ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ರಾಷ್ಟ್ರೀಯ ಯುವ ಸಂಸತ್ ಉತ್ಸವ 2022ರ ರಾಷ್ಟ್ರೀಯ ಸುತ್ತಿನ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಇಂದು ಮಾತನಾಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್
ನಾವು ಭಾರತ @100 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ಭಾರತವನ್ನು ಪರಿವರ್ತಿಸಲು ಪರಿಹಾರಗಳನ್ನು ಕಂಡುಕೊಳ್ಳಬೇಕು: ಶ್ರೀ ಅನುರಾಗ್ ಠಾಕೂರ್
Posted On:
10 MAR 2022 2:49PM by PIB Bengaluru
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರಿಂದು ನವದೆಹಲಿಯ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ರಾಷ್ಟ್ರೀಯ ಯುವ ಸಂಸತ್ ಉತ್ಸವ (ಎನ್.ವೈ.ಪಿ.ಎಫ್.) 2022ರ 3ನೇ ಆವೃತ್ತಿಯ ರಾಷ್ಟ್ರೀಯ ಸುತ್ತಿನ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಕಾರ್ಯದರ್ಶಿ, ಶ್ರೀಮತಿ ಸುಜಾತಾ ಚತುರ್ವೇದಿ, ರಾಜ್ಯಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ.ಮೋದಿ ಮತ್ತು ಸಚಿವಾಲಯ ಮತ್ತು ಸಂಸತ್ತಿನ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲೋಕಸಭೆಯ ಸ್ಪೀಕರ್, ಶ್ರೀ ಓಂ ಬಿರ್ಲಾ ಅವರು 2022ರ ಮಾರ್ಚ್ 11ರಂದು ಎನ್.ವೈ.ಪಿ.ಎಫ್.ನ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರೀಯ ಸುತ್ತಿನ ಪ್ರಥಮ ಮೂರು ಬಹುಮಾನ ವಿಜೇತರು ಸಹ ಸಮಾರೋಪ ಸಮಾರಂಭದ ವೇಳೆ ಲೋಕಸಭಾ ಸ್ಪೀಕರ್ ಅವರ ಮುಂದೆ ಮಾತನಾಡುವ ಅವಕಾಶ ಪಡೆಯಲಿದ್ದಾರೆ.
ಶ್ರೀ ಅನುರಾಗ್ ಠಾಕೂರ್ ಅವರು ತಮ್ಮ ಭಾಷಣದಲ್ಲಿ, "ಈ ವರ್ಷದ ರಾಷ್ಟ್ರೀಯ ಯುವ ಸಂಸತ್ ಉತ್ಸವದ ವಿಷಯ 'ನವ ಭಾರತದ ಧ್ವನಿಯಾಗಿರಿ ಮತ್ತು ಪರಿಹಾರಗಳನ್ನು ಕಂಡುಕೊಳ್ಳಿ ಮತ್ತು ನೀತಿಗೆ ಕೊಡುಗೆ ನೀಡಿ' ಎಂಬುದಾಗಿದೆ. ಘನತ್ಯಾಜ್ಯ ನಿರ್ವಹಣೆ, ಹಸಿವು ನಿವಾರಣೆ, ಲಿಂಗ ಸಮಾನತೆ, ಕೈಗೆಟಕುವ ದರದ ಮತ್ತು ಶುದ್ಧ ಇಂಧನ, ಶುದ್ಧ ನೀರು ಮತ್ತು ನೈರ್ಮಲ್ಯದಿಂದ ಹಿಡಿದು ಒಂದು ಉತ್ತಮ ಉದ್ದೇಶಕ್ಕಾಗಿ ಗಮನಕೊಡುವಂತೆ ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ ಎಂದರು. ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುವಾಗ, ನಾವು ಇಲ್ಲಿಯವರೆಗೆ ಸಾಧಿಸಿರುವ ಪ್ರಗತಿಯ ಕುರಿತಂತೆ ಚರ್ಚಿಸಲು ಮತ್ತು ನಾವು ಭಾರತ @ 100 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ಭಾರತವನ್ನು ಪರಿವರ್ತಿಸಲು ಪರಿಹಾರಗಳನ್ನು ಕಂಡುಕೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಆರೋಗ್ಯ, ಕ್ರೀಡೆ, ಮಾಧ್ಯಮ, ಸಾರಿಗೆ, ಮೂಲಸೌಕರ್ಯ, ವಿದೇಶಾಂಗ ವ್ಯವಹಾರಗಳ ಕ್ಷೇತ್ರಗಳಲ್ಲಿ ಶತಕೋಟಿ ಜನರ ಜೀವನವನ್ನು ಪರಿವರ್ತಿಸಲು ಯುವಕರು ಏನು ಮಾಡಬಹುದು? 1 ಶತಕೋಟಿ ಜನರು ಮಾನವೀಯತೆಯ ಭವಿಷ್ಯ ಮತ್ತು 'ಸುಗಮ ಜೀವನ'ಕ್ಕೆ ಏನು ಕೊಡುಗೆ ನೀಡಬಹುದು? ಎಂಬ ಬಗ್ಗೆ ಸಮಾಲೋಚಿಸಿ ಎಂದರು.
