ಪ್ರಧಾನ ಮಂತ್ರಿಯವರ ಕಛೇರಿ
ರಕ್ಷಣಾ ವಲಯದ ಬಜೆಟ್ ನಂತರದ ವೆಬಿನಾರ್ ಕುರಿತು ಪ್ರಧಾನಿ ಭಾಷಣ
“ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತಕ್ಕೆ ಇತ್ತೀಚಿನ ವರ್ಷಗಳಲ್ಲಿ ಒತ್ತು ನೀಡಿರುವುದು ಬಜೆಟ್ ನಲ್ಲಿ ಸ್ಪಷ್ಟ ಗೋಚರ”
“ನಿಮ್ಮ ಸ್ವಂತ ದೇಶದಲ್ಲಿ ಉಪಕರಣಗಳನ್ನು ಅಭಿವೃದ್ಧಿಪಡಿಸಿದಾಗ ಮಾತ್ರ ವಿಶಿಷ್ಟತೆ ಮತ್ತು ಆಶ್ಚರ್ಯಕರ ಅಂಶಗಳು ಸಂಭವಿಸಬಹುದು”
“ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಯಿಂದ ದೇಶದಲ್ಲಿ ಉತ್ಪಾದನೆಗೆ ಸಕ್ರಿಯ ವಾತಾವರಣ ರೂಪಿಸುವ ನೀಲನಕ್ಷೆಯನ್ನು ಈ ವರ್ಷದ ಬಜೆಟ್ ಒಳಗೊಂಡಿದೆ”
“ದೇಶೀಯ ಖರೀದಿಗೆ 54 ಸಾವಿರ ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಲ್ಲದೆ, 4.5 ಲಕ್ಷ ಕೋಟಿ ರೂ. ಮೌಲ್ಯದ ಉಪಕರಣಗಳ ಖರೀದಿ ಪ್ರಕ್ರಿಯೆ ನಾನಾ ಹಂತದಲ್ಲಿದೆ”
“ಪಾರದರ್ಶಕ, ಕಾಲಮಿತಿಯ, ಪ್ರಾಯೋಗಿಕ ಮತ್ತು ನ್ಯಾಯಯುತವಾದ ಪ್ರಯೋಗ, ಪರೀಕ್ಷಾ ಮತ್ತು ಪ್ರಮಾಣೀಕರಣ ವ್ಯವಸ್ಥೆ ಸಕ್ರಿಯ ರಕ್ಷಣಾ ಉದ್ಯಮದ ಬೆಳವಣಿಗೆಗೆ ಅತ್ಯಗತ್ಯ”
Posted On:
25 FEB 2022 11:57AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್‌ನಲ್ಲಿ ಮಾಡಿದ ಘೋಷಣೆ ಮಾಡಿದ ಅಂಶಗಳ ಕುರಿತಾದ ‘ರಕ್ಷಣೆಯಲ್ಲಿ ಆತ್ಮನಿರ್ಭರ ಭಾರತ – ಕ್ರಮ ಕೈಗೊಳ್ಳಲು ಕರೆ’ ಎಂಬ ಶೀರ್ಷಿಕೆಯ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಭಾಷಣ ಮಾಡಿದರು. ರಕ್ಷಣಾ ಸಚಿವಾಲಯವು ಈ ವೆಬಿನಾರ್ ಅನ್ನು ಆಯೋಜಿಸಿತ್ತು. ಪ್ರಧಾನಮಂತ್ರಿಯವರು ಮಾತನಾಡಿದ ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯ ನಾಲ್ಕನೇ ವೆಬಿನಾರ್ ಇದಾಗಿದೆ.
