ಹಣಕಾಸು ಸಚಿವಾಲಯ
azadi ka amrit mahotsav

2022-23ನೇ ಸಾಲಿನ ಕೇಂದ್ರ ಬಜೆಟ್‌ನ ಸಾರಾಂಶ

Posted On: 01 FEB 2022 1:19PM by PIB Bengaluru

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತ ಶೇ.9.2ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಲಾಗಿದ್ದು, ಇದು ವಿಶ್ವದ ಎಲ್ಲ ಆರ್ಥಿಕತೆಗಳಿಗಿಂತ ಅತ್ಯಧಿಕವಾಗಿದೆ. ಒಟ್ಟಾರೆ ನಮ್ಮ ದೇಶದ ಬಲಿಷ್ಠ ಸ್ಥಿತಿಸ್ಥಾಪಕತ್ವದಿಂದಾಗಿ ಸಾಂಕ್ರಾಮಿಕದ ಅಡ್ಡಪರಿಣಾಮಗಳ ನಡುವೆಯೂ ಆರ್ಥಿಕತೆ ಚೇತರಿಕೆಯಾಗಿದೆ ಮತ್ತು ಕ್ಷಿಪ್ರವಾಗಿ ಪುಟಿದೆದ್ದಿದೆ. ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ.

Budget-at-a-Glance-English.jpg

ನಾವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ ಮತ್ತು ನಾವು ಅಮೃತ ಕಾಲ ಅಂದರೆ ಭಾರತ ಸ್ವಾತಂತ್ರ್ಯಗಳಿಸಿ 100 ವರ್ಷ ಪೂರೈಸುವ ಮುಂದಿನ 25 ವರ್ಷಗಳಿಗೆ ಪ್ರವೇಶಿಸಿದ್ದೇವೆ. ಪ್ರಧಾನಮಂತ್ರಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ ಮುನ್ನೋಟ ಸಾಧನೆಯ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹಣಕಾಸು ಸಚಿವರು ಹೇಳಿದರು. ಅವುಗಳೆಂದರೆ:

  • ಎಲ್ಲರ ಸಮಗ್ರ ಕಲ್ಯಾಣಕ್ಕೆ ಒತ್ತು ನೀಡುವ ಸೂಕ್ಷ್ಮ ಆರ್ಥಿಕ ಮಟ್ಟಕ್ಕೆ ಆದ್ಯತೆ ನೀಡಿ ಪೂರಕ ಸೂಕ್ಷ್ಮ ಆರ್ಥಿಕ ಪ್ರಗತಿ ಸಾಧಿಸುವುದು.
  • ಡಿಜಿಟಲ್ ಆರ್ಥಿಕತೆ ಮತ್ತು ಫಿನ್ ಟೆಕ್ ತಂತ್ರಜ್ಞಾನಕ್ಕೆ ಉತ್ತೇಜನ, ತಂತ್ರಜ್ಞಾನ ಆಧಾರಿತ ಅಭಿವೃದ್ಧಿ ಮತ್ತು ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ ಮತ್ತು
  • ಖಾಸಗಿ ಹೂಡಿಕೆಯಲ್ಲಿ ಜನರ ಭಾಗಿದಾರಿಕೆಗೆ ಸಹಾಯ ಮಾಡುವ ಸಾರ್ವಜನಿಕ ಬಂಡವಾಳ ಹೂಡಿಕೆಯ ಮೂಲಕ ಖಾಸಗಿ ಹೂಡಿಕೆಯನ್ನು ಅವಲಂಬಿಸುವುದು.

2014ರಿಂದೀಚೆಗೆ ಸರ್ಕಾರ ಜನರನ್ನು ಸಬಲೀಕರಣಕ್ಕೆ ವಿಶೇಷವಾಗಿ ಬಡವರು ಮತ್ತು ದುರ್ಬಲ ವರ್ಗದವರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಮತ್ತು ವಸತಿ, ವಿದ್ಯುಚ್ಛಕ್ತಿ, ಅಡುಗೆ ಅನಿಲ ಮತ್ತು ನೀರಿನ ಲಭ್ಯತೆ ಒದಗಿಸಲು ಕ್ರಮಗಳನ್ನು ಕೈಗೊಂಡಿದೆ. ಹಣಕಾಸು ಸೇರ್ಪಡೆ ಖಾತ್ರಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಮತ್ತು ನೇರ ನಗದು ವರ್ಗಾವಣೆ ಹಾಗೂ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಬಡವರ ಸಾಮರ್ಥ್ಯವೃದ್ಧಿಗೆ ಬದ್ಧತೆಯನ್ನು ತೋರುತ್ತಿದೆ.

14 ವಲಯಗಳಲ್ಲಿ ಆತ್ಮನಿರ್ಭರ ಭಾರತ ಗುರಿ ಸಾಧನೆಗೆ ನೀಡಲಾಗುತ್ತಿರುವ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ, 60 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಂಭವನೀಯತೆ ಇದೆ ಮತ್ತು ಮುಂದಿನ 5 ವರ್ಷಗಳಲ್ಲಿ ಸುಮಾರು 30 ಲಕ್ಷ ಹೆಚ್ಚುವರಿ ಉತ್ಪಾದನೆಯಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ಹೊಸ ಸಾರ್ವಜನಿಕ ವಲಯದ ಉದ್ಯಮ ನೀತಿ ಜಾರಿ ಕುರಿತಂತೆ ಮಾತನಾಡಿದ ಅವರು, ಏರ್ ಇಂಡಿಯಾದ ಮಾಲಿಕತ್ವವನ್ನು ವರ್ಗಾಯಿಸುವ ಕಾರ್ಯತಂತ್ರ ಪೂರ್ಣಗೊಂಡಿದೆ. ಎನ್ಐಎನ್ಎಲ್ (ನೀಲಾಂಚಲ್ ಇಸ್ಪತ್ ನಿಗಮ ನಿಯಮಿತ) ಕಾರ್ಯತಂತ್ರ ಪಾಲುದಾರರನ್ನು ಆಯ್ಕೆ ಮಾಡಲಾಗಿದೆ. ಸದ್ಯದಲ್ಲೇ ಎಲ್ಐಸಿಯ ಸಾರ್ವಜನಿಕ ಬಿಡ್ಡಿಂಗ್ ಗೆ ಪ್ರಕಟಣೆ ಹೊರಡಿಸಲಾಗುವುದು ಮತ್ತು 2022-23ನೇ ಸಾಲಿನಲ್ಲಿ ಮತ್ತಿತರ ಕಾರ್ಯಗಳು ಕೈಗೊಳ್ಳಲಾಗುವುದು ಎಂದರು.

Quote Covers_M1.jpg

ಬಜೆಟ್ ಪ್ರಗತಿಗೆ ಒತ್ತು ನೀಡುವುದನ್ನು ಮುಂದುವರಿಸಲಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದರು. ಅಲ್ಲದೆ ಇದು ಪರ್ಯಾಯ ಮಾರ್ಗವನ್ನು ಹಾಕಿಕೊಡಲಿದೆ. (1) ಅಮೃತ ಕಾಲದಲ್ಲಿ ನೀಲನಕ್ಷೆ; ದೂರದೃಷ್ಟಿ ಮತ್ತು ಸಮಗ್ರ ಬೆಳವಣಿಗೆ, ಇದರಿಂದ ನಮ್ಮ ಯುವಜನತೆ, ಮಹಿಳೆಯರು, ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೇರ ಲಾಭವಾಗಲಿದೆ ಮತ್ತು (2) ಆಧುನಿಕ ಮೂಲಸೌಕರ್ಯಕ್ಕೆ ಭಾರೀ ಸಾರ್ವಜನಿಕ ಹೂಡಿಕೆ – ಭಾರತವನ್ನು @100ಗೆ ಸಜ್ಜುಗೊಳಿಸಲು ಪಿಎಂ ಗತಿಶಕ್ತಿ ಯೋಜನೆಯ ಮಾರ್ಗದರ್ಶನ ಪಡೆಯಲಾಗುವುದು ಮತ್ತು ಬಹುಮಾದರಿ ಮನೋಭಾವದ ಸಮನ್ವಯದಿಂದ ಲಾಭವಾಗಲಿದೆ. ಇನ್ನೂ ಮುಂದುವರಿದು, ಈ ಪರ್ಯಾಯ ಪಥದಲ್ಲಿ ನಾಲ್ಕು ಆದ್ಯತೆಗಳನ್ನು ಅವರು ಉಲ್ಲೇಖಿಸಿದರು.

  • ಪಿಎಂ ಗತಿಶಕ್ತಿ
  • ಸಮಗ್ರ ಅಭಿವೃದ್ಧಿ
  • ಉತ್ಪಾದನೆ ಮತ್ತು ಹೂಡಿಕೆ ವೃದ್ಧಿ, ಸೌರಶಕ್ತಿ ಅವಕಾಶಗಳ ಬಳಕೆ, ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ
  • ಹೂಡಿಕೆಗಳಿಗೆ ಹಣಕಾಸು

ಪಿಎಂ ಗತಿಶಕ್ತಿ ಯೋಜನೆ ಕುರಿತು ವಿವರ ನೀಡಿದ ಹಣಕಾಸು ಸಚಿವರು, ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಇದು ಪರಿವರ್ತನಾ ಮನೋಭಾವದ ಕ್ರಮವಾಗಿದೆ ಎಂದರು. ಇದರಲ್ಲಿ ಮುಖ್ಯವಾಗಿ ಏಳು ಇಂಜಿನ್ ಗಳಿವೆ ಅವುಗಳೆಂದರೆ ರಸ್ತೆ, ರೈಲ್ವೆ, ವಿಮಾನ ನಿಲ್ದಾಣ, ಬಂದರು, ಸಮೂಹ ಸಾರಿಗೆ, ಜಲಮಾರ್ಗ ಮತ್ತು ಸಾರಿಗೆ ಮೂಲಸೌಕರ್ಯ ಎಲ್ಲ ಇಂಜಿನ್ ಗಳು ಆರ್ಥಿಕತೆಯನ್ನು ಒಗ್ಗಟ್ಟಿನಿಂದ ಮುಂದುವರಿಸಿಕೊಂಡು ಹೋಗುತ್ತವೆ. ಈ ಇಂಜಿನ್ ಗಳಿಗೆ ಇಂಧನ ಪರಿವರ್ತನೆ, ಮಾಹಿತಿ ತಂತ್ರಜ್ಞಾನ ಸಂವಹನ, ಭಾರೀ ಜಲ ಮತ್ತು ಒಳಚರಂಡಿ ಹಾಗೂ ಸಾಮಾಜಿಕ ಮೂಲಸೌಕರ್ಯ ಪೂರಕ ಪಾತ್ರವನ್ನು ವಹಿಸಲಿವೆ. ಅಂತಿಮವಾಗಿ ಶುದ್ಧ ಇಂಧನ ಮತ್ತು ಸಬ್ ಕಾ ಪ್ರಯಾಸ್ ನ – ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಒಟ್ಟಾರೆ ಪ್ರಯತ್ನಗಳೊಂದಿಗೆ ಮುನ್ನಡೆಯಲಿವೆ. ಇದರಿಂದ ಭಾರೀ ಉದ್ಯೋಗಾವಕಾಶಗಳು ಮತ್ತು ಎಲ್ಲರಿಗೂ ಉದ್ಯಮಶೀಲ ಅವಕಾಶಗಳು ವಿಶೇಷವಾಗಿ ಯುವಕರಿಗೆ ಲಭ್ಯವಾಗಲಿವೆ.

