ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಸಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಆರಂಭ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 15 JUL 2021 2:52PM by PIB Bengaluru

ಭಾರತ್ ಮಾತಾ ಕಿ ಜೈ,ಭಾರತ್ ಮಾತಾ ಕೀ ಜೈ, ಭಾರತ್ ಮಾತಾ ಕೀ ಜೈ. ಹರ್ ಹರ್ ಮಹಾದೇವ್ !.

ಬಹಳ ಕಾಲದ ಬಳಿಕ ನಿಮ್ಮೆಲ್ಲರನ್ನೂ ಮುಖಾಮುಖಿ ಭೇಟಿಯಾಗುವ ಅವಕಾಶ ನನಗೆ ಲಭಿಸಿದೆ. ಕಾಶಿಯ ಎಲ್ಲಾ ಜನರಿಗೆ ಶುಭಾಶಯಗಳು!. ಸರ್ವ ಜನತೆಯ ದುಃಖವನ್ನು ಕೊನೆಗಾಣಿಸುವ ಬೋಲೇನಾಥ ಪಾದಕ್ಕೆ  ಮತ್ತು ಅನ್ನಪೂರ್ಣೇಶ್ವರಿ ತಾಯಿಗೆ ನಾನು ಶಿರಬಾಗಿ ನಮಿಸುತ್ತೇನೆ.

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜೀ, ಉತ್ತರ ಪ್ರದೇಶದ ಉತ್ಸಾಹಿ, ಪ್ರಖ್ಯಾತ ಮತ್ತು ಪರಿಶ್ರಮೀ ಮುಖ್ಯಮಂತ್ರಿಯಾದ ಶ್ರೀ ಯೋಗಿ ಆದಿತ್ಯನಾಥ ಜೀ, ಉತ್ತರ ಪ್ರದೇಶದ ಮಂತ್ರಿಗಳೇ, ಶಾಸಕರೇ ಮತ್ತು ಬನಾರಸಿನ ನನ್ನ ಸಹೋದರರೇ ಮತ್ತು ಸಹೋದರಿಯರೇ,

ಇಂದು, ಕಾಶಿಯಲ್ಲಿ 1500 ಕೋ.ರೂ.ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡುವ ಅವಕಾಶ ನನಗೆ ಲಭಿಸಿದೆ. ಬನಾರಾಸಿನ ಅಭಿವೃದ್ಧಿಗೆ ಏನೆಲ್ಲಾ ಆಗುತ್ತಿದೆಯೋ ಅದಕ್ಕೆ ಕಾರಣ ಮಹಾದೇವ ಮತ್ತು ಬನಾರಾಸಿನ ಜನತೆಯ ಪ್ರಯತ್ನಗಳು. ಕಾಶಿ ಸಂಕಷ್ಟದ ಸಮಯದಲ್ಲಿ ಕಂಗೆಡಲಿಲ್ಲ, ಸ್ಥಗಿತಗೊಳ್ಳಲೂ ಇಲ್ಲ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದ ಕೆಲವು ತಿಂಗಳುಗಳು ನಮಗೆಲ್ಲಾ ಅತ್ಯಂತ ಕಷ್ಟದ ತಿಂಗಳುಗಳು ಮಾತ್ರವಲ್ಲ ಇಡೀ ಮನುಕುಲಕ್ಕೇ ಕಷ್ಟದ ದಿನಗಳಾಗಿವೆ. ಕೊರೊನಾ ವೈರಸ್ಸಿನ ಅತ್ಯಂತ ಅಪಾಯಕಾರಿಯಾದ ರೂಪಾಂತರಿ ಸಂಪೂರ್ಣ ಶಕ್ತಿಯೊಂದಿಗೆ ನಮ್ಮ ಮೇಲೆ ದಾಳಿ ಮಾಡಿದೆ. ಆದರೆ ಕಾಶಿ ಸಹಿತ ಉತ್ತರ ಪ್ರದೇಶ ಇಂತಹ ದೊಡ್ಡ ಬಿಕ್ಕಟ್ಟನ್ನು ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕಿಟ್ಟು ಎದುರಿಸಿತು. ಉತ್ತರ ಪ್ರದೇಶ , ದೇಶದ ಅತ್ಯಂತ ದೊಡ್ಡ ರಾಜ್ಯ, ವಿಶ್ವದ ಡಜನ್ನಿಗಿಂತಲೂ ಅಧಿಕ ರಾಷ್ಟ್ರಗಳ ಜನಸಂಖ್ಯೆಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದ್ದರೂ ಅದು ಕೊರೊನಾ ಸೋಂಕು ಹರಡುವಿಕೆಯ  ಎರಡನೆ ಅಲೆಯನ್ನು ಸಮರ್ಥವಾಗಿ ಮತ್ತು ಅಭೂತಪೂರ್ವವಾಗಿ ನಿಯಂತ್ರಿಸಿತು ಮತ್ತು ನಿಭಾಯಿಸಿತು. ಇಲ್ಲದಿದ್ದರೆ ಉತ್ತರ ಪ್ರದೇಶದ ಜನತೆ ಮೆದುಳುಜ್ವರದಂತಹ ಖಾಯಿಲೆಗಳ ಸಂದರ್ಭದಲ್ಲಿ ಎದುರಿಸಿದಂತಹ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತಿತ್ತು.

