ಪ್ರಧಾನ ಮಂತ್ರಿಯವರ ಕಛೇರಿ

ಅಗರ್ತಲಾದ ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ ನೂತನ ಏಕೀಕೃತ ಟರ್ಮಿನಲ್ ಕಟ್ಟಡ ಉದ್ಘಾಟಿಸಿದ ಪ್ರಧಾನಮಂತ್ರಿ


ತ್ರಿಪುರಾದ ಅಗರ್ತಲಾದಲ್ಲಿ ಎರಡು ಪ್ರಮುಖ ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ

"ಹಿರಾ ಮಾದರಿಯ ಆಧಾರದ ಮೇಲೆ ತ್ರಿಪುರಾ ತನ್ನ ಸಂಪರ್ಕವನ್ನು ಬಲಪಡಿಸುತ್ತಿದೆ ಮತ್ತು ವಿಸ್ತರಿಸುತ್ತಿದೆ"

"ರಸ್ತೆ, ರೈಲು, ವಾಯು ಮತ್ತು ಜಲ ಸಂಪರ್ಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆ ತ್ರಿಪುರಾವನ್ನು ವ್ಯಾಪಾರ ಮತ್ತು ಉದ್ಯಮದ ಹೊಸ ಕೇಂದ್ರವಾಗಿ ಹಾಗೂ ವಾಣಿಜ್ಯ ಕಾರಿಡಾರ್ ಆಗಿ ಪರಿವರ್ತಿಸುತ್ತಿದೆ"

"ಡಬಲ್ ಎಂಜಿನ್ ಸರ್ಕಾರ ಎಂದರೆ ಸಂಪನ್ಮೂಲಗಳ ಸರಿಯಾದ ಬಳಕೆ, ಇದರರ್ಥ ಸೂಕ್ಷ್ಮತೆ ಮತ್ತು ಜನರ ಶಕ್ತಿಯನ್ನು ಹೆಚ್ಚಿಸುವುದು, ಇದರರ್ಥ ಸೇವೆ ಮತ್ತು ನಿರ್ಣಯಗಳ ಸಾಧನೆ ಮತ್ತು ಸಮೃದ್ಧಿಯ ಕಡೆಗೆ ಒಗ್ಗಟ್ಟಿನ ಪ್ರಯತ್ನ"

Posted On: 04 JAN 2022 5:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಜ ವೀರ್ ವಿಕ್ರಮ್ (ಎಂ.ಬಿ.ಬಿ.) ವಿಮಾನ ನಿಲ್ದಾಣದ ಹೊಸ ಏಕೀಕೃತ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿ, ಮುಖ್ಯಮಂತ್ರಿ ತ್ರಿಪುರ ಗ್ರಾಮ ಸಮೃದ್ಧಿ ಯೋಜನೆ ಮತ್ತು ವಿದ್ಯಾಜ್ಯೋತಿ ಶಾಲೆಗಳ ಪ್ರಾಜೆಕ್ಟ್ ಮಿಷನ್ -100 ರಂತಹ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಿದರು. ತ್ರಿಪುರಾದ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ, ತ್ರಿಪುರಾದ ಮುಖ್ಯಮಂತ್ರಿ ಶ್ರೀ ಬಿಪ್ಲಬ್ ಕುಮಾರ್ ದೇಬ್, ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಶ್ರೀಮತಿ ಪ್ರತಿಮಾ ಭೂಮಿಕ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 21ನೇ ಶತಮಾನದ ಭಾರತವು ಎಲ್ಲರೊಂದಿಗೆ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನದ ಮನೋಭಾವದೊಂದಿಗೆ ಪ್ರತಿಯೊಬ್ಬರನ್ನೂ ತೆಗೆದುಕೊಂಡು ಮುನ್ನಡೆಯುತ್ತದೆ ಎಂದು ಹೇಳಿದರು. ಕೆಲವು ರಾಜ್ಯಗಳು ಅಸಮತೋಲನದ ಅಭಿವೃದ್ಧಿಯಿಂದ ಹಿಂದುಳಿದಿದ್ದು ಜನರು ಕೆಲವು ಮೂಲಭೂತ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಇದನ್ನೇ ತ್ರಿಪುರಾದ ಜನರು ದಶಕಗಳಿಂದ ನೋಡುತ್ತಾ ಬಂದಿದ್ದಾರೆ ಎಂದರು. ನಿರಂತರ ಭ್ರಷ್ಟಾಚಾರದ ಕಾಲವನ್ನು ಸ್ಮರಿಸಿದ ಶ್ರೀ ಮೋದಿಯವರು, ಅಂದಿನ ಸರ್ಕಾರಗಳಿಗೆ ರಾಜ್ಯದ ಅಭಿವೃದ್ಧಿಯ ಯಾವುದೇ ದೂರದೃಷ್ಟಿ ಅಥವಾ ಉದ್ದೇಶವಿರಲಿಲ್ಲ ಎಂದರು. ಅಂತಹ ಸನ್ನಿವೇಶದ ನಂತರ, ಈಗ ತ್ರಿಪುರಾದಲ್ಲಿ ಸಂಪರ್ಕವನ್ನು ಸುಧಾರಿಸಲು ಪ್ರಸ್ತುತ ಆಡಳಿತವು ಹಿರಾಎಚ್ ಎಂದರೆ ಹೈವೇ (ಹೆದ್ದಾರಿ), ಎಂದರೆ ಇಂಟರ್ನೆಟ್ ವೇ, ಆರ್ ಎಂದರೆ ರೈಲ್ವೇ ಮತ್ತು ಎಂದರೆ ಏರ್‌ವೇಸ್ (ವಾಯುಯಾನ) ಎಂಬ ಮಂತ್ರವನ್ನು ತಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ತ್ರಿಪುರಾ ತನ್ನ ಸಂಪರ್ಕವನ್ನು ಹಿರಾ ಮಾದರಿಯ ಆಧಾರದ ಮೇಲೆ ಬಲಪಡಿಸುತ್ತಿದೆ ಮತ್ತು ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.

