ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಮೆರಿಕದ ಉಪಾಧ್ಯಕ್ಷರಾದ ಘನತೆವೆತ್ತ ಶ್ರೀಮತಿ ಕಮಲಾ ಹ್ಯಾರಿಸ್ ಅವರೊಂದಿಗಿನ ಸಭೆಯಲ್ಲಿ ಪ್ರಧಾನಮಂತ್ರಿಯವರ ಆರಂಭಿಕ ನುಡಿಗಳು

Posted On: 24 SEP 2021 9:14AM by PIB Bengaluru

ಗೌರವಾನ್ವಿತರೇ,

ಮೊಟ್ಟ ಮೊದಲನೆಯದಾಗಿ, ನೀವು ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆ ತಿಳಿಸಲು ಬಯಸುತ್ತೇನೆ. ಗೌರವಾನ್ವಿತರೇ, ಕೆಲವು ತಿಂಗಳು ಹಿಂದೆ ಪರಸ್ಪರ ಫೋನ್‌ನಲ್ಲಿ ಮಾತನಾಡುವ ಅವಕಾಶ ನಮ್ಮಿಬ್ಬರಿಗೆ ದೊರೆತಿತ್ತು. ಸಮಯದಲ್ಲಿ ನಾವು ವಿವರವಾಗಿ ಚರ್ಚೆ ಮಾಡಿದೆವು. ನೀವು ನನ್ನೊಂದಿಗೆ ಅಂದು ತುಂಬಾ ಆತ್ಮೀಯವಾಗಿ ಮತ್ತು ಸ್ವಾಭಾವಿಕವಾಗಿ ಮಾತನಾಡಿದ ರೀತಿಯನ್ನು ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ, ತುಂಬಾ ಧನ್ಯವಾದಗಳು. ಗೌರವಾನ್ವಿತರೇ, ಅಂದಿನ ಸಂದರ್ಭದ ಬಗ್ಗೆ ನಿಮಗೆ ನೆನಪಿರಬಹುದು. ಅದು ತುಂಬಾ ಕಷ್ಟದ ಸಮಯವಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಭಾರತ ಎದುರಿಸುತ್ತಿತ್ತು. ಅದು ನಮಗೆ ಅತ್ಯಂತ ಕ್ಲಿಷ್ಟ ಸಮಯವಾಗಿತ್ತು. ಅಂತಹ ಸಮಯದಲ್ಲಿ ಒಂದು ಕುಟುಂಬದವರಂತೆ, ಬಾಂಧವ್ಯ ಪ್ರಜ್ಞೆ ಹಾಗೂ ತುಂಬಾ ಪ್ರೀತಿಯಿಂದ ನೀವು ಸಹಾಯ ಹಸ್ತ ಚಾಚಿದ್ದಿರಿ. ನನ್ನೊಂದಿಗೆ ಮಾತನಾಡಲು ನೀವು ಆಯ್ದುಕೊಂಡ ಪದಗಳನ್ನು ನಾನು ಸದಾ ಅದನ್ನು ನೆನಪಿಸಿಕೊಳ್ಳುತ್ತಿರುತ್ತೇನೆ, ಮತ್ತು ಇದಕ್ಕಾಗಿ ನಿಮಗೆ ನನ್ನ ಹೃದಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ. ಗೌರವಾನ್ವಿತರೇ, ನಿಜವಾದ ಸ್ನೇಹಿತನಂತೆ, ನೀವು ಸಹಕಾರದ ಸಂದೇಶವನ್ನು ನೀಡಿದ್ದೀರಿ. ಬಹಳ ಸಂವೇದನಾಶೀಲತೆಯನ್ನು ತೋರಿದಿರಿ. ಅದರ ಬೆನ್ನಲ್ಲೇ ತಕ್ಷಣವೇ ಅಮೆರಿಕ ಸರಕಾರ, ಅಮೆರಿಕದ ಕಾರ್ಪೊರೇಟ್ ವಲಯ ಮತ್ತು ಭಾರತೀಯ ಸಮುದಾಯ ಎಲ್ಲರೂ ಭಾರತಕ್ಕೆ ಸಹಾಯ ಮಾಡಲು ಒಗ್ಗೂಡಿದ್ದನ್ನು ನಾವು ನೋಡಿದ್ದೇವೆ.

ಗೌರವಾನ್ವಿತರೇ,

ಅಧ್ಯಕ್ಷ ಬೈಡೆನ್‌ ಮತ್ತು ನೀವು, ಅತ್ಯಂತ ಸವಾಲಿನ ವಾತಾವರಣ ಮತ್ತು ಸವಾಲಿನ ಸಮಯದಲ್ಲಿ ಅಮೆರಿಕದ ನಾಯಕತ್ವವನ್ನು ವಹಿಸಿಕೊಂಡಿರಿ. ಆದರೆ ಬಹಳ ಕಡಿಮೆ ಅವಧಿಯಲ್ಲಿ ಅದು ಕೋವಿಡ್ ಇರಲಿ, ಹವಾಮಾನ ವಿಚಾರವಿರಲಿ ಅಥವಾ ಕ್ವಾಡ್ ಆಗಿರಲಿ ಎಲ್ಲಾ ವಿಷಯಗಳಲ್ಲಿ ನೀವು ಅನೇಕ ಸಾಧನೆಗಳನ್ನು ಮಾಡಿದ್ದೀರಿ. ಅಮೆರಿಕವು ಬಹಳ ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ.

ಗೌರವಾನ್ವಿತರೇ,

ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಅತ್ಯಂತ ಹಳೆಯ ಪ್ರಜಾಪ್ರಭುತ್ವದಲ್ಲಿ ಭಾರತ ಮತ್ತು ಅಮೆರಿಕದ ನಿಜವಾಗಿಯೂ ಸ್ವಾಭಾವಿಕ ಪಾಲುದಾರರು. ನಾವು ಒಂದೇ ರೀತಿಯ ಮೌಲ್ಯಗಳು, ಒಂದೇ ರೀತಿಯ ಭೌಗೋಳಿಕ ಹಿತಾಸಕ್ತಿಗಳನ್ನು ಹೊಂದಿದ್ದೇವೆ. ನಮ್ಮ ಸಮನ್ವಯ ಮತ್ತು ಸಹಕಾರವೂ ನಿರಂತರವಾಗಿ ಹೆಚ್ಚುತ್ತಿದೆ. ಗೌರವಾನ್ವಿತರೇ, ಪೂರೈಕೆ ಸರಪಳಿಗಳನ್ನು ಬಲಪಡಿಸಲು ಮತ್ತು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ನಿಮಗೆ ವಿಶೇಷ ಆಸಕ್ತಿಯ ಕ್ಷೇತ್ರಗಳೇ ನನಗೂ ವಿಶೇಷ ಆಸಕ್ತಿ ಮತ್ತು ವಿಶೇಷ ಆದ್ಯತೆಯ ಕ್ಷೇತ್ರಗಳಾಗಿವೆಇವುಗಲ್ಲೇ ನಮ್ಮ ಸಹಕಾರವು ಬಹಳ ಮುಖ್ಯವಾಗಿದೆ.

ಗೌರವಾನ್ವಿತರೇ,

ಭಾರತ ಮತ್ತು ಅಮೆರಿಕದ ನಡುವೆ ನಾವು ಅತ್ಯಂತ ರೋಮಾಂಚಕ ಮತ್ತು ಬಲಿಷ್ಠ ಜನ ಸಂಪರ್ಕವನ್ನು ಹೊಂದಿದ್ದೇವೆ. ಅದು ನಿಮಗೂ ನಿಮಗೆ ಚೆನ್ನಾಗಿ ಅರಿವಿದೆ. ಭಾರತೀಯ ಮೂಲದ 4 ದಶಲಕ್ಷಕ್ಕೂ ಹೆಚ್ಚು ಜನರು, ಭಾರತೀಯ ಸಮುದಾಯವು ನಮ್ಮ ಎರಡೂ ದೇಶಗಳ ನಡುವಿನ ಸೇತುವೆಯಾಗಿದೆ, ಸ್ನೇಹ ಸೇತುವಾಗಿದೆ. ನಮ್ಮ ಎರಡೂ ದೇಶಗಳ ಆರ್ಥಿಕತೆಗಳು ಮತ್ತು ಸಮಾಜಗಳಿಗೆ ಅವರ ಕೊಡುಗೆ ನಿಜಕ್ಕೂ ಬಹಳ ಪ್ರಶಂಸನೀಯವಾದುದು.

ಗೌರವಾನ್ವಿತರೇ,

ನೀವು ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದೇ  ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ಘಟನೆಯಾಗಿದೆ. ಪ್ರಪಂಚದಾದ್ಯಂತದ ಅನೇಕ ಜನರಿಗೆ ನೀವು ಸ್ಫೂರ್ತಿಯ ಸೆಲೆಯಾಗಿದ್ದೀರಿ. ಅಧ್ಯಕ್ಷ ಬೈಡೆನ್‌ ಮತ್ತು ನಿಮ್ಮ ನಾಯಕತ್ವದಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧವು ಹೊಸ ಎತ್ತರವನ್ನು ತಲುಪುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

ಗೌರವಾನ್ವಿತರೇ,

ವಿಜಯಯಾತ್ರೆಯನ್ನು ನೀವು ಭಾರತದಲ್ಲೂ ಮುಂದುವರಿಸಬೇಕೆಂದು ಭಾರತೀಯರು ಬಯಸುತ್ತಾರೆ. ಆದ್ದರಿಂದ, ಅವರು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಹೀಗಾಗಿ ಭಾರತಕ್ಕೆ ಭೇಟಿ ನೀಡಲು ನಾನು ನಿಮಗೆ ವಿಶೇಷ ಆಹ್ವಾನವನ್ನು ನೀಡುತ್ತಿದ್ದೇನೆ. ಗೌರವಾನ್ವಿತರೇ, ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಮತ್ತೊಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ನನ್ನ ಕೃತಜ್ಞತೆಯನ್ನು ತಿಳಿಸಲು ಬಯಸುತ್ತೇನೆ.

ಸೂಚನೆ: ಇದು ಪ್ರಧಾನ ಮಂತ್ರಿಯವರ ಹೇಳಿಕೆಗಳ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

***


(Release ID: 1757646) Visitor Counter : 270