‘ರಕ್ಷಣೆಯಲ್ಲಿ ಆತ್ಮನಿರ್ಭರ ಭಾರತ–ಕ್ರಮ ಕೈಗೊಳ್ಳಲು ಕರೆ’ ಎಂಬ ವೆಬಿನಾರ್‌ನ ಶೀರ್ಷಿಕೆಯೇ ರಾಷ್ಟ್ರದ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ರಕ್ಷಣಾ ವಲಯದಲ್ಲಿ ಆತ್ಮನಿರ್ಭರ ಭಾರತವನ್ನು ಬಲವರ್ಧನೆಗೊಳಿಸುವ ಇತ್ತೀಚಿನ ವರ್ಷಗಳ ಪ್ರಯತ್ನವು ಈ ವರ್ಷದ ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು. ಗುಲಾಮಗಿರಿಯ ಅವಧಿಯಲ್ಲಿ ಮತ್ತು ಸ್ವಾತಂತ್ರ್ಯದ ಬಂದ ನಂತರವೂ ಆ ತಕ್ಷಣಕ್ಕೆ ಭಾರತದ ರಕ್ಷಣಾ ಉತ್ಪಾದನೆಯು ಸಾಕಷ್ಟು ಸದೃಢವಾಗಿತ್ತು ಎಂದು ಅವರು ಸ್ಮರಿಸಿದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳು ಪ್ರಮುಖ ಪಾತ್ರವಹಿಸಿದವು. "ನಂತರದ ವರ್ಷಗಳಲ್ಲಿ, ನಮ್ಮ ಈ ಪರಾಕ್ರಮವು ಅವನತಿಯತ್ತ ಸಾಗಿದ್ದರೂ, ಈಗಲೂ ಅದರ ಸಾಮರ್ಥ್ಯಕ್ಕೆ ಕೊರತೆಯಿಲ್ಲ, ಆಗ ಅಥವಾ ಈಗ ಸಾಮರ್ಥ್ಯ ತೋರಿಸುತ್ತದೆ" ಎಂದು ಅವರು ಹೇಳಿದರು.
ಎದುರಾಳಿಗಳ ಮೇಲೆ ಅಚ್ಚರಿಯ ಅಂಶಗಳನ್ನು ಹೊಂದಲು ರಕ್ಷಣಾ ವ್ಯವಸ್ಥೆಗಳ ಕಸ್ಟಮೈಸ್ (ಇಷ್ಟದಂತೆ ತಯಾರಿಸುವುದು) ಮತ್ತು ವಿಶಿಷ್ಟತೆಯ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. “ನಿಮ್ಮ ಸ್ವಂತ ದೇಶದಲ್ಲಿ ಉಪಕರಣಗಳನ್ನು ಅಭಿವೃದ್ಧಿಪಡಿಸಿದಾಗ ಮಾತ್ರ ವಿಶಿಷ್ಟತೆ ಮತ್ತು ಆಶ್ಚರ್ಯಕರ ಅಂಶಗಳು ಸಂಭವಿಸಬಹುದು” ಎಂದು ಅವರು ಹೇಳಿದರು. ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಯಿಂದ ದೇಶದಲ್ಲಿ ಉತ್ಪಾದನೆಗೆ ಸಕ್ರಿಯ ಪೂರಕ ವ್ಯವಸ್ಥೆ ಅಭಿವೃದ್ಧಿಪಡಿಸುವ ನೀಲನಕ್ಷೆಯನ್ನು ಈ ವರ್ಷದ ಬಜೆಟ್ ಹೊಂದಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ರಕ್ಷಣಾ ಬಜೆಟ್‌ನ ಸುಮಾರು ಶೇ.70ರಷ್ಟನ್ನು ದೇಶೀಯ ಉದ್ಯಮಗಳಿಗೆ ಮಾತ್ರ ಇಡಲಾಗಿದೆ ಎಂದು ಅವರು ಹೇಳಿದರು.
ಈವರೆಗೆ ರಕ್ಷಣಾ ಸಚಿವಾಲಯವು 200ಕ್ಕೂ ಅಧಿಕ ರಕ್ಷಣಾ ವೇದಿಕೆಗಳು ಮತ್ತು ಸಲಕರಣೆಗಳ ಸಕಾರಾತ್ಮಕ ಸ್ವದೇಶೀಕರಣ ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಈ ಘೋಷಣೆಯ ನಂತರ, ದೇಶೀಯ ಖರೀದಿಗಾಗಿ 54 ಸಾವಿರ ಕೋಟಿ ರೂಪಾಯಿ ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಅಲ್ಲದೇ, 4.5 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಉಪಕರಣಗಳ ಖರೀದಿ ಪ್ರಕ್ರಿಯೆಯು ನಾನಾ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮೂರನೇ ಪಟ್ಟಿಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗುತ್ತಿದೆ ಎಂದರು.