ಹೊಸ ವಿಮಾನ ನಿಲ್ದಾಣದ ಕುರಿತು ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ವಿಮಾನ ನಿಲ್ದಾಣವು ತ್ರಿಪುರಾದ ಸಂಸ್ಕೃತಿ, ನೈಸರ್ಗಿಕ ಸೌಂದರ್ಯ ಮತ್ತು ಆಧುನಿಕ ಸೌಲಭ್ಯಗಳ ಮಿಶ್ರಣವಾಗಿದೆ ಎಂದು ಹೇಳಿದರು. ಈಶಾನ್ಯದಲ್ಲಿ ವಾಯು ಸಂಪರ್ಕವನ್ನು ಹೆಚ್ಚಿಸುವಲ್ಲಿ ವಿಮಾನ ನಿಲ್ದಾಣವು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದರು. ತ್ರಿಪುರಾವನ್ನು ಈಶಾನ್ಯದ ಹೆಬ್ಬಾಗಿಲು ಮಾಡುವ ಕೆಲಸ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಸ್ತೆ, ರೈಲು, ವಾಯು ಮತ್ತು ಜಲ ಸಂಪರ್ಕ ಮೂಲಸೌಕರ್ಯಗಳು ಅಭೂತಪೂರ್ವ ಹೂಡಿಕೆಯನ್ನು ಪಡೆಯುತ್ತಿವೆ. ಇದು ತ್ರಿಪುರಾವನ್ನು ವ್ಯಾಪಾರ ಮತ್ತು ಉದ್ಯಮದ ಹೊಸ ಕೇಂದ್ರವಾಗಿ ಮತ್ತು ವಾಣಿಜ್ಯ ಕಾರಿಡಾರ್ ಆಗಿ ಪರಿವರ್ತಿಸುತ್ತಿದೆ ಎಂದರು.

ಡಬಲ್ ಸ್ಪೀಡ್‌ ನೊಂದಿಗೆ ಕೆಲಸ ಮಾಡುವ ವಿಚಾರದಲ್ಲಿ ಡಬಲ್ ಎಂಜಿನ್ ಸರ್ಕಾರಕ್ಕೆ ಸಾಟಿಯಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಡಬಲ್ ಎಂಜಿನ್ ಸರ್ಕಾರ ಎಂದರೆ ಸಂಪನ್ಮೂಲಗಳ ಸರಿಯಾದ ಬಳಕೆ, ಇದರರ್ಥ ಸಂವೇದನೆ ಮತ್ತು ಜನರ ಶಕ್ತಿಯನ್ನು ಹೆಚ್ಚಿಸುವುದು, ಇದರರ್ಥ ಸೇವೆ ಮತ್ತು ನಿರ್ಣಯಗಳ ಸಾಧನೆ, ಇದರರ್ಥ ಸಮೃದ್ಧಿಯ ಕಡೆಗೆ ಒಗ್ಗಟ್ಟಿನ ಪ್ರಯತ್ನ ಎಂದು ಹೇಳಿದರು.

