ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪಿಎಸ್ ಎ ಘಟಕಗಳು, ಆಕ್ಸಿಜನ್ ಸಾಂದ್ರಕಗಳು ಮತ್ತು ಆಕ್ಸಿಜನ್ ಸಿಲಿಂಡರ್ ಗಳು, ವೆಂಟಿಲೇಟರ್ ಗಳು ಸೇರಿ ಒಟ್ಟಾರೆ ಆಮ್ಲಜನಕ ಪೂರೈಕೆ ಸೌಕರ್ಯದ ಸಿದ್ಧತೆ ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸಿದ ಕೇಂದ್ರ ಸರ್ಕಾರ


ರೋಗಿಗಳ ಆರೈಕೆಗೆ ಸಕಾಲದಲ್ಲಿ ಆಕ್ಸಿಜನ್ ಸಾಧನಗಳನ್ನು ಖಾತ್ರಿಪಡಿಸುವುದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಾಥಮಿಕ ಕರ್ತವ್ಯ

ಇಸಿಆರ್ ಪಿ- II ನಿಧಿ ಗರಿಷ್ಠ ಪ್ರಮಾಣದಲ್ಲಿ ಬಳಕೆ ಖಾತ್ರಿಯ ಸಂಪೂರ್ಣ ಹೊಣೆ ರಾಜ್ಯ ಸರ್ಕಾರಗಳದ್ದು

ಎಲ್ಲ ಹಂತಗಳಲ್ಲಿ ಸಾಧನಗಳ ಆಪರೇಟರ್ ಗಳ ತರಬೇತಿ ಪೂರ್ಣಗೊಳಿಸಬೇಕು

Posted On: 07 JAN 2022 6:09PM by PIB Bengaluru

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅಧ್ಯಕ್ಷತೆಯಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಣಾಮಕಾರಿ ಮತ್ತು ಸಕಾಲಿಕ ನಿರ್ವಹಣೆಗೆ ವೆಂಟಿಲೇಟರ್, ಪಿಎಸ್ಎ/ಆಮ್ಲಜನಕ ಘಟಕಗಳು, ಆಕ್ಸಿಜನ್ ಸಾಂಧ್ರಕಗಳು ಮತ್ತು ಆಕ್ಸಿಜನ್ ಸಿಲಿಂಡರ್ ಗಳ ಲಭ್ಯತೆ ಸೇರಿದಂತೆ ಒಟ್ಟಾರೆ ಆಮ್ಲಜನಕ ಪೂರೈಕೆ ಮತ್ತು ಸಾಧನಗಳ ಸಿದ್ಧತೆ ಕುರಿತು ಪರಾಮರ್ಶೆ ನಡೆಸಲಾಯಿತು.

ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಮತ್ತು ವಿಶೇಷವಾಗಿ ಒಮಿಕ್ರಾನ್ ಸವಾಲಿನ ಬಗ್ಗೆ ಬಲವಾಗಿ ಪ್ರತಿಪಾದಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ಯಾವುದೇ ರೀತಿಯ ತುರ್ತು ಸಂದರ್ಭಗಳನ್ನು ಎದುರಿಸಲು ಎಲ್ಲ ಆಕ್ಸಿಜನ್ ಸಾಧನಗಳನ್ನು ಕ್ಷೇತ್ರ ಮಟ್ಟದ ಆರೋಗ್ಯ ಸೌಕರ್ಯಗಳಲ್ಲಿ ಪರೀಕ್ಷಿಸಬೇಕು ಮತ್ತು ಅವುಗಳನ್ನು ಸನ್ನದ್ಧವಾಗಿಟ್ಟುಕೊಳ್ಳುವುದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾಥಮಿಕ ಮತ್ತು ನಿರ್ಣಾಯಕ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ದಿನ ಪರಾಮರ್ಶೆ ನಡೆಸುವ ಮೂಲಕ ಇಸಿಆರ್ ಪಿ- II ನಿಧಿ ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದನ್ನು ಖಾತ್ರಿಪಡಿಸಬೇಕು. ಮತ್ತು ಎನ್ಎಚ್ಎಂ ಪಿಎಂಎಸ್ ಪೋರ್ಟಲ್ ನಲ್ಲಿ ವೆಚ್ಚದ ಕುರಿತು ಅಪ್ ಲೋಡ್ ಮಾಡಬೇಕು. ಆ ಮೂಲಕ ಉಪ ಜಿಲ್ಲಾಮಟ್ಟದವರೆಗೆ ಆರೋಗ್ಯ ಸೌಕರ್ಯಗಳ ಬಲವರ್ಧನೆ ನಿಟ್ಟಿನಲ್ಲಿ ಹೆಚ್ಚಿನ ನಿಧಿಗಳ ಬಿಡುಗಡೆಗೆ ಅರ್ಹತೆಯನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಇಸಿಆರ್ ಪಿ- II ಅಡಿ ದ್ರವರೂಪದ ವೈದ್ಯಕೀಯ ಆಕ್ಸಿಜನ್(ಎಲ್ಎಂಒ) ಟ್ಯಾಂಕ್ ಗಳು ಮತ್ತು ವೈದ್ಯಕೀಯ ಅನಿಲ ಪೈಪ್ ಲೈನ್ ವ್ಯವಸ್ಥೆ(ಎಂಜಿಪಿಎಸ್) ಅಳಡಿಕೆಗೆ ನಿಧಿಗಳು ಲಭ್ಯವಿವೆ. ರಾಜ್ಯಗಳು -ಎಲ್ಎಂಒ ಟ್ಯಾಂಕ್ ಗಳಿಗೆ ಸಂಬಂಧಿಸಿದಂತೆ ಅವುಗಳ ಕಾರ್ಯಾಚರಣೆಗೆ ಮತ್ತು ಸುರಕ್ಷತೆಗೆ ಅಗತ್ಯ ಅನುಮೋದನೆಗಳನ್ನು ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ(ಪಿಇಎಸ್ಒ) ಯಿಂದ ಪಡೆದುಕೊಳ್ಳಬೇಕು.

