ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸುಭಾಷ್‌ ಚಂದ್ರ ಬೋಸ್‌ ಅವರ 125ನೇ ಜನ್ಮದಿನವನ್ನು ವರ್ಷವಿಡೀ ಆಚರಿಸಲಾಗುವುದು. ಬೋಸ್‌ ಅವರಿಗೆ ಗೌರವ ಸಮರ್ಪಿಸಲು ಇಂಡಿಯಾ ಗೇಟ್‌ನಲ್ಲಿ ಅವರದ್ದೊಂದು ಪ್ರತಿಮೆ ಸ್ಥಾಪಿಸಲಾಗುವುದು


ವಿಗ್ರಹ ನಿರ್ಮಾಣದ ಕೆಲಸ ಮುಗಿಯುವವರೆಗೂ ಅದೇ ಸ್ಥಳದಲ್ಲಿ ನೇತಾಜಿ ಅವರ ಮೂರು ಆಯಾಮಗಳಿರುವ ಬೆಳಕಿನ ಮೂಲಕ ಮೂಡುವ ಹಾಲೊಗ್ರಾಮ್‌ ಪ್ರತಿಮೆಯನ್ನು ಸ್ಥಾಪಿಸಲಾಗುವುದು

ಪರಾಕ್ರಮ ದಿವಸದಂದು ನೇತಾಜಿ ಅವರ ಹಾಲೊಗ್ರಾಮ್‌ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸುವರು

2019ರಿಂದ 2022ರ ಸುಭಾಸ ಚಂದ್ರ ಬೋಸ್‌ ಆಪ್ದ ಪ್ರಬಂಧನ್‌ ಪುರಸ್ಕಾರಗಳನ್ನು ಪ್ರಧಾನಿ ನೀಡುವರು

Posted On: 21 JAN 2022 6:34PM by PIB Bengaluru

ಸುಭಾಷ್‌ ಚಂದ್ರ ಬೋಸ್‌ ಅವರ ಜನ್ಮ ದಿನೋತ್ಸವದ 125ನೇ ವರ್ಷದ ಸಂಭ್ರಮಾಚರಣೆಗೆ ಹಾಗು ಒಂದು ವರ್ಷದುದ್ದಕ್ಕೂ ಆಚರಿಸಲಾಗುವ ಸಂಭ್ರಮಕ್ಕಾಗಿ ಸುಭಾಸ ಚಂದ್ರಬೋಸ್‌ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ ಬಳಿ ಸ್ಥಾಪಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. 

ಗ್ರಾನೈಟ್‌ ಶಿಲೆಯಲ್ಲಿ ನಿರ್ಮಿಸಲಾಗುವ ಈ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರು ನೀಡಿರುವ ಕೊಡುಗೆಗೆ ಗೌರವ ಸೂಚಿಸಲು ಸೂಕ್ತವಾಗಿದೆ. ದೇಶವು ಹೀಗೆ ಗೌರವ ಸೂಚಿಸುವ ಮೂಲಕ ಅವರ ಋಣಿಯಾಗಿರುವುದನ್ನು ತೋರಲಿದೆ. ಪ್ರತಿಮೆಯ ನಿರ್ಮಾಣ ಕಾರ್ಯ ಮುಗಿಯುವವರೆಗೂ ನೇತಾಜಿ ಅವರ ಹಾಲೊಗ್ರಾಮ್‌ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಹಾಲೊಗ್ರಾಮ್‌ ಪ್ರತಿಮೆಯನ್ನು ನೇತಾಜಿ ಅವರ ಹುಟ್ಟುಹಬ್ಬದಂದು ಜ.23ರಂದು ಸಂಜೆ 6 ಗಂಟೆಗೆ ಲೋಕಾರ್ಪಣೆ ಮಾಡುವರು.

ಈ ಹಾಲೊಗ್ರಾಮ್‌ ಪ್ರತಿಮೆಗೆ 4ಕೆ ಪ್ರೊಜೆಕ್ಟರ್‌ ಬಳಸಿ, 30,000 ದಷ್ಟು ಬೆಳಕಿನ ತೀಕ್ಷ್ಣತೆಯ ಪ್ರಮಾಣ ಇದ್ದು, ಶೇ 90ರಷ್ಟು ಪಾರದರ್ಶಕ ವಾಗಿರುವಂತಹ ಹಾಲೊಗ್ರಾಫಿಕ್‌ ಸ್ಕ್ರೀನ್‌ ಮೂಲಕ ಈ ಪ್ರತಿಮೆಯನ್ನು ಮೂಡಿಸಲಾಗುತ್ತದೆ. ನೋಡುಗರಿಗೆ ಈ ಪರದೆ ಕಾಣದಂತೆ ಅಳವಡಿಸಲಾಗಿರುತ್ತದೆ. 3ಡಿ ಚಿತ್ರವು ಹಾಲೋಗ್ರಾಮ್‌ನ ಪ್ರತಿಮೆ ಮೂಡುವಂತೆ ವಿನ್ಯಾಸಗೊಳಿಸಲಾಗುತ್ತದೆ. ಈ ಪ್ರತಿಮೆಯ ಎತ್ತರವು 28 ಅಡಿ, ಅಗಲ ಆರು ಅಡಿ ಆಗಿರುತ್ತದೆ.  

ಈ ಕಾರ್ಯಕ್ರಮದ ಸಂದರ್ಭದಲ್ಲಿ ಸುಭಾಸ ಚಂದ್ರ ಬೋಸ್‌ ಆಪ್ದಾ ಪ್ರಬಂಧನ್ ಪುರಸ್ಕಾರಗಳನ್ನು ನೀಡುವರು. 2019,20,21, ಹಾಗೂ 22ರ ಸಾಲಿಗೆ ಸಂಬಂಧಿಸಿದಂತೆ ಒಟ್ಟು ಏಳು ಪುರಸ್ಕಾರಗಳನ್ನು ನೀಡಲಾಗುತ್ತದೆ. 

ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ಸ್ವಾರ್ಥರಹಿತವಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಹಾಗೂ ಸಂಘಟನೆಗಳನ್ನು ಗುರುತಿಸಿ, ಕೇಂದ್ರ ಸರ್ಕಾರವು ಸುಭಾಸ ಚಂದ್ರ ಬೋಸ್‌ ಆಪ್ದಾ ಪ್ರಬಂಧನ್‌ ಪುರಸ್ಕಾರ ನೀಡಲು ನಿರ್ಧರಿಸಿದೆ. ಈ ಪುರಸ್ಕಾರಗಳನ್ನು ಪ್ರತಿ ವರ್ಷ ಜ.23ರಂದು ಸುಭಾಸ ಚಂದ್ರಬೋಸ್‌ ಅವರ ಜಯಂತಿಯಂದು ಘೋಷಿಸಲಾಗುವುದು. ಈ ಪ್ರಶಸ್ತಿಯು ಸಂಘ, ಸಂಸ್ಥೆಗಳಿಗೆ ₹51 ಲಕ್ಷ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ವ್ಯಕ್ತಿಗಳಿಗೆ ₹5 ಲಕ್ಷ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ.   

ಸ್ವಾಂತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವೀರ ಸೇನಾನಿಗಳಿಗೆ ಗೌರವ ಸಲ್ಲಿಸುವುದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರಂತರವಾಗಿ ಮುಂಚೂಣಿಯಲ್ಲಿರುತ್ತಾರೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಸ ಚಂದ್ರ ಬೋಸ್‌ ಅವರ ಮೇಲೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿವರ್ಷವೂ ನೇತಾಜಿ ಅವರ ಹುಟ್ಟುಹಬ್ಬವನ್ನು ಪರಾಕ್ರಮ ದಿವಸ ಎಂದು ಆಚರಿಸುವುದಾಗಿ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಇನ್ನು ಜ.23ರಿಂದಲೇ ಆರಂಭವಾಗಲಿದೆ.

***


(Release ID: 1791669) Visitor Counter : 300