ಪ್ರಧಾನ ಮಂತ್ರಿಯವರ ಕಛೇರಿ

ಜಪಾನ್ ಪ್ರಧಾನ ಮಂತ್ರಿ ಭಾರತ ಭೇಟಿ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಪತ್ರಿಕಾ ಹೇಳಿಕೆ ಬಿಡುಗಡೆ

Posted On: 19 MAR 2022 10:55PM by PIB Bengaluru

ಘನತೆವೆತ್ತ ಜಪಾನ್ ಪ್ರಧಾನ ಮಂತ್ರಿ ಕಿಶಿದಾ,
ಗೌರವಾನ್ವಿತ ಪ್ರತಿನಿಧಿಗಳೆ,
 
ನಮಸ್ಕಾರಗಳು!
ಜಪಾನ್ ಪ್ರಧಾನ ಮಂತ್ರಿಯಾದ ನಂತರ ಭಾರತಕ್ಕೆ ಚೊಚ್ಚಲ ಭೇಟಿ ನೀಡುತ್ತಿರುವ ಕಿಶಿದಾ ಅವರನ್ನು ಸ್ವಾಗತಿಸಲು ನನಗೆ ಅತೀವ ಸಂತೋಷವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಜಪಾನ್ ನಲ್ಲಿ ಸಂಭವಿಸಿದ ಭೂಕಂಪನದಲ್ಲಿ ಸಾವಿಗೀಡಾದ ಸಂತ್ರಸ್ತರು ಮತ್ತು ಆಸ್ತಿಪಾಸ್ತಿ ಹಾನಿಗೆ ನಾನು ಇಡೀ ಭಾರತ ಜನತೆಯ ಪರವಾಗಿ ಸಂತಾಪ ಸೂಚಿಸುತ್ತೇನೆ.
ಸ್ನೇಹಿತರೆ, 
ಜಪಾನ್ ನೂತನ ಪ್ರಧಾನಿ ಕಿಶಿದಾ ಅವರು ಭಾರತದ ಹಳೆಯ ಸ್ನೇಹಿತರು. ವಿದೇಶಾಂಗ ಸಚಿವರಾಗಿ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದ ಅವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ ಸಿಕ್ಕಿತ್ತು. ಕಳೆದ ಕೆಲವು ವರ್ಷಗಳಿಂದ ಭಾರತ-ಜಪಾನ್ ನಡುವಿನ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಕಂಡುಬಂದಿರುವ ಅಭೂತಪೂರ್ವ ಪ್ರಗತಿಯಲ್ಲಿ ಪ್ರಧಾನ ಮಂತ್ರಿ ಕಿಶಿದಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಇಂದಿನ ಶೃಂಗಸಭೆಯನ್ನು ಮಹತ್ವದ ಕಾಲಘಟ್ಟದಲ್ಲಿ ಆಯೋಜಿಸಲಾಗಿದೆ. ಇಡೀ ವಿಶ್ವ ಇಂದಿರೂ ಸಹ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಪರಿಣಾಮಗಳಿಂದ ಹೋರಾಡುತ್ತಲೇ ಇದೆ. 
ಜಾಗತಿಕ ಆರ್ಥಿಕ ಚೇತರಿಕೆ ಪ್ರಕ್ರಿಯೆಗೆ ಸಾಂಕ್ರಾಮಿಕ ಸೋಂಕು ಇನ್ನೂ ಅಡ್ಡಿಪಡಿಸುತ್ತಿದೆ.
ಭೌಗೋಳಿಕ-ರಾಜಕೀಯ ಘಟನೆಗಳು ಸಹ ಹೊಸ ಸವಾಲುಗಳನ್ನು ಒಡ್ಡುತ್ತಿವೆ.
ಈ ಸಂದರ್ಭದಲ್ಲಿ, ಭಾರತ-ಜಪಾನ್ ಪಾಲುದಾರಿಕೆಯನ್ನು ಇನ್ನಷ್ಟು ದೀರ್ಘಗೊಳಿಸುವುದು ಎರಡೂ ದೇಶಗಳಿಗೆ ಮಾತ್ರವಲ್ಲ. ಇದು ಇಂಡೋ-ಪೆಸಿಫಿಕ್ ವಲಯದಲ್ಲಿ ಮತ್ತು ಇಡೀ ವಿಶ್ವ ಮಟ್ಟದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಉತ್ತೇಜಿಸುತ್ತದೆ.
ನಮ್ಮ ಪರಸ್ಪರ ನಂಬಿಕೆ, ನಮ್ಮ ನಾಗರಿಕ ಸಂಬಂಧಗಳು, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಕಾನೂನಿನ ನಿಯಮಗಳಂತಹ ನಮ್ಮ ಹಂಚಿಕೆಯ ಮೌಲ್ಯಗಳು ನಮ್ಮ ದೀರ್ಘ ಸಂಬಂಧಗಳ ಪ್ರಮುಖ ಭಾಗದಲ್ಲಿದ್ದು, ಅವು  ಬಲ ನೀಡುತ್ತಿವೆ.
ಇಂದು ನಮ್ಮ ಚರ್ಚೆಗಳು ನಮ್ಮ ಪರಸ್ಪರ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ದಾರಿ ಮಾಡಿಕೊಟ್ಟಿವೆ.
ದ್ವಿಪಕ್ಷೀಯ ವಿಷಯಗಳ ಜೊತೆಗೆ ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ನಾವು ಅಭಿಪ್ರಾಯ, ಹಂಚಿತ ಮೌಲ್ಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ.
ನಾವು ವಿಶ್ವಸಂಸ್ಥೆ ಸೇರಿದಂತೆ ನಾನಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಸಮನ್ವಯವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ.
ಸ್ನೇಹಿತರೆ,
ಭಾರತ-ಜಪಾನ್ ಆರ್ಥಿಕ ಪಾಲುದಾರಿಕೆಯು ಕಳೆದ ಹಲವಾರು ವರ್ಷಗಳಿಂದ ಹಿಂದೆಂದೂ ಕಾಣದ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಎರಡೂ ದೇಶಗಳ ವ್ಯವಹಾರಗಳಲ್ಲಿ ಅಪಾರವಾದ ನಂಬಿಕೆ, ಉತ್ಸಾಹವಿದೆ. ಜಪಾನ್ ಭಾರತದಲ್ಲಿ ಅತಿದೊಡ್ಡ ಹೂಡಿಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ, ಇದು ನಮಗೆ ವಿಶ್ವ ದರ್ಜೆಯ ಪಾಲುದಾರ ದೇಶವಾಗಿದೆ. ಈ ಕೊಡುಗೆಗಾಗಿ ನಾವು ತುಂಬಾ ಕೃತಜ್ಞರಾಗಿದ್ದೇವೆ.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಯು ಉತ್ತಮ ಪ್ರಗತಿಯಲ್ಲಿದೆ. 'ಒಂದು ತಂಡ ಒಂದು ಯೋಜನೆ' ಎಂಬ ವಿಧಾನದೊಂದಿಗೆ ಎರಡೂ ದೇಶಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಯೋಜನೆಯು ಭಾರತ-ಜಪಾನ್ ಪಾಲುದಾರಿಕೆಗೆ ಉತ್ತಮ ಉದಾಹರಣೆಯಾಗಿದೆ.
ನಾವು 2014ರಲ್ಲಿ ನಿಗದಿಪಡಿಸಿದಂತೆ 5 ಐದು ಟ್ರಿಲಿಯನ್ ಯೆನ್‌(ಜಪಾನ್ ಕರೆನ್ಸಿ) ಹೂಡಿಕೆಯ ಗುರಿ ಸಾಧಿಸಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ.
ನಾವು ಈಗ ನಮ್ಮ ಮಹತ್ವಾಕಾಂಕ್ಷೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. 5 ಟ್ರಿಲಿಯನ್ ಯೆನ್‌ ಹೂಡಿಕೆಯ ಹೊಸ ಗುರಿ ಹಾಕಿಕೊಂಡಿದ್ದೇವೆ. ಅಂದರೆ ಮುಂಬರುವ 5 ವರ್ಷಗಳಲ್ಲಿ ಜಪಾನ್ ಭಾರತದಲ್ಲಿ ಸುಮಾರು 3 ಲಕ್ಷದ 20 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ.
 
