ಪ್ರಧಾನ ಮಂತ್ರಿಯವರ ಕಛೇರಿ
ಅರುಣಾಚಲ ಪ್ರದೇಶದ ಸುವರ್ಣ ಮಹೋತ್ಸವ ಮತ್ತು 36ನೇ ರಾಜ್ಯೋತ್ಸವ ದಿನಾಚರಣೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
20 FEB 2022 12:12PM by PIB Bengaluru
ಅರುಣಾಚಲ ಪ್ರದೇಶದ ನನ್ನ ಸಹೋದರ ಸಹೋದರಿಯರೇ!
ಜೈ ಹಿಂದ್!
ಮೂವತ್ತಾರನೇ ಅರುಣಾಚಲ ಪ್ರದೇಶದ ರಾಜ್ಯ ಸಂಸ್ಥಾಪನಾ ದಿನದಂದು ನಿಮ್ಮೆಲ್ಲರಿಗೂ ಅಭಿನಂದನೆಗಳು. 50 ವರ್ಷಗಳ ಹಿಂದೆ, ‘ನೆಫಾ’ ಹೊಸ ಹೆಸರನ್ನು ಪಡೆದುಕೊಂಡಿತು, 'ಅರುಣಾಚಲ ಪ್ರದೇಶ' ಎನ್ನುವ ಹೊಸ ಗುರುತನ್ನು ಪಡೆಯಿತು. ಈ ಉದಯಿಸುವ ಸೂರ್ಯನ ಗುರುತನ್ನು ಮತ್ತು ಈ ಹೊಸ ಚೈತನ್ಯವನ್ನು ಈ 50 ವರ್ಷಗಳಲ್ಲಿ ನಿಮ್ಮೆಲ್ಲ ಶ್ರಮಜೀವಿಗಳು, ದೇಶಭಕ್ತ ಸಹೋದರಿಯರು ಮತ್ತು ಸಹೋದರರು ನಿರಂತರವಾಗಿ ಬಲಪಡಿಸಿದ್ದಾರೆ.
ಅರುಣಾಚಲದ ಈ ವೈಭವವನ್ನು ಗಮನದಲ್ಲಿಟ್ಟುಕೊಂಡು ಐದು ದಶಕಗಳ ಹಿಂದೆ ಭಾರತ ರತ್ನ ಡಾ.ಭೂಪೇನ್ ಹಜಾರಿಕಾ ಅವರು 'ಅರುಣಾಚಲ ಹಮಾರಾ' ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡನ್ನು ಪ್ರತಿಯೊಬ್ಬ ಅರುಣಾಚಲ ನಿವಾಸಿಗಳು ತುಂಬಾ ಇಷ್ಟಪಡುತ್ತಾರೆ ಎಂದು ನನಗೆ ತಿಳಿದಿದೆ, ಈ ಹಾಡು ಇಲ್ಲದೆ ಯಾವುದೇ ಕಾರ್ಯವು ಪೂರ್ಣಗೊಳ್ಳುವುದಿಲ್ಲ. ಅದಕ್ಕಾಗಿಯೇ ನಾನು ನಿಮ್ಮೊಂದಿಗೆ ಮಾತನಾಡುವಾಗ ಈ ಹಾಡಿನ ಕೆಲವು ಸಾಲುಗಳನ್ನು ಹೇಳಲು ಬಯಸುತ್ತೇನೆ.
ಅರುಣ ಕಿರಣ ಶೀಶ ಭೂಷಣ,
ಅರುಣ ಕಿರಣ ಶೀಶ ಭೂಷಣ,
ಕಂಠ ಹಿಮ್ ಕಿ ಧಾರಾ,
ಪ್ರಭಾತ್ ಸೂರಜ್ ಚುಂಬಿತ್ ದೇಶ್,
ಅರುಣಾಚಲ ಹಮಾರಾ,
ಅರುಣಾಚಲ ಹಮಾರಾ,
ಭಾರತ ಮಾಂ ಕಾ ರಾಜದುಲಾರಾ
ಭಾರತ ಮಾಂ ಕಾ ರಾಜದುಲಾರಾ
ಅರುಣಾಚಲ ಹಮಾರಾ!
