ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ತಂತ್ರಜ್ಞಾನ ಒಳಗೊಂಡ ಆಡಳಿತದಲ್ಲಿ ಅಭಿವೃದ್ಧಿಗಾಗಿ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಪಾಲುದಾರಿಕೆಗೆ ಭಾರತ ಸಿದ್ಧ: ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

Posted On: 02 SEP 2021 12:58PM by PIB Bengaluru

ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ನಿನ್ನೆ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಕುರಿತ ಸಮ್ಮೇಳನ  (ಯುಎನ್ ಸಿಟಿಎಡಿ) ಉನ್ನತ ಮಟ್ಟದ ನೀತಿ ಸಭೆಯಲ್ಲಿ ಭಾರತದ ಡಿಜಿಟಲ್ ಯಶೋಗಾಥೆಯನ್ನು ಹಂಚಿಕೊಂಡರು. ಭಾರತ, ಇಂಡೋನೇಷಿಯಾ ಮತ್ತು ಶ್ರೀಲಂಕಾದ ಸಚಿವರು ನೀತಿ ಸಂವಾದದಲ್ಲಿ ಡಿಜಿಟಲ್ ಸೇರ್ಪಡೆ ಮತ್ತು ಸಾಮಾಜಿಕ ಸಬಲೀಕರಣ ಕುರಿತ ತಮ್ಮ ಅನುಭವವನ್ನು ಹಂಚಿಕೊಂಡರು. ಯುಎನ್ ಸಿಟಿಎಡಿಯ ಸಚಿವರ ಶೃಂಗಸಭೆಯ 15ನೇ ಅಧಿವೇಶನಕ್ಕೆ ಪೂರ್ವಭಾವಿಯಾಗಿ ವೆಬಿನಾರ್ ಆಯೋಜಿಸಲಾಗಿತ್ತು.

ಭಾರತದ ಡಿಜಿಟಲ್ ಆಂದೋಲನದ ಕತೆಯ ಕುರಿತು ಮಾತನಾಡಿದ ಶ್ರೀ ರಾಜೀವ್ ಚಂದ್ರಶೇಖರ್, ಭಾರತದ ಡಿಜಿಟಲೀಕರಣದ ಯಶೋಗಾಥೆಯನ್ನು ಸಾರ್ವಜನಿಕ ಮತ್ತು ಖಾಸಗಿ ವಲಯ ಮುನ್ನಡೆಸಿಕೊಂಡು ಹೋಗುತ್ತಿದ್ದು, ಅದು ಜಗತ್ತಿಗೆ ನವೀನ ಪರಿಹಾರಗಳನ್ನು ಒದಗಿಸುವ ಮೂಲಕ ಜಾಗತಿಕ ತಂತ್ರಜ್ಞಾನಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದರು. ಅಂತರ್ಜಾಲ ಸಂಪರ್ಕದ ವಿಷಯದಲ್ಲಿ ಭಾರತವು ಇಂದು ಸುಮಾರು 80 ಕೋಟಿ ಜನರಿಗೆ ಆನ್ ಲೈನ್ ಸಂಪರ್ಕ ನೀಡುವ ವಿಶ್ವದ ಅತಿ ದೊಡ್ಡ ಸಂಪರ್ಕ ಹೊಂದಿದ ದೇಶಗಳಲ್ಲಿ ಒಂದಾಗಿದೆ ಮತ್ತು ವಿಶ್ವದ ಅತಿ ದೊಡ್ಡ ಗ್ರಾಮೀಣ ಬ್ರಾಡ್ ಬ್ಯಾಂಡ್ ಸಂಪರ್ಕಗಳನ್ನು ಕಾರ್ಯಗತಗೊಳಿಸುವಲ್ಲಿ ಒಂದಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು.

ಡಿಜಿಟಲ್ ಗುರುತಿಸುವಿಕೆ, ಡಿಜಿಟಲ್ ಪಾವತಿ ವ್ಯವಸ್ಥೆಗಳು ಮತ್ತು ಡಿಜಿಟಲ್ ಸಾಕ್ಷರತೆ ಸೇರಿದಂತೆ ತಂತ್ರಜ್ಞಾನ ಮತ್ತು ಸಾರ್ವಜನಿಕ ಡಿಜಿಟಲ್ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಮತ್ತು ಸಾಮಾಜಿಕ ಯೋಜನೆಗಳ ಸಬ್ಸಿಡಿ ಸೋರಿಕೆಗಳನ್ನು ತಡೆಗಟ್ಟಿ ಕಳೆದ 6 ವರ್ಷಗಳಲ್ಲಿ ನಾಗರಿಕರು ಮತ್ತು ಸರ್ಕಾರದ ನಡುವಿನ ಅಂತರವನ್ನು ಗಣನೀಯವಾಗಿ ತಗ್ಗಿಸಲಾಗಿದೆ ಎಂದು ಅವರು ಹಂಚಿಕೊಂಡರು. ಅಲ್ಲದೆ, ಅವರು ತಂತ್ರಜ್ಞಾನದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಸಾಮಾನ್ಯ ಜನರು ಮತ್ತು ಸಣ್ಣ ವರ್ತಕರಿಗಾಗಿ ಕೆಲಸ ಮಾಡುವ ಆಡಳಿತದಲ್ಲಿ ತಂತ್ರಜ್ಞಾನದ ಶಕ್ತಿಯನ್ನು ಭಾರತ ಸಾಬೀತುಪಡಿಸಿದೆ ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತವು ತಂತ್ರಜ್ಞಾನ ಅಳವಡಿಕೆ ಮತ್ತು ಜನರ ಜೀವನವನ್ನು ಪರಿವರ್ತಿಸುವ ಮೂಲಕ ತಂತ್ರಜ್ಞಾನದ ಮಾದರಿ ಆಡಳಿತವನ್ನು ಯಶಸ್ಸಿಯಾಗಿ ತೋರಿಸಿಕೊಟ್ಟಿದೆ ಮತ್ತು ಭಾರತ ಎಲ್ಲ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಪಾಲುದಾರರಾಗಲು ಸಿದ್ಧವಿದೆ ಎಂದು ಶ್ರೀ ರಾಜೀವ್ ಚಂದ್ರಶೇಖರ್ ಹೇಳಿದರು.

ಯುಎನ್ ಸಿಟಿಎಟಿ ಉನ್ನತ ಮಟ್ಟದ ನೀತಿ ಸಂವಾದದಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ಸಾರ್ವಜನಿಕ ಡಿಜಿಟಲ್ ವೇದಿಕೆಗಳನ್ನು ತಂತ್ರಜ್ಞಾನ ಒಳಗೊಂಡ ಆಡಳಿತ ಮತ್ತು ಸಾಮಾಜಿಕ ಸೇರ್ಪಡೆಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಭಾರತ ಬಲವಾಗಿ ಪ್ರತಿಪಾದಿಸಿತು.

***



(Release ID: 1751374) Visitor Counter : 227