ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 12 ರಂದು ತಮಿಳುನಾಡಿನಲ್ಲಿ 11 ಹೊಸ ವೈದ್ಯಕೀಯ ಕಾಲೇಜುಗಳನ್ನು ಮತ್ತು ಶಾಸ್ತ್ರೀಯ ತಮಿಳಿನ ಕೇಂದ್ರೀಯ ಸಂಸ್ಥೆಯ ನೂತನ ಕ್ಯಾಂಪಸ್ ಅನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ


ವೈದ್ಯಕೀಯ ಶಿಕ್ಷಣ ಕೈಗೆಟುಕುವಂತೆ ಉತ್ತೇಜಿಸಲು ಮತ್ತು ದೇಶದಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಪ್ರಧಾನಮಂತ್ರಿಯವರ ನಿರಂತರ ಪ್ರಯತ್ನಕ್ಕೆ ಅನುಗುಣವಾಗಿ - ಎಂ.ಬಿ.ಬಿ.ಎಸ್. ಸೀಟುಗಳನ್ನು 1450 ರಷ್ಟು ಹೆಚ್ಚಿಸಲಿರುವ ಹೊಸ ವೈದ್ಯಕೀಯ ಕಾಲೇಜುಗಳು

ಶಾಸ್ತ್ರೀಯ ತಮಿಳು ಭಾಷೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಲು -ಶಾಸ್ತ್ರೀಯ ಭಾಷೆ ತಮಿಳಿನ ಕೇಂದ್ರೀಯ ಸಂಸ್ಥೆಯ ನೂತನ ಕ್ಯಾಂಪಸ್ ಗೆ - ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಧನಸಹಾಯ

ಭಾರತೀಯ ಪರಂಪರೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಹಾಗೂ ಶಾಸ್ತ್ರೀಯ ಭಾಷೆಗಳನ್ನು ಉತ್ತೇಜಿಸುವ ಪ್ರಧಾನಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ

Posted On: 10 JAN 2022 12:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನಾದ್ಯಂತದ 11 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮತ್ತು ಚೆನ್ನೈನಲ್ಲಿರುವ ತಮಿಳು ಶಾಸ್ತ್ರೀಯ ಭಾಷೆಯ ರಾಷ್ಟ್ರೀಯ ಸಂಸ್ಥೆಯ ನೂತನ ಕ್ಯಾಂಪಸ್ ಅನ್ನು 2022ರ ಜನವರಿ 12ರಂದು ಸಂಜೆ 4 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.
ಸುಮಾರು 4000 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಪೈಕಿ ಸುಮಾರು 2145 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದ್ದರೆ ಮತ್ತು ಉಳಿದ ಹಣವನ್ನು ತಮಿಳುನಾಡು ಸರ್ಕಾರ ಭರಿಸಿದೆ. ವಿರುದುನಗರ, ನಾಮಕ್ಕಲ್, ದಿ ನೀಲಗಿರಿ, ತಿರುಪ್ಪೂರ್, ತಿರುವಳ್ಳೂರು, ನಾಗಪಟ್ಟಣಂ, ದಿಂಡಿಗಲ್, ಕಲ್ಲಕುರಿಚಿ, ಅರಿಯಲೂರ್, ರಾಮನಾಥಪುರಂ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ಈ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಈ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯು ಕೈಗೆಟುಕುವ ವೈದ್ಯಕೀಯ ಶಿಕ್ಷಣವನ್ನು ಉತ್ತೇಜಿಸುತ್ತದೆ ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ನಿರಂತರ ಪ್ರಯತ್ನಕ್ಕೆ ಅನುಗುಣವಾಗಿದೆ. ಒಟ್ಟು 1450 ಸೀಟುಗಳ ಸಾಮರ್ಥ್ಯದ ಹೊಸ ವೈದ್ಯಕೀಯ ಕಾಲೇಜುಗಳನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾದ 'ಅಸ್ತಿತ್ವದಲ್ಲಿರುವ ಜಿಲ್ಲೆ/ರೆಫರಲ್ ಆಸ್ಪತ್ರೆಯೊಂದಿಗೆ ಸಂಪರ್ಕಿಸಲಾದ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ' ಅಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಯೋಜನೆಯಡಿಯಲ್ಲಿ, ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜು ಹೊಂದಿರದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
ಚೆನ್ನೈನಲ್ಲಿ ತಮಿಳು ಶಾಸ್ತ್ರೀಯ ಭಾಷೆಯ ಕೇಂದ್ರೀಯ ಸಂಸ್ಥೆ (ಸಿಐಸಿಟಿ) ನೂತನ ಕ್ಯಾಂಪಸ್‌ ನ ಸ್ಥಾಪನೆಯು ಭಾರತೀಯ ಪರಂಪರೆಯನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಹಾಗೂ ಶಾಸ್ತ್ರೀಯ ಭಾಷೆಗಳನ್ನು ಉತ್ತೇಜಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಹೊಸ ಕ್ಯಾಂಪಸ್ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಧನಸಹಾಯ ಪಡೆದಿದ್ದು,  24 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಐಸಿಟಿಯು ಈಗ 3 ಅಂತಸ್ತಿನ ನೂತನ ಕ್ಯಾಂಪಸ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಹೊಸ ಕ್ಯಾಂಪಸ್‌ ವಿಶಾಲವಾದ ಗ್ರಂಥಾಲಯ, ಇ-ಲೈಬ್ರರಿ, ಸಮ್ಮೇಳನ ಸಭಾಂಗಣಗಳು ಮತ್ತು ಬಹು ಮಾಧ್ಯಮ ಪ್ರದರ್ಶನ ಸಭಾಂಗಣಗಳನ್ನು ಒಳಗೊಂಡಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿರುವ, ಸಿಐಸಿಟಿ ತಮಿಳು ಭಾಷೆಯ ಪ್ರಾಚೀನತೆ ಮತ್ತು ಅನನ್ಯತೆಯನ್ನು ಸ್ಥಾಪಿಸಲು ಸಂಶೋಧನಾ ಚಟುವಟಿಕೆಗಳನ್ನು ಮಾಡುವ ಮೂಲಕ ಶಾಸ್ತ್ರೀಯ ತಮಿಳಿನ ಪ್ರಚಾರಕ್ಕೆ ಕೊಡುಗೆ ನೀಡುತ್ತಿದೆ. ಸಂಸ್ಥೆಯ ಗ್ರಂಥಾಲಯವು 45,000 ಪ್ರಾಚೀನ ತಮಿಳು ಪುಸ್ತಕಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಶಾಸ್ತ್ರೀಯ ತಮಿಳನ್ನು ಉತ್ತೇಜಿಸಲು ಮತ್ತು ಅದರ ವಿದ್ಯಾರ್ಥಿಗಳನ್ನು ಬೆಂಬಲಿಸಲು, ಸಂಸ್ಥೆಯು ವಿಚಾರ ಸಂಕರಿಣಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು, ಶಿಷ್ಯವೇತನ ನೀಡುವುದು ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದು ವಿವಿಧ ಭಾರತೀಯ ಮತ್ತು 100 ವಿದೇಶಿ ಭಾಷೆಗಳಲ್ಲಿ 'ತಿರುಕ್ಕುರಳ್' ಅನ್ನು ಅನುವಾದಿಸಿ ಪ್ರಕಟಿಸುವ ಗುರಿಯನ್ನೂ ಹೊಂದಿದೆ. ನೂತನ ಕ್ಯಾಂಪಸ್ ವಿಶ್ವದಾದ್ಯಂತ ಶಾಸ್ತ್ರೀಯ ತಮಿಳನ್ನು ಉತ್ತೇಜಿಸುವ ಅನ್ವೇಷಣೆಯಲ್ಲಿ ಸಂಸ್ಥೆಗೆ ಸಮರ್ಥ ಕಾರ್ಯ ನಿರ್ವಹಣೆ ವಾತಾವರಣವನ್ನು ಒದಗಿಸುತ್ತದೆ.

***



(Release ID: 1788899) Visitor Counter : 216