮನ್ನು ಪ್ರಕೃತಿಯೊಂದಿಗೆ ಬೆಸೆಯುವಂತೆ ಮಾಡಿತು. ಕೊಳ ಮತ್ತು ಬಾವಿಗಳ ನಿರ್ಮಾಣವನ್ನು ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ದುರದೃಷ್ಟವಶಾತ್ ಆಧುನಿಕತೆ ಮತ್ತು ಕೈಗಾರಿಕಾ ಆರ್ಥಿಕತೆಯ ಆಗಮನದೊಂದಿಗೆ, ನಾವು ಪ್ರಕೃತಿಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದ್ದೇವೆ. ಜನಸಂಖ್ಯೆಯ ಬೆಳವಣಿಗೆಯೂ ಒಂದು ಅಂಶವಾಗಿದೆ. ನಮ್ಮನ್ನು ಪೋಷಿಸಿದ ಪ್ರಕೃತಿಯಿಂದ ನಾವು ದೂರವಿರುವುದನ್ನು ಕಾಣುತ್ತೇವೆ. ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮತ್ತು ಯಮುನೆಗೆ ಪ್ರಾರ್ಥನೆ ಸಲ್ಲಿಸಲು ನಾವು ಯಮುನೋತ್ರಿಗೆ ಕಷ್ಟವಾದರೂ ಪ್ರಯಾಣ ಕೈಗೊಳ್ಳುತ್ತೇವೆ. ಆದರೆ ನಾವು ರಾಜಧಾನಿ ದೆಹಲಿಗೆ ಹಿಂತಿರುಗಿದಾಗ, ಅದೇ ನದಿಯು ಅತ್ಯಂತ ಕಲುಷಿತಗೊಂಡಿದೆ ಮತ್ತು ನಮ್ಮ ನಗರ ಜೀವನದಲ್ಲಿ ಇನ್ನು ಮುಂದೆ ಉಪಯುಕ್ತವಲ್ಲ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ.

ನಗರೀಕರಣದ ಒತ್ತಡದಲ್ಲಿ ವರ್ಷವಿಡೀ ನಗರಗಳಿಗೆ ನೀರು ಒದಗಿಸುವ ಕೆರೆ, ಕೆರೆಗಳಂತಹ ಜಲಮೂಲಗಳೂ ಕಣ್ಮರೆಯಾಗಿವೆ ಎಂದು ರಾಷ್ಟ್ರಪತಿಗಳು ಹೇಳಿದರು. ಇದು ನೀರಿನ ನಿರ್ವಹಣೆಯ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಅಂತರ್ಜಲದ ಪ್ರಮಾಣ ಕಡಿಮೆಯಾಗುತ್ತಿದ್ದು, ಅದರ ಮಟ್ಟವೂ ಕುಸಿಯುತ್ತಿದೆ. ಒಂದೆಡೆ, ನಗರಗಳು ತಮಗೆ ಬೇಕಾದ ನೀರನ್ನು ದೂರದ ಸ್ಥಳಗಳಿಂದ ದೊರಕಿಸಿಕೊಳ್ಳಬೇಕು  ಮತ್ತು ಮತ್ತೊಂದೆಡೆ, ಮಳೆಗಾಲದಲ್ಲಿ ಬೀದಿಗಳು ಜಲಾವೃತವಾಗುತ್ತವೆ. ವಿಜ್ಞಾನಿಗಳು ಮತ್ತು ಹೋರಾಟಗಾರರು ಕಳೆದ ಕೆಲವು ದಶಕಗಳಲ್ಲಿ ನೀರಿನ ನಿರ್ವಹಣೆಯ ಈ ವಿರೋಧಾಭಾಸದ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು. ಭಾರತದಲ್ಲಿ, ಈ ಸಮಸ್ಯೆಯು ಹೆಚ್ಚು ಗಂಭೀರವಾಗಿದೆ ಏಕೆಂದರೆ ನಮ್ಮ ದೇಶವು ವಿಶ್ವದ ಜನಸಂಖ್ಯೆಯ ಸುಮಾರು ಶೇಕಡಾ 18ರಷ್ಟನ್ನು ಹೊಂದಿದೆ, ಆದರೆ ನಾವು ಕೇವಲ ಶೇಕಡಾ 4ರಷ್ಟು ಶುದ್ಧ ನೀರಿನ ಸಂಪನ್ಮೂಲಗಳನ್ನು ಹೊಂದಿದ್ದೇವೆ. ನೀರಿನ ಲಭ್ಯತೆ ಅನಿಶ್ಚಿತವಾಗಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮಳೆಯ ಮೇಲೆ ಅವಲಂಬಿತವಾಗಿದೆ.

