ಕಲ್ಲಿದ್ದಲು ಸಚಿವಾಲಯ

ವಿದ್ಯುತ್ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ಕಲ್ಲಿದ್ದಲು ಲಭ್ಯತೆ ಸಮರ್ಪಕವಾಗಿದೆ– ಕಲ್ಲಿದ್ದಲು ಸಚಿವಾಲಯ ಸ್ಪಷ್ಟೀಕರಣ


ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯ ಆತಂಕ ಆಧಾರರಹಿತ

ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಈ ವರ್ಷ ಶೇ.24ರಷ್ಟು ಹೆಚ್ಚಾಗಿದೆ

ಭಾರಿ ಮಳೆಯ ಹೊರತಾಗಿಯೂ ವಿದ್ಯುತ್ ವಲಯಕ್ಕೆ ʻಕೋಲ್ ಇಂಡಿಯಾ ಲಿಮಿಟೆಡ್ʼ 225 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಪೂರೈಸಿದೆ

Posted On: 10 OCT 2021 1:50PM by PIB Bengaluru

ವಿದ್ಯುತ್ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯವಿದೆ ಎಂದು ಕಲ್ಲಿದ್ದಲು ಸಚಿವಾಲಯವು ಭರವಸೆ ನೀಡಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕುರಿತ ಆತಂಕ ಸಂಪೂರ್ಣ ಸತ್ಯಕ್ಕೆ ದೂರವಾದುದು. ವಿದ್ಯುತ್ ಸ್ಥಾವರಗಳ ಬಳಿ ಇನ್ನೂ ಸುಮಾರು 72 ಲಕ್ಷ ಟನ್ ಕಲ್ಲಿದ್ದಲು ದಾಸ್ತಾನು ಇದೆ. ಇದು 4 ದಿನಗಳ ಅಗತ್ಯಕ್ಕೆ ಸಾಕಾಗುತ್ತದೆ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಬಳಿ 400 ಲಕ್ಷ ಟನ್‌ಗಳಿಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದ್ದು, ಇದನ್ನು ವಿದ್ಯುತ್ ಸ್ಥಾವರಗಳಿಗೆ ಪೂರೈಸಲಾಗುತ್ತಿದೆ.

ಕಲ್ಲಿದ್ದಲು ಕಂಪನಿಗಳಿಂದ ಭರಪೂರ ಪೂರೈಕೆಯಿಂದ ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು ಈ ವರ್ಷದಲ್ಲಿ (ಸೆಪ್ಟೆಂಬರ್ 2021 ರವರೆಗೆ) ಸುಮಾರು 24% ನಷ್ಟು ಹೆಚ್ಚಾಗಿದೆ. ವಿದ್ಯುತ್ ಸ್ಥಾವರಗಳಲ್ಲಿ ದೈನಂದಿನ ಸರಾಸರಿ ಕಲ್ಲಿದ್ದಲಿನ ಅವಶ್ಯಕತೆ ದಿನಕ್ಕೆ ಸುಮಾರು 18.5 ಲಕ್ಷ ಟನ್. ಆದರೆ ದೈನಂದಿನ ಕಲ್ಲಿದ್ದಲು ಪೂರೈಕೆ ದಿನಕ್ಕೆ ಸುಮಾರು 17.5  ಲಕ್ಷ ಟನ್ ನಷ್ಟಿದೆ. ವಿಸ್ತರಿತ ಮುಂಗಾರಿನಿಂದಾಗಿ ಪೂರೈಕೆಯನ್ನು ನಿರ್ಬಂಧಿಸಲಾಗಿತ್ತು. ವಿದ್ಯುತ್ ಸ್ಥಾವರಗಳಲ್ಲಿ ಲಭ್ಯವಿರುವ ಕಲ್ಲಿದ್ದಲು ʻರೋಲಿಂಗ್ ಸ್ಟಾಕ್ʼ  ಆಗಿದ್ದು, ಪ್ರತಿದಿನ ಕಲ್ಲಿದ್ದಲು ಕಂಪನಿಗಳಿಂದ ಪೂರೈಕೆಯಾಗುವ ಕಲ್ಲಿದ್ದಲಿನಿಂದ ಈ ದಾಸ್ತಾನು ಮರುಪೂರಣಗೊಳ್ಳುತ್ತದೆ. ಆದ್ದರಿಂದ, ವಿದ್ಯುತ್ ಸ್ಥಾವರದ ಬಳಿ ಕಲ್ಲಿದ್ದಲು ದಾಸ್ತಾನು ಕ್ಷೀಣಿಸುವ ಯಾವುದೇ ಆತಂಕ ಅನಗತ್ಯವಾಗಿದೆ. ವಾಸ್ತವವಾಗಿ ಆಮದಿಗೆ ಪರ್ಯಾಯವಾಗಿ ಈ ವರ್ಷ, ದೇಶೀಯ ಕಲ್ಲಿದ್ದಲು ಪೂರೈಕೆಯು ಗಣನೀಯವಾಗಿ ಹೆಚ್ಚಾಗಿದೆ.

ಕಲ್ಲಿದ್ದಲು ನಿಕ್ಷೇಪದ ಪ್ರದೇಶಗಳಲ್ಲಿ ಭಾರಿ ಮಳೆಯ ಹೊರತಾಗಿಯೂ, ʻಸಿಐಎಲ್ʼ ಈ ವರ್ಷದಲ್ಲಿ ವಿದ್ಯುತ್ ವಲಯಕ್ಕೆ 255 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಪೂರೈಸಿದೆ. ಇದು `ಸಿಐಎಲ್’ನಿಂದ ವಿದ್ಯುತ್ ವಲಯಕ್ಕೆ ಪೂರೈಕೆಯಾದ ಅತ್ಯಧಿಕ ʻಎಚ್-1’ ಸರಬರಾಜು ಎನಿಸಿದೆ. ಎಲ್ಲಾ ಮೂಲಗಳಿಂದ ವಿದ್ಯುತ್ ವಲಯಕ್ಕೆ ʻಸಿಐಎಲ್ʼ ಪ್ರಸ್ತುತ ದಿನಕ್ಕೆ 14 ಲಕ್ಷ ಟನ್‌ಗಳಿಗಿಂತ ಅಧಿಕ ಕಲ್ಲಿದ್ದಲನ್ನು ಪೂರೈಕೆ ಮಾಡುತ್ತಿದ್ದು, ಮಳೆ ಕಡಿಮೆಯಾಗುತ್ತಿರುವುದರಿಂದ, ಈ ಪೂರೈಕೆ ಈಗಾಗಲೇ 15 ಲಕ್ಷ ಟನ್ ಗಳಿಗೆ ಏರಿದೆ. ಅಕ್ಟೋಬರ್ 2021ರ ಅಂತ್ಯದ ವೇಳೆಗೆ ದಿನಕ್ಕೆ 16 ಲಕ್ಷ ಟನ್‌ಗಳಿಗೆ ಹೆಚ್ಚಲಿದೆ. ʻಎಸ್‌ಸಿಸಿಎಲ್‌ʼ ಮತ್ತು ʻನಿರ್ಬಂಧಿತ ಕಲ್ಲಿದ್ದಲು ಬ್ಲಾಕ್ʼಗಳಿಂದ ಪ್ರತಿದಿನ ಇನ್ನೂ 3 ಲಕ್ಷ ಟನ್ ಕಲ್ಲಿದ್ದಲು ಪೂರೈಕೆ ಕೊಡುಗೆ ದೊರೆಯಲಿದೆ.

ಭಾರಿ ಮುಂಗಾರು ಮಳೆಯ, ಕಡಿಮೆ ಕಲ್ಲಿದ್ದಲು ಆಮದು ಮತ್ತು ಆರ್ಥಿಕ ಚೇತರಿಕೆಯಿಂದಾಗಿ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಹೆಚ್ಚಳದ ಹೊರತಾಗಿಯೂ ದೇಶೀಯ ಕಲ್ಲಿದ್ದಲು ಪೂರೈಕೆಯು ವಿದ್ಯುತ್ ಉತ್ಪಾದನೆಗೆ ಪ್ರಮುಖ ರೀತಿಯಲ್ಲಿ ಬೆಂಬಲ ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಪೂರೈಕೆ ದಾಖಲೆಯ ಮಟ್ಟಕ್ಕೆ ಏರಬಹುದೆಂದು ನಿರೀಕ್ಷಿಸಲಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲಿನ ದುಬಾರಿ ಬೆಲೆಯಿಂದಾಗಿ, ʻಪಿಪಿಎʼಗಳ ಅಡಿಯಲ್ಲಿ ಆಮದು ಆಧಾರಿತ ವಿದ್ಯುತ್ ಸ್ಥಾವರಗಳಿಂದಲೂ ವಿದ್ಯುತ್ ಪೂರೈಕೆಯು ಸುಮಾರು 30% ರಷ್ಟು ಕಡಿಮೆಯಾಗಿದೆ, ಆದರೆ ದೇಶೀಯ ಆಧಾರಿತ ವಿದ್ಯುತ್ ಪೂರೈಕೆಯು ಈ ವರ್ಷದ ʻಎಚ್1ʼನಲ್ಲಿ ಸುಮಾರು 24% ರಷ್ಟು ಹೆಚ್ಚಾಗಿದೆ. ಆಮದು ಮಾಡಿದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು 45.7 ಬಿಯು ಕಾರ್ಯಕ್ರಮದ ಅಡಿಯಲ್ಲಿ ಸುಮಾರು 25.6 ಬಿಯು ಉತ್ಪಾದಿಸಿವೆ.

ಅಲ್ಯೂಮಿನಿಯಂ, ಸಿಮೆಂಟ್, ಉಕ್ಕು ಮುಂತಾದ ವಿದ್ಯುತ್ ಕೈಗಾರಿಕೆಗಳ ಬೇಡಿಕೆಯನ್ನು ಪೂರೈಸಲು ಮತ್ತು ದೇಶದ ಉಷ್ಣ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಮಾಡಲು ʻಸಿಐಎಲ್ʼ ಪ್ರತಿದಿನ 2.5 ಲಕ್ಷ ಟನ್‌ಗಳಿಗಿಂತ (ಸುಮಾರು) ಹೆಚ್ಚು ಕಲ್ಲಿದ್ದಲು ಸರಬರಾಜು ಮಾಡುತ್ತಿದೆ. ಈ ಅಂಶವು ದೇಶದಲ್ಲಿ ಕಲ್ಲಿದ್ದಲಿನ ಸ್ಥಿತಿಗತಿಯು ಸಹಜವಾಗಿರುವುದನ್ನು ಸೂಚಿಸುತ್ತದೆ.

***



(Release ID: 1762715) Visitor Counter : 315