2 . PM Gatishakti.jpg

ಅಂತೆಯೇ ಎಕ್ಸ್ ಪ್ರೆಸ್ ವೇಗಳಿಗೆ 2022-23ರಲ್ಲಿ  ಪಿಎಂ ಗತಿಶಕ್ತಿ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಇದರಿಂದ ಪ್ರಯಾಣಿಕರು ಮತ್ತು ಸರಕು ಸಾಗಾಣೆಯ ವೇಗದ ಸಂಚಾರಕ್ಕೆ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನು 2022-23ರಲ್ಲಿ 25,000 ಕಿ.ಮೀ. ವಿಸ್ತರಿಸಲಾಗುವುದು ಮತ್ತು ಸುಮಾರು 20,000 ಕೋಟಿ ರೂ.ಗಳನ್ನು ಸಾರ್ವಜನಿಕ ಸಂಪನ್ಮೂಲಗಳಿಗೆ ಪೂರಕವಾಗಿ ನವೀನ ವಿಧಾನಗಳ ಮೂಲಕ ಕ್ರೂಢೀಕರಿಸಲಾಗುವುದು.

2022-23ನೇ ಸಾಲಿನಲ್ಲಿ ನಾಲ್ಕು ಕಡೆ ಪಿಪಿಪಿ ಮೂಲಕ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಟೆಂಡರ್ ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ರೈಲ್ವೆಯಲ್ಲಿ ಸ್ಥಳೀಯ ಉದ್ಯಮಿಗಳು ಮತ್ತು ಪೂರೈಕೆ ಸರಣಿಗೆ ಸಹಕರಿಸಲು “ಒಂದು ನಿಲ್ದಾಣ-ಒಂದು ಉತ್ಪನ್ನ” ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಅಲ್ಲದೆ ಆತ್ಮನಿರ್ಭರ ಭಾರತದ ಭಾಗವಾಗಿ 2000 ಕಿ.ಮೀ. ಜಾಲವನ್ನು 2022-23ನೇ ಸಾಲಿನಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಸುರಕ್ಷತೆ ದೃಷ್ಟಿಯಿಂದ ಸ್ವದೇಶಿ ವಿಶ್ವದರ್ಜೆಯ ತಂತ್ರಜ್ಞಾನದ ಕವಚ ಯೋಜನೆಯಡಿ ತರಲಾಗುವುದು ಎಂದರು. 400 ಹೊಸ ತಲೆಮಾರಿನ ವಂದೆ ಭಾರತ್ ರೈಲುಗಳ ಸಂಚಾರವನ್ನು ಆರಂಭಿಸಲಾಗುವುದು, ಇವುಗಳನ್ನು ಇಂಧನ ದಕ್ಷತೆಯನ್ನು ಹೊಂದಿರುವಂತೆ ಮತ್ತು ಪ್ರಯಾಣಿಕರಿಗೆ ಉತ್ತಮ ಅನುಭವವನ್ನು ನೀಡುವ ರೀತಿ ಅಭಿವೃದ್ಧಿಗೊಳಿಸಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಮಲ್ಟಿ ಮಾದರಿ ಸಾಗಾಣೆಗೆ ಅನುಕೂಲವಾಗುವಂತೆ ನೂರು ಪಿಎಂ ಗತಿಶಕ್ತಿ ಕಾರ್ಗೊ ಟರ್ಮಿನಲ್ ಗಳನ್ನು ನಿರ್ಮಿಸಲಾಗುವುದು ಎಂದರು.  

ಕೃಷಿ ವಲಯದಲ್ಲಿ ದೇಶಾದ್ಯಂತ ರಾಸಾಯನಿಕ ರಹಿತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಗಂಗಾ ನದಿಯ ಉದ್ದಗಲಕ್ಕೂ 5 ಕಿ.ಮೀ.ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವ ರೈತರಿಗೆ ಮೊದಲ ಹಂತದಲ್ಲಿ ಒತ್ತು ನೀಡಲಾಗುವುದು. ಬೆಳೆ ಸಮೀಕ್ಷೆ, ಭೂ ದಾಖಲೆಗಳ ಡಿಜಿಟಲೀಕರಣ, ರಾಸಾಯನಿಕ ಕೀಟನಾಶಕ ಮತ್ತು ಪೌಷ್ಠಿಕಾಂಶಗಳ ಸಿಂಪಡಣೆಗೆ ‘ಕಿಸಾನ್ ಡ್ರೋನ್’ಗಳ ಬಳಕೆಯನ್ನು ಉತ್ತೇಜಿಸಲಾಗುವುದು. ಎಣ್ಣೆ ಬೀಜಗಳ ಆಮದು ಅವಲಂಬನೆ ತಗ್ಗಿಸಲು ದೇಶದಲ್ಲಿ ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ಏಕರೂಪದ ಮತ್ತು ಸಮಗ್ರ ಯೋಜನೆಯನ್ನು ರೂಪಿಸಿ ಜಾರಿಗೊಳಿಸಲಾಗುವುದು.

Agriculture and food processing.jpg

2023ನೇ ವರ್ಷವನ್ನು ಈಗಾಗಲೇ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಲಾಗಿದೆ. ಕಟಾವಿನ ನಂತರ ಮೌಲ್ಯವರ್ಧನೆ, ದೇಶೀಯ ಬಳಕೆ ಹೆಚ್ಚಳ ಮತ್ತು ಸಿರಿಧಾನ್ಯಗಳ ಉತ್ಪನ್ನಗಳ ಬ್ರಾಂಡಿಂಗ್ ಅನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಲು ಸರ್ಕಾರ ಸಂಪೂರ್ಣ ನೆರವು ನೀಡಲಿದೆ.

ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯನ್ನು ಅಂದಾಜು 44,605 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ 9.08 ಲಕ್ಷ ಹೆಕ್ಟೇರ್ ರೈತರ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ. 62 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. 103 ಮೆಗಾವ್ಯಾಟ್ ಜಲವಿದ್ಯುತ್ ಮತ್ತು 27 ಮೆಗಾವ್ಯಾಟ್ ಸೌರವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ತಿಳಿಸಿದರು. 2021-22ನೇ ಸಾಲಿನ ಪರಿಷ್ಕೃತ ಅಂದಾಜಿನಲ್ಲಿ 4,300 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. 2020-23ರಲ್ಲಿ ಯೋಜನೆಗೆ 1,400 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೆ ಐದು ನದಿಗಳ ಜೋಡಣೆ, ಅವುಗಳೆಂದರೆ ದಾಮನ್ ಗಂಗಾ-ಪಿಂಜಾಲ್, ಪಾರ್-ತಪಿನರ್ಮದಾ, ಗೋದಾವರಿ-ಕೃಷ್ಣಾ, ಕೃಷ್ಣಾ-ಪೆನ್ನಾರ್ ಮತ್ತು ಪೆನ್ನಾರ್-ಕಾವೇರಿ ಜೋಡಣೆಯ ಕರಡು ಡಿಪಿಆರ್ ಗಳನ್ನು ಅಂತಿಮಗೊಳಿಸಲಾಗಿದೆ. ಫಲಾನುಭವಿ ರಾಜ್ಯಗಳ ನಡುವೆ ಸಹಮತ ಮೂಡಿದ ಕೂಡಲೇ ಯೋಜನೆಗಳ ಜಾರಿಗೆ ಕೇಂದ್ರ ಆರ್ಥಿಕ ನೆರವು ನೀಡಲಿದೆ.

ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮದಿಂದ ಹೊರಬರಲು ಸುಮಾರು 130 ಲಕ್ಷಕ್ಕೂ ಅಧಿಕ ಎಂಎಸ್ಎಂಇಗಳ ಸಹಾಯಕ್ಕೆ ಬಹು ನಿರೀಕ್ಷಿತ ಹೆಚ್ಚುವರಿ ಸಾಲ ಒದಗಿಸಲು ತುರ್ತು ಸಾಲ ಮಾರ್ಗ ಖಾತ್ರಿ ಯೋಜನೆ (ಇಸಿಎಲ್ ಜಿಎಸ್)ಅನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು. ಆತಿಥ್ಯ ಮತ್ತು ಅದರ ಸಂಬಂಧಿ ಸೇವೆಗಳು, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳು ಇನ್ನೂ ವ್ಯಾಪಾರ ವಹಿವಾಟಿನಲ್ಲಿ ಸಾಂಕ್ರಾಮಿಕದ ಪೂರ್ವ ಸ್ಥಿತಿಗೆ ಮರಳಲು ಯತ್ನಿಸುತ್ತಿವೆ. ಈ ಅಂಶಗಳನ್ನೆಲ್ಲಾ ಪರಿಗಣಿಸಿ ಇಸಿಎಲ್ ಜಿಎಸ್ಅನ್ನು2023ರ ಮಾರ್ಚ್ ವರೆಗೆ ವಿಸ್ತರಿಸಲಾಗುವುದು. ಖಾತ್ರಿ ವ್ಯಾಪ್ತಿಯನ್ನು 50,000 ಕೋಟಿ ರೂ.ಗಳಿಂದ ಒಟ್ಟು 5 ಲಕ್ಷ ರೂ.ಗಳವರೆಗೆ ವಿಸ್ತರಿಸಲಾಗುವುದು. ಈ ಹೆಚ್ಚುವರಿ ಮೊತ್ತವನ್ನು ವಿಶೇಷವಾಗಿ ಆತಿಥ್ಯ ಮತ್ತು ಅದರ ಸಂಬಂಧಿ ಉದ್ಯಮಗಳಿಗೆ ಮೀಸಲಿಡಲಾಗಿದೆ.