ಮೊದಲು, ಸಣ್ಣ ಬಿಕ್ಕಟ್ಟು, ಸಂಕಷ್ಟಗಳಲ್ಲೂ ಉತ್ತರ ಪ್ರದೇಶ ಆರೋಗ್ಯ ಸವಲತ್ತುಗಳ ಕೊರತೆಯಿಂದ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಭಯಾನಕ ಪರಿಸ್ಥಿತಿಯನ್ನು ತಲುಪುತ್ತಿತ್ತು. ಇದು ಅತ್ಯಂತ ದೊಡ್ಡ ದುರಂತ, 100 ವರ್ಷಗಳ ಬಳಿಕ ಇಡೀ ವಿಶ್ವವನ್ನು ತಲ್ಲಣಗೊಳಿಸಿದ ಜಾಗತಿಕ ಸಾಂಕ್ರಾಮಿಕದ ಪರಿಣಾಮವಾಗಿ ಉಂಟಾಗಿರುವ ಸಂಕಷ್ಟ. ಆದುದರಿಂದ ಕೊರೊನಾವನ್ನು ನಿಭಾಯಿಸುವಲ್ಲಿ ಉತ್ತರ ಪ್ರದೇಶದ ಪ್ರಯತ್ನಗಳು ಬಹಳ ಗಮನೀಯವಾದಂತಹವು. ನಾನು ವಿಶೇಷವಾಗಿ ಕಾಶಿಯಿಂದ ಬಂದಿರುವ ನನ್ನ ಸಹೋದ್ಯೋಗಿಗಳಿಗೆ, ಇಲ್ಲಿಯ ಆಡಳಿತಕ್ಕೆ, ಮತ್ತು ಕೊರೊನಾ ವಾರಿಯರ್ ಗಳ ಇಡೀ ತಂಡಕ್ಕೆ ಕೃತಜ್ಞನಾಗಿದ್ದೇನೆ. ಕಾಶಿಯಲ್ಲಿ ನೀವು ನಿರ್ಮಾಣ ಮಾಡಿರುವ ವ್ಯವಸ್ಥೆಗಳು ಮತ್ತು ಅವುಗಳನ್ನು ಒಟ್ಟು ಸೇರಿಸಿರುವ ರೀತಿ  ಬಹಳ ದೊಡ್ಡ ಸೇವೆ.

ಇಲ್ಲಿಯ ವ್ಯವಸ್ಥೆಯಲ್ಲಿ ತೊಡಗಿಕೊಂಡಿರುವ ಜನರಿಗೆ ನಾನು ಮಧ್ಯರಾತ್ರಿ ವೇಳೆಗೆ ಕರೆ ಮಾಡಿದಾಗಲೂ ಅವರು ಸದಾ ಕೆಲಸದಲ್ಲಿ ನಿರತರಾಗಿದ್ದುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದು ಅತ್ಯಂತ ಸಂಕಷ್ಟದ ಸಮಯ, ಆದರೆ ನೀವು ನಿಮ್ಮ ಪ್ರಯತ್ನಗಳನ್ನು ಕೈಬಿಟ್ಟಿರಲಿಲ್ಲ. ನಿಮ್ಮ ಕಾರ್ಯದಿಂದ ಶ್ರಮದಿಂದ ಉತ್ತರ ಪ್ರದೇಶದ ಸ್ಥಿತಿ ಉತ್ತಮಗೊಳ್ಳುತ್ತಿದೆ.

ಇಂದು ಕೊರೊನಾ ಪರೀಕ್ಷೆಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿರುವ ರಾಜ್ಯ ಎಂದರೆ ಅದು ಉತ್ತರ ಪ್ರದೇಶ. ಇಂದು ಉತ್ತರ ಪ್ರದೇಶವು ದೇಶದಲ್ಲಿಯೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಲಸಿಕೆ ಪಡೆಯುವಿಕೆಗೆ ಒಳಗಾಗಿರುವ ರಾಜ್ಯ. ಸರಕಾರ ಬಡವರಿಗೆ, ಮಧ್ಯಮವರ್ಗದವರಿಗೆ, ರೈತರಿಗೆ ಮತ್ತು ಯುವಜನತೆಗೆ   ಉಚಿತ ಲಸಿಕಾ ಆಂದೋಲನದಡಿಯಲ್ಲಿ ಉಚಿತ  ಲಸಿಕೆಗಳನ್ನು ಒದಗಿಸುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯಾಗುತ್ತಿರುವ ನೈರ್ಮಲ್ಯ ಮತ್ತು ಆರೋಗ್ಯ ಸಂಬಂಧಿ ಮೂಲಸೌಕರ್ಯ ಭವಿಷ್ಯದಲ್ಲಿಯೂ ಕೊರೊನಾ ವಿರುದ್ಧ ಹೋರಾಟಕ್ಕೆ ಸಹಾಯ ಮಾಡಲಿದೆ. ಇಂದು ಉತ್ತರ ಪ್ರದೇಶವು ವೈದ್ಯಕೀಯ ಮೂಲಸೌಕರ್ಯದಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ಕಾಣುತ್ತಿದೆ. ಗ್ರಾಮ ಆರೋಗ್ಯ ಕೇಂದ್ರಗಳಿರಲಿ, ವೈದ್ಯಕೀಯ ಕಾಲೇಜುಗಳಿರಲಿ, ಅಥವಾ ...ಎಂ.ಎಸ್. ಗಳಿರಲಿ ಎಲ್ಲದರ ಮೂಲಕವೂ ಸುಧಾರಣೆ ಪರ್ವ ಆರಂಭವಾಗಿದೆ. ನಾಲ್ಕು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಡಜನ್ನಿನಷ್ಟು ವೈದ್ಯಕೀಯ ಕಾಲೇಜುಗಳಿದ್ದವು. ಅವುಗಳ ಸಂಖ್ಯೆ ಈಗ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಹಲವು ವೈದ್ಯಕೀಯ ಕಾಲೇಜುಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಈಗ ಉತ್ತರ ಪ್ರದೇಶದಲ್ಲಿ ಸುಮಾರು 550 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಕೆಲಸ ಚುರುಕಾಗಿ ನಡೆಯುತ್ತಿದೆ. ಇಂದು ಬನಾರಾಸಿನಲ್ಲಿಯೇ 14 ಆಮ್ಲಜನಕ ಸ್ಥಾವರಗಳನ್ನು ಕೂಡಾ ಉದ್ಘಾಟಿಸಲಾಗಿದೆ. ಆಮ್ಲಜನಕ ಉತ್ಪಾದನೆ ಮತ್ತು ಮಕ್ಕಳಿಗಾಗಿ ಪ್ರತೀ ಜಿಲ್ಲೆಯಲ್ಲಿಯೂ .ಸಿ.ಯು. ಸೌಲಭ್ಯಗಳನ್ನು ನಿರ್ಮಾಣ ಮಾಡುವ ಉತ್ತರ ಪ್ರದೇಶ ಸರಕಾರದ ಉಪಕ್ರಮ ಶ್ಲಾಘನೀಯ. ಇತ್ತೀಚೆಗೆ ಕೇಂದ್ರ ಸರಕಾರವು ಕೊರೊನಾ ಸಂಬಂಧಿತ ಹೊಸ ಆರೋಗ್ಯ ಸೌಲಭ್ಯಗಳ ಅಭಿವೃದ್ಧಿಗೆ 23,000 ಕೋ.ರೂ.ಗಳ ವಿಶೇಷ ಪ್ಯಾಕೇಜನ್ನು ಘೋಷಿಸಿದೆ. ಇದರಿಂದ ಉತ್ತರ ಪ್ರದೇಶಕ್ಕೂ ಬಹಳ ಲಾಭವಾಗಲಿದೆ.

ಸ್ನೇಹಿತರೇ,

ಇಂದು ಕಾಶಿ ನಗರವು ಪೂರ್ವಾಂಚಲದ ಪ್ರಮುಖ ವೈದ್ಯಕೀಯ ತಾಣವಾಗುತ್ತಿದೆ. ದಿಲ್ಲಿ ಮತ್ತು ಮುಂಬಯಿಗೆ ಚಿಕಿತ್ಸೆಗೆಂದು ತೆರಳಬೇಕಾಗಿದ್ದ ರೋಗಿಗಳಿಗೆ ಈಗ ಕಾಶಿಯಲ್ಲಿ ಚಿಕಿತ್ಸೆ ಲಭಿಸುತ್ತಿದೆ. ವೈದ್ಯಕೀಯ ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಇಂದು ಹಲವಾರು ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ಕಾಶಿಯು ವಿಶೇಷವಾಗಿ ಮಹಿಳೆಯರ ಮತ್ತು ಮಕ್ಕಳ ಹೊಸ ಆಸ್ಪತ್ರೆಗಳನ್ನು ಹೊಂದುತ್ತಿದೆ. ಇದರಲ್ಲಿ ಬಿ.ಎಚ್.ಯು.ಗೆ 100 ಹಾಸಿಗೆಗಳ ಸಾಮರ್ಥ್ಯವನ್ನು ಸೇರಿಸಲಾಗುತ್ತಿದೆ. ಮತ್ತು 50 ಹಾಸಿಗೆಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗುತ್ತಿದೆ. ಎರಡೂ ಯೋಜನೆಗಳಿಗೆ ಶಿಲಾನ್ಯಾಸ ಮಾಡುವ ಭಾಗ್ಯ ನನ್ನ ಪಾಲಿಗೆ ಲಭಿಸಿತ್ತು, ಮತ್ತು ಅವೆರಡನ್ನೂ ಇಂದು ಉದ್ಘಾಟಿಸಲಾಗಿದೆ. ಬಿ.ಎಚ್.ಯು.ನಲ್ಲಿ ಅಭಿವೃದ್ಧಿ ಮಾಡಲಾದ ಹೊಸ ಸೌಲಭ್ಯಗಳಿಗೆ ನಾನು ಭೇಟಿ ನೀಡಲು ಸ್ವಲ್ಪ ಸಮಯದ ಬಳಿಕ ಹೋಗಲಿದ್ದೇನೆ. ಸ್ನೇಹಿತರೇ, ಇಂದು ಬಿ.ಎಚ್.ಯು.ನಲ್ಲಿ ಪ್ರಾದೇಶಿಕ ಕಣ್ಣಿನ ಸಂಸ್ಥೆಯನ್ನೂ ಉದ್ಘಾಟಿಸಲಾಗಿದೆ. ಸಂಸ್ಥೆಯಲ್ಲಿ ಜನರಿಗೆ ಕಣ್ಣಿನ ರೋಗಗಳಿಗೆ ಸಂಬಂಧಿಸಿದಂತೆ ಆಧುನಿಕ ಚಿಕಿತ್ಸೆ ಲಭಿಸಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕಾಶಿಯು ತನ್ನ ಮೂಲ ಅಸ್ಮಿತೆಯನ್ನು ಉಳಿಸಿಕೊಂಡೇ ಅದು ಕಳೆದ ಏಳು ವರ್ಷಗಳಲ್ಲಿ ತ್ವರಿತಗತಿಯ ಅಭಿವೃದ್ಧಿ ಪಥದಲ್ಲಿ ಸಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಇರಲಿ, ಫ್ಲೈ ಓವರ್ ಗಳಿರಲಿ, ಅಥವಾ ರೈಲ್ವೇ ಮೇಲ್ಸೇತುವೆಗಳಿರಲಿ ಅಥವಾ ಹಳೆಯ ಕಾಶಿಯಲ್ಲಿ ಭೂಮಿಯೊಳಗಿನ ವಯರಿಂಗ್ ಇರಲಿ ಎಲ್ಲಾ ನಿಟ್ಟಿನಲ್ಲಿಯೂ ಅಭೂತಪೂರ್ವ ಕಾಮಗಾರಿ ಆಗಿದೆ. ಕುಡಿಯುವ ನೀರಿನ ಸಮಸ್ಯೆಗಳ ಬಗೆಹರಿಸುವಿಕೆ ಇರಲಿ, ಒಳಚರಂಡಿ ವ್ಯವಸ್ಥೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಎಲ್ಲದರಲ್ಲೂ ಭಾರೀ ಪ್ರಮಾಣದ ಕೆಲಸಗಳಾಗಿವೆ. ಈಗ ಕೂಡಾ ಪ್ರದೇಶದಲ್ಲಿ ಸುಮಾರು 8,000 ಕೋ.ರೂ.ಮೊತ್ತದ  ಯೋಜನೆಗಳ ಕಾರ್ಯ ಪ್ರಗತಿಯಲ್ಲಿದೆ. ಹೊಸ ಯೋಜನೆಗಳು ಮತ್ತು ಸಂಸ್ಥೆಗಳು ಕಾಶಿಯ ಬೆಳವಣಿಗೆಯ ಕಥನವನ್ನು ರೋಚಕವಾಗಿಸಿವೆ, ವೈವಿಧ್ಯಮಯವಾಗಿಸಿವೆ.

