ಪ್ರಧಾನ ಮಂತ್ರಿಯವರ ಕಛೇರಿ
ಉತ್ತರಪ್ರದೇಶದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
“ಈ ವಿಮಾನ ನಿಲ್ದಾಣವು ಇಡೀ ಪ್ರದೇಶವನ್ನು ರಾಷ್ಟ್ರೀಯ ಗತಿಶಕ್ತಿ ಕ್ರಿಯಾ ಯೋಜನೆಯ ಪ್ರಬಲಶಕ್ತಿಯ ಸಂಕೇತವನ್ನಾಗಿ ಮಾಡಲಿದೆ”
ಪಶ್ಚಿಮ ಉತ್ತರಪ್ರದೇಶದ ಸಹಸ್ರಾರು ಜನರಿಗೆ ವಿಮಾನನಿಲ್ದಾಣ ಹೊಸ ಉದ್ಯೋಗವಕಾಶಗಳನ್ನು ಒದಗಿಸಲಿದೆ”
“ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳ ಪರಿಣಾಮ ಇಂದು ಉತ್ತರಪ್ರದೇಶ ಅತ್ಯಂತ ಹೆಚ್ಚು ಸಂಪರ್ಕಿತ ಪ್ರದೇಶವಾಗಲಿದೆ”
“ಮುಂಬರುವ ಮೂಲಸೌಕರ್ಯದಿಂದಾಗಿ ಖುರ್ಜಾ ಕರಕುಶಲಕರ್ಮಿಗಳು, ಮೀರತ್ ಕ್ರೀಡಾ ಉದ್ಯಮ, ಶಹರಾನ್ ಪುರ ಪೀಠೋಪಕರಣಗಳು, ಮೊರ್ದಾಬಾದ್ ನ ಹಿತ್ತಾಳೆ ಉದ್ಯಮ, ಆಗ್ರಾದ ಪಾದರಕ್ಷೆಗಳು ಮತ್ತು ಪೇಠಾ ಉದ್ಯಮಕ್ಕೆ ಭಾರಿ ಬೆಂಬಲ ಸಿಗಲಿದೆ”
“ಹಿಂದಿನ ಸರ್ಕಾರಗಳು ಸುಳ್ಳು ಕನಸುಗಳನ್ನು ತೋರಿಸಿದ್ದ ಉತ್ತರಪ್ರದೇಶದ ಇದೀಗ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಛಾಪು ಮೂಡಿಸುತ್ತಿದೆ”
“ಮೂಲಸೌಕರ್ಯ ನಮಗೆ ರಾಜನೀತಿ(ರಾಜಕಾರಣ)ಯ ಭಾಗವಲ್ಲ, ಆದರೆ ರಾಷ್ಟ್ರ(ರಾಷ್ಟ್ರೀಯ) ನೀತಿಯ ಭಾಗ”
Posted On:
25 NOV 2021 3:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಪ್ರದೇಶದಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ಜನರಲ್ ವಿ.ಕೆ.ಸಿಂಗ್, ಶ್ರೀ ಸಂಜೀವ್ ಬಲಿಯಾನ್, ಶ್ರೀ ಎಸ್.ಪಿ.ಸಿಂಗ್ ಬಘೇಲಾ ಮತ್ತು ಶ್ರೀ ಬಿ.ಎಲ್. ವರ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, 21ನೇ ಶತಮಾನದ ನವ ಭಾರತವು ಇಂದು ಅತ್ಯುತ್ತಮ ಆಧುನಿಕ ಮೂಲಸೌಕರ್ಯಗಳನ್ನು ಒಂದನ್ನು ನಿರ್ಮಿಸುತ್ತಿದೆ ಎಂದರು. “ಉತ್ತಮ ರಸ್ತೆ, ಉತ್ತಮ ರೈಲು ಜಾಲ, ಉತ್ತಮ ವಿಮಾನ ನಿಲ್ದಾಣಗಳು ಕೇವಲ ಮೂಲಸೌಕರ್ಯ ಯೋಜನೆಗಳಲ್ಲ, ಅವು ಇಡೀ ಪ್ರದೇಶವನ್ನು ಮತ್ತು ಜನರ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತವೆ”ಎಂದು ಅವರು ಹೇಳಿದರು.