7. Accelerating Growth of MSME.jpg

ಅದೇ ರೀತಿ, ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ವಿಶ್ವಾಸ ಯೋಜನೆ (ಸಿಜಿಟಿಎಂಎಸ್ ಇ) ಯನ್ನು ಅಗತ್ಯವಾದ ಹಣದ ಒಳಹರಿವಿನೊಂದಿಗೆ ಪರಿಷ್ಕರಿಸಲಾಗುವುದು. ಇದು ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ 2 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ಸಾಲ ನೀಡಲು ಸುಲಭಗೊಳಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತದೆ. ಎಂಎಸ್ ಎಂಇ ವಲಯವನ್ನು ಹೆಚ್ಚು ಸ್ಥಿತಿ ಸ್ಥಾಪಕ, ಸ್ಪರ್ಧಾತ್ಮಕ ಮತ್ತು ದಕ್ಷಗೊಳಿಸಲು 5 ವರ್ಷಗಳಲ್ಲಿ 6,000 ಕೋಟಿ ರೂ.ಗಳ ವೆಚ್ಚದೊಂದಿಗೆ ಎಂಎಸ್ ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ (ಆರ್ ಎಎಂಪಿ) ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಉದ್ಯಮ್, ಇ-ಶ್ರಮ್, ಎನ್ ಸಿಎಸ್ ಮತ್ತು ಎಎಸ್ಇಇಎಂ ಪೋರ್ಟಲ್ ಗಳನ್ನು ಇಂಟರ್ ಲಿಂಕ್ ಮಾಡಲಾಗುವುದು ಮತ್ತು ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು.

ಕೌಶಲ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣದ ವಿಷಯದ ಕುರಿತು ಮಾತನಾಡುತ್ತಾ, ವಿವಿಧ ಅಪ್ಲಿಕೇಶನ್‌ಗಳ ಮೂಲಕ ಮತ್ತು ಡ್ರೋನ್ ಅನ್ನು ಸೇವೆಯಾಗಿ ಬಳಸುವ (ಡಿಆರ್ ಎಎಸ್ ಎಸ್ ) ಗಾಗಿ 'ಡ್ರೋನ್ ಶಕ್ತಿ'ಗೆ ಅನುಕೂಲವಾಗುವಂತೆ ನವೋದ್ಯಮಗಳನ್ನು ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಎಲ್ಲಾ ರಾಜ್ಯಗಳಲ್ಲಿ ಆಯ್ದ ಐಟಿಐಗಳಲ್ಲಿ  ಕೌಶಲ್ಯಕ್ಕಾಗಿ ಅಗತ್ಯವಿರುವ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ವೃತ್ತಿಪರ ಕೋರ್ಸ್‌ಗಳಲ್ಲಿ, ನಿರ್ಣಾಯಕ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಉತ್ತೇಜಿಸಲು, ಸೃಜನಶೀಲತೆಗೆ ಜಾಗವನ್ನು ನೀಡಲು 2022-23 ರಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ 750 ವರ್ಚುವಲ್ ಲ್ಯಾಬ್‌ಗಳು ಮತ್ತು ಸಿಮ್ಯುಲೇಟೆಡ್ ಕಲಿಕಾ ಪರಿಸರಕ್ಕಾಗಿ 75 ಕೌಶಲ್ಯ ಇ-ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದರು. 
ಸಾಂಕ್ರಾಮಿಕ ರೋಗದ ಪರಿಣಾಮಾಗಿ ಶಾಲೆಗಳ ಮುಚ್ಚುರಿವುದರಿಂದಾಗಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳು ಮತ್ತು ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರ ದುರ್ಬಲ ವರ್ಗದ ಮಕ್ಕಳು ಬಹುತೇಕ 2 ವರ್ಷಗಳ ಅಧಿಕೃತ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ ಮತ್ತು ಹೆಚ್ಚಾಗಿ ಈ ಮಕ್ಕಳು ಸರ್ಕಾರಿ ಶಾಲೆಗೆ ಸೇರಿದವರಾಗಿದ್ದಾರೆ. ಹೀಗಾಗಿ ಪೂರಕ ಬೋಧನೆಯನ್ನು ನೀಡಲು ಮತ್ತು ಶಿಕ್ಷಣ ನೀಡಲು  ಸ್ಥಿತಿಸ್ಥಾಪಕ ಕಾರ್ಯವಿಧಾನವನ್ನು ನಿರ್ಮಿಸಲು, ಪಿಎಂ ಇವಿದ್ಯಾ 'ಒಂದು ವರ್ಗ-ಒಂದು ಟಿವಿ ಚಾನೆಲ್' ಕಾರ್ಯಕ್ರಮವನ್ನು 12 ರಿಂದ 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸಲಾಗುವುದು ಮತ್ತು ಇದು ಎಲ್ಲಾ ರಾಜ್ಯಗಳಿಗೆ 1-12 ತರಗತಿಗಳವರೆಗೆ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣವನ್ನು ನೀಡಲು ಅನುವು ಮಾಡಿಕೊಡುತ್ತದೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು. 
ದೇಶಾದ್ಯಂತ ವಿದ್ಯಾರ್ಥಿಗಳಿಗೆ ಮನೆ ಬಾಗಿಲಿಗೆ ವೈಯಕ್ತಿಕ ಕಲಿಕೆಯ ಅನುಭವದೊಂದಿಗೆ ವಿಶ್ವದರ್ಜೆಯ ಗುಣಮಟ್ಟದ ಸಾರ್ವತ್ರಿಕ ಶಿಕ್ಷಣ ಒದಗಿಸಲು ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಇದು ವಿವಿಧ ಭಾರತೀಯ ಭಾಷೆಗಳಲ್ಲಿ ಮತ್ತು ಐಸಿಟಿ ವಿಧಾನಗಳಲ್ಲಿ ಲಭ್ಯವಾಗಲಿದೆ. ವಿಶ್ವವಿದ್ಯಾನಿಲಯವನ್ನು ನೆಟ್‌ವರ್ಕ್ ಹಬ್-ಸ್ಪೋಕ್ ಮಾದರಿಯಲ್ಲಿ ನಿರ್ಮಿಸಲಾಗುವುದು, ಹಬ್ ಕಟ್ಟಡವು ಅತ್ಯಾಧುನಿಕ ಐಸಿಟಿ ಪರಿಣತಿಯನ್ನು ಹೊಂದಿದೆ. ದೇಶದ ಅತ್ಯುತ್ತಮ ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಹಬ್-ಸ್ಪೋಕ್‌ಗಳ ಜಾಲವಾಗಿ ಸಹಕಾರ ನೀಡುತ್ತವೆ. 

4. Education.jpg

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ, ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಗಾಗಿ ಮುಕ್ತ ವೇದಿಕೆಯನ್ನು ರೂಪಿಸಲಾಗುವುದು ಮತ್ತು ಇದು ಆರೋಗ್ಯ ಪೂರೈಕೆದಾರರು ಮತ್ತು ಆರೋಗ್ಯ ಸೌಲಭ್ಯಗಳ ಡಿಜಿಟಲ್ ದಾಖಲಾತಿಗಳು, ವಿಶಿಷ್ಟ ಆರೋಗ್ಯ ಗುರುತು, ಸಹಮತದ ನೀತಿ ಮತ್ತು ಆರೋಗ್ಯ ಸೌಲಭ್ಯಗಳು ಸಾರ್ವತ್ರಿಕವಾಗಿ ಲಭ್ಯವಾಗಲಿವೆ. 
ಸಾಂಕ್ರಾಮಿಕ ರೋಗವು ಎಲ್ಲಾ ವಯೋಮಾನದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿರುವುದರಿಂದ, ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳಿಗೆ ಉತ್ತಮ ಲಭ್ಯತೆಗಾಗಿ  'ರಾಷ್ಟ್ರೀಯ ಟೆಲಿ ಮೆಂಟಲ್ ಹೆಲ್ತ್ ಪ್ರೋಗ್ರಾಂ' ಅನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಇದು 23 ಟೆಲಿ-ಮೆಂಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ನೆಟ್‌ವರ್ಕ್ ಅನ್ನು ಒಳಗೊಂಡಿರುತ್ತದೆ, ನಿಮ್ಹಾನ್ಸ್ ನೋಡಲ್ ಕೇಂದ್ರವಾಗಲಿದೆ ಮತ್ತು ಬೆಂಗಳೂರಿನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ (ಐಐಐಟಿಬಿ) ತಂತ್ರಜ್ಞಾನ ನೆರವನ್ನು ಒದಗಿಸುತ್ತದೆ.

HEALTH_M1.jpg

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹರ್ ಘರ್, ನಲ್ ಸೇ ಜಲ್ (ಪ್ರತಿಯೊಂದು ಮನೆಗೂ ಕೊಳಾಯಿ ನೀರು)ನಡಿ 2022-23 ರಲ್ಲಿ 3.8 ಕೋಟಿ ಕುಟುಂಬಗಳನ್ನು ತರಲು 60,000 ಕೋಟಿ ರೂ. ಪ್ರಕಟಿಸಿದ್ದಾರೆ. ಪ್ರಸ್ತುತ ವ್ಯಾಪ್ತಿ 8.7 ಕೋಟಿಯಾಗಿದ್ದು, ಇದರಲ್ಲಿ 5.5 ಕೋಟಿ ಕುಟುಂಬಗಳಿಗೆ ಕಳೆದ 2 ವರ್ಷಗಳಲ್ಲಿ ನಲ್ಲಿಯ ಮೂಲಕ ನೀರನ್ನು ಪೂರೈಸಲಾಗಿದೆ.

ಅದೇ ರೀತಿ, 2022-23 ರಲ್ಲಿ, ಪ್ರಧಾನಮಂತ್ರಿ ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಎರಡರಲ್ಲೂ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು, ಈ ಉದ್ದೇಶಕ್ಕಾಗಿ 48,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಪ್ರಧಾನಮಂತ್ರಿ ಗತಿಶಕ್ತಿ ಸ್ಫೂರ್ತಿಯಲ್ಲಿ ಮೂಲಸೌಕರ್ಯ ಮತ್ತು ಈಶಾನ್ಯದ ಅಗತ್ಯಗಳ ಆಧಾರದ ಮೇಲೆ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಹಣ ಒದಗಿಸಲು ಈಶಾನ್ಯ ಮಂಡಳಿಯ ಮೂಲಕ  ಪ್ರಧಾನಮಂತ್ರಿಯವರ ಈಶಾನ್ಯ ಅಭಿವೃದ್ಧಿಯ ಉಪಕ್ರಮವಾಗಿ ಹೊಸ ಯೋಜನೆ DevINE ಅನ್ನು ಜಾರಿಗೆ ತರಲಾಗುವುದು. ಆರಂಭಿಕವಾಗಿ 15೦೦ ಕೋಟಿ ರೂ.ಗಳ ಹಂಚಿಕೆಯು ಯುವಕರು ಮತ್ತು ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳನ್ನು ಸಕ್ರಿಯಗೊಳಿಸುತ್ತದೆ, ಮತ್ತು ವಿವಿಧ ವಲಯಗಳಲ್ಲಿನ ಕಂದಕಗಳನ್ನು ನಿವಾರಿಸುತ್ತದೆ.

