ಪ್ರಧಾನ ಮಂತ್ರಿಯವರ ಕಛೇರಿ

2ನೇ ಭಾರತ ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾನ್ಯ ಸ್ಕಾಟ್ ಮಾರಿಸನ್ 

Posted On: 21 MAR 2022 6:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಮಾನ್ಯ ಸ್ಕಾಟ್ ಮಾರಿಸನ್ ಅವರಿಂದು 2ನೇ ಭಾರತ- ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆ ನಡೆಸಿದರು, ಈ ವೇಳೆ, ಅವರು ಎರಡೂ ದೇಶಗಳ ನಡುವಿನ ಬಹುಮುಖಿ ಬಾಂಧವ್ಯದ ಪರಾಮರ್ಶೆ ನಡೆಸಿ, ಪ್ರಾದೇಶಿಕ ಮತ್ತು ಜಾಗತಿಕ ಬೆಳೆವಣಿಗೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. 

ಮೊದಲಿಗೆ ಪ್ರಧಾನಮಂತ್ರಿ ಮೋದಿ ಅವರು ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್ ಲ್ಯಾಂಡ್ ನಲ್ಲಿ ಭೀಕರ ಪ್ರವಾಹದಿಂದ ಉಂಟಾದ ಹಾನಿ ಮತ್ತು ಜೀವ ಹಾನಿಗೆ ತಮ್ಮ ಸಂತಾಪ ವ್ಯಕ್ತಪಡಿಸಿದರು. 
ಇಬ್ಬರೂ ನಾಯಕರು 2020ರ ಜೂನ್ ನಲ್ಲಿ ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಸ್ಥಾಪಿಸಲಾದ ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವದ ಅಡಿಯಲ್ಲಿ ಸಾಧಿಸಲಾಗಿರುವ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ಮೋದಿ ಅವರು, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಶಿಕ್ಷಣ ಮತ್ತು ನಾವಿನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ನಿರ್ಣಾಯಕ ಖನಿಜಗಳು, ಜಲ ನಿರ್ವಹಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನ, ಕೋವಿಡ್ -19ಕ್ಕೆ ಸಂಬಂಧಿಸಿದ ಸಂಶೋಧನೆ ಇತ್ಯಾದಿ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಬಾಂಧವ್ಯ ವರ್ಧನೆಯ ವ್ಯಾಪ್ತಿಯ ಬಗ್ಗೆ ಪ್ರಧಾನಿ ಮೋದಿ ಅವರು ತೃಪ್ತಿ ವ್ಯಕ್ತಪಡಿಸಿದರು. 
ಪ್ರಧಾನಮಂತ್ರಿ ಮೋದಿ ಅವರು 29 ಭಾರತದ ಪ್ರಾಚೀನ ಕಲಾಕೃತಿಗಳನ್ನು ಹಿಂತಿರುಗಿಸಿದ್ದಕ್ಕಾಗಿ  ಮಾನ್ಯ ಸ್ಕಾಟ್ ಮಾರಿಸನ್ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಕಲಾಕೃತಿಗಳಲ್ಲಿ ದೇಶದ ವಿವಿಧ ಭಾಗಗಳ ಶಿಲ್ಪಗಳು, ಚಿತ್ರಗಳು ಮತ್ತು ಛಾಯಾಚಿತ್ರಗಳು ಸೇರಿದ್ದು, ಇದರಲ್ಲಿ ಕೆಲವು 9 ಮತ್ತು 10ನೇ ಶತಮಾನದ್ದಾಗಿವೆ.  ಈ ಕಲಾಕೃತಿಗಳಲ್ಲಿ 12ನೇ ಶತಮಾನದ ಚೋಳರ ಕಾಲದ ಕಂಚಿನ ಪ್ರತಿಮೆಗಳು, 11-12ನೇ ಶತಮಾನದ ರಾಜಾಸ್ಥಾನದ ಜೈನ ಶಿಲ್ಪಗಳು, ಗುಜರಾತ್ ನ 12-13ನೇ ಶತಮಾನದ ಬಳಪದ ಕಲ್ಲಿನ ದೇವಿ ಮಹಿಷಾಸುರಮರ್ದಿನಿ, 18-19ನೇ ಶತಮಾನದ ಚಿತ್ರಗಳು ಮತ್ತು  ಆರಂಭಿಕ ಕಾಲದ ಜಿಲಿಟಿನ್ ಬೆಳ್ಳಿಯ ಛಾಯಾಚಿತ್ರಗಳೂ ಸೇರಿವೆ.
ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಸಮುದಾಯದ ಕಾಳಜಿ ವಹಿಸಿದ  ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಮಾರಿಸನ್ ಅವರಿಗೆ ಧನ್ಯವಾದ ಅರ್ಪಿಸಿದರು.
ಮುಕ್ತ, ಅಂತರ್ಗತ ಮತ್ತು ಸಮೃದ್ಧ ಭಾರತ-ಪೆಸಿಫಿಕ್ ಅನ್ನು ಒಳಗೊಂಡ ಹಂಚಿಕೆಯ ಮೌಲ್ಯಗಳು ಮತ್ತು ಸಮಾನ ಹಿತಾಸಕ್ತಿಗಳ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ವ್ಯೂಹಾತ್ಮಕ ಸಮಾನ ಲಕ್ಷಣವನ್ನು ಇಬ್ಬರೂ ನಾಯಕರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಆಳವಾದ ಸಮಗ್ರ ವ್ಯೂಹಾತ್ಮಕ ಸಹಯೋಗದ ವಿವಿಧ ಅಂಶಗಳನ್ನು ಒಳಗೊಂಡ ಜಂಟಿ ಹೇಳಿಕೆಯನ್ನು ನೀಡಲಾಯಿತು. ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವದ ಅಡಿಯಲ್ಲಿ ಪ್ರಧಾನ ಮಂತ್ರಿಗಳ ನಡುವೆ ವಾರ್ಷಿಕ ಶೃಂಗಸಭೆಗಳನ್ನು ನಡೆಸಲು ಎರಡೂ ಕಡೆಯವರು ಸಮ್ಮತಿಸಿ, ದ್ವಿಪಕ್ಷೀಯ ಸಂಬಂಧಕ್ಕೆ ವಿಶೇಷ ಆಯಾಮವನ್ನೂ ಆ ಮೂಲಕ ಸೇರಿಸಿದರು.

 ***



(Release ID: 1807910) Visitor Counter : 143