ಪ್ರಧಾನ ಮಂತ್ರಿಯವರ ಕಛೇರಿ

ಜಲಿಯನ್ ವಾಲಾ ಬಾಗ್ ಸ್ಮಾರಕದ ನವೀಕರಿಸಿದ ಸಂಕೀರ್ಣವನ್ನು ಆಗಸ್ಟ್ 28ರಂದು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಿಯವರು ಸ್ಮಾರಕದಲ್ಲಿ ವಸ್ತು ಪ್ರದರ್ಶನ ಗ್ಯಾಲರಿಗಳನ್ನು ಉದ್ಘಾಟಿಸಲಿದ್ದಾರೆ

Posted On: 26 AUG 2021 6:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಲಿಯನ್ ವಾಲಾ ಬಾಗ್ ಸ್ಮಾರಕದ ನವೀಕರಿಸಿದ ಸಂಕೀರ್ಣವನ್ನು 2021ರ ಆಗಸ್ಟ್ 28ರಂದು ಸಂಜೆ 6:25ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಸಮರ್ಪಿಸಲಿದ್ದಾರೆ. ಅವರು ಸ್ಮಾರಕದಲ್ಲಿ ಅಭಿವೃದ್ಧಿಪಡಿಸಲಾದ ವಸ್ತುಪ್ರದರ್ಶನ ಗ್ಯಾಲರಿಗಳನ್ನು ಉದ್ಘಾಟಿಸಲಿದ್ದಾರೆ. ಸಂಕೀರ್ಣವನ್ನು ಮೇಲ್ದರ್ಜೆಗೇರಿಸಲು ಸರಕಾರ ಕೈಗೊಂಡ ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಈ ಕಾರ್ಯಕ್ರಮವು ಅನಾವರಣಗೊಳಿಸಲಿದೆ.

ಕೈಗೊಂಡ ಉಪಕ್ರಮಗಳು

ಅನಗತ್ಯ ಮತ್ತು ಕಡಿಮೆ ಬಳಕೆಯಲ್ಲಿದ್ದ ಕಟ್ಟಡಗಳ ಮರುಬಳಕೆ ಮೂಲಕ ನಾಲ್ಕು ವಸ್ತು ಪ್ರದರ್ಶನ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ. ಆ ಅವಧಿಯಲ್ಲಿ ಪಂಜಾಬ್ ನಲ್ಲಿ ನಡೆದ ಘಟನೆಗಳ ಐತಿಹಾಸಿಕ ಮೌಲ್ಯವನ್ನು ಗ್ಯಾಲರಿಗಳಲ್ಲಿ ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತು 3ಡಿ ಮರುಸೃಷ್ಟಿ ಸೇರಿದಂತೆ ಆಡಿಯೋ-ವಿಶುವಲ್ ತಂತ್ರಜ್ಞಾನದ ಸಮ್ಮಿಳನದೊಂದಿಗೆ ಪ್ರದರ್ಶಿಸಲಾಗುತ್ತದೆ.  ಜೊತೆಗೆ ಕಲೆ ಮತ್ತು ಶಿಲ್ಪಕಲೆಯ ಕಲಾಕೃತಿಗಳನ್ನೂ ಇಲ್ಲಿ ಪ್ರದರ್ಶಿಸಲಾಗುವುದು.

1919ರ ಏಪ್ರಿಲ್ 13 ರಂದು ನಡೆದ ಘಟನೆಗಳನ್ನು ಪ್ರದರ್ಶಿಸಲು ಧ್ವನಿ ಮತ್ತು ಬೆಳಕಿನ ಪ್ರದರ್ಶನ ಏರ್ಪಡಿಸಲಾಗಿದೆ.

ಈ ಸಂಕೀರ್ಣದಲ್ಲಿ ಅನೇಕ ಅಭಿವೃದ್ಧಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಪಂಜಾಬ್‌ನ ಸ್ಥಳೀಯ ವಾಸ್ತುಶಿಲ್ಪ ಶೈಲಿಗೆ ಅನುಗುಣವಾಗಿ ವಿಸ್ತಾರವಾದ ಪಾರಂಪರಿಕ ಪುನಃಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಶಹೀದಿ ಬಾವಿಯನ್ನು ದುರಸ್ತಿ ಮಾಡಲಾಗಿದ್ದು, ಪುನಃಸ್ಥಾಪಿಸಲಾಗಿದೆ. ಬಾಗ್ನ ಹೃದಯಭಾಗವಾದ, ʻಜ್ವಾಲೆಯ ಸ್ಮಾರಕʼವನ್ನು ದುರಸ್ತಿ ಮಾಡಲಾಗಿದೆ ಮತ್ತು ಪುನಃಸ್ಥಾಪಿಸಲಾಗಿದೆ. ನೀರಿನ ಕೊಳವನ್ನು ʻಲಿಲ್ಲಿ ಕೊಳʼವಾಗಿ ಪುನರುಜ್ಜೀವಗೊಳಿಸಲಾಗಿದೆ. ಜೊತೆಗೆ ಸುಗುಮ ಚಲನವಲನಕ್ಕಾಗಿ ನಡಿಗೆ ಪಥಗಳನ್ನು ವಿಶಾಲಗೊಳಿಸಲಾಗಿದೆ.

ಸೂಕ್ತ ಸೂಚನಾ ಫಲಕಗಳನ್ನು ಒಳಗೊಂಡ ನವೀಕೃತ ನಡಿಗೆ ಪಥಗಳನ್ನು ಒಳಗೊಂಡಂತೆ ಹಲವಾರು ಹೊಸ ಮತ್ತು ಆಧುನಿಕ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಾಧನ ತಾಣಗಳಿಗೆ ಪ್ರಕಾಶಮಾನವಾದ ಬೆಳಕಿನ ವ್ಯವಸ್ಥೆ; ಸ್ಥಳೀಯ ಸಸ್ಯಗಳೊಂದಿಗೆ ಉದ್ಯಾನ ವ್ಯವಸ್ಥೆ; ಮತ್ತು ಉದ್ಯಾನದಾದ್ಯಂತ ಆಡಿಯೋ ನೋಡ್‌ಗಳ ಸ್ಥಾಪನೆ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗಿದೆ.  ಅಲ್ಲದೆ, ʻಸಾಲ್ವೇಶನ್ ಗ್ರೌಂಡ್ʼ, ʻಅಮರ್ ಜ್ಯೋತ್ʼ ಮತ್ತು ʻಫ್ಲ್ಯಾಗ್ ಮಾಸ್ಟ್ʼಗಾಗಿ ಹೊಸ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಕೇಂದ್ರ ಸಂಸ್ಕೃತಿ ಖಾತೆ ಸಚಿವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು, ಸಂಸ್ಕೃತಿ ಖಾತೆ ರಾಜ್ಯ ಸಚಿವರು, ರಾಜ್ಯಪಾಲರು ಮತ್ತು ಪಂಜಾಬ್ ಮುಖ್ಯಮಂತ್ರಿ; ಹರಿಯಾಣ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು; ಪಂಜಾಬ್‌ನ ಎಲ್ಲಾ ಲೋಕಸಭಾ ಮತ್ತು ರಾಜ್ಯಸಭಾ ಸಂಸದರು, ಜಲಿಯನ್ ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

***



(Release ID: 1749851) Visitor Counter : 189