17. PM's Development Initiative for North East Region (PM-DevINE).jpg

2022ರಲ್ಲಿ, 1.5 ಲಕ್ಷ ಅಂಚೆ ಕಚೇರಿಗಳಲ್ಲಿ ಶೇಕಡಾ 100ರಷ್ಟು ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಬರಲಿದ್ದು, ಹಣಕಾಸು ಪೂರಣ ಮತ್ತು 11 ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಎಟಿಎಂಗಳ ಮೂಲಕ ಖಾತೆಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಮತ್ತು ಅಂಚೆ ಕಚೇರಿ ಖಾತೆಗಳು ಮತ್ತು ಬ್ಯಾಂಕ್ ಖಾತೆಗಳ ನಡುವೆ ಆನ್ ಲೈನ್ ವರ್ಗಾವಣೆಯ ಸೌಲಭ್ಯವನ್ನು ಒದಗಿಸುತ್ತದೆ. ಇದರಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರು ಮತ್ತು ಹಿರಿಯ ನಾಗರಿಕರಿಗೆ ಸಹಾಯವಾಗಲಿದೆ, ಇದು ಪರಸ್ಪರ ಕಾರ್ಯಾಚರಣೆ ಮತ್ತು ಹಣಕಾಸು ಪೂರಣಕ್ಕೆ ಅನುವು ಮಾಡಿಕೊಡುತ್ತದೆ.

ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಂಗವಾಗಿ, ಡಿಜಿಟಲ್ ಬ್ಯಾಂಕಿಂಗ್ ನ ಪ್ರಯೋಜನಗಳು ದೇಶದ ಮೂಲೆ ಮೂಲೆಗೂ ಗ್ರಾಹಕ ಸ್ನೇಹಿ ರೀತಿಯಲ್ಲಿ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಮೂಲಕ ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ಸ್ಥಾಪಿಸಲು ಸರ್ಕಾರ ಪ್ರಸ್ತಾಪಿಸಿದೆ.

ಎಂಬೆಡೆಡ್ (ಅಂತರ್ಗತ) ಚಿಪ್ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಪಾಸ್ ಪೋರ್ಟ್ ಗಳ ವಿತರಣೆಯನ್ನು 2022-23ರಲ್ಲಿ ಜಾರಿಗೆ ತರಲಾಗುವುದು, ಇದು ನಾಗರಿಕರಿಗೆ ಅವರ ವಿದೇಶ ಪ್ರಯಾಣದಲ್ಲಿ ಅನುಕೂಲವನ್ನು ಹೆಚ್ಚಿಸುತ್ತದೆ.

Productivity enhancement and investment (Ease of Doing Business 2.0)_M2.jpg

ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಅಭಿವೃದ್ಧಿಶೀಲ ಭಾರತಕ್ಕೆ ನಿರ್ದಿಷ್ಟ ಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಈ ಕ್ಷೇತ್ರಗಳಲ್ಲಿ ಪ್ರಮಾಣೀಕೃತ ತರಬೇತಿಯನ್ನು ನೀಡಲು, ವಿವಿಧ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಐದು ಶೈಕ್ಷಣಿಕ ಸಂಸ್ಥೆಗಳನ್ನು ಉತ್ಕೃಷ್ಟತೆಯ ಕೇಂದ್ರಗಳಾಗಿ ನಿಯುಕ್ತಿಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು. ಈ ಕೇಂದ್ರಗಳಿಗೆ ತಲಾ 25೦ ಕೋಟಿ ರೂ.ಗಳ ದತ್ತಿ ನಿಧಿಯನ್ನು ಒದಗಿಸಲಾಗುವುದು.

ಅನಿಮೇಶನ್, ವಿಶುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ (ಎವಿಜಿಸಿ) ವಲಯಗಳು ಯುವಕರ ನೇಮಕಾತಿಯ ಅಪಾರ ಸಾಮರ್ಥ್ಯವನ್ನು ನೀಡುತ್ತವೆ. ಹೀಗಾಗಿ ಇದನ್ನು ಸಾಕಾರಗೊಳಿಸಲು ಮತ್ತು ನಮ್ಮ ಮಾರುಕಟ್ಟೆಗಳು ಮತ್ತು ಜಾಗತಿಕ ಬೇಡಿಕೆಗೆ ಸೇವೆ ಸಲ್ಲಿಸಲು ದೇಶೀಯ ಸಾಮರ್ಥ್ಯವನ್ನು ನಿರ್ಮಿಸುವ ಮಾರ್ಗೋಪಾಯಗಳ ಶಿಫಾರಸಿಗಾಗಿ ಎಲ್ಲಾ ಬಾಧ್ಯಸ್ಥಗಾರರೊಂದಿಗೆ ಎವಿಜಿಸಿ ಉತ್ತೇಜನ ಕಾರ್ಯಪಡೆಯನ್ನು ಸ್ಥಾಪಿಸಲಾಗುವುದು.

Productivity enhancement and investment (Ease of Doing Business 2.0)_M1.jpg

ಸಾಮಾನ್ಯವಾಗಿ ದೂರಸಂಪರ್ಕ ಮತ್ತು ವಿಶೇಷವಾಗಿ 5ಜಿ ತಂತ್ರಜ್ಞಾನವು ಪ್ರಗತಿಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ನೀಡುತ್ತದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಖಾಸಗಿ ಟೆಲಿಕಾಂ ಪೂರೈಕೆದಾರರು 2022-23ರ ಒಳಗೆ 5ಜಿ ಮೊಬೈಲ್ ಸೇವೆಗಳನ್ನು ಹೊರತರಲು ಅನುಕೂಲವಾಗುವಂತೆ 2022ರಲ್ಲಿ ಅಗತ್ಯ ಸ್ಪೆಕ್ಟ್ರಂ (ತರಂಗಾಂತರ) ಹರಾಜುಗಳನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.  ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ ಯೋಜನೆಯ ಭಾಗವಾಗಿ 5ಜಿಗಾಗಿ ಬಲಿಷ್ಠ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿನ್ಯಾಸ ನೇತೃತ್ವದ ಉತ್ಪಾದನಾ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ರಕ್ಷಣಾ ರಂಗದಲ್ಲಿ, ಸಶಸ್ತ್ರ ಪಡೆಗಳಿಗೆ ಉಪಕರಣಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಆಮದು ತಗ್ಗಿಸಿ, ಸ್ವಾವಲಂಬನೆಯಯನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. 2022-23 ರಲ್ಲಿ ದಾಸ್ತಾನು ಬಂಡವಾಳ ಬಜೆಟ್ ನ ಶೇಕಡಾ 68ರಷ್ಟನ್ನು ದೇಶೀಯ ಉದ್ಯಮಕ್ಕೆ ಮೀಸಲಿಡಲಾಗುವುದು, ಇದು 2021-22ರಲ್ಲಿ ಶೇಕಡಾ 58ರಷ್ಟಿತ್ತು.  ರಕ್ಷಣಾ ಸಂಶೋಧನೆ ಮತ್ತು  ಅಭಿವೃದ್ಧಿ  ಬಜೆಟ್ ನ ಶೇಕಡಾ 25ರಷ್ಟನ್ನು ಮೀಸಲಿಡುವ ಮೂಲಕ ಉದ್ಯಮ, ನವೋದ್ಯಮಗಳು ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ರಕ್ಷಣಾ ಸಂಶೋಧನೆಯನ್ನು ಮುಕ್ತಗೊಳಿಸಲಾಗುವುದು.

ಸನ್ ರೈಸ್ ಅವಕಾಶಗಳನ್ನು ಉಲ್ಲೇಖಿಸಿದ ಹಣಕಾಸು ಸಚಿವರು , ಕೃತಕ ಬುದ್ಧಿಮತ್ತೆ, ಭೂಪ್ರಾದೇಶಿಕ ವ್ಯವಸ್ಥೆಗಳು ಮತ್ತು ಡ್ರೋನ್ ಗಳು, ಸೆಮಿಕಂಡಕ್ಟರ್ ಮತ್ತು ಅದರ ಪರಿಸರ ವ್ಯವಸ್ಥೆ, ಬಾಹ್ಯಾಕಾಶ ಆರ್ಥಿಕತೆ, ಜೀನೋಮಿಕ್ಸ್ ಮತ್ತು ಔಷಧ, ಹಸಿರು ಇಂಧನ ಮತ್ತು ಸ್ವಚ್ಛ ಸಂಚಾರ ವ್ಯವಸ್ಥೆಗಳು ಸುಸ್ಥಿರ ಅಭಿವೃದ್ಧಿಗೆ ನೆರವಾಗಲಿದ್ದು, ದೇಶವನ್ನು ಆಧುನೀಕರಿಸಲು ಅಪಾರ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು. ಅವು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ ಮತ್ತು ಭಾರತೀಯ ಉದ್ಯಮವನ್ನು ಹೆಚ್ಚು ದಕ್ಷ ಮತ್ತು ಸ್ಪರ್ಧಾತ್ಮಕಗೊಳಿಸುತ್ತವೆ ಎಂದರು.

2030ರ ವೇಳೆಗೆ ಸ್ಥಾಪಿತ ಸೌರ ಸಾಮರ್ಥ್ಯದ 280 ಗಿ.ವ್ಯಾ. ಮಹತ್ವಾಕಾಂಕ್ಷೆಯ ಗುರಿಗಾಗಿ ದೇಶೀಯ ಉತ್ಪಾದನೆಯನ್ನು ಸುಗಮಗೊಳಿಸಲು,  ಪಾಲಿಸಿಲಿಕಾನ್ ನಿಂದ ಸೌರ ಪಿವಿ ಮಾಡ್ಯೂಲ್ ಗಳವರೆಗೆ ಸಂಪೂರ್ಣ ಸಂಯೋಜಿತ ಉತ್ಪಾದನಾ ಘಟಕಗಳಿಗೆ ಆದ್ಯತೆ ನೀಡುವ ಮೂಲಕ, ಹೆಚ್ಚಿನ ದಕ್ಷತೆಯ ಮಾಡ್ಯೂಲ್ ಗಳ ತಯಾರಿಕೆಗೆ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕಕ್ಕಾಗಿ 19,500 ಕೋಟಿ ರೂ.ಗಳ ಹೆಚ್ಚುವರಿ ಹಂಚಿಕೆಯನ್ನು ಮಾಡಲಾಗಿದೆ ಎಂದರು.