ಕಲ್ಯಾಣ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವಲ್ಲಿ ತ್ರಿಪುರದ ದಾಖಲೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಕೆಂಪು ಕೋಟೆಯ ಮೇಲಿಂದ ತಾವು ವ್ಯಕ್ತಪಡಿಸಿದ ಜನರ ಬಳಿಗೆ ಯೋಜನೆಯನ್ನು ಮತ್ತು ಅದರ ವ್ಯಾಪ್ತಿಯನ್ನು ಗರಿಷ್ಠಮಟ್ಟಕ್ಕೆ ತೆಗೆದುಕೊಂಡು ಹೋಗುವ ದೂರದೃಷ್ಟಿಯನ್ನು ಸಾಕಾರಗೊಳಿಸುವ ಗುರಿಯನ್ನು ಹೊಂದಿರುವ ಮುಖ್ಯಮಂತ್ರಿ ತ್ರಿಪುರ ಗ್ರಾಮ ಸಮೃದ್ಧಿ ಯೋಜನೆಯನ್ನು ರಾಜ್ಯವು ಪ್ರಾರಂಭಿಸಿದೆ ಎಂದು ಶ್ಲಾಘಿಸಿದರು. ಯೋಜನೆಗಳು ಪ್ರತಿ ಮನೆಗೆ ಕೊಳಾಯಿ ನೀರು, ವಸತಿ, ಆಯುಷ್ಮಾನ್ ವ್ಯಾಪ್ತಿ, ವಿಮಾ ರಕ್ಷಣೆ, ಕೆಸಿಸಿ ಮತ್ತು ರಸ್ತೆಗಳನ್ನು ಉತ್ತೇಜಿಸುತ್ತವೆ ಮತ್ತು ಗ್ರಾಮೀಣ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು. ಪಿಎಂಎವೈ ವ್ಯಾಪ್ತಿಯನ್ನು ಸುಧಾರಿಸಲು ವ್ಯಾಖ್ಯಾನಗಳನ್ನು ಬದಲಾಯಿಸಲು ಶ್ರಮಿಸುತ್ತಿರುವ ಮುಖ್ಯಮಂತ್ರಿಯವರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಇದರಿಂದ ರಾಜ್ಯದಲ್ಲಿ 1.8 ಲಕ್ಷ ಕುಟುಂಬಗಳು ಪಕ್ಕಾ ಮನೆಗಳನ್ನು ಪಡೆದುಕೊಂಡಿದ್ದು ಅದರಲ್ಲಿ 50 ಸಾವಿರ ಮನೆಗಳನ್ನು ಈಗಾಗಲೇ ಸ್ವಾಧೀನಕ್ಕೆ ನೀಡಲಾಗಿದೆ.

21ನೇ ಶತಮಾನದಲ್ಲಿ ಭಾರತವನ್ನು ಆಧುನಿಕವಾಗಿಸುತ್ತಿರುವ ಯುವಜನತೆಗೆ ಕೌಶಲ್ಯ ನೀಡಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದು ಸ್ಥಳೀಯ ಭಾಷೆಯಲ್ಲಿ ಕಲಿಕೆಗೆ ಸಮಾನ ಒತ್ತು ನೀಡುತ್ತದೆ. ತ್ರಿಪುರದ ವಿದ್ಯಾರ್ಥಿಗಳು ಈಗ ಮಿಷನ್-100 ಮತ್ತು 'ವಿದ್ಯಾ ಜ್ಯೋತಿ' ಅಭಿಯಾನದಿಂದ ಸಹಾಯ ಪಡೆಯಲಿದ್ದಾರೆ ಎಂದು ಅವರು ಹೇಳಿದರು.