ಸ್ನೇಹಿತರೇ,
ಅರುಣಾಚಲ ಪ್ರದೇಶವು ದೇಶಭಕ್ತಿ ಮತ್ತು ಸಾಮಾಜಿಕ ಸಾಮರಸ್ಯದ ಮನೋಭಾವಕ್ಕೆ ಹೊಸ ಉತ್ತುಂಗವನ್ನು ನೀಡಿದ ರೀತಿ, ನಿಮ್ಮ ಸಾಂಸ್ಕೃತಿಕ ಪರಂಪರೆಯನ್ನು ನೀವು ಉಳಿಸಿಕೊಂಡಿರುವ ರೀತಿ, ಸಂಪ್ರದಾಯ ಮತ್ತು ಪ್ರಗತಿಯನ್ನು ಒಟ್ಟಿಗೆ ಸಾಗಿಸುತ್ತಿರುವ ರೀತಿ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ.
ಸ್ನೇಹಿತರೇ,
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅರುಣಾಚಲ ಪ್ರದೇಶದ ಎಲ್ಲ ಹುತಾತ್ಮರನ್ನು ದೇಶವು ಸ್ಮರಿಸುತ್ತದೆ. ಆಂಗ್ಲೋ-ಅಬೋರ್ ಯುದ್ಧವಾಗಲಿ ಅಥವಾ ಸ್ವಾತಂತ್ರ್ಯದ ನಂತರದ ಗಡಿಯ ಭದ್ರತೆಯಾಗಲಿ, ಅರುಣಾಚಲದ ಜನರ ಶೌರ್ಯದ ಕಥೆಗಳು ಪ್ರತಿಯೊಬ್ಬ ಭಾರತೀಯನಿಗೂ ಅಮೂಲ್ಯವಾದ ಪರಂಪರೆಯಾಗಿದೆ. ಹಲವಾರು ಬಾರಿ ನಿಮ್ಮನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನಮ್ಮ ಯುವ ಮುಖ್ಯಮಂತ್ರಿ ಪೆಮಾ ಖಂಡು ಜೀ ಅವರ ಸಮರ್ಥ ನಾಯಕತ್ವದ ಮೇಲೆ ನೀವು ನಂಬಿಕೆ ಇಟ್ಟಿರುವ ನಿರೀಕ್ಷೆಯನ್ನು ಸರ್ಕಾರ ಪೂರೈಸುತ್ತಿದೆ ಎಂದು ನನಗೆ ಖುಷಿಯಾಗಿದೆ. ನಿಮ್ಮ ನಂಬಿಕೆಯು ಡಬಲ್ ಇಂಜಿನ್ ಸರ್ಕಾರವನ್ನು ಹೆಚ್ಚು ಶ್ರಮಿಸಲು ಪ್ರೋತ್ಸಾಹಿಸುತ್ತದೆ ಮತ್ತು ಇನ್ನೂ ಹೆಚ್ಚಿನದಕ್ಕಾಗಿ ಶ್ರಮಿಸಲು ಶಕ್ತಿಯನ್ನು ನೀಡುತ್ತದೆ. 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ಮಾರ್ಗವು ಅರುಣಾಚಲ ಪ್ರದೇಶಕ್ಕೆ ಉತ್ತಮ ಭವಿಷ್ಯವನ್ನು ಖಚಿತಪಡಿಸುತ್ತದೆ.
ಸ್ನೇಹಿತರೇ,
21 ನೇ ಶತಮಾನದಲ್ಲಿ ಪೂರ್ವ ಭಾರತ, ವಿಶೇಷವಾಗಿ ಈಶಾನ್ಯ ಭಾರತವು ದೇಶದ ಅಭಿವೃದ್ಧಿಯ ಎಂಜಿನ್ ಆಗಲಿದೆ ಎನ್ನುವುದು ನನ್ನ ದೃಢವಾದ ನಂಬಿಕೆ. ಈ ಸ್ಫೂರ್ತಿಯೊಂದಿಗೆ, ಅರುಣಾಚಲ ಪ್ರದೇಶದ ಅಭಿವೃದ್ಧಿಯನ್ನು ವೇಗಗೊಳಿಸಲು ಕಳೆದ ಏಳು ವರ್ಷಗಳಲ್ಲಿ ಅಭೂತಪೂರ್ವ ಕೆಲಸವನ್ನು ಮಾಡಲಾಗಿದೆ. ಸಂಪರ್ಕ ಮತ್ತು ವಿದ್ಯುತ್ ಮೂಲಸೌಕರ್ಯ ಕ್ಷೇತ್ರಗಳಲ್ಲಿನ ವ್ಯಾಪಕ ಕೆಲಸವು ಇಂದು ಅರುಣಾಚಲದಲ್ಲಿ ಜೀವನ, ವ್ಯಾಪಾರ ಮತ್ತು ವ್ಯವಹಾರವನ್ನು ಸುಲಭಗೊಳಿಸುತ್ತಿದೆ. ಇಟಾನಗರ ಸೇರಿದಂತೆ ಈಶಾನ್ಯದ ಎಲ್ಲಾ ರಾಜಧಾನಿಗಳನ್ನು ರೈಲು ಸಂಪರ್ಕದೊಂದಿಗೆ ಸಂಪರ್ಕಿಸುವುದು ನಮ್ಮ ಆದ್ಯತೆಯಾಗಿದೆ. ಅರುಣಾಚಲವನ್ನು ಪೂರ್ವ ಏಷ್ಯಾದ ಪ್ರಮುಖ ಹೆಬ್ಬಾಗಿಲನ್ನಾಗಿ ಮಾಡಲು ನಾವು ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಅರುಣಾಚಲ ಪ್ರದೇಶದ ಪಾತ್ರವನ್ನು ಪರಿಗಣಿಸಿ, ಆಧುನಿಕ ಮೂಲಸೌಕರ್ಯಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ.