Transition to Carbon Neutral.jpg

2022-23ರಲ್ಲಿ ಸಾರ್ವಜನಿಕ ಹೂಡಿಕೆಯು ತನ್ನ ಮುಂಚೂಣಿಯ ನೇತೃತ್ವವನ್ನು ಮುಂದುವರಿಸಬೇಕು, ಖಾಸಗಿ ಹೂಡಿಕೆ ಮತ್ತು ಬೇಡಿಕೆಯನ್ನು ಉತ್ತೇಜಿಸಿ ಮತ್ತು ಪ್ರಮುಖಗೊಳಿಸಬೇಕು. ಹೀಗಾಗಿ ಕೇಂದ್ರ ಬಜೆಟ್‌ ನಲ್ಲಿ ಬಂಡವಾಳ ವೆಚ್ಚವನ್ನು ಮತ್ತೊಮ್ಮೆ ಶೇ.35.4ರಷ್ಟು ತೀವ್ರವಾಗಿ ಹೆಚ್ಚಿಸಲಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿರುವ 5.54 ಲಕ್ಷ ಕೋಟಿ ರೂ.ಗಳಿಂದ 2022-23ರಲ್ಲಿ 7.50 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವರು ಪ್ರತಿಪಾದಿಸಿದರು. ಇದು 2019-20ರ ವೆಚ್ಚಕ್ಕಿಂತ 2.2 ಪಟ್ಟು ಹೆಚ್ಚಾಗಿದೆ ಮತ್ತು 2022-23ರಲ್ಲಿ ಈ ವೆಚ್ಚವು ಜಿಡಿಪಿಯ ಶೇಕಡಾ 2.9 ರಷ್ಟಾಗಲಿದೆ. ರಾಜ್ಯಗಳಿಗೆ ಧನ ಸಹಾಯದ ಮೂಲಕ ಬಂಡವಾಳ ಸ್ವತ್ತುಗಳನ್ನು ರಚಿಸಲು ಒದಗಿಸಲಾದ ನಿಬಂಧನೆಯೊಂದಿಗೆ ಈ ಹೂಡಿಕೆಯೊಂದಿಗೆ, ಕೇಂದ್ರ ಸರ್ಕಾರದ 'ಪರಿಣಾಮಕಾರಿ ಬಂಡವಾಳ ವೆಚ್ಚ'ವು 2022-23ರಲ್ಲಿ 10.68 ಲಕ್ಷ ಕೋಟಿ ರೂ.ಗಳಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ, ಇದು ಜಿಡಿಪಿಯ ಸುಮಾರು ಶೇಕಡಾ 4.1 ರಷ್ಟಿರುತ್ತದೆ.

2022-23ರಲ್ಲಿ ಸರ್ಕಾರದ ಒಟ್ಟಾರೆ ಮಾರುಕಟ್ಟೆ ಸಾಲಗಳ ಭಾಗವಾಗಿ, ಹಸಿರು ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಸಾರ್ವಭೌಮ ಹಸಿರು ಬಾಂಡ್ ಗಳನ್ನು ತರಲಾಗುವುದು. ಇದರಿಂದ ಬರುವ ಆದಾಯವನ್ನು ಸಾರ್ವಜನಿಕ ವಲಯದ ಯೋಜನೆಗಳಲ್ಲಿ ನಿಯೋಜಿಸಲಾಗುವುದು, ಇದು ಆರ್ಥಿಕತೆಯಿಂದ ಇಂಗಾಲದ ತೀವ್ರತೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

2022-23 ರಿಂದ ಬ್ಲಾಕ್ ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೆಚ್ಚು ದಕ್ಷ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಡಿಜಿಟಲ್ ರೂಪಾಯಿಯನ್ನು ಪರಿಚಯಿಸಲು ಸರ್ಕಾರ ಪ್ರಸ್ತಾಪಿಸಲಾಗಿದೆ.

Central Bank Digital Currency.jpg

ಸಹಕಾರಿ ಒಕ್ಕೂಟ ವ್ಯವಸ್ಥೆಯ ನೈಜ ಮನೋಭಾವವನ್ನು ಪ್ರತಿಬಿಂಬಿಸಿದ ಕೇಂದ್ರ ಸರ್ಕಾರವು, 'ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ಆರ್ಥಿಕ ನೆರವು ನೀಡುವ ಯೋಜನೆ'ಯ ವೆಚ್ಚವನ್ನು ಬಜೆಟ್ ಅಂದಾಜಿನಲ್ಲಿ 10,000 ಕೋಟಿ ರೂ.ಗಳಿಂದ ಪ್ರಸಕ್ತ ವರ್ಷದ ಪರಿಷ್ಕೃತ ಅಂದಾಜುಗಳಲ್ಲಿ 15,000 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. ಇದಲ್ಲದೆ, 2022-23ಕ್ಕಾಗಿ, ಆರ್ಥಿಕತೆಯಲ್ಲಿ ಒಟ್ಟಾರೆ ಹೂಡಿಕೆಗಳನ್ನು ವೇಗಗೊಳಿಸಲು ರಾಜ್ಯಗಳಿಗೆ ಸಹಾಯ ಮಾಡಲು 1 ಲಕ್ಷ ಕೋಟಿ ರೂ. ಹಂಚಿಕೆಯನ್ನು ಮಾಡಲಾಗಿದೆ. ಈ ಐವತ್ತು ವರ್ಷಗಳ ಬಡ್ಡಿರಹಿತ ಸಾಲಗಳು ರಾಜ್ಯಗಳಿಗೆ ಅನುಮತಿಸುವ ಸಾಮಾನ್ಯ ಸಾಲಗಳಿಗಿಂತ ಹೆಚ್ಚಿನದಾಗಿರುತ್ತವೆ.  ಈ ಹಂಚಿಕೆಯನ್ನು ಪ್ರಧಾನ ಮಂತ್ರಿ ಗತಿಶಕ್ತಿ ಸಂಬಂಧಿತ ಮತ್ತು ರಾಜ್ಯಗಳ ಇತರ ಉತ್ಪಾದಕ ಬಂಡವಾಳ ಹೂಡಿಕೆಗೆ ಬಳಸಲಾಗುತ್ತದೆ.

15ನೇ ಹಣಕಾಸು ಆಯೋಗದ ಶಿಫಾರಸುಗಳ ಅನುಸಾರ 2022-23ರಲ್ಲಿ ರಾಜ್ಯಗಳಿಗೆ ಜಿಎಸ್ ಡಿಪಿಯ ಶೇ.4ರಷ್ಟು ವಿತ್ತೀಯ ಕೊರತೆಗೆ ಅವಕಾಶ ನೀಡಲಾಗುವುದು, ಅದರಲ್ಲಿ ಶೇ.0.5ರಷ್ಟು ವಿದ್ಯುತ್ ವಲಯದ ಸುಧಾರಣೆಗಳಿಗೆ ಸಂಬಂಧಿಸಿರುತ್ತದೆ ಎಂದು ಸಹ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು, ಇದಕ್ಕಾಗಿ ಈಗಾಗಲೇ 2021-22ರಲ್ಲಿ ಷರತ್ತುಗಳನ್ನು ತಿಳಿಸಲಾಗಿದೆ.

13. Providing Greater Fiscal Space to States.jpg

ತಮ್ಮ ಬಜೆಟ್ ಭಾಷಣದ ಭಾಗ -ಎ ಅನ್ನು ಪರಿಸಮಾಪ್ತಿಗೊಳಿಸಿದ  ಹಣಕಾಸು ಸಚಿವರು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.6.9 ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು. 2022-23ರಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇ.6.4ರಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ, ಇದು 2025-26ರ ವೇಳೆಗೆ ವಿತ್ತೀಯ ಕೊರತೆಯ ಮಟ್ಟವನ್ನು ಶೇ.4.5ಕ್ಕಿಂತ ಕಡಿಮೆಗೆ ತರಲು ಕಳೆದ ವರ್ಷ ತಾವು ಘೋಷಿಸಿದ ವಿತ್ತೀಯ ಕ್ರೋಡೀಕರಣದ ವಿಶಾಲ ಮಾರ್ಗಕ್ಕೆ ಅನುಗುಣವಾಗಿದೆ ಎಂದರು. 2022-23ರಲ್ಲಿ ವಿತ್ತೀಯ ಕೊರತೆಯ ಮಟ್ಟವನ್ನು ನಿಗದಿಪಡಿಸುವಾಗ, ಬಲಿಷ್ಠ ಮತ್ತು ಸುಸ್ಥಿರವಾದ ಸಾರ್ವಜನಿಕ ಹೂಡಿಕೆಯ ಮೂಲಕ ವೃದ್ಧಿಯನ್ನು ಪೋಷಿಸಲು ಅವರು ಕರೆ ನೀಡಿದರು.

Trends-in-Deficit-English.jpg

ಕೇಂದ್ರ ಬಜೆಟ್ 2022-23, ಸ್ಥಿರ ಮತ್ತು ಊಹಿಸಬಹುದಾದ ತೆರಿಗೆ ವ್ಯವಸ್ಥೆಯ ಘೋಷಿತ ನೀತಿಯನ್ನು ಮುಂದುವರಿಸುತ್ತಾ, ವಿಶ್ವಾಸಾರ್ಹ ತೆರಿಗೆ ವ್ಯವಸ್ಥೆಯನ್ನು ಸ್ಥಾಪಿಸುವ ದೃಷ್ಟಿಕೋನವನ್ನು ಮುಂದುವರಿಸುತ್ತಾ ಹೆಚ್ಚಿನ ಸುಧಾರಣೆಗಳನ್ನು ತರಲು ಉದ್ದೇಶಿಸಿದೆ.  ತೆರಿಗೆ ಮತ್ತು ಸುಂಕಗಳಿಗೆ ಸಂಬಂಧಿಸಿದ ಪ್ರಸ್ತಾಪಗಳು ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸುತ್ತವೆ, ತೆರಿಗೆದಾರರ ಸ್ವಯಂಪ್ರೇರಿತ ಅನುಸರಣೆಯನ್ನು ಉತ್ತೇಜಿಸುತ್ತವೆ ಮತ್ತು ಕಟ್ಲೆಗಳನ್ನು ತಗ್ಗಿಸುತ್ತವೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

ನೇರ ತೆರಿಗೆ ನಿಟ್ಟಿನಲ್ಲಿ, ದೋಷಗಳನ್ನು ಸರಿಪಡಿಸಲು ತೆರಿಗೆದಾರರಿಗೆ 2 ವರ್ಷಗಳಲ್ಲಿ ನವೀಕರಿಸಿದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಬಜೆಟ್ ಅನುಮತಿಸುತ್ತದೆ. ಇದು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ತೆರಿಗೆ ಪರಿಹಾರವನ್ನು ಸಹ ಒದಗಿಸುತ್ತದೆ. ಬಜೆಟ್ ಸಹಕಾರಿ ಸಂಸ್ಥೆಗಳಿಗೆ ಪರ್ಯಾಯ ಕನಿಷ್ಠ ತೆರಿಗೆ ದರ ಮತ್ತು ಉಪಕರವನ್ನು ಕಡಿಮೆ ಮಾಡುತ್ತದೆ.  ನವೋದ್ಯಮಗಳಿಗೆ ಪ್ರೋತ್ಸಾಹ ನೀಡಲು, ಅರ್ಹ ನವೋದ್ಯಮಗಳ ಸೇರ್ಪಡೆಯ ಅವಧಿಯನ್ನು  ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರಿ ನೌಕರರೊಂದಿಗೆ ಸಮಾನತೆಯನ್ನು ತರಲು ರಾಜ್ಯ ಸರ್ಕಾರಿ ನೌಕರರ ಎನ್.ಪಿಎಸ್ ಖಾತೆಗೆ ಉದ್ಯೋಗದಾತರ ಕೊಡುಗೆಯ ಮೇಲಿನ ತೆರಿಗೆ ಕಡಿತ ಮಿತಿಯನ್ನು ಹೆಚ್ಚಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಿದೆ. ಹೊಸದಾಗಿ ಸಂಯೋಜಿಸಲಾದ ಉತ್ಪಾದನಾ ಘಟಕಗಳನ್ನು ರಿಯಾಯಿತಿ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಉತ್ತೇಜಿಸಲಾಗುತ್ತದೆ. ವರ್ಚುವಲ್ ಸ್ವತ್ತುಗಳ ವರ್ಗಾವಣೆಯಿಂದ ಬರುವ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುವುದು. ಪುನರಾವರ್ತಿತ ಮನವಿಗಳನ್ನು ತಪ್ಪಿಸಲು ಬಜೆಟ್ ಉತ್ತಮ ವ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಪ್ರಸ್ತಾಪಿಸಿದೆ.