ಸ್ನೇಹಿತರೇ,

ನೈರ್ಮಲ್ಯ ಮತ್ತು ಕಾಶಿಯ ಹಾಗು ಮಾತೆ ಗಂಗೆಯ ಸುಂದರೀಕರಣ ನಮ್ಮೆಲ್ಲರ ಆಶಯವಾಗಿದೆ ಮತ್ತು ಆದ್ಯತೆಯೂ ಆಗಿದೆ. ಇದಕ್ಕಾಗಿ ಅದಕ್ಕೆ ಸಂಬಂಧಿಸಿದಂತಹ ಪ್ರತಿಯೊಂದು ರಂಗದಲ್ಲಿಯೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ರಸ್ತೆಗಳಿರಲಿ, ತ್ಯಾಜ್ಯ ಸಂಸ್ಕರಣೆ ಇರಲಿ, ಉದ್ಯಾನವನಗಳು ಮತ್ತು ಘಾಟ್ ಗಳ ಸೌಂದರ್ಯವರ್ಧನೆ ಇರಲಿ ಎಲ್ಲಾ ನಿಟ್ಟಿನಲ್ಲಿಯೂ ಕಾಮಗಾರಿಗಳು ಆಗುತ್ತಿವೆ. ಪಂಚಕೋಷಿ ಮಾರ್ಗದ ಅಗಲವಾಗುವಿಕೆ ಪೂರ್ಣಗೊಂಡರೆ ಭಕ್ತಾದಿಗಳಿಗೆ ಪ್ರಯೋಜನವಾಗುತ್ತದೆ ಮತ್ತು ಮಾರ್ಗದಲ್ಲಿ ಬರುವ ಡಜನ್ನುಗಟ್ಟಲೆ ಗ್ರಾಮಗಳ ಜೀವನವೂ ಸುಲಭವಾಗುತ್ತದೆ. ವಾರಾಣಸಿ ಮತ್ತು ಘಾಜಿಪುರ ಮಾರ್ಗದಲ್ಲಿಯ ಸೇತುವೆ ಸಂಚಾರಕ್ಕೆ ಮುಕ್ತಗೊಳ್ಳುವುದರಿಂದ ವಾರಾಣಸಿಯಲ್ಲದೆ ಪ್ರಯಾಗರಾಜ್, ಘಾಜಿಪುರ, ಬಾಲ್ಲಿಯಾ, ಗೋರಖ್ಪುರ ಮತ್ತು ಬಿಹಾರಗಳಿಗೆ ಪ್ರಯಾಣಿಸುವ ಜನತೆಗೆ ಅನುಕೂಲವಾಗಲಿದೆ. ಗೌಡೌಲಿಯಾದಲ್ಲಿ ಬಹುಸ್ತರ ದ್ವಿಚಕ್ರ ವಾಹನ ಪಾರ್ಕಿಂಗ್ ನಿರ್ಮಾಣದಿಂದ ತಮ್ಮ ಬದುಕು ಸುಲಭವಾಗುತ್ತದೆ ಎಂಬುದನ್ನು ಬನಾರಸಿನ ಜನತೆ ಬಲ್ಲರು. ಇದೇ ವೇಳೆ ಲಹಾರ್ತಾರಾದಿಂದ ಚೌಕ ಘಾಟ್ ವರೆಗಿನ ಮೇಲ್ಸೇತುವೆ ಕೆಳಗಿನ ಪಾರ್ಕಿಂಗ್ ಮತ್ತು ಸಾರ್ವಜನಿಕ ಸವಲತ್ತುಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿವೆ. “ಹರ್ ಘರ್ ಜಲ್ ಅಭಿಯಾನ್ಕೂಡಾ ಪ್ರಗತಿಯಲ್ಲಿದೆ. ಇದರಿಂದ ಉತ್ತರ ಪ್ರದೇಶ ಮತ್ತು ಬನಾರಸಿನ ಯಾವುದೇ ಸಹೋದರಿಯರು ಅಥವಾ ಕುಟುಂಬದವರು ಶುದ್ಧ ನೀರಿನ ಬಗ್ಗೆ ಚಿಂತಿತರಾಗಬೇಕಿಲ್ಲ.

ಸ್ನೇಹಿತರೇ,

ಉತ್ತಮ ಸೌಲಭ್ಯಗಳು, ಉತ್ತಮ ಸಂಪರ್ಕ, ಸುಂದರ ಲೇನ್ ಗಳು ಮತ್ತು ಘಾಟ್ ಗಳು ಪ್ರಾಚೀನ ಕಾಶಿಯ ಹೊಸ ವಿವರಣೆಗಳು. ನಗರದಲ್ಲಿ 700 ಕ್ಕೂ ಅಧಿಕ ಸ್ಥಳಗಳಲ್ಲಿ ಆಧುನಿಕ ನಿಗಾ ಕ್ಯಾಮರಾಗಳನ್ನು ಸ್ಥಾಪಿಸುವ ಕೆಲಸ ಪ್ರಗತಿಯಲ್ಲಿದೆ. ನಗರದಾದ್ಯಂತ ಬೃಹತ್ ಎಲ್..ಡಿ. ಪರದೆಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಘಾಟ್ ಗಳಲ್ಲಿ ತಂತ್ರಜ್ಞಾನ ಅಳವಡಿಸಲಾದ ಮಾಹಿತಿ ಫಲಕಗಳನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಕಾಶಿಗೆ ಭೇಟಿ ನೀಡುವವರಿಗೆ ಬಹಳ ಸಹಾಯವಾಗಲಿದೆ. ಸವಲತ್ತುಗಳು ಇತಿಹಾಸ, ಕರಕುಶಲ ಕಲೆ, ವಾಸ್ತುಶಿಲ್ಪ, ಕಲೆ, ಮತ್ತು ಕಾಶಿಗೆ ಸಂಬಂಧಿಸಿದ ಇತರೆಲ್ಲಾ ಮಾಹಿತಿಗಳನ್ನು ಆಕರ್ಷಕ ರೀತಿಯಲ್ಲಿ ಸಾದರಪಡಿಸುತ್ತವೆ. ಇದರಿಂದ ಭಕ್ತಾದಿಗಳ ಬಹಳ ದೊಡ್ಡ ಸಹಾಯವಾಗಲಿದೆ. ಬೃಹತ್ ಪರದೆಗಳ ಮೂಲಕ ಇಡೀ ನಗರದಾದ್ಯಂತ ಗಂಗಾಜೀ ಘಾಟ್ ನಲ್ಲಿಯ ಹಾಗು ಕಾಶಿ ವಿಶ್ವನಾಥ ದೇವಾಲಯದ ಆರತಿಯ ದೃಶ್ಯ ಪ್ರಸಾರ ಸಾಧ್ಯವಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದಿನಿಂದ ಕಾರ್ಯಾಚರಿಸಲಿರುವ ರೋ-ರೋ ಸೇವೆ ಮತ್ತು ಪ್ರಯಾಣಿಕ ಹಡಗು ಸಂಚಾರ ಸೇವೆ ಕಾಶಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇಷ್ಟು ಮಾತ್ರವಲ್ಲ, ಗಂಗಾ ಮಾತೆಯ ಸೇವೆಯಲ್ಲಿ ತೊಡಗಿರುವ ನಮ್ಮ ನಾವಿಕರಿಗೆ ಉತ್ತಮ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಡೀಸಲ್ ಬೋಟುಗಳನ್ನು ಸಿ.ಎನ್.ಜಿ. ಬೋಟುಗಳಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಅವರ ಖರ್ಚಿನಲ್ಲಿ ಇಳಿಕೆಯಾಗುತ್ತದೆ, ಪರಿಸರಕ್ಕೆ ಸಹಾಯವಾಗುತ್ತದೆ, ಮತ್ತು ಪ್ರವಾಸಿಗರ ಆಕರ್ಷಣೆಗೂ ಇದು ನೆರವಾಗುತ್ತದೆ. ಇದರ ಬಳಿಕ ನಾನು ಕಾಶಿಯ ಜನತೆಗೆ ರುದ್ರಾಕ್ಷವನ್ನು ಹಸ್ತಾಂತರಿಸುವ ಮೂಲಕ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಹಸ್ತಾಂತರಿಸಲು ಹೋಗಲಿದ್ದೇನೆ. ಕಾಶಿಯ ಸಾಹಿತಿಗಳು, ಸಂಗೀತಗಾರರು, ಮತ್ತು ಕಲಾವಿದರು ವಿಶ್ವ ಮಟ್ಟದಲ್ಲಿ ಬಹಳ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ, ಆದರೆ ಕಾಶಿಯಲ್ಲಿ ಅವರ ಕಲಾ ಪ್ರದರ್ಶನಕ್ಕೆ ವಿಶ್ವ ದರ್ಜೆಯ ಸೌಲಭ್ಯ ಇರಲಿಲ್ಲ. ಇಂದು ಕಾಶಿಯ ಕಲಾವಿದರು ಅವರ ಪ್ರತಿಭೆ ಮತ್ತು ಕಲಾ ಪ್ರದರ್ಶನಕ್ಕೆ ಆಧುನಿಕ ವೇದಿಕೆ ಪಡೆಯುತ್ತಿರುವುದು ನನಗೆ ಸಂತೋಷ ತಂದಿದೆ.

ಸ್ನೇಹಿತರೇ,

ಕಾಶಿಯ ಪ್ರಾಚೀನ ಹಿರಿಮೆ ಗಂಗೆಯ ಜ್ಞಾನದೊಂದಿಗೆ ಸಮ್ಮಿಳಿತಗೊಂಡಿದೆ. ಇಂತಹ ಸ್ಥಿತಿಯಲ್ಲಿ ಆಧುನಿಕ ಜ್ಞಾನ ಮತ್ತು ವಿಜ್ಞಾನದ ಕೇಂದ್ರವಾಗಿ ಕಾಶಿಯ ನಿರಂತರ ಅಭಿವೃದ್ಧಿ ಅವಶ್ಯವಾಗಿದೆ. ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಪ್ರಯತ್ನಗಳು ಯೋಗೀ ಜೀ ಅವರ ಸರಕಾರ ರಚನೆಯ ಬಳಿಕ ಹೆಚ್ಚಿನ ಒತ್ತಾಸೆ ಪಡೆದುಕೊಂಡಿವೆ. ಇಂದು ಕಾಶಿಯು ಆಧುನಿಕ ಶಾಲೆಗಳನ್ನು, .ಟಿ..ಗಳನ್ನು, ಪಾಲಿಟೆಕ್ನಿಕ್ ಗಳನ್ನು ಸೇರಿದಂತೆ ಇಂತಹ ಹಲವು ಸಂಸ್ಥೆಗಳನ್ನು ಮತ್ತು ಹೊಸ ಸವಲತ್ತುಗಳನ್ನು ಹೊಂದಿದೆ. ಇಂದು ಸಿ..ಪಿ..ಟಿ. ಕೌಶಲ್ಯ ಮತ್ತು ತಾಂತ್ರಿಕ ಬೆಂಬಲ ಕೇಂದ್ರಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಇದು ಕಾಶಿ ಮಾತ್ರವಲ್ಲ ಇಡೀ ಪೂರ್ವಾಂಚಲದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಇಂತಹ ಸಂಸ್ಥೆಗಳು ಆತ್ಮ ನಿರ್ಭರ ಭಾರತಕ್ಕೆ ಕೌಶಲ್ಯಯುಕ್ತ ಯುವಜನತೆಯನ್ನು ತರಬೇತಿ ಮಾಡುವ ಕಾಶಿಯ ಪಾತ್ರವನ್ನು ಇನ್ನಷ್ಟು ಬಲಪಡಿಸಲಿವೆ. ಸಿ..ಪಿ..ಟಿ. ಕೇಂದ್ರಕ್ಕಾಗಿ ಬನಾರಾಸಿನ ವಿದ್ಯಾರ್ಥಿಗಳು ಮತ್ತು ಯುವಜನತೆಯನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಜಗತ್ತಿನ ಅತಿ ದೊಡ್ಡ ಹೂಡಿಕೆದಾರರು ಆತ್ಮ ನಿರ್ಭರ ಭಾರತದ ಭಾಗವಾಗುತ್ತಿದ್ದಾರೆ. ಇದರಲ್ಲಿ ಕೂಡಾ ಉತ್ತರ ಪ್ರದೇಶವು ದೇಶದ ಪ್ರಮುಖ ಹೂಡಿಕೆಯ ತಾಣವಾಗಿ ಮೂಡಿ ಬರುತ್ತಿದೆ. ಕೆಲವು ವರ್ಷಗಳ ಹಿಂದಿನವರೆಗೆ ವ್ಯಾಪಾರೋದ್ಯಮ ಮಾಡಲು ಅತ್ಯಂತ ಕ್ಲಿಷ್ಟ ಪ್ರದೇಶ ಎಂದು ಪರಿಗಣಿಸಲ್ಪಟ್ಟಿದ್ದ ಉತ್ತರ ಪ್ರದೇಶವು ಇಂದು ಮೇಕ್ ಇನ್ ಇಂಡಿಯಾಕ್ಕೆ ಅತ್ಯಂತ ಅನುಕೂಲಕರ ಸ್ಥಳವಾಗಿ ಪರಿವರ್ತಿತವಾಗಿದೆ.

