ಪ್ರಧಾನ ಮಂತ್ರಿಯವರ ಕಛೇರಿ

ಸೋಮನಾಥದಲ್ಲಿ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದ ಪ್ರಧಾನಮಂತ್ರಿ


ಭಾರತದ ಪ್ರಾಚೀನ ವೈಭವದ ಪುನಶ್ಚೇತನಕ್ಕಾಗಿ ಅದಮ್ಯ ಇಚ್ಛಾಶಕ್ತಿಯನ್ನು ತೋರಿದ ಸರ್ದಾರ್ ಪಟೇಲ್ ಅವರಿಗೆ ನಮನ

ವಿಶ್ವನಾಥನಿಂದ ಸೋಮನಾಥದವರೆಗೆ ಹಲವಾರು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ ಲೋಕಮಾತಾ ಅಹಲ್ಯಾಬಾಯಿ ಹೋಲ್ಕರ್ ಸ್ಮರಣೆ

ಧಾರ್ಮಿಕ ಪ್ರವಾಸೋದ್ಯಮದಲ್ಲಿ ಹೊಸ ಸಾಧ್ಯತೆಗಳನ್ನು ನಾವು ಹುಡುಕಬೇಕು ಮತ್ತು ತೀರ್ಥಯಾತ್ರೆ ಮತ್ತು ಸ್ಥಳೀಯ ಆರ್ಥಿಕತೆಯ ನಡುವಿನ ಸಂಪರ್ಕವನ್ನು ಬಲಪಡಿಸುವುದು ಎಲ್ಲ ಕಾಲಘಟ್ಟದ ಬೇಡಿಕೆಯಾಗಿದೆ: ಪ್ರಧಾನಮಂತ್ರಿ

ವಿನಾಶಕಾರಿ ಶಕ್ತಿಗಳು, ಭಯೋತ್ಪಾದನೆಯ ಆಧಾರದ ಮೇಲೆ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸುವ ಆಲೋಚನೆ ಮಾಡುತ್ತವೆ, ಅವು ತಾತ್ಕಾಲಿಕವಾಗಿ ಪ್ರಾಬಲ್ಯ ಸಾಧಿಸಬಹುದು, ಆದರೆ,  ಅದರ ಅಸ್ತಿತ್ವವು ಎಂದಿಗೂ ಶಾಶ್ವತವಲ್ಲ, ಅದು ದೀರ್ಘಕಾಲದವರೆಗೆ ಮಾನವೀಯತೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಅಂತಹ ಸಿದ್ಧಾಂತಗಳ ಬಗ್ಗೆ ಜಗತ್ತು ಭಯಭೀತವಾಗಿರುವ ಸಮಯದಲ್ಲಿ, ಕೆಲವು ದಾಳಿಕೋರರು ಸೋಮನಾಥವನ್ನು ಕೆಡವಿದ್ದರೂ, ಅದರೂ ಅದು ಇಂದಿಗೂ ಅಚಲವಾಗಿ ನಿಂತಿದೆ ಎಂಬುದು ಅಷ್ಟೇ ನಿಜವಾಗಿದೆ: ಪ್ರಧಾನಮಂತ್ರಿ

ದೇಶವು ಕಠಿಣ ಸಮಸ್ಯೆಗಳಿಗೂ ಸೌಹಾರ್ದಯುತ ಪರಿಹಾರ ಪಡೆಯುವತ್ತ ಸಾಗುತ್ತಿದೆ. ಆಧುನಿಕ ಭಾರತದ ವೈಭವದ ಉಜ್ವಲ ಸ್ತಂಭವಾಗಿ ರಾಮ ಮಂದಿರದ ರೂಪದಲ್ಲಿ  ತಲೆಎತ್ತಲಿದೆ: ಪ್ರಧಾನಮಂತ್ರಿ

ನಮಗೆ ಇತಿಹಾಸ ಮತ್ತು ನಂಬಿಕೆಯ ಸಾರವೆಂದರೆ ಎಲ್ಲರೊಂದಿಗೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ

Posted On: 20 AUG 2021 1:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗುಜರಾತ್ ನ ಸೋಮನಾಥದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಉದ್ಘಾಟನೆಗೊಂಡ ಯೋಜನೆಗಳಲ್ಲಿ ಸೋಮನಾಥ್ ಪ್ರೊಮೆನೇಡ್, ಸೋಮನಾಥ್ ಪ್ರದರ್ಶನ ಕೇಂದ್ರ  ಮತ್ತು ಹಳೆಯ (ಜುನಾ) ಸೋಮನಾಥ್ ನ ಪುನರ್ನಿರ್ಮಿಸಲಾದ ದೇವಾಲಯದ ಆವರಣವೂ ಸೇರಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಶ್ರೀ ಪಾರ್ವತಿ ದೇವಾಲಯದ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಕೇಂದ್ರ ಗೃಹ ಸಚಿವ ಶ್ರೀ ಲಾಲ್ ಕೃಷ್ಣ ಆಡ್ವಾಣಿ, ಗುಜರಾತ್ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಶ್ವದಾದ್ಯಂತ ಸೋಮನಾಥ ಭಕ್ತರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಭಾರತದ ಪ್ರಾಚೀನ ವೈಭವದ ಪುನಶ್ಚೇತನಕ್ಕಾಗಿ ಅದಮ್ಯ ಇಚ್ಛಾಶಕ್ತಿಯನ್ನು ತೋರಿಸಿದ ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಿದರು. ಸರ್ದಾರ್ ಪಟೇಲ್ ಅವರು ಸೋಮನಾಥ ಮಂದಿರವನ್ನು ಸ್ವತಂತ್ರ ಭಾರತದ ಸ್ವತಂತ್ರ ಮನೋಭಾವದೊಂದಿಗೆ ಜೋಡಿಸಿದ್ದರು. 75ನೇ ಸ್ವಾತಂತ್ರ್ಯ ವರ್ಷದಲ್ಲಿ ಸರ್ದಾರ್ ಸಾಹೇಬ್ ಅವರ ಪ್ರಯತ್ನಗಳನ್ನು ನಾವು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ, ಸೋಮನಾಥ ದೇವಾಲಯಕ್ಕೆ ಹೊಸ ವೈಭವವನ್ನು ನೀಡುತ್ತಿದ್ದೇವೆ ಎಂಬುದು ನಮ್ಮ ಸೌಭಾಗ್ಯ ಎಂದು ಶ್ರೀ ಮೋದಿ ಹೇಳಿದರು.  ವಿಶ್ವನಾಥನಿಂದ ಸೋಮನಾಥದವರೆಗೆ ಹಲವಾರು ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ ಲೋಕಮಾತಾ ಅಹಲ್ಯಾಬಾಯಿ ಹೋಲ್ಕರ್ ಅವರನ್ನು ಪ್ರಧಾನಮಂತ್ರಿ ಸ್ಮರಿಸಿದರು. ದೇಶವು ತನ್ನ ಜೀವಿತದಲ್ಲಿ ಆಧುನಿಕತೆ ಮತ್ತು ಸಂಪ್ರದಾಯದ ಮಿಶ್ರಣದಿಂದ ಸ್ಫೂರ್ತಿ ಪಡೆದು ಮುಂದುವರಿಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಏಕತಾ ಪ್ರತಿಮೆ ಮತ್ತು ಕಚ್ ನ ಪರಿವರ್ತನೆಯಂತಹ ಉಪಕ್ರಮಗಳಲ್ಲಿ ಆಧುನಿಕತೆಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸುವ ಫಲಿತಾಂಶಗಳನ್ನು ಗುಜರಾತ್ ಹತ್ತಿರದಿಂದ ನೋಡಿದೆ ಎಂದು ಪ್ರಧಾನಮಂತ್ರಿ  ಹೇಳಿದರು. 'ನಾವು  ಧಾರ್ಮಿಕ ಪ್ರವಾಸೋದ್ಯಮದಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವುದು ಮತ್ತು ತೀರ್ಥಯಾತ್ರೆ ಮತ್ತು ಸ್ಥಳೀಯ ಆರ್ಥಿಕತೆಯ ನಡುವಿನ ಸಂಪರ್ಕವನ್ನು ಬಲಪಡಿಸುವುದು ಎಲ್ಲ ಕಾಲಘಟ್ಟದ ಬೇಡಿಕೆಯಾಗಿದೆ' ಎಂದು ಪ್ರಧಾನಮಂತ್ರಿ ಗಮನ ಸೆಳೆದರು.

ಶಿವ ಸರ್ವನಾಶ ಮತ್ತು ವಿನಾಶದ ನಡುವೆಯೂ ವಿಕಾಸ ಮತ್ತು ಸೃಷ್ಟಿಗೆ ಕಾರಣನಾಗಿದ್ದಾನೆ ಎಂದು ಪ್ರಧಾನಮಂತ್ರಿ ಹೇಳಿದರು. ಶಿವ ಅವಿನಾಶ,  ಅವನು ಅವ್ಯಕ್ತ ಮತ್ತು ಅನಾದಿಯಾಗಿದ್ದಾನೆ. 'ಶಿವನ ಮೇಲಿನ ನಮ್ಮ ನಂಬಿಕೆಯು ನಮ್ಮ ಅಸ್ತಿತ್ವದ ಬಗ್ಗೆ ಸಮಯದ ಮಿತಿಗಳನ್ನು ಮೀರಿ ಅರಿವು ಮೂಡಿಸುತ್ತದೆ, ಸಮಯದ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ' ಎಂದು ಪ್ರಧಾನಮಂತ್ರಿ ಹೇಳಿದರು.

ಪವಿತ್ರ ದೇವಾಲಯದ ಇತಿಹಾಸವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಯವರು, ದೇವಾಲಯವನ್ನು ಪದೇ ಪದೇ ನಾಶಪಡಿಸಲಾಯಿತು ಆದರೆ, ಪ್ರತಿ ದಾಳಿಯ ನಂತರವೂ ದೇವಾಲಯ ಮತ್ತೆ ಎಂದಿನಂತೆ ಎದ್ದು ನಿಂತಿತು ಎಂದು ನೆನಪಿಸಿಕೊಂಡರು. 'ಸತ್ಯವನ್ನು ಸುಳ್ಳಿನಿಂದ ಸೋಲಿಸಲು ಸಾಧ್ಯವಿಲ್ಲ ಮತ್ತು ಭಯೋತ್ಪಾದನೆಯಿಂದ ಧಾರ್ಮಿಕ ನಂಬಿಕೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದು ನಂಬಿಕೆಯ ಸಂಕೇತವಾಗಿದೆ.' "ವಿನಾಶಕಾರಿ ಶಕ್ತಿಗಳು, ಭಯೋತ್ಪಾದನೆಯ ಆಧಾರದ ಮೇಲೆ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸುವ ಆಲೋಚನೆ ಮಾಡಿವೆ, ಅವು ತಾತ್ಕಾಲಿಕವಾಗಿ ಪ್ರಾಬಲ್ಯ ಸಾಧಿಸಬಹುದು, ಆದರೆ,  ಅದರ ಅಸ್ತಿತ್ವವು ಎಂದಿಗೂ ಶಾಶ್ವತವಲ್ಲ, ಅದು ದೀರ್ಘಕಾಲದವರೆಗೆ ಮಾನವೀಯತೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೆಲವು ದಾಳಿಕೋರರು ಸೋಮನಾಥವನ್ನು ಕೆಡವುತ್ತಿದ್ದಾಗ, ಅಂತಹ ಸಿದ್ಧಾಂತಗಳ ಬಗ್ಗೆ ಜಗತ್ತು ಭಯಭೀತವಾಗಿರುವ ಇಂದಿಗೂ, ಸೋಮನಾಥ ಇರುವುದು ಅಷ್ಟೇ ಸತ್ಯವಾಗಿದೆ." ಎಂದು ಪ್ರಧಾನಮಂತ್ರಿ ಹೇಳಿದರು.

ಸೋಮನಾಥ ದೇವಾಲಯವನ್ನು ಬೃಹತ್ ಜೀರ್ಣೋದ್ಧಾರಕ್ಕೆ ಪುನರ್ ನಿರ್ಮಾಣಕ್ಕೆ ಶತಮಾನಗಳ ಬಲವಾದ ಇಚ್ಛಾಶಕ್ತಿ ಮತ್ತು ಸೈದ್ಧಾಂತಿಕ ನಿರಂತರತೆಯೇ ಕಾರಣ ಎಂದು ಪ್ರಧಾನಮಂತ್ರಿ ಹೇಳಿದರು. 'ರಾಜೇಂದ್ರ ಪ್ರಸಾದ್ ವರು, ಸರ್ದಾರ್ ಪಟೇಲ್ ಮತ್ತು ಕೆ.ಎಂ. ಮುನ್ಷಿ ಅವರಂತಹ ಮಹಾನ್ ವ್ಯಕ್ತಿಗಳು ಸ್ವಾತಂತ್ರ್ಯದ ನಂತರವೂ ಈ ಅಭಿಯಾನಕ್ಕೆ ಸಂಕಷ್ಟಗಳನ್ನು ಎದುರಿಸಿದರು. ಆದರೂ, ಅಂತಿಮವಾಗಿ ಸೋಮನಾಥ ಮಂದಿರವು 1950ರಲ್ಲಿ ಆಧುನಿಕ ಭಾರತದ ದೈವಿಕ ಸ್ತಂಭವಾಗಿ ಸ್ಥಾಪನೆಯಾಯಿತು. ದೇಶವು ಕಠಿಣ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರಗಳತ್ತ ಸಾಗುತ್ತಿದೆ. ಆಧುನಿಕ ಭಾರತದ ವೈಭವದ ಉಜ್ವಲ ಸ್ತಂಭವು ರಾಮ ಮಂದಿರದ ರೂಪದಲ್ಲಿ ತಲೆ ಎತ್ತುತ್ತಿದೆ ಎಂದು ಅವರು ಹೇಳಿದರು.

ಇತಿಹಾಸದಿಂದ ಕಲಿತು ನಮ್ಮ ವರ್ತಮಾನವನ್ನು  ಸುಧಾರಿಸಲು ಮತ್ತು ಹೊಸ ಭವಿಷ್ಯವನ್ನು ಸೃಷ್ಟಿಸುವುದು ನಮ್ಮ ಆಲೋಚನೆಯಾಗಿರಬೇಕು ಎಂದು ಅವರು ಹೇಳಿದರು. 'ಭಾರತವನ್ನು ಒಗ್ಗೂಡಿಸುವ ಆಂದೋಲನ' ಎಂಬ ತಮ್ಮ ಮಂತ್ರವನ್ನು ಉಲ್ಲೇಖಿಸಿದ ಶ್ರೀ ಮೋದಿ, ಇದು ಕೇವಲ ಭೌಗೋಳಿಕ ಸಂಪರ್ಕವಷ್ಟೇಲ್ಲ,  ಜೊತೆಗೆ ಆಲೋಚನೆಗಳಲ್ಲಿಯೂ ಸಂಪರ್ಕ ಸಾಧಿಸಬೇಕು ಎಂದು ಹೇಳಿದರು. 'ಇದು ಭವಿಷ್ಯದ ಭಾರತದ ನಿರ್ಮಾಣವನ್ನು ನಮ್ಮ ಗತಕಾಲದೊಂದಿಗೆ ಸಂಪರ್ಕಿಸುವ ಪ್ರತಿಜ್ಞೆಯೂ ಆಗಿದೆ' ಎಂದು ಪ್ರಧಾನಮಂತ್ರಿ ತಿಳಿಸಿದರು.  "ನಮಗೆ ಇತಿಹಾಸ ಮತ್ತು ಧಾರ್ಮಿಕ ನಂಬಿಕೆಯ ತಿರುಳು ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನ"ಎಂಬುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಏಕತೆಯ ಬಗ್ಗೆ ಪ್ರಸ್ತಾಪಿಸಿದ ಅವರು, ನಂಬಿಕೆ ಮತ್ತು ವಿಶ್ವಾಸದ ವ್ಯವಸ್ಥೆಯ ಪಾತ್ರವನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು.  'ಪಶ್ಚಿಮದಲ್ಲಿನ ಸೋಮನಾಥ ಮತ್ತು ನಾಗೇಶ್ವರದಿಂದ ಪೂರ್ವದ ವೈದ್ಯನಾಥದವರೆಗೆ, ಉತ್ತರದ ಬಾಬಾ ಕೇದಾರನಾಥದಿಂದ   ಭಾರತದ ಅತ್ಯಂತ ದಕ್ಷಿಣ ತುದಿಯಲ್ಲಿರುವ ಶ್ರೀ ರಾಮೇಶ್ವರದವರೆಗೆ, ಇರುವ 12 ಜ್ಯೋತಿರ್ಲಿಂಗಗಳು ಇಡೀ ಭಾರತವನ್ನು ಸಂಪರ್ಕಿಸಲು ಕೊಡುಗೆ ನೀಡಿವೆ. ಅದೇ ರೀತಿ, ನಮ್ಮ ಚಾರ್ ಧಾಮಗಳ ವ್ಯವಸ್ಥೆ, ನಮ್ಮ   ಶಕ್ತಿಪೀಠಗಳ ಪರಿಕಲ್ಪನೆ, ನಮ್ಮ ದೇಶದ ವಿವಿಧ ಮೂಲೆಗಳಲ್ಲಿ ವಿವಿಧ ತೀರ್ಥಕ್ಷೇತ್ರಗಳ ಸ್ಥಾಪನೆ,  ನಮ್ಮ ನಂಬಿಕೆಯ ಈ ರೂಪುರೇಷೆ ವಾಸ್ತವವಾಗಿ 'ಏಕ  ಭಾರತ,  ಶ್ರೇಷ್ಠ ಭಾರತ' ಎಂಬ ಮನೋಭಾವದ ಅಭಿವ್ಯಕ್ತಿಯಾಗಿದೆ ಎಂದರು.

ರಾಷ್ಟ್ರದ ಐಕ್ಯತೆಯನ್ನು ಬಲಪಡಿಸುವಲ್ಲಿ ಆಧ್ಯಾತ್ಮಿಕತೆಯ ಪಾತ್ರವನ್ನು ಮುಂದುವರಿಸಿದ ಪ್ರಧಾನಮಂತ್ರಿಯವರು ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಾಮರ್ಥ್ಯದ ಮೇಲೆ ಬೆಳಕು ಬೀರಿದರು. ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುವ ಮೂಲಕ ದೇಶವು ಪ್ರಾಚೀನ ವೈಭವವನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದು ಅವರು ಹೇಳಿದರು. ಅವರು ರಾಮಾಯಣ ಸರ್ಕ್ಯೂಟ್ ನ ಉದಾಹರಣೆಯನ್ನು ನೀಡಿದರು, ಇದು ಶ್ರೀರಾಮನಿಗೆ ಸಂಬಂಧಿಸಿದ ಹೊಸ ಸ್ಥಳಗಳ ಬಗ್ಗೆ ರಾಮ ಭಕ್ತರಿಗೆ ಮಾಹಿತಿ ನೀಡುತ್ತಿದೆ ಮತ್ತು ಶ್ರೀರಾಮ ಇಡೀ ಭಾರತದ ರಾಮ ಎಂದು ಭಾವಿಸುವಂತೆ ಮಾಡುತ್ತಿದೆ. ಅದೇ ರೀತಿ  ಬುದ್ಧ ಸರ್ಕ್ಯೀಟ್ ಪ್ರಪಂಚದಾದ್ಯಂತದ ಭಕ್ತರಿಗೆ ದರ್ಶನದ ಅವಕಾಶಗಳನ್ನು ಒದಗಿಸುತ್ತದೆ. ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ ದರ್ಶನ ಯೋಜನೆಯಡಿ 15 ವಿಷಯಗಳಲ್ಲಿ ಪ್ರವಾಸಿ ಸರ್ಕೀಟ್ ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ನಿರ್ಲಕ್ಷಿತ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.  ಕೇದಾರನಾಥದಂತಹ ಗುಡ್ಡಗಾಡು ಪ್ರದೇಶದಲ್ಲಿನ ಅಭಿವೃದ್ಧಿ, ಚಾರ್ ಧಾಮ್ ಗಳಿಗಾಗಿ ಸುರಂಗ ಮತ್ತು  ಹೆದ್ದಾರಿಗಳು, ವೈಷ್ಣೋ ದೇವಿಯ ಸುತ್ತಮುತ್ತ ಅಭಿವೃದ್ಧಿ ಕಾರ್ಯಗಳು,  ಈಶಾನ್ಯದಲ್ಲಿ ಹೈಟೆಕ್ ಮೂಲಸೌಕರ್ಯಗಳು ದೂರವನ್ನು ಕಡಿಮೆ ಮಾಡುತ್ತಿವೆ.

ಅದೇ ರೀತಿ, 2014ರಲ್ಲಿ ಘೋಷಿಸಲಾದ ಪ್ರಸಾದ್ ಯೋಜನೆಯಡಿ, 40 ಪ್ರಮುಖ ಯಾತ್ರಾ ಸ್ಥಳಗಳನ್ನು ಅಭಿವೃದ್ಧಿಪಡಿಸುತ್ತಿದೆ, ಅವುಗಳಲ್ಲಿ 15 ಈಗಾಗಲೇ ಪೂರ್ಣಗೊಂಡಿವೆ. ಗುಜರಾತ್ ನಲ್ಲಿ 100  ಕೋಟಿ ರೂ.ಮೌಲ್ಯದ ಮೂರು ಯೋಜನೆಗಳಿಗೆ ಕಾಮಗಾರಿ ನಡೆಯುತ್ತಿದೆ.  ಯಾತ್ರಾ ಸ್ಥಳಗಳನ್ನು ಸಂಪರ್ಕಿಸಲು ಗಮನ ಹರಿಸಲಾಗುತ್ತಿದೆ. ದೇಶವು ಪ್ರವಾಸೋದ್ಯಮದ ಮೂಲಕ ಸಾಮಾನ್ಯ ನಾಗರಿಕರನ್ನು ಸಂಪರ್ಕಿಸುತ್ತಿರುವುದು ಮಾತ್ರವಲ್ಲದೆ ಮುಂದೆ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. 'ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 2013ರಲ್ಲಿ 65ನೇ ಸ್ಥಾನದಲ್ಲಿದ್ದ ಭಾರತ  2019ರಲ್ಲಿ 34ನೇ ಸ್ಥಾನಕ್ಕೆ ಬಂದಿದೆ. ಸೋಮನಾಥ್ ಪ್ರೊಮೆನೇಡ್ ಅನ್ನು ಪ್ರಸಾದ್ (ಯಾತ್ರಾಸ್ಥಳ ಪುನಶ್ಚೇತನ ಮತ್ತು ಆಧ್ಯಾತ್ಮಿಕ, ಪರಂಪರೆ ವರ್ಧನೆ ಅಭಿಯಾನ) ಯೋಜನೆಯಡಿ ಒಟ್ಟು ₹ 47 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 'ಪ್ರವಾಸಿ ಸೌಲಭ್ಯ ಕೇಂದ್ರ'ದ ಆವರಣದಲ್ಲಿ ಅಭಿವೃದ್ಧಿಪಡಿಸಲಾದ ಸೋಮನಾಥ ಪ್ರದರ್ಶನ ಕೇಂದ್ರವು ಹಳೆಯ ಸೋಮನಾಥ ದೇವಾಲಯದ ಕಳಚಿದ ಭಾಗಗಳಿಂದ ಪ್ರದರ್ಶನಗಳನ್ನು ಮತ್ತು ಹಳೆಯ ಸೋಮನಾಥದ ನಗರ ಶೈಲಿಯ ದೇವಾಲಯದ ವಾಸ್ತುಶಿಲ್ಪವನ್ನು ಹೊಂದಿದ್ದು ಅದರ ಶಿಲ್ಪಗಳನ್ನು ಪ್ರದರ್ಶಿಸುತ್ತದೆ.

ಹಳೆಯ (ಜುನಾ) ಸೋಮನಾಥ್ ನ ಪುನರ್ನಿರ್ಮಿಸಲಾದ ದೇವಾಲಯದ ಆವರಣವನ್ನು ಒಟ್ಟು 3.5 ಕೋಟಿ ರೂ. ವೆಚ್ಚ ಶ್ರೀ ಸೋಮನಾಥ್ ಟ್ರಸ್ಟ್ ಪೂರ್ಣಗೊಳಿಸಿದೆ, ಈ ದೇವಾಲಯವನ್ನು ಅಹಲ್ಯಾಬಾಯಿ ದೇವಾಲಯ ಎಂದೂ ಕರೆಯಲಾಗುತ್ತದೆ ಏಕೆಂದರೆ,  ಆಗ ಹಳೆಯ ದೇವಾಲಯವು ಅವಶೇಷಗಳಡಿ ಇದೆ ಎಂಬುದನ್ನು ತಿಳಿದ  ಇಂದೋರ್ ನ ರಾಣಿ ಅಹಲ್ಯಾಬಾಯಿ ಅದರ ಪುನರ್ ನಿರ್ಮಾಣ  ಮಾಡಿದ್ದರು. ಯಾತ್ರಿಕರ ಸುರಕ್ಷತೆಗಾಗಿ ಮತ್ತು ಹೆಚ್ಚಿದ ಸಾಮರ್ಥ್ಯದೊಂದಿಗೆ ಇಡೀ ಹಳೆಯ ದೇವಾಲಯ ಸಂಕೀರ್ಣವನ್ನು ಸಮಗ್ರವಾಗಿ ಈಗ ಮರು ಅಭಿವೃದ್ಧಿಪಡಿಸಲಾಗಿದೆ. ಶ್ರೀ ಪಾರ್ವತಿ ದೇವಾಲಯವನ್ನು ಒಟ್ಟು 3೦ ಕೋಟಿ ರೂ. ವೆಚ್ಚದೊಂದಿಗೆ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಸೋಂಪುರ ಸಲಾಟ್ಸ್ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗಲಿದ್ದು,  ಗರ್ಭಗೃಹ ಮತ್ತು ನವರಂಗದ ಅಭಿವೃದ್ಧಿಯೂ ಸೇರಿದೆ.

***



(Release ID: 1747682) Visitor Counter : 316