Tax Proposals 2.jpgTax Proposals.jpg

ಪರೋಕ್ಷ ತೆರಿಗೆಯ ಕಡೆಯಲ್ಲಿ, ವಿಶೇಷ ಆರ್ಥಿಕ ವಲಯಗಳಲ್ಲಿ ಸೀಮಾಸುಂಕ ಆಡಳಿತವನ್ನು ಸಂಪೂರ್ಣವಾಗಿ ಐಟಿ ಚಾಲಿತವಾಗಲಿದೆ ಎಂದು ಕೇಂದ್ರ ಬಜೆಟ್ ನಲ್ಲಿ ತಿಳಿಸಲಾಗಿದೆ. ಇದು ಬಂಡವಾಳ ಸರಕುಗಳು ಮತ್ತು ಯೋಜನಾ ಆಮದುಗಳಲ್ಲಿನ ರಿಯಾಯಿತಿ ದರಗಳನ್ನು ಹಂತಹಂತವಾಗಿ ತೆಗೆದುಹಾಕಲು ಮತ್ತು ಶೇ.7.5ರಷ್ಟು ಸಾಧಾರಣ ಸುಂಕವನ್ನು ಅನ್ವಯಿಸಲು ಅವಕಾಶ ಕಲ್ಪಿಸುತ್ತದೆ. ಕಸ್ಟಮ್ಸ್ ವಿನಾಯಿತಿಗಳು ಮತ್ತು ಸುಂಕ ಸರಳೀಕರಣದ ಪರಾಮರ್ಶೆಯನ್ನು ಬಜೆಟ್ ಒತ್ತಿ ಹೇಳುತ್ತದೆ, 350ಕ್ಕೂ ಹೆಚ್ಚು ವಿನಾಯಿತಿಗಳನ್ನು ಕ್ರಮೇಣ ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ. ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅನುಕೂಲವಾಗುವಂತೆ ಶ್ರೇಣೀಕೃತ ರಚನೆಯನ್ನು ಒದಗಿಸಲು ಸೀಮಾ ಸುಂಕ ದರಗಳನ್ನು ಮಾಪನ ಮಾಡಲಾಗುವುದು ಎಂದು ಅದು ಪ್ರಸ್ತಾಪಿಸುತ್ತದೆ. ಭಾರತದಲ್ಲಿ ತಯಾರಾದ ಕೃಷಿ ವಲಯಕ್ಕೆ ಉಪಕರಣಗಳು ಮತ್ತು ಸಾಧನಗಳ ಮೇಲಿನ ವಿನಾಯಿತಿಗಳನ್ನು ತರ್ಕಬದ್ಧಗೊಳಿಸುವ  ಕಾರ್ಯ ಕೈಗೊಳ್ಳಲಾಗುವುದು. ಉಕ್ಕಿನ ಸ್ಕ್ರ್ಯಾಪ್ ಗೆ ಸೀಮಾ ಸುಂಕ ವಿನಾಯಿತಿಯನ್ನು ವಿಸ್ತರಿಸಲಾಗುವುದು. ಮಿಶ್ರಣ ಮಾಡದ ಇಂಧನವು ಹೆಚ್ಚುವರಿ ವಿಭಿನ್ನ ಅಬಕಾರಿ ಸುಂಕವನ್ನು ಆಕರ್ಷಿಸುತ್ತದೆ.

Indirect Tax Proposals.jpg
 

Indirect Tax Proposals 2.jpg

ಹೆಚ್ಚುವರಿ ತೆರಿಗೆ ಪಾವತಿಯ ಮೇಲೆ ನವೀಕರಿಸಿದ ರಿಟರ್ನ್ ಸಲ್ಲಿಸಲು ತೆರಿಗೆದಾರರಿಗೆ ಅನುಮತಿಸುವ ಹೊಸ ನಿಬಂಧನೆಯನ್ನು ಬಜೆಟ್ ಪ್ರಸ್ತಾಪಿಸುತ್ತದೆ.  ಈ ನವೀಕರಿಸಿದ ರಿಟರ್ನ್ ಅನ್ನು ಸಂಬಂಧಿತ ಕರ ನಿರ್ಧರಣೆ ವರ್ಷದ ಅಂತ್ಯದಿಂದ ಎರಡು ವರ್ಷಗಳಲ್ಲಿ ಸಲ್ಲಿಸಬಹುದು. ಈ ಪ್ರಸ್ತಾಪದೊಂದಿಗೆ, ತೆರಿಗೆದಾರರಲ್ಲಿ ಒಂದು ವಿಶ್ವಾಸವನ್ನು ಮರು ನಿಗದಿಪಡಿಸಲಾಗುವುದು, ಅದು ತೆರಿಗೆದಾರರಿಗೆ ತಮ್ಮ ರಿಟರ್ನ್ ಸಲ್ಲಿಸುವಾಗ ಮೊದಲೇ ತಪ್ಪಿಸಿಕೊಂಡಿರಬಹುದಾದ ಆದಾಯವನ್ನು ಘೋಷಿಸಲು ಅನುವು ಮಾಡಿಕೊಡುತ್ತದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಇದು ಸ್ವಯಂಪ್ರೇರಿತ ತೆರಿಗೆ ಅನುಸರಣೆಯ ದಿಕ್ಕಿನಲ್ಲಿ ದೃಢವಾದ ಹೆಜ್ಜೆಯಾಗಿದೆ. 

ಸಹಕಾರ ಸಂಘಗಳು ಮತ್ತು ಕಂಪನಿಗಳ ನಡುವೆ ಒಂದು ಸಮಾನ ಅವಕಾಶ ಒದಗಿಸಲು, ಸಹಕಾರಿ ಸಂಘಗಳಿಗೆ ಪರ್ಯಾಯ ಕನಿಷ್ಠ ತೆರಿಗೆಯನ್ನು ಶೇಕಡಾ ಹದಿನೈದಕ್ಕೆ ಇಳಿಸಲು ಬಜೆಟ್ ಪ್ರಸ್ತಾಪಿಸಿದೆ. 1 ಕೋಟಿ ರೂ.ಗಿಂತ ಹೆಚ್ಚಿನ ಮತ್ತು 1೦ ಕೋಟಿ ರೂ.ಗಳವರೆಗೆ ಒಟ್ಟು ಆದಾಯ ಹೊಂದಿರುವವರಿಗೆ ಸಹಕಾರ ಸಂಘಗಳ ಮೇಲಿನ  ಉಪಕರವನ್ನು ಪ್ರಸ್ತುತ ಶೇಕಡಾ 12 ರಿಂದ 7 ಕ್ಕೆ ಇಳಿಸಲು  ಹಣಕಾಸು ಸಚಿವರು ಪ್ರಸ್ತಾಪಿಸಿದರು.

ವಿಕಲಚೇತನ ವ್ಯಕ್ತಿಯ ಪೋಷಕರು ಅಥವಾ ಪಾಲಕರು  ಅಂತಹ ವ್ಯಕ್ತಿಗೆ ವಿಮಾ ಯೋಜನೆಯನ್ನು ಪಡೆಯಬಹುದು. ಪ್ರಸ್ತುತ ಕಾನೂನು ಚಂದಾದಾರನ ಮರಣದ ನಂತರ ಅಂದರೆ ಪೋಷಕರು ಅಥವಾ ಪೋಷಕರ ಮರಣದ ನಂತರ ವಿಕಲಚೇತನ ವ್ಯಕ್ತಿಗೆ ದೊಡ್ಡ ಮೊತ್ತದ ಪಾವತಿ ಅಥವಾ ವರ್ಷಾಶನ ಲಭ್ಯವಿದ್ದರೆ ಮಾತ್ರ ಪೋಷಕರು ಅಥವಾ ಪೋಷಕರಿಗೆ ತೆರಿಗೆ ಕಡಿತವನ್ನು ಒದಗಿಸುತ್ತದೆ.  ಪೋಷಕರು/ಪಾಲಕರ ಜೀವಿತಾವಧಿಯಲ್ಲಿ ಅವಲಂಬಿತರಾದ ವಿಕಲಚೇತನರು, ಅಂದರೆ ಅರವತ್ತು ವರ್ಷ ವಯಸ್ಸನವರೆಗೆ ಪೋಷಕರು/ ಪಾಲಕರ ಮೇಲೆ ವಾರ್ಷಿಕ ಮತ್ತು ಒಟ್ಟಾರೆ ಮೊತ್ತವನ್ನು ಪಾವತಿಸಲು ಬಜೆಟ್ ಈಗ ಅನುಮತಿಸುತ್ತದೆ.

ಕೇಂದ್ರ ಸರ್ಕಾರವು ತನ್ನ ಉದ್ಯೋಗಿಯ ವೇತನದ ಶೇಕಡಾ 14 ರಷ್ಟನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್.ಪಿಎಸ್) ಹಂತ-1ಕ್ಕೆ ನೀಡುತ್ತದೆ. ಉದ್ಯೋಗಿಯ ಆದಾಯವನ್ನು ಲೆಕ್ಕಹಾಕುವಲ್ಲಿ ಇದರ ಕಡಿತಕ್ಕೆ ಅನುಮತಿಸಲಾಗುತ್ತದೆ.   ಆದಾಗ್ಯೂ, ರಾಜ್ಯ ಸರ್ಕಾರದ ಉದ್ಯೋಗಿಗಳ ಸಂದರ್ಭದಲ್ಲಿ ವೇತನದ ಶೇಕಡಾ 1೦ ರಷ್ಟು ಮಾತ್ರ ಅಂತಹ ಕಡಿತಕ್ಕೆ ಅನುಮತಿಸಲಾಗಿದೆ.  ಸಮಾನವಾಗಿ ಕಾಣುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರಿ ನೌಕರರ ಎನ್.ಪಿಎಸ್ ಖಾತೆಗೆ ಉದ್ಯೋಗದಾತರ ಕೊಡುಗೆಯ ಮೇಲೆ ತೆರಿಗೆ ಕಡಿತ ಮಿತಿಯನ್ನು ಶೇಕಡಾ 1೦ ರಿಂದ 14 ಕ್ಕೆ ಹೆಚ್ಚಿಸಲು ಬಜೆಟ್ ಪ್ರಸ್ತಾಪಿಸಿದೆ.

31.3.2022ರ ಮೊದಲು ಸ್ಥಾಪಿಸಲಾದ ಅರ್ಹ ನವೋದ್ಯಮಗಳಿಗೆ ಸೇರ್ಪಡೆಯಿಂದ ಹತ್ತು ವರ್ಷಗಳಲ್ಲಿ ಸತತ ಮೂರು ವರ್ಷಗಳವರೆಗೆ ತೆರಿಗೆ ಪ್ರೋತ್ಸಾಹಕವನ್ನು ಒದಗಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಅರ್ಹ ನವೋದ್ಯಮದ ಸೇರ್ಪಡೆಯ ಅವಧಿಯನ್ನು ಇನ್ನೂ ಒಂದು ವರ್ಷದವರೆಗೆ ಅಂದರೆ 31.03.2023 ರವರೆಗೆ ಅಂತಹ ತೆರಿಗೆ ಪ್ರೋತ್ಸಾಹಕವನ್ನು ವಿಸ್ತರಿಸಲು ಬಜೆಟ್ ಅವಕಾಶ ಒದಗಿಸುತ್ತದೆ.

ಕೆಲವು ದೇಶೀಯ ಕಂಪನಿಗಳಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ವ್ಯಾಪಾರ ವಾತಾವರಣವನ್ನು ರೂಪಿಸುವ ಪ್ರಯತ್ನದಲ್ಲಿ, ಹೊಸದಾಗಿ ಸಂಯೋಜಿಸಲಾದ ದೇಶೀಯ ಉತ್ಪಾದನಾ ಕಂಪನಿಗಳಿಗೆ ಸರ್ಕಾರವು ಶೇಕಡಾ 15 ರಷ್ಟು ತೆರಿಗೆಯ ರಿಯಾಯಿತಿಯ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದೆ. 115 ಬಿಎಬಿ ಸೆಕ್ಷನ್ ಅಡಿಯಲ್ಲಿ ಉತ್ಪಾದನೆ ಅಥವಾ ಉತ್ಪಾದನೆಯನ್ನು ಪ್ರಾರಂಭಿಸಲು ಕೊನೆಯ ದಿನಾಂಕವನ್ನು ಒಂದು ವರ್ಷ ಅಂದರೆ 2024ರ ಮಾರ್ಚ್ 31ರವರೆಗೆ  ವಿಸ್ತರಿಸಲು ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ.

ವರ್ಚುವಲ್ ಡಿಜಿಟಲ್ ಸ್ವತ್ತುಗಳ ತೆರಿಗೆಗಾಗಿ, ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇಕಡಾ 3೦ರ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದು ಬಜೆಟ್ ಪ್ರಸ್ತಾಪಿಸುತ್ತದೆ. ಸ್ವಾಧೀನ ವೆಚ್ಚವನ್ನು ಹೊರತುಪಡಿಸಿ ಅಂತಹ ಆದಾಯವನ್ನು ಲೆಕ್ಕಹಾಕುವಾಗ ಯಾವುದೇ ವೆಚ್ಚ ಅಥವಾ ಭತ್ಯೆಗೆ ಸಂಬಂಧಿಸಿದಂತೆ ಯಾವುದೇ ಕಡಿತವನ್ನುಅನುಮತಿಸಲಾಗುವುದಿಲ್ಲ. ಇದಲ್ಲದೆ, ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಯಿಂದ ನಷ್ಟವನ್ನು ಬೇರೆ ಯಾವುದೇ ಆದಾಯದ ವಿರುದ್ಧ ನಿಗದಿಪಡಿಸಲು ಸಾಧ್ಯವಿಲ್ಲ.  ವಹಿವಾಟಿನ ವಿವರಗಳನ್ನು ತಿಳಿಯಲು, ವಿತ್ತೀಯ ಮಿತಿಗಿಂತ ಹೆಚ್ಚಿನ ಪರಿಗಣನೆಯ ಶೇಕಡಾ 1 ರ ದರದಲ್ಲಿ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆಗೆ ಸಂಬಂಧಿಸಿದಂತೆ ಮಾಡಿದ ಪಾವತಿಯ ಮೇಲೆ ಟಿಡಿಎಸ್ ಗೆ ಒಂದು ಅವಕಾಶ ಕಲ್ಪಿಸಲಾಗಿದೆ. ವರ್ಚುವಲ್ ಡಿಜಿಟಲ್ ಆಸ್ತಿಯ ಉಡುಗೊರೆಯನ್ನು ಸ್ವೀಕರಿಸುವವರಿಗೆ ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ.

ಸದೃಢ ವ್ಯಾಜ್ಯ ನಿರ್ವಹಣೆಯ ನೀತಿಯನ್ನು ಮುನ್ನಡೆಸಲು ತೆರಿಗೆದಾರನ ವಿಷಯದಲ್ಲಿ ಕಾನೂನಿನ  ಪ್ರಶ್ನೆಯು ಯಾವುದೇ ಸಂದರ್ಭದಲ್ಲಿ ಅಧಿಕಾರ ವ್ಯಾಪ್ತಿಯು ಹೈಕೋರ್ಟ್ ಅಥವಾ ಸರ್ವೋಚ್ಚ ನ್ಯಾಯಾಲಯದ ಮುಂದೆ ಮೇಲ್ಮನವಿಯಲ್ಲಿ ಬಾಕಿ ಇರುವ ಕಾನೂನಿನ ಪ್ರಶ್ನೆಗೆ ಹೋಲುತ್ತಿದ್ದರೆ, ಇಲಾಖೆಯು ಈ ಕರ ನಿರ್ಧರಣೆದಾರನ ಪ್ರಕರಣದಲ್ಲಿ ಪುನರ್ ಮೇಲ್ಮನವಿಯನ್ನು ಸಲ್ಲಿಸುವ  ಅಧಿಕಾರ ವ್ಯಾಪ್ತಿಯ ಉನ್ನತ ಮಟ್ಟದ ಉನ್ನತ ನ್ಯಾಯಾಲಯವು ವ್ಯಾಪ್ತಿಯ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ನಿರ್ಧರಿಸುವವರೆಗೆ ಮುಂದೂಡಲಾಗುವುದು ಎಂದು ಬಜೆಟ್ ಪ್ರಸ್ತಾಪಿಸುತ್ತದೆ.

ಕಡಲಾಚೆಯ ವ್ಯುತ್ಪನ್ನ ಸಾಧನಗಳಿಂದ ಅನಿವಾಸಿಯ ಆದಾಯ, ಅಥವಾ ಕಡಲಾಚೆಯ ಬ್ಯಾಂಕಿಂಗ್ ಘಟಕವು ನೀಡುವ ಕೌಂಟರ್ ಉತ್ಪನ್ನಗಳ ಮೇಲೆ, ಹಡಗಿನ ಗುತ್ತಿಗೆಯ ಮೇಲಿನ ಬಡ್ಡಿ ಮತ್ತು ಐಎಫ್.ಎಸ್ ಸಿಯಲ್ಲಿ ಖಾತೆಯ ನಿರ್ವಹಣಾ ಸೇವೆಗಳಿಂದ ಪಡೆದ ಆದಾಯದ ಮೇಲೆ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.

ಆದಾಯ ಮತ್ತು ಲಾಭದ ಮೇಲಿನ ಯಾವುದೇ ಹೆಚ್ಚುವರಿ ಕರ ಅಥವಾ ಉಪ ಕರವನ್ನು ವ್ಯವಹಾರ ವೆಚ್ಚವಾಗಿ ಅನುಮತಿಸಲಾಗುವುದಿಲ್ಲ ಎಂದು ಬಜೆಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ.

ಸ್ಪಷ್ಟತೆಯನ್ನು ತರಲು ಮತ್ತು ತೆರಿಗೆ ವಂಚಕರಲ್ಲಿ ಪ್ರತಿರೋಧವನ್ನು ಹೆಚ್ಚಿಸಲು,  ಶೋಧ ಮತ್ತು ಸಮೀಕ್ಷೆ ಕಾರ್ಯಾಚರಣೆಗಳ ಸಮಯದಲ್ಲಿ ಪತ್ತೆಯಾದ ಅಘೋಷಿತ ಆದಾಯದ ವಿರುದ್ಧ ಯಾವುದೇ ನಷ್ಟವನ್ನು ಅನುಮತಿಸಬಾರದು ಎಂದು ಹಣಕಾಸು ಸಚಿವರು ಪ್ರಸ್ತಾಪಿಸಿದರು.

ವಿಶೇಷ ಆರ್ಥಿಕ ವಲಯಗಳ ಕಸ್ಟಮ್ಸ್ ಆಡಳಿತದಲ್ಲಿ ಸುಧಾರಣೆಗಳನ್ನು ಕೈಗೊಳ್ಳಲಾಗುವುದು ಮತ್ತು ಇನ್ನು ಮುಂದೆ ಅದನ್ನು ಸಂಪೂರ್ಣವಾಗಿ ಐಟಿ ಚಾಲಿತಗೊಳಿಸಲಾಗುವುದು ಮತ್ತು ಹೆಚ್ಚಿನ ಸೌಲಭ್ಯದ ಮೇಲೆ ಗಮನ ಕೇಂದ್ರೀಕರಿಸಿ ಮತ್ತು ಅಪಾಯ ಆಧಾರಿತ ತಪಾಸಣೆಗಳೊಂದಿಗೆ ಸೀಮಾಸುಂಕ ರಾಷ್ಟ್ರೀಯ ಪೋರ್ಟಲ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಬಜೆಟ್ ಹೇಳುತ್ತದೆ. ಈ ಸುಧಾರಣೆಯನ್ನು 2022ರ ಸೆಪ್ಟೆಂಬರ್ 30ರೊಳಗೆ ಜಾರಿಗೆ ತರಲಾಗುವುದು.