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಸಾಗಾಣೆ ಮಹಾದ್ವಾರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ವಿಮಾನ ನಿಲ್ದಾಣವು ಇಡೀ ಪ್ರದೇಶವನ್ನು ರಾಷ್ಟ್ರೀಯ ಗತಿಶಕ್ತಿ ಕ್ರಿಯಾ ಯೋಜನೆಯ ಶಕ್ತಿಶಾಲಿ ಸಂಕೇತವನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿ ಆರ್ಥಿಕ ಹಿಂಜರಿತದ ಕುರಿತು ಮಾತನಾಡಿದ ಪ್ರಧಾನಮಂತ್ರಿ, ವಿಮಾನ ನಿಲ್ದಾಣದ ವೇಳೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದರು. “ವಿಮಾನ ನಿಲ್ದಾಣ ಸುಗಮವಾಗಿ ನಡೆಯಲು ಸಹಸ್ರಾರು ಜನರ ಅಗತ್ಯವಿದೆ. ಈ ವಿಮಾನ ನಿಲ್ದಾಣ ಪಶ್ಚಿಮ ಉತ್ತರಪ್ರದೇಶ ಭಾಗದ ಸಹಸ್ರಾರು ಜನರಿಗೆ ಉದ್ಯೋಗಾವಕಾಶ ಒದಗಿಸಲಿದೆ” ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಬಂದ 7 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಉತ್ತರಪ್ರದೇಶ ಸದಾ ಅರ್ಹತೆಯನ್ನು ಪಡೆಯಲಾರಂಭಿಸಿದೆ. ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳ ಪರಿಣಾಮವಾಗಿ ಇಂದು ಉತ್ತರ ಪ್ರದೇಶ ದೇಶದ ಅತ್ಯಂತ ಹೆಚ್ಚು ಸಂಪರ್ಕಿತ ಪ್ರದೇಶವಾಗಿ ಮಾರ್ಪಾಡಾಗುತ್ತಿದೆ ಎಂದರು. ಭಾರತದಲ್ಲಿ ಬೆಳೆಯುತ್ತಿರುವ ವೈಮಾನಿಕ ಕ್ಷೇತ್ರದಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಮತ್ತು ಅದು ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ವಿಮಾನಗಳ ಕಾರ್ಯಾಚರಣೆಯ ಪ್ರಮುಖ ಕೇಂದ್ರವಾಗಲಿದೆ ಎಂದು ಹೇಳಿದರು. 40 ಎಕರೆ ಪ್ರದೇಶದಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಮಗ್ರ ಎಂಆರ್ ಒ ಸೌಕರ್ಯ ತಲೆ ಎತ್ತಲಿದ್ದು, ಅದು ಸಹಸ್ರಾರು ಯುವಜನರಿಗೆ ಉದ್ಯೋಗವನ್ನು ನೀಡಲಿದೆ. ಇಂದು ಭಾರತ ವಿದೇಶಗಳಿಂದ ಈ ಸೇವೆಗಳನ್ನು ಪಡೆಯಲು ಕೋಟ್ಯಂತರ ರೂ. ವ್ಯಯ ಮಾಡುತ್ತಿದೆ.
