ಪ್ರಧಾನ ಮಂತ್ರಿಯವರ ಕಛೇರಿ

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ ಎಐಐಎಂಎಸ್ ನ ಝಾಜ್ಜಾರ್ ಕ್ಯಾಂಪಸ್ ನಲ್ಲಿರುವ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ವಿಶ್ರಾಮ್ ಸದನ್ ಉದ್ಘಾಟಿಸಿದ ಪ್ರಧಾನ ಮಂತ್ರಿ


ಎಐಐಎಂಎಸ್ ಆಡಳಿತ ಮಂಡಳಿ ಮತ್ತು ಸುಧಾಮೂರ್ತಿ ನೇತೃತ್ವದ ತಂಡದ ಸೇವೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನ ಮಂತ್ರಿ

“100 ವರ್ಷಗಳಲ್ಲೇ ಎದುರಾಗಿರುವ ಅತಿದೊಡ್ಡ ಸಾಂಕ್ರಾಮಿಕ ಸೋಂಕು ಎದುರಿಸಲು ದೇಶವೀಗ 100 ಕೋಟಿ ಡೋಸ್ ಲಸಿಕೆ ನೀಡಿ ಬಲಿಷ್ಠ ಸಂರಕ್ಷಣಾ ಗೋಡೆಯನ್ನು ನಿರ್ಮಿಸಿದೆ. ಈ ಸಾಧನೆ ಭಾರತ ಮತ್ತು ಅದರ ಜನತೆಗೆ ಸಲ್ಲಬೇಕು”

“ಭಾರತದ ಕಾರ್ಪೊರೇಟ್ ವಲಯ, ಖಾಸಗಿ ರಂಗ ಮತ್ತು ಸಾಮಾಜಿಕ ಸಂಘಟನೆಗಳು ದೇಶದ ಆರೋಗ್ಯ ಸೇವೆಯನ್ನು ಬಲಪಡಿಸಲು ನಿರಂತರ ಕೊಡುಗೆ ನೀಡುತ್ತಾ ಬಂದಿವೆ”

Posted On: 21 OCT 2021 11:49AM by PIB Bengaluru

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ ಎಐಐಎಂಎಸ್ ಝಾಜ್ಜಾರ್ ಕ್ಯಾಂಪಸ್ ನಲ್ಲಿರುವ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿರುವ ವಿಶ್ರಾಮ್ ಸದನವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು, ಭಾರತದ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ದೇಶಾದ್ಯಂತ ಭರದಿಂದ ಸಾಗಿರುವ ಲಸಿಕೆ ನೀಡಿಕೆ ಅಭಿಯಾನದಲ್ಲಿ ಭಾರತವಿಂದು 100 ಕೋಟಿ ಡೋಸ್ ಲಸಿಕೆ ಹಾಕಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. 100 ವರ್ಷಗಳಲ್ಲೇ ಕಾಣಿಸಿಕೊಂಡ ಬೃಹತ್  ಸೋಂಕು ಎದುರಿಸಲು ಭಾರತವೀಗ 100 ಕೋಟಿ ಡೋಸ್ ಲಸಿಕೆ ನೀಡಿ ಬಲಿಷ್ಠ ರಕ್ಷಣಾ ಗೋಡೆಯನ್ನು ಹಾಕಿಕೊಂಡಿದೆ. ಸಾಧನೆ ಭಾರತ ದೇಶಕ್ಕೆ ಮತ್ತು ಅದರ ಮಹಾಜನತೆಗೆ ಸಲ್ಲಬೇಕು ಎಂದು ತಿಳಿಸಿದರು.

ದೇಶದ ಎಲ್ಲಾ ಕೋವಿಡ್-19 ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಸರಬರಾಜು ಮತ್ತು ಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು, ಲಸಿಕೆ ಅಭಿವೃದ್ಧಿಯಲ್ಲಿ ನಿರತರಾಗಿದ್ದ ಆರೋಗ್ಯ ವಲಯದ ವೃತ್ತಿಪರರಿಗೆ ಕೃತಜ್ಞತೆಗಳು ಸಲ್ಲುತ್ತವೆ ಎಂದರು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಯ ಝಾಜ್ಜಾರ್ ಕ್ಯಾಂಪಸ್ ಗೆ ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗಾಗಿ ಬರುತ್ತಾರೆ. ಅವರಿಗೆ ಈಗ ಬಹುದೊಡ್ಡ ಅನುಕೂಲ ದೊರೆತಂತಾಗಿದೆ. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿರುವ ವಿಶ್ರಾಮ್ ಸದನವು ರೋಗಿಗಳು ಮತ್ತು ಅವರ ಸಂಬಂಧಿಕರ ವಾಸ್ತವ್ಯ ಆತಂಕಗಳನ್ನು ದೂರ ಮಾಡಲಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

ಇನ್ಫೋಸಿಸ್ ಪ್ರತಿಷ್ಠಾವು ವಿಶ್ರಾಮ್ ಸದನವನ್ನು ನಿರ್ಮಿಸಿ, ಬಹುದೊಡ್ಡ ಉಪಕಾರ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ, ಎಐಐಎಂಎಸ್ ಆವರಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಇನ್ಫೋಸಿಸ್ ಗೆ ಜಾಗ, ವಿದ್ಯುತ್ ಮತ್ತು ನೀರು ಒದಗಿಸಿರುವ ಎಐಐಎಂಎಸ್ ಝಾಜ್ಜಾರ್ ಕ್ರಮ ಶ್ಲಾಘನೀಯವಾಗಿದೆ. ಬೃಹತ್ ಸೇವೆ ಒದಗಿಸಿರುವ ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಪ್ರತಿಷ್ಠಾನದ ತಂಡ ಮತ್ತು ಎಐಐಎಂಎಸ್ ಆಡಳಿತ ಮಂಡಳಿಗೆ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಭಾರತದ ಕಾರ್ಪೊರೇಟ್ ರಂಗ, ಖಾಸಗಿ ವಲಯ ಮತ್ತು ಸಾಮಾಜಿಕ ಸಂಘಟನೆಗಳು ದೇಶದ ಆರೋಗ್ಯ ಸೇವೆಯನ್ನು ಬಲಪಡಿಸಲು ನಿರಂತರ ಕೊಡುಗೆ ನೀಡುತ್ತಾ ಬಂದಿವೆ. ಆಯುಷ್ಮಾನ್ ಭಾರತ್ಪಿಎಂಜೆಎವೈ ಇದಕ್ಕೆ ಬಹುದೊಡ್ಡ ಉದಾಹರಣೆಯಾಗಿದೆ ಎಂದು ಪ್ರಧಾನ ಮಂತ್ರಿ ಉಲ್ಲೇಖಿಸಿದರು.

ಆಯುಷ್ಮಾನ್ ಭಾರತ್ ಯೋಜನೆ ಅಡಿ, ರೋಗಿಗಳು ಉಚಿತ ಚಿಕಿತ್ಸೆ ಪಡೆದಾಗ, ಯೋಜನೆಯ ಸೇವೆ ಸಾಫಲ್ಯ ಕಂಡಂತಾಯಿತು. ಸೇವೆಯ ಪ್ರೇರಣೆಯಿಂದಲೇ ಸರ್ಕಾರ, 400 ಕ್ಯಾನ್ಸರ್ ಔಷಧಗಳ ಬೆಲೆ ತಗ್ಗಿಸಲು ಕ್ರಮ ಕೈಗೊಂಡಿತು ಎಂದು ಪ್ರಧಾನಿ ತಿಳಿಸಿದರು.

***



(Release ID: 1765442) Visitor Counter : 219