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಯುವ ಸಂಸತ್ತು ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ರೀ ಠಾಕೂರ್ ಹೇಳಿದರು. ಯುವಕರು ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಸ್ಫೂರ್ತಿ ಪಡೆಯಲು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಆಗ್ರಹಿಸಿದರು.
ಆತ್ಮನಿರ್ಭರ ಭಾರತ್ ಕುರಿತು ಮಾತನಾಡಿದ ಶ್ರೀ ಠಾಕೂರ್, ಸಾಂಕ್ರಾಮಿಕದ ಸಮಯದಲ್ಲಿ ಇಡೀ ಜಗತ್ತು ಹೆಣಗಾಡುತ್ತಿರುವಾಗ, ಭಾರತವು ಈ ಸಂದರ್ಭಕ್ಕೆ ಪುಟಿದೆದ್ದು ಪರಿಸ್ಥಿತಿಯನ್ನು ನಿವಾರಿಸಲು ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಿತು. ಇದರೊಂದಿಗೆ, ಸರಿಯಾದ ದೃಷ್ಟಿ ಮತ್ತು ನಾಯಕತ್ವದಿಂದ ನಾವು ಎಲ್ಲಾ ಪ್ರತಿಕೂಲತೆಗಳನ್ನು ಎದುರಿಸಬಹುದು ಎಂಬುದಕ್ಕೆ ನಾವು ಪ್ರಪಂಚದ ಮುಂದೆ ಒಂದು ಉದಾಹರಣೆಯನ್ನು ನೀಡುತ್ತೇವೆ. ಯುವಕರು ಸಹ ಈ ಗುಣವನ್ನು ಮೈಗೂಡಿಸಿಕೊಳ್ಳಬೇಕು ಮತ್ತು ನಾವು 100ನೇ ವರ್ಷಕ್ಕೆ ಕಾಲಿಟ್ಟಾಗ ನಮ್ಮ ರಾಷ್ಟ್ರಕ್ಕೆ ಅದ್ಭುತಗಳನ್ನು ಸಾಧಿಸಲು ಒಗ್ಗಟ್ಟಿನ ಮನೋಭಾವದಿಂದ ದೇಶವನ್ನು ಮುನ್ನಡೆಸಬೇಕು ಎಂದರು.
ಯುವಕರ ಉತ್ಸಾಹ ಮತ್ತು ಭಾಗವಹಿಸುವಿಕೆಯಿಂದ ದೇಶಕ್ಕೆ ಅಡಿಪಾಯ ಹಾಕಲಾಗಿದೆ ಎಂದು ಪುನರುಚ್ಚರಿಸಿದ ಸಚಿವರು, ಯುವಕರು ದೇಶ ಮತ್ತು ಸಮಾಜವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲರು, ಯುವಕರು ದೇಶದ ಇಂದಿನ ಪೀಳಿಗೆಯಾಗಿದ್ದು ಅವರು ಹಿಂದಿನ ಮತ್ತು ಭವಿಷ್ಯದ ಪೀಳಿಗೆಯ ನಡುವಿನ ಸೇತುವೆಯಾಗಿದ್ದಾರೆಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೌಶಲ್ಯ ಭಾರತ, ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾ (ಸದೃಢ ಭಾರತ)ದಂತಹ ಯೋಜನೆಗಳನ್ನು ಉತ್ತೇಜಿಸಿದ್ದಾರೆ, ಅದು ಕೋಟಿಗಟ್ಟಲೆ ಯುವಕರಿಗೆ ಕೌಶಲ್ಯವನ್ನು ನೀಡಿರುವುದಲ್ಲದೆ, ಬಲಿಷ್ಠ ಭಾರತಕ್ಕೆ ಅಡಿಪಾಯ ಹಾಕುತ್ತಿದೆ ಎಂದು ಶ್ರೀ ಠಾಕೂರ್ ಹೇಳಿದರು. ಯುವ ಸಂಸತ್ತಿನ ವಿವಿಧ ಸುತ್ತುಗಳಲ್ಲಿ ಭಾಗವಹಿಸಿದ ಯುವಕರನ್ನು ಕೇಂದ್ರ ಸಚಿವರು ಶ್ಲಾಘಿಸಿದರು ಮತ್ತು ರಾಷ್ಟ್ರೀಯ ಯುವ ಸಂಸತ್ ಉತ್ಸವ 2022ರ 3 ನೇ ಆವೃತ್ತಿಯ ಅಂತಿಮ ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಶ್ರೀಮತಿ. ಸುಜಾತಾ ಚತುರ್ವೇದಿ ಮಾತನಾಡಿ, ರಾಷ್ಟ್ರೀಯ ಯುವ ಸಂಸತ್ತಿನ ಉದ್ದೇಶವು ಯುವಕರಿಗೆ ದೇಶಕ್ಕಾಗಿ ಅವರ ಆಲೋಚನೆಗಳು ಮತ್ತು ಕನಸುಗಳನ್ನು ಬಹಿರಂಗಪಡಿಸಲು ವೇದಿಕೆ ಕಲ್ಪಿಸುವುದಾಗಿದೆ ಮತ್ತು ಸರ್ಕಾರದ ವಿವಿಧ ಯೋಜನೆಗಳು ಮತ್ತು ಚಟುವಟಿಕೆಗಳನ್ನು ಯುವಜನರಿಗೆ ಆಕರ್ಷಕ ಸಂವಾದಾತ್ಮಕ ವೇದಿಕೆಯಲ್ಲಿ ಪ್ರಚಾರ ಮಾಡುತ್ತದೆ ಮತ್ತು ನಾಗರಿಕ ಕಾರ್ಯಕ್ರಮಗಳು ಮತ್ತು ಸಂವಾದದ ಮೂಲಕ ಪ್ರಜಾಪ್ರಭುತ್ವದ ಚೈತನ್ಯವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದರು.
ರಾಷ್ಟ್ರೀಯ ಯುವ ಸಂಸತ್ ಉತ್ಸವ (ಎನ್.ವೈ.ಪಿ.ಎಫ್.)ವನ್ನು ಯುವಕರ ಧ್ವನಿಯನ್ನು ಆಲಿಸುವ ಸಲುವಾಗಿ ಆಯೋಜಿಸಲಾಗಿದೆ, ಅವರು ಸಾರ್ವಜನಿಕ ಸೇವೆಗಳು ಸೇರಿದಂತೆ ಮುಂಬರುವ ವರ್ಷಗಳಲ್ಲಿ ವಿವಿಧ ವೃತ್ತಿಗಳನ್ನು ಸೇರುತ್ತಾರೆ. ಎನ್.ವೈ.ಪಿ.ಎಫ್. 2017ರ ಡಿಸೆಂಬರ್ 31 ರಂದು ಪ್ರಧಾನ ಮಂತ್ರಿಯವರು ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ನೀಡಿದ ಕಲ್ಪನೆಯನ್ನು ಇದು ಆಧರಿಸಿದೆ. ಈ ಕಲ್ಪನೆಯಿಂದ ಸ್ಫೂರ್ತಿ ಪಡೆದು, ಎನ್.ವೈ.ಪಿ.ಎಫ್.ನ 1 ನೇ ಆವೃತ್ತಿಯನ್ನು 12ನೇ ಜನವರಿಯಿಂದ 27ನೇ ಫೆಬ್ರವರಿ, 2019ರವರೆಗೆ "ನವ ಭಾರತದ ಧ್ವನಿ ನೀವಾಗಿ ಮತ್ತು ಪರಿಹಾರ ಹುಡಿಕಿ ಮತ್ತು ನೀತಿಗೆ ಕೊಡುಗೆ ನೀಡಿ" ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿತ್ತು. ಒಟ್ಟು 88,000 ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎನ್.ವೈ.ಪಿ.ಎಫ್.ನ 2 ನೇ ಆವೃತ್ತಿಯನ್ನು 23ನೇ ಡಿಸೆಂಬರ್, 2020 ರಿಂದ 12ನೇ ಜನವರಿ, 2022 ರವರೆಗೆ "ನವ ಭಾರತದ ಯುವ- ಉತ್ಸಾಹ" ಎಂಬ ವಿಷಯದೊಂದಿಗೆ ವರ್ಚುವಲ್ ಮಾದರಿ ಮೂಲಕ ಆಯೋಜಿಸಲಾಗಿತ್ತು, ಇದರಲ್ಲಿ ದೇಶಾದ್ಯಂತ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 23 ಲಕ್ಷಕ್ಕೂ ಹೆಚ್ಚು ಯುವಕರು ಮತ್ತು ಬಾಧ್ಯಸ್ಥರು ವೀಕ್ಷಿಸಿದರು.
ಎನ್.ವೈ.ಪಿ.ಎಫ್.ನ 3ನೇ ಆವೃತ್ತಿಯನ್ನು 14ನೇ ಫೆಬ್ರವರಿ 2022 ರಂದು ವರ್ಚುವಲ್ ಮಾದರಿ ಮೂಲಕ ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲಾಗಿತ್ತು. 2022 ರ ಫೆಬ್ರವರಿ 23 ರಿಂದ 27 ರವರೆಗೆ ವರ್ಚುವಲ್ ಮಾದರಿ ಮೂಲಕ ರಾಜ್ಯ ಯುವ ಸಂಸತ್ತಿನ ನಂತರ ಜಿಲ್ಲೆಯ ಯುವ ಸಂಸತ್ತುಗಳಲ್ಲಿ ದೇಶಾದ್ಯಂತ 2.44 ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಎಂಬತ್ತೇಳು (87) ವಿಜೇತರು (62 ಮಹಿಳೆಯರು ಮತ್ತು 25 ಪುರುಷರು) ಮಾನ್ಯ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಮತ್ತು ಗೌರವಾನ್ವಿತ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರು ಮತ್ತು ಇತರ ಗಣ್ಯರ ಮುಂದೆ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಹಾಜರಾಗಲು ಅವಕಾಶ ಪಡೆದರು. ರಾಜ್ಯ ಯುವ ಸಂಸತ್ತಿನ (ಎಸ್.ವೈ.ಪಿ) ಇಪ್ಪತ್ತೊಂಬತ್ತು (29) ವಿಜೇತರು ಲೋಕಸಭೆಯ ಸದಸ್ಯರಾದ ಶ್ರೀ ಭರ್ತೃಹರಿ ಮಹತಾಬ್, ಲೋಕಸಭಾ ಸದಸ್ಯರಾದ ಡಾ. ಸತ್ಯಪಾಲ್ ಸಿಂಗ್, ಲೋಕಸಭಾ ಸದಸ್ಯರಾದ ಶ್ರೀಮತಿ ಅನು ಜೆ ಸಿಂಗ್, ಐ.ಆರ್.ಎಸ್. (ನಿವೃತ್ತ) ಮತ್ತು ಶ್ರೀಮತಿ ಕಾಂಚನ್ ಗುಪ್ತಾ, ಹಿರಿಯ ಸಲಹೆಗಾರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇವರುಗಳನ್ನು ಒಳಗೊಂಡ ರಾಷ್ಟ್ರೀಯ ತೀರ್ಪುಗಾರರ ಮುಂದೆ ಮಾತನಾಡಲು ಅವಕಾಶವನ್ನು ಪಡೆಯುತ್ತಾರೆ. 11ನೇ ಮಾರ್ಚ್ 2022 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸುತ್ತಿನ ಪ್ರಥಮ ಮೂವರು ವಿಜೇತರು, ಲೋಕಸಭೆಯ ಸ್ಪೀಕರ್ ಮುಂದೆ ಮಾತನಾಡಲು ಅವಕಾಶವನ್ನು ಪಡೆಯುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ 3 ಅಂತಿಮ ವಿಜೇತರಿಗೆ ಪ್ರಮಾಣಪತ್ರಗಳು ಮತ್ತು ಪ್ರಶಸ್ತಿಗಳನ್ನು ನೀಡಲಾಗುತ್ತದೆ (2,00,000 ರೂ., 150,000ರೂ, 100,000 ರೂ. ನಗದು ಬಹುಮಾನ) ಮತ್ತು ತಲಾ 50 ಸಾವಿರ ರೂ.ಗಳ 2 ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
*******
(Release ID: 1804952)
Visitor Counter : 274