ನೀರಿನ ಸಮಸ್ಯೆಯು ಹವಾಮಾನ ಬದಲಾವಣೆಯ ಇನ್ನೂ ದೊಡ್ಡ ಬಿಕ್ಕಟ್ಟಿನ ಒಂದು ಭಾಗವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಹವಾಮಾನ ಬದಲಾವಣೆಗಳು, ಪ್ರವಾಹ ಮತ್ತು ಬರ ಪರಿಸ್ಥಿತಿಗಳು  ಹೆಚ್ಚು ತೀವ್ರವಾಗುತ್ತಿವೆ. ಹಿಮಾಲಯದ ಹಿಮನದಿಗಳು ಕರಗುತ್ತಿವೆ ಮತ್ತು ಸಮುದ್ರದ ಮಟ್ಟ ಏರುತ್ತಿದೆ. ಇಂತಹ ಬದಲಾವಣೆಗಳ ಗಂಭೀರ ಪರಿಣಾಮಗಳು ಮುನ್ನೆಲೆಗೆ ಬರುತ್ತಿದ್ದು, ಇದು ರೈತರು, ಮಹಿಳೆಯರು ಮತ್ತು ಬಡವರ ಜೀವನದ ಮೇಲೆ ಇನ್ನೂ ಕೆಟ್ಟ ಪರಿಣಾಮ ಬೀರುತ್ತಿದೆ.

ಇಂದು ನೀರಿನ ಬಿಕ್ಕಟ್ಟು ಅಂತರಾಷ್ಟ್ರೀಯ ಬಿಕ್ಕಟ್ಟಾಗಿ ಮಾರ್ಪಟ್ಟಿದ್ದು, ಅದು ಭೀಕರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ರಾಷ್ಟ್ರಪತಿಗಳು ಹೇಳಿದರು. ಕೆಲವು ರಕ್ಷಣಾ ತಜ್ಞರು ಭವಿಷ್ಯದಲ್ಲಿ ಇದು ಅಂತರರಾಷ್ಟ್ರೀಯ ಸಂಘರ್ಷಕ್ಕೆ ಪ್ರಮುಖ ಕಾರಣವಾಗಬಹುದು ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಿಂದ ಮಾನವೀಯತೆಯನ್ನು ಉಳಿಸಲು ನಾವೆಲ್ಲರೂ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹವಾಮಾನ ಬದಲಾವಣೆಯ ಪರಿಣಾಮವನ್ನು ಎದುರಿಸುವುದು ಮತ್ತು ನಮ್ಮ ಭೂಮಿಯನ್ನು ರಕ್ಷಿಸುವುದು ನಮ್ಮೆಲ್ಲರ ಮುಂದಿರುವ ಮಹಾ ಸವಾಲು ಎಂದು ರಾಷ್ಟ್ರಪತಿಗಳು ಹೇಳಿದರು. ಈ ಸವಾಲನ್ನು ಎದುರಿಸಲು ಭಾರತ ಸರ್ಕಾರವು ಹೊಸ ರೀತಿ ಮತ್ತು ವಿಧಾನವನ್ನು ಅಳವಡಿಸಿಕೊಂಡಿದೆ. ಭಾರತ ಸರ್ಕಾರವು 2014 ರಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯವನ್ನು ಮರುನಾಮಕರಣ ಮಾಡುವ ಮೂಲಕ ಮತ್ತು ಅದರಲ್ಲಿ 'ಹವಾಮಾನ ಬದಲಾವಣೆ' ಅನ್ನು ಸೇರಿಸುವ ಮೂಲಕ ಬದಲಾವಣೆಯ ಆರಂಭಿಕ ಸೂಚನೆಯನ್ನು ನೀಡಿತು. ಈ ದಿಕ್ಕಿನಲ್ಲಿ ಮುಂದುವರಿಯುತ್ತಾ, 2019ರಲ್ಲಿ, ಎರಡು ಸಚಿವಾಲಯಗಳನ್ನು ವಿಲೀನಗೊಳಿಸುವ ಮೂಲಕ, ನೀರಿನ ಸಮಸ್ಯೆಯ ಬಗ್ಗೆ ಸಮಗ್ರ ರೀತಿಯಲ್ಲಿ ಕೆಲಸ ಮಾಡಲು ಮತ್ತು ಅದಕ್ಕೆ ಹೆಚ್ಚಿನ ಆದ್ಯತೆ ನೀಡಲು ಜಲಶಕ್ತಿ ಸಚಿವಾಲಯವನ್ನು ರಚಿಸಲಾಯಿತು.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ನೀರಿನ ಸಮರ್ಥ ಬಳಕೆ, ಜಲಮೂಲಗಳ ಸಂರಕ್ಷಣೆ, ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ನೈರ್ಮಲ್ಯವನ್ನು ಖಾತ್ರಿಪಡಿಸುವ ಮೂಲಕ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ಇತ್ತೀಚಿನ ವರ್ಷಗಳಲ್ಲಿ, ಸರ್ಕಾರದ ನೀತಿಗಳಲ್ಲಿ ನದಿಗಳ ಪುನರುಜ್ಜೀವ, ನದಿ ಜಲಾನಯನ ಪ್ರದೇಶಗಳ ಸಮಗ್ರ ನಿರ್ವಹಣೆ, ಸುಸ್ಥಿರ ರೀತಿಯಲ್ಲಿ ಜಲ ಭದ್ರತೆಯನ್ನು ಬಲಪಡಿಸಲು ಮತ್ತು ಅಸ್ತಿತ್ವದಲ್ಲಿರುವ ಅಣೇಕಟ್ಟುಗಳ  ಪುನರುಜ್ಜೀವ, ದೀರ್ಘಕಾಲ ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು  ಸೇರಿವೆ ಎಂದು ಅವರು ಹೇಳಿದರು.
 
ನೀರನ್ನು ಪ್ರತಿಯೊಬ್ಬರೂ ತಮ್ಮದೇ  ಕೆಲಸ ಅನ್ನುವ ಹಾಗೆ ಮಾಡಲು ಮತ್ತು ಜಲ ಆಂದೋಲನವನ್ನು - ಸಾಮೂಹಿಕ ಆಂದೋಲನವನ್ನಾಗಿ ಮಾಡಲು, ಭಾರತ ಸರ್ಕಾರವು 2019 ರಲ್ಲಿ ‘ಜಲ ಶಕ್ತಿ ಅಭಿಯಾನ’ವನ್ನು ಪ್ರಾರಂಭಿಸಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಮತ್ತು ಅದೇ ವರ್ಷದಲ್ಲಿ 'ಜಲ್ ಜೀವನ್ ಮಿಷನ್' ಸಹ ಪ್ರಾರಂಭವಾಯಿತು. ಕಳೆದ ವರ್ಷ ಮಾರ್ಚ್ 22 ರಂದು, 'ವಿಶ್ವ ಜಲ ದಿನ'ದಂದು, 'ಜಲ ಶಕ್ತಿ ಅಭಿಯಾನ: ಕ್ಯಾಚ್ ದ ರೈನ್' ಅಭಿಯಾನಕ್ಕೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು, ಇದನ್ನು ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಪೂರ್ವ-ಮುಂಗಾರು ಮತ್ತು ಮುಂಗಾರು ಅವಧಿಯಲ್ಲಿ  ಕೈಗೊಳ್ಳಲಾಯಿತು. ಕೊರೊನಾ ಸಾಂಕ್ರಾಮಿಕದ ಸವಾಲುಗಳ ನಡುವೆ ಈ ಅಭಿಯಾನದ ಯಶಸ್ಸಿನಲ್ಲಿ ರಾಜ್ಯ ಸರ್ಕಾರಗಳು ಶ್ಲಾಘನೀಯ ಕೊಡುಗೆ ನೀಡಿರುವುದನ್ನು ಅವರು ಶ್ಲಾಘಿಸಿದರು.

ರಾಷ್ಟ್ರೀಯ ಜಲ ಪ್ರಶಸ್ತಿ ಪುರಸ್ಕೃತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನೀರು ನಿರ್ವಹಣೆಗಾಗಿ ಮಾಡಿದ ಅನುಕರಣೀಯ ಕಾರ್ಯಗಳನ್ನು ಗಮನಿಸಿದ ರಾಷ್ಟ್ರಪತಿಗಳು, ಅಂತಹ ಉದಾಹರಣೆಗಳ ಆಧಾರದ ಮೇಲೆ ನಾವು ಜಲ-ಸುರಕ್ಷಿತ ಭವಿಷ್ಯದ ಭರವಸೆಯನ್ನು ಕಂಡುಕೊಳ್ಳಬಹುದು ಎಂದು ಹೇಳಿದರು. ರಾಷ್ಟ್ರಪತಿಗಳು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ನಮ್ಮೆಲ್ಲರಿಗೂ ಮಾದರಿಯಾಗಿ ಮತ್ತು ಪ್ರೇರಣೆಯ ಮೂಲವಾಗಿ ಮುಂದುವರಿಯಬೇಕೆಂದು ಒತ್ತಾಯಿಸಿದರು. ಈ ಪ್ರಶಸ್ತಿಗಳು ಭಾರತದ ಜನರ ಮನಸ್ಸಿನಲ್ಲಿ ನೀರಿನ ಪ್ರಜ್ಞೆಯನ್ನು ಉಂಟುಮಾಡುತ್ತದೆ ಮತ್ತು ನಡೆವಳಿಕೆಯ ಬದಲಾವಣೆಯನ್ನು ತರಲು ಸಹಾಯ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳ ಭಾಷಣವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿರಿ


*****


(Release ID: 1811054) Visitor Counter : 236