15-18 ವಯೋಮಾನದ ಯುವಕರಿಗೆ ಲಸಿಕೆ ಹಾಕುವ ಅಭಿಯಾನವು ಯುವ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರ ಆತಂಕ ದೂರವಾಗಲಿದೆ. ತ್ರಿಪುರಾದಲ್ಲಿ ಶೇಕಡಾ 80 ರಷ್ಟು ಜನಸಂಖ್ಯೆಯು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದು, ಶೇಕಡಾ 65 ರಷ್ಟು ಜನರು ಲಸಿಕೆಯ ಎರಡೂ ಡೋಸ್‌ ಗಳನ್ನು ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. 15-18 ವಯೋಮಾನದವರಿಗೆ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿಯನ್ನು ತ್ರಿಪುರಾ ಶೀಘ್ರದಲ್ಲೇ ಸಾಧಿಸಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಏಕ-ಬಳಕೆಯ ಪ್ಲಾಸ್ಟಿಕ್‌ ಗೆ ಪರ್ಯಾಯವನ್ನು ದೇಶಕ್ಕೆ ನೀಡುವಲ್ಲಿ ತ್ರಿಪುರಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿ ತಯಾರಾಗುವ ಬಿದಿರಿನ ಪೊರಕೆ, ಬಿದಿರಿನ ಬಾಟಲಿಗಳ ಉತ್ಪನ್ನಗಳಿಗೆ ದೇಶದಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಇದರಿಂದ ಸಾವಿರಾರು ಮಂದಿ ಬಿದಿರಿನ ವಸ್ತುಗಳ ತಯಾರಿಕೆಯಲ್ಲಿ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಪಡೆಯುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ರಾಜ್ಯದ ಕಾರ್ಯವೂ ಶ್ಲಾಘನಾರ್ಹ ಎಂದರು.

ಮಹಾರಾಜ ಬೀರ್ ಬಿಕ್ರಮ್ ವಿಮಾನ ನಿಲ್ದಾಣದ ಹೊಸ ಏಕೀಕೃತ ಟರ್ಮಿನಲ್ ಕಟ್ಟಡವನ್ನು ಸುಮಾರು 450 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಮತ್ತು 30,000 ಚದರ ಮೀಟರ್‌ ಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಇತ್ತೀಚಿನ ಐಟಿ ನೆಟ್‌ ವರ್ಕ್-ಸಂಯೋಜಿತ ವ್ಯವಸ್ಥೆಯಿಂದ ಬೆಂಬಲಿತವಾದ ಅತ್ಯಾಧುನಿಕ ಕಟ್ಟಡವಾಗಿದೆ. ಇನ್ನು ವಿದ್ಯಾಜ್ಯೋತಿ ಶಾಲೆಗಳ ಪ್ರಾಜೆಕ್ಟ್ ಮಿಷನ್ 100 ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ 100 ಪ್ರೌಢ / ಮಾಧ್ಯಮಿಕ ಶಾಲೆಗಳನ್ನು ಅತ್ಯಾಧುನಿಕ ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾಜ್ಯೋತಿ ಶಾಲೆಗಳಾಗಿ ಪರಿವರ್ತಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಯೋಜನೆಯು ಪೂರ್ವ ಪ್ರಾಥಮಿಕದಿಂದ XII ತರಗತಿಯವರೆಗೆ ಸುಮಾರು 1.2 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಳ್ಳಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಸುಮಾರು 500 ಕೋಟಿ ರೂ. ವೆಚ್ಚ ಮಾಡಲಿದೆ.

ಮುಖ್ಯಮಂತ್ರಿ ತ್ರಿಪುರ ಗ್ರಾಮ ಸಮೃದ್ಧಿ ಯೋಜನೆಯು ಗ್ರಾಮೀಣ ಮಟ್ಟದಲ್ಲಿ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸೇವಾ ವಿತರಣೆಗೆ ಮಾನದಂಡಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಯೋಜನೆಗೆ ಆಯ್ಕೆಯಾದ ಪ್ರಮುಖ ಕ್ಷೇತ್ರಗಳೆಂದರೆ ಮನೆಯ ಕೊಳಾಯಿ ನೀರು ಸಂಪರ್ಕಗಳು, ಗೃಹ ವಿದ್ಯುತ್ ಸಂಪರ್ಕಗಳು, ಸರ್ವ ಋತು ರಸ್ತೆಗಳು, ಪ್ರತಿ ಮನೆಯಲ್ಲೂ ನಿತ್ಯ ಬಳಸುವಂತಹ ಶೌಚಾಲಯಗಳು, ಪ್ರತಿ ಮಗುವಿಗೆ ಶಿಫಾರಸು ಮಾಡಲಾದ ರೋಗ ನಿರೋಧಕ ಲಸಿಕೆ, ಸ್ವಸಹಾಯ ಗುಂಪುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಇತ್ಯಾದಿ ಆಗಿವೆ.

***(Release ID: 1787576) Visitor Counter : 245