ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಬ್ಲ್ಯೂಎಚ್.ಒ ವರದಿ ಮಾಡಿರುವ ಹೊಸ ಕೋವಿಡ್ -19 ರೂಪಾಂತರಿ (ಒಮಿಕ್ರೊನ್) ಹಿನ್ನೆಲೆಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸನ್ನದ್ಧತೆಯನ್ನು ಪರಿಶೀಲಿಸಿದ ಕೇಂದ್ರ


ತಮ್ಮ ಸುರಕ್ಷತಾ ಕ್ರಮಗಳನ್ನು ಕೈಬಿಡದಂತೆ ರಾಜ್ಯಗಳಿಗೆ ಸಲಹೆ, - ಪರೀಕ್ಷೆ, ಪತ್ತೆ, ಚಿಕಿತ್ಸೆ ಕಾರ್ಯತಂತ್ರದ ಪುನರ್ ಪ್ರತಿಪಾದನೆ

ಒಮಿಕ್ರೊನ್ ಸೋಂಕು ಆರ್. ಟಿ.ಪಿ.ಸಿ.ಆರ್. ಮತ್ತು ಆರ್.ಎ.ಟಿ.ಯಿಂದ ತಪ್ಪಿಸಿಕೊಳ್ಳುವುದಿಲ್ಲ; ಯಾವುದೇ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಮುಂಚಿತವಾಗಿ ಪತ್ತೆ ಹಚ್ಚಲು ಪರೀಕ್ಷೆಯನ್ನು ಹೆಚ್ಚಿಸಲು ರಾಜ್ಯಗಳಿಗೆ ಸಲಹೆ

ಸಮಯೋಚಿತ ಮತ್ತು ಪರಿಣಾಮಕಾರಿ ನಿರ್ವಹಣೆಗಾಗಿ ಸೋಂಕು ಹೊರಹೊಮ್ಮುತ್ತಿರುವ ಗುಚ್ಛಗಳು ಮತ್ತು ಅಂತಹ ತಾಣಗಗಳ ಮೇಲೆ ಕಟ್ಟುನಿಟ್ಟಿನ ನಿಗಾ

ವರ್ಧಿತ ಮೂಲಸೌಕರ್ಯ, ಸಾಕಷ್ಟು ಲಭ್ಯತೆ ಮತ್ತು ಔಷಧಗಳ ದಾಸ್ತಾನು, ಗೃಹದಲ್ಲಿನ ಪ್ರತ್ಯೇಕತೆಯ ನಿಗಾ ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸಲಹೆ

ಗುರುತಿಸಲಾದ ಇನ್ಸಾಕಾಗ್ ಪ್ರಯೋಗಾಲಯಗಳಿಗೆ ಜಿನೋಮ್ ಸೀಕ್ವೆಂನ್ಸಿಂಗ್ ಗಾಗಿ ಎಲ್ಲಾ ಕೋವಿಡ್ -19 ದೃಢಪಟ್ಟ ಸೋಂಕಿನ ಮಾದರಿಗಳನ್ನು ತ್ವರಿತವಾಗಿ ಕಳುಹಿಸಬೇಕು

ರಾಜ್ಯಗಳ ಆಡಳಿತ, ಬಿಒಐ, ಎ.ಪಿ.ಎಚ್.ಒ.ಗಳ ನಡುವೆ ಪರಿಣಾಮಕಾರಿ ಮತ್ತು ಸಮಯೋಚಿತ ಸಮನ್ವಯಕ್ಕೆ ಪ್ರತಿಪಾದನೆ

"ಹರ್ ಘರ್ ದಸ್ತಕ್"ಲಸಿಕೆ ಅಭಿಯಾನವನ್ನು ಡಿಸೆಂಬರ್ 31 ರವರೆಗೆ ವಿಸ್ತರಣೆ, ಪೂರ್ಣ ಲಸಿಕೆಯ ಮೇಲೆ ಗಮನ

