ಇಂಧನ ಸಚಿವಾಲಯ
ತಮ್ಮ ಗ್ರಾಹಕರ ವಿದ್ಯುತ್ ಬೇಡಿಕೆ ಈಡೇರಿಸಲು ಮಾತ್ರ ಸಿಜಿಎಸ್ ನ ಹಂಚಿಕೆಯಾಗದ ವಿದ್ಯುತ್ ಬಳಕೆ ಮಾಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ಸೂಚನೆ
Posted On:
12 OCT 2021 11:09AM by PIB Bengaluru
ಕೆಲವು ರಾಜ್ಯಗಳಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಮತ್ತು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ ಎಂಬುದು ಕೇಂದ್ರ ಇಂಧನ ಸಚಿವಾಲಯದ ಗಮನಕ್ಕೆ ಬಂದಿದೆ. ಅಲ್ಲದೆ, ಇದೇ ವೇಳೆ, ಅಧಿಕ ಬೆಲೆಗೆ ವಿದ್ಯುತ್ ವಿನಿಮಯ ಮಾಡಿಕೊಂಡು ವಿದ್ಯುತ್ ಮಾರಾಟ ಮಾಡುತ್ತಿರುವುದೂ ಸಹ ಕಂಡು ಬಂದಿದೆ.
ವಿದ್ಯುತ್ ಹಂಚಿಕೆಯ ಮಾರ್ಗಸೂಚಿಯ ಪ್ರಕಾರ, ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳು (ಸಿಜಿಎಸ್)ಗಳ ಶೇ.15ರಷ್ಟು ವಿದ್ಯುತ್ ಅನ್ನು ‘ಹಂಚಿಕೆ ಮಾಡಲಾಗದ ವಿದ್ಯುತ್’ ಕೋಟಾದಡಿ ತೆಗೆದಿರಿಸಲಾಗುತ್ತಿದ್ದು, ಇದನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಅವುಗಳ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲು ಹಂಚಿಕೆ ಮಾಡಲಿದೆ.
ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಜವಾಬ್ದಾರಿ ವಿದ್ಯುತ್ ವಿತರಣಾ ಕಂಪನಿಗಳದ್ದು ಮತ್ತು ಅವು ಯಾವ ಗ್ರಾಹಕರು ದಿನದ 24 ಗಂಟೆ ವಿದ್ಯುತ್ ಪಡೆಯಲು ಅರ್ಹರಾಗಿದ್ದಾರೊ ಅವರೆಲ್ಲರಿಗೂ ವಿದ್ಯುತ್ ಪೊರೈಸುವುದು ಅವರ ಮೊದಲ ಆದ್ಯ ಕರ್ತವ್ಯ. ಆದ್ದರಿಂದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ವಿನಿಮಯಕ್ಕಾಗಿ ತಮ್ಮ ವಿದ್ಯುತ್ ಅನ್ನು ಮಾರಾಟ ಮಾಡಬಾರದು ಮತ್ತು ತಮ್ಮ ಗ್ರಾಹಕರಿಗೆ ಕೊರತೆಯಾಗುವಂತೆ ಮಾಡಬಾರದು.
ಆದ್ದರಿಂದ ರಾಜ್ಯಗಳು ತಮ್ಮ ರಾಜ್ಯದ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡಲು ಆ ಹಂಚಿಕೆಯಾಗದ ವಿದ್ಯುತ್ ಅನ್ನು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಹೆಚ್ಚುವರಿ ವಿದ್ಯುತ್ ಲಭ್ಯವಿದ್ದರೆ, ಆ ಬಗ್ಗೆ ಭಾರತ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ, ಆ ವಿದ್ಯುತ್ ಅನ್ನು ಅಗತ್ಯವಿರುವ ರಾಜ್ಯಗಳಿಗೆ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ.
ಒಂದು ವೇಳೆ ರಾಜ್ಯಗಳು ತಮ್ಮ ಗ್ರಾಹಕರಿಗೆ ವಿದ್ಯುತ್ ಪೊರೈಕೆ ಮಾಡುತ್ತಿಲ್ಲ ಮತ್ತು ಅಧಿಕ ದರಕ್ಕೆ ವಿದ್ಯುತ್ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ, ಅಂತಹ ರಾಜ್ಯಗಳಿಗೆ ಹಂಚಿಕೆ ಮಾಡಲಾಗದ ವಿದ್ಯುತ್ ಅನ್ನು ವಾಪಸ್ ಪಡೆದು ಅದನ್ನು ಅಗತ್ಯವಿರುವ ಇತರೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು.
***
(Release ID: 1763199)
Visitor Counter : 200