ರಾಜ್ಯ ಸರ್ಕಾರಗಳು ತನ್ನದೇ ನಿಧಿಯಿಂದ ಮತ್ತು ಸಿಎಸ್ಆರ್ ನಿಧಿಯಿಂದ ಸ್ಥಾಪಿಸಿರುವ ಪಿಎಸ್ಎ ಘಟಕಗಳನ್ನು ಕಾರ್ಯಾರಂಭ ಮಾಡಲು ಪ್ರತಿ ದಿನದ ಪರಾಮರ್ಶೆ ಮೂಲಕ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜ್ಯಗಳಿಗೆ ಕರೆ ನೀಡಿದರು. ಆಮ್ಲಜನಕದ ಹರಿವು ರೋಗಿಗಳ ಹಾಸಿಗೆ ಸನಿಹದ ವರೆಗೆ ಶುದ್ಧವಾಗಿ ಪೂರೈಕೆಯಾಗುತ್ತಿದೆಯೇ ಮತ್ತು ಎಲ್ಲೂ ಸೋರಿಕೆಯಾಗುತ್ತಿಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಪಿಎಸ್ಎ ಘಟಕಗಳ ಅಣಕು ಕಾರ್ಯಾಚರಣೆ ನಡೆಸುವಂತೆ ಮನವಿ ಮಾಡಿದರು. ಅಲ್ಲದೆ ಫ್ಲೋ ಮೀಟರ್ ಅನ್ನು ಪರೀಕ್ಷೆಗೊಳಪಡಿಸಬೇಕು ಮತ್ತು ಅದು ಕಾರ್ಯನಿರ್ವಹಣಾ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಖಾಸಗಿ ಆಸ್ಪತ್ರೆ ಸೌಕರ್ಯಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿನ ಪಿಎಸ್ಎ ಘಟಕಗಳ ಸ್ಥಾಪನೆ ಮೇಲೆ ನಿಗಾವಹಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಿದರು.

ರಾಜ್ಯಗಳು ತಮಗೆ ಹಂಚಿಕೆಯಾಗಿರುವ ವೆಂಟಿಲೇಟರ್ ಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳಬೇಕು ಮತ್ತು ನಿಯೋಜಿತ ಆರೋಗ್ಯ ಸೌಕರ್ಯಗಳಲ್ಲಿ ಅವು ಕಾರ್ಯಾರಂಭ ಮಾಡುವುದನ್ನು ಸರ್ಕಾರಗಳು ಖಾತ್ರಿಪಡಿಸಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಪ್ರತಿಪಾದಿಸಿದರು. ವಿತರಣೆಯಾಗಿರುವ ಮತ್ತು ಅಳವಡಿಕೆಯಾಗಿರುವ ವೆಂಟಿಲೇಟರ್ ಗಳ ನಡುವಿನ ಭಾರೀ ಅಂತರವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಹೆಚ್ಚುವರಿ ವೆಂಟಿಲೇಟರ್ ಗಳ ಅಗತ್ಯವನ್ನು ಆಸ್ಪತ್ರೆಗಳಿಗೆ ನೀಡಬೇಕು ಮತ್ತು ಸ್ಥಾಪಿತ ವೆಂಟಿಲೇಟರ್ ಗಳಿಗೆ ಅಂತಿಮ ಸ್ವೀಕೃತಿ ಪ್ರಮಾಣಪತ್ರಗಳ ವಿತರಣೆಯನ್ನು ತ್ವರಿತಗೊಳಿಸಬೇಕು. ಅಲ್ಲದೆ ಆಕ್ಸಿಜನ್ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವ ಉತ್ಪಾದಕರ ಜತೆಗಿನ ಒಪ್ಪಂದಗಳನ್ನು ತ್ವರಿತವಾಗಿ ಅಂತಿಮಗೊಳಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತೆ ನೆನಪಿಸಲಾಯಿತು. ವೆಂಟಿಲೇಟರ್ ಗಳ ಕುರಿತಂತೆ ಯಾವುದೇ ದೂರುಗಳಿದ್ದರೆ ಆ ಸಂಬಂಧ 2021ರ ಆಗಸ್ಟ್ 30ರಂದು ಆರಂಭಿಸಲಾಗಿರುವ ಆನ್ ಲೈನ್ ದೂರು ನಿರ್ವಹಣಾ ವ್ಯವಸ್ಥೆಗೆ ದೂರು ನೀಡುವಂತೆ ಅವರು ಸೂಚಿಸಿದರು.

ಕೇಂದ್ರ ಆರೋಗ್ಯ ಸಚಿವಾಲಯ 2021ರ ಡಿಸೆಂಬರ್ 22ರಂದು ರಾಷ್ಟ್ರೀಯ ಆಕ್ಸಿಜನ್ ಸ್ಟಿವರ್ಡ್ ಶಿಪ್ ಕಾರ್ಯಕ್ರಮವನ್ನು ಆರಂಭಿಸಿದೆ ಎಂದು ಅವರು ಉಲ್ಲೇಖಿಸಿದರು. ದೇಶಾದ್ಯಂತ ಆಪರೇಟರ್ ಗಳ ತಾಂತ್ರಿಕ ತರಬೇತಿ ಕಾರ್ಯ ಪೂರ್ಣಗೊಳಿಸುವುದನ್ನು ರಾಜ್ಯ ಸರ್ಕಾರಗಳು ಖಾತ್ರಿಪಡಿಸಬೇಕು. 738 ಜಿಲ್ಲೆಗಳ ವ್ಯಾಪ್ತಿಯ 1600ಕ್ಕೂ ಅಧಿಕ ಅಭ್ಯರ್ಥಿಗಳು ಆ ತರಬೇತಿ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಸಾಮಾನ್ಯ ತರಬೇತಿ ನಿರ್ದೇಶನಾಲಯ(ಡಿಜಿಟಿ) ತನ್ನ 24 ಪ್ರಾದೇಶಿಕ ಕೇಂದ್ರಗಳ ಮೂಲಕ ದೇಶಾದ್ಯಂತ ಆನ್ ಲೈನ್ ಪಿಎಸ್ಎ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈವರೆಗೆ 180 ಗಂಟೆ ತರಬೇತಿ ಕಾರ್ಯಕ್ರಮದಡಿಯಲ್ಲಿ 4690 ಅಭ್ಯರ್ಥಿಗಳು ಮತ್ತು 10 ಗಂಟೆ ತರಬೇತಿ ಕಾರ್ಯಕ್ರಮದಡಿ 6,825 ಅಭ್ಯರ್ಥಿಗಳು ತರಬೇತಿಯನ್ನು ಪಡೆದಿದ್ದಾರೆ.

ಅಲ್ಲದೆ ರಾಜ್ಯಗಳು ಔಷಧಗಳ ಅಗತ್ಯ ದಾಸ್ತಾನು ಕಾಯ್ದುಕೊಳ್ಳುವ ಬಗ್ಗೆ ಜಾಗರೂಕತೆಯಿಂದ ಇರಬೇಕು ಎಂದು ಸೂಚಿಸಲಾಯಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ, ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ದಾಸ್ತಾನು ವಿವರಗಳನ್ನು ಔಷಧಗಳು ಮತ್ತು ಲಸಿಕೆ ವಿತರಣಾ ನಿರ್ವಹಣಾ ವ್ಯವಸ್ಥೆ(ಡಿವಿಡಿಎಂಎಸ್) ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡುವಂತೆ ಸೂಚಿಸಲಾಗಿದೆ. ಡಿವಿಡಿಎಂಎಸ್ ಪೋರ್ಟಲ್ ನಲ್ಲಿ ಔಷಧಗಳ ದಾಸ್ತಾನು ಅಗತ್ಯದ ಬಗ್ಗೆ ಈವರೆಗೆ ವಿವರ ಸಲ್ಲಿಸದ ರಾಜ್ಯಗಳು ಮತ್ತು ಪ್ರದೇಶಗಳು ಸಕಾಲದಲ್ಲಿ ಲಭ್ಯವಿರುವ ದಾಸ್ತಾನು ಮತ್ತು ಖರೀದಿ ಆದೇಶಗಳ ಕುರಿತು ವಿವರಗಳನ್ನು ಸಲ್ಲಿಸಬೇಕು.

ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಮನೋಹರ್ ಅಘನಾನಿ, ಎನ್ ಪಿಪಿಎ ಅಧ್ಯಕ್ಷ ಶ್ರೀ ಕಮಲೇಶ್ ಪಂತ್, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಮನ್ ದೀಪ್ ಕೆ. ಭಂಡಾರಿ, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಹೆಕಲಿ ಝಿಮೋಮಿ, ಸಚಿವಾಲಯದ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು(ಆರೋಗ್ಯ), ಯೋಜನಾ ನಿರ್ದೇಶಕರು(ಎನ್ಎಚ್ಎಂ) ಅವರು ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು. ಕಲ್ಲಿದ್ದಲು, ಇಂಧನ, ರೈಲ್ವೆ ಮತ್ತು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಪ್ರತಿನಿಧಿಗಳೂ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

***



(Release ID: 1788464) Visitor Counter : 140