ಶಸ್ತ್ರಾಸ್ತ್ರ ಖರೀದಿಯು ದೀರ್ಘಾವಧಿಯ ಪ್ರಕ್ರಿಯೆ ಒಳಗೊಂಡಿದ್ದು, ಇದು ಸಾಮಾನ್ಯವಾಗಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಹೊತ್ತಿಗೆ ಅವು ಹಳೆಯದಾಗುವಂತಹ ಸ್ಥಿತಿ ಇದೆ ಎಂದು ಪ್ರಧಾನಮಂತ್ರಿ ವಿಷಾಧಿಸಿದರು. “ಇದಕ್ಕೆ 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ'ದಲ್ಲಿ ಪರಿಹಾರವಿದೆ” ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಆತ್ಮನಿರ್ಭರ ಭಾರತದ ಪ್ರಾಮುಖ್ಯತೆ ಗಮನದಲ್ಲಿರಿಸಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಸಶಸ್ತ್ರ ಪಡೆಗಳ ಕಾರ್ಯವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಶಸ್ತ್ರಾಸ್ತ್ರಗಳು ಮತ್ತು ಸಾಧನಗಳ ವಿಷಯದಲ್ಲಿ ಯೋಧರು ಹೆಮ್ಮೆ ಮತ್ತು ನಮ್ಮದೆಂಬ ಭಾವನೆಗಳನ್ನು ಇಟ್ಟುಕೊಳ್ಳುವ ಅಗತ್ಯತೆಯನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಈ ಕ್ಷೇತ್ರಗಳಲ್ಲಿ ನಾವು ಆತ್ಮನಿರ್ಭರ ಭಾರತ ಸಾಧಿಸಿದಾಗ ಮಾತ್ರ ಇದು ಸಾಧ್ಯವಾಗಲಿದೆ ಎಂದರು.
ಸೈಬರ್ ಭದ್ರತೆಯು ಇನ್ನು ಮುಂದೆ ಡಿಜಿಟಲ್ ಜಗತ್ತಿಗೆ ಮಾತ್ರ ಸೀಮಿತವಾಗಿಲ್ಲ ಆದರೆ ಅದು ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. “ರಕ್ಷಣಾ ವಲಯದಲ್ಲಿ ನಾವು ನಮ್ಮ ಮಾಹಿತಿ ತಂತ್ರಜ್ಞಾನ ಶಕ್ತಿಯನ್ನು ಎಷ್ಟು ಹೆಚ್ಚಾಗಿ ನಿಯೋಜಿಸುತ್ತೇವೆಯೋ, ನಮ್ಮ ಭದ್ರತೆಯ ಬಗ್ಗೆ ನಾವು ಹೆಚ್ಚಿನ ವಿಶ್ವಾಸ ಹೊಂದಲಿದ್ದೇವೆ” ಎಂದು ಅವರು ಹೇಳಿದರು.
ಒಪ್ಪಂದಗಳಿಗಾಗಿ ರಕ್ಷಣಾ ಸಾಮಗ್ರಿಗಳ ಉತ್ಪಾದಕರ ನಡುವೆ ಪೈಪೋಟಿ ಇದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ, ಇದು ಹೆಚ್ಚಾಗಿ ಹಣಕಾಸು-ಕೇಂದ್ರಿತ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂದರು. ಶಸ್ತ್ರಾಸ್ತ್ರಗಳ ಗುಣಮಟ್ಟ ಮತ್ತು ಅಪೇಕ್ಷ ಸಂಬಂಧ ಬಹಳಷ್ಟು ಗೊಂದಲಗಳನ್ನು ಸೃಷ್ಟಿಸಲಾಯಿತು. ಆತ್ಮನಿರ್ಭರ ಭಾರತ ಅಭಿಯಾನವು ಈ ಸಮಸ್ಯೆಯನ್ನೂ ಸಹ ನಿಭಾಯಿಸಿದೆ ಎಂದು ಅವರು ಹೇಳಿದರು.
ಶಸ್ತ್ರಾಸ್ತ್ರ ಕಾರ್ಖಾನೆಗಳು ದೃಢಸಂಕಲ್ಪದೊಂದಿಗೆ ಪ್ರಗತಿಗೆ ಉತ್ತಮ ಉದಾಹರಣೆಯಾಗಿವೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದರು. ಕಳೆದ ವರ್ಷಗಳಲ್ಲಿ ಹೊಸದಾಗಿ ಸ್ಥಾಪಿಸಲಾದ 7 ಹೊಸ ರಕ್ಷಣಾ ಉದ್ಯಮಗಳು ತಮ್ಮ ವ್ಯವಹಾರವನ್ನು ವೇಗವಾಗಿ ವಿಸ್ತರಿಸಿಕೊಳ್ಳುತ್ತಿವೆ ಮತ್ತು ಹೊಸ ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. “ಕಳೆದ 5-6 ವರ್ಷಗಳಲ್ಲಿ ನಾವು ರಕ್ಷಣಾ ವಲಯದ ರಫ್ತುಗಳನ್ನು ಆರು ಪಟ್ಟು ಹೆಚ್ಚಿಸಿದ್ದೇವೆ. ಇಂದು ನಾವು 75 ಕ್ಕೂ ಅಧಿಕ ರಾಷ್ಟ್ರಗಳಿಗೆ ಭಾರತದಲ್ಲಿ ತಯಾರಿಸಿದ ರಕ್ಷಣಾ ಸಾಧನ ಮತ್ತು ಸೇವೆಗಳನ್ನು ಪೂರೈಸುತ್ತಿದ್ದೇವೆ” ಎಂದು ಪ್ರಧಾನಮಂತ್ರಿ ಹೇಳಿದರು.
ಸರ್ಕಾರ ‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ ನೀಡಿದ ಪರಿಣಾಮ ಕಳೆದ 7 ವರ್ಷಗಳಲ್ಲಿ ರಕ್ಷಣಾ ಸಾಧನಗಳ ಉತ್ಪಾದನೆಗೆ 350ಕ್ಕೂ ಅಧಿಕ ಹೊಸ ಕೈಗಾರಿಕಾ ಪರವಾನಗಿಗಳನ್ನು ನೀಡಲಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.ಆದರೆ 2001 ರಿಂದ 2014 ರವರೆಗಿನ ಹದಿನಾಲ್ಕು ವರ್ಷಗಳಲ್ಲಿ ಕೇವಲ 200 ಪರವಾನಗಿ ಮಾತ್ರ ನೀಡಲಾಗಿತ್ತು. ಡಿಆರ್ಡಿಒ ಮತ್ತು ರಕ್ಷಣಾ ವಲಯದ ಸಾರ್ವಜನಿಕ ಸಂಸ್ಥೆಗಳಿಗೆ ಸಮಾನವಾಗಿ ಖಾಸಗಿ ವಲಯವೂ ಬರಬೇಕು, ಆದ್ದರಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಬಜೆಟ್‌ನ ಶೇ.25ರಷ್ಟನ್ನು ಕೈಗಾರಿಕೆ, ನವೋದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಮೀಸಲಿರಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದಕ್ಕಾಗಿ ಬಜೆಟ್ ನಲ್ಲಿ ವಿಶೇಷ ಕಾರ್ಯವಿಧಾನ ವ್ಯವಸ್ಥೆ ಮಾಡಲಾಗಿದೆ. “ಇದು ಕೇವಲ ಮಾರಾಟಗಾರ ಅಥವಾ ಪೂರೈಕೆದಾರರನ್ನು ಮೀರಿ ಪಾಲುದಾರರಾಗಿ ಖಾಸಗಿ ಉದ್ಯಮದ ಪಾತ್ರವನ್ನು ಸ್ಥಾಪಿಸಲಿದೆ” ಎಂದು ಅವರು ಹೇಳಿದರು.
ರಕ್ಷಣಾ ಉದ್ಯಮದ ಸಕ್ರಿಯ ಬೆಳವಣಿಗೆಗೆ ಪ್ರಯೋಗ, ಪರೀಕ್ಷೆ ಮತ್ತು ಪ್ರಮಾಣೀಕರಣದ ಪಾರದರ್ಶಕ, ಕಾಲಮಿತಿಯ, ಪ್ರಾಯೋಗಿಕ ಮತ್ತು ನ್ಯಾಯೋಚಿತ ವ್ಯವಸ್ಥೆಗಳು ಅತ್ಯಗತ್ಯ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಅದಕ್ಕಾಗಿ ಸಮಸ್ಯೆಗಳನ್ನು ಪರಿಹರಿಸಲು ಸ್ವತಂತ್ರ ವ್ಯವಸ್ಥೆಯು ಅತ್ಯಂತ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.
ಬಜೆಟ್ ಅಂಶಗಳ ಸಕಾಲಿಕ ಜಾರಿಗೆ ಹೊಸ ಚಿಂತನೆಗಳೊಂದಿಗೆ ಮುಂದೆ ಬರುವಂತೆ ಪ್ರಧಾನಮಂತ್ರಿ ಪಾಲುದಾರರಿಗೆ ಕರೆ ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಬಜೆಟ್ ಮಂಡನೆ ದಿನಾಂಕ ಒಂದು ತಿಂಗಳು ಮುಂಚಿತವಾಗಿಯೇ ನಿಗದಿಪಡಿಸಿರುವುದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಮತ್ತು ಬಜೆಟ್ ಅನುಷ್ಠಾನದ ದಿನಾಂಕ ಬಂದಾಗ ಅದನ್ನು ಜಾರಿಗೊಳಿಸಲು ಕ್ಷೇತ್ರಮಟ್ಟಕೆ ಇಳಿದು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಗೆ ಕರೆ ನೀಡಿದರು.
***
(Release ID: 1801069)
Visitor Counter : 216
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam