ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳ ಜೊತೆ ಸಂವಾದದಲ್ಲಿ ಪ್ರಧಾನ ಮಂತ್ರಿ ಅವರ ಸಮಾರೋಪ ಭಾಷಣ
Posted On:
13 JAN 2022 7:50PM by PIB Bengaluru
2022ರಲ್ಲಿ ಇದು ಮೊದಲ ಸಭೆ. ಎಲ್ಲಕ್ಕಿಂತ ಮೊದಲು ನಿಮ್ಮೆಲ್ಲರಿಗೂ ಲೋಹ್ರಿಯ ಹಾರ್ದಿಕ ಶುಭಾಶಯಗಳು!. ಮಕರ ಸಂಕ್ರಾಂತಿ, ಪೊಂಗಲ್, ಭೋಗಾಲಿ ಬಿಹು, ಉತ್ತರಾಯಣ ಮತ್ತು ಪೌಶ್ ಹಬ್ಬಗಳಿಗೆ ಮುಂಚಿತವಾಗಿಯೇ ಶುಭಾಶಯಗಳು. ನೂರು ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಭಾರತದ ಹೋರಾಟ ತನ್ನ ಮೂರನೆ ವರ್ಷಕ್ಕೆ ಕಾಲಿಟ್ಟಿದೆ. ಕಠಿಣ ಪರಿಶ್ರಮ ನಮ್ಮ ಏಕೈಕ ಹಾದಿ ಮತ್ತು ಗೆಲುವು ನಮ್ಮೆದುರಿನ ಏಕೈಕ ಆಯ್ಕೆ. ನಾವು, ಭಾರತದ 130 ಕೋಟಿ ಜನರು ಖಚಿತವಾಗಿಯೂ ನಮ್ಮ ಪ್ರಯತ್ನಗಳ ಮೂಲಕ ಕೊರೊನಾ ವಿರುದ್ಧ ಜಯ ಗಳಿಸುತ್ತೇವೆ. ಇಂತಹ ನಂಬಿಕೆ ನಿಮ್ಮೆಲ್ಲರಿಂದ ನಾನು ಕೇಳಲ್ಪಟ್ಟ ಮಾತುಗಳಲ್ಲಿದೆ. ಆರೋಗ್ಯ ಕಾರ್ಯದರ್ಶಿಗಳು ಹೊಸ ರೂಪಾಂತರಿ ತಳಿಯಾದ ಒಮಿಕ್ರಾನ್ ಉಂಟು ಮಾಡಿರುವ ಸವಾಲು ಮತ್ತು ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ನಮಗೆ ವಿವರಿಸಿದ್ದಾರೆ. ಅಮಿತ್ ಶಾ ಜೀ ಅವರು ಆರಂಭದಲ್ಲಿ ಕೆಲವು ಸಂಗತಿಗಳನ್ನು ಹೇಳಿದ್ದಾರೆ. ಇಂದು ಭಾರತದಾದ್ಯಂತದ ಮುಖ್ಯಮಂತ್ರಿಗಳು ಹಲವು ಪ್ರಮುಖ ಅಂಶಗಳನ್ನು, ಸಂಗತಿಗಳನ್ನು ಮಂಡಿಸಿದ್ದಾರೆ.
ಸ್ನೇಹಿತರೇ,
ಒಮಿಕ್ರಾನ್ ಗೆ ಸಂಬಂಧಿಸಿ ಮೊದಲು ಇದ್ದ ಆತಂಕ, ಕಳವಳಗಳು ನಿಧಾನವಾಗಿ ಈಗ ನಿವಾರಣೆಯಾಗುತ್ತಿವೆ. ಒಮಿಕ್ರಾನ್ ರೂಪಾಂತರಿ ತಳಿ ಈ ಮೊದಲಿನ ರೂಪಾಂತರಿಗಳಿಗಿಂತ ಬಹಳ ಹೆಚ್ಚು ವೇಗದಲ್ಲಿ ಜನಸಮೂಹದಲ್ಲಿ ಹರಡುತ್ತಿದೆ. ಅಮೆರಿಕಾದಂತಹ ದೇಶದಲ್ಲಿ ಒಂದು ದಿನದಲ್ಲಿ 14 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ನಮ್ಮ ವಿಜ್ಞಾನಿಗಳು ಮತ್ತು ಆರೋಗ್ಯ ತಜ್ಞರು ಸತತವಾಗಿ ವಿವಿಧ ಪರಿಸ್ಥಿತಿಗಳನ್ನು ಮತ್ತು ದತ್ತಾಂಶಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಒಂದು ಸಂಗತಿ ಸ್ಪಷ್ಟವಾಗಿದೆ, ಅದೆಂದರೆ ನಾವು ಎಚ್ಚರಿಕೆಯಿಂದಿರಬೇಕು ಮತ್ತು ಜಾಗೃತರಾಗಿರಬೇಕು, ಆದರೆ ಅದೇ ಸಮಯದಲ್ಲಿ ನಾವು ಅಲ್ಲಿ ಭಯಕ್ಕೆ ಆಸ್ಪದ ನೀಡಬಾರದು. ಈ ಹಬ್ಬದ ಸಮಯದಲ್ಲಿ ಜನರಲ್ಲಿ ಮತ್ತು ಆಡಳಿತದಲ್ಲಿ ಜಾಗ್ರತೆಯ ಮಟ್ಟ ಕುಸಿಯದಂತೆ ಖಾತ್ರಿಪಡಿಸಬೇಕು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಮೊದಲು ಕೈಗೊಂಡಂತಹ ಮುಂಜಾಗರೂಕತಾ, ಸಕ್ರಿಯವಾದ ಮತ್ತು ಸಾಮೂಹಿಕ ಕ್ರಮಗಳು ಈ ಸಮಯದಲ್ಲೂ ಜಯದ ಮಂತ್ರಗಳಾಗಿರುತ್ತವೆ. ಕೊರೊನಾ ಸೋಂಕನ್ನು ನಾವು ನಿಯಂತ್ರಣ ಮಾಡಿದಷ್ಟೂ ನಮಗೆ ಸಮಸ್ಯೆಗಳೂ ಕಡಿಮೆಯಾಗುತ್ತವೆ. ನಾವು ನಮ್ಮ ವೈದ್ಯಕೀಯ ಮೂಲಸೌಕರ್ಯ ಮತ್ತು ಮಾನವ ಶಕ್ತಿಯನ್ನು ಜಾಗೃತಿಗೆ ಸಂಬಂಧಿಸಿ ವಿಜ್ಞಾನಾಧಾರಿತ ಜ್ಞಾನಕ್ಕೆ ಆದ್ಯತೆ ನೀಡಿ ಹೆಚ್ಚಿಸುತ್ತಾ ಹೋಗುವುದನ್ನು ಮುಂದುವರೆಸಬೇಕು.
ಸ್ನೇಹಿತರೇ,
ಜಗತ್ತಿನ ಬಹುಪಾಲು ತಜ್ಞರು ರೂಪಾಂತರಿತ ತಳಿ ಯಾವುದೇ ಆಗಿರಲಿ, ಕೊರೊನಾ ವಿರುದ್ಧ ಹೋರಾಡಲು ಲಸಿಕಾಕರಣ ಅತ್ಯಂತ ಸಮರ್ಪಕ ಅಸ್ತ್ರ ಎಂಬುದಾಗಿ ಹೇಳುತ್ತಿದ್ದಾರೆ. ಭಾರತದಲ್ಲಿ ತಯಾರಾದ ಲಸಿಕೆಗಳು ಜಗತ್ತಿನಾದ್ಯಂತ ತಮ್ಮ ಹೆಚ್ಚುಗಾರಿಕೆಯನ್ನು ಸಾಬೀತು ಮಾಡುತ್ತಿವೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿ, ಇಂದು ಭಾರತವು ವಯಸ್ಕ ಜನಸಂಖ್ಯೆಯ ಸುಮಾರು 92 ಪ್ರತಿಶತ ಜನರಿಗೆ ಮೊದಲ ಡೋಸಿನ ಲಸಿಕೆಯನ್ನು ನೀಡಿದೆ. ದೇಶದಲ್ಲಿ ಎರಡನೇ ಡೋಸಿನ ಲಸಿಕೆ ಸುಮಾರು 70 ಪ್ರತಿಶತ ಜನರಿಗೆ ತಲುಪಿದೆ. ಮತ್ತು ನಮ್ಮ ಲಸಿಕಾಕರಣ ಆಂದೋಲನ ಒಂದು ವರ್ಷ ಪೂರೈಸಲು ಇನ್ನೂ ಮೂರು ದಿನ ಬಾಕಿ ಇದೆ. ಹತ್ತು ದಿನಗಳಲ್ಲಿ ಭಾರತವು ಸುಮಾರು ಮೂರು ಕೋಟಿ ಹದಿಹರೆಯದವರಿಗೆ ಲಸಿಕೆ ಹಾಕಿದೆ. ಇದು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ ಮತ್ತು ಈ ಸವಾಲನ್ನು ಎದುರಿಸಲು ನಮ್ಮ ಸಿದ್ಧತಾ ಸ್ಥಿತಿಯನ್ನು ತೋರಿಸುತ್ತದೆ. ಇಂದು ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಗಳು ಲಭ್ಯ ಇವೆ. ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಹಿರಿಯ ನಾಗರಿಕರಿಗೆ ಮುಂಜಾಗರೂಕತಾ ಡೋಸ್ ನೀಡುತ್ತಿದ್ದಂತೆ ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆ ಇನ್ನಷ್ಟು ಬಲಿಷ್ಟಗೊಳ್ಳುತ್ತದೆ. ನಾವು 100% ಲಸಿಕಾಕರಣಕ್ಕಾಗಿ “ಹರ್ ಘರ್ ದಸ್ತಕ್” ಆಂದೋಲನವನ್ನು ತ್ವರಿತಗೊಳಿಸಬೇಕಾಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಲಸಿಕಾಕರಣ ಆಂದೋಲನವನ್ನು ತ್ವರಿತಗೊಳಿಸುತ್ತಿರುವ ನಮ್ಮ ಆರೋಗ್ಯ ಸೇವಾ ಕಾರ್ಯಕರ್ತರನ್ನು ಮತ್ತು ನಮ್ಮ ಆಶಾ ಸಹೋದರಿಯರನ್ನು ನಾನಿಂದು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಲಸಿಕೆಗಳಿಗೆ ಸಂಬಂಧಿಸಿ ಯಾವುದೇ ಗೊಂದಲ ಹರಡುವ ಪ್ರಯತ್ನಕ್ಕೆ ನಾವು ಅವಕಾಶ ನೀಡಬಾರದು. ಅನೇಕ ಬಾರಿ ನಾವು “ ಲಸಿಕೆ ಹಾಕಿದರೂ ಸೋಂಕು ಹರಡುತ್ತಿದೆ, ಅದರಿಂದ ಏನು ಪ್ರಯೋಜನ ?” ಎಂಬ ಮಾತುಗಳನ್ನು ಕೇಳುತ್ತೇವೆ. ಮುಖಗವಸುಗಳ ಬಗ್ಗೆಯೂ ವದಂತಿಗಳಿವೆ, ಅದರಿಂದ ಪ್ರಯೋಜನವಾಗಲಾರದು ಎಂದು ಹೇಳಲಾಗುತ್ತದೆ. ಇಂತಹ ವದಂತಿಗಳನ್ನು ನಿರ್ಬಂಧಿಸಬೇಕಾದ ಅಗತ್ಯ ಬಹಳವಿದೆ.
