ನೀತಿ ಆಯೋಗ
ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ ಲೈನ್ ಗೆ ಚಾಲನೆ ನೀಡಿದ ಹಣಕಾಸು ಸಚಿವರು
ಪ್ರಧಾನಮಂತ್ರಿಯವರ ದೃಷ್ಟಿಕೋನದಿಂದಾಗಿ ಸ್ವತ್ತು ನಗದೀಕರಣ ಕಾರ್ಯಕ್ರಮ ಒಂದು ರೂಪ ಪಡೆದಿದೆ : ಹಣಕಾಸು ಸಚಿವರು
ಕೇಂದ್ರ ಸರ್ಕಾರದ ಪ್ರಮುಖ ಸ್ವತ್ತುಗಳ ಮೂಲಕ 6.0 ಲಕ್ಷ ಕೋಟಿ ಸಾಮರ್ಥ್ಯದ ಸರಾಸರಿ ನಗದೀಕರಣದ ಅಂದಾಜು ಮಾಡಿದ ಎನ್.ಎಂ.ಪಿ.
Posted On:
23 AUG 2021 5:45PM by PIB Bengaluru
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಸಚಿವಾಲಯಗಳು ಮತ್ತು ಸಾರ್ವಜನಿಕ ವಲಯದ ಕಾಯಗಳ ಆಸ್ತಿ ನಗದೀಕರಣ ಪೈಪ್ ಲೈನ್ ಗೆ ಚಾಲನೆ ನೀಡಿದರು: 'ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ ಲೈನ್ (ಎನ್.ಎಂ.ಪಿ ಸಂಪುಟಗಳು 1 ಮತ್ತು 2)'. ಕೇಂದ್ರ ಬಜೆಟ್ 2021-22ರ ಅಡಿಯಲ್ಲಿ 'ಆಸ್ತಿ ನಗದೀಕರಣ'ದ ಆದೇಶದ ಆಧಾರದ ಮೇಲೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ನೀತಿ ಆಯೋಗವು ಈ ಪೈಪ್ ಲೈನ್ ಅನ್ನು ಅಭಿವೃದ್ಧಿಪಡಿಸಿದೆ. 2022 ರಿಂದ 2025ರ ಹಣಕಾಸು ವರ್ಷದವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಆಸ್ತಿಗಳ ನಗದೀಕರಣದ ಮೂಲಕ ಒಟ್ಟು 6.0 ಲಕ್ಷ ಕೋಟಿ ರೂ.ಗಳ ಸಾಮರ್ಥ್ಯವನ್ನು ಎನ್.ಎಂ.ಪಿ ಅಂದಾಜಿಸಿದೆ.
ಎನ್.ಎಂ.ಪಿ ಕುರಿತ ವರದಿಯ 1 ಮತ್ತು 2ನೇ ಸಂಪುಟಗಳನ್ನು ಇಂದು ಉಪಾಧ್ಯಕ್ಷ (ನೀತಿ ಆಯೋಗ), ಸಿಇಒ (ನೀತಿ ಆಯೋಗ) ಮತ್ತು ಈ ಪೈಪ್ ಲೈನ್ ಗೆ ಸಂಬಂಧಿಸಿದ ಮೂಲಸೌಕರ್ಯ ಸಂಬಂಧಿತ ಸಚಿವಾಲಯಗಳ ಅಂದರೆ -ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೆ, ವಿದ್ಯುತ್, ಕೊಳವೆ ಮಾರ್ಗ ಮತ್ತು ನೈಸರ್ಗಿಕ ಅನಿಲ, ನಾಗರಿಕ ವಿಮಾನಯಾನ, ಹಡಗು ಬಂದರುಗಳು ಮತ್ತು ಜಲಮಾರ್ಗಗಳು, ದೂರಸಂಪರ್ಕ, ಆಹಾರ ಮತ್ತು ನಾಗರಿಕ ಪೂರೈಕೆ, ಗಣಿಗಾರಿಕೆ, ಕಲ್ಲಿದ್ದಲು ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿಗಳ, ಕಾರ್ಯದರ್ಶಿ (ಆರ್ಥಿಕ ವ್ಯವಹಾರಗಳ ಇಲಾಖೆ) ಮತ್ತು ಕಾರ್ಯದರ್ಶಿ (ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ) ಇವರುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಕೇಂದ್ರ ಹಣಕಾಸು ಸಚಿವರು ಪೈಪ್ ಲೈನ್ ಗೆ ಚಾಲನೆ ನೀಡಿದ ಸಂದರ್ಭದಲ್ಲಿ, "ಭಾರತದ ಸಾಮಾನ್ಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವಂತಹ ಮೂಲ ಸೌಕರ್ಯಕ್ಕೆ ಸಾರ್ವತ್ರಿಕ ಪ್ರವೇಶದ ಬಗ್ಗೆ ಸದಾ ವಿಶ್ವಾಸವಿಟ್ಟಿರುವ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನದಿಂದಾಗಿ ಆಸ್ತಿ ನಗದೀಕರಣ ಕಾರ್ಯಕ್ರಮವು ರೂಪುಗೊಂಡಿದೆ. ನಗದೀಕರಣದ ಮೂಲಕ ಸ್ವತ್ತು ಸೃಷ್ಟಿಯ ತತ್ವವನ್ನು ಆಧರಿಸಿದ ಆಸ್ತಿ ನಗದೀಕರಣವು ಹೊಸ ಮೂಲಸೌಕರ್ಯ ಸೃಷ್ಟಿಗಾಗಿ ಖಾಸಗಿ ವಲಯದ ಹೂಡಿಕೆಯನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇದು ಅಗತ್ಯವಾಗಿದೆ, ಆ ಮೂಲಕ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡಲಾಗುತ್ತದೆ ಮತ್ತು ಒಟ್ಟಾರೆ ಸಾರ್ವಜನಿಕ ಕಲ್ಯಾಣಕ್ಕಾಗಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳನ್ನು ತಡೆರಹಿತವಾಗಿ ಸಂಯೋಜಿಸುತ್ತದೆ." ಎಂದರು. ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಮತ್ತು ಖಾಸಗಿ ವಲಯದ ಹೂಡಿಕೆಗಳನ್ನು ಉತ್ತೇಜಿಸಲು ಪ್ರಸ್ತುತ ಸರ್ಕಾರ ಕೈಗೊಂಡಿರುವ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಶ್ರೀ ಸೀತಾರಾಮನ್ ಅವರು ವಿವರಿಸಿದರು. ಇದರಲ್ಲಿ ಇತ್ತೀಚಿನ 'ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ಆರ್ಥಿಕ ನೆರವಿನ ಯೋಜನೆ'ಯೂ ಸೇರಿದೆ, ಇದು ರಾಜ್ಯ ಸರ್ಕಾರಗಳ ಮಾಲೀಕತ್ವದ ಆಸ್ತಿಯನ್ನು ತ್ವರಿತವಾಗಿ ಶೋಧಿಸುವ ಗ್ರೀನ್ ಫೀಲ್ಡ್ ಮೂಲಸೌಕರ್ಯಕ್ಕಾಗಿ ಮರುಬಳಕೆ ಮಾಡಲು ರಾಜ್ಯ ಸರ್ಕಾರಗಳನ್ನು ಉತ್ತೇಜಿಸುತ್ತದೆ.
ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ನೀತಿ ಆಯೋಗದ ಉಪಾಧ್ಯಕ್ಷರು "ಸಾಂಸ್ಥಿಕ ಮತ್ತು ದೀರ್ಘಕಾಲೀನ ತಾಳ್ಮೆಯ ಬಂಡವಾಳವನ್ನು ಶೋಧಿಸುವ ಮಾಡುವ ಮೂಲಕ ಬ್ರೌನ್ ಫೀಲ್ಡ್ ಸಾರ್ವಜನಿಕ ವಲಯದ ಸ್ವತ್ತುಗಳಲ್ಲಿ ಹೂಡಿಕೆಯ ಮೌಲ್ಯವನ್ನು ಅನ್ ಲಾಕ್ ಮಾಡುವುದು ಕಾರ್ಯಕ್ರಮದ ಕಾರ್ಯತಂತ್ರದ ಉದ್ದೇಶವಾಗಿದೆ, ನಂತರ ಅದನ್ನು ಮತ್ತಷ್ಟು ಸಾರ್ವಜನಿಕ ಹೂಡಿಕೆಗಳಿಗೆ ಬಳಸಿಕೊಳ್ಳಬಹುದು" ಎಂದು ಹೇಳಿದರು. ಖಾಸಗೀಕರಣ ಅಥವಾ ಸ್ವತ್ತುಗಳ ಅಗ್ಗದ ಮಾರಾಟಕ್ಕೆ ಪ್ರತಿಯಾಗಿ ರಚನಾತ್ಮಕ ಒಪ್ಪಂದದ ಪಾಲುದಾರಿಕೆಯ ಮೂಲಕ ಅಂತಹ ಅನ್ ಲಾಕ್ ಮಾಡುವ ವಿಧಾನಕ್ಕೆ ಇದು ಅವಕಾ ನೀಡುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ವಿವಿಧ ಮೂಲಸೌಕರ್ಯ ವಲಯಗಳಲ್ಲಿ ಸಂಭಾವ್ಯ ನಗದೀಕರಣ-ಸಿದ್ಧ ಯೋಜನೆಗಳನ್ನು ಗುರುತಿಸಲು ಮಧ್ಯಮಾವಧಿ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲು ಎನ್.ಎಂ.ಪಿ.ಯನ್ನು ಯೋಜಿಸಿದೆ.
ನೀತಿ ಆಯೋಗದ ಸಿಇಒ, "ಸಾರ್ವಜನಿಕ ಪ್ರಾಧಿಕಾರಗಳು ಉಪಕ್ರಮದ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಹೂಡಿಕೆದಾರರು ತಮ್ಮ ಭವಿಷ್ಯದ ಚಟುವಟಿಕೆಗಳನ್ನು ಯೋಜಿಸಲು ವ್ಯವಸ್ಥಿತ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಎನ್.ಎಂ.ಪಿ ಹೊಂದಿದೆ. ಆಸ್ತಿ ನಗದೀಕರಣವನ್ನು ಕೇವಲ ಹಣಕಾಸು ವ್ಯವಸ್ಥೆಯಾಗಿ ನೋಡದೆ, ಖಾಸಗಿ ವಲಯದ ಸಂಪನ್ಮೂಲ ದಕ್ಷತೆಗಳು ಮತ್ತು ವಿಕಸನಗೊಳ್ಳುತ್ತಿರುವ ಜಾಗತಿಕ ಮತ್ತು ಆರ್ಥಿಕ ವಾಸ್ತವತೆಗೆ ಕ್ರಿಯಾತ್ಮಕವಾಗಿ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಪರಿಗಣಿಸಿ ಮೂಲಸೌಕರ್ಯ ಕಾರ್ಯಾಚರಣೆಗಳು, ವರ್ಧನೆ ಮತ್ತು ನಿರ್ವಹಣೆಯಲ್ಲಿ ಒಟ್ಟಾರೆ ಮಾದರಿ ಬದಲಾವಣೆಯಾಗಿ ನೋಡಬೇಕಾಗಿದೆ. ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಗಳು ಮತ್ತು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ ಗಳಂತಹ ಹೊಸ ಮಾದರಿಗಳು ಕೇವಲ ಹಣಕಾಸು ಮತ್ತು ವ್ಯೂಹಾತ್ಮಕ ಹೂಡಿಕೆದಾರರಿಗೆ ಮಾತ್ರವಲ್ಲದೆ ಸಾಮಾನ್ಯ ಜನರು ಈ ಆಸ್ತಿ ವರ್ಗದಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತವೆ, ಆ ಮೂಲಕ ಹೂಡಿಕೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಆದ್ದರಿಂದ ಭಾರತದ ಮೂಲಸೌಕರ್ಯವನ್ನು ನಿಜವಾಗಿಯೂ ವಿಶ್ವದರ್ಜೆಗೆ ತರಲು ಎನ್.ಎಂ.ಪಿ.ದಾಖಲೆಯನ್ನು ನಿರ್ಣಾಯಕ ಹೆಜ್ಜೆ ಎಂದು ನಾನು ಪರಿಗಣಿಸುತ್ತೇನೆ." ಎಂದರು.