ಸ್ನೇಹಿತರೇ,
ಅರುಣಾಚಲ ಪ್ರದೇಶದಲ್ಲಿ 'ಅಭಿವೃದ್ಧಿ, ಪ್ರಕೃತಿ, ಪರಿಸರ ಮತ್ತು ಸಂಸ್ಕೃತಿ' ಕಡೆಗೆ ಸಮಗ್ರವಾದ ವಿಧಾನದೊಂದಿಗೆ ನಾವು ನಿರಂತರವಾಗಿ ಮುಂದುವರಿಯುತ್ತಿದ್ದೇವೆ. ನಿಮ್ಮ ಪ್ರಯತ್ನಗಳಿಂದಾಗಿ ಇದು ಇಂದು ದೇಶದ ಪ್ರಮುಖ ಜೈವಿಕ ವೈವಿಧ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಅರುಣಾಚಲದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೇಮಾ ಖಂಡು ಜಿ ಅವರನ್ನು ನೋಡಿದಾಗ ನನಗೆ ಅತೀವ ಸಂತೋಷವಾಗುತ್ತದೆ. ಅವರು ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ, ಸ್ವ-ಸಹಾಯ ಗುಂಪುಗಳಂತಹ ಪ್ರತಿಯೊಂದು ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ನಾನು ದೇಶದ ಕಾನೂನು ಸಚಿವ ಶ್ರೀ ಕಿರಣ್ ರಿಜಿಜುಜಿ ಅವರೊಂದಿಗೆ ಮಾತನಾಡುವಾಗಲೆಲ್ಲಾ ಅವರು ಅರುಣಾಚಲ ಪ್ರದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಯಾವಾಗಲೂ ಹೊಸ ಆಲೋಚನೆಗಳು ಮತ್ತು ಸಲಹೆಗಳೊಂದಿಗೆ ಬರುತ್ತಾರೆ. ಪ್ರತಿ ಬಾರಿಯೂ ಹೊಸದನ್ನು ಪ್ರಯತ್ನಿಸುವ ಬಯಕೆ ಇರುತ್ತದೆ.
ಸ್ನೇಹಿತರೇ,
ಪ್ರಕೃತಿಯು ತನ್ನ ಸಂಪತ್ತಿನಿಂದ ಅರುಣಾಚಲಕ್ಕೆ ಬಹಳಷ್ಟು ನೀಡಿದೆ. ನೀವು ಪ್ರಕೃತಿಯನ್ನು ನಿಮ್ಮ ಜೀವನದ ಒಂದು ಭಾಗವಾಗಿಸಿಕೊಂಡಿದ್ದೀರಿ. ಅರುಣಾಚಲದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯಲು ನಾವು ಶ್ರಮಿಸುತ್ತಿದ್ದೇವೆ. ಇಂದು, ಈ ಸಂದರ್ಭದಲ್ಲಿ, ಡಬಲ್ ಇಂಜಿನ್ ಸರ್ಕಾರವು ಅರುಣಾಚಲ ಪ್ರದೇಶದ ಕನಸುಗಳನ್ನು ನನಸಾಗಿಸಲು ಸರ್ವ ಪ್ರಯತ್ನವನ್ನೂ ಮಾಡುತ್ತದೆ ಎಂದು ಮತ್ತೊಮ್ಮೆ ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಸಂಸ್ಥಾಪನಾ ದಿನದಂದು ಮತ್ತು 'ಅರುಣಾಚಲ ಪ್ರದೇಶ' ಎಂಬ ಹೆಸರಿನ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಬಹಳ ಧನ್ಯವಾದಗಳು !
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
****
(Release ID: 1800071)
Visitor Counter : 175
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam