ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ದೇಶದ ಕ್ರೀಡಾ ಅಭಿವೃದ್ಧಿಗೆ ಮಾರ್ಗಸೂಚಿ ರೂಪಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಸಚಿವರೊಂದಿಗೆ ಸಂವಾದ ನಡೆಸಲಿದ್ದಾರೆ
Posted On:
19 SEP 2021 4:51PM by PIB Bengaluru
ಮುಖ್ಯಾಂಶಗಳು
- ಭಾರತ ಸರಕಾರದ ಪ್ರಮುಖ ಕಾರ್ಯಕ್ರಮಗಳಾದ ʻಖೇಲೋ ಇಂಡಿಯಾʼ ಮತ್ತು ʻಫಿಟ್ ಇಂಡಿಯಾʼ ಸಂವಾದದ ಪ್ರಮುಖ ಭಾಗವಾಗಿರಲಿವೆ
- ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಕೂಡ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ
ಕೇಂದ್ರ ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಸೋಮವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಸಚಿವರೊಂದಿಗೆ ದೇಶದಲ್ಲಿ ಕ್ರೀಡೆಗಳನ್ನು ಮತ್ತಷ್ಟು ಉತ್ತೇಜಿಸುವ ಬಗ್ಗೆ ಚರ್ಚಿಸಲು ವಿಡಿಯೊ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಸಾಧಿಸಿದ ಅಭೂತಪೂರ್ವ ಯಶಸ್ಸಿನ ಬಳಿಕ ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವನ್ನಾಗಿ ಮಾಡುವ ಧ್ಯೇಯ ಸಾಧನೆಗೆ ಮಾರ್ಗೋಪಾಯಗಳು ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ನಿಟ್ಟಿನಲ್ಲಿ ನೀಡಬಹುದಾದ ಕೊಡುಗೆಯ ಬಗ್ಗೆ ಶ್ರೀ ಠಾಕೂರ್ ಅವರು ಚರ್ಚಿಸಲಿದ್ದಾರೆ. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಕೂಡಾ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.
ಭಾರತ ಸರಕಾರದ ಪ್ರಮುಖ ಅಭಿಯಾನಗಳಾದ ʻಖೇಲೋ ಇಂಡಿಯಾʼ ಮತ್ತು ʻಫಿಟ್ ಇಂಡಿಯಾʼ ಈ ಸಂವಾದದ ಪ್ರಮುಖ ಭಾಗವಾಗಿರಲಿವೆ.
ಕ್ರೀಡೆಯು ರಾಜ್ಯದ ವಿಷಯವಾಗಿದ್ದು, ದೈಹಿಕವಾಗಿ ಸಮರ್ಥರಾಗಿರುವವರು ಮತ್ತು ಪ್ಯಾರಾ-ಅಥ್ಲೀಟ್ ಗಳಿಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಮತ್ತು ತಳಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ರಾಜ್ಯಗಳನ್ನು ಒತ್ತಾಯಿಸುವುದು ಈ ಸಂವಾದದ ಒಟ್ಟಾರೆ ಉದ್ದೇಶವಾಗಿದೆ. ಶಾಲಾ ಮಟ್ಟದ ಕ್ರೀಡೆಗಳನ್ನು ಉತ್ತೇಜಿಸುವುದು ಮತ್ತು ʻಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾʼಗೆ (ಎಸ್‌ಜಿಎಫ್‌ಐ) ಬೆಂಬಲಿಸುವುದು ಚರ್ಚೆಯ ಮತ್ತೊಂದು ಪ್ರಮುಖ ಅಂಶವಾಗಲಿದೆ. ಕ್ರೀಡಾಪಟುಗಳಿಗೆ ನಗದು ಪ್ರಶಸ್ತಿಗಳನ್ನು ನೀಡುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಣವನ್ನು ಸಂಗ್ರಹಿಸಬಹುದಾದ ನಿಧಿಯನ್ನು ಸ್ಥಾಪಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗುವುದು.
2018 ರಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ʻಖೇಲೋ ಇಂಡಿಯಾʼ ಕ್ರೀಡಾಕೂಟವು ಭಾರತದಲ್ಲಿ ತಳಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಅಂದಿನಿಂದ, ಯುವ ಕ್ರೀಡಾಕೂಟ, ವಿಶ್ವವಿದ್ಯಾಲಯ ಕ್ರೀಡಾಕೂಟ ಮತ್ತು ಚಳಿಗಾಲದ ಕ್ರೀಡಾಕೂಟಸೇರಿದಂತೆ ಹಲವು ʻಖೇಲೋ ಇಂಡಿಯಾʼ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ʻಖೇಲೋ ಇಂಡಿಯಾʼ ಕಾರ್ಯಕ್ರಮವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಲವಾರು ಕ್ರೀಡಾ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ʻಖೇಲೋ ಇಂಡಿಯಾ ಸ್ಟೇಟ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ʼ (ಕೆಐಎಸ್‌ಸಿಇ) ಮತ್ತು ʻಖೇಲೋ ಇಂಡಿಯಾ ಕೇಂದ್ರʼಗಳಾಗಿ (ಕೆಐಸಿ) ಅವುಗಳನ್ನು ಮಾರ್ಪಡಿಸಲಾಗಿದೆ.
ಪ್ರಸ್ತುತ, 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 24 ʻಕೆಐಎಸ್‌ಸಿʼಗಳಿವೆ, ದೇಶದ ವಿವಿಧ ಜಿಲ್ಲೆಗಳಲ್ಲಿ 360 ʻಕೆಐಸಿʼಗಳನ್ನು ತೆರೆಯಲಾಗಿದೆ. ಸೋಮವಾರದ ಸಭೆಯಲ್ಲಿ ಶ್ರೀ ಠಾಕೂರ್ ಅವರು ಈ ಬೆಳವಣಿಗೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಿದ್ದಾರೆ ಮತ್ತು ಭಾರತದ ಭವಿಷ್ಯದ ಚಾಂಪಿಯನ್‌ಗಳಿಗೆ ಉತ್ತಮ ತರಬೇತಿ, ಮೂಲಸೌಕರ್ಯ, ವೈದ್ಯಕೀಯ ಸೌಲಭ್ಯಗಳು ಮತ್ತು ಇತರ ಎಲ್ಲಾ ನಿರ್ಣಾಯಕ ಸೌಕರ್ಯಗಳನ್ನು ಒದಗಿಸಲು ಶಕ್ತಿ ಮೀರಿ ಕೊಡುಗೆ ನೀಡುವಂತೆ ರಾಜ್ಯಗಳನ್ನು ಕೋರಲಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳ ಮೂಲಕ ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಉದಯೋನ್ಮುಖ ಪ್ರತಿಭೆಗಳನ್ನು ಶೀಘ್ರವಾಗಿ ಗುರುತಿಸುವುದು ಚರ್ಚೆಯ ಮತ್ತೊಂದು ಪ್ರಮುಖ ಕಾರ್ಯಸೂಚಿಯಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ರಾಷ್ಟ್ರೀಯ ಕ್ರೀಡಾ ದಿನದಂದು ಚಾಲನೆ ನೀಡಿದ ʻಫಿಟ್ ಇಂಡಿಯಾʼ ಅಭಿಯಾನವು ʻಫಿಟ್ ಇಂಡಿಯಾ ಫ್ರೀಡಂ ರನ್ʼ, ʻಫಿಟ್ ಇಂಡಿಯಾ ಮೊಬೈಲ್ ಆ್ಯಪ್ʼ, ʻಫಿಟ್ ಇಂಡಿಯಾ ಕ್ವಿಜ್ʼ ಮುಂತಾದ ವಿವಿಧ ಅಭಿಯಾನಗಳ ಮೂಲಕ ದೈಹಿಕ ಸಾಮರ್ಥ್ಯ ವೃದ್ಧಿ/ವ್ಯಾಯಾಮದ ಅಭ್ಯಾಸವನ್ನು ಬೆಳೆಸುವಲ್ಲಿ ಕ್ರಾಂತಿಕಾರಿ ಪಾತ್ರ ವಹಿಸಿದೆ. ಈ ಅಭಿಯಾನಗಳಲ್ಲಿ ಭಾಗವಹಿಸುವಂತೆ ಮತ್ತು ಉತ್ತೇಜಿಸುವಂತೆ ಸೋಮವಾರ ಶ್ರೀ ಠಾಕೂರ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಸಚಿವರನ್ನು ಕೋರಲಿದ್ದರೆ.
ದೇಶದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ʻಕೆಐಎಸ್‌ಸಿಇʼಗಳು, ʻಕೆಐಸಿʼಗಳು ಮತ್ತು ಅಕಾಡೆಮಿಗಳನ್ನು ತೆರೆಯುವ ಪ್ರಸ್ತಾಪಗಳನ್ನು ಕಳುಹಿಸುವಂತೆ ಶ್ರೀ ಠಾಕೂರ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಲಿದ್ದಾರೆ.
***
(Release ID: 1756287)
Visitor Counter : 251