ಕಳೆದ ಕೆಲವು ವರ್ಷಗಳಲ್ಲಿ, ಭಾರತವು ಸಮಗ್ರ ಆರ್ಥಿಕ ಸುಧಾರಣೆಗಳನ್ನು ಅಳವಡಿಸಿಕೊಂಡಿದೆ. ಉದ್ಯಮ ವ್ಯವಹಾರವನ್ನು ಸುಲಭಗೊಳಿಸುವಲ್ಲಿ ಬಹುದೊಡ್ಡ ಸುಧಾರಣೆಗಳನ್ನು ಕೈಗೊಂಡಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ.
ಇಂದು ಭಾರತವು ‘ಇಡೀ ವಿಶ್ವಕ್ಕಾಗಿ ಭಾರತದಲ್ಲಿ ಉತ್ಪನ್ನಗಳನ್ನು ತಯಾರಿಸಿ (ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್)’ ಪರಿಕಲ್ಪನೆಯ ಅಮಿತ ಸಾಧ್ಯತೆಗಳನ್ನು ಪ್ರಸ್ತುತಪಡಿಸುತ್ತಿದೆ.
ಈ ನಿಟ್ಟಿನಲ್ಲಿ, ಜಪಾನ್ ಕಂಪನಿಗಳು ದೀರ್ಘಕಾಲದವರೆಗೆ ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಗಳಾಗಿವೆ.
ತಂತ್ರಜ್ಞಾನ ಮತ್ತು ಹೊಸತನದ ಶೋಧದ ಕ್ಷೇತ್ರಗಳಲ್ಲಿ ನಮ್ಮ ನಡುವಿನ ಪಾಲುದಾರಿಕೆಗೆ ಹೊಸ ಆಯಾಮಗಳನ್ನು ಸೇರಿಸಲಾಗುತ್ತಿದೆ.
ಭಾರತದಲ್ಲಿ ಜಪಾನ್ ಕಂಪನಿಗಳಿಗೆ ಅನುಕೂಲಕರ ಉದ್ಯಮ ಪರಿಸರ ಒದಗಿಸಲು ನಾವು ಬದ್ಧರಾಗಿದ್ದೇವೆ.
ಇಂದು ಪ್ರಾರಂಭಿಸಲಾದ ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕ ಪಾಲುದಾರಿಕೆ ಮಾರ್ಗಸೂಚಿಯು ಇದಕ್ಕೆ ಪರಿಣಾಮಕಾರಿ ಕಾರ್ಯವಿಧಾನವಾಗಿದೆ ಎಂಬುದನ್ನು ಸಾಬೀತುಪಡಿಸಲಿದೆ.
ಜಪಾನ್‌ನೊಂದಿಗಿನ ನಮ್ಮ ಕೌಶಲ್ಯ ಪಾಲುದಾರಿಕೆಯು ಈ ದಿಕ್ಕಿನಲ್ಲಿ ಪರಿಣಾಮಕಾರಿ ಪಾತ್ರ ವಹಿಸಲಿದೆ.
 
