ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಒತ್ತಡ ರಹಿತ ಪರೀಕ್ಷೆಗಳನ್ನು ಖಾತ್ರಿಪಡಿಸುವುದಕ್ಕಾಗಿ ಪರೀಕ್ಷಾ ಪೇ ಚರ್ಚಾವನ್ನು ಸಾರ್ವಜನಿಕ ಆಂದೋಲನವಾಗಿಸಲು ಶ್ರೀ ಧರ್ಮೇಂದ್ರ ಪ್ರಧಾನ್ ಕರೆ


2022ರ ಏಪ್ರಿಲ್ 1 ರಂದು ನಡೆಯಲಿದೆ ಪ್ರಧಾನ ಮಂತ್ರಿ ಅವರ ’ಪರೀಕ್ಷಾ ಪೇ ಚರ್ಚಾ” ಸಂವಾದ ಕಾರ್ಯಕ್ರಮದ 5 ನೇ ಆವೃತ್ತಿ

ಭಾರತ ಮತ್ತು ಹೊರದೇಶಗಳಿಂದ ಕೋಟ್ಯಾಂತರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ವರ್ಚುವಲ್ ಮೂಲಕ ಪಾಲ್ಗೊಳ್ಳಲಿದ್ದಾರೆ.

ಸೃಜನಾತ್ಮಕ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 15.7 ಲಕ್ಷ ಮಂದಿ ಉತ್ಸಾಹದಿಂದ ನೊಂದಾಯಿಸಿಕೊಂಡಿದ್ದಾರೆ.

Posted On: 28 MAR 2022 8:03PM by PIB Bengaluru

2022 ರ ಏಪ್ರಿಲ್ 1 ರಂದು ನಡೆಯುವ ಪರೀಕ್ಷಾ ಪೇ ಚರ್ಚಾದ 5 ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಗತ್ತಿನಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಪೋಷಕರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಪರೀಕ್ಷಾ ಪೇ ಚರ್ಚಾ ಎಂಬುದು ಬಹು ನಿರೀಕ್ಷಿತ ವಾರ್ಷಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ಪ್ರಧಾನ ಮಂತ್ರಿ ಅವರು ಪರೀಕ್ಷಾ ಒತ್ತಡಕ್ಕೆ ಸಂಬಂಧಿಸಿದ ಮತ್ತು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎದುರಿಸುವ ಪ್ರಶ್ನೆಗಳಿಗೆ ತಮ್ಮ ವಿಶಿಷ್ಟ ರೀತಿಯಲ್ಲಿ,  ನೇರ ಪ್ರಸಾರ ಮೂಲಕ ಉತ್ತರಿಸಲಿದ್ದಾರೆ ಎಂದವರು ಹೇಳಿದರು.

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಸಾರ್ವಜನಿಕ ಆಂದೋಲನ ಎಂದು ಬಣ್ಣಿಸಿದ ಸಚಿವ ಪ್ರಧಾನ್ ಅವರು ದೇಶವು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದ ಹೊರಬರುತ್ತಿರುವ ಮತ್ತು ಪರೀಕ್ಷೆಗಳು ಮೊದಲಿನಂತೆ ಆಫ್ ಲೈನ್ ಗೆ ಹೊರಳುತ್ತಿರುವ ಈ ಕಾಲಘಟ್ಟದಲ್ಲಿ ಈ ವರ್ಷದ ಪಿ.ಪಿ.ಸಿ.ಯ ಮಹತ್ವ ಬಹಳ ಹೆಚ್ಚಾಗಿದೆ ಎಂದರು. . 21 ನೇ ಶತಮಾನದ ಜ್ಞಾನಾಧಾರಿತ ಆರ್ಥಿಕತೆಯನ್ನು ನಿರ್ಮಾಣ ಮಾಡುವಲ್ಲಿ ಪಿ.ಪಿ.ಸಿ.ಯಂತಹ ಉಪಕ್ರಮಗಳ ಮಹತ್ವವನ್ನು ಒತ್ತಿ ಹೇಳಿದ ಅವರು ಪ್ರಧಾನ ಮಂತ್ರಿ ಅವರು ವಿದ್ಯಾರ್ಥಿಗಳ ಜೊತೆ ನೇರವಾಗಿ ಸಂವಾದ ಮಾಡುವ ಮೂಲಕ ಪಿ.ಪಿ.ಸಿ.ಯು  ಔಪಚಾರಿಕ ಸಂಸ್ಥೆಯಾಗುತ್ತಿದೆ ಎಂದೂ ಹೇಳಿದರು. ದೇಶಾದ್ಯಂತ ಆಯ್ದ ವಿದ್ಯಾರ್ಥಿಗಳು ರಾಜ್ಯಪಾಲರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸಲು ರಾಜ ಭವನಕ್ಕೆ ಬರಲಿದ್ದಾರೆ ಎಂದೂ ಅವರು ತಿಳಿಸಿದರು. ದೇಶಾದ್ಯಂತ ರಾಜ್ಯ ಸರಕಾರಗಳು ವಿದ್ಯಾರ್ಥಿಗಳ,  ಶಿಕ್ಷಕರ ಮತ್ತು ಪೋಷಕರ  ಪಾಲ್ಗೊಳ್ಳುವಿಕೆಯನ್ನು  ಉತ್ತೇಜಿಸುತ್ತವೆ ಎಂಬ ವಿಶ್ವಾಸವನ್ನೂ ಅವರು  ವ್ಯಕ್ತಪಡಿಸಿದರು. ಪಿ.ಪಿ.ಸಿ.ಯನ್ನು ಭಾರತದಲ್ಲಿ ಮಾತ್ರವಲ್ಲ ಭಾರತೀಯ ಜನಸಮುದಾಯವನ್ನು ತಲುಪುವುದಕ್ಕಾಗಿ ಇತರ ದೇಶಗಳಲ್ಲೂ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿದ ಸಚಿವರು ಈ ಕಾರ್ಯಕ್ರಮವನ್ನು ಜನಾಂದೋಲನವಾಗಿಸುವುದಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಒತ್ತಡ ರಹಿತ ಪರೀಕ್ಷೆಯನ್ನು ಖಾತ್ರಿಪಡಿಸುವುದಕ್ಕಾಗಿ ಮಾಧ್ಯಮಗಳ ಸಹಕಾರಕ್ಕೆ ಮನವಿ ಮಾಡಿದರು.

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವು ಯುವ ಜನತೆಗಾಗಿ ಒತ್ತಡ ರಹಿತ ವಾತಾವರಣ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಆರಂಭವಾದ ಬೃಹತ್ ಆಂದೋಲನವಾದ “ಎಕ್ಸಾಂ ವಾರಿಯರ್ಸ್” ನ ಭಾಗ ಎಂದೂ ಶ್ರೀ ಪ್ರಧಾನ್ ಒತ್ತಿ ಹೇಳಿದರು. ಪ್ರತಿಯೊಂದು ಮಗುವಿನ ವಿಶಿಷ್ಟ ಗುರುತಿಸುವಿಕೆಯನ್ನು ಆಚರಿಸಲು, ಅದನ್ನು ಉತ್ತೇಜಿಸಲು ಮತ್ತು ಅದರ ಪರಿಪೂರ್ಣ ಅಭಿವ್ಯಕ್ತಿಗಾಗಿ ವಾತಾವರಣವನ್ನು ನಿರ್ಮಾಣ ಮಾಡಲು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಮಾಜವನ್ನು ಒಗ್ಗೂಡಿಸುವುದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಡೆಸಿದ ಪ್ರಯತ್ನಗಳ ಫಲ ಈ ಆಂದೋಲನವಾಗಿದೆ. 

5ನೇ ಆವೃತ್ತಿಯು ಹೊಸ ದಿಲ್ಲಿಯಲ್ಲಿ,  ಪುರಭವನದ ಸಂವಾದ  ಮಾದರಿಯಲ್ಲಿ ತಲ್ಕತೋರಾ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಭಾರತದ ಮತ್ತು ವಿದೇಶದಲ್ಲಿರುವ ಕೋಟ್ಯಾಂತರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಇದರಲ್ಲಿ ಭಾಗವಹಿಸಲಿರುವರು ಎಂದವರು ತಿಳಿಸಿದರು.

ಪ್ರಧಾನ ಮಂತ್ರಿ ಅವರ ಜೊತೆ ಪ್ರಶ್ನೆ ಕೇಳುವ ಅವಕಾಶ ಇರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಪಟ್ಟಿಯನ್ನು ಆನ್ ಲೈನ್ ಮೂಲಕ ಆಯೋಜಿಸಲಾದ ವಿವಿಧ ವಿಷಯಗಳನ್ನು ಕುರಿತ  ಸೃಜನಾತ್ಮಕ ಬರವಣಿಗೆ ಸ್ಪರ್ಧೆಯ ಆಧಾರದಲ್ಲಿ ತಯಾರಿಸಲಾಗಿದೆ. 2021 ರ ಡಿಸೆಂಬರ್ 28 ರಿಂದ 2022 ರ ಫೆಬ್ರವರಿ 3 ರವರೆಗೆ ಮೈಗವ್ ವೇದಿಕೆಯ ಮೂಲಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಶ್ರೀ ಪ್ರಧಾನ್ ವಿವರಿಸಿದರು. ಈ ವರ್ಷ ರಚನಾತ್ಮಕ ಬರವಣಿಗೆ ಸ್ಪರ್ಧೆಗೆ 15.7 ಲಕ್ಷಕ್ಕೂ ಅಧಿಕ ಮಂದಿ ನೊಂದಾಯಿಸಿಕೊಂಡಿರುವುದಕ್ಕೆ ಸಚಿವರು ತೃಪ್ತಿ ವ್ಯಕ್ತಪಡಿಸಿದರು. 

ಮೈಗವ್ ನಲ್ಲಿ ಆಯೋಜಿಸಲಾಗಿದ್ದ ಸ್ಪರ್ಧಾ ಕಾರ್ಯಕ್ರಮಗಳ ಮೂಲಕ ಆಯ್ಕೆ ಮಾಡಲಾದವರಿಗೆ ಮೆಚ್ಚುಗೆ ಪತ್ರವನ್ನು ನೀಡಲಾಗುವುದು ಮತ್ತು ಪ್ರಧಾನ ಮಂತ್ರಿ ಅವರು ಬರೆದ ಎಕ್ಸಾಂ ವಾರಿಯರ್ಸ್ ಪುಸ್ತಕವನ್ನೊಳಗೊಂಡ ವಿಶೇಷ ಪರೀಕ್ಷಾ ಪೇ ಚರ್ಚಾ ಕಿಟ್ ನೀಡಲಾಗುವುದು.

ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ವತಿಯಿಂದ  ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮೊದಲ ಮೂರು ಆವೃತ್ತಿಯ ಪಿ.ಪಿ.ಸಿ.ಗಳನ್ನು ಹೊಸ ದಿಲ್ಲಿಯ ಪುರ ಭವನದಲ್ಲಿ ಸಂವಾದ ರೂಪದಲ್ಲಿ ನಡೆಸಲಾಗಿತ್ತು. ಪ್ರಧಾನ ಮಂತ್ರಿ ಅವರ ಸಂವಾದ ಕಾರ್ಯಕ್ರಮದ ಮೊದಲ ಆವೃತ್ತಿ  “ಪರೀಕ್ಷಾ ಪೇ ಚರ್ಚಾ 1.0” 2018 ರ ಫೆಬ್ರವರಿ 16 ರಂದು ನಡೆದಿತ್ತು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಜೊತೆ ಎರಡನೆ ಆವೃತ್ತಿ “ಪರೀಕ್ಷಾ ಪೇ ಚರ್ಚಾ 2.0 ” 2019 ರ ಜನವರಿ 29 ರಂದು ಮತ್ತು ಮೂರನೇ ಆವೃತ್ತಿ 2020ರ ಜನವರಿ 20 ರಂದು ನಡೆದಿತ್ತು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ನಾಲ್ಕನೇ ಆವೃತ್ತಿಯನ್ನು 2021ರ  ಏಪ್ರಿಲ್ 7ರಂದು ಆನ್ ಲೈನ್ ಮೂಲಕ ನಡೆಸಲಾಗಿತ್ತು.

ಕಾರ್ಯಕ್ರಮವು ದೂರದರ್ಶನದಲ್ಲಿ (ಡಿ.ಡಿ.ನ್ಯಾಶನಲ್, ಡಿ.ಡಿ. ನ್ಯೂಸ್, ಡಿ.ಡಿ. ಇಂಡಿಯಾ), ಬಾನುಲಿ ವಾಹಿನಿಗಳಲ್ಲಿ, ಟಿ.ವಿ. ವಾಹಿನಿಗಳಲ್ಲಿ, ಎಡು ಮಿನಿಸ್ಟರ್ ಆಫ್ ಇಂಡಿಯಾ, ನರೇಂದ್ರ ಮೋದಿ, ಪಿಎಂಇಂಡಿಯಾ, ಪಿಐಬಿಇಂಡಿಯಾ, ದೂರದರ್ಶನ್ ನ್ಯಾಶನಲ್, ಮೈಗವಿಂಡಿಯಾ, ಡಿ.ಡಿ.ನ್ಯೂಸ್, ರಾಜ್ಯಸಭಾ ಟಿ.ವಿ, ಸ್ವಯಂ ಪ್ರಭಾ ಸಹಿತ ಡಿಜಿಟಲ್ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ.

****


(Release ID: 1810837) Visitor Counter : 181