Posted On: 30 NOV 2021 2:03PM by PIB Bengaluru

ವಿವಿಧ ದೇಶಗಳಲ್ಲಿ ಕೋವಿಡ್ 19ನ ಒಮಿಕ್ರಾನ್ ರೂಪಾಂತರಿಯ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಅವರ ಸಮ್ಮುಖದಲ್ಲಿ ಇಂದು ಕೋವಿಡ್-19 ಸಾರ್ವಜನಿಕ ಆರೋಗ್ಯ ಸ್ಪಂದನೆ ಕ್ರಮಗಳು ಮತ್ತು ಸನ್ನದ್ಧತೆಯನ್ನು ಪರಿಶೀಲಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಎಂಒಸಿಎ ಕಾರ್ಯದರ್ಶಿ ಶ್ರೀ ರಾಜೀವ್ ಬನ್ಸಾಲ್, ಐಸಿಎಂಆರ್ ಡಿ.ಜಿ ಡಾ. ಬಲರಾಮ್ ಭಾರ್ಗವ, ಎನ್. ಸಿ.ಡಿ.ಸಿ. ನಿರ್ದೇಶಕ ಡಾ. ಸುಜೀತ್ ಕೆ. ಸಿಂಗ್, ರಾಜ್ಯ ಆರೋಗ್ಯ ಕಾರ್ಯದರ್ಶಿಗಳು, ಎಂಡಿಗಳು (ಎನ್ ಎಚ್ ಎಂ), ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತಿನಿಧಿಗಳು, ವಲಸೆ ಬ್ಯೂರೋ (ಬಿಒಐ), ರಾಜ್ಯ ವಿಮಾನ ನಿಲ್ದಾಣ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು (ಎಪಿಎಚ್.ಒಗಳು) ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಕೋವಿಡ್-19ನ ಹೊಸ ರೂಪಾಂತರಿಯ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಪರಿಷ್ಕೃತ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಪುನರುಚ್ಚರಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ, ತಮ್ಮ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಚಲ್ಲದಂತೆ ಮತ್ತು ವಿವಿಧ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಭೂ ಗಡಿ ಗಾಟಿ ದೇಶಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಠಿಣ ನಿಗಾ ಇಡಬೇಕೆಂದು ರಾಜ್ಯಗಳಿಗೆ ಸಲಹೆ ನೀಡಿದರು.

 

ರಾಜ್ಯಗಳಿಗೆ ವಿಶೇಷವಾಗಿ ಈ ಕೆಳಗಿನ ಸಲಹೆ ನೀಡಲಾಯಿತು :-

· ಅಂತಾರಾಷ್ಟ್ರೀಯ ಪ್ರಯಾಣಿಕರ ಪರಿಣಾಮಕಾರಿ ಕಣ್ಗಾವಲು ಕೈಗೊಳ್ಳಿ: "ಅಪಾಯದಲ್ಲಿರುವ" ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮಾದರಿಗಳ ಪರೀಕ್ಷೆಯನ್ನು 1ನೇ ದಿನವೇ ಮಾಡಬೇಕು ಮತ್ತು 8ನೇ ದಿನದಂದು ಮರು ಪರೀಕ್ಷೆ ಮಾಡಬೇಕು. "ಅಪಾಯದಲ್ಲಿರುವ" ದೇಶಗಳ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್.ಟಿ-ಪಿಸಿಆರ್ ಪರೀಕ್ಷೆಯ ವರದಿ ಬರುವವರೆಗೂ ವಿಮಾನ ನಿಲ್ದಾಣಗಳಲ್ಲಿ ಕಾಯುವಂತೆ ಮತ್ತು ಸಂಪರ್ಕ ವಿಮಾನಗಳನ್ನು ಮೊದಲೇ ಕಾಯ್ದಿರಿಸದಂತೆ ಸೂಚಿಸಬೇಕು.