ಸ್ನೇಹಿತರೆ,
ಭಾರತ ಮತ್ತು ಜಪಾನ್ ಎರಡೂ ಸುರಕ್ಷಿತ, ವಿಶ್ವಾಸಾರ್ಹ, ಊಹಿಸಬಹುದಾದ ಮತ್ತು ಸ್ಥಿರವಾದ ಇಂಧನ ಪೂರೈಕೆಯ ಪ್ರಾಮುಖ್ಯವನ್ನು ಅರ್ಥ ಮಾಡಿಕೊಳ್ಳುತ್ತಿವೆ.
ಸುಸ್ಥಿರ ಆರ್ಥಿಕ ಬೆಳವಣಿಗೆಯ ಗುರಿ ಸಾಧಿಸಲು ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಭಾಯಿಸಲು ಇದು ಬಹಳ ಅವಶ್ಯಕವಾಗಿದೆ.
ನಮ್ಮ ಸ್ವಚ್ಛ ಇಂಧನ ಪಾಲುದಾರಿಕೆಯು ಈ ದಿಕ್ಕಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.
ಇಂದು ನಾವು ಇತರ ಹಲವು ಪ್ರಮುಖ ವಿಚಾರಗಳಿಗೆ ಒಪ್ಪಿಗೆ ಸೂಚಿಸಿದ್ದೇವೆ ಮತ್ತು ಘೋಷಣೆಗಳನ್ನು ಮಾಡಿದ್ದೇವೆ.
ಪ್ರಧಾನ ಮಂತ್ರಿ ಕಿಶಿದಾ ಅವರ ಈ ಭೇಟಿಯು ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಗೆ ಹೊಸ ಆಯಾಮಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದೆ.
 
ಮತ್ತೊಮ್ಮೆ, ನಾನು ಪ್ರಧಾನ ಮಂತ್ರಿ ಕಿಶಿದಾ ಮತ್ತು ಭಾರತಕ್ಕೆ ಭೇಟಿ ನೀಡಿರುವ ಅವರ ನಿಯೋಗಕ್ಕೆ ಆತ್ಮೀಯ ಸ್ವಾಗತ ನೀಡುತ್ತೇನೆ.
ಧನ್ಯವಾದಗಳು!
 
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಪತ್ರಿಕಾ ಹೇಳಿಕೆಯ ಅಂದಾಜು  ಅನುವಾದ ಇದಾಗಿದೆ. ಅವರ ಮೂಲ ಪತ್ರಿಕಾ ಹೇಳಿಕೆ ಹಿಂದಿ ಭಾಷೆಯಲ್ಲಿದೆ.

***



(Release ID: 1807409) Visitor Counter : 198