ಸ್ನೇಹಿತರೇ,
ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಇನ್ನೊಂದು ಸಂಗತಿಯತ್ತಲೂ ಗಮನ ಹರಿಸಬೇಕಾಗಿದೆ. ನಮಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಎರಡು ವರ್ಷಗಳ ಅನುಭವ ಇದೆ. ಮತ್ತು ರಾಷ್ಟ್ರವ್ಯಾಪೀ ಸಿದ್ಧತಾ ಸ್ಥಿತಿ ಇದೆ. ಯಾವುದೇ ತಂತ್ರವನ್ನು, ವ್ಯೂಹವನ್ನು ರೂಪಿಸುವಾಗ ನಾವು ಜನ ಸಾಮಾನ್ಯರ ಜೀವನೋಪಾಯಕ್ಕೆ ಕನಿಷ್ಟ ಹಾನಿಯಾಗುವಂತೆ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಆರ್ಥಿಕ ಚಟುವಟಿಕೆಗಳನ್ನು ಹಾಗು ಆರ್ಥಿಕತೆಯ ಚಲನೆಯನ್ನು ಕಾಯ್ದುಕೊಳ್ಳಬೇಕಾಗಿರುತ್ತದೆ. ಇದು ಬಹಳ ಅಗತ್ಯ. ಆದುದರಿಂದ ಸ್ಥಳೀಯ ಕಂಟೈನ್ ಮೆಂಟ್ ವ್ಯವಸ್ಥೆಯ ಬಗ್ಗೆ ಗಮನ ಹರಿಸುವುದು ಉತ್ತಮ. ಹೆಚ್ಚು ಪ್ರಕರಣಗಳು ವರದಿಯಾಗುವಲ್ಲಿ ಗರಿಷ್ಟ ಮತ್ತು ತ್ವರಿತ ಪರೀಕ್ಷೆಗಳು ನಡೆಯುವಂತಾಗುವುದನ್ನು ಖಾತ್ರಿಪಡಿಸುವ ಅಗತ್ಯವಿದೆ. ಇದಲ್ಲದೆ ಗೃಹ ಐಸೋಲೇಶನ್ನಿನಲ್ಲಿರುವವರಿಗೆ ಗರಿಷ್ಟ ಚಿಕಿತ್ಸೆಯನ್ನು ಖಾತ್ರಿಪಡಿಸಬೇಕು. ಆದುದರಿಂದ ಗೃಹ ಐಸೋಲೇಶನ್ನಿಗೆ ಸಂಬಂಧಿಸಿ ಹಾಗು ಪರಿಸ್ಥಿತಿಗೆ ಅನುಗುಣವಾಗಿ ಸುಧಾರಣೆಗಾಗಿ ಮಾರ್ಗದರ್ಶಿಗಳನ್ನು ಮತು ಶಿಷ್ಟಾಚಾರಗಳನ್ನು ಅನುಸರಿಸುವುದು ಬಹಳ ಮುಖ್ಯ. ಗೃಹ ಐಸೋಲೇಶನ್ ಪ್ರಕರಣಗಳಲ್ಲಿ ಪತ್ತೆ ಮತ್ತು ಚಿಕಿತ್ಸೆ ವ್ಯವಸ್ಥೆ ಇದ್ದರೆ ಉತ್ತಮ. ಮತ್ತು ಅವರು ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ಬಹಳ ಕಡಿಮೆ ಇರಬೇಕು. ಸೋಂಕು ಪತ್ತೆಯಾದಾಗ ಜನರು ಹೆಚ್ಚಾಗಿ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸುತ್ತಾರೆ. ಆದುದರಿಂದ ಸೂಕ್ತ ಪ್ರತಿಕ್ರಿಯಾ ವ್ಯವಸ್ಥೆ ಮತ್ತು ನಿರಂತರ ಪತ್ತೆ, ನಿಗಾ ವ್ಯವಸ್ಥೆಯು ರೋಗಿಯ ವಿಶ್ವಾಸ ಮತ್ತು ಭರವಸೆಯನ್ನು ಹೆಚ್ಚಿಸುತ್ತದೆ.
ಹಲವು ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಬಹಳ ನವೀನ ಪ್ರಯತ್ನಗಳನ್ನು ಮಾಡುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಕೇಂದ್ರ ಸರಕಾರ ಕೂಡಾ ಟೆಲಿಮೆಡಿಸಿನ್ ಗೆ ಅನೇಕ ಸೌಲಭ್ಯಗಳನ್ನು ಅಭಿವೃದ್ಧಿ ಮಾಡಿದೆ. ಇದರ ಗರಿಷ್ಟ ಬಳಕೆಯಿಂದ ಕೊರೊನಾ ಸೋಂಕಿತ ರೋಗಿಗಳಿಗೆ ಬಹಳ ಉಪಯೋಗವಾಗಲಿದೆ. ಅವಶ್ಯ ಔಷಧಿಗಳು ಮತ್ತು ಮೂಲಸೌಕರ್ಯಗಳಿಗೆ ಸಂಬಂಧಿಸಿ ಕೇಂದ್ರ ಸರಕಾರವು ಪ್ರತಿಯೊಂದು ರಾಜ್ಯಗಳ ಜೊತೆಯಲ್ಲಿ ಸದಾ ಇರುತ್ತದೆ. ಅನೇಕ ರಾಜ್ಯಗಳು 5-6 ತಿಂಗಳ ಹಿಂದೆ ನೀಡಿದ 23,000 ಕೋ.ರೂ.ಗಳ ವಿಶೇಷ ಆರೋಗ್ಯ ಪ್ಯಾಕೇಜನ್ನು ಬಳಸಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಿವೆ. ಇದರಡಿ ಮಕ್ಕಳಿಗಾಗಿ ದೇಶಾದ್ಯಂತ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ 800 ಕ್ಕೂ ಅಧಿಕ ವಿಶೇಷ ಮಕ್ಕಳ ಆರೋಗ್ಯ ರಕ್ಷಣಾ ಘಟಕಗಳನ್ನು ಸ್ಥಾಪಿಸಲು ಅಂಗೀಕಾರ ನೀಡಲಾಗಿದೆ. ಸುಮಾರು 1.5 ಲಕ್ಷ ಹೊಸ ಐ.ಸಿ.ಯು. ಮತ್ತು ಎಚ್.ಡಿ.ಯು. ಹಾಸಿಗೆಗಳನ್ನು ಸಿದ್ಧ ಮಾಡಲಾಗುತ್ತಿದೆ. 5,000 ಕ್ಕೂ ಅಧಿಕ ವಿಶೇಷ ಅಂಬುಲೆನ್ಸ್ ಗಳನ್ನು ಜೊತೆಗೆ 950 ದ್ರವೀಕೃತ ವೈದ್ಯಕೀಯ ಆಮ್ಲಜನಕ ದಾಸ್ತಾನು ಟ್ಯಾಂಕ್ ಗಳನ್ನು ಆರೋಗ್ಯ ಮೂಲಸೌಕರ್ಯಗಳಿಗೆ ಸೇರ್ಪಡೆ ಮಾಡಲಾಗಿದೆ. ತುರ್ತು ಮೂಲಸೌಕರ್ಯದ ಸಾಮರ್ಥ್ಯವನ್ನು ವರ್ಧಿಸಲು ಇಂತಹ ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ನಾವು ಇಂತಹ ಮೂಲಸೌಕರ್ಯವನ್ನು ಸದಾ ವಿಸ್ತರಿಸುತ್ತಲೇ ಇರಬೇಕಾಗುತ್ತದೆ.
ಕೊರೊನಾದ ಪ್ರತಿಯೊಂದು ರೂಪಾಂತರಿಯನ್ನು ಸೋಲಿಸಲು ನಾವು ನಮ್ಮ ಸಿದ್ಧತಾ ಸ್ಥಿತಿಯನ್ನು ಅದಕ್ಕಿಂತ ಮುಂದಿನ ಸ್ಥಾನದಲ್ಲಿಟ್ಟಿರಬೇಕು. ಒಮ್ರಿಕಾನ್ ನಿಭಾಯಿಸುವುದರ ಜೊತೆಗೆ ನಾವು ಸಂಭಾವ್ಯ ಯಾವುದೇ ರೂಪಾಂತರಿಯನ್ನು ನಿಭಾಯಿಸಲು ಸಾಧ್ಯವಾಗುವಂತಹ ಸಿದ್ಧತೆಗಳನ್ನು ಮಾಡಲು ಆರಂಭಿಸಬೇಕು. ಒಂದು ಸರಕಾರದ ಜೊತೆಗೆ ಇನ್ನೊಂದು ಸರಕಾರ ಪರಸ್ಪರ ಸಮನ್ವಯ ಸಾಧಿಸುವುದರಿಂದ ಮತ್ತು ಸಹಕಾರ ಮಾಡುವುದರಿಂದ ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶಕ್ಕೆ ನಿರಂತರ ಬಲ, ಶಕ್ತಿ ಲಭಿಸುತ್ತದೆ ಎಂದು ನಾನು ನಂಬುತ್ತೇನೆ. ಅಲ್ಲಿ ಇನ್ನೊಂದು ಸಂಗತಿ ಇದೆ, ಅದರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ ಮತ್ತು ನಮ್ಮ ದೇಶದ ಪ್ರತಿ ಮನೆಯಲ್ಲೂ ಈ ಸಂಪ್ರದಾಯ ಇದೆ. ಆಯುರ್ವೇದ ಉತ್ಪನ್ನಗಳ ಬಳಕೆ ಮತ್ತು ಕಷಾಯಗಳನ್ನು ಕುಡಿಯುವುದರಿಂದ ಈ ಕಾಲಮಾನದಲ್ಲಿ ಬಹಳ ಪ್ರಯೋಜನಗಳು ಲಭಿಸುತ್ತವೆ ಮತ್ತು ಯಾರೊಬ್ಬರೂ ಇದನ್ನು ಔಷಧಿ ಎಂದು ಭಾವಿಸುವುದಿಲ್ಲ. ಆದರೆ ಅದು ಅದರದ್ದೇ ಆದ ಉಪಯುಕ್ತತೆಯನ್ನು ಹೊಂದಿದೆ. ನಮ್ಮ ಮನೆಗಳಲ್ಲಿರುವ ಸಾಂಪ್ರದಾಯಿಕ ಉತ್ಪನ್ನಗಳು ಇಂತಹ ಸಮಯದಲ್ಲಿ ಬಹಳ ಸಹಾಯ ಮಾಡುತ್ತವೆ, ಆ ನಿಟ್ಟಿನಲ್ಲಿಯೂ ಗಮನ ಕೇಂದ್ರೀಕರಿಸುವಂತೆ ಎಂದು ನಾನು ದೇಶವಾಸಿಗಳಲ್ಲಿ ಮನವಿ ಮಾಡುತ್ತೇನೆ.
ಸ್ನೇಹಿತರೇ,
ನೀವೆಲ್ಲರೂ ನಿಮ್ಮ ಸಮಯ ಹೊಂದಿಸಿಕೊಂಡಿರಿ ಮತ್ತು ನಾವೆಲ್ಲರೂ ನಮ್ಮ ಕಳವಳಗಳನ್ನು, ಆತಂಕಗಳನ್ನು ಹಂಚಿಕೊಂಡೆವು. ಸಮಸ್ಯೆಯ, ಬಿಕ್ಕಟ್ಟಿನ ಪ್ರಮಾಣ ಎಷ್ಟೇ ದೊಡ್ಡದಿರಲಿ, ನಮ್ಮ ಸಮಾಲೋಚನೆಯಲ್ಲಿ ವ್ಯಕ್ತವಾದ ನಮ್ಮ ಸಿದ್ಧತೆ, ಹೋರಾಟ ಮಾಡುವ ನಮ್ಮ ವಿಶ್ವಾಸ ಮತ್ತು ಜಯ ಗಳಿಸುವ ನಮ್ಮ ದೃಢ ನಿರ್ಧಾರಗಳು ಜನಸಾಮಾನ್ಯನಿಗೆ ವಿಶ್ವಾಸವನ್ನು, ಭರವಸೆಯನ್ನು ನೀಡುತ್ತವೆ. ಮತ್ತು ಸಾಮಾನ್ಯ ನಾಗರಿಕರ ಸಹಕಾರದಿಂದ ಈ ಪರಿಸ್ಥಿತಿಯಿಂದ ಹೊರಬರುವಲ್ಲಿ ನಾವು ಯಶಸ್ವಿಯಾಗುತ್ತೇವೆ. ನಿಮ್ಮ ಸಮಯವನ್ನು ವಿನಿಯೋಗಿಸಿರುವುದಕ್ಕೆ ನಾನು ತಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಬಹಳ ಧನ್ಯವಾದಗಳು.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1790194)
Visitor Counter : 191
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam