ಪ್ರಧಾನ ಮಂತ್ರಿಯವರ ಕಛೇರಿ

ಜಲಿಯನ್ ವಾಲಾ ಬಾಗ್ ಸ್ಮಾರಕದ ನವೀಕೃತ ಸಂಕೀರ್ಣವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಇಂಗ್ಲೀಷ್ ಅವತರಣಿಕೆ.

Posted On: 28 AUG 2021 8:59PM by PIB Bengaluru

ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡಿರುವ ಪಂಜಾಬ್ ರಾಜ್ಯಪಾಲ ಶ್ರೀ ವಿ.ಪಿ.ಸಿಂಗ್ ಬದ್ನೋರಿಜೀ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಶ್ರೀ ಜಿ. ಕಿಷನ್  ರೆಡ್ಡಿ ಜೀ, ಶ್ರೀ ಅರ್ಜುನ್ ರಾಂ ಮೇಘವಲ್ಲಿ, ಶ್ರೀ ಸೋಮ ಪ್ರಕಾಶ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಶೈವೆಟ್ ಮಾಲಿಕ್ ಜೀ, ಎಲ್ಲಾ ಗೌರವಾನ್ವಿತ ಮುಖ್ಯಮಂತ್ರಿಗಳೇ, ಜನ ಪ್ರತಿನಿಧಿಗಳೇ, ಹುತಾತ್ಮರಾದ ಕುಟುಂಬಗಳ ಸದಸ್ಯರೇ, ಸಹೋದರರೇ ಮತ್ತು ಸಹೋದರಿಯರೇ!. 

ಪಂಜಾಬಿನ ವೀರ ಭೂಮಿಗೆ ಮತ್ತು ಜಲಿಯನ್ ವಾಲಾ ಬಾಗ್ ನ ಪವಿತ್ರ ಮಣ್ಣಿಗೆ ನಾನು ವಂದಿಸುತ್ತೇನೆ!. ಸ್ವಾತಂತ್ರ್ಯದ ಜ್ವಲಿಸುತ್ತಿದ್ದ ಜ್ವಾಲೆಯನ್ನು ಅಮಾನವೀಯವಾಗಿ ಹತ್ತಿಕ್ಕುವಾಗ ಹುತಾತ್ಮರಾದ   ಭಾರತ ಮಾತೆಯ ಮಕ್ಕಳಿಗೂ ವಂದಿಸುತ್ತೇನೆ. ಆ ಮುಗ್ಧ ಹುಡುಗರು ಮತ್ತು ಹೆಣ್ಣು ಮಕ್ಕಳು, ಸಹೋದರರು ಮತ್ತು ಸಹೋದರಿಯರ ಕನಸುಗಳು ಜಲಿಯನ್ ವಾಲಾ ಬಾಗ್ ನ ಗೋಡೆಗಳ ಮೇಲಿರುವ ಗುಂಡಿನ ಕಲೆಗಳಲ್ಲಿ ಈಗಲೂ ಕಾಣ ಸಿಗುತ್ತವೆ. ಅಸಂಖ್ಯಾತ ಮಾತೆಯರ ಮಕ್ಕಳ ಮತ್ತು ಸಹೋದರಿಯರ ಪ್ರಾಣಗಳು ಶಾಹಿದಿಕುಆನ್ ನಲ್ಲಿ ಸೆಳೆದುಕೊಳ್ಳಲಾಗಿದೆ. ಅವರ ಕನಸುಗಳನ್ನು ತುಳಿದು ಹಾಕಲಾಗಿದೆ. ನಾವು ಅವರನ್ನೆಲ್ಲ ಇಂದು ಸ್ಮರಿಸಿಕೊಳ್ಳುತ್ತಿದ್ದೇವೆ.  
ಸಹೋದರಿಯರೇ ಮತ್ತು ಸಹೋದರರೇ, 
ಅಸಂಖ್ಯಾತ ಕ್ರಾಂತಿಕಾರಿಗಳಿಗೆ  ಮತ್ತು ಸರ್ದಾರ್ ಉಧಮ್ ಸಿಂಗ್ ಹಾಗು ಸರ್ದಾರ್ ಭಗತ್ ಸಿಂಗ್ ರಂತಹ ಹೋರಾಟಗಾರರಿಗೆ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಲು ಪ್ರೇರಣೆ ನೀಡಿದ ಸ್ಥಳ ಜಲಿಯನ್ ವಾಲಾ ಬಾಗ್. 1919 ರ ಏಪ್ರಿಲ್ 13ರ ಆ ಹತ್ತು ನಿಮಿಷಗಳು ನಮ್ಮ ಸ್ವಾತಂತ್ರ್ಯ ಹೋರಾಟದ ನೈಜ ವೀರ ಚರಿತ್ರೆ. ಇದರಿಂದಾಗಿ ನಾವಿಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ನಾವು ಜಲಿಯನ್ ವಾಲಾ ಬಾಗ್ ಸ್ಮಾರಕದ ನವೀಕೃತ ಸಂಕೀರ್ಣವನ್ನು ಹೊಂದುತ್ತಿರುವುದು ನಮ್ಮೆಲ್ಲರಿಗೂ ಬಹಳ ದೊಡ್ಡ ಪ್ರೇರಣೆ ನೀಡುವ ಸಂದರ್ಭ.  ಜಲಿಯನ್ ವಾಲಾ ಬಾಗ್ ನ ಈ ಪವಿತ್ರ ಭೂಮಿಗೆ ಹಲವಾರು ಬಾರಿ ಭೇಟಿ ನೀಡುವ ಮತ್ತು ಈ ಪವಿತ್ರ ಮಣ್ಣನ್ನು ಇಲ್ಲಿ ನನ್ನ ಹಣೆಗೆ ಹಚ್ಚಿಕೊಳ್ಳುವ ಸದವಕಾಶ ನನಗೆ ಲಭ್ಯವಾಗಿತ್ತು. ಅದು ನನ್ನ ಅದೃಷ್ಟ. ಈ ನವೀಕರಣ ತ್ಯಾಗದ ಅಳಿಸಲಾದ ಕಥೆಯನ್ನು ಹೆಚ್ಚು ಚಿರಂತನವಾಗಿಸಿದೆ. ವಿವಿಧ ಗ್ಯಾಲರಿಗಳು, ಗೋಡೆಯಲ್ಲಿ ಚಿತ್ರಿಸಲ್ಪಟ್ಟಿರುವ ಹುತಾತ್ಮರ ಚಿತ್ರಗಳು ಮತ್ತು ಶಹೀದ್ ಉದಾಮ್ ಸಿಂಗ್ ಜೀ ಅವರ ಪ್ರತಿಮೆ ನಮ್ಮನ್ನು ಆ ಕಾಲಕೆ ಕರೆದೊಯ್ಯುತ್ತದೆ. ಜಲಿಯನ್ ವಾಲಾ ಬಾಗ್ ಸಾಮೂಹಿಕ ಹತ್ಯಾಕಾಂಡಕ್ಕೆ ಮೊದಲು ಇಲ್ಲಿ  ಪವಿತ್ರ ಬೈಸಾಕಿ ಉತ್ಸವಗಳು ನಡೆಯುತ್ತಿದ್ದವು. ಈ ದಿನದಂದು ಗುರು ಗೋವಿಂದ ಸಿಂಗ್ ಜೀ ಅವರು ಸರ್ವರ ಕಲ್ಯಾಣದ ಉದ್ದೇಶದಿಂದ ಖಾಲ್ಸಾ ಪಂಥವನ್ನು ಸ್ಥಾಪನೆ ಮಾಡಿದರು. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಜಲಿಯನ್ ವಾಲಾ ಬಾಗ್ ನ ಈ ಹೊಸ ನೋಟ ಈ ಪವಿತ್ರ ಸ್ಥಳದ, ಇದರ ಹಿಂದಿನ ಕಾಲದ ಇತಿಹಾಸದ ಬಗ್ಗೆ ಬಹಳಷ್ಟನ್ನು ತಿಳಿದುಕೊಳ್ಳಲು ಪ್ರೇರಣೆ ನೀಡಲಿದೆ. ಈ ಸ್ಥಳವು ಹೊಸ ತಲೆಮಾರಿಗೆ ನಮ್ಮ ಸ್ವಾತಂತ್ರ್ಯದ, ನಮ್ಮ ಪೂರ್ವಜರ ಹೋರಾಟದ, ಅವರ ತ್ಯಾಗದ ಮತ್ತು ಸಂಖ್ಯಾತೀತ ಹೋರಾಟಗಳ ಬಗ್ಗೆ ನೆನಪಿಸಿಕೊಡಲಿದೆ. ರಾಷ್ಟ್ರದ ಬಗ್ಗೆ ನಮ್ಮ ಕರ್ತವ್ಯಗಳ ಕುರಿತಂತೆ ನಮಗೆ ಹೊಸ ಚೈತನ್ಯದ ಜೊತೆ ಪ್ರೇರಣೆಯೂ ದೊರೆಯಲಿದೆ. ಮತ್ತು ನಾವು ಏನನ್ನೇ ಮಾಡಲಿ ಅದರಲ್ಲಿ ದೇಶದ ಹಿತಾಸಕ್ತಿ ಪ್ರಮುಖವಾಗಿರುವಂತೆ ಮಾಡುವುದಕ್ಕೂ ಇದು ಹುಮ್ಮಸ್ಸು ಒದಗಿಸಲಿದೆ. 
ಸ್ನೇಹಿತರೇ, 
ತನ್ನ ಇತಿಹಾಸವನ್ನು ಕಾಪಿಡುವುದು ಪ್ರತೀ ದೇಶದ ಜವಾಬ್ದಾರಿ. ಚಾರಿತ್ರಿಕ ಘಟನೆಗಳು ನಮಗೆ ಬಹಳಷ್ಟನ್ನು ತಿಳಿಸುತ್ತವೆ. ಮತ್ತು ಮುನ್ನಡೆಯಲು ನಮಗೆ ಮಾರ್ಗವನ್ನು ತೋರಿಸುತ್ತವೆ. ಭಾರತ ವಿಭಜನೆಯ ವೇಳೆ ನಾವು ಜಲಿಯನ್ ವಾಲಾ ಬಾಗ್ ನಂತಹ ಇನ್ನೊಂದು ಭಯಾನಕ ಘಟನೆಯನ್ನು ನೋಡಿದ್ದೇವೆ. ಕಠಿಣ ದುಡಿಮೆ ಮಾಡುವ ಮತ್ತು ಉತ್ಸಾಹದಿಂದಿರುವ ಪಂಜಾಬಿನ ಜನತೆ ವಿಭಜನೆಯಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬಲಿಪಶುಗಳಾದರು. ವಿಭಜನೆಯ ವೇಳೆ ಭಾರತದ ಪ್ರತೀ ಮೂಲೆಯಲ್ಲೂ ಸಂಭವಿಸಿದ ಮತ್ತು ಅದರಲ್ಲೂ ವಿಶೇಷವಾಗಿ ಪಂಜಾಬಿನ ಕುಟುಂಬಗಳಿಗೆ ಸಂಭವಿಸಿದ ಹಾನಿ, ನೋವಿನ ಬಗ್ಗೆ  ನಾವಿನ್ನೂ ನೋವು ಅನುಭವಿಸುತ್ತಿದ್ದೇವೆ. ತನ್ನ ಭೂತ ಕಾಲದ ಇಂತಹ ಘೋರ ಸಂಗತಿಗಳನ್ನು ನಿರ್ಲಕ್ಷಿಸುವುದು ಯಾವುದೇ ದೇಶಕ್ಕೆ ಸರಿ ಎನಿಸುವುದಿಲ್ಲ. ಆದುದರಿಂದ ಭಾರತವು ಪ್ರತೀ ವರ್ಷ ಆಗಸ್ಟ್ 14 ನ್ನು ’ವಿಭಜನೆಯ ಕರಾಳ ಸ್ಮರಣಾ ದಿನ” ವನ್ನಾಗಿ ಆಚರಿಸಲು ನಿರ್ಧರಿಸಿದೆ. ಈ ದಿನವು ನಮ್ಮ ಭವಿಷ್ಯದ ತಲೆಮಾರಿಗೆ ನಮ್ಮ ಸ್ವಾತಂತ್ರ್ಯಕ್ಕೆ ತೆತ್ತ ಬೆಲೆ ಏನು ಎಂಬುದನ್ನು ನೆನಪಿಸಿಕೊಡಲಿದೆ. ವಿಭಜನೆಯ ಸಂದರ್ಭದಲ್ಲಿ ಕೋಟ್ಯಂತರ ಭಾರತೀಯರು ಅನುಭವಿಸಿದ ಸಂಕಷ್ಟಗಳ ನೋವಿನ ಅರಿವೂ ಅವರಿಗಾಗಲಿದೆ.   
ಸ್ನೇಹಿತರೇ, 
ಗುರ್ಬಾನಿ ನಮಗೆ ಬೋಧಿಸುತ್ತಾರೆ: सुखु होवै सेव कमाणीआ।
ಅಂದರೆ ಇತರರಿಗೆ ಸೇವೆ ಸಲ್ಲಿಸುವುದರಿಂದ ಸಂತೋಷ ಲಭಿಸುತ್ತದೆ ಎಂಬುದಾಗಿ. ಇತರರ ನೋವು ಕೂಡಾ ನಮ್ಮದೇ ನೋವು ಎಂಬಂತೆ ಭಾವಿಸಿದಾಗ ಮಾತ್ರ ನಮಗೆ ಸಂತೋಷ ಲಭಿಸುತ್ತದೆ. ಆದುದರಿಂದ ಇಂದು ಯಾವುದೇ ಭಾರತೀಯ ಜಗತ್ತಿನ ಯಾವುದೇ ಭಾಗದಲ್ಲಿ ಸಮಸ್ಯೆಗೆ ಸಿಲುಕಿದ್ದರೆ, ಭಾರತವು ತನ್ನೆಲ್ಲಾ ಇಚ್ಛಾ ಶಕ್ತಿಯೊಂದಿಗೆ ಅವರ ಸಹಾಯಕ್ಕೆ ಎದ್ದು ನಿಲ್ಲುತ್ತದೆ. ಕೊರೊನಾ ಸಂದರ್ಭ ಇರಲಿ, ಅಥವಾ ಈಗ ಚಾಲ್ತಿಯಲ್ಲಿರುವ ಅಫ್ಘಾನಿಸ್ಥಾನದ ಬಿಕ್ಕಟ್ಟು ಇರಲಿ ಜಗತ್ತು ಇದನ್ನು ಗಮನಿಸಿದೆ. ಅಫ್ಘಾನಿಸ್ಥಾನದಿಂದ ನೂರಾರು ಸ್ನೇಹಿತರನ್ನು “ಆಪರೇಶನ್ ದೇವಿ ಶಕ್ತಿ” ಕಾರ್ಯಾಚರಣೆ ಅಡಿಯಲ್ಲಿ ಭಾರತಕ್ಕೆ ಕರೆತರಲಾಗಿದೆ. ಅಲ್ಲಿ ಹಲವಾರು ಸವಾಲುಗಳಿದ್ದವು ಮತ್ತು ಪರಿಸ್ಥಿತಿಗಳು ಕಠಿಣವಾಗಿದ್ದವು. ಆದರೆ ಗುರುವಿನ ಕೃಪೆಯೂ ನಮ್ಮ ಜೊತೆಗಿತ್ತು. ನಾವು (ಅಪ್ಘಾನಿಸ್ಥಾನದಿಂದ ) ಭಾರತದ ಜನತೆಯ ಜೊತೆ ಪವಿತ್ರ ಗುರು ಗ್ರಂಥ ಸಾಹೇಬ್ ನ “ಸ್ವರೂಪ” ಕೂಡಾ ತಂದಿದ್ದೇವೆ. 
ಸ್ನೇಹಿತರೇ, 
ಕಳೆದ ಹಲವಾರು ವರ್ಷಗಳಿಂದ ಈ ಜವಾಬ್ದಾರಿಯನ್ನು ಪೂರೈಸಲು ದೇಶವು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ನಮ್ಮ ಗುರುಗಳು ಮಾನವತೆಯ ಬಗ್ಗೆ ನೀಡಿರುವ ಬೋಧನೆಗಳನ್ನು ಮನದಲ್ಲಿಟ್ಟುಕೊಂಡು, ಇಂತಹ ಪರಿಸ್ಥಿತಿಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಈಡಾಗುವ ತನ್ನ ಜನರಿಗಾಗಿ ದೇಶವು ಹೊಸ ಕಾಯ್ದೆಗಳನ್ನು ರೂಪಿಸಿದೆ. 
ಸ್ನೇಹಿತರೇ, 
ಪ್ರಸ್ತುತ ಇರುವ ಜಾಗತಿಕ ಪರಿಸ್ಥಿತಿಯಿಂದಾಗಿ  “ಏಕ ಭಾರತ್, ಶ್ರೇಷ್ಠ ಭಾರತ್” ನ ಪರಿಕಲ್ಪನೆಗೆ ಹೆಚ್ಚಿನ  ಮಹತ್ವ ಲಭಿಸಿದೆ. ಈ ಘಟನೆಗಳು ರಾಷ್ಟ್ರವಾಗಿ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಅಗತ್ಯವನ್ನು ನಮಗೆ ಮನದಟ್ಟು ಮಾಡಿವೆ. ಆದುದರಿಂದ ನಾವು ಸ್ವಾತಂತ್ಯದ 75 ವರ್ಷಗಳನ್ನು ಆಚರಿಸುತ್ತಿರುವಾಗ, ನಾವು ನಮ್ಮ ರಾಷ್ಟ್ರದ ನೆಲೆಗಟ್ಟನ್ನು ಬಲಿಷ್ಟಗೊಳಿಸುವುದು ಮತ್ತು ಅದರ ಬಗ್ಗೆ ಹೆಮ್ಮೆ ಪಡುವುದು ಅಗತ್ಯವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಈ ನಿರ್ಧಾರವನ್ನು ಪ್ರತಿಬಿಂಬಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಸ್ಮರಿಸಲ್ಪಡುತ್ತಾರೆ ಮತ್ತು ಪ್ರತೀ ಗ್ರಾಮಗಳಲ್ಲಿಯೂ ಗೌರವಿಸಲ್ಪಡುತ್ತಾರೆ. ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಮೈಲಿಗಲ್ಲುಗಳನ್ನು ಮುಂಚೂಣಿಗೆ ತರಲು ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೇಶದ ರಾಷ್ಟ್ರೀಯ ಹೀರೋಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಸಂರಕ್ಷಿಸಿಡುವುದು ಮಾತ್ರವಲ್ಲದೆ ಹೊಸ ಆಯಾಮಗಳನ್ನು ನೀಡಲಾಗುತ್ತಿದೆ. ಸ್ವಾತಂತ್ರ್ಯದ ಜೊತೆ ಸಂಬಂಧ ಹೊಂದಿರುವ ಇತರ ರಾಷ್ಟ್ರೀಯ ಸ್ಮಾರಕಗಳಾದಂತಹ ಜಲಿಯನ್ ವಾಲಾ ಬಾಗ್ ಅನ್ನೂ ನವೀಕರಿಸಲಾಗಿದೆ. ಅಲಹಾಬಾದ್ ಮ್ಯೂಸಿಯಂನಲ್ಲಿ 1857 ರಿಂದ ಮೊದಲ್ಗೊಂಡು 1942 ರವರೆಗೆ ಪ್ರತೀ ಕ್ರಾಂತಿಯನ್ನು ಪ್ರದರ್ಶಿಸುವ ದೇಶದ ಮೊದಲ ಸಂವಾದ ಗ್ಯಾಲರಿ ನಿರ್ಮಾಣ ಶೀಘ್ರವೇ ಪೂರ್ಣಗೊಳ್ಳಲಿದೆ. ಈ ’ಆಜಾ಼ದ್ ಗ್ಯಾಲರಿ” ಯನ್ನು ಕ್ರಾಂತಿವೀರ  ಚಂದ್ರಶೇಖರ ಆಜಾ಼ದ್ ಅವರಿಗೆ ಅರ್ಪಿಸಲಾಗಿದ್ದು, ಇದು ಆ ಕಾಲದ ಸಶಸ್ತ್ರ ಬಂಡಾಯಕ್ಕೆ ಸಂಬಂಧಿಸಿದ ದಾಖಲೆಗಳ ಡಿಜಿಟಲ್ ಅನುಭವವನ್ನು ಒದಗಿಸಲಿದೆ. ಅದೇ ರೀತಿ ಕೋಲ್ಕೊತ್ತಾದ ಬಿಪ್ಲೋಬಿ ಭಾರತ್ ಗ್ಯಾಲರಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಭವಿಷ್ಯದ ತಲೆಮಾರಿಗೆ ಆಕರ್ಷಕ ಮಾಡುವ ಕೆಲಸ ಸಾಗಿದೆ. ಈ ಮೊದಲು ಸರಕಾರವು ಅಜಾ಼ದ್ ಹಿಂದ್ ಫೌಜ್ ನ ಕೊಡುಗೆಯನ್ನು ಚರಿತ್ರೆಯ ಪುಟಗಳಿಂದ ಹೊರತರುವ ಕೆಲಸವನ್ನು ಮಾಡಿದೆ. ಅಂಡಮಾನಿನಲ್ಲಿ ನೇತಾಜಿ ಅವರು ಮೊಟ್ಟ ಮೊದಲು ತ್ರಿವರ್ಣ ಧ್ವಜವನ್ನು ಅರಳಿಸಿದ ಸ್ಥಳಕ್ಕೆ ಹೊಸ ರೂಪ ನೀಡಲಾಗಿದೆ. ಅಂಡಮಾನಿನ ದ್ವೀಪಗಳ ಹೆಸರುಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅರ್ಪಿಸಲಾಗಿದೆ. 
ಸಹೋದರರೇ ಮತ್ತು ಸಹೋದರಿಯರೇ, 
ಸ್ವಾತಂತ್ರ್ಯಕ್ಕಾಗಿ ಮಾಡಲಾದ ತ್ಯಾಗದಲ್ಲಿ ನಮ್ಮ ಬುಡಕಟ್ಟು ಸಮುದಾಯ ಸಿಂಹ ಪಾಲನ್ನು ಹೊಂದಿದೆ. ಬುಡಕಟ್ಟು ಸಮುದಾಯದ ತ್ಯಾಗವನ್ನು ಕುರಿತ ಆಚ್ಚಳಿಯದ ಕಥೆಗಳು ಇಂದಿಗೂ ನಮಗೆ ಪ್ರೇರಣೆ ಒದಗಿಸುತ್ತಿವೆ. ಅವರ ಕೊಡುಗೆಗೆ ನಮ್ಮ ಚರಿತ್ರೆಯ ಪುಸ್ತಕಗಳಲ್ಲಿ ನಿಜವಾಗಿ ದೊರೆಯಬೇಕಾದಷ್ಟು ಮಹತ್ವದ ಸ್ಥಾನ  ಸಿಗಲಿಲ್ಲ. ಪ್ರಸ್ತುತ, ಒಂಭತ್ತು ರಾಜ್ಯಗಳಲ್ಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ಅವರ ಹೋರಾಟವನ್ನು ವಿವರಿಸುವ ವಸ್ತು ಸಂಗ್ರಹಾಲಯಗಳ  ಕಾರ್ಯ ಪ್ರಗತಿಯಲ್ಲಿದೆ. 
ಸ್ನೇಹಿತರೇ, 
ಸರ್ವೋಚ್ಚ ತ್ಯಾಗ ಮಾಡಿದ ನಮ್ಮ ಸೈನಿಕರಿಗೆ ರಾಷ್ಟ್ರೀಯ ಸ್ಮಾರಕ ಬೇಕು ಎಂಬುದು ರಾಷ್ಟ್ರದ ಆಶಯವಾಗಿತ್ತು. ರಾಷ್ಟ್ರೀಯ ಯುದ್ಧ ಸ್ಮಾರಕ ಯುವ ಜನತೆಯಲ್ಲಿ ರಾಷ್ಟ್ರೀಯ ಭದ್ರತೆಯ ಹುಮ್ಮಸ್ಸನ್ನು ಮತ್ತು ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಸ್ಫೂರ್ತಿಯನ್ನು ನೀಡುತ್ತಿರುವುದು ನನಗೆ ತೃಪ್ತಿಯ ಸಂಗತಿಯಾಗಿದೆ. ರಾಷ್ಟ್ರದ ಭದ್ರತೆಗಾಗಿ ಹುತಾತ್ಮರಾಗಿರುವ ಪಂಜಾಬ್ ಒಳಗೊಂಡಂತೆ ದೇಶದ ಮೂಲೆ ಮೂಲೆಯ ನಮ್ಮ ಧೀರ  ಸೈನಿಕರಿಗೆ ಕೊಡಬೇಕಾದ ಗೌರವವನ್ನು ನೀಡಲಾಗುತ್ತಿದೆ. ಅದೇ ರೀತಿ ಸ್ವಾತಂತ್ರ್ಯ ಬಂದ ಬಳಿಕ ಹಲವು  ದಶಕಗಳಾದರೂ ನಮ್ಮ ಪೊಲೀಸ್ ಸಿಬ್ಬಂದಿಗೆ ಮತ್ತು ಅರೆ ಸೈನಿಕ ಪಡೆಗಳಿಗೆ ರಾಷ್ಟ್ರೀಯ ಸ್ಮಾರಕ ಇರಲಿಲ್ಲ. ಇಂದು ಪೊಲೀಸರು ಮತ್ತು ಅರೆ ಸೈನಿಕ ಪಡೆಗಳಿಗಾಗಿ ಇರುವ  ರಾಷ್ಟ್ರೀಯ ಸ್ಮಾರಕ ದೇಶದ ಹೊಸ ತಲೆಮಾರನ್ನು ಪ್ರಭಾವಿಸುತ್ತಿದೆ. 
ಸ್ನೇಹಿತರೇ, 
ಶೌರ್ಯ ಮತ್ತು ಧೀರರ ಕಥೆಗಳಿಲ್ಲದ ಯಾವುದೇ ಊರು ಅಥವಾ ಬೀದಿ ಪಂಜಾಬಿನಲ್ಲಿ ಕಾಣಸಿಗದು. ಗುರುಗಳು ತೋರಿದ ಪಥವನ್ನು ಅನುಸರಿಸಿ ಪಂಜಾಬಿನ ಪುತ್ರರು ಮತ್ತು ಪುತ್ರಿಯರು ತಾಯಿ ಭಾರತಿಯ ಸುತ್ತ ಬಂಡೆಗಲ್ಲಿನಂತೆ ನಿಂತರು. ನಮ್ಮ ಪರಂಪರೆ ಇನ್ನಷ್ಟು ಅಭಿವೃದ್ಧಿ ಆಗುವಂತೆ ಮಾಡಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ಗುರು ನಾನಕ್ ದೇವ್ ಜೀ ಅವರ 550 ನೇ ಪ್ರಕಾಶೋತ್ಸವ ಇರಲಿ, ಗುರು ಗೋವಿಂದ ಸಿಂಗ್ ಜೀ ಅವರ 350 ನೇ ಪ್ರಕಾಶೋತ್ಸವ ಇರಲಿ, ಅಥವಾ ಗುರು ತೇಜ್ ಬಹಾದ್ದೂರ್ ಜೀ ಅವರ 400 ನೇ ಜನ್ಮ ವರ್ಷಾಚರಣೆ ಇರಲಿ, ಈ ಎಲ್ಲಾ ಮೈಲಿಗಲ್ಲುಗಳು ಕಳೆದ ಏಳು ವರ್ಷಗಳಲ್ಲಿ ಬಂದಿರುವುದು ಒಂದು ಅದೃಷ್ಟ. ನಮ್ಮ ಗುರುಗಳ ಬೋಧನೆಯನ್ನು ಈ ಪವಿತ್ರ ಹಬ್ಬಗಳ ಮೂಲಕ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಾದ್ಯಂತ ಪ್ರಚುರಪಡಿಸಲು ಕೇಂದ್ರ ಸರಕಾರ ಪ್ರಯತ್ನಗಳನ್ನು ಮಾಡಿದೆ. ಈ ಶ್ರೀಮಂತ ಪರಂಪರೆಯನ್ನು ಭವಿಷ್ಯದ ತಲೆಮಾರಿಗೆ ದಾಟಿಸಲು ನಿರಂತರವಾಗಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸುಲ್ತಾನ್ ಪುರ ಲೋಧಿಯನ್ನು ಪರಂಪರಾ ಪಟ್ಟಣವಾಗಿಸುವುದಿರಲಿ, ಅಥವಾ ಕರ್ತಾರ್ಪುರ ಕಾರಿಡಾರ್ ನಿರ್ಮಾಣ ಇರಲಿ ಇವೆಲ್ಲವನ್ನೂ ಈ ಉದ್ದೇಶದಿಂದ ಮಾಡಲಾಗುತ್ತಿದೆ. ಜಗತ್ತಿನ ವಿವಿಧ ದೇಶಗಳಿಗೆ ವಾಯು ಸಂಪರ್ಕ ಅಥವಾ ದೇಶಾದ್ಯಂತ ಇರುವ ನಮ್ಮ ಗುರುಗಳ ಧಾರ್ಮಿಕ ಸ್ಥಳಗಳ ನಡುವಣ ವಾಯು ಸಂಪರ್ಕವನ್ನು ಬಲಗೊಳಿಸಲಾಗಿದೆ. ಆನಂದಪುರ ಸಾಹೀಬ್-ಫತೇಘರ್ ಸಾಹೀಬ್-ಫಿರೋಜ್ಪುರ-ಅಮೃತಸರ-ಖಾಟ್ಕರ್, ಕಲಾನ್-ಕಲಾನೌರ್-ಪಟಿಯಾಲಾ ಪಾರಂಪರಿಕ ಸರ್ಕ್ಯೂಟ್ ಗಳನ್ನು ಸ್ವದೇಶ ದರ್ಶನ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ನಮ್ಮ ಶ್ರೀಮಂತ ಪರಂಪರೆ ನಮ್ಮ ಮುಂದಿನ ತಲೆಮಾರನ್ನು ನಿರಂತರವಾಗಿ ಪ್ರಭಾವಿಸುತ್ತಿರಬೇಕು ಮತ್ತು ಪ್ರವಾಸೋದ್ಯಮದ ರೀತಿಯಲ್ಲಿ ಉದ್ಯೋಗ ಒದಗಿಸುತ್ತಿರಬೇಕು  ಎಂಬುದು ನಮ್ಮ ಇರಾದೆಯಾಗಿದೆ.
ಸ್ನೇಹಿತರೇ, 
ಸ್ವಾತಂತ್ರ್ಯದ ಈ ಅವಧಿ ಇಡೀ ದೇಶಕ್ಕೆ ಬಹಳ ಮಹತ್ವದ್ದು. ನಾವು ಪರಂಪರೆ ಮತ್ತು ಅಭಿವೃದ್ಧಿಯನ್ನು ಜೊತೆ ಜೊತೆಗೆ ಕೊಂಡೊಯ್ಯಬೇಕಾಗಿದೆ. ಮತ್ತು ಪಂಜಾಬಿನ ನೆಲ ಸದಾ ನಮಗೆ ಪ್ರೇರಣೆಯಾಗಿದೆ. ಇಂದು ಪಂಜಾಬ್ ಪ್ರತಿಯೊಂದು ಮಟ್ಟದಲ್ಲಿಯೂ ಪ್ರಗತಿ ಹೊಂದುವುದು ಬಹಳ ಅಗತ್ಯ. ನಮ್ಮ ದೇಶ ಎಲ್ಲಾ ನಿಟ್ಟಿನಲ್ಲಿಯೂ ಅಭಿವೃದ್ಧಿಯಾಗಬೇಕು. ಆದುದರಿಂದ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಹುಮ್ಮಸ್ಸಿನಲ್ಲಿ ನಾವು ಕೆಲಸ ಮಾಡಬೇಕು. ಜಲಿಯನ್ ವಾಲಾಬಾಗ್ ನ ಈ ನೆಲ ನಮಗೆ ನಮ್ಮ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ನಿರಂತರ ಪ್ರೇರಣೆ ನೀಡುವುದನ್ನು ಮುಂದುವರಿಸುತ್ತದೆ ಮತ್ತು  ದೇಶವು ಅದರ ಗುರಿಗಳನ್ನು ಈಡೇರಿಸಿಕೊಳ್ಳುತ್ತದೆ ಎಂಬ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ಈ ಆಶಯದೊಂದಿಗೆ ಈ ಆಧುನಿಕ ಸ್ಮಾರಕಕ್ಕಾಗಿ ಮತ್ತೊಮ್ಮೆ ಬಹಳ ಬಹಳ ಅಭಿನಂದನೆಗಳು!. ಬಹಳ ಧನ್ಯವಾದಗಳು. 
ಘೋಷಣೆ: ಇದು ಪ್ರಧಾನ ಮಂತ್ರಿ ಅವರ  ಮಾಡಲಾಗಿದೆ.

****



(Release ID: 1750469) Visitor Counter : 390