ಬಂಡವಾಳ ಸರಕುಗಳು ಮತ್ತು ಯೋಜನಾ ಆಮದುಗಳಲ್ಲಿ ರಿಯಾಯಿತಿ ದರಗಳನ್ನು ಹಂತ ಹಂತವಾಗಿ ತೆಗೆದು ಹಾಕಲು ಮತ್ತು ಶೇಕಡಾ 7.5 ರಷ್ಟು ಸಾಧಾರಣ ಸುಂಕವನ್ನು ಅನ್ವಯಿಸಲು ಬಜೆಟ್ ಪ್ರಸ್ತಾಪಿಸಿದೆ. ದೇಶದೊಳಗೆ ತಯಾರಿಸಲಾಗದ ಸುಧಾರಿತ ಯಂತ್ರೋಪಕರಣಗಳಿಗೆ ಕೆಲವು ವಿನಾಯಿತಿಗಳು ಮುಂದುವರಿಯುತ್ತವೆ.  ಬಂಡವಾಳ ಸರಕುಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ವಿಶೇಷ ಎರಕ ಹೊಯ್ದ, ಬಾಲ್ ಸ್ಕ್ರೂ ಮತ್ತು ರೇಖೀಯ ಚಲನೆ ಮಾರ್ಗದರ್ಶಿಯಂತಹ ಇನ್ ಪುಟ್ ಗಳಲ್ಲಿ ಕೆಲವು ವಿನಾಯಿತಿಗಳನ್ನು ಪರಿಚಯಿಸಲಾಗಿದೆ.

350ಕ್ಕೂ ಹೆಚ್ಚು ವಿನಾಯಿತಿ ನಮೂದುಗಳನ್ನು ಕ್ರಮೇಣ ಹಂತಹಂತವಾಗಿ ತೆಗೆದು ಹಾಕಲಾಗುವುದು. ಇವುಗಳಲ್ಲಿ ಕೆಲವು ಕೃಷಿ ಉತ್ಪನ್ನಗಳು, ರಾಸಾಯನಿಕಗಳು, ಬಟ್ಟೆಗಳು, ವೈದ್ಯಕೀಯ ಸಾಧನಗಳು ಮತ್ತು ಔಷಧಗಳು ಮತ್ತು ಸಾಕಷ್ಟು ದೇಶೀಯ ಸಾಮರ್ಥ್ಯ ಅಸ್ತಿತ್ವದಲ್ಲಿರುವ ಔಷಧಿಗಳ ಮೇಲೆ ವಿನಾಯಿತಿ ಸೇರಿದೆ.  ಇದಲ್ಲದೆ, ಹಲವಾರು ರಿಯಾಯಿತಿ ದರಗಳನ್ನು ವಿವಿಧ ಅಧಿಸೂಚನೆಗಳ ಮೂಲಕ ಶಿಫಾರಸು ಮಾಡುವ ಬದಲು ಸೀಮಾಸುಂಕ ಪರಿಶಿಷ್ಟಗಳಲ್ಲಿ ಅಳವಡಿಸಲಾಗುತ್ತಿದೆ.

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ, ಧರಿಸಬಹುದಾದಂತಹ ಸಾಧನಗಳು, ಆಲಿಸಬಹುದಾದ ಸಾಧನಗಳು ಮತ್ತು ಎಲೆಕ್ಟ್ರಾನಿಕ್ ಸ್ಮಾರ್ಟ್ ಮೀಟರ್ ಗಳ ದೇಶೀಯ ತಯಾರಿಕೆಗೆ ಅನುಕೂಲವಾಗುವಂತೆ ಶ್ರೇಣೀಕೃತ ದರ ರಚನೆಯನ್ನು ಒದಗಿಸಲು ಸೀಮಾ ಸುಂಕ ದರಗಳನ್ನು ನಿರ್ಧರಣೆ ಮಾಡಲಾಗುತ್ತಿದೆ.  ಮೊಬೈಲ್ ಫೋನ್ ಚಾರ್ಜರ್ ಗಳ ಟ್ರಾನ್ಸ್ ಫಾರ್ಮರ್ ನ ಭಾಗಗಳು ಮತ್ತು ಮೊಬೈಲ್ ಕ್ಯಾಮೆರಾ ಮಾಡ್ಯೂಲ್ ನ ಕ್ಯಾಮೆರಾ ಲೆನ್ಸ್ ಮತ್ತು ಇತರ ಕೆಲವು ವಸ್ತುಗಳಿಗೂ ಸುಂಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಹರಳು ಮತ್ತು ಆಭರಣ ವಲಯಕ್ಕೆ ಉತ್ತೇಜನ ನೀಡಲು, ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನದ ಹರಳುಗಳ ಮೇಲಿನ ಸೀಮಾ ಸುಂಕವನ್ನು ಶೇಕಡಾ 5ಕ್ಕೆ ತಗ್ಗಿಸಲಾಗುತ್ತಿದೆ. ಇ-ಕಾಮರ್ಸ್ ಮೂಲಕ ಆಭರಣಗಳ ರಫ್ತಿಗೆ ಅನುಕೂಲವಾಗುವಂತೆ, ಈ ವರ್ಷದ ಜೂನ್ ವೇಳೆಗೆ ಸರಳೀಕೃತ ನಿಯಂತ್ರಣ ಚೌಕಟ್ಟನ್ನು ಜಾರಿಗೆ ತರಲಾಗುವುದು. ಕಡಿಮೆ ಮೌಲ್ಯದ ಅನುಕರಣೆ ಆಭರಣಗಳ ಆಮದನ್ನು ನಿರಾಕರಿಸಲು, ಗಿಲೀಟು ಆಭರಣಗಳ ಮೇಲಿನ ಸೀಮಾ ಸುಂಕವನ್ನು ಪ್ರತಿ ಕೆ.ಜಿ.ಗೆ ಕನಿಷ್ಠ 4೦೦ ರೂ.ಗಳ ಸುಂಕವನ್ನು ಅದರ ಆಮದಿಗೆ ಪಾವತಿಸುವ ರೀತಿಯಲ್ಲಿ ಶಿಫಾರಸು ಮಾಡಲಾಗುತ್ತಿದೆ.

ಪೆಟ್ರೋಲಿಯಂ ಸಂಸ್ಕರಣೆಗಾಗಿ ಮೆಥನಾಲ್, ಅಸಿಟಿಕ್ ಆಮ್ಲ ಮತ್ತು ಹೆವಿ ಫೀಡ್ ಸ್ಟಾಕ್ ಗಳ ಕೆಲವು ನಿರ್ಣಾಯಕ ರಾಸಾಯನಿಕಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲಾಗಿದ್ದರೆ, ಆದರೆ ಸಾಕಷ್ಟು ದೇಶೀಯ ಸಾಮರ್ಥ್ಯ ಅಸ್ತಿತ್ವದಲ್ಲಿರುವ ಸೋಡಿಯಂ ಸೈನೈಡ್ ಮೇಲೆ ಸುಂಕವನ್ನು ಹೆಚ್ಚಿಸಲಾಗಿದೆ.

ಕೊಡೆಗಳ ಮೇಲಿನ ಸುಂಕವನ್ನು ಶೇಕಡಾ 20ಕ್ಕೆ ಏರಿಸಲಾಗಿದೆ. ಕೊಡೆಗಳ ಭಾಗಗಳಿಗೆ ವಿನಾಯಿತಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಭಾರತದಲ್ಲಿ ತಯಾರಿಸಲಾಗುವ ಕೃಷಿ ವಲಯದ ಉಪಕರಣಗಳು ಮತ್ತು ಸಾಧನಗಳ ಮೇಲೆ ವಿನಾಯಿತಿಯನ್ನು ತರ್ಕಬದ್ಧಗೊಳಿಸಲಾಗುತ್ತಿದೆ. ಕಳೆದ ವರ್ಷ ಉಕ್ಕಿನ ಸ್ಕ್ರ್ಯಾಪ್ ಗೆ ನೀಡಲಾದ ಸೀಮಾ ಸುಂಕ ವಿನಾಯಿತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ. ತುಕ್ಕು ಹಿಡಿಯದ ಉಕ್ಕು ಮತ್ತು ಲೇಪಿತ ಉಕ್ಕು ಪಟ್ಟಿ ಉತ್ಪನ್ನಗಳು, ಅಲಾಯ್ ಉಕ್ಕು ಮತ್ತು ಹೈ-ಸ್ಪೀಡ್ ಉಕ್ಕಿನ ಪಟ್ಟಿಗಳ ಮೇಲೆ ಕೆಲವು ಆಂಟಿ-ಡಂಪಿಂಗ್ ಮತ್ತು ಸಿವಿಡಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ.

ರಫ್ತು ಉತ್ತೇಜಿಸಲು, ಕರಕುಶಲ ವಸ್ತುಗಳು, ಜವಳಿ ಮತ್ತು ಚರ್ಮದ ಉಡುಪುಗಳು, ಚರ್ಮದ ಪಾದರಕ್ಷೆಗಳ ವಿಶ್ವಾಸಾರ್ಹ ರಫ್ತುದಾರರಿಗೆ ಅಗತ್ಯವಿರುವ ಅಲಂಕಾರಿಕ, ಟ್ರಿಮ್ಮಿಂಗ್, ಫಾಸ್ಟೆನರ್‌ ಗಳು, ಗುಂಡಿಗಳು, ಝಿಪ್ಪರ್, ಲೈನಿಂಗ್ ಮೆಟೀರಿಯಲ್, ನಿರ್ದಿಷ್ಟಪಡಿಸಿದ ಚರ್ಮ, ಪೀಠೋಪಕರಣ ಫಿಟ್ಟಿಂಗ್‌ ಗಳು ಮತ್ತು ಪೊಟ್ಟಣ ಮಾಡುವ ಪೆಟ್ಟಿಗೆಗಳಂತಹ ವಸ್ತುಗಳ ಮೇಲೆ ವಿನಾಯಿತಿಗಳನ್ನು ಒದಗಿಸಲಾಗುತ್ತಿದೆ. ಮತ್ತು ಇತರ ಸರಕುಗಳು. ಸೀಗಡಿ ಆಕ್ವಾಕಲ್ಚರ್‌ ಗೆ ಅದರ ರಫ್ತುಗಳನ್ನು ಉತ್ತೇಜಿಸಲು ಅಗತ್ಯವಿರುವ ಕೆಲವು ಒಳಹರಿವಿನ ಮೇಲೆ ಸುಂಕವನ್ನು ಕಡಿಮೆ ಮಾಡಲಾಗುತ್ತಿದೆ.

ಇಂಧನದ ಮಿಶ್ರಣವು ಈ ಸರ್ಕಾರದ ಆದ್ಯತೆಯಾಗಿದೆ.  ಇಂಧನದ ಮಿಶ್ರಣದ ಪ್ರಯತ್ನಗಳನ್ನು ಉತ್ತೇಜಿಸಲು, ಮಿಶ್ರಣ ಮಾಡದ ಇಂಧನವು 2022 ರ ಅಕ್ಟೋಬರ್ 1ನೇ ತಾರೀಖಿನಿಂದ ಪ್ರತಿ ಲೀಟರ್ ಗೆ  2 ರೂ. ಹೆಚ್ಚುವರಿ ಅಬಕಾರಿ ಸುಂಕವನ್ನು ಆಕರ್ಷಿಸುತ್ತದೆ.

***(Release ID: 1794397) Visitor Counter : 1047