ಮುಂಬರುವ ಸಮಗ್ರ ಮಲ್ಟಿ ಮಾಡಲ್ ಸರಕು ಸಾಗಾಣೆ ತಾಣದ ಕುರಿತು ಮಾತನಾಡಿದ ಅವರು, ಹೆಚ್ಚಿನ ಭೂಮಿಯನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಈ ವಿಮಾನ ನಿಲ್ದಾಣ ಹೆಚ್ಚು ಉಪಯುಕ್ತವಾಗಲಿದೆ ಎಂದರು, ಈ ತಾಣ ಆಲಿಘಡ್, ಮಥುರಾ, ಮೀರತ್, ಆಗ್ರಾ, ಬಿಜ್ನೂರ್, ಮೊರದಾಬಾದ್ ಮತ್ತು ಬರೇಲಿ ಯಂತಹ ಕೈಗಾರಿಕಾ ಕೇಂದ್ರಗಳಿಗೆ ನೆರವಾಗಲಿದೆ ಎಂದು ಹೇಳಿದರು. ಮುಂಬರುವ ಮೂಲಸೌಕರ್ಯದಿಂದಾಗಿ ಖುರ್ಜಾ ಕರಕುಶಲಕರ್ಮಿಗಳು, ಮೀರತ್ ಕ್ರೀಡಾ ಉದ್ಯಮ, ಶಹರಾನ್ ಪುರ ಪೀಠೋಪಕರಣಗಳು, ಮೊರ್ದಾಬಾದ್ ನ ಹಿತ್ತಾಳೆ ಉದ್ಯಮ, ಆಗ್ರಾದ ಪಾದರಕ್ಷೆಗಳು ಮತ್ತು ಪೇಠಾ ಉದ್ಯಮಕ್ಕೆ ಭಾರಿ ಬೆಂಬಲ ಸಿಗಲಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶವನ್ನು ಹಿಂದಿನ ಸರ್ಕಾರಗಳು ಅಂಧಕಾರದಲ್ಲಿ ಮತ್ತು ನಿರ್ಲಕ್ಷ್ಯತೆಯಲ್ಲಿಟ್ಟಿದ್ದವು, ಯಾವ ಉತ್ತರಪ್ರದೇಶಕ್ಕೆ ಸುಳ್ಳು ಕನಸುಗಳನ್ನು ತೋರಿಸಲಾಗಿತ್ತೋ ಅದು ಇಂದು ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪು ಮೂಡಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತರಪ್ರದೇಶ ಮತ್ತು ಕೇಂದ್ರದಲ್ಲಿ ಹಿಂದೆ ಇದ್ದ ಸರ್ಕಾರಗಳು ಹೇಗೆ ಪಶ್ಚಿಮ ಉತ್ತರಪ್ರದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದವು ಎಂಬುದಕ್ಕೆ ಜೆವಾರ್ ವಿಮಾನನಿಲ್ದಾಣ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಎರಡು ದಶಕಗಳ ಹಿಂದೆ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ರೂಪಿಸಿತ್ತು ಎಂದು ಅವರು ಹೇಳಿದರು. ಆದರೆ ನಂತರ ಈ ವಿಮಾನ ನಿಲ್ದಾಣವು ದೆಹಲಿ ಮತ್ತು ಲಕ್ನೋದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳ ಒಳಜಗಳದಲ್ಲಿ ಸಿಲುಕಿ ಹಾಕಿಕೊಂಡಿತ್ತು. ಉತ್ತರಪ್ರದೇಶದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡುವಂತೆ ಹೇಳಿತ್ತು ಎಂದರು. ಆದರೆ ಈಗ ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳ ಪರಿಣಾಮವಾಗಿ ಇಂದು ಅದೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಭೂಮಿಪೂಜೆಗೆ ಸಾಕ್ಷಿಯಾಗುತ್ತಿದ್ದೇವೆ ಎಂದರು.
“ಮೂಲಸೌಕರ್ಯವು ನಮಗೆ ರಾಜಕೀಯದ ಭಾಗವಲ್ಲ, ಆದರೆ ರಾಷ್ಟ್ರೀಯ (ರಾಷ್ಟ್ರದ) ನೀತಿಯ ಭಾಗವಾಗಿದೆ. ನಾವು ಯೋಜನೆಗಳು ಸ್ಥಗಿತಗೊಳ್ಳದಂತೆ, ಗೊಂದಲದಲ್ಲಿ ನೇತಾಡದಂತೆ ಮತ್ತು ದಾರಿ ತಪ್ಪದಂತೆ ನೋಡಿಕೊಳ್ಳುತ್ತಿದ್ದೇವೆ. ಜೊತೆಗೆ ನಾವು ಮೂಲಸೌಕರ್ಯ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂಬುದನ್ನು ಖಾತ್ರಿಪಡಿಸುತ್ತಿದ್ದೇವೆ “ಎಂದು ಪ್ರಧಾನಮಂತ್ರಿ ಹೇಳಿದರು.
ನಮ್ಮ ದೇಶದ ಕೆಲವು ರಾಜಕೀಯ ಪಕ್ಷಗಳು ಸದಾ ಸ್ವ ಹಿತಾಸಕ್ತಿಯನ್ನೇ ಮುಖ್ಯವಾಗಿಟ್ಟುಕೊಂಢು ಕಾರ್ಯನಿರ್ವಹಿಸುತ್ತವೆ ಎಂದು ಪ್ರಧಾನಮಂತ್ರಿ ಟೀಕಿಸಿದರು. “ಆ ಜನರ ಆಲೋಚನೆ ಸ್ವಂತ ಹಿತಾಸಕ್ತಿ, ಅವರ ಸ್ವ ಹಿತಾಸಕ್ತಿ ಮತ್ತು ತಮ್ಮ ಕುಟುಂಬದ ಅಭಿವೃದ್ಧಿ ಮಾತ್ರವಾಗಿದೆ”ಎಂದರು. ಆದರೆ ನಾವು ರಾಷ್ಟ್ರ ಮೊದಲು ಮನೋಭಾವವನ್ನು ಅನುಸರಿಸುತ್ತಿದ್ದೇವೆ. ಸಬ್ ಕಾ ಸಾಥ್- ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್- ಸಬ್ ಕಾ ಪ್ರಯಾಸ್’ ನಮ್ಮ ಮಂತ್ರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಹಲವು ಹೊಸ ಉಪಕ್ರಮಗಳನ್ನು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಅವರು 100 ಕೋಟಿ ಡೋಸ್ ಲಸಿಕೆ ಮೈಲಿಗಲ್ಲು, 2070ರ ವೇಳೆಗೆ ನೆಟ್ ಝೀರೋ ಗುರಿ, ಕುಶಿನಗರ ವಿಮಾನ ನಿಲ್ದಾಣ, ಉತ್ತರ ಪ್ರದೇಶದಲ್ಲಿ 9 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಮಹೋಬಾದಲ್ಲಿ ಹೊಸ ಅಣೆಕಟ್ಟೆ ಮತ್ತು ನೀರಾವರಿ ಯೋಜನೆಗಳು, ಝಾನ್ಸಿಯಲ್ಲಿ ರಕ್ಷಣಾ ಕಾರಿಡಾರ್ ಮತ್ತು ಅದರ ಸಂಬಂಧಿ ಕಾರ್ಯಗಳು, ಪೂರ್ವಾಂಚಲ್ ಎಕ್ಸಪ್ರೆಸ್ ವೇ, ಜನಜಾತಿಯ ಗೌರವ ದಿನ ಆಚರಣೆ, ಭೂಪಾಲ್ ನಲ್ಲಿ ಆಧುನಿಕ ರೈಲು ನಿಲ್ದಾಣ, ಮಹಾರಾಷ್ಟ್ರದ ಫಂಡಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿ ಮತ್ತು ಇಂದು ಶಂಕು ಸ್ಥಾಪನೆ ನೇರವೇರಿಸಿದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಚಾರಗಳನ್ನು ಅವರು ಪ್ರಸ್ತಾಪಿಸಿದರು. “ಕೆಲವು ರಾಜಕೀಯ ಪಕ್ಷಗಳ ಸ್ವಾರ್ಥ ನೀತಿಗಳು ನಮ್ಮ ದೇಶಭಕ್ತಿ ಮತ್ತು ದೇಶಸೇವೆಯ ಮುಂದೆ ನಿಲ್ಲಲು ಸಾಧ್ಯವೇ ಇಲ್ಲ” ಎಂದು ಹೇಳಿ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
***
(Release ID: 1775068)
Visitor Counter : 240
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam