ಸಂಪುಟ

ʻಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆʼ (ಐಸಿಎಐ) ಮತ್ತು ʻಅಜರ್‌ಬೈಜಾನ್ ಗಣರಾಜ್ಯದ ಲೆಕ್ಕಪರಿಶೋಧಕರ ಮಹಾ ಮಂಡಳಿʼ (ಸಿಎಎಆರ್) ನಡುವಿನ ಒಡಂಬಡಿಕೆಗೆ ಸಚಿವ ಸಂಪುಟದ ಅನುಮೋದನೆ

Posted On: 08 SEP 2021 2:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ʻಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆʼ (ಐಸಿಎಐ) ಮತ್ತು ʻಅಜರ್‌ಬೈಜಾನ್ ಗಣರಾಜ್ಯದ ಲೆಕ್ಕಪರಿಶೋಧಕರ ಮಹಾಮಂಡಳಿʼ(ಸಿಎಎಆರ್) ನಡುವೆ ಒಡಂಬಡಿಕೆಗೆ ಸಹಿ ಹಾಕಲು ಅನುಮೋದನೆ ನೀಡಿದೆ.

ವಿವರಗಳು:

ʻಐಸಿಎಐʼ ಮತ್ತು ʻಅಜರ್‌ಬೈಜಾನ್ ಗಣರಾಜ್ಯದ ಲೆಕ್ಕ ಪರಿಶೋಧಕರ ಮಹಾಮಂಡಳಿʼ(ಸಿಎಎಆರ್) ನಡುವೆ ಒಡಂಬಡಿಕೆಗೆ ಸಹಿ ಹಾಕುವುದರಿಂದ ಸದಸ್ಯರ ನಿರ್ವಹಣೆ, ವೃತ್ತಿಪರ ನೈತಿಕತೆ, ತಾಂತ್ರಿಕ ಸಂಶೋಧನೆ, ಸಿಪಿಡಿ, ವೃತ್ತಿಪರ ಲೆಕ್ಕಪತ್ರ ನಿರ್ವಹಣೆ ತರಬೇತಿ, ಲೆಕ್ಕಪರಿಶೋಧನಾ ಗುಣಮಟ್ಟ ಮೇಲ್ವಿಚಾರಣೆ, ಲೆಕ್ಕಪತ್ರ ಜ್ಞಾನದ ಪ್ರಗತಿ, ವೃತ್ತಿಪರ ಮತ್ತು ಬೌದ್ಧಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಸ್ಥಾಪಿಸಲು ಸಹಾಯಕವಾಗಲಿದೆ.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:

ʻಐಸಿಎಐʼ ಮತ್ತು ʻಸಿಎಎಆರ್ʼ ಎರಡೂ ಸಂಸ್ಥೆಗಳು ಲೆಕ್ಕಪರಿಶೋಧನೆ, ಹಣಕಾಸು ಮತ್ತು ಲೆಕ್ಕಪತ್ರ ವೃತ್ತಿಪರರ ತರಬೇತಿ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಉದ್ದೇಶಿಸಿವೆ. ವೃತ್ತಿಪರ ಸಂಸ್ಥೆಗಳು ಪ್ರಕಟಿಸುವ ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ಇತರ ಪ್ರಕಟಣೆಗಳನ್ನು ವಿನಿಮಯ ಮಾಡಿಕೊಳ್ಳಲು ʻಐಸಿಎಐʼ ಮತ್ತು ʻಸಿಎಎಆರ್ʼ ಉದ್ದೇಶಿಸಿವೆ. ಜೊತೆಗೆ ನಿಯತಕಾಲಿಕೆಗಳಲ್ಲಿ ಮತ್ತು ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಕುರಿತ ಲೇಖನಗಳ ಪರಸ್ಪರ ಪ್ರಕಟಣೆ; ಲೆಕ್ಕಪರಿಶೋಧನೆ ಅಭಿವೃದ್ಧಿ, ಹಣಕಾಸು ಮತ್ತು ಲೆಕ್ಕಪತ್ರ ಕುರಿತ ಜಂಟಿ ಸಮಾವೇಶಗಳು, ವಿಚಾರ ಸಂಕಿರಣಗಳು, ದುಂಡು ಮೇಜಿನ ಸಭೆಗಳನ್ನು ಆಯೋಜಿಸುವುದು, ತರಬೇತಿ ಒದಗಿಸುವುದು ಮತ್ತು ಅವುಗಳಿಗೆ ಹಣಕಾಸು ಪೂರೈಸುವುದು ಸಹ ಒಡಂಬಡಿಕೆಯ ಉದ್ದೇಶಗಳಲ್ಲಿ ಸೇರಿವೆ. ʻಬ್ಲಾಕ್‌ಚೈನ್‌ʼ, ಸ್ಮಾರ್ಟ್‌ ಗುತ್ತಿಗೆ ವ್ಯವಸ್ಥೆ, ಸಾಂಪ್ರದಾಯಿಕ ಲೆಕ್ಕಪತ್ರದಿಂದ ಕ್ಲೌಡ್‌ ಕೌಂಟಿಂಗ್‌ಗೆ ಪರಿವರ್ತನೆ ಸೇರಿದಂತೆ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ನಿರ್ವಹಣೆ ಕ್ಷೇತ್ರದಲ್ಲಿ ನವೀನ ವಿಧಾನಗಳ ಅಳವಡಿಕೆಗೆ ಅಧ್ಯಯನ ಕೈಗೊಳ್ಳಲು ಎರಡೂ ಸಂಸ್ಥೆಗಳು ಉದ್ದೇಶಿಸಿವೆ. ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ವಿರುದ್ಧದ ಹೋರಾಟದಲ್ಲಿ ಜಂಟಿ ಸಹಕಾರವನ್ನು ಹೊಂದಲು ಸಹ ಸಂಸ್ಥೆಗಳು ಉದ್ದೇಶಿಸಿವೆ.

ಪರಿಣಾಮ:

ʻಐಸಿಎಐʼ ಸದಸ್ಯರು ನಾನಾ ದೇಶಗಳಲ್ಲಿನ ವಿವಿಧ ಸಂಸ್ಥೆಗಳಲ್ಲಿ ಮಧ್ಯಮ ಶ್ರೇಣಿಯಿಂದ ಹಿಡಿದು ಉನ್ನತ ಶ್ರೇಣಿಯವರೆಗೆ ವಿವಿಧ ಹುದ್ದೆಗಳನ್ನು ಹೊಂದಿದ್ದು, ಆಯಾ ದೇಶದ ಮತ್ತು ಆಯಾ ಸಂಸ್ಥೆಗಳ ನಿರ್ಧಾರ /ನೀತಿ ರೂಪಿಸುವ ಕಾರ್ಯತಂತ್ರಗಳ ಮೇಲೆ ಪ್ರಭಾವ ಬೀರಬಲ್ಲರು. ಒಡಂಬಡಿಕೆಯು ಜ್ಞಾನದ ವಿನಿಮಯದ ಕಡೆಗೆ ಗಮನ ಹರಿಸಲು ನೆರವಾಗುತ್ತದೆ. ಜೊತೆಗೆ ಲೆಕ್ಕಪತ್ರ ನಿರ್ವಹಣೆ ಕ್ಷೇತ್ರದಲ್ಲಿ ನವೀನ ವಿಧಾನಗಳು ಮತ್ತು ತಂತ್ರಜ್ಞಾನಗಳ ಅಳವಡಿಕೆ ಸೇರಿದಂತೆ ಎರಡೂ ಕಡೆ ಉತ್ತಮ ಅಭ್ಯಾಸಗಳನ್ನು ಬಲಪಡಿಸುತ್ತದೆ.

ಪ್ರಯೋಜನಗಳು:

ʻಐಸಿಎಐʼ ತನ್ನ ವ್ಯಾಪಕ ಪ್ರಾತಿನಿಧಿಕ ಕಚೇರಿಗಳ ಜಾಲದ ಮುಖೇನ ವಿಶ್ವದ 45 ದೇಶಗಳ 69 ನಗರಗಳಲ್ಲಿನ ಪ್ರಚಲಿತ ಪದ್ಧತಿಗಳನ್ನು ಹಂಚಿಕೊಳ್ಳುವ ಮೂಲಕ ಪ್ರಮುಖ ಪಾತ್ರ ವಹಿಸಲು ಬದ್ಧವಾಗಿದೆ. ಇದರಿಂದ ಭಾರತ ಸರಕಾರವು ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ಭಾರತದಲ್ಲಿ ತಮ್ಮ ವ್ಯವಸ್ಥೆಗಳನ್ನು ಸ್ಥಾಪಿಸುವಂತೆ ದೇಶದ ಸಂಸ್ಥೆಗಳನ್ನು ಉತ್ತೇಜಿಸಲು ಅಲ್ಲಿ ಅನುಸರಿಸುತ್ತಿರುವ ಉತ್ತಮ ಪದ್ಧತಿಗಳನ್ನು ಇಲ್ಲಿಯೂ ಅಳವಡಿಸಿಕೊಳ್ಳಬಹುದು. ಒಡಂಬಡಿಕೆಯೊಂದಿಗೆ, ಲೆಕ್ಕಪರಿಶೋಧನೆ ವೃತ್ತಿಯಲ್ಲಿ ಸೇವೆಗಳ ರಫ್ತನ್ನು ಒದಗಿಸುವ ಮೂಲಕ ಅಜರ್‌ಬೈಜಾನ್ ಜೊತೆ ಪಾಲುದಾರಿಕೆಯನ್ನು ಬಲಪಡಿಸಲು ʻಐಸಿಎಐʼಗೆ ಅನುವಾಗಲಿದೆ.

ಹಿನ್ನೆಲೆ:

ʻಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆʼ (ಐಸಿಎಐ) ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ ವೃತ್ತಿಯ ನಿಯಂತ್ರಣಕ್ಕಾಗಿ ʻಚಾರ್ಟರ್ಡ್ ಅಕೌಂಟೆಂಟ್ಸ್ ಕಾಯ್ದೆ-1949ʼ ಅಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದೆ. ಶಿಕ್ಷಣ, ವೃತ್ತಿಪರ ಅಭಿವೃದ್ಧಿ, ಉನ್ನತ ಲೆಕ್ಕಪತ್ರನಿರ್ವಹಣೆ, ಲೆಕ್ಕಪರಿಶೋಧನೆ ಮತ್ತು ನೈತಿಕ ಮಾನದಂಡಗಳ ಕ್ಷೇತ್ರದಲ್ಲಿ ಐಸಿಎಐ ಅಪಾರ ಕೊಡುಗೆ ನೀಡಿದೆ. ಮೂಲಕ ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಚಾರ್ಟರ್ಡ್ ಅಕೌಂಟೆಂಟ್‌ಗಳ ವೃತ್ತಿಯ ಮುಂದುವರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಜರ್‌ಬೈಜಾನ್ ಗಣರಾಜ್ಯದಲ್ಲಿ ಲೆಕ್ಕಪರಿಶೋಧನಾ ವೃತ್ತಿಯನ್ನು ನಿಯಂತ್ರಿಸಲು 1994 ಲೆಕ್ಕಪರಿಶೋಧನೆಯ ಕಾನೂನಿನ ಪ್ರಕಾರ (2004ರಲ್ಲಿ ತಿದ್ದುಪಡಿ ಮಾಡಲಾಗಿದೆ) ʻಅಜರ್‌ಬೈಜಾನ್ ಗಣರಾಜ್ಯದ ಲೆಕ್ಕಪರಿಶೋಧಕರ ಮಹಾಮಂಡಳಿಯನ್ನು (ಸಿಎಎಆರ್) ಸ್ಥಾಪಿಸಲಾಗಿದೆ.

***(Release ID: 1753188) Visitor Counter : 237