ಇದಕ್ಕೆ ಬಹಳ ದೊಡ್ಡ ಕಾರಣ ಎಂದರೆ ಯೋಗೀ ಜೀ ಸರಕಾರ ಮೂಲಸೌಕರ್ಯಕ್ಕೆ ನೀಡಿದ ಪ್ರಾಮುಖ್ಯತೆ. ರಸ್ತೆ, ರೈಲು ಮತ್ತು ವಾಯು ಸಂಪರ್ಕದಲ್ಲಾದ  ಅಭೂತಪೂರ್ವ ಸುಧಾರಣೆ ಇಲ್ಲಿ ಜೀವನವನ್ನು ಸುಲಭಗೊಳಿಸಿದೆ ಮಾತ್ರವಲ್ಲ, ಜನರಿಗೆ ವ್ಯಾಪಾರೋದ್ಯಮ ಮಾಡುವುದನ್ನೂ ಸುಲಭ ಮಾಡಿದೆ. ಉತ್ತರ ಪ್ರದೇಶದ ಪ್ರತೀ ಮೂಲೆಯನ್ನು  ಅಗಲವಾದ ಮತ್ತು ಆಧುನಿಕ ಎಕ್ಸ್ ಪ್ರೆಸ್ ರಸ್ತೆಗಳ ಮೂಲಕ ಜೋಡಿಸುವ ಕೆಲಸ ಬಹಳ ವೇಗವಾಗಿ ಸಾಗುತ್ತಿದೆ. ರಕ್ಷಣಾ ಕಾರಿಡಾರ್, ಪೂರ್ವಾಂಚಲ ಎಕ್ಸ್ ಪ್ರೆಸ್ ವೇ, ಬುಂದೇಲ್ಖಂಡ ಎಕ್ಸ್ ಪ್ರೆಸ್ ವೇ, ಗೋರಖ್ಪುರ ಸಂಪರ್ಕ ಎಕ್ಸ್ ಪ್ರೆಸ್ ವೇ ಅಥವಾ ಗಂಗಾ ಎಕ್ಸ್ ಪ್ರೆಸ್ ವೇ ಗಳು ದಶಕದಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿಗೆ ಹೊಸ ಎತ್ತರವನ್ನು ಒದಗಿಸಲಿವೆ. ಇವುಗಳ ಮೇಲೆ ವಾಹನಗಳು ಓಡಾಡುವುದು ಮಾತ್ರವಲ್ಲ, ಅವುಗಳ ಸುತ್ತ ಹೊಸ ಕೈಗಾರಿಕಾ ಗುಚ್ಛಗಳೂ ಅಭಿವೃದ್ಧಿ ಹೊಂದಲಿದ್ದು, ಆತ್ಮ ನಿರ್ಭರ ಭಾರತಕ್ಕೆ ಬಲ ನೀಡಲಿವೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಕೃಷಿ ಮೂಲಸೌಕರ್ಯ ಮತ್ತು ಕೃಷಿ ಆಧಾರಿತ ಕೈಗಾರಿಕೋದ್ಯಮಗಳು ಆತ್ಮ ನಿರ್ಭರ ಭಾರತದಲ್ಲಿ ಪ್ರಮುಖ ಪಾತ್ರವನ್ನು ವಹಿಸಬಲ್ಲವು. ಇತ್ತೀಚೆಗೆ ಕೇಂದ್ರ ಸರಕಾರವು ಕೃಷಿ ಮೂಲಸೌಕರ್ಯದ ಸಶಕ್ತೀಕರಣ  ಕುರಿತು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ದೇಶದಲ್ಲಿ ಆಧುನಿಕ ಕೃಷಿ ಮೂಲಸೌಕರ್ಯಕ್ಕಾಗಿ ರೂಪಿಸಲಾದ 1 ಲಕ್ಷ ಕೋ.ರೂ.ಗಳ ವಿಶೇಷ ನಿಧಿ ಈಗ ನಮ್ಮ ಕೃಷಿ ಮಾರುಕಟ್ಟೆಗಳಿಗೂ ಲಾಭ ತರಲಿದೆ. ದೇಶದ ಕೃಷಿ ಮಾರುಕಟ್ಟೆಗಳನ್ನು ಆಧುನೀಕರಣಗೊಳಿಸುವಲ್ಲಿ ಇದೊಂದು ದೊಡ್ಡ ಹೆಜ್ಜೆ. ಖರೀದಿ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ರೈತರಿಗೆ ಹೆಚ್ಚಿನ ಆಯ್ಕೆಯ ಅವಕಾಶವನ್ನು ಕೊಡುವುದು ಸರಕಾರದ ಆದ್ಯತೆಯಾಗಿದೆ. ಇದರ ಪರಿಣಾಮವಾಗಿ ಸರಕಾರದ ಭತ್ತ ಮತ್ತು ಗೋಧಿ ಖರೀದಿಯಲ್ಲಿ ಬಾರಿ  ದಾಖಲೆ ನಿರ್ಮಾಣವಾಗಿದೆ.

ಸ್ನೇಹಿತರೇ

ಉತ್ತರ ಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದ ಮೂಲಸೌಕರ್ಯ ಕಾಮಗಾರಿಯೂ ನಡೆಯುತ್ತಿದೆ. ಬೇಗ ಹಾಳಾಗುವ ಸರಕುಗಳ ಕೇಂದ್ರ ಮತ್ತು ಅಂತಾರಾಷ್ಟ್ರೀಯ ಅಕ್ಕಿ ಕೇಂದ್ರಗಳಂತಹ ಹಲವಾರು ಆಧುನಿಕ ಸವಲತ್ತುಗಳು ವಾರಾಣಸಿ ಮತ್ತು ಪೂರ್ವಾಂಚಲದ ರೈತರಿಗೆ ಬಹಳ ಪ್ರಯೋಜನಕಾರಿಯಾಗಿರುವುದು ಸಾಬೀತಾಗಿದೆ. ಇಂತಹ ಹಲವಾರು ಕ್ರಮಗಳಿಂದ ನಮ್ಮಲಂಗ್ಡಾಮತ್ತುದುಶ್ಶೇರಿಮಾವು ಯುರೋಪ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಜನಪ್ರಿಯಗೊಳ್ಳುತ್ತಿವೆ. ಇಂದು ಶಿಲಾನ್ಯಾಸ ಮಾಡಲಾದ ಮಾವು ಮತ್ತು ತರಕಾರಿ ಇಂಟೆಗ್ರೇಟೆಡ್ ಪ್ಯಾಕ್ ಹೌಸ್ ವಲಯವನ್ನು ಕೃಷಿ ರಫ್ತು ಕೇಂದ್ರವಾಗಿ ಅಭಿವೃದ್ಧಿ ಮಾಡಲು ಸಹಾಯ ಮಾಡಲಿದೆ. ಇದರಿಂದ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ಸಣ್ಣ ರೈತರಿಗೆ ಹೆಚ್ಚಿನ ಲಾಭವಾಗಲಿದೆ.

ಸ್ನೇಹಿತರೇ,

ನಾನು ಕಾಶಿಯ ಮತ್ತು ಇಡೀ ಉತ್ತರ ಪ್ರದೇಶದ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಳ ಧೀರ್ಘವಾಗಿ ಚರ್ಚಿಸುತ್ತಿದ್ದೆ, ಆದರೆ ಪಟ್ಟಿ ಬಹಳ ಉದ್ದವಿದೆ ಮತ್ತು ಅದು ಸದ್ಯಕ್ಕೆ ಮುಗಿಯಲಾರದು. ನನಗೆ ಸಮಯದ ಕೊರತೆ ಇದೆ, ಉತ್ತರ ಪ್ರದೇಶದ ಯಾವ ಅಭಿವೃದ್ಧಿ ಕಾರ್ಯಗಳನ್ನು ನಾನು ಪ್ರಸ್ತಾಪಿಸಬೇಕು, ಯಾವುದನ್ನು ಬಿಡಬೇಕು  ಎಂಬ ಬಗ್ಗೆ ನಾನು ಹಲವು ಬಾರಿ ಚಿಂತಿಸಬೇಕಾಗುತ್ತದೆ. ಇದೆಲ್ಲಾ ಯೋಗೀ ಜೀ ಅವರ ನಾಯಕತ್ವದಿಂದ ಮತ್ತು ಉತ್ತರ ಪ್ರದೇಶ ಸರಕಾರದ ಸಮನ್ವಯ ಸಮಗ್ರತೆಯಿಂದ ಸಾಧ್ಯವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

2017 ಕ್ಕೆ ಮೊದಲು ಉತ್ತರ ಪ್ರದೇಶಕ್ಕೆ (ಕೇಂದ್ರದಿಂದ ) ಯೋಜನೆಗಳು ಇರಲಿಲ್ಲವೆಂದಲ್ಲ, ಹಣ ಕಳುಹಿಸಲಾಗುತ್ತಿರಲಿಲ್ಲ ಎಂದೇನಲ್ಲ!. 2014 ರಲ್ಲಿ ನಮಗೆ ಸೇವೆಯ ಅವಕಾಶ ದೊರೆತಾಗ, ಆಗ ಕೂಡಾ ಅಲ್ಲಿ ದಿಲ್ಲಿಯಿಂದ ಬಹಳ ಪ್ರಯತ್ನಗಳಾಗಿದ್ದವು. ಆದರೆ ಲಕ್ನೋದಲ್ಲಿ ಅದಕ್ಕೆ ಅಡ್ಡಿಗಳಿದ್ದವು. ಇಂದು ಯೋಗೀ ಜೀ ಅವರು ತಾವೇ ಕಠಿಣ ದುಡಿಮೆ ಮಾಡುತ್ತಿದ್ದಾರೆ. ಕಾಶಿಯ ಜನತೆಗೆ  ಹೇಗೆ ಯೋಗೀ ಜೀ ಅವರು ಅವರು ಸತತವಾಗಿ ಇಲ್ಲಿಗೆ ಬರುತ್ತಾರೆ, ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡುತ್ತಾರೆ ಮತ್ತು ಯೋಜನೆಗಳಿಗೆ ಹೇಗೆ ವೇಗ ಕೊಡುತ್ತಾರೆ ಎಂಬುದು ಗೊತ್ತಿದೆ. ಅವರು ಇದೇ ರೀತಿಯ ಪ್ರಯತ್ನಗಳನ್ನು ಇಡೀ ರಾಜ್ಯಕ್ಕಾಗಿಯೂ ಮಾಡುತ್ತಾರೆ. ಅವರು ಪ್ರತೀ ಜಿಲ್ಲೆಗೂ ಹೋಗುತ್ತಾರೆ, ಮತ್ತು ಪ್ರತೀ ಯೋಜನೆಗಳ ಬಗ್ಗೆಯೂ ಗಮನ ಹರಿಸುತ್ತಾರೆ. ಅದರಿಂದಾಗಿ   ಪ್ರಯತ್ನಗಳು ಇಂದು ಆಧುನಿಕ ಉತ್ತರ ಪ್ರದೇಶವನ್ನು ನಿರ್ಮಾಣ ಮಾಡಲು ಸಹಾಯ ಮಾಡುತ್ತಿವೆ

ಉತ್ತರ ಪ್ರದೇಶದಲ್ಲಿ ಈಗ ಕಾನೂನಿನ ಆಡಳಿತವಿದೆ. ಮಾಫಿಯಾರಾಜ್ ಮತ್ತು ಭಯೋತ್ಪಾದನೆಗಳು ಒಂದು ಕಾಲದಲ್ಲಿ ನಿಯಂತ್ರಣಾತೀತವಾಗಿದ್ದವು. ಅವುಗಳೀಗ ಕಾನೂನಿನ ಹಿಡಿತದಲ್ಲಿವೆ. ಸಹೋದರಿಯರ ಮತ್ತು ಪುತ್ರಿಯರ ಸುರಕ್ಷತೆ ಬಗ್ಗೆ ಪೋಷಕರು ಆತಂಕದಲ್ಲಿಯೇ ಬದುಕುತ್ತಿದ್ದರು. ಪರಿಸ್ಥಿತಿ ಕೂಡಾ ಬದಲಾಗಿದೆ. ಸಹೋದರಿಯರ ಮೇಲೆ ತಮ್ಮ ಕೆಟ್ಟ ದೃಷ್ಟಿ ಹಾಕುತ್ತಿದ್ದ ಅಪರಾಧಿಗಳು ತಾವು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡು ಹೋಗುವುದು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದಾರೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ಉತ್ತರ ಪ್ರದೇಶ ಸರಕಾರ  ಇಂದು ಅಭಿವೃದ್ಧಿಯ ನೆಲೆಯಲ್ಲಿ ನಡೆಯುತ್ತಿದೆ ಮತ್ತು ಅಲ್ಲಿ ಭಷ್ಟಾಚಾರವಿಲ್ಲ ಹಾಗು ಸ್ವಜನ ಪಕ್ಷಪಾತವೂ ಇಲ್ಲ.ಇದರಿಂದಾಗಿ ಉತ್ತರ ಪ್ರದೇಶದ ಜನತೆಗೆ ಯೋಜನೆಗಳ ಲಾಭಗಳು ದೊರೆಯುತ್ತಿವೆ. ಅದರಿಂದಾಗಿ ಇಂದು ಹೊಸ ಉದ್ಯಮಗಳು, ಕೈಗಾರಿಕೆಗಳು  ಉತ್ತರ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿವೆ. ಮತ್ತು ಉದ್ಯೋಗಾವಕಾಶಗಳು ಹೆಚ್ಚುತ್ತಿವೆ.

ಸ್ನೇಹಿತರೇ,

ಉತ್ತರ ಪ್ರದೇಶದ ಪ್ರತೀ ನಾಗರಿಕರೂ ಅಭಿವೃದ್ಧಿಯ ಮತ್ತು ಪ್ರಗತಿಯ ಪ್ರಯಾಣದಲ್ಲಿ ತಮ್ಮ ಕೊಡುಗೆ ಕೊಟ್ಟಿದ್ದಾರೆ. ಅಲ್ಲಿ ಜನರ ಸಹಭಾಗಿತ್ವ ಇದೆ. ನಿಮ್ಮ ಕೊಡುಗೆ ಮತ್ತು ಆಶೀರ್ವಾದಗಳು ಉತ್ತರ ಪ್ರದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ. ನಿಮ್ಮ ಮೇಲೂ ಬಹಳ ದೊಡ್ಡ ಜವಾಬ್ದಾರಿ ಇದೆ, ನೀವು ಕೊರೊನಾ ಮತ್ತೆ ವಿಜೃಂಭಿಸಲು ಅವಕಾಶ ಕೊಡಬಾರದು.

ಕೊರೊನಾ ಸೋಂಕಿನ ದರ ಕಡಿಮೆಯಾಗಿದೆ, ಆದರೆ ನಿರ್ಲಕ್ಷ್ಯ ಹೆಚ್ಚಾದರೆ ಅದು ಮತ್ತೆ ದೊಡ್ಡ ಅಲೆಯಾಗಿ ಮಾರ್ಪಡಲಿದೆ. ವಿಶ್ವದ ಹಲವು ದೇಶಗಳ ಅನುಭವ ಇಂದು ನಮ್ಮೆದುರು ಇದೆ. ಆದುದರಿಂದ ನಾವು ಎಲ್ಲಾ ಕಾನೂನು ಮತ್ತು ನಿರ್ಬಂಧಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಬೇಕು. ಎಲ್ಲರಿಗೂ ಉಚಿತ ಲಸಿಕೆ ಆಂದೋಲನದಲ್ಲಿ ನಾವು ಸೇರಿಕೊಳ್ಳಬೇಕು. ಲಸಿಕಾ ಅಭಿಯಾನ ಬಹಳ ಅಗತ್ಯ. ಬಾಬಾ ವಿಶ್ವನಾಥ ಮತ್ತು ಗಂಗಾ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ!. ಆಶಯದೊಂದಿಗೆ ನಿಮ್ಮೆಲ್ಲರಿಗೂ ಬಹಳ ಬಹಳ ಧನ್ಯವಾದಗಳು!.

ಹರ್-ಹರ್ ಮಹಾದೇವ್ !!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1736782) Visitor Counter : 234