· ಜಿನೋಮ್ ಸೀಕ್ವೆನ್ಸಿಂಗಾಗಿ ಎಲ್ಲಾ ಸೋಂಕು ದೃಢಪಟ್ಟ ಮಾದರಿಗಳನ್ನು ಇನ್ಸಾಕಾಗ್ ಪ್ರಯೋಗಾಲಯಗಳಿಗೆ (ರಾಜ್ಯಗಳೊಂದಿಗೆ ಹೊಂದಿಸಲಾದ) ತ್ವರಿತವಾಗಿ ಕಳುಹಿಸಬೇಕು. ರಾಜ್ಯಗಳು ಸೋಂಕು ದೃಢಪಟ್ಟ ವ್ಯಕ್ತಿಗಳ ಸಂಪರ್ಕ ಪತ್ತೆಯನ್ನು ಕೈಗೊಳ್ಳಬೇಕು ಮತ್ತು 14 ದಿನಗಳವರೆಗೆ ಅನುಸರಣೆ ಮಾಡಬೇಕು.

· ಪರೀಕ್ಷೆಯನ್ನು ಹೆಚ್ಚಿಸಿ: ಪರೀಕ್ಷಾ ಮೂಲಸೌಕರ್ಯವನ್ನು ಬಲಪಡಿಸಿ ಮತ್ತು ಪರೀಕ್ಷಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತನ್ನಿ. ಆರ್ ಟಿ-ಪಿಸಿಆರ್ ಅನುಪಾತವನ್ನು ನಿರ್ವಹಿಸುವಾಗ ರಾಜ್ಯಗಳು ಪ್ರತಿ ಜಿಲ್ಲೆಯಲ್ಲಿ ಸಾಕಷ್ಟು ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಬೇಕು.

· ಹಾಟ್ ಸ್ಪಾಟ್ ಗಳ ಪರಿಣಾಮಕಾರಿ ಮೇಲ್ವಿಚಾರಣೆ: ಇತ್ತೀಚೆಗೆ ಸೋಂಕು ದೃಢಪಟ್ಟ ಪ್ರಕರಣಗಳ ಗುಚ್ಚ ಹೊರಹೊಮ್ಮಿರುವ ಪ್ರದೇಶಗಳ ನಿರಂತರ ಮೇಲ್ವಿಚಾರಣೆ. ಜಿನೋಮ್ ಸೀಕ್ವೆನ್ಸಿಂಗಾಗಿ ಎಲ್ಲಾ ಸೋಂಕು ದೃಢಪಟ್ಟವರ ಮಾದರಿಗಳನ್ನು ನಿಗದಿತ ಇನ್ಸಾಕಾಗ್ ಪ್ರಯೋಗಾಲಯಗಳಿಗೆ ತ್ವರಿತವಾಗಿ ಕಳುಹಿಸುವುದು.

· "ಅಪಾಯದಲ್ಲಿರುವ" ದೇಶಗಳಿಂದ ಬಂದ ಪ್ರಯಾಣಿಕರು ಮನೆಗಳಲ್ಲಿ ಪ್ರತ್ಯೇಕವಾಗಿದ್ದಲ್ಲಿ, ಭೌತಿಕ ಭೇಟಿಗಳೊಂದಿಗೆ, ಪರಿಣಾಮಕಾರಿ ಮತ್ತು ನಿಯಮಿತ ಮೇಲ್ವಿಚಾರಣೆ. 8ನೇ ದಿನದಂದು ಪರೀಕ್ಷೆಯ ನಂತರ ಸೋಂಕು ಇಲ್ಲ ಎಂದಾದರೂ ಅಂತಹ ಪ್ರಕರಣಗಳನ್ನು, ರಾಜ್ಯಗಳ ಆಡಳಿತವು ಭೌತಿಕವಾಗಿ ಮೇಲ್ವಿಚಾರಣೆ ಮಾಡಬೇಕು.

· ಆರೋಗ್ಯ ಮೂಲಸೌಕರ್ಯಗಳ ವರ್ಧನೆಯನ್ನು ಖಾತ್ರಿಪಡಿಸುವುದು: ಆರೋಗ್ಯ ಮೂಲಸೌಕರ್ಯದ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಿ (ಐಸಿಯು, ಒ2 ಹಾಸಿಗೆಗಳು, ವೆಂಟಿಲೇಟರ್ ಗಳು ಇತ್ಯಾದಿಗಳ ಲಭ್ಯತೆ). ಗ್ರಾಮೀಣ ಪ್ರದೇಶಗಳು ಮತ್ತು ಮಕ್ಕಳ ಪ್ರಕರಣಗಳ ಮೇಲೆ ಗಮನ ಕೇಂದ್ರೀಕರಿಸಿ ಇಸಿಆರ್ ಪಿ-2 ಅನ್ನು ಜಾರಿಗೆ ತರುವುದು. ಮಂಜೂರಾದ ಪಿಎಸ್ಎ ಘಟಕಗಳ ಶೀಘ್ರ ಅನುಷ್ಠಾನ, ಜೊತೆಗೆ ಸಾಗಣೆ, ಔಷಧ, ಒ2 ಸಿಲಿಂಡರ್ ಗಳು ಇತ್ಯಾದಿಗಳ ತಡೆರಹಿತ ಪೂರೈಕೆಯನ್ನು ಖಾತ್ರಿಪಡಿಸುವುದು.

· ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರ ವಿವರಗಳು ಸೇರಿದಂತೆ ಸೋಂಕು ದೃಢಪಟ್ಟ ಪ್ರಯಾಣಿಕರ ಪಟ್ಟಿಗಾಗಿ ಎಪಿಎಚ್ಒಗಳೊಂದಿಗೆ ಸಹಯೋಗ ಮತ್ತು ಪರಿಣಾಮಕಾರಿ ಕಣ್ಗಾವಲಿಗಾಗಿ ಅವರಿಗೆ ಬೆಂಬಲವನ್ನು ಬಲಪಡಿಸುವುದು.

· ರಾಜ್ಯ ಆಡಳಿತ, ಬಿಒಐ ಅಧಿಕಾರಿಗಳು, ಎಪಿಎಚ್.ಒಗಳು, ಬಂದರು ಆರೋಗ್ಯ ಅಧಿಕಾರಿಗಳು (ಪಿಎಚ್ ಒಗಳು) ಮತ್ತು ಗಡಿ ದಾಟುವ ತಾಣಗಳ ಅಧಿಕಾರಿಗಳು (ಎಲ್ ಬಿಸಿಒಗಳು) ನಡುವಿನ ಪರಿಣಾಮಕಾರಿ ಮತ್ತು ಸಮಯೋಚಿತ ಸಮನ್ವಯವನ್ನು ಪ್ರತಿಪಾದಿಸಲಾಗಿದೆ..

· ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಸುಗಮವಾಗಿ ಅನುಷ್ಠಾನಗೊಳಿಸಲು ಬಿಒಐ, ಎಪಿಎಚ್.ಒ, ಪಿಎಚ್.ಒ ಮತ್ತು ಇತರ ಸಂಬಂಧಿತ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಲು ರಾಜ್ಯಗಳಿಗೆ ಸಲಹೆ ನೀಡಲಾಯಿತು.

· ದೇಶದ ಯಾವುದೇ ವಿ.ಓ.ಸಿ.ಗಳ ಹರಡುವಿಕೆಯನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು, ವಿಶೇಷವಾಗಿ ಇತ್ತೀಚಿನ ಯಾವುದೇ ಸೋಂಕಿನ ಪ್ರಕರಣಗಳ ಗುಚ್ಛಗಳ ಮೇಲೆ ರಾಜ್ಯ ಕಣ್ಗಾವಲು ಅಧಿಕಾರಿಗಳಿಂದ ದೈನಂದಿನ ಮೇಲ್ವಿಚಾರಣೆ.

· ಸಾಪ್ತಾಹಿಕ ಮಾಧ್ಯಮ ವಿವರಣೆಗಳ ಮೂಲಕ ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಬೇಕಾದ ಮರ್ಜಿಂಗ್ ಸನ್ನಿವೇಶದ ಬಗ್ಗೆ ಸಾಕ್ಷ್ಯ ಮತ್ತು ವಿಜ್ಞಾನ ಆಧಾರಿತ ಮಾಹಿತಿಯನ್ನು ನಿಯಮಿತವಾಗಿ ಪ್ರಸಾರ ಮಾಡುವುದು.

ಹೊಸದಾಗಿ ಹೊರಹೊಮ್ಮಿ ವರದಿಯಾಗಿರುವ ಕೋವಿಡ್ -19 ರೂಪಾಂತರಿ "ಸಾಂಕ್ರಾಮಿಕ ರೋಗದೊಳಗಿನ ಸಾಂಕ್ರಾಮಿಕ" ಎಂದು ಬಣ್ಣಿಸಿರುವ ಡಾ. ವಿ.ಕೆ. ಪಾಲ್, ಕೋವಿಡ್ -19ರ ನಿರ್ವಹಣೆಯ ಜ್ಞಾನದಲ್ಲಿ ದೇಶವು ಶ್ರೀಮಂತವಾಗಿದೆ ಎಂದು ಹೇಳಿದರು. ಮತ್ತೆ ಕೋವಿಡ್ ಸೂಕ್ತ ನಡವಳಿಕೆಯ ನಿರಂತರ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು, ಬೃಹತ್ ಸಭೆ, ಸಮಾವೇಶಗಳನ್ನು ನಿಯಂತ್ರಿಸುವುದು ಮತ್ತು ಲಸಿಕೆಯನ್ನು ಹೆಚ್ಚಿಸಬೇಕೆಂದರು. ಕೋವಿಡ್-19 ವಿರುದ್ಧ ಪ್ರಬಲ ರಕ್ಷಣೆಯಾಗಿ ಲಸಿಕೆಯ ನಿರ್ಣಾಯಕ ಪಾತ್ರವನ್ನು ಗಮನಿಸಿ "ಹರ್ ಘರ್ ದಸ್ತಕ್" ಲಸಿಕೆ ಅಭಿಯಾನವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ, ಶೇ. 100ರಷ್ಟು ಮೊದಲ ಡೋಸ್ ವ್ಯಾಪ್ತಿಯ ಮೇಲೆ ಗಮನ ಹರಿಸಲಾಗಿದೆ ಮತ್ತು ಎರಡನೇ ಡೋಸ್ ಲಸಿಕೆಯ ಬಾಕಿಯನ್ನು ಪೂರ್ಣಗೊಳಿಸಲಾಗುತ್ತಿದೆ. ಕೋವಿಡ್-19 ಲಸಿಕೆಯ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದರು.

ಒಮಿಕ್ರೊನ್ ರೂಪಾಂತರಿ ಆರ್.ಟಿಪಿಸಿಆರ್ ಮತ್ತು ಆರ್.ಎಟಿಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಐಸಿಎಂಆರ್ ಡಿಜಿ ಮಾಹಿತಿ ನೀಡಿದರು. ಆದ್ದರಿಂದ, ಯಾವುದೇ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಶೀಘ್ರ ಗುರುತಿಸಲು ಪರೀಕ್ಷೆಯನ್ನು ಹೆಚ್ಚಿಸಲು ರಾಜ್ಯಗಳಿಗೆ ಸಲಹೆ ನೀಡಿದರು. ರಾಜ್ಯಗಳು ಪರೀಕ್ಷೆಯನ್ನು ತ್ವರಿತಗೊಳಿಸುವ ಭಾಗವಾಗಿ, "ಅಪಾಯವಿಲ್ಲದ" ದೇಶಗಳ ಪ್ರಯಾಣಿಕರನ್ನು ಗುರಿ/ಆದ್ಯತೆಯ ಪರೀಕ್ಷೆಗೆ ಒಳಪಡಿಸಲೂ ರಾಜ್ಯಗಳಿಗೆ ಸಲಹೆ ನೀಡಲಾಯಿತು. ಹೆಚ್ಚಿನ ಲಸಿಕೆ ವ್ಯಾಪ್ತಿಯ ನಿರಂತರ ಅಗತ್ಯ, ಕೋವಿಡ್ ಸೂಕ್ತ ನಡವಳಿಕೆಗೆ ಬದ್ಧರಾಗಿರುವುದು ಮತ್ತು ಸಾಮೂಹಿಕ ಸಭೆ, ಸಮಾರಂಭಗಳನ್ನು ನಿಲ್ಲಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು.

 

****



(Release ID: 1776526) Visitor Counter : 264