ಸಂಪುಟ

ಸುಸ್ಥಿರ ಫಲಿತಾಂಶಗಳಿಗಾಗಿ 2025-26ರವರೆಗೆ ಸ್ವಚ್ಛ ಭಾರತ ಮಿಷನ್ (ನಗರ) (ಎಸ್ ಬಿಎಂ-ಯು) ಮುಂದುವರಿಕೆಗೆ ಕೇಂದ್ರ ಸಂಪುಟ ಒಪ್ಪಿಗೆ

ಎಸ್ ಬಿಎಂ-ಯು 2.0ಗೆ ಒಟ್ಟು ಹಣಕಾಸು ವೆಚ್ಚ 1,41,600 ಕೋಟಿ ರೂ.: ಮಿಷನ್ ಮೊದಲ ಹಂತಕ್ಕೆ ಹೋಲಿಸಿದರೆ 2.5 ಪಟ್ಟು ಅಧಿಕ

ಎಸ್ ಬಿಎಂ-ಯು 2.0 ಅಡಿಯಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಎಲ್ಲ ನಗರಗಳಲ್ಲಿ ಮಲ ತ್ಯಾಜ್ಯ ನಿರ್ವಹಣೆ ಸೇರಿ ಬಯಲು ಶೌಚವನ್ನು  ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ

ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಗಳಿಗೆ ಅಪಾಯಕಾರಿ ತ್ಯಾಜ್ಯ ಸೇರುವುದನ್ನು ನಿರ್ಮೂಲನೆ ಮಾಡುವುದು

ಸಂಸ್ಕರಿಸದೆ ತ್ಯಾಜ್ಯ ನೀರನ್ನು ಜಲ ಮೂಲಗಳಿಗೆ ಬಿಟ್ಟು ಕಲುಷಿತಗೊಳಿಸುವಂತಿಲ್ಲ

ಎಲ್ಲ ನಗರಗಳು ಕನಿಷ್ಠ 3-ಸ್ಟಾರ್ ಕಸ ಮುಕ್ತ  ಗುರಿ ಸಾದಿಸಿ ಪ್ರಮಾಣೀಕರಣ ಪಡೆಯಬೇಕು

Posted On: 12 OCT 2021 8:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ 2025-26 ವರೆಗೆ ಸ್ವಚ್ಛ ಭಾರತ ಮಿಷನ್(ನಗರ) ಮುಂದುವರಿಕೆಗೆ ಅನುಮೋದನೆ ನೀಡಿದೆ. ಇದರಡಿ 2021 ಜನಗಣತಿ ಪ್ರಕಾರ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಎಲ್ಲ ನಗರಗಳಲ್ಲಿ(ಅಟಲ್ ನಗರ ನವೀಕರಣ ಮತ್ತು ನಗರ ಪರಿವರ್ತನೆ ಯೋಜನೆ(ಅಮೃತ್) ಅಡಿ ಸೇರದ) ತ್ಯಾಜ್ಯ ನೀರು ನಿರ್ವಹಣೆ ಮಾಡುವುದು ಮತ್ತು ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಸಾಧಿಸುವುದು, ಬಯಲು ಶೌಚ ಮುಕ್ತ(ಒಡಿಎಫ್) ಫಲಿತಾಂಶದಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುವುದು.

ಎಸ್ ಬಿಎಂ-ನಗರ 2.0 ಅಡಿಯಲ್ಲಿ ಒಟ್ಟು ಹಣಕಾಸು ವೆಚ್ಚ:

ಎಸ್ ಬಿಎಂ-ಯು 2.0ಗೆ ಒಟ್ಟು 1,41,600 ಕೋಟಿ ರೂ. ಆರ್ಥಿಕ ವೆಚ್ಚವಾಗಲಿದೆ ಎಂದು ಅಂತಿಮಗೊಳಿಸಲಾಗಿದೆ. ಇದರಲ್ಲಿ 2021-22ರಿಂದ 2025-26 ವರೆಗೆ ಕೇಂದ್ರ ಸರ್ಕಾರದ ಒಟ್ಟು ಪಾಲು 36,465 ಕೋಟಿ ರೂ. ಇದು ಮೊದಲ ಹಂತದ ಮಿಷನ್‌ನಲ್ಲಿ  62,009 ಕೋಟಿ ರೂ.ಗೆ ಹೋಲಿಸಿದರೆ 2.5ಪಟ್ಟು ಅಧಿಕ ವೆಚ್ಚ ನಿಗದಿಪಡಿಸಲಾಗಿದೆ

 • ರಾಜ್ಯಗಳು ಮತ್ತು ಕೇಂದ್ರದ ನಡುವೆ ನಿಧಿ ಹಂಚಿಕೆ ವಿಧಾನ ಕೆಳಗಿನಂತಿದೆ:
 • ಒಂದು ಮಿಲಿಯನ್ ಗೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳು: 25:75
 • 1 ರಿಂದ10 ಲಕ್ಷದ ವರೆಗೆ ಜನಸಂಖ್ಯೆ ಹೊಂದಿರುವ ನಗರಗಳು: 33:67
 • ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು: 50:50
 • ವಿಧಾನಸಭೆ ಹೊಂದಿರದ ಕೇಂದ್ರಾಡಳಿತ ಪ್ರದೇಶಗಳು: 100:0
 • ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳು: 80:20

ಸ್ವಚ್ಛ ಭಾರತ್ ಮಿಷನ್ನಗರ 2.0 ಅಡಿ ನಿರೀಕ್ಷಿತ ಫಲಿತಾಂಶಗಳು

ನಿರ್ಮಲೀಕರಣ:

 1. ಎಲ್ಲಾ ಸಾಂಸ್ಥಿಕ ನಗರಗಳು ಕನಿಷ್ಠ ಒಡಿಎಫ್+ ಆಗಬೇಕು.
 2. ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಎಲ್ಲ ನಗರಗಳು ಒಡಿಎಫ್++ ಆಗಬೇಕು.
 3. ಎಲ್ಲ ತ್ಯಾಜ್ಯ ನೀರನ್ನು ಸುರಕ್ಷಿತವಾಗಿ ಸಂರಕ್ಷಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಮತ್ತು ಅದನ್ನು ಗರಿಷ್ಠ ಪ್ರಮಾಣದಲ್ಲಿ ಮರುಬಳಕೆ ಮಾಡಿಕೊಳ್ಳಬೇಕು. ಸಂಸ್ಕರಿಸದೇ ಇರುವ ನೀರನ್ನು ಜಲಮೂಲಗಳಿಗೆ ಬಿಡಬಾರದು.

ಘನತ್ಯಾಜ್ಯ ನಿರ್ವಹಣೆ

 • ಎಲ್ಲ ನಗರಗಳು ಕನಿಷ್ಠ 3-ಸ್ಟಾರ್ ತ್ಯಾಜ್ಯ ಮುಕ್ತ ಪ್ರಮಾಣಿಕರಣ ಸಾಧಿಸಬೇಕು.

ಸ್ವಚ್ಛ ಭಾರತ್ ಮಿಷನ್ನಗರ 2.0: ಪ್ರಮುಖ ಮುಖ್ಯಾಂಶಗಳು

ಮುಂದಿನ ಐದು ವರ್ಷಗಳಲ್ಲಿ ಎಸ್ ಬಿಎಂ-ಯು 2.0ಗೆ ಗೌರವಾನ್ವಿತ ಪ್ರಧಾನಮಂತ್ರಿ ಅವರು 2021  ಅಕ್ಟೋಬರ್ 1ರಂದು ಚಾಲನೆ ನೀಡಿ, ಅದರ ಉದ್ದೇಶ ಸುಸ್ಥಿರ ನಿರ್ಮಲೀಕರಣ ಮತ್ತು ಘನ ತ್ಯಾಜ್ಯ ನಿರ್ವಹಣಾ ಫಲಿತಾಂಶಗಳನ್ನು ಸಾಧಿಸಲು ಒತ್ತು ನೀಡುವುದು ಮತ್ತು ನಗರ ಭಾರತವನ್ನುತ್ಯಾಜ್ಯ ಮುಕ್ತಗೊಳಿಸುವ ಗುರಿ ಸಾಧನೆ ನಿಟ್ಟಿನಲ್ಲಿ ಚಟುವಟಿಕೆಗಳನ್ನು ಚುರುಕುಗೊಳಿಸುವುದು.

ಮಿಷನ್‌ನ ಜಾರಿ ಅಂಶಗಳನ್ನು ವ್ಯವಸ್ಥಿತ ರೀತಿಯಲ್ಲಿ ಮತ್ತು ಕಾಲಮಿತಿಯಲ್ಲಿ ಮಾಡಲಾಗುವುದು, ಅಗತ್ಯ ಮೂಲಸೌಕರ್ಯವನ್ನು ಸಮಗ್ರ ಅಂತರ ವಿಶ್ಲೇಷಣೆ ಮೂಲಕ ಒದಗಿಸಲಾಗುವುದು, 5 ವರ್ಷಗಳ ಸಮಗ್ರ ಕ್ರಿಯಾ ಯೋಜನೆ ಮತ್ತು ಕಾಲಮಿತಿಯ ವಾರ್ಷಿಕ ಕ್ರಿಯಾ ಯೋಜನೆಗಳು ಒಳಗೊಂಡಿವೆ. ಮಿಷನ್ ಸಂಪೂರ್ಣ ಕಾಗದರಹಿತ, ಡಿಜಿಟಲ್  ಆಗಿರಲಿದ್ದು, ಸಂಪೂರ್ಣ ಪಾರದರ್ಶಕತೆಗೆ ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುವುದು. ಜಿಐಎಸ್ ಆಧಾರಿತ ತ್ಯಾಜ್ಯ ನಿರ್ವಹಣಾ ಮೂಲಸೌಕರ್ಯದ ಮೂಲಕ ಉತ್ತರದಾಯಿತ್ವ, ಉತ್ಕೃಷ್ಟ ಬಳಕೆದಾರರ ಮುಖಾಮುಖಿ ವ್ಯವಸ್ಥೆ, ಆನ್ ಲೈನ್ ಕುಂದುಕೊರತೆ ಪರಿಹಾರ ವ್ಯವಸ್ಥೆ, ಮೊದಲಿನಿಂದ ಕೊನೆಯವರೆಗೆ ಅಂದರೆ ಯೋಜನೆ ರೂಪಿಸುವುದರಿಂದ ಹಿಡಿದು ನಿಧಿ ಬಿಡುಗಡೆವರೆಗೆ ಆನ್ ಲೈನ್ ನಿಗಾ ವ್ಯವಸ್ಥೆ ಮತ್ತು ಜಿಐಎಸ್ ಆಧರಿತ ವೇದಿಕೆಯಿಂದ ಸಮಗ್ರ ಯೋಜನಾ ಪ್ರಗತಿ ಮೇಲ್ವಿಚಾರಣೆ ನಡೆಸಲಾಗುವುದು

ಪ್ರಗತಿ ಆಧರಿಸಿ ಹಣ ಬಿಡುಗಡೆ, ಸಣ್ಣ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಆರ್ಥಿಕ ನೆರವು ಮತ್ತು ಹೆಚ್ಚುವರಿ ಆರ್ಥಿಕ ಬೆಂಬಲಕ್ಕೆ 15ನೇ ಹಣಕಾಸು ಆಯೋಗದ ಅನುದಾನದ ಸಂಯೋಜನೆ, ಪ್ರತಿಯೊಂದು ಅಂಶದ ವ್ಯವಸ್ಥಿತ ಜಾರಿ ಯೋಜನೆ , ಉತ್ಕೃಷ್ಟ ಸಾಮರ್ಥ್ಯ ವೃದ್ಧಿ, ಸಂವಹನ ಮತ್ತು ಸುಸ್ಥಿರ ನಡವಳಿಕೆ ಬದಲಾವಣೆಗೆ ಪ್ರತಿಪಾದಿಸುವುದು, ಖಾಸಗಿ ವಲಯದ ಸಹಭಾಗಿತ್ವಕ್ಕೆ ತೀವ್ರ ಒತ್ತು ನೀಡುವುದು ಮತ್ತು ವ್ಯಾಪಕ ಕೈಗಾರಿಕಾ ಸಹಭಾಗಿತ್ವದಿಂದ ಮಿಷನ್‌ನ ಉದ್ದೇಶಗಳನ್ನು ನಿಗದಿತ ಕಾಲಮಿತಿಯೊಳಗೆ ಸಾಧಿಸಲು ನೆರವು ನೀಡುವುದು

ಸ್ವಚ್ಛ ಭಾರತ್ ಮಿಷನ್-ನಗರ 2.0 ಅಡಿ ಪ್ರಮುಖಾಂಶಗಳು

ಸ್ವಚ್ಛ ಭಾರತ್ ಮಿಷನ್-ನಗರ 2.0 ಜಾರಿಗೆ ಕೆಳಗಿನ ಪ್ರಮುಖಾಂಶಗಳನ್ನು ಪಾಲಿಸಬೇಕಿದೆ

ಸುಸ್ಥಿರ ನಿರ್ಮಲೀಕರಣ

 1. ಮುಂದಿನ 5 ವರ್ಷಗಳ ಕಾಲ ಉತ್ತಮ ಉದ್ಯೋಗವಕಾಶಗಳಿಗಾಗಿ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಬರುವ ಹೆಚ್ಚುವರಿ ಜನಸಂಖ್ಯೆಗೆ ಸಮಗ್ರ ನಿರ್ಮಲೀಕರಣ ವ್ಯವಸ್ಥೆಯನ್ನು ಖಾತ್ರಿಪಡಿಸುವುದಕ್ಕೆ ಮಿಷನ್‌ನಡಿ ಹೆಚ್ಚಿನ ಒತ್ತು ನೀಡಲಾಗುವುದು. ಇದನ್ನು ಸುಮಾರು 3.5 ಲಕ್ಷ ವೈಯಕ್ತಿಕ, ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸಾಧಿಸಲಾಗುವುದು.
 2. 1ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳಲ್ಲಿ ಸಮಗ್ರ ದ್ರವ ತ್ಯಾಜ್ಯದ ನಿರ್ವಹಣೆ- ಎಸ್ ಬಿಎಂ-ನಗರ .20 ಅಡಿಯಲ್ಲಿ ಅಂಶವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಇದರಡಿ ಪ್ರತಿಯೊಂದು ನಗರದಲ್ಲೂ ತ್ಯಾಜ್ಯ ನೀರು ಸುರಕ್ಷಿತವಾಗಿ ನಿಯಂತ್ರಿಸುವುದು, ಸಂಗ್ರಹಿಸುವುದು ಮತ್ತು ಸಾಗಿಸುವುದು ಮತ್ತು ಸಂಸ್ಕರಿಸುವುದು ಹಾಗೂ ತ್ಯಾಜ್ಯ ನೀರು ನಮ್ಮ ಜಲಮೂಲಗಳನ್ನು ಕಲುಷಿತಗೊಳಿಸದಂತೆ ನೋಡಿಕೊಳ್ಳುವ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಖಾತ್ರಿಪಡಿಸುವುದು.

ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆ:

 1. ಬಿಡಿ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ಒತ್ತು ನೀಡಿ ಪ್ರತಿಯೊಂದು ನಗರದಲ್ಲೂ ಕಾರ್ಯಕ್ರಮಗಳಲ್ಲಿ ಶೇ.100ರಷ್ಟು ತ್ಯಾಜ್ಯ ವಿಂಗಡಣೆಯ ಜೊತೆಗೆ ಬಳಕೆಯಾಗುವ ಕ್ರಿಯಾತ್ಮಕ ವಸ್ತುಗಳನ್ನು ಮರು ಪಡೆಯುವ ಸೌಕರ್ಯ (ಎಂಆರ್ ಎಫ್ ) ಹೊಂದಿರಬೇಕು
 2. 5ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲಿ ಕಟ್ಟಡ ನಿರ್ಮಾಣ ಮತ್ತು ತೆರವು (ಸಿ&ಡಿ) ತ್ಯಾಜ್ಯ ಸಂಸ್ಕರಣೆಗೆ ಸೌಕರ್ಯಗಳನ್ನು ಸ್ಥಾಪಿಸುವುದು ಮತ್ತು ನಗರಗಳಲ್ಲಿ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (ಎನ್ ಸಿಎಪಿ) ಅಡಿಯಲ್ಲಿ ಕಸ ಗುಡಿಸುವ ಯಂತ್ರಗಳನ್ನು ನಿಯೋಜಿಸುವುದು ಮತ್ತು
 3. ಪಾರಂಪರಿಕ ಕಟ್ಟಡ ತ್ಯಾಜ್ಯ ದಿಂದ ಮುಕ್ತಗೊಳಿಸಿ, ಸುಮಾರು 14 ಸಾವಿರ ಎಕರೆ ಭೂಮಿಯನ್ನು ಪಡೆಯಬಹುದು ಮತ್ತು ಕೊಳೆಯುತ್ತಿರುವ ಸುಮಾರು 15 ಕೋಟಿ ಟನ್ ಪಾರಂಪರಿಕ ತ್ಯಾಜ್ಯವನ್ನು ಮುಕ್ತಗೊಳಿಸಬಹುದು

ಮೇಲಿನ ಅಂಶಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲ ಸಂಬಂಧಿಸಿದ ಪಾಲುದಾರರ ಉತ್ಕೃಷ್ಟ ಸಾಮರ್ಥ್ಯವೃದ್ಧಿ ಮೂಲಕ ಸಾಧಿಸಲಾಗುವುದು ಮತ್ತು ಜನಾಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲು ಸಂವಹನ ಮತ್ತು ವಕಾಲತ್ತಿನ ಮೂಲಕ ಹೆಚ್ಚಿನ ಜನರು ಭಾಗಿಯಾಗುವಂತೆ ಮಾಡುವುದಕ್ಕೆ ಹೆಚ್ಚಿನ ಗಮನಹರಿಸುವಂತೆ ಮಾಡುವುದು

ಪೌರಕಾರ್ಮಿಕರು ಮತ್ತು ಅಸಂಘಟಿತ ತ್ಯಾಜ್ಯ ನಿರ್ವಹಣೆ ಕೆಲಸಗಾರರ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ಅವರಿಗೆ ವೈಯಕ್ತಿಕ ರಕ್ಷಣಾ ಸಾಧನಗಳು ಮತ್ತು ಸುರಕ್ಷತಾ ಕಿಟ್ ಗಳನ್ನು ಒದಗಿಸುವುದು ಮತ್ತು ಅವರ ಸಾಮರ್ಥ್ಯವೃದ್ಧಿ ಜೊತೆಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಸಂಯೋಜಿಸುವುದು.

ಸ್ವಚ್ಛ ಭಾರತ್ ಮಿಷನ್-ನಗರ 2.0 ಉದ್ದೇಶಗಳು

ಪ್ರಧಾನಮಂತ್ರಿಯವರ ದೂರದರ್ಶಿ ನಾಯಕತ್ವದಡಿ 2014ರಲ್ಲಿ ಭಾರತ ನಗರ ಯೋಜನೆಗೆ ಸಮಗ್ರ ದೃಷ್ಟಿಕೋನವನ್ನು ಅಳವಡಿಸಿಕೊಂಡಿತು ಮತ್ತು ನೀರು ಮತ್ತು ನೈರ್ಮಲ್ಯ ವಲಯದಲ್ಲಿ ಪರಿವರ್ತನೆಯ ಪಯಣವನ್ನು ಆರಂಭಿಸಿತು. ಪ್ರಧಾನಮಂತ್ರಿ ಅವರು 2014 ಆಗಸ್ಟ್ 15ರಂದು ಎಸ್ ಬಿಎಂ ಯೋಜನೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದರು ಮತ್ತು ಅಧಿಕೃತವಾಗಿ ಯೋಜನೆ 2014 ಅಕ್ಟೋಬರ್ 2ರಂದು ಕೆಳಗಿನ ಉದ್ದೇಶಗಳೊಂದಿಗೆ ಆರಂಭವಾಯಿತು.

 • ಎಲ್ಲಾ ಸಾಂಸ್ಥಿಕ ನಗರಗಳಲ್ಲಿ ಬಯಲು ಶೌಚವನ್ನು ನಿರ್ಮೂಲ ಮಾಡುವುದು.
 • ಎಲ್ಲ ನಗರಗಳಲ್ಲಿ ಘನ ತ್ಯಾಜ್ಯವನ್ನು ಶೇ.100ರಷ್ಟು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವುದು.
 • ಜನಾಂದೋಲನದ ಮೂಲಕ ಜನರ ನಡವಳಿಕೆಯಲ್ಲಿ ಬದಲಾವಣೆ ತರುವುದು.

ಸ್ವಚ್ಛ ಭಾರತ್ ಮಿಷನ್-ನಗರದ ಸಾಧನೆಗಳು

ಕಳೆದ 7 ವರ್ಷಗಳಲ್ಲಿ, ಮಿಷನ್ ದೇಶದ ಮೂಲೆ ಮೂಲೆಗಳನ್ನು ತಲುಪಿದೆ ಮತ್ತುಜನ ಮೊದಲುಎಂಬುದಕ್ಕೆ ಒತ್ತು ನೀಡಿ ಅಸಂಖ್ಯಾತ ನಾಗರಿಕರ ಬದುಕುಗಳನ್ನು ಬದಲಾಯಿಸಿದೆ. ಎಸ್ ಬಿಎಂ-ನಗರದಡಿ ಸಾಧಿಸರುವ ಪ್ರಮುಖ ಮೈಲಿಗಲ್ಲುಗಳು, ಸಾಧನೆಗಳು ಮತ್ತು ಪರಿಣಾಮಗಳು ಕೆಳಗಿನಂತಿವೆ.

 • ನಗರ ಭಾರತದಲ್ಲಿ ಶೇ.100ರಷ್ಟು ನೈರ್ಮಲ್ಯದ ಸೌಕರ್ಯಗಳನ್ನು ಒದಗಿಸುವ ಮೂಲಕ ನಗರ ಭಾರತದಲ್ಲಿ ಸ್ವಚ್ಛತಾ ವಲಯದಲ್ಲಿ ಮಿಷನ್ ದೊಡ್ಡ ಕ್ರಾಂತಿಯನ್ನುಂಟು ಮಾಡಿದೆ. ಎಸ್ ಬಿಎಂ-ನಗರ ಯೋಜನೆಯಡಿ, 70 ಲಕ್ಷ ಕೌಟುಂಬಿಕ, ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸರ್ವರಿಗೂ ಸುರಕ್ಷಿತ ಹಾಗೂ ಗೌರವಯುತ ಶೌಚಾಲಯಗಳ ಪರಿಹಾರವನ್ನು ಒದಗಿಸಲಾಗಿದೆ. ಮಿಷನ್ ಮಹಿಳೆಯರು, ಮಂಗಳಮುಖಿಯರು ಮತ್ತು ವಿಶೇಷ ಚೇತನ ವ್ಯಕ್ತಿಗಳ (ದಿವ್ಯಾಂಗರ) ಅಗತ್ಯಗಳನ್ನು ಪೂರೈಸಲು ಆದ್ಯತೆ ನೀಡಿದೆ.
 • ಎಸ್ ಬಿಎಂ ಶೌಚಾಲಯಗಳು ಗೂಗಲ್ ಮ್ಯಾಪ್ ನಲ್ಲಿ ಲಭ್ಯವಿವೆ, 3,300ಕ್ಕೂ ಅಧಿಕ ನಗರಗಳಲ್ಲಿನ ಸುಮಾರು 65,000 ಸಾರ್ವಜನಿಕ ಶೌಚಾಲಯಗಳ ಮಾಹಿತಿಯನ್ನು ನೇರವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಡಿಜಿಟಲ್ ಆವಿಷ್ಕಾರಗಳ ಮೂಲಕ ಶೌಚಾಲಯಗಳ ಸೌಕರ್ಯಗಳ ಲಭ್ಯತೆಯನ್ನು ಮತ್ತಷ್ಟು ಸುಧಾರಿಸಲಾಗಿದೆ.
 • ನಗರ ಭಾರತವನ್ನು 2019ರಲ್ಲಿ ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ, ಆನಂತರ ಮಿಷನ್‌ನಡಿ ಸುಸ್ಥಿರ ನಿರ್ಮಲೀಕರಣ ಹಾದಿಯನ್ನು ನಗರ ಭಾರತ ಮುನ್ನಡೆದಿದ್ದು ಕ್ರಮವಾಗಿ 3,300 ನಗರಗಳು ಮತ್ತು ಸುಮಾರು 960 ನಗರಗಳು ODF[1]+ and ODF++[2]  ಪ್ರಮಾಣೀಕರಣ ಪಡೆದಿವೆ.
 • ನಗರಗಳು ವಾಟರ್ ಪ್ಲಸ್ ಪ್ರಮಾಣೀಕರಣದತ್ತ ಮುನ್ನಡೆದಿದ್ದು, Water+ Protocol[3] ಅಡಿ ತ್ಯಾಜ್ಯ ನೀರಿನ ಸಂಸ್ಕರಣೆ ಮತ್ತು ಅದರ ಗರಿಷ್ಠ ಮರು ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
 • ವೈಜ್ಞಾನಿಕವಾಗಿ ತ್ಯಾಜ್ಯ  ನಿರ್ವಹಣೆ ಮತ್ತು ತ್ಯಾಜ್ಯ ಸಂಸ್ಕರಣೆಯಲ್ಲಿ ಭಾರತ ಸುಮಾರು ನಾಲ್ಕು ಪಟ್ಟು ಮುನ್ನಡೆ ಸಾಧಿಸಿದೆ ಅಂದರೆ 2014ರಲ್ಲಿ ಶೇ.18ರಷ್ಟು ಇದ್ದದ್ದು ಇಂದು ಶೇ.70ಕ್ಕೆ ಏರಿದೆ
 • ಇದನ್ನು ಶೇ.97ರಷ್ಟು ವಾರ್ಡ್ ಗಳಲ್ಲಿ ಶೇ.100ರಷ್ಟು ಮನೆ ಬಾಗಿಲಿನಿಂದಲೇ ತ್ಯಾಜ್ಯ ಸಂಗ್ರಹಣೆ ಮಾಡುವುದು ಮತ್ತು ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ ಪದ್ದತಿಯನ್ನು ಶೇ.85ರಷ್ಟು ವಾರ್ಡ್ ಗಳಲ್ಲಿ ಅಕ್ಷರಶಃ ಪಾಲನೆ ಮಾಡುತ್ತಿದ್ದಾರೆ.
 • ಮಿಷನ್‌ನಡಿ ಸುಮಾರು 5.5 ಲಕ್ಷಕ್ಕೂ ಅಧಿಕ ಪೌರ ಕಾರ್ಮಿಕರನ್ನು ಸಾಮಾಜಿಕ ಕಲ್ಯಾಣ ಯೋಜನೆಯಡಿ ಜೋಡಣೆ ಮಾಡಿರುವುದರಿಂದ ಪೌರ ಕಾರ್ಮಿಕರು ಮತ್ತು ಅಸಂಘಟಿತ ತ್ಯಾಜ್ಯ ನಿರ್ವಹಣೆ ಕೆಲಸಗಾರರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಮುಂಚೂಣಿ ಪೌರ ಕಾರ್ಮಿಕರ ನಿರಂತರ ಸೇವೆ  ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ನಗರ ಭಾರತದ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವನ್ನು ಖಾತ್ರಿಪಡಿಸಿತು
 • ಕಾರ್ಯಕ್ರಮದಲ್ಲಿ 20 ಕೋಟಿ ಜನರು ಸಕ್ರಿಯವಾಗಿ ಭಾಗವಹಿಸುವ (ಶೇ.50ರಷ್ಟು ನಗರ ಭಾರತದ ಜನಸಂಖ್ಯೆ) ಮೂಲಕ ಮಿಷನ್ ಅನ್ನು ಯಶಸ್ವಿ ಜನಾಂದೋಲನವನ್ನಾಗಿ ಪರಿವರ್ತಿಸಲಾಗಿದೆ, ವ್ಯಾಪಕ ಐಇಸಿ ಮತ್ತು ನಡವಳಿಕೆ ಬದಲಾವಣೆ ಅಭಿಯಾನಗಳ ಮೂಲಕ ನೈಜ ಜನಾಂದೋಲನವಾಗಿದೆ.
 • 2016ರಲ್ಲಿ ಎಂಒಎಚ್ ಯುಎ ಪರಿಚಿಯಿಸಿದ ಡಿಜಿಟಲ್ ಕುಂದುಕೊರತೆ ಪರಿಹಾರ ವೇದಿಕೆ- ಸ್ವಚ್ಛತಾ ಆ್ಯಪ್ ನಂತರ ಕ್ರಮಗಳು ಡಿಜಿಟಲ್ ಬಳಕೆಯನ್ನು ಸಕ್ರಿಯಗೊಳಿಸಿ ಕುಂದುಕೊರತೆ ಪರಿಹಾರ ವೇದಿಕೆಯನ್ನು ಮರುಸಂಶೋಧಿಸಲು ದಾರಿ ಮಾಡಿಕೊಟ್ಟಿದೆ. ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಈವರೆಗೆ ಆ್ಯಪ್ ಸುಮಾರು 2 ಕೋಟಿ ನಾಗರಿಕದ ದೂರುಗಳನ್ನು ಇತ್ಯರ್ಥಪಡಿಸಿದೆ. ಎಂಒಎಚ್ ಯುಎ ಇತ್ತೀಚೆಗೆ ಸ್ವಚ್ಛತಾ ಆ್ಯಪ್ 2.0 ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
 • ಎಸ್ ಬಿಎಂ-ನಗರ ಅಡಿಯಲ್ಲಿ 2016ರಲ್ಲಿ ಸುಮಾರು 4,000 ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಯುಎಲ್ ಬಿಗಳ) ವ್ಯಾಪ್ತಿಯಲ್ಲಿ ವಿಶ್ವದ ಅತಿದೊಡ್ಡ ನಗರ ಸ್ವಚ್ಛತೆ ಸಮೀಕ್ಷೆ ಸ್ವಚ್ಛ ಸರ್ವೇಕ್ಷಣಾ ಆರಂಭಿಸಲಾಗಿದೆ. ಸರ್ವೇಕ್ಷಣದ ನೀತಿ ವರ್ಷದಿಂದ ವರ್ಷಕ್ಕೆ ವಿಕಸನಗೊಳ್ಳುತ್ತಿದೆ ಮತ್ತು ಇಂದು ಅದು ನೈರ್ಮಲೀಕರಣ ಫಲಿತಾಂಶಗಳನ್ನು ಸಾಧಿಸಲು ತಳಮಟ್ಟದಲ್ಲಿ ಜಾರಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಒಂದು ಅನನ್ಯ ನಿರ್ವಹಣಾ ಸಾಧನವಾಗಿ ಮಾರ್ಪಟ್ಟಿದೆ. ಸಾಂಕ್ರಾಮಿಕ ರೋಗದಿಂದ ಎದುರಾದ ಸವಾಲುಗಳ ಹೊರತಾಗಿಯೂ ಸ್ವಚ್ಛ ಸರ್ವೇಕ್ಷಣಾ 2021 ಅನ್ನು ದಾಖಲೆ ಸಮಯದಲ್ಲಿ ನಡೆಸಲಾಯಿತು ಮತ್ತು ವರ್ಷಗಳಿಂದೀಚೆಗೆ ಒಟ್ಟಾರೆ ಸುಮಾರು 7 ಕೋಟಿ ಪ್ರಜೆಗಳ ಪ್ರತಿಕ್ರಿಯೆಯನ್ನು ಪಡೆದಿದೆ.
 • ರಾಜ್ಯ ಮತ್ತು ನಗರ ಮಟ್ಟದಲ್ಲಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗೆ ನಿರಂತರ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಿಷನ್‌ನ ನಾನಾ ವಿಭಾಗಗಳಲ್ಲಿ ಸುಮಾರು 10 ಲಕ್ಷ ಮುನಿಸಿಪಲ್  ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.          

***

[1] 2018ರಲ್ಲಿ ಎಂಒಎಚ್ ಯುಎ ಬಿಡುಗಡೆ ಮಾಡಿದ ODF+ ಶಿಷ್ಟಾಚಾರದಲ್ಲಿ ಸ್ವಚ್ಛತೆಗೆ ಒತ್ತು  ಮತ್ತು ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯಗಳ ಕಾರ್ಯನಿರ್ವಹಣೆಗೆ ಒತ್ತು ನೀಡಲಾಗಿದೆ.

[2] 2018ರಲ್ಲಿ ಎಂಒಎಚ್ ಯುಎ ODF++ ಶಿಷ್ಟಾಚಾರದಲ್ಲಿ ಸಂಪೂರ್ಣ ಮಲ ತ್ಯಾಜ್ಯ ಮತ್ತು ಸೆಪ್ಟೇಜ್ ನಿರ್ವಹಣೆಗೆ ಕೇಂದ್ರೀಕರಿಸಲಾಗಿದೆ.

[3] 2019ರಲ್ಲಿ ಎಂಒಎಚ್ ಯುಎ ಜಾರಿಗೊಳಿಸಿದ Water+ ಶಿಷ್ಟಾಚಾರದಡಿ ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಅದರ ಗರಿಷ್ಠ ಮರುಬಳಕೆಗೆ ಒತ್ತು ನೀಡಲಾಗಿದೆ.

***(Release ID: 1763557) Visitor Counter : 72