ನೀತಿ ಆಯೋಗ, ಹಣಕಾಸು ಸಚಿವಾಲಯ ಮತ್ತು ಈ ನಿಟ್ಟಿನ ಸಚಿವಾಲಯಗಳು ಕೈಗೊಂಡ ಬಹು-ಪಾಲುದಾರರ ಸಮಾಲೋಚನೆಗಳ ಮೂಲಕ ಕ್ರೋಡೀಕರಿಸಿ ಒಳನೋಟಗಳು, ಪ್ರತಿಕ್ರಿಯೆ ಮತ್ತು ಅನುಭವಗಳ ಸಾಕಾರವೇ ಎನ್.ಎಂಪಿ. ನೀತಿ ಆಯೋಗವು ಬಾಧ್ಯಸ್ಥರರೊಂದಿಗೆ ಹಲವಾರು ಸುತ್ತಿನ ಚರ್ಚೆ ನಡೆಸಿದೆ. ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಅಂತರ ಸಚಿವರ ಸಭೆಯಲ್ಲಿ ಈ ಪೈಪ್ ಲೈನ್ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಆದ್ದರಿಂದ ಇದು ಸರ್ಕಾರದ ಸಂಪೂರ್ಣ ಉಪಕ್ರಮವಾಗಿದೆ ಎಂದರು.
ಎಲ್ಲಾ ಮೂಲಸೌಕರ್ಯ ಸಚಿವಾಲಯಗಳ ಕಾರ್ಯದರ್ಶಿಗಳು ನೀತಿ ಆಯೋಗ ಮತ್ತು ಹಣಕಾಸು ಸಚಿವಾಲಯದೊಂದಿಗೆ ಜೊತೆಗೂಡಿ ಕೆಲಸ ಮಾಡುವ ಮೂಲಕ ಎನ್.ಎಂ.ಪಿ. ಅಡಿಯಲ್ಲಿ ನಿಗದಿಪಡಿಸಿದ ತಮ್ಮ ಗುರಿಗಳನ್ನು ಸಾಧಿಸುವ ತಮ್ಮ ಸಂಕಲ್ಪವನ್ನು ದೃಢಪಡಿಸಿದರು.
ಆಸ್ತಿ ನಗದೀಕರಣ ಕಾರ್ಯಕ್ರಮದ ಒಟ್ಟಾರೆ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಬಹು-ಪದರ ಸಾಂಸ್ಥಿಕ ಕಾರ್ಯವಿಧಾನದ ಭಾಗವಾಗಿ, ಸಂಪುಟ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆಸ್ತಿ ನಗದೀಕರಣ (ಸಿಜಿಎಎಂ) ಕುರಿತ ಕಾರ್ಯದರ್ಶಿಗಳ ಉನ್ನತಾಧಿಕಾರದ ಪ್ರಮುಖರ ಗಂಪು ರಚಿಸಲಾಗಿದೆ. ಸುಧಾರಿತ ಮೂಲಸೌಕರ್ಯ ಗುಣಮಟ್ಟ ಮತ್ತು ಕಾರ್ಯಾಚರಣೆಗಳು ಮತ್ತು ನಿರ್ವಹಣೆಯ ಮೂಲಕ ಸಾರ್ವಜನಿಕ ವಲಯ ಮತ್ತು ಖಾಸಗಿ ಹೂಡಿಕೆದಾರರು/ ಡೆವಲಪರ್ ಗಳಿಗೆ ಆಸ್ತಿ ನಗದೀಕರಣ ಕಾರ್ಯಕ್ರಮವನ್ನು ಮೌಲ್ಯ-ಸಂಚಯಕ – ಕಾರ್ಯಾದೇಶ ಮಾಡಲು ಸರ್ಕಾರ ಬದ್ಧವಾಗಿದೆ. ಇದು ' ಅತ್ಯುತ್ತಮ ದರ್ಜೆಯ ಮೂಲ ಸೌಕರ್ಯದ ಮೂಲಕ ಸಾಮಾನ್ಯ ನಾಗರಿಕರ ಪಾಲ್ಗೊಳ್ಳುವಿಕೆ ಮತ್ತು ಸಬಲೀಕರಣ' ಎಂಬ ವಿಶಾಲ ಮತ್ತು ದೀರ್ಘಕಾಲೀನ ದೃಷ್ಟಿಕೋನವನ್ನು ಸಾಧಿಸುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ಮಾನಿಟೈಸೇಷನ್ ಪೈಪ್ ಲೈನ್: ಒಂದು ಪರಿಚಯ
ಕೇಂದ್ರ ಬಜೆಟ್ 2021-22 ಸಾರ್ವಜನಿಕ ಮೂಲಸೌಕರ್ಯ ಸ್ವತ್ತುಗಳನ್ನು ನಿರ್ವಹಿಸುವ ನಗದೀಕರಣವನ್ನು ಸುಸ್ಥಿರ ಮೂಲಸೌಕರ್ಯ ಹಣಕಾಸು ಪ್ರಮುಖ ಸಾಧನವೆಂದು ಗುರುತಿಸಿದೆ. ಈ ನಿಟ್ಟಿನಲ್ಲಿ, ಬಜೆಟ್ ಸಂಭಾವ್ಯ ಬ್ರೌನ್ ಫೀಲ್ಡ್ ಮೂಲಸೌಕರ್ಯ ಸ್ವತ್ತುಗಳ 'ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ (ಎನ್.ಎಂ.ಪಿ) ' ತಯಾರಿಸಲು ಅವಕಾಶ ನೀಡಿತು. ನೀತಿ ಆಯೋಗವು ಮೂಲಸೌಕರ್ಯ ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚಿಸಿ ಎನ್.ಎಂ.ಪಿ.ಕುರಿತ ವರದಿಯನ್ನು ಸಿದ್ಧಪಡಿಸಿದೆ.
ಖಾಸಗಿ ವಲಯಕ್ಕೆ ಸಂಭಾವ್ಯ ಸ್ವತ್ತುಗಳ ಮೇಲಿನ ನೋಟದೊಂದೆ, ಸಾರ್ವಜನಿಕ ಆಸ್ತಿ ಮಾಲೀಕರಿಗೆ ಕಾರ್ಯಕ್ರಮದ ಮಧ್ಯಮಾವಧಿ ಮಾರ್ಗಸೂಚಿಯನ್ನು ಒದಗಿಸುವ ಗುರಿಯನ್ನು ಎನ್.ಎಂ.ಪಿ.ಹೊಂದಿದೆ; ಎನ್.ಎಂ.ಪಿ.ಕುರಿತ ವರದಿಯನ್ನು ಎರಡು ಸಂಪುಟಗಳಾಗಿ ಸಂಯೋಜಿಸಲಾಗಿದೆ. ಸಂಪುಟ 1 ಅನ್ನು ಮಾರ್ಗದರ್ಶನ ಪುಸ್ತಕವಾಗಿ ರೂಪಿಸಲಾಗಿದೆ, ಇದು ಆಸ್ತಿ ನಗದೀಕರಣದ ಪರಿಕಲ್ಪನೆಯ ವಿಧಾನಗಳು ಮತ್ತು ಸಂಭಾವ್ಯ ಮಾದರಿಗಳನ್ನು ವಿವರಿಸುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರಮುಖ ಮೂಲಸೌಕರ್ಯ ಸ್ವತ್ತುಗಳ ಪೈಪ್ ಲೈನ್ ಸೇರಿದಂತೆ ನಗದೀಕರಣದ ನಿಜವಾದ ಮಾರ್ಗಸೂಚಿಯೇ ಸಂಪುಟ 2 ಆಗಿದೆ.
ಚೌಕಟ್ಟು
ಇದರಲ್ಲಿ ಲಭ್ಯವಿರುವ ಒಟ್ಟು ಆಸ್ತಿ ನೆಲೆಯ ಮೌಲ್ಯಮಾಪನದ ಜೊತೆಗೆ ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳ ಒಳಹರಿವು ಮತ್ತು ಸಮಾಲೋಚನೆಗಳ ಆಧಾರದ ಮೇಲೆ ಪೈಪ್ ಲೈನ್ ಅನ್ನು ತಯಾರಿಸಲಾಗಿದೆ. ಬಂಡವಾಳ ಹಿಂತೆಗೆತ ಮತ್ತು ಪ್ರಮುಖವಲ್ಲದ ಸ್ವತ್ತುಗಳ ನಗದೀಕರಣದ ಮೂಲಕ ನಗದೀಕರಣವನ್ನು ಎನ್.ಎಂ.ಪಿ.ಯಲ್ಲಿ ಸೇರಿಸಲಾಗಿಲ್ಲ. ಇದಲ್ಲದೆ, ಪ್ರಸ್ತುತ, ಮೂಲಸೌಕರ್ಯ ವಲಯಗಳಲ್ಲಿ ಕೇಂದ್ರ ಸರ್ಕಾರದ ಈ ನಿಟ್ಟಿನ ಸಚಿವಾಲಯಗಳು ಮತ್ತು ಸಿಪಿಎಸ್ಇಗಳ ಆಸ್ತಿಗಳನ್ನು ಮಾತ್ರ ಸೇರಿಸಲಾಗಿದೆ. ರಾಜ್ಯಗಳಿಂದ ಆಸ್ತಿ ಪೈಪ್ ಲೈನ್ ಸಮನ್ವಯ ಮತ್ತು ಕ್ರೋಡೀಕರಣದ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ ಮತ್ತು ಅದನ್ನು ಸೂಕ್ತ ಸಮಯದಲ್ಲಿ ಸೇರಿಸಲು ಯೋಜಿಸಲಾಗಿದೆ.
ಪ್ರಮುಖ ಆಸ್ತಿ ನಗದೀಕರಣ ಕುರಿತ ಚೌಕಟ್ಟು ಮೂರು ಪ್ರಮುಖ ಕಡ್ಡಾಯಗಳನ್ನೊಳಗೊಂಡಿದೆ.
1. ನಗದೀಕರಣದ ‘ಹಕ್ಕು’ ಹೊರತು ‘ಮಾಲಿಕತ್ವವಲ್ಲ’, ವಹಿವಾಟಿನ ಅವಧಿಯ ಕೊನೆಯಲ್ಲಿ ಆಸ್ತಿಯನ್ನು ಮತ್ತೆ ಹಿಂತಿರುಗಿಸಬೇಕು.
2. ಬ್ರೌನ್ ಫೀಲ್ಡ್ ಅಪಾಯರಹಿತ ಆಸ್ತಿ, ಸ್ಥಿರ ಆದಾಯ ಹರಿವು
3. ಕಟ್ಟುನಿಟ್ಟಿನ ಕೆಪಿಐಗಳು ಮತ್ತು ಗುಣಮಟ್ಟದ ಕಾರ್ಯಕ್ಷಮತೆಯೊಂದಿಗೆ ವಿವರಣಾತ್ಮಕ ಒಪ್ಪಂದದ ಚೌಕಟ್ಟಿನ ವಿನ್ಯಾಸಿತ ಪಾಲುದಾರಿಕೆ
ಇದು ಆದಾಯ ಹಕ್ಕುಗಳ ಸುತ್ತಲೂ ರಚಿಸಲಾದ ಒಟ್ಟಾರೆ ವ್ಯವಹಾರದೊಂದಿಗೆ ಸ್ಥಿರ ಆದಾಯ ಉತ್ಪಾದನಾ ಪ್ರೊಫೈಲ್ ನೊಂದಿಗೆ ಅಪಾಯ ರಹಿತ ಮತ್ತು ಬ್ರೌನ್ ಫೀಲ್ಡ್ ಸ್ವತ್ತುಗಳ ಆಯ್ಕೆಯನ್ನು ಒಳಗೊಂಡಿದೆ. ಆದ್ದರಿಂದ, ಈ ರಚನೆಗಳ ಅಡಿಯಲ್ಲಿ ಆಸ್ತಿಗಳ ಪ್ರಾಥಮಿಕ ಮಾಲೀಕತ್ವವು, ವಹಿವಾಟು ಕೊನೆಯಲ್ಲಿ ಸಾರ್ವಜನಿಕ ಪ್ರಾಧಿಕಾರಕ್ಕೆ ಸ್ವತ್ತುಗಳನ್ನು ಹಿಂತಿರುಗಿಸುವ ಚೌಕಟ್ಟಿನೊಂದಿಗೆ ಸರ್ಕಾರದೊಂದಿಗೇ ಮುಂದುವರಿಯುತ್ತದೆ.
ಅಂದಾಜು ಸಾಮರ್ಥ್ಯ
ಮೂಲಸೌಕರ್ಯ ಸೃಷ್ಟಿಯು ನಗದೀಕರಣದೊಂದಿಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದೆ ಎಂದು ಪರಿಗಣಿಸಿ, ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ (ಎನ್.ಐ.ಪಿ) ಅಡಿಯಲ್ಲಿ ಸಮತೋಲನ ಅವಧಿಯೊಂದಿಗೆ ಸಹ-ಟರ್ಮಿನಸ್ ಆಗಲು ಎನ್.ಎಂ.ಪಿ.ಯ ಅವಧಿಯನ್ನು ನಿರ್ಧರಿಸಲಾಗಿದೆ.
2022-2025ರ ಹಣಕಾಸು ವರ್ಷದ, ನಾಲ್ಕು ವರ್ಷಗಳ ಅವಧಿಯಲ್ಲಿ ಎನ್.ಎಂ.ಪಿ. ಅಡಿಯಲ್ಲಿ ಸರಾಸರಿ ಆಸ್ತಿ ಪೈಪ್ ಲೈನ್, 6.0 ಲಕ್ಷ ಕೋಟಿ ರೂ. ಎಂದು ತಿಳಿಸಲಾಗಿದೆ. ಅಂದಾಜು ಮೌಲ್ಯವು ಎನ್.ಐ.ಪಿ. (43 ಲಕ್ಷ ಕೋಟಿ ರೂ.) ಅಡಿಯಲ್ಲಿ ಕೇಂದ್ರಕ್ಕೆ ಉದ್ದೇಶಿತ ವೆಚ್ಚಕ್ಕಿಂತ ಶೇ. 14 ಗೆ ಅನುಗುಣವಾಗಿದೆ. ಇದರಲ್ಲಿ 12ಕ್ಕೂ ಹೆಚ್ಚು ಈ ನಿಟ್ಟಿನ ಸಚಿವಾಲಯಗಳು ಮತ್ತು 20ಕ್ಕೂ ಹೆಚ್ಚು ಆಸ್ತಿ ವರ್ಗಗಳು ಸೇರಿವೆ. ರಸ್ತೆಗಳು, ಬಂದರುಗಳು, ವಿಮಾನ ನಿಲ್ದಾಣಗಳು, ರೈಲ್ವೆ, ಉಗ್ರಾಣ, ಅನಿಲ ಮತ್ತು ಉತ್ಪನ್ನ ಪೈಪ್ ಲೈನ್, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ, ಗಣಿಗಾರಿಕೆ, ದೂರಸಂಪರ್ಕ, ಕ್ರೀಡಾಂಗಣ, ಆತಿಥ್ಯ ಮತ್ತು ವಸತಿಗಳೂ ಸೇರಿವೆ.
2022-25ನೇ ಹಣಕಾಸು ವರ್ಷದಲ್ಲಿ ವಲಯವಾರು ನಗದೀಕರಣ ಪೈಪ್ ಲೈನ್ (ಕೋಟಿ ರೂ.